‘ಹೆದರಬೇಡ, ನಾನೇ ನಿನಗೆ ಸಹಾಯಕೊಡುತ್ತೇನೆ’
ನೆನಸಿ ನೀವು ತಡರಾತ್ರಿ ಬೀದಿಯಲ್ಲಿ ನಡೆಯುತ್ತಾ ಇದ್ದೀರಿ. ಯಾರೋ ನಿಮ್ಮ ಹಿಂದೆಹಿಂದೆ ಬರುತ್ತಿರುವ ಸಪ್ಪಳ ಕೇಳಿಸುತ್ತಿದೆ. ನೀವು ನಿಲ್ಲುತ್ತೀರಿ. ಆಗ ಅವನೂ ನಿಲ್ಲುತ್ತಾನೆ. ವೇಗವಾಗಿ ನಡೆಯುತ್ತೀರಿ. ಅವನೂ ವೇಗವಾಗಿ ನಡೆಯುತ್ತಾನೆ. ನೀವು ಓಡಲು ಆರಂಭಿಸಿ ಹತ್ತಿರದಲ್ಲೇ ಇರುವ ನಿಮ್ಮ ಸ್ನೇಹಿತನ ಮನೆಗೆ ಹೋಗಿ ಬಾಗಿಲು ತಟ್ಟುತ್ತೀರಿ. ಅವನು ಬಾಗಿಲನ್ನು ತೆರೆದು ನಿಮ್ಮನ್ನು ಒಳಗೆ ಕರೆದಾಗ ನೆಮ್ಮದಿಯ ನಿಟ್ಟುಸಿರು ಬಿಡುತ್ತೀರಿ. ನೀವೀಗ ಸುರಕ್ಷಿತರು!
ಇದೇ ಅನುಭವ ನಿಮಗೆ ಯಾವತ್ತೂ ಆಗಿರಲಿಕ್ಕಿಲ್ಲ. ಆದರೆ ಅದೇ ರೀತಿಯ ಆತಂಕ, ಭಯ ಹುಟ್ಟಿಸುವಂಥ ಚಿಂತೆಗಳು ನಿಮಗಿರಬಹುದು. ಉದಾಹರಣೆಗೆ, ನೀವು ಒಂದು ಬಲಹೀನತೆಯನ್ನು ಜಯಿಸಲು ತುಂಬ ಹೋರಾಡುತ್ತಿರಬಹುದು. ಆದರೆ ಪುನಃ ಪುನಃ ಅದೇ ತಪ್ಪನ್ನು ಮಾಡುತ್ತಿದ್ದೀರಾ? ಬಹುಶಃ ತುಂಬ ಸಮಯದಿಂದ ಕೆಲಸ ಇಲ್ಲದಿರಬಹುದು. ಎಷ್ಟು ಹುಡುಕಿದರೂ ಕೆಲಸ ಸಿಗುತ್ತಿಲ್ಲವಾ? ಮುಂದೆ ವಯಸ್ಸಾಗಿ, ಆರೋಗ್ಯ ಕೆಟ್ಟರೆ ಏನು ಮಾಡುವುದು ಎಂಬ ಚಿಂತೆ ನಿಮಗಿದೆಯಾ? ಅಥವಾ ಬೇರಾವುದೊ ಚಿಂತೆ ನಿಮ್ಮನ್ನು ಕಾಡುತ್ತಿದೆಯಾ?
ನಿಮಗೆ ಯಾವುದೇ ಸಮಸ್ಯೆ ಇರಲಿ ನಿಮಗಿರುವ ಚಿಂತೆಗಳನ್ನು ಹೇಳಿಕೊಳ್ಳಲು, ನಿಮಗೆ ಸಹಾಯ ಮಾಡಲು ಸಿದ್ಧನಿರುವ ಒಬ್ಬ ಸ್ನೇಹಿತನಿದ್ದರೆ ಎಷ್ಟು ಒಳ್ಳೇದು! ಈ ರೀತಿಯ ಆಪ್ತ ಸ್ನೇಹಿತನು ಇದ್ದಾನೆಯೇ? ಇದ್ದಾನೆ! ಆತನು ಯೆಹೋವನು. ನಂಬಿಗಸ್ತ ವ್ಯಕ್ತಿಯಾದ ಅಬ್ರಹಾಮನಿಗೆ ಆತನು ಅಂಥ ಸ್ನೇಹಿತನಾಗಿದ್ದನು. ಇದನ್ನೇ ಯೆಶಾಯ 41:8-13ರಲ್ಲಿ ತಿಳಿಸಲಾಗಿದೆ. ವಚನ 10 ಮತ್ತು 13ರಲ್ಲಿ ಯೆಹೋವನು ನಮ್ಮಲ್ಲಿ ಪ್ರತಿಯೊಬ್ಬರಿಗೆ ಮಾತು ಕೊಡುವುದು: “ನೀನಂತು ಹೆದರಬೇಡ, ನಾನೇ ನಿನ್ನೊಂದಿಗಿದ್ದೇನೆ; ದಿಗ್ಭ್ರಮೆಗೊಳ್ಳದಿರು, ನಾನೇ ನಿನ್ನ ದೇವರು; ನಾನು ನಿನ್ನನ್ನು ಬಲಪಡಿಸುತ್ತೇನೆ; ಹೌದು, ನಿನಗೆ ಸಹಾಯಕೊಡುತ್ತೇನೆ; ನನ್ನ ಧರ್ಮದ ಬಲಗೈಯನ್ನು ನಿನಗೆ ಆಧಾರಮಾಡುತ್ತೇನೆ ಭಯಪಡಬೇಡ, ನಿನಗೆ ಸಹಾಯಮಾಡುತ್ತೇನೆ ಎಂದು ನಿನಗೆ ಹೇಳುವ ನಿನ್ನ ದೇವರಾದ ಯೆಹೋವನೆಂಬ ನಾನೇ ನಿನ್ನ ಕೈಹಿಡಿಯುತ್ತೇನಲ್ಲಾ [“ಬಲಗೈಯನ್ನು ಗಟ್ಟಿಯಾಗಿ ಹಿಡಿಯುತ್ತೇನೆ,” ನೂತನ ಲೋಕ ಭಾಷಾಂತರ].”
“ಬಲಗೈಯನ್ನು ನಿನಗೆ ಆಧಾರಮಾಡುತ್ತೇನೆ”
ಯೆಹೋವನ ಈ ಮಾತುಗಳು ತುಂಬ ಸಾಂತ್ವನ ಕೊಡುತ್ತವೆ. ಆತನು ನಿಜವಾಗಿ ಏನು ಮಾತು ಕೊಡುತ್ತಿದ್ದಾನೆಂದು ಮನಸ್ಸಲ್ಲೇ ಚಿತ್ರಿಸಿಕೊಳ್ಳಲು ಪ್ರಯತ್ನಿಸಿ. ನೀವು ಯೆಹೋವನ ಕೈಹಿಡಿದು ಆತನ ಪಕ್ಕದಲ್ಲಿ ನಡೆಯುತ್ತಿದ್ದೀರೆಂದು ಆ ವಚನ ಹೇಳುವುದಿಲ್ಲ. ನೀವು ಆತನ ಪಕ್ಕದಲ್ಲಿ ನಡೆಯುತ್ತಿದ್ದರೆ ಆತನ ಬಲಗೈ ನಿಮ್ಮ ಎಡಗೈಯನ್ನು ಹಿಡಿದಿರುತ್ತಿತ್ತು. ಆದರೆ ಗಮನಿಸಿ, ಯೆಹೋವನು ತನ್ನ “ಧರ್ಮದ ಬಲಗೈಯನ್ನು” ಚಾಚಿ ‘ನಿಮ್ಮ ಬಲಗೈಗೆ’ ಆಧಾರಕೊಡುತ್ತಾನೆಂದು ವಚನ ಹೇಳುತ್ತದೆ. ಇದು ಒಂದು ರೀತಿಯಲ್ಲಿ ಆತನು ನಿಮ್ಮನ್ನು ಯಾವುದೊ ಕಷ್ಟದ ಸನ್ನಿವೇಶದಿಂದ ಹೊರಗೆ ಎಳೆಯುತ್ತಿದ್ದಾನೆ ಎಂಬ ಚಿತ್ರಣ ಕೊಡುತ್ತದೆ. ಆತನು ನಿಮ್ಮ ಬಲಗೈಯನ್ನು ಹಿಡಿಯುವಾಗ ‘ಹೆದರಬೇಡ, ನಾನೇ ನಿನಗೆ ಸಹಾಯಕೊಡುತ್ತೇನೆ’ ಎಂದು ಹೇಳಿ ಧೈರ್ಯತುಂಬುತ್ತಾನೆ.
