ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಂವಾದ ಒಂದು ಸೇತುವೆಯಂತಿದ್ದು ನಿಮ್ಮ ಮಕ್ಕಳ ಹತ್ತಿರಕ್ಕೆ ಹೋಗಲು ಸಹಾಯಮಾಡುತ್ತದೆ

ಹೆತ್ತವರಿಗಾಗಿ

5: ಸಂವಾದ

5: ಸಂವಾದ

ಅರ್ಥವೇನು?

ನಿಮ್ಮ ಮಕ್ಕಳು ಮತ್ತು ನೀವು ಮನಸ್ಸಿನಲ್ಲಿರುವ ವಿಚಾರಗಳನ್ನು ಹಾಗೂ ಭಾವನೆಗಳನ್ನು ಒಬ್ಬರಿಗೊಬ್ಬರು ಹಂಚಿಕೊಳ್ಳುವುದೇ ನಿಜವಾದ ಸಂವಾದ.

ಯಾಕೆ ಮುಖ್ಯ?

ಮಕ್ಕಳು ಹದಿಹರೆಯಕ್ಕೆ ಕಾಲಿಟ್ಟಾಗ ಅವರೊಟ್ಟಿಗೆ ಸಂವಾದ ಮಾಡುವುದು ಜಾಸ್ತಿ ಕಷ್ಟವಾಗಬಲ್ಲದು. ನಿನ್ನೆಮೊನ್ನೆ ವರೆಗೆ ಮಕ್ಕಳ ಹೃದಯದ ಬಾಗಿಲೊಳಗೆ ನೀವು ಸುಲಭವಾಗಿ ಹೋಗಬಹುದಿತ್ತು. ಆದರೆ ಈಗೀಗ ಹೊರಗೆ ನಿಂತು ಸುಮ್ಮನೆ ನೋಡುತ್ತಾ ಕಾಯುವ ಸನ್ನಿವೇಶ ಬಂದಿದೆ. ಕೆಲವೊಮ್ಮೆ ಆ ಬಾಗಿಲನ್ನು ಎಷ್ಟು ತಟ್ಟಿದರೂ ಅದು ತೆರೆಯುವುದೇ ಇಲ್ಲ. ಮಕ್ಕಳು ಹದಿವಯಸ್ಸಿನಲ್ಲಿ ನಿಮ್ಮೊಟ್ಟಿಗೆ ಮಾತಾಡಲು ಇಷ್ಟಪಡದಿದ್ದರೂ ಆಗಲೇ ಅವರೊಟ್ಟಿಗೆ ಹೆಚ್ಚು ಸಂವಾದ ಮಾಡುವ ಅಗತ್ಯ ಇದೆ.

ನೀವೇನು ಮಾಡಬಹುದು?

ನಿಮ್ಮ ಮಕ್ಕಳ ಸಮಯಕ್ಕೆ ಹೊಂದಿಕೊಳ್ಳಿ. ತಡರಾತ್ರಿ ವರೆಗೆ ಅವರ ಜೊತೆ ಮಾತಾಡಬೇಕಾಗಿ ಬಂದರೂ ಅದನ್ನು ಮಾಡಿ.

“‘ನಿನಗೆ ಈಗಲೇ ಮಾತಾಡಬೇಕಿತ್ತಾ? ಇಡೀ ದಿನ ನಿನ್‌ ಜೊತೆನೇ ಇದ್ದೆನಲ್ಲಾ’ ಅಂತ ಹೇಳಲು ನಿಮಗೆ ಮನಸ್ಸಾಗಬಹುದು. ಆದರೆ ಮಕ್ಕಳು ಹೃದಯಬಿಚ್ಚಿ ಮಾತಾಡಬೇಕೆಂದಿರುವಾಗ ನಾವ್ಯಾಕೆ ಗುಣುಗುಟ್ಟಬೇಕು? ತಂದೆತಾಯಿಗೆ ಬೇಕಿರುವುದು ಅದೇ ತಾನೇ?”—ಲೀಸಾ.

“ನನಗೆ ರಾತ್ರಿ ತಡವಾಗಿ ಮಲಗೋದು ಇಷ್ಟವಿಲ್ಲದಿದ್ದರೂ, ಹದಿವಯಸ್ಸಿನ ನನ್ನ ಮಕ್ಕಳ ಜೊತೆಗಿನ ಕೆಲವು ಅತ್ಯುತ್ತಮ ಸಂಭಾಷಣೆಗಳು ನಡೆದಿರುವುದು ಮಧ್ಯರಾತ್ರಿ ನಂತರವೇ.”—ಹರ್ಬರ್ಟ್‌.

ಬೈಬಲ್‌ ತತ್ವ: ‘ಪ್ರತಿಯೊಬ್ಬನು ಸ್ವಹಿತವನ್ನು ಚಿಂತಿಸದೆ ಪರಹಿತವನ್ನು ಚಿಂತಿಸುತ್ತಿರಲಿ.’—1 ಕೊರಿಂಥ 10:24.

ಅಪಕರ್ಷಿತರಾಗಬೇಡಿ. ಒಬ್ಬ ತಂದೆ ಒಪ್ಪಿಕೊಂಡಿದ್ದು: “ಮಕ್ಕಳು ಬಂದು ಮಾತಾಡುವಾಗ ಕೆಲವೊಮ್ಮೆ ನಾನೇನೋ ಯೋಚಿಸುತ್ತಿರುತ್ತೇನೆ. ಮಕ್ಕಳಿಗೆ ಗೊತ್ತಾಗಿಬಿಡುತ್ತದೆ, ಅವರನ್ನು ಮೋಸಮಾಡಲಿಕ್ಕಾಗಲ್ಲ!”

