ಬಂದೀಖಾನೆಯಲ್ಲಿ ಬದಲಾದ ಬದುಕು
ಸ್ಪೇನ್‌ನ ಯೆಹೋವನ ಸಾಕ್ಷಿಗಳು ಅಲ್ಲಿನ 68 ಜೈಲುಗಳಿಗೆ ಭೇಟಿ ನೀಡುತ್ತಿರುತ್ತಾರೆ ಮತ್ತು ಅಲ್ಲಿರುವ ಸುಮಾರು 600 ಕೈದಿಗಳೊಂದಿಗೆ ಬೈಬಲ್ ಅಧ್ಯಯನ ನಡೆಸುತ್ತಿದ್ದಾರೆ.
ಈ ರೀತಿ ಭೇಟಿ ನೀಡುತ್ತಿರುವವರಲ್ಲಿ ಒಬ್ಬರ ಹೆಸರು ಮೀಗಲ್. ಅವರು ಯೆಹೋವನ ಸಾಕ್ಷಿಯಾಗುವ ಮುಂಚೆ 12 ವರ್ಷ ಜೈಲಿನಲ್ಲಿದ್ದವರು. ಈಗಲೂ ಅವರು ಜೈಲಿಗೆ ಹೋಗುತ್ತಿರುತ್ತಾರೆ. ಯಾಕೆ? ಅವರು ತಮ್ಮ ಜೀವನದಲ್ಲಿ ಬದಲಾವಣೆ ಮಾಡಿಕೊಂಡಂತೆ ಇತರ ಕೈದಿಗಳೂ ಬದಲಾವಣೆ ಮಾಡಿಕೊಳ್ಳಲು ಸಹಾಯ ಮಾಡಬೇಕೆಂಬ ಉದ್ದೇಶದಿಂದಲೇ.
ಮೀಗಲ್ ಕಳೆದ 8 ವರ್ಷಗಳಲ್ಲಿ ಅನೇಕ ಕೈದಿಗಳೊಂದಿಗೆ ಬೈಬಲ್ ಅಧ್ಯಯನ ನಡೆಸಿದ್ದಾರೆ. “ನಾನಿದ್ದ ಜೈಲಿನ ಕೈದಿಗಳಿಗೆ ಸಹಾಯ ಮಾಡುವಾಗ ಮತ್ತು ಅಪರಾಧಗಳಿಂದ ತುಂಬಿದ ಈ ಪ್ರಪಂಚದಿಂದ ದೂರವಿರಬೇಕೆಂಬ ಅವರ ಬಯಕೆಯನ್ನು ನೋಡುವಾಗ ನನಗೆ ತೃಪ್ತಿ, ಸಂತೋಷವಾಗುತ್ತದೆ” ಎಂದವರು ಹೇಳುತ್ತಾರೆ.
ಕುಡಿದ ಮತ್ತಿನಲ್ಲಿ ಚಾಲಕನೊಬ್ಬ ಮೀಗಲ್‌ನ ತಂದೆಗೆ ಬಂದು ಗುದ್ದಿದ್ದರಿಂದ ಅವರು ತೀರಿಕೊಂಡಿದ್ದರು. ಆಗ ಮೀಗಲ್‌ಗೆ ಬರೇ 4 ವರ್ಷ. ಅವನ ತಾಯಿ ಕುಟುಂಬ ನಡೆಸಲಿಕ್ಕಾಗಿ ಹಗಲಿರುಳು ಕೆಲಸ ಮಾಡಬೇಕಾಗಿ ಬಂತು.
ಮೀಗಲ್ ಮತ್ತು ಅವನ ಅಣ್ಣ ಶಾಲೆಗೆ ಹೋಗದೆ ಆಗಾಗ್ಗೆ ಮನೆಗಳಿಗೆ ನುಗ್ಗಿ, ಕಾರುಗಳನ್ನು ಒಡೆದುಹಾಕಿ ಕದಿಯಲು ಆರಂಭಿಸಿದರು. 12ರ ಪ್ರಾಯದಲ್ಲಿ ಮೀಗಲ್ ಚಿಕ್ಕ-ಪುಟ್ಟ ಕಳ್ಳತನ ಮಾಡುವುದರಲ್ಲಿ ನಿಪುಣನಾದರು. 15ರ ಪ್ರಾಯದಲ್ಲಿ ಅಮಲೌಷಧದ ವ್ಯವಹಾರಗಳನ್ನು ನಡೆಸುತ್ತಾ ತುಂಬ ಹಣ ಮಾಡಿದರು. ಹೆರಾಯಿನ್ ಮತ್ತು ಕೊಕೇಯ್ನ್ ಎಂಬ ದುಬಾರಿ ಅಮಲೌಷಧ ಸೇವಿಸುವ ಚಟಕ್ಕೆ ಬಿದ್ದದರಿಂದ ಅವರು ಇನ್ನೂ ಹೆಚ್ಚೆಚ್ಚು ಕದಿಯಲು ಆರಂಭಿಸಿದರು. 16ರ ವಯಸ್ಸಿಗೆಲ್ಲ ಅವರಿಗೆ ಜೈಲಿಗೆ ಹೋಗುವುದು, ಹೊರ ಬರುವುದು ಸಾಮಾನ್ಯವಾಗಿ ಬಿಟ್ಟಿತ್ತು. ಹೀಗೆ ಬಲುಬೇಗನೇ ಅವರು ಕುಖ್ಯಾತ ಅಪರಾಧಿ ಆದರು. “ನಾನು ಒಂದೋ ಜೈಲಲ್ಲೇ ಸಾಯುತ್ತೇನೆ, ಇಲ್ಲಾ ಅಮಲೌಷಧ ಸೇವನೆಯಿಂದ ಸಾಯುತ್ತೇನೆ ಎಂದು ನನಗೆ ಅನಿಸುತ್ತಿತ್ತು. ನನ್ನ ಪರಿಸ್ಥಿತಿ ಜೇಡರ ಬಲೆಯಲ್ಲಿ ಸಿಕ್ಕಿಹಾಕಿಕೊಂಡ ಕೀಟದಂತಿತ್ತು” ಎಂದು ಮೀಗಲ್ ಹೇಳುತ್ತಾರೆ.
1994ರಲ್ಲಿ ಮೀಗಲ್‌ರ ಸ್ನೇಹಿತರಲ್ಲೊಬ್ಬರು ಆಗ ಜೈಲಿನಲ್ಲಿದ್ದ ಮೀಗಲ್‌ರಿಗೆ ಪತ್ರ ಬರೆಯುವಂತೆ ಒಬ್ಬ ಯೆಹೋವನ ಸಾಕ್ಷಿಯನ್ನು ಕೇಳಿಕೊಂಡರು. ಭೂಮಿಯನ್ನು ಪುನಃ ಪರದೈಸಾಗಿ ಮಾಡುವುದೇ ದೇವರ ಉದ್ದೇಶವಾಗಿದೆ ಎಂದು ಮೀಗಲ್‌ರಿಗೆ ಆ ಪತ್ರದಿಂದ ಗೊತ್ತಾಯಿತು. ಇಂಥ ಒಂದು ಸುಂದರ ಭೂಮಿಯಲ್ಲಿ ಸಂತೋಷದಿಂದ ಜೀವಿಸಬೇಕೆಂದರೆ ಮೀಗಲ್ ಈಗ ಜೀವನದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕೆಂದು ಅವರು ಪತ್ರದಲ್ಲಿ ಉತ್ತೇಜಿಸಿದ್ದರು. “ಅವರು ಬರೆದ ವಿಷಯ ನನ್ನನ್ನು ತುಂಬ ಪ್ರಭಾವಿಸಿತು. ಆ ದಿನದಿಂದ ನನ್ನ ಜೀವನದಲ್ಲಿ ತುಂಬ ಬದಲಾವಣೆಯಾಯಿತು. ನಾನು ಬೈಬಲನ್ನು ಕಲಿಯಲು ಆರಂಭಿಸಿದರೆ ಅದು ಹೇಳುವಂತೆ ಜೀವಿಸಲು ತುಂಬ ಕಷ್ಟ ಆಗುತ್ತದೆ ಎಂದು ಗೊತ್ತಿದ್ದರೂ ಅದನ್ನು ಕಲಿಯುಲು ನಿರ್ಧರಿಸಿದೆ” ಎಂದು ಹೇಳುತ್ತಾರೆ.