ನೀವು ಯೆಹೋವನನ್ನು ನಿಮ್ಮ ಪ್ರೀತಿಯ ತಂದೆ ಮತ್ತು ಸ್ನೇಹಿತನಾಗಿ ನೋಡುತ್ತೀರಾ? ನಿಮಗೆ ಕಷ್ಟಗಳಿರುವಾಗ ಆತನು ಸಹಾಯ ಮಾಡುವನೆಂದು ನಂಬುತ್ತೀರಾ? ಯೆಹೋವನಿಗೆ ನಿಜವಾಗಿಯೂ ನಿಮ್ಮ ಬಗ್ಗೆ ಕಾಳಜಿಯಿದೆ, ಸಹಾಯಮಾಡಲು ಆತನಿಗೆ ತುಂಬ ಮನಸ್ಸಿದೆ. ನೀವು ಕಷ್ಟ, ತೊಂದರೆಯಲ್ಲಿರುವಾಗ ಹೆದರದೆ ಧೈರ್ಯದಿಂದ ಇರಬೇಕೆಂದು ಬಯಸುತ್ತಾನೆ. ಯಾಕೆ? ಆತನಿಗೆ ನಿಮ್ಮ ಮೇಲೆ ತುಂಬ ಪ್ರೀತಿ ಇರುವುದರಿಂದಲೇ. ಆತನು ‘ಇಕ್ಕಟ್ಟಿನಲ್ಲಿ ನಿಮಗೆ ವಿಶೇಷಸಹಾಯಕನು.’—ಕೀರ್ತ. 46:1.
ಹಿಂದೆ ಮಾಡಿದ ತಪ್ಪುಗಳ ಬಗ್ಗೆ ನಮ್ಮ ಮನಸ್ಸು ಚುಚ್ಚುವಾಗ . . .
ಕೆಲವರು ತಾವು ಹಿಂದೆ ಮಾಡಿದ ತಪ್ಪುಗಳನ್ನು ಪುನಃ ಪುನಃ ನೆನಸಿಕೊಂಡು, ‘ದೇವರು ನನ್ನನ್ನು ಕ್ಷಮಿಸಿದ್ದಾನಾ ಇಲ್ಲವಾ?’ ಎಂದು ಕೊರಗುತ್ತಾ ಇರುತ್ತಾರೆ. ನೀವೂ ಹಾಗೆ ಮಾಡುತ್ತಿರುವಲ್ಲಿ, ನಂಬಿಗಸ್ತ ಯೋಬನ ಬಗ್ಗೆ ಯೋಚಿಸಿ. ಯೌವನದಲ್ಲಿ ತಪ್ಪುಮಾಡಿದ್ದೇನೆಂದು ಅವನು ಒಪ್ಪಿಕೊಂಡನು. (ಯೋಬ 13:26) ಕೀರ್ತನೆಗಾರ ದಾವೀದನಿಗೂ ಅದೇ ರೀತಿ ಅನಿಸುತ್ತಿತ್ತು. ಹಾಗಾಗಿ ‘ನನ್ನ ಯೌವನದ ತಪ್ಪುಗಳನ್ನೂ ದ್ರೋಹಗಳನ್ನೂ ಮನಸ್ಸಿನಲ್ಲಿಡಬೇಡ’ ಎಂದು ಯೆಹೋವನಲ್ಲಿ ಬೇಡಿಕೊಂಡನು. (ಕೀರ್ತ. 25:7) ನಾವೆಲ್ಲರೂ ಅಪರಿಪೂರ್ಣರು. ಹಾಗಾಗಿ ‘ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದೇವೆ.’—ರೋಮ. 3:23.
