ವಿಕಾಸವೇ ವಿನ್ಯಾಸವೇ?
ನಾಯಿಯ ಮೂಗಿನ ಸಾಮರ್ಥ್ಯ
ವಿಜ್ಞಾನಿಗಳ ಪ್ರಕಾರ ನಾಯಿ ವಾಸನೆಯಿಂದಲೇ ಬೇರೆ ನಾಯಿಯ ವಯಸ್ಸು, ಅದು ಗಂಡಾ ಹೆಣ್ಣಾ, ಕೋಪ ಮಾಡ್ಕೊಂಡಿದ್ಯಾ ಅಥ್ವಾ ಖುಷಿಯಾಗಿದ್ಯಾ ಅಂತ ಕಂಡುಹಿಡಿಯುತ್ತೆ. ನಾಯಿಯನ್ನ ಪಳಗಿಸಿದ್ರೆ ಅದು ಬಾಂಬನ್ನ, ಮಾದಕ ವಸ್ತುಗಳನ್ನ ಪತ್ತೆಹಚ್ಚುತ್ತೆ. ಸುತ್ತಮುತ್ತ ಏನು ನಡೀತಿದೆ ಅಂತ ನಾವು ಕಣ್ಣಿಂದ ನೋಡಿ ತಿಳ್ಕೊಂಡ್ರೆ ನಾಯಿ ವಾಸನೆ ಮೂಲಕ ತಿಳ್ಕೊಳ್ಳತ್ತೆ. ಅದರ ಮೂಗೇ ಕಣ್ಣಿನ ತರ ಕೆಲ್ಸ ಮಾಡುತ್ತೆ.
ಯೋಚಿಸಿ ನೋಡಿ: ನಾಯಿಗೆ ವಾಸನೆ ಗ್ರಹಿಸೋ ಸಾಮರ್ಥ್ಯ ಮನುಷ್ಯನಿಗಿಂತ ಸಾವಿರ ಪಟ್ಟು ಜಾಸ್ತಿ. ಯು.ಎಸ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸ್ಟಾಂಡರ್ಡ್ ಆ್ಯಂಡ್ ಟೆಕ್ನಾಲಜಿಯ ಪ್ರಕಾರ, ಕೆಲವೊಂದು ವಸ್ತುವಿನ ವಾಸನೆಯನ್ನ ನಾಯಿ ಎಷ್ಟು ಸೂಕ್ಷವಾಗಿ ಗ್ರಹಿಸುತ್ತಂದ್ರೆ ಆ ವಸ್ತುವನ್ನ ಕೋಟ್ಯಾನುಕೋಟಿ ಭಾಗ ಮಾಡಿದ್ರೂನೂ ಪ್ರತಿಯೊಂದು ಕಣದ ವಾಸನೆಯನ್ನೂ ಗುರುತಿಸುತ್ತೆ. ಉದಾಹರಣೆಗೆ, ಒಂದು ಒಲಂಪಿಕ್ ಈಜುಕೊಳದಲ್ಲಿ ಕಾಲು ಚಮಚ ಸಕ್ಕರೆಯನ್ನ ಕರಗಿಸಿದ್ರೆ ಅದರ ರುಚಿಯನ್ನ ಗುರುತಿಸೋಕೆ ನಮಗೆ ಸಾಧ್ಯವಿಲ್ಲ ಆದ್ರೆ ನಾಯಿ ಅದನ್ನ ಗುರುತಿಸುತ್ತೆ!
ನಾಯಿಗೆ ಇಷ್ಟು ಸಾಮರ್ಥ್ಯ ಇರಲು ಕಾರಣವೇನು?
ನಾಯಿಯ ಮೂಗು ಯಾವಾಗಲೂ ಒದ್ದೆಯಾಗಿ ಇರೋದ್ರಿಂದ ವಾಸನೆಯ ಕಣಗಳನ್ನ ಗಪ್ ಅಂತ ಗ್ರಹಿಸುತ್ತೆ.
ನಾಯಿಯ ಮೂಗಿನಲ್ಲಿ ಎರಡು ಪೈಪುಗಳಿವೆ. ಒಂದು ಉಸಿರಾಡೋಕೆ ಮತ್ತೊಂದು ವಾಸನೆ ಗ್ರಹಿಸೋಕೆ. ಇದ್ರಿಂದಾಗಿ ನಾಯಿ ಮೂಸಿದ ತಕ್ಷಣ ಗಾಳಿ ನೇರವಾಗಿ ವಾಸನೆ ಗ್ರಹಿಸೋ ಮೂಗಿನ ಭಾಗಕ್ಕೆ ತಲಪುತ್ತೆ.
ನಾಯಿಯ ತಲೆಯಲ್ಲಿ ವಾಸನೆ ಗ್ರಹಿಸೋ ಕೋಶಗಳಿರೋ ಭಾಗ 130 ಚದರ ಸೆಂಟಿಮೀಟರಿಗಿಂತಲೂ ಜಾಸ್ತಿಯಾದ್ರೆ ಮನುಷ್ಯನದ್ದು ಕೇವಲ 5 ಚದರ ಸೆಂಟಿಮೀಟರ್.
ವಾಸನೆ ಗ್ರಹಿಸೋ ಕೋಶಗಳು ನಾಯಿಯ ಮೆದುಳಿನಲ್ಲಿ ಮನುಷ್ಯರಲ್ಲಿ ಇರೋದಕ್ಕಿಂತಲೂ 50 ಪಟ್ಟು ಜಾಸ್ತಿಯಿದೆ.
ಈ ಎಲ್ಲಾ ಸಾಮರ್ಥ್ಯಗಳು ನಾಯಿಯಲ್ಲಿ ಇರೋದ್ರಿಂದ ಅದು ಒಂದು ಪದಾರ್ಥದಲ್ಲಿ ಹಲವಾರು ವಾಸನೆ ಬೆರೆತಿದ್ರೂ ಆ ಒಂದೊಂದು ವಾಸನೆಯನ್ನೂ ಪ್ರತ್ಯೇಕವಾಗಿ ಕಂಡುಹಿಡಿಯುತ್ತೆ. ಉದಾಹರಣೆಗೆ, ಕೆಲವು ವಿಜ್ಞಾನಿಗಳ ಪ್ರಕಾರ ಮನುಷ್ಯನಿಗೆ ಸೂಪಿನ ಪರಿಮಳ ಗೊತ್ತಾದ್ರೆ ನಾಯಿಗೆ ಅದ್ರಲ್ಲಿರೋ ಪ್ರತಿಯೊಂದು ತರಕಾರಿ, ಮಸಾಲೆ ಮುಂತಾದವುಗಳ ವಾಸನೆ ಗೊತ್ತಾಗುತ್ತೆ.
ಪೈನ್ ಸ್ಟ್ರೀಟ್ ಫೌಂಡೇಷನ್ ಅನ್ನೋ ಕ್ಯಾನ್ಸರ್ ರಿಸರ್ಚ್ ಇನ್ಸ್ಟಿಟ್ಯೂಟ್ ತಜ್ಞರು ಹೇಳೋದೇನಂದ್ರೆ, ನಾಯಿಯ ಮೂಗು ಮತ್ತು ಮೆದುಳು ಹೇಗೆ ಒಟ್ಟಿಗೆ ಚುರುಕಾಗಿ ಕೆಲ್ಸ ಮಾಡುತ್ತೆ ಅಂದ್ರೆ ಅದರಷ್ಟು ವಾಸನೆಯನ್ನ ಅತೀ ಸೂಕ್ಷವಾಗಿ ಗ್ರಹಿಸೋ ಬೇರೊಂದು ಸಾಧನ ಈ ಪ್ರಪಂಚದಲ್ಲೇ ಇಲ್ಲ. ಹಾಗಾಗಿ ವಿಜ್ಞಾನಿಗಳು ಸ್ಪೋಟಕಗಳನ್ನ, ಕಳ್ಳಸಾಗಾಣಿಕೆ ವಸ್ತುಗಳನ್ನ, ಕ್ಯಾನ್ಸರ್ನಂತ ಕಾಯಿಲೆಗಳನ್ನ ಪತ್ತೆಹಚ್ಚಲು “ಎಲೆಕ್ಟ್ರಾನಿಕ್ ಮೂಗು” ತಯಾರಿಸುತ್ತಿದ್ದಾರೆ.
ನಿಮಗೇನು ಅನಿಸುತ್ತೆ? ನಾಯಿಯ ವಾಸನೆ ಕಂಡು ಹಿಡಿಯೋ ಸಾಮರ್ಥ್ಯ ವಿಕಾಸವಾಗಿ ಬಂತಾ ಅಥ್ವಾ ದೇವರು ಸೃಷ್ಟಿ ಮಾಡಿದ್ರಾ?