ವಿಕಾಸವೇ? ವಿನ್ಯಾಸವೇ?
ಕ್ಷಣಮಾತ್ರದಲ್ಲಿ ಹಾರುವ ನುಸಿ
ನೊಣ ಹೊಡೆಯಲು ಪ್ರಯತ್ನಿಸಿದವನಿಗೇ ಗೊತ್ತು ಅದೆಷ್ಟು ಕಷ್ಟ ಅಂತ. ಇನ್ನೇನು ಅದಕ್ಕೆ ಹೊಡೆತ ಬಿತ್ತು ಅನ್ನೋವಾಗಲೇ ಮಿಂಚಿನ ವೇಗದಲ್ಲಿ ತಪ್ಪಿಸಿಕೊಳ್ಳುತ್ತದೆ. ಹೆಚ್ಚಿನ ಸಾರಿ ಹೀಗೆ ಆಗುತ್ತದೆ.
ಹಣ್ಣುಗಳ ಸುತ್ತ ಹಾರುವ ಈ ಪುಟ್ಟ ನೊಣ ಅಥವಾ ನುಸಿ, ಯುದ್ಧ ವಿಮಾನಗಳಂತೆ ಸುಲಭವಾಗಿ ಯಾವುದೇ ದಿಕ್ಕಿಗೆ ತಿರುಗಬಲ್ಲದು ಎಂದು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಆದರೆ ಇದು ಕ್ಷಣಮಾತ್ರದಲ್ಲಿ ದಿಕ್ಕು ಬದಾಲಾಯಿಸುತ್ತೆ. “ಇವು ಹುಟ್ಟಿನಿಂದಲೇ ಚೆನ್ನಾಗಿ ಹಾರುತ್ತವೆ. ಇದು, ಈಗ ತಾನೇ ಹುಟ್ಟಿದ ಮಗು ಒಂದು ಯುದ್ಧ ವಿಮಾನವನ್ನು ಚಲಾಯಿಸಿದಂತೆ ಇರುತ್ತದೆ” ಎನ್ನುತ್ತಾರೆ ಪ್ರೊಫೆಸರ್ ಮೈಕಲ್ ಡಿಕಿನ್ಸನ್.
ಸಂಶೋಧಕರು ಈ ನೊಣ ಹಾರುವ ವಿಡಿಯೋ ಮಾಡಿ, ಅದು ಒಂದು ಸೆಕೆಂಡಿಗೆ 200 ಬಾರಿ ರೆಕ್ಕೆ ಬಡಿಯುತ್ತೆ ಅಂತ ಕಂಡುಹಿಡಿದಿದ್ದಾರೆ. ಒಂದೇ ಸಾರಿ ರೆಕ್ಕೆ ಬಡಿದರೆ ಸಾಕು, ಅವು ತಮ್ಮ ದೇಹವನ್ನು ಯಾವುದೇ ದಿಕ್ಕಿಗೆ ತಿರುಗಿಸಿ, ಅಪಾಯದಿಂದ ತಪ್ಪಿಸಿಕೊಳ್ಳಬಲ್ಲವು.
ಅಪಾಯದ ಸೂಚನೆಗೆ ಸ್ಪಂದಿಸಲು ಅವುಗಳಿಗೆ ಎಷ್ಟು ಸಮಯ ಹಿಡಿಯುತ್ತದೆ ಗೊತ್ತಾ? ಒಬ್ಬ ಮನುಷ್ಯನು ಕಣ್ಣು ಮಿಟುಕಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತಾನೋ ಅದಕ್ಕಿಂತ 50 ಪಟ್ಟು ಬೇಗ ಸ್ಪಂದಿಸುತ್ತವೆ ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ. ‘ಈ ನೊಣ ತುಂಬಾ ಕಡಿಮೆ ಸಮಯದಲ್ಲೇ ಅಪಾಯ ಎಲ್ಲಿದೆ ಅಂತ ಗುರುತಿಸಿ ಅದರಿಂದ ತಪ್ಪಿಸಿಕೊಳ್ಳಲು ಇರುವ ಅತ್ಯುತ್ತಮ ದಾರಿ ಯಾವುದು ಅಂತ ಕಂಡುಹಿಡಿಯುತ್ತದೆ’ ಅಂತ ಡಿಕಿನ್ಸನ್ ಅವರು ವಿವರಿಸುತ್ತಾರೆ.
ಈ ನೊಣದ ಅತಿ ಸೂಕ್ಷ್ಮ ಮೆದುಳು ಹೇಗೆ ತಾನೇ ಇದನ್ನೆಲ್ಲಾ ಮಾಡುತ್ತೆ ಎಂಬ ರಹಸ್ಯವನ್ನು ತಿಳಿಯಲು ಸಂಶೋಧಕರು ಇನ್ನೂ ಪ್ರಯತ್ನಿಸುತ್ತಲೇ ಇದ್ದಾರೆ.
ನೀವೇನು ನೆನಸುತ್ತೀರಿ? ಕ್ಷಣಮಾತ್ರದಲ್ಲಿ ಹಾರುವ ನುಸಿ ವಿಕಾಸವಾಗಿ ಬಂತಾ? ಅಥವಾ ಒಬ್ಬ ಸೃಷ್ಟಿಕರ್ತ ವಿನ್ಯಾಸಿಸಿದನಾ?