ಮೀಗಲ್ ಅಮಲೌಷಧ ಮತ್ತು ತಂಬಾಕು ಸೇವನೆಗೆ ದಾಸರಾಗಿದ್ದರಿಂದ ಬೈಬಲಿನಲ್ಲಿರುವಂತೆ ಜೀವಿಸುವುದು ತುಂಬ ಕಷ್ಟ ಅಂತ ತಿಳಿದಿದ್ದರು. ಅಮಲೌಷಧ ಮತ್ತು ತಂಬಾಕು ಅವರಿಗೆ ಸುಲಭದಲ್ಲಿ ಸಿಗುತ್ತಿತ್ತು. ಪ್ರತಿದಿನ ಜೊತೆ ಕೈದಿಗಳು ಮೀಗಲ್‌ರಿಗೆ ‘ಅಮಲೌಷಧವನ್ನು ತಗೊ’ ಅಂತ ಅದನ್ನು ಕೊಡಲಿಕ್ಕೆ ಬರುತ್ತಿದ್ದರು. ಈ ಚಟದಿಂದ ಹೊರಬರಲು ಮೀಗಲ್ ಎಡೆಬಿಡದೇ ಯೆಹೋವನಿಗೆ ಪ್ರಾರ್ಥಿಸುತ್ತಿದ್ದರು. ಇದರಿಂದಾಗಿ ಕೊನೆಗೂ ಆ ಚಟವನ್ನು ಬಿಡಲು ಸಾಧ್ಯವಾಯಿತು.
ಮೂರು ತಿಂಗಳ ನಂತರ, ತನ್ನ ನಂಬಿಕೆಯ ಬಗ್ಗೆ ಮೀಗಲ್ ಜೊತೆ ಕೈದಿಗಳ ಹತ್ತಿರ ಹೇಳಲು ಆರಂಭಿಸಿದರು. ಅದರ ಮುಂದಿನ ವರ್ಷ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು ಮತ್ತು ಅವರು ದೀಕ್ಷಾಸ್ನಾನ ಪಡೆದುಕೊಂಡು ಒಬ್ಬ ಯೆಹೋವನ ಸಾಕ್ಷಿಯಾದರು. ತದನಂತರ, ಅವರು ಮದುವೆಯಾಗಲು ಯೋಜಿಸಿದರು. ಆದರೆ ಅಲ್ಲೂ ಒಂದು ಸಮಸ್ಯೆ ಎದುರಾಯಿತು. ಮದುವೆಗೆ ಇನ್ನೇನು ಒಂದು ತಿಂಗಳು ಇರುವಾಗ ನ್ಯಾಯಾಲಯ ಅವರ ಮೇಲಿದ್ದ ಇತರ ಕೇಸ್‌ಗಳ ಆಧಾರದ ಮೇಲೆ ಇನ್ನೂ 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತು. ಆದರೂ ಅವರ ಒಳ್ಳೇ ನಡತೆಯನ್ನು ನೋಡಿ ಮೂರುವರೆ ವರ್ಷಗಳ ನಂತರ ಬಿಡುಗಡೆ ಮಾಡಲಾಯಿತು. ಕೊನೆಗೂ ಅವರ ಮದುವೆಯಾಯಿತು. ಅಂದಿನಿಂದ ಇಂದಿನವರೆಗೆ ಮೀಗಲ್ ತನ್ನ ಹಿಂದಿನ ಜೀವನಕ್ಕೆ ಕಾಲಿಟ್ಟಿಲ್ಲ.