ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಮನಸ್ಸಿಗಾಗಿ ನಡೆಯುತ್ತಿರುವ ಯುದ್ಧವನ್ನು ಗೆಲ್ಲಿರಿ!

ನಿಮ್ಮ ಮನಸ್ಸಿಗಾಗಿ ನಡೆಯುತ್ತಿರುವ ಯುದ್ಧವನ್ನು ಗೆಲ್ಲಿರಿ!

ನಿಮ್ಮ ಮೇಲೆ ದಾಳಿ ನಡೆಯುತ್ತಾ ಇದೆ! ಆ ದಾಳಿ ನಡೆಸುತ್ತಿರುವ ಶತ್ರು ಸೈತಾನ. ಅವನು ತುಂಬ ಅಪಾಯಕಾರಿ ಆಯುಧ ಬಳಸುತ್ತಿದ್ದಾನೆ. ಅದರಿಂದ ನಿಮ್ಮ ದೇಹಕ್ಕೆ ಏನೂ ಆಗುವುದಿಲ್ಲ, ನಿಮ್ಮ ಮನಸ್ಸಿಗೆ ಹಾನಿ ಆಗುತ್ತದೆ. ಯಾವುದು ಆ ಆಯುಧ? ಮೋಸಕರ ಮಾಹಿತಿ!

ಸೈತಾನನಿಂದ ಬರುವ ಮೋಸಕರ ಮಾಹಿತಿ ತುಂಬ ಅಪಾಯಕಾರಿ ಎಂದು ಅಪೊಸ್ತಲ ಪೌಲನಿಗೆ ಗೊತ್ತಿತ್ತು. ಆದರೆ ಈ ಅಪಾಯದ ಬಗ್ಗೆ ಎಲ್ಲ ಕ್ರೈಸ್ತರಿಗೆ ಗೊತ್ತಿರಲಿಲ್ಲ. ಉದಾಹರಣೆಗೆ, ಕೊರಿಂಥ ಸಭೆಯಲ್ಲಿದ್ದ ಕೆಲವರು ತಾವು ಸತ್ಯದಲ್ಲಿ ತುಂಬ ದೃಢವಾಗಿ ನಿಂತಿರುವುದರಿಂದ ಸೈತಾನ ತಮ್ಮನ್ನು ಬೀಳಿಸಲು ಸಾಧ್ಯವಿಲ್ಲ ಎಂದು ನೆನಸಿದರು. (1 ಕೊರಿಂ. 10:12) ಆದ್ದರಿಂದಲೇ ಪೌಲನು ಈ ಎಚ್ಚರಿಕೆ ಕೊಟ್ಟನು: “ಸರ್ಪವು ತನ್ನ ಕುಯುಕ್ತಿಯಿಂದ ಹವ್ವಳನ್ನು ವಂಚಿಸಿದಂತೆ ನಿಮ್ಮ ಮನಸ್ಸುಗಳು ಸಹ ಕ್ರಿಸ್ತನ ಕಡೆಗಿರಬೇಕಾದ ಯಥಾರ್ಥತೆಯಿಂದಲೂ ಪವಿತ್ರತೆಯಿಂದಲೂ ದೂರ ಸರಿದು ಭ್ರಷ್ಟವಾಗಬಹುದೆಂಬ ಭಯ ನನಗಿದೆ.”—2 ಕೊರಿಂ. 11:3.

ಅತಿಯಾದ ಆತ್ಮವಿಶ್ವಾಸ ಒಳ್ಳೇದಲ್ಲ ಎಂದು ಪೌಲನ ಮಾತುಗಳು ತೋರಿಸುತ್ತವೆ. ಸೈತಾನನು ಹಬ್ಬಿಸುವ ಮೋಸಕರ ಮಾಹಿತಿಯ ವಿರುದ್ಧ ಗೆಲ್ಲಬೇಕಾದರೆ ನೀವು ಮೊದಲಾಗಿ ಅದೆಷ್ಟು ಅಪಾಯಕಾರಿ ಎಂದು ತಿಳಿದುಕೊಳ್ಳಬೇಕು. ನಂತರ ಅದರಿಂದ ದೂರವಿರಲು ಬೇಕಾದ ಹೆಜ್ಜೆಗಳನ್ನು ತೆಗೆದುಕೊಳ್ಳಬೇಕು.

ಮೋಸಕರ ಮಾಹಿತಿ ಎಷ್ಟು ಅಪಾಯಕಾರಿ?