ಯೆಶಾಯ 41 ನೇ ಅಧ್ಯಾಯದಲ್ಲಿರುವ ಆ ಸಾಂತ್ವನದಾಯಕ ಮಾತುಗಳನ್ನು ಇಸ್ರಾಯೇಲ್ಯರಿಗಾಗಿ ಬರೆಯಲಾಗಿತ್ತು. ಅವರ ಪಾಪಗಳು ತುಂಬ ಗಂಭೀರವಾಗಿದ್ದವು. ಆದ್ದರಿಂದ ಅವರನ್ನು ಬಾಬೆಲಿಗೆ ಸೆರೆಯಾಳುಗಳಾಗಿ ಕಳುಹಿಸುವ ಮೂಲಕ ಶಿಕ್ಷಿಸುವೆನೆಂದು ಯೆಹೋವನು ಹೇಳಿದನು. (ಯೆಶಾ. 39:6, 7) ಅದೇ ಸಮಯದಲ್ಲಿ ಯಾರು ಪಶ್ಚಾತ್ತಾಪಪಟ್ಟು ತನ್ನ ಕಡೆಗೆ ಹಿಂದಿರುಗುತ್ತಾರೊ ಅವರನ್ನು ಬಿಡಿಸುವೆನೆಂದೂ ಮಾತುಕೊಟ್ಟನು. (ಯೆಶಾ. 41:8, 9; 49:8) ಇಂದು ಕೂಡ ಮನದಾಳದಿಂದ ಪಶ್ಚಾತ್ತಾಪಪಟ್ಟು ಯೆಹೋವನನ್ನು ಮೆಚ್ಚಿಸಲು ಬಯಸುವವರಿಗೆ ಆತನು ಅದೇ ರೀತಿ ಪ್ರೀತಿ, ಕರುಣೆ ತೋರಿಸುತ್ತಾನೆ.—ಕೀರ್ತ. 51:1.
ಟಾಕೂಯಾ * ಎಂಬವನ ಅನುಭವ ನೋಡೋಣ. ಅವನಿಗೆ ಅಶ್ಲೀಲಚಿತ್ರಗಳನ್ನು ನೋಡುವ ಮತ್ತು ಹಸ್ತಮೈಥುನ ಮಾಡುವ ಅಶುದ್ಧ ಚಟಗಳಿದ್ದವು. ಅದನ್ನು ಬಿಟ್ಟುಬಿಡಲು ಪ್ರಯತ್ನಿಸುತ್ತಿದ್ದರೂ ಪುನಃ ಪುನಃ ಆ ತಪ್ಪುಗಳನ್ನು ಮಾಡುತ್ತಿದ್ದನು. ಅವನಿಗೆ ಹೇಗನಿಸುತ್ತಿತ್ತು? “ನಾನು ಯಾವುದಕ್ಕೂ ಲಾಯಕ್ಕಿಲ್ಲವೆಂದು ನನಗನಿಸುತ್ತಿತ್ತು. ಆದರೆ ಕ್ಷಮೆಕೋರುತ್ತಾ ಯೆಹೋವನಿಗೆ ಪ್ರಾರ್ಥನೆ ಮಾಡುತ್ತಿದ್ದಾಗ, ನಾನು ಬಿದ್ದಿದ್ದ ಆ ಸ್ಥಿತಿಯಿಂದ ನನ್ನನ್ನು ಮೇಲಕ್ಕೆತ್ತುತ್ತಿದ್ದನು.” ಹೇಗೆ? ಅವನ ಸಭಾ ಹಿರಿಯರ ಮೂಲಕ. ಟಾಕೂಯಾ ಆ ತಪ್ಪನ್ನು ಪುನಃ ಮಾಡಿದಾಗಲೆಲ್ಲ ತಮಗೆ ಫೋನ್ ಮಾಡಬೇಕೆಂದು ಅವರು ಅವನಿಗೆ ಹೇಳಿದ್ದರು. ಅವನು ಒಪ್ಪಿಕೊಳ್ಳುವುದು: “ಅವರಿಗೆ ಫೋನ್ ಮಾಡೋದು ಸುಲಭವಾಗಿರಲಿಲ್ಲ, ಆದರೆ ಅವರ ಜೊತೆ ಮಾತಾಡಿದ ನಂತರ ನನಗೆ ಒಂದು ರೀತಿಯ ಬಲ ಸಿಗುತ್ತಿತ್ತು.” ನಂತರ ಸರ್ಕಿಟ್ ಮೇಲ್ವಿಚಾರಕರು ಅವನನ್ನು ಭೇಟಿಮಾಡುವಂತೆ ಹಿರಿಯರು ಏರ್ಪಾಡು ಮಾಡಿದರು. ಸರ್ಕಿಟ್ ಮೇಲ್ವಿಚಾರಕರು ಅವನಿಗೆ, “ನಾನು ಆಕಸ್ಮಿಕವಾಗಿ ನಿನ್ನನ್ನು ನೋಡಲು ಬಂದಿಲ್ಲ. ಹಿರಿಯರು ಬಯಸಿದ್ದರಿಂದಲೇ ಬಂದಿದ್ದೇನೆ. ಈ ಪರಿಪಾಲನಾ ಭೇಟಿ ಮಾಡುವಂತೆ ಅವರೇ ನೇಮಿಸಿದರು.” ಟಾಕೂಯಾ ಹೇಳುವುದು: “ನಾನು ಪಾಪಮಾಡುತ್ತಿದ್ದೆ. ಆದರೂ ಯೆಹೋವನು ನನ್ನನ್ನು ಬಿಟ್ಟುಬಿಡಲಿಲ್ಲ, ಹಿರಿಯರ ಮೂಲಕ ಸಹಾಯಕೊಡುತ್ತಾ ಇದ್ದನು.” ಸಮಯಾನಂತರ ಟಾಕೂಯಾ ಆ ದುಶ್ಚಟಗಳನ್ನು ಬಿಟ್ಟುಬಿಟ್ಟನು ಮತ್ತು ಪಯನೀಯರನಾದನು. ಈಗ ಬ್ರಾಂಚ್ ಆಫೀಸಿನಲ್ಲಿ ಸೇವೆಮಾಡುತ್ತಿದ್ದಾನೆ. ಯೆಹೋವನು ಈ ಸಹೋದರನಿಗೆ ಸಹಾಯ ಮಾಡಿದಂತೆ, ತಪ್ಪುಮಾಡಿ ಬಿದ್ದಿರುವ ಸ್ಥಿತಿಯಿಂದ ಮೇಲೇಳಲು ನಿಮಗೂ ಬೇಕಾದ ಸಹಾಯ ಕೊಡುವನು.
ಕೆಲಸವಿಲ್ಲ ಎಂಬ ಚಿಂತೆ ಕಾಡುವಾಗ . . .
ಕೆಲಸ ಕಳೆದುಕೊಂಡಾಗ, ಇನ್ನೊಂದು ಕೆಲಸ ಹುಡುಕಿದರೂ ಸಿಗದೇ ಇರುವಾಗ ಕೆಲವರು ಚಿಂತಾಕ್ರಾಂತರಾಗುತ್ತಾರೆ. ಕೆಲಸ ಹುಡುಕಿಕೊಂಡು ಹೋದಲ್ಲೆಲ್ಲ ಧಣಿಗಳು ನಿಮ್ಮನ್ನು ಸೇರಿಸಿಕೊಳ್ಳದೆ ಇದ್ದರೆ ತುಂಬ ನೋವಾಗುತ್ತದೆ ಅಲ್ಲವಾ? ಈ ಕಷ್ಟದ ಪರಿಸ್ಥಿತಿಯಲ್ಲಿ ಕೆಲವರಿಗಂತೂ ತಾವು ಅಯೋಗ್ಯರು, ಯಾವ ಕೆಲಸಕ್ಕೂ ಬಾರದವರು ಎಂದನಿಸುತ್ತದೆ. ಯೆಹೋವನು ಹೇಗೆ ಸಹಾಯ ಮಾಡಬಹುದು? ಆತನು ತಕ್ಷಣ ನಿಮಗೆ ಒಳ್ಳೇ ಕೆಲಸ ಕೊಡಿಸಲಿಕ್ಕಿಲ್ಲ. ಆದರೆ ದಾವೀದನ ಈ ಮಾತುಗಳನ್ನು ನೆನಪಿಸಿಕೊಳ್ಳಲು ಸಹಾಯಮಾಡುವನು: “ನಾನು ಬಾಲಕನಾಗಿದ್ದೆನು, ಈಗ ವೃದ್ಧನಾಗಿದ್ದೇನೆ; ಈ ವರೆಗೂ ನೀತಿವಂತನು ದಿಕ್ಕಿಲ್ಲದೆ ಬಿದ್ದಿರುವದನ್ನಾಗಲಿ ಅವನ ಸಂತತಿಯವರು ಭಿಕ್ಷೆಬೇಡಿ ತಿನ್ನುವದನ್ನಾಗಲಿ ನೋಡಲಿಲ್ಲ.” (ಕೀರ್ತ. 37:25) ಯೆಹೋವನಿಗೆ ನೀವು ತುಂಬ ಅಮೂಲ್ಯರು. ಆದ್ದರಿಂದ ಆತನು ತನ್ನ “ಧರ್ಮದ ಬಲಗೈಯನ್ನು” ಚಾಚಿ ಸಹಾಯ ಮಾಡುವನು ಅಂದರೆ ಆತನ ಸೇವೆಮಾಡುತ್ತಾ ಇರಲು ನಿಮಗೇನು ಅಗತ್ಯವೊ ಅದು ನಿಮಗೆ ಸಿಗುವಂತೆ ಮಾಡುವನು.
ಮತ್ತಾ. 6:33, 34) ಕೊನೆಗೆ, ಅವಳು ಹಿಂದೆ ಕೆಲಸಮಾಡುತ್ತಿದ್ದ ಕಂಪೆನಿಯ ಧಣಿ ಅವಳನ್ನು ಕರೆದು ಅದೇ ಕೆಲಸ ಕೊಡುತ್ತೇನೆಂದು ಹೇಳಿದನು. ಅದಕ್ಕವಳು, ತಾನು ಪಾರ್ಟ್ ಟೈಮ್ ಕೆಲಸ ಮಾತ್ರ ಮಾಡುತ್ತೇನೆ ಮತ್ತು ಕೂಟಗಳಿಗೆ, ಸಮ್ಮೇಳನ ಅಧಿವೇಶನಗಳಿಗೆ ಹೋಗಲು ಬಿಡುವು ಕೊಟ್ಟರೆ ಮಾತ್ರ ಕೆಲಸಕ್ಕೆ ಸೇರುತ್ತೇನೆಂದು ಹೇಳಿದಳು. ಈಗ ಸಾರಾ ಮುಂಚಿನಷ್ಟು ಹಣ ಸಂಪಾದಿಸುತ್ತಿಲ್ಲ. ಆದರೂ ಪಯನೀಯರ್ ಸೇವೆ ಮುಂದುವರಿಸುತ್ತಿದ್ದಾಳೆ. ಕಷ್ಟಕಾಲದಲ್ಲಿ ಯೆಹೋವನ ಪ್ರೀತಿಯ ಹಸ್ತದ ಆರೈಕೆಯನ್ನು ಅನುಭವಿಸಿದ್ದೇನೆ ಎನ್ನುತ್ತಾಳೆ ಆಕೆ.
ಕೊಲಂಬಿಯದಲ್ಲಿ ವಾಸಿಸುವ ಸಾರಾ ಎಂಬವಳು ಯೆಹೋವನ ಸಹಾಯವನ್ನು ಸ್ವತಃ ಅನುಭವಿಸಿದಳು. ಪ್ರಖ್ಯಾತ ಕಂಪೆನಿಯಲ್ಲಿ ಕೆಲಸಮಾಡುತ್ತಿದ್ದ ಆಕೆಗೆ ಕೈತುಂಬ ಸಂಬಳ ಸಿಗುತ್ತಿತ್ತು. ಆದರೆ ಯೆಹೋವನ ಸೇವೆಯನ್ನು ಹೆಚ್ಚು ಮಾಡಲಿಕ್ಕಾಗಿ ಆ ಕೆಲಸ ಬಿಟ್ಟು ಪಯನೀಯರ್ ಸೇವೆ ಆರಂಭಿಸಿದಳು. ಆಕೆಗೆ ಬೇಕಾಗಿದ್ದ ಪಾರ್ಟ್ ಟೈಮ್ ಕೆಲಸ ಸಿಗದಿದ್ದ ಕಾರಣ ಒಂದು ಚಿಕ್ಕ ಐಸ್-ಕ್ರೀಮ್ ಅಂಗಡಿ ತೆರೆದಳು. ಆದರೆ ಕ್ರಮೇಣ ಅವಳ ಹತ್ತಿರವಿದ್ದ ಹಣವೆಲ್ಲ ಖಾಲಿಯಾಗಿ ಅಂಗಡಿ ಮುಚ್ಚಬೇಕಾಗಿ ಬಂತು. “ಮೂರು ವರ್ಷಗಳು ಹೀಗೇ ಕಳೆದವು, ಆದರೆ ಯೆಹೋವನ ಸಹಾಯದಿಂದ ನಾನು ಈ ಕಷ್ಟವನ್ನು ತಾಳಿಕೊಂಡೆ” ಎನ್ನುತ್ತಾಳೆ ಆಕೆ. ಆ ಸಮಯದಲ್ಲಿ ಆಕೆ ತನಗೆ ನಿಜವಾಗಿ ಯಾವ ವಿಷಯಗಳು ಅಗತ್ಯವೆಂದು, ನಾಳಿನ ಬಗ್ಗೆ ಯಾಕೆ ಚಿಂತಿಸಬಾರದೆಂದು ಕಲಿತಳು. (ವಯಸ್ಸಾಗುತ್ತಾ ಇದೆಯೆಂಬ ಚಿಂತೆ ಇರುವಾಗ . . .
ತಮಗೆ ವಯಸ್ಸಾಗುತ್ತಾ ಬರುತ್ತಿದೆ, ಬೇಗನೆ ನಿವೃತ್ತಿಯಾಗಲಿಕ್ಕಿದೆ ಎಂಬ ಚಿಂತೆ ಅನೇಕರಿಗೆ. ಆರಾಮವಾಗಿ ಜೀವಿಸಲಿಕ್ಕಾಗಿ ಬೇಕಾಗುವಷ್ಟು ಹಣ ಇರಬಹುದಾ ಎಂದು ಅವರು ಯೋಚಿಸುತ್ತಾರೆ. ಮುಂದೆ ಬರಬಹುದಾದ ಆರೋಗ್ಯ ಸಮಸ್ಯೆಗಳ ಬಗ್ಗೆಯೂ ಚಿಂತಿಸುತ್ತಾರೆ. ಇದೇ ರೀತಿಯ ಚಿಂತೆಯಿಂದ ಬಹುಶಃ ರಾಜ ದಾವೀದನು ಯೆಹೋವನಿಗೆ ಬೇಡಿದ್ದು: “ವೃದ್ಧಾಪ್ಯದಲ್ಲಿ ನನ್ನನ್ನು ಧಿಕ್ಕರಿಸಬೇಡ; ನನ್ನ ಬಲವು ಕುಂದಿದಾಗ ಕೈಬಿಡಬೇಡ.”—ಕೀರ್ತ. 71:9, 18.
ಯೆಹೋವನ ಸೇವಕರು ವೃದ್ಧಾಪ್ಯದ ಬಗ್ಗೆ ಚಿಂತಿಸದೆ ಹೇಗೆ ಧೈರ್ಯದಿಂದಿರಬಹುದು? ದೇವರ ಮೇಲೆ ನಂಬಿಕೆಯನ್ನು ಅವರು ಬಲಪಡಿಸುತ್ತಾ ಇರಬೇಕು. ತಮಗೆ ಅಗತ್ಯವಿರುವುದೆಲ್ಲವನ್ನು ಆತನು ಕೊಡುವನೆಂದು ಭರವಸೆ ಇಡಬೇಕು. ಕೆಲವರು ಹೆಚ್ಚು ಹಣವಿದ್ದಾಗ ಆರಾಮದ ಜೀವನ ನಡೆಸುತ್ತಿದ್ದರು. ಆದರೆ ಈಗ ಅವರು ಸರಳ ಜೀವನ ನಡೆಸಲು, ಸ್ವಲ್ಪದರಲ್ಲೇ ತೃಪ್ತರಾಗಿರಲು ಕಲಿಯಬೇಕಾಗಬಹುದು. “ಕೊಬ್ಬಿದ ದನದ ಮಾಂಸಕ್ಕಿಂತ . . . ಸೊಪ್ಪಿನ ಊಟ” ತಿನ್ನುವುದು ಆರೋಗ್ಯಕ್ಕೆ ಉತ್ತಮವೆಂದೂ ಅವರಿಗೆ ತಿಳಿದುಬರಬಹುದು. (ಜ್ಞಾನೋ. 15:17) ಯೆಹೋವನ ಸೇವೆ ಮಾಡುವುದರ ಮೇಲೆ ನಿಮ್ಮ ಗಮನವನ್ನು ಇಡುವಲ್ಲಿ, ನೀವು ವೃದ್ಧರಾದಾಗ ನಿಮಗೆ ಅಗತ್ಯವಿರುವುದೆಲ್ಲವೂ ಸಿಗುವಂತೆ ಆತನು ಖಂಡಿತ ನೋಡಿಕೊಳ್ಳುವನು.
65ಕ್ಕೂ ಹೆಚ್ಚು ವರ್ಷ ಪೂರ್ಣ ಸಮಯದ ಸೇವೆ ಮಾಡಿರುವ ಹೋಸೆ ಮತ್ತು ರೋಸ್ರ ಉದಾಹರಣೆ ಗಮನಿಸಿ. ಆ ಎಲ್ಲ ವರ್ಷಗಳಲ್ಲಿ ಅವರು ಅನೇಕಾನೇಕ ಕಷ್ಟಗಳನ್ನು ಎದುರಿಸಿದರು. ರೋಸ್ರ ತಂದೆಗೆ ಹಗಲೂರಾತ್ರಿ ಆರೈಕೆಯ ಅಗತ್ಯವಿದ್ದದರಿಂದ ಅವರ ಜೊತೆ ಇದ್ದು ನೋಡಿಕೊಂಡರು. ಅಲ್ಲದೆ ಹೋಸೆ ಅವರಿಗೇ ಕ್ಯಾನ್ಸರ್ ಆಪರೇಷನ್ ಮತ್ತು ಕಿಮೊಥೆರಪಿ ಚಿಕಿತ್ಸೆ ನಡೆದಿತ್ತು. ಈ ನಂಬಿಗಸ್ತ ದಂಪತಿಗೆ ಯೆಹೋವನು ಹೇಗೆ ಬಲಗೈಯನ್ನು ಕೊಟ್ಟು ಸಹಾಯಮಾಡಿದನು? ಟೋನಿ ಮತ್ತು ವೆಂಡಿ ಎಂಬ ಕ್ರೈಸ್ತ ದಂಪತಿಯ ಮೂಲಕ. ಇವರ ಹತ್ತಿರ ಒಂದು ಮನೆ ಇತ್ತು. ಪೂರ್ಣ ಸಮಯದ ಪಯನೀಯರರಿಗೆ ಉಚಿತ ವಾಸಕ್ಕೆ ಕೊಡಬೇಕೆಂದಿದ್ದರು. ಟೋನಿ ಹೈಸ್ಕೂಲ್ನಲ್ಲಿದ್ದಾಗ ಹೋಸೆ ಮತ್ತು ರೋಸ್ ಪ್ರತಿದಿನ ಸಾರುತ್ತಿರುವುದನ್ನು ಎಷ್ಟೋ ಸಲ ಕಿಟಿಕಿಯಿಂದ ನೋಡಿದ್ದ. ಅವರಿಗಿದ್ದ ಆ ಹುರುಪು ಟೋನಿಗೆ ತುಂಬ ಇಷ್ಟವಾಗಿತ್ತು ಮತ್ತು ಅವನ ಮನಸ್ಸಿನ ಮೇಲೆ ಅಳಿಸಲಾಗದ ಛಾಪನ್ನು ಮೂಡಿಸಿತು. ಹೋಸೆ ಮತ್ತು ರೋಸ್ ತಮ್ಮ ಇಡೀ ಜೀವನವನ್ನು ಯೆಹೋವನ ಸೇವೆಯಲ್ಲಿ ಬಳಸಿದ್ದರಿಂದ ಟೋನಿ ಮತ್ತು ವೆಂಡಿ ಆ ಮನೆಯನ್ನು ಅವರ ವಾಸಕ್ಕಾಗಿ ಕೊಟ್ಟರು. ಕಳೆದ 15 ವರ್ಷಗಳಿಂದ ಟೋನಿ ಮತ್ತು ವೆಂಡಿ ಅವರಿಗೆ ಸಹಾಯ ಮಾಡುತ್ತಾ ಬಂದಿದ್ದಾರೆ. ಈಗ ಹೋಸೆ ಮತ್ತು ರೋಸ್ಗೆ ಸುಮಾರು 85 ವರ್ಷ. ಟೋನಿ ಮತ್ತು ವೆಂಡಿ ಯೆಹೋವನು ತಮಗೆ ಕೊಟ್ಟಿರುವ ಉಡುಗೊರೆ ಎಂದವರಿಗೆ ಅನಿಸುತ್ತದೆ.
‘ಹೆದರಬೇಡ, ನಾನೇ ನಿನಗೆ ಸಹಾಯಕೊಡುತ್ತೇನೆ’ ಎಂದು ಯೆಹೋವನು ನಿಮಗೆ ಮಾತುಕೊಡುತ್ತಾನೆ. ಆತನು ನಿಮಗೂ ತನ್ನ “ಧರ್ಮದ ಬಲಗೈಯನ್ನು” ಚಾಚುತ್ತಾನೆ. ನಿಮ್ಮ ಕೈಚಾಚಿ ಆತನ ಕೈಹಿಡಿಯುತ್ತೀರಾ?
^ ಪ್ಯಾರ. 11 ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.