ನಿಮಗೂ ಹೀಗೆಯೇ ಆಗುತ್ತಿದ್ದರೆ ಏನು ಮಾಡಬಹುದು? ಟಿವಿ ಆಫ್‌ ಮಾಡಿ. ಕೈಯಲ್ಲಿರುವ ಮೊಬೈಲ್‌ ಅಥವಾ ಎಲೆಕ್ಟ್ರಾನಿಕ್‌ ಸಾಧನವನ್ನು ಕೆಳಗಿಡಿ. ನಿಮ್ಮ ಮಗ/ಮಗಳ ಮಾತಿಗೆ ಗಮನ ಕೊಡಿ. ಅವರ ಚಿಂತೆ, ಸಮಸ್ಯೆಗೆ ಪೂರ್ತಿ ಗಮನ ಕೊಡಿ. ಅವರು ಹೇಳುವ ವಿಷಯ ತುಂಬ ಕ್ಷುಲ್ಲಕ ಎಂದನಿಸಿದರೂ ಹೀಗೆ ಮಾಡಿ.

“ನಮ್ಮ ಮಕ್ಕಳ ಅನಿಸಿಕೆಗಳು, ಭಾವನೆಗಳು ನಮಗೆ ತುಂಬ ಮುಖ್ಯವೆಂದು ಅವರಿಗೆ ಭರವಸೆ ಕೊಡಬೇಕು. ಇಲ್ಲಾಂದ್ರೆ, ಅವರ ಚಿಂತೆಗಳನ್ನು ನಮಗೆ ಹೇಳದೆ ಮನಸ್ಸಿನಲ್ಲಿಟ್ಟುಕೊಳ್ಳುತ್ತಾರೆ ಅಥವಾ ಸಹಾಯಕ್ಕಾಗಿ ಬೇರೆಯವರ ಹತ್ತಿರ ಹೋಗುತ್ತಾರೆ.”—ಮರಾಂಡಾ.

“ಮಕ್ಕಳ ಯೋಚನಾರೀತಿ ಪೂರ್ತಿ ತಪ್ಪಾಗಿದ್ದರೂ ಅವರದನ್ನು ಹೇಳುವಾಗ ತಟ್ಟನೆ ಸಿಟ್ಟು, ಆಶ್ಚರ್ಯ, ದುಃಖ ತೋರಿಸಬೇಡಿ.”—ಆ್ಯಂಥನಿ.

ಬೈಬಲ್‌ ತತ್ವ: “ನೀವು ಹೇಗೆ ಕಿವಿಗೊಡುತ್ತೀರಿ ಎಂಬುದಕ್ಕೆ ಗಮನಕೊಡಿರಿ.”—ಲೂಕ 8:18.

ಅನೌಪಚಾರಿಕ ಸನ್ನಿವೇಶಗಳಲ್ಲೂ ಮಾತಾಡಿ. ಹೆತ್ತವರು ಮಕ್ಕಳೊಂದಿಗೆ ಎದುರುಬದುರು ಕುಳಿತುಕೊಂಡಿರುವಾಗ ಮಕ್ಕಳಿಗೆ ಮನಬಿಚ್ಚಿ ಮಾತಾಡಲು ಕೆಲವೊಮ್ಮೆ ಕಷ್ಟವಾಗುತ್ತದೆ.

“ನಾವು ಕಾರಿನಲ್ಲಿ ಒಟ್ಟಿಗೆ ಪ್ರಯಾಣಿಸುವಾಗ ಮಾತಾಡುತ್ತೇವೆ. ಎದುರುಬದುರಲ್ಲದೆ ಹೀಗೆ ಪಕ್ಕಪಕ್ಕ ಕೂತಿರುವಾಗ ಕೆಲವೊಂದು ವಿಷಯಗಳ ಬಗ್ಗೆ ಚೆನ್ನಾಗಿ ಚರ್ಚಿಸಲು ಸಾಧ್ಯವಾಗಿದೆ.”—ನಿಕೊಲ್‌.

ಮಕ್ಕಳೊಟ್ಟಿಗೆ ಮಾತಾಡಲು ಇನ್ನೊಂದು ಒಳ್ಳೇ ಸಂದರ್ಭ ಊಟದ ಸಮಯ ಆಗಿದೆ.

“ರಾತ್ರಿ ಊಟದವೇಳೆ ನಾವೆಲ್ಲರೂ ಆ ದಿನ ನಮಗಾದ ಸಿಹಿ-ಕಹಿ ಅನುಭವಗಳನ್ನು ತಿಳಿಸುತ್ತೇವೆ. ಈ ರೂಢಿ ನಮ್ಮನ್ನು ಐಕ್ಯಗೊಳಿಸಿ, ನಮ್ಮ ಸಮಸ್ಯೆಗಳನ್ನು ನಾವು ಒಂಟಿಯಾಗಿ ಎದುರಿಸಬೇಕಾಗಿಲ್ಲ ಎಂಬ ಆಶ್ವಾಸನೆ ಕೊಡುತ್ತದೆ.”—ರಾಬಿನ್‌.

ಬೈಬಲ್‌ ತತ್ವ: ‘ಪ್ರತಿಯೊಬ್ಬನು ಕಿವಿಗೊಡುವುದರಲ್ಲಿ ಶೀಘ್ರನು ಮತ್ತು ಮಾತಾಡುವುದರಲ್ಲಿ ದುಡುಕದವನು ಆಗಿರಬೇಕು.’ —ಯಾಕೋಬ 1:19.