ಜನರನ್ನು ವಂಚಿಸುವುದು ಅಥವಾ ಅವರು ಯೋಚಿಸುವ ಮತ್ತು ನಡೆದುಕೊಳ್ಳುವ ರೀತಿಯನ್ನು ನಿಯಂತ್ರಿಸುವುದು ಮೋಸಕರ ಮಾಹಿತಿಯ ಉದ್ದೇಶವಾಗಿದೆ. ಮೋಸಕರ ಮಾಹಿತಿ ಮತ್ತು ಮನವೊಲಿಸುವಿಕೆ (ಇಂಗ್ಲಿಷ್‌) ಎಂಬ ಪುಸ್ತಕಕ್ಕನುಸಾರ ಮೋಸಕರ ಮಾಹಿತಿಯು “ನೈತಿಕತೆಗೆ ವಿರುದ್ಧ, ಹಾನಿಕರ, ಅನ್ಯಾಯಭರಿತ” ಆಗಿದೆ. ಮೋಸಕರ ಮಾಹಿತಿ ಎನ್ನುವುದು “ಸುಳ್ಳುಗಳು, ಮಾಹಿತಿಯನ್ನು ತಿರುಚುವುದು, ವಂಚನೆ, ಕುತಂತ್ರ, ಮನಸ್ಸನ್ನು ನಿಯಂತ್ರಿಸುವುದು” ಇದಕ್ಕೆಲ್ಲ ಸಮಾನವಾಗಿದೆ ಎಂದು ಜನರು ವರ್ಣಿಸುತ್ತಾರೆ.

ಮೋಸಕರ ಮಾಹಿತಿ ತುಂಬ ಅಪಾಯಕಾರಿ ಆಗಿದೆ. ಏಕೆಂದರೆ ಅದು ನಮಗೆ ಗೊತ್ತಿಲ್ಲದೆಯೇ ನಿಧಾನವಾಗಿ ನಮ್ಮ ಯೋಚನಾ ರೀತಿಯನ್ನು ಪ್ರಭಾವಿಸುತ್ತದೆ. ಅದು ನಮ್ಮ ಕಣ್ಣಿಗೆ ಕಾಣದ ಇಲ್ಲವೇ ವಾಸನೆ ಇಲ್ಲದ ವಿಷಕಾರಿ ಅನಿಲದಂತೆ ಇದೆ. ಮನುಷ್ಯರ ನಡವಳಿಕೆಯ ಕುರಿತ ತಜ್ಞರಾದ ವ್ಯಾನ್ಸ್‌ ಪ್ಯಾಕರ್ಡ್‌ ಎಂಬವರು ಹೇಳಿದ್ದೇನೆಂದರೆ ಅಂಥ ಮಾಹಿತಿಯು, “ನಾವು ನೆನಸುವುದಕ್ಕಿಂತ ಹೆಚ್ಚಾಗಿ” ನಮ್ಮ ವರ್ತನೆಯನ್ನು ಪ್ರಭಾವಿಸುತ್ತದೆ. ಇನ್ನೊಬ್ಬ ತಜ್ಞರು ಹೇಳಿದ್ದೇನೆಂದರೆ ಈ ಮೋಸಕರ ಮಾಹಿತಿಯು ಜನರನ್ನು ಘೋರವಾದ ಅನ್ಯಾಯ ಕೃತ್ಯಗಳನ್ನು ನಡೆಸುವಂತೆ ಮಾಡಿದೆ. ಅದು ಜನಾಂಗೀಯ ಹತ್ಯೆ, ಯುದ್ಧ ಮತ್ತು ಒಂದು ಕುಲ ಅಥವಾ ಧರ್ಮದವರ ಹಿಂಸೆಗೂ ಕಾರಣವಾಗಿದೆ.—ಸುಲಭದಲ್ಲಿ ದಾರಿತಪ್ಪಿಸುವುದು—ಮೋಸಕರ ಮಾಹಿತಿಯ ಇತಿಹಾಸ (ಇಂಗ್ಲಿಷ್‌) ಪುಸ್ತಕ.

ಮನುಷ್ಯರೇ ನಮ್ಮನ್ನು ಮೋಸಕರ ಮಾಹಿತಿಯಿಂದ ವಂಚಿಸಲಿಕ್ಕೆ ಆಗುತ್ತದಾದರೆ, ಸೈತಾನನಿಗೆ ಇದನ್ನು ಇನ್ನೆಷ್ಟು ಮಾಡಲಿಕ್ಕಾಗಬಹುದೆಂದು ಸ್ವಲ್ಪ ಯೋಚಿಸಿ. ಅವನಂತೂ ಮನುಷ್ಯನ ಸೃಷ್ಟಿಯಾದ ಸಮಯದಿಂದ ಮಾನವರ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದಿದ್ದಾನೆ. ಅಷ್ಟುಮಾತ್ರವಲ್ಲ, ಈಗ “ಇಡೀ ಲೋಕ” ಅವನ ನಿಯಂತ್ರಣದಲ್ಲಿದೆ. ಹಾಗಾಗಿ ತನ್ನ ಸುಳ್ಳುಗಳನ್ನು ಹಬ್ಬಿಸಲು ಅವನು ಲೋಕದ ಯಾವುದೇ ವಿಷಯವನ್ನು ಬಳಸಬಲ್ಲನು. (1 ಯೋಹಾ. 5:19; ಯೋಹಾ. 8:44) ತನ್ನ ಈ ಮೋಸಕರ ಮಾಹಿತಿಯ ಪ್ರಚಾರದಿಂದ ಅವನು ಎಷ್ಟೊಂದು ಜನರ “ಮನಸ್ಸನ್ನು ಕುರುಡುಮಾಡಿದ್ದಾನೆ” ಎಂದರೆ ಈಗ “ಇಡೀ ನಿವಾಸಿತ ಭೂಮಿಯನ್ನು ತಪ್ಪುದಾರಿಗೆ ನಡಿಸು”ತ್ತಿದ್ದಾನೆ. (2 ಕೊರಿಂ. 4:4; ಪ್ರಕ. 12:9) ಹೀಗಿರುವಾಗ ಅವನ ಈ ಮೋಸಕರ ಮಾಹಿತಿ ನಿಮ್ಮನ್ನು ಪ್ರಭಾವಿಸದಿರಲು ಏನು ಮಾಡಬಹುದು?

ನಿಮ್ಮ ನಂಬಿಕೆಯನ್ನು ಬಲಪಡಿಸಿ

ಮೋಸಕರ ಮಾಹಿತಿಯಿಂದ ವಂಚಿಸಲ್ಪಡದಿರಲು ಯೇಸು ಈ ಸರಳ ವಿಧಾನವನ್ನು ಹೇಳಿಕೊಟ್ಟಿದ್ದಾನೆ: “ಸತ್ಯವನ್ನು ತಿಳಿದುಕೊಳ್ಳುವಿರಿ ಮತ್ತು ಸತ್ಯವು ನಿಮ್ಮನ್ನು ಬಿಡುಗಡೆಮಾಡುವುದು.” (ಯೋಹಾ. 8:31, 32) ಒಂದು ಯುದ್ಧ ನಡೆಯುತ್ತಿರುವಾಗ ಸೈನಿಕನೊಬ್ಬನಿಗೆ ವಿಶ್ವಾಸಾರ್ಹ ಮಾಹಿತಿ ಎಲ್ಲಿ ಸಿಗುತ್ತದೆಂದು ತಿಳಿದಿರಬೇಕು. ಏಕೆಂದರೆ ಅವನನ್ನು ಮೋಸಗೊಳಿಸಲು ಶತ್ರುಗಳು ಸುಳ್ಳುಗಳನ್ನು ಹಬ್ಬಿಸುತ್ತಾರೆ. ಆ ಸೈನಿಕನ ಹಾಗೆ ನಿಮಗೆ ವಿಶ್ವಾಸಾರ್ಹ ಮಾಹಿತಿ ಬೇಕಾದಲ್ಲಿ ಅದು ಎಲ್ಲಿ ಸಿಗುತ್ತದೆ? ಯೆಹೋವನ ವಾಕ್ಯವಾದ ಬೈಬಲಿನಲ್ಲಿ. ಸೈತಾನನ ಮೋಸಕರ ಮಾಹಿತಿಯಿಂದ ಪ್ರಭಾವಿಸಲ್ಪಡದಿರಲು ಬೇಕಾದ ಎಲ್ಲ ಮಾಹಿತಿಯನ್ನು ದೇವರು ಅದರಲ್ಲಿ ಕೊಟ್ಟಿದ್ದಾನೆ.—2 ತಿಮೊ. 3:16, 17.

ಸೈತಾನನಿಗೂ ಇದು ಚೆನ್ನಾಗಿ ಗೊತ್ತು. ಆದ್ದರಿಂದ ನಾವು ಬೈಬಲನ್ನು ಓದದಂತೆ, ಅಧ್ಯಯನ ಮಾಡದಂತೆ ಅಪಕರ್ಷಿಸುತ್ತಾನೆ, ನಿರುತ್ತೇಜಿಸುತ್ತಾನೆ. ಈ ಉದ್ದೇಶವನ್ನು ಸಾಧಿಸಲು ತನ್ನ ವಶದಲ್ಲಿರುವ ಈ ಲೋಕವನ್ನು ಬಳಸುತ್ತಾನೆ. ‘ಪಿಶಾಚನ ಈ ತಂತ್ರೋಪಾಯಕ್ಕೆ’ ಬಲಿಬೀಳದಂತೆ ಹುಷಾರಾಗಿರಿ! (ಎಫೆ. 6:11) ಸತ್ಯದ ಕುರಿತ ಪ್ರಾಥಮಿಕ ವಿಷಯಗಳನ್ನು ಅರ್ಥಮಾಡಿಕೊಂಡರೆ ಸಾಲದು. ಸತ್ಯದ ಆಳವಾದ ಜ್ಞಾನವನ್ನು ಪಡೆದುಕೊಳ್ಳಲು ನಾವು ಶ್ರಮಿಸಬೇಕು. (ಎಫೆ. 3:18) ಲೇಖಕ ನೋಅಮ್‌ ಚಾಮ್ಸ್‌ಕೀ ಹೇಳಿದಂತೆ, “ಯಾರೂ ನಿಮ್ಮ ತಲೆಯಲ್ಲಿ ಸತ್ಯ ತುಂಬಲಿಕ್ಕಾಗಲ್ಲ. ನೀವೇ ಅದನ್ನು ಕಂಡುಹಿಡಿಯಬೇಕು.” ಹೌದು, ನೀವೇ ಅದನ್ನು ಕಂಡುಹಿಡಿಯಿರಿ. ಅದಕ್ಕಾಗಿ ‘ಪ್ರತಿದಿನವೂ ಶಾಸ್ತ್ರಗ್ರಂಥವನ್ನು ಜಾಗರೂಕತೆಯಿಂದ ಪರೀಕ್ಷಿಸಿರಿ.’—ಅ. ಕಾ. 17:11.

ನಿಮ್ಮ ಮನಸ್ಸಿಗಾಗಿ ನಡೆಯುತ್ತಿರುವ ಯುದ್ಧವನ್ನು ಗೆಲ್ಲಬೇಕಾದರೆ ಮೋಸಕರ ಮಾಹಿತಿ ಎಷ್ಟು ಅಪಾಯಕಾರಿ ಎಂದು ತಿಳಿದುಕೊಂಡು ನಿಮ್ಮನ್ನೇ ರಕ್ಷಿಸಿಕೊಳ್ಳಿ

ಒಂದು ವಿಷಯದ ಬಗ್ಗೆ ನೀವು ಸರಿಯಾಗಿ ಯೋಚಿಸಿ ಸತ್ಯವೇನೆಂದು ಅರ್ಥಮಾಡಿಕೊಳ್ಳುವುದು ಸೈತಾನನಿಗೆ ಇಷ್ಟವಿಲ್ಲ. ಯಾಕೆ? ಯಾಕೆಂದರೆ ಜನರು “ಸೂಕ್ಷ್ಮವಾಗಿ ಯೋಚಿಸುವುದನ್ನು ನಿರುತ್ತೇಜಿಸಿದರೆ” ಮಾತ್ರ ಮೋಸಕರ ಮಾಹಿತಿ “ತುಂಬ ಹೆಚ್ಚು ಪರಿಣಾಮ ಬೀರುತ್ತದೆ.” (ಇಪ್ಪತ್ತನೇ ಶತಮಾನದ ವಾರ್ತಾ ಮಾಧ್ಯಮ ಮತ್ತು ಸಮಾಜ [ಇಂಗ್ಲಿಷ್‌]) ಆದ್ದರಿಂದ ನಿಮ್ಮ ಕಣ್ಣಿಗೆ, ಕಿವಿಗೆ ಬೀಳುವ ವಿಷಯಗಳ ಬಗ್ಗೆ ಸರಿಯಾಗಿ ಯೋಚಿಸದೇ ಸುಮ್ಮನೆ ನಂಬಿಬಿಡಬೇಡಿ. (ಜ್ಞಾನೋ. 14:15) ದೇವರು ನಿಮಗೆ “ಬುದ್ಧಿ” ಮತ್ತು “ವಿವೇಚನಾಶಕ್ತಿ” ಕೊಟ್ಟಿದ್ದಾನೆ. ಅದನ್ನು ಬಳಸಿ ನಿಮ್ಮ ನಂಬಿಕೆಯನ್ನು ಬಲಪಡಿಸಿ.—ಜ್ಞಾನೋ. 2:10-15; ರೋಮ. 12:1, 2.

ಐಕ್ಯರಾಗಿರಿ

ಮೋಸಕರ ಮಾಹಿತಿಯಿಂದ ಪ್ರಭಾವಿಸಲ್ಪಟ್ಟ ಸೈನಿಕರಲ್ಲಿ ಹೆದರಿಕೆ ಹುಟ್ಟುತ್ತದೆ. ಅವರಿಗೆ ಯುದ್ಧ ಮಾಡಲು ಮನಸ್ಸಾಗುವುದಿಲ್ಲ. ಆ ಮಾಹಿತಿಯಿಂದಾಗಿ ಅವರು ಬಹುಶಃ ತಮ್ಮತಮ್ಮೊಳಗೇ ಜಗಳಮಾಡಲು ಶುರುಮಾಡಬಹುದು. ಅಥವಾ ಬೇರೆ ಸೈನಿಕರಿಂದ ದೂರ ಸರಿಯಬಹುದು. ಜರ್ಮನಿಯ ಸೇನಾಪಡೆಯ ಅಧಿಕಾರಿಯೊಬ್ಬರು ಹೇಳಿದ್ದೇನೆಂದರೆ 1ನೇ ಲೋಕ ಯುದ್ಧದಲ್ಲಿ ಜರ್ಮನಿ ಸೋತುಹೋಗಲು ಒಂದು ಕಾರಣ ಮೋಸಕರ ಮಾಹಿತಿಯ ಪ್ರಚಾರವೇ. ಜನರು ಅದರಿಂದ ಎಷ್ಟು ಪ್ರಭಾವಿಸಲ್ಪಟ್ಟಿದ್ದರಂದರೆ ಅವರನ್ನು ಯಾರೋ ವಶೀಕರಣ ಮಾಡಿದಂತೆ ಇತ್ತು ಎಂದು ಹೇಳಿದರು. ಇಂದು ಸೈತಾನನು ಕೂಡ ಇಂಥದ್ದೇ ವಿಧಾನಗಳನ್ನು ಬಳಸಿ ಸಹೋದರರ ಮಧ್ಯೆ ಒಡಕನ್ನು ಹುಟ್ಟಿಸಲು ಪ್ರಯತ್ನಿಸುತ್ತಾನೆ. ಇಲ್ಲವೇ, ಯೆಹೋವನ ಸಂಘಟನೆ ಅನ್ಯಾಯಮಾಡಿದೆ, ಏನೋ ತಪ್ಪು ಮಾಡಿದೆ ಎಂದು ಯೋಚಿಸುವಂತೆ ಮಾಡಿ ಸಂಘಟನೆಯನ್ನೇ ಬಿಟ್ಟು ಹೋಗುವಂತೆ ಮಾಡುತ್ತಾನೆ.

ಮೋಸಹೋಗಬೇಡಿ! ದೇವರ ವಾಕ್ಯದಲ್ಲಿರುವ ಬುದ್ಧಿವಾದವನ್ನು ಪಾಲಿಸುತ್ತಾ, ನಿಮ್ಮ ಸಹೋದರರ ಜೊತೆ ಐಕ್ಯವಾಗಿರಿ. ಉದಾಹರಣೆಗೆ ನಾವು “ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿಸು”ವಂತೆ, ತಡಮಾಡದೇ ಯಾವುದೇ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವಂತೆ ಬೈಬಲ್‌ ಉತ್ತೇಜಿಸುತ್ತದೆ. (ಕೊಲೊ. 3:13, 14; ಮತ್ತಾ. 5:23, 24) ಸಭೆಯೊಂದಿಗೆ ಸೇರದೆ ನಮ್ಮನ್ನೇ ದೂರ ಇಟ್ಟುಕೊಳ್ಳಬಾರದೆಂದು ಎಚ್ಚರಿಸುತ್ತದೆ. (ಜ್ಞಾನೋ. 18:1) ಸೈತಾನನ ಮೋಸಕರ ಮಾಹಿತಿಯನ್ನು ಪ್ರತಿರೋಧಿಸಲಿಕ್ಕಾಗಿ ನೀವು ಸಿದ್ಧರಾಗಿದ್ದೀರಾ ಎಂದು ತಿಳಿದುಕೊಳ್ಳಲು ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ಕಳೆದ ಬಾರಿ ಸಹೋದರರೊಬ್ಬರು ನನಗೆ ನೋವಾಗುವಂಥ ರೀತಿಯಲ್ಲಿ ನಡೆದುಕೊಂಡಾಗ ನಾನು ತೋರಿಸಿದ ಪ್ರತಿಕ್ರಿಯೆ ಯಾರನ್ನು ಮೆಚ್ಚಿಸಿತು? ದೇವರನ್ನಾ? ಸೈತಾನನನ್ನಾ?’—ಗಲಾ. 5:16-26; ಎಫೆ. 2:2, 3.

ನಿಮ್ಮ ಭರವಸೆಯನ್ನು ಕಳೆದುಕೊಳ್ಳಬೇಡಿ

ಸೈನಿಕನೊಬ್ಬನು ತನ್ನ ನಾಯಕನಿಗೆ ತೋರಿಸುವ ನಿಷ್ಠೆ ಕಡಿಮೆಯಾದರೆ ಅವನು ಸರಿಯಾಗಿ ಯುದ್ಧಮಾಡುವುದಿಲ್ಲ. ಆದ್ದರಿಂದ ಶತ್ರುಗಳು ಮೋಸಕರ ಮಾಹಿತಿಯನ್ನು ಬಳಸಿ ಅಂಥ ಸೈನಿಕರಿಗೆ ತಮ್ಮ ನಾಯಕರ ಮೇಲಿರುವ ಭರವಸೆ ಕಳಕೊಳ್ಳುವಂತೆ ಮಾಡುತ್ತಾರೆ. ಕೆಡಿಸಲು ಹಾಳುಮಾಡಲು ಪ್ರಯತ್ನಿಸುತ್ತಾರೆ. ಆ ನಾಯಕರು ಏನಾದರೂ ಒಂದು ತಪ್ಪುಮಾಡಿದರೆ ಆ ಶತ್ರುಗಳು ಅದನ್ನೇ ಎತ್ತಿ ಆಡುತ್ತಾ, “ಅವರನ್ನು ನಂಬಲಿಕ್ಕಾಗಲ್ಲ” ಮತ್ತು “ಅವರನ್ನು ನಂಬಿದರೆ ನೀವು ಅಪಾಯದಲ್ಲಿ ಸಿಕ್ಕಿಕೊಳ್ಳುವುದು ಖಂಡಿತ” ಎಂದೆಲ್ಲ ಹೇಳುತ್ತಾರೆ. ಸೈತಾನನೂ ಇದನ್ನೇ ಮಾಡುತ್ತಾನೆ. ಯೆಹೋವನು ತನ್ನ ಜನರನ್ನು ಯಾರ ಮೂಲಕ ನಡೆಸುತ್ತಿದ್ದಾನೊ ಅವರಲ್ಲಿ ನಿಮಗಿರುವ ಭರವಸೆಯನ್ನು ನುಚ್ಚುನೂರುಮಾಡಲು ಯತ್ನಿಸುತ್ತಾನೆ.

ನೀವೇನು ಮಾಡಬೇಕು? ಯೆಹೋವನ ಸಂಘಟನೆಯಲ್ಲೇ ಉಳಿಯಬೇಕೆಂಬ ದೃಢಸಂಕಲ್ಪ ಮಾಡಿರಿ. ದೇವರ ಜನರನ್ನು ನಡೆಸುತ್ತಿರುವವರು ಅಪರಿಪೂರ್ಣರಾಗಿದ್ದರೂ ನಿಷ್ಠೆಯಿಂದ ಅವರಿಗೆ ಬೆಂಬಲ ತೋರಿಸುವುದನ್ನು ನಿಲ್ಲಿಸಬೇಡಿ. (1 ಥೆಸ. 5:12, 13) ಧರ್ಮಭ್ರಷ್ಟರು ಮತ್ತು ಬೇರೆ ನಯವಂಚಕರು ಸಂಘಟನೆಯ ಬಗ್ಗೆ ಏನೇನೋ ಹೇಳಿ ದಾಳಿ ಮಾಡಬಹುದು. (ತೀತ 1:10) ಅವರು ಹೇಳುವುದು ನಿಜವೆಂದು ತೋರಿದರೂ “ನಿಮ್ಮ ತರ್ಕಶಕ್ತಿಯನ್ನು ಬೇಗನೆ ಕಳೆದುಕೊಂಡು ಚಂಚಲರಾಗಬೇಡಿ.” (2 ಥೆಸ. 2:2) ಪೌಲನು ತಿಮೊಥೆಯನಿಗೆ ಕೊಟ್ಟ ಬುದ್ಧಿವಾದವನ್ನು ಪಾಲಿಸಿರಿ. ಏನೆಂದರೆ ನೀವು ಕಲಿತ ಸತ್ಯದಲ್ಲಿ ಮುಂದುವರಿಯುತ್ತಾ ಇರಿ ಮತ್ತು ಅದನ್ನು ಯಾರಿಂದ ಕಲಿತಿರಿ ಎಂಬುದನ್ನು ನೆನಪಿನಲ್ಲಿಡಿ. (2 ತಿಮೊ. 3:14, 15) ನಮಗೆ ಸತ್ಯವನ್ನು ಕಲಿಸಲಿಕ್ಕಾಗಿ ಸುಮಾರು ನೂರು ವರ್ಷಗಳಿಂದ ಯೆಹೋವನು ಬಳಸಿರುವ ನಂಬಿಗಸ್ತ ಆಳಿನ ಮೇಲೆ ನೀವು ಭರವಸೆ ಇಡಬಲ್ಲಿರೆಂದು ರುಜುಪಡಿಸಿರುವ ಎಲ್ಲ ಪುರಾವೆಯ ಬಗ್ಗೆ ಯೋಚಿಸಿ.—ಮತ್ತಾ. 24:45-47; ಇಬ್ರಿ. 13:7, 17.

ಹೆದರಬೇಡಿರಿ

ಸೈತಾನನು ನಿಮ್ಮನ್ನು ನೇರವಾದ ವಿಧಗಳಲ್ಲೂ ಪ್ರಭಾವಿಸಲು ಪ್ರಯತ್ನಿಸುತ್ತಾನೆ. ಕೆಲವೊಮ್ಮೆ ಅವನು ನಿಮ್ಮಲ್ಲಿ ಭಯಹುಟ್ಟಿಸುತ್ತಾನೆ. ಭಯಭೀತಿ ಎಂಬುದು “ಮೋಸಕರ ಮಾಹಿತಿಯ ವಿಧಗಳಲ್ಲೇ ತುಂಬ ಹಳೇ ವಿಧಾನ” ಆಗಿದೆ. (ಸುಲಭದಲ್ಲಿ ದಾರಿತಪ್ಪಿಸುವುದು—ಮೋಸಕರ ಮಾಹಿತಿಯ ಇತಿಹಾಸ [ಇಂಗ್ಲಿಷ್‌]) ಬ್ರಿಟಿಷ್‌ ಪ್ರೊಫೆಸರರಾದ ಫಿಲಿಪ್‌ ಎಮ್‌. ಟೇಲರ್‌ ಎಂಬವರು ಅಶ್ಶೂರ್ಯರ ಬಗ್ಗೆ ಹೇಳುತ್ತಾ, ಅವರು ವೈರಿಗಳ ಮೇಲೆ ಹತೋಟಿ ಸಾಧಿಸಲು ಮೋಸಕರ ಮಾಹಿತಿ ಹಬ್ಬಿಸುತ್ತಿದ್ದರು, ಭಯ ಹುಟ್ಟಿಸುತ್ತಿದ್ದರು ಎಂದು ಬರೆದಿದ್ದಾರೆ. ನೀವು ಯೆಹೋವನ ಸೇವೆ ಮಾಡುವುದನ್ನು ನಿಲ್ಲಿಸಲಿಕ್ಕಾಗಿ ಸೈತಾನನು ಸಹ ಭಯವನ್ನು ಬಳಸುತ್ತಾನೆ. ಉದಾಹರಣೆಗೆ, ಮನುಷ್ಯರ ಭಯ, ಹಿಂಸೆಯ ಭಯ, ಮರಣದ ಭಯ ಇದೆಲ್ಲವನ್ನು ಬಳಸುತ್ತಾನೆ.—ಯೆಶಾ. 8:12; ಯೆರೆ. 42:11; ಇಬ್ರಿ. 2:15.

ಸೈತಾನನಿಗೆ ಹೆದರಬೇಡಿ! ಯೇಸು ಹೇಳಿದ್ದು: “ದೇಹವನ್ನು ಕೊಂದ ಬಳಿಕ ಹೆಚ್ಚೇನನ್ನೂ ಮಾಡದವರಿಗೆ ಭಯಪಡಬೇಡಿರಿ.” (ಲೂಕ 12:4) ಯೆಹೋವನು ನಿಮ್ಮನ್ನು ನೋಡಿಕೊಳ್ಳುವುದಾಗಿ ಕೊಟ್ಟ ಮಾತನ್ನು ಖಂಡಿತ ಪಾಲಿಸುವನು ಎಂಬ ಪೂರ್ಣ ಭರವಸೆ ನಿಮಗಿರಲಿ. ಆತನು ನಿಮಗೆ “ಸಹಜ ಶಕ್ತಿಗಿಂತ ಹೆಚ್ಚಿನ ಶಕ್ತಿ” ಕೊಟ್ಟು ಸೈತಾನನ ದಾಳಿಗಳನ್ನು ಎದುರಿಸಲು ಖಂಡಿತ ಸಹಾಯಮಾಡುವನು.—2 ಕೊರಿಂ. 4:7-9; 1 ಪೇತ್ರ 3:14.

ನಿಮ್ಮಲ್ಲಿ ಬಲವೇ ಇಲ್ಲ ಎಂದನಿಸುವ ಇಲ್ಲವೇ ಹೆದರಿಕೆಯಾಗುವ ಸಮಯಗಳು ಬರಬಹುದು. ಅಂಥ ಸಮಯದಲ್ಲಿ ಯೆಹೋವನು ಯೆಹೋಶುವನಿಗೆ ಕೊಟ್ಟ ಈ ಪ್ರೋತ್ಸಾಹವನ್ನು ನೆನಪಿಸಿಕೊಳ್ಳಿ: “ಸ್ಥಿರಚಿತ್ತನಾಗಿರು, ಧೈರ್ಯದಿಂದಿರು. ಅಂಜಬೇಡ, ಕಳವಳಗೊಳ್ಳಬೇಡ. ನೀನು ಹೋಗುವಲ್ಲೆಲ್ಲಾ ನಿನ್ನ ದೇವರಾದ ಯೆಹೋವನು ನಿನ್ನ ಸಂಗಡ ಇರುತ್ತಾನೆ.” (ಯೆಹೋ. 1:9) ನಿಮಗೆ ತುಂಬ ಹೆದರಿಕೆ, ಚಿಂತೆಯಾದರೆ ಕೂಡಲೇ ಯೆಹೋವನಿಗೆ ಪ್ರಾರ್ಥಿಸಿ. ಆಗ “ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ನಿಮ್ಮ ಮಾನಸಿಕ ಶಕ್ತಿಗಳನ್ನೂ . . . ಕಾಯುವುದು” ಖಂಡಿತ. ಹೀಗೆ ನಿಮಗೆ ಸೈತಾನನ ಮೋಸಕರವಾದ ಎಲ್ಲ ಮಾಹಿತಿಯ ವಿರುದ್ಧ ದೃಢವಾಗಿ ನಿಲ್ಲಲು ಬೇಕಾದ ಬಲ ಸಿಗುತ್ತದೆ.—ಫಿಲಿ. 4:6, 7, 13.

ಅಶ್ಶೂರ್ಯರ ಸಂದೇಶವಾಹಕ ರಬ್ಷಾಕೆ ದೇವಜನರಲ್ಲಿ ಭಯಹುಟ್ಟಿಸಲು ಏನೇನು ಮೋಸಕರ ವಿಷಯಗಳನ್ನು ಹೇಳಿದನು ನೆನಪಿದೆಯಾ? ಅವರನ್ನು ಯಾರೂ ಅಶ್ಶೂರ್ಯರ ಕೈಯಿಂದ ರಕ್ಷಿಸಲಾರರು, ಯೆಹೋವನು ಸಹ ಕಾಪಾಡಲಾರನೆಂದು ಅವರನ್ನು ನಂಬಿಸಲು ