ಮಾಜಿ ಅಗ್ನಿಶಾಮಕ ದಳದವ . . . ಆದ ಆಪತ್ಭಾಂದವ!
ಜನವರಿ 5, 2014, ಭಾನುವಾರದಂದು ಸರ್ಜ್ ಝೆರಾರ್ಡಿನ್ ಎಂಬ ವ್ಯಕ್ತಿ ಫ್ರಾನ್ಸಿನ ಪ್ಯಾರಿಸ್ ನಗರದ ಹತ್ತಿರ ನಡೆಯಲಿದ್ದ ಯೆಹೋವನ ಸಾಕ್ಷಿಗಳ ಸಮ್ಮೇಳನಕ್ಕೆಂದು ಬಸ್ನಲ್ಲಿ ಪ್ರಯಾಣಿಸುತ್ತಿದ್ದಾಗ ಒಂದು ಭೀಕರ ಅಪಘಾತವನ್ನು ನೋಡಿದರು. ಅವರು ಆ ಅಪಘಾತ ಹೇಗೆ ಸಂಭವಿಸಿತು ಅಂತ ಹೀಗೆ ಹೇಳುತ್ತಾರೆ: “ಸೇತುವೆಗೆ ಸಹಾಯಕವಾಗಿದ್ದಂಥ ಸಿಮೆಂಟಿನ ಗೋಡೆಗೆ ಒಂದು ಕಾರು ಡಿಕ್ಕಿ ಹೊಡೆದು, ಮೇಲೆ ಹಾರಿ, ಸೇತುವೆಗೇ ಡಿಕ್ಕಿ ಹೊಡೆಯಿತು, ಹೊಡೆದ ರಭಸಕ್ಕೆ ಕಾರು ರಸ್ತೆಯಲ್ಲಿ ತಲೆಕೆಳಗಾಗಿ ಬಿತ್ತು.”
ಸರ್ಜ್ 40ಕ್ಕೂ ಹೆಚ್ಚು ವರ್ಷಗಳು ಅಗ್ನಿಶಾಮಕ ದಳದಲ್ಲಿ ಕೆಲಸ ಮಾಡಿದಂಥವರು. ಅಲ್ಲಿ ಅವರು ಕ್ಯಾಪ್ಟನ್ ಆಗಿ ಕೆಲಸ ಮಾಡಿದ್ದರು. ಈ ಅಪಘಾತವನ್ನು ನೋಡಿದ ತಕ್ಷಣ ಅವರ ಕಾರ್ಯಪ್ರಜ್ಞೆ ಅವರನ್ನು ಬಡಿದೆಬ್ಬಿಸಿತು. ಅವರು ಹೇಳುವುದು: “ಅಪಘಾತ ಸಂಭವಿಸಿದ ಸ್ಥಳಕ್ಕೆ ವಿರುದ್ಧ ದಿಕ್ಕಿನಲ್ಲಿ ನಮ್ಮ ಬಸ್ ಚಲಿಸುತ್ತಿತ್ತು. ಕೂಡಲೆ, ಬಸ್ ಚಾಲಕನ ಹತ್ತಿರ ಹೋಗಿ ಬಸ್ ನಿಲ್ಲಿಸುವಂತೆ ಕೇಳಿಕೊಂಡೆ, ನಿಲ್ಲಿಸಿದ ತಕ್ಷಣ ಬೆಂಕಿಯಿಂದ ಉರಿಯುತ್ತಿದ್ದ ಆ ಅಪಘಾತದ ಸ್ಥಳಕ್ಕೆ ಓಡಿದೆ. ಅಲ್ಲಿ ಯಾರೋ ‘ಕಾಪಾಡಿ, ಕಾಪಾಡಿ’ ಅಂತ ಚೀರುತ್ತಿದ್ದರು. ನಾನವತ್ತು ಸಾಧಾರಣ ಬಟ್ಟೆ ಧರಿಸಿದ್ದೆ, ಬೆಂಕಿಯಿಂದ ತಪ್ಪಿಸಿಕೊಳ್ಳಲು ಯಾವುದೇ ಸುರಕ್ಷಾ ಸಲಕರಣೆಗಳೂ ಇರಲಿಲ್ಲ. ಆದರೆ ಅಲ್ಲಿದ್ದವರ ಚೀರಾಟ ಕೇಳಿ ‘ಇನ್ನೂ ಬದುಕಿದ್ದಾರೆ, ಅವರನ್ನು ಕಾಪಾಡಲೇ ಬೇಕು’ ಅಂತ ನಿರ್ಧರಿಸಿದೆ.”
ಕಾರಿನ ಸುತ್ತ ದಿಕ್ಕೇ ತೋಚದಂತೆ ಓಡಾಡುತ್ತಿದ್ದ ಆ ಕಾರಿನ ಪ್ರಯಾಣಿಕನನ್ನು ಸರ್ಜ್ ನೋಡಿ, ಅವನನ್ನು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋದರು. “ಇನ್ನೂ ಇಬ್ಬರು ಈ ಕಾರಿನಲ್ಲಿದ್ದಾರೆ ಎಂದು ಆ ಪ್ರಯಾಣಿಕನು ನನಗೆ ಹೇಳಿದನು. ಅಷ್ಟರಲ್ಲಿಯೇ, ಅಲ್ಲಿ ಸಂಚರಿಸುತ್ತಿದ್ದ ಅನೇಕ ಕಾರುಗಳು ಬಂದು ನಿಂತವು. ಆದರೆ ಬೆಂಕಿಯ ತಾಪಮಾನ ಹೆಚ್ಚಿದ್ದರಿಂದ ಅಲ್ಲಿದ್ದ ಜನರಿಗೆ ಹತ್ತಿರ ಬರಲು ಸಾಧ್ಯವಾಗಲಿಲ್ಲ” ಎಂದು ಸರ್ಜ್ ಹೇಳುತ್ತಾರೆ.
ಅನೇಕ ಟ್ರಕ್ ಡ್ರೈವರ್ಗಳು ತಮ್ಮ ವಾಹನದಲ್ಲಿದ್ದ ಅಗ್ನಿಶಾಮಕ ಸಾಧನಗಳನ್ನು ತಂದರು. ಸರ್ಜ್ ಕೊಟ್ಟ ನಿರ್ದೇಶನಕ್ಕನುಸಾರ ತಮ್ಮಲ್ಲಿದ್ದ ಅಗ್ನಿಶಾಮಕ ಸಾಧನಗಳಿಂದ ಉರಿಯುತ್ತಿದ್ದ ಬೆಂಕಿಯನ್ನು ಸ್ವಲ್ಪ ಮಟ್ಟಿಗೆ ನಂದಿಸಿದರು. ಡ್ರೈವರ್ ಕಾರ್ ಕೆಳಗೆ ಸಿಕ್ಕಿ ಹಾಕಿಕೊಂಡಿದ್ದ. ಸರ್ಜ್ ಮತ್ತು ಇತರರು ಕಾರನ್ನು ಮೇಲಕ್ಕೆ ಎತ್ತಿ ಡ್ರೈವರನ್ನು ಹೊರಗೆಳೆದು, ಕಾಪಾಡಿದರು.
“ಉರಿಯುತ್ತಿದ್ದ ಬೆಂಕಿ ನೋಡಿದರೆ ಕಾರು ಇನ್ನೇನು ಸ್ಫೋಟಿಸಲಿದೆ ಅಂತ ನನಗೆ ಗೊತ್ತಾಯಿತು. ಆದರೆ, ಇನ್ನೂ ಒಬ್ಬ ಪ್ರಯಾಣಿಕ ಕಾರೊಳಗಡೆಯೇ ಸೀಟ್ ಬೆಲ್ಟಲ್ಲಿ ತಲೆಕೆಳಗಾಗಿ ನೇತಾಡುತ್ತಿದ್ದ. ಅವನನ್ನು ಹೇಗೆ ಕಾಪಾಡೋದು ಅಂತ ಯೋಚಿಸುತ್ತಿದ್ದೆ. ಅಷ್ಟರಲ್ಲೇ ಅಗ್ನಿಶಾಮಕ ದಳದಲ್ಲಿ ಕೆಲಸ ಮಾಡುವವನೊಬ್ಬ ಅಲ್ಲಿಗೆ ಬಂದ. ಅವನು ಲೆದರ್ ಜಾಕೆಟ್ (ಲೆದರ್ ಬಟ್ಟೆಗಳಿಗೆ ಬೇಗ ಬೆಂಕಿ ಹತ್ತಿಕೊಳ್ಳುವುದಿಲ್ಲ) ಹಾಕಿಕೊಂಡಿದ್ದ. ಇನ್ನೇನು ಕಾರು ಸ್ಫೋಟಿಸಲಿಕ್ಕಿದೆ ಅಂತ ನಾನು ಅವನಿಗೆ ಹೇಳಿದೆ. ಅಪಾಯದಲ್ಲಿದ್ದ ಆ ಪ್ರಯಾಣಿಕನನ್ನು ಕೈಯಿಡಿದು ಎಳೆಯೋಣ ಅಂತ ಇಬ್ಬರೂ ನಿರ್ಧರಿಸಿದೆವು. ಅವನನ್ನು ಹೊರಗೆಳೆದ ಕೆಲವೇ ಕ್ಷಣಗಳಲ್ಲಿ ಆ ಕಾರು ಸ್ಫೋಟಿಸಿತು” ಎಂದು ಸರ್ಜ್ ವಿವರಿಸುತ್ತಾರೆ.
ಅಗ್ನಿಶಾಮಕ ದಳ ಮತ್ತು ಆ್ಯಂಬುಲೆನ್ಸ್ ಬಂದಾಗ, ಗಾಯಗೊಂಡವರನ್ನು ಉಪಚರಿಸಿ, ಬೆಂಕಿಯನ್ನು ನಂದಿಸಿದರು. ಸರ್ಜ್ಗೂ ಕೆಲವು ಗಾಯಗಳಾಗಿದ್ದವು, ಅವರಿಗೆ ಪ್ರಥಮ ಚಿಕಿತ್ಸೆ ಮಾಡಲಾಯಿತು. ಅವರು ಸಮ್ಮೇಳನಕ್ಕೆಂದು ಪ್ರಯಾಣಿಸುತ್ತಿದ್ದ ಬಸ್ ಹತ್ತುವಾಗ ಅನೇಕ ಜನರು ಓಡಿಬಂದು ಅವರಿಗೆ ಧನ್ಯವಾದ ಹೇಳಿದರು.
ಆಪತ್ಭಾಂದವನಂತೆ, ಅಪಘಾತವಾದ ಸಮಯದಲ್ಲಿ ಅಲ್ಲಿದ್ದವರಿಗೆ ಸಹಾಯ ಮಾಡಿದ್ದಕ್ಕೆ ಸರ್ಜ್ಗೆ ತೃಪ್ತಿ ಸಿಕ್ಕಿದೆ. ಅವರು ಹೇಳುವುದು, “ಅಪಾಯದಲ್ಲಿದ್ದವರನ್ನು ಕಾಪಾಡುವ ಜವಾಬ್ದಾರಿ ನನ್ನ ದೇವರಾದ ಯೆಹೋವನೇ ನನಗೆ ಕೊಟ್ಟಿದ್ದಾನೆ ಅಂತ ನಾನು ಭಾವಿಸಿದೆ. ಅವರ ಜೀವವನ್ನು ಕಾಪಾಡಲು ಸಾಧ್ಯವಾಗಿದ್ದಕ್ಕೆ ನನಗೆ ತುಂಬ ಸಂತೋಷವಾಗುತ್ತಿದೆ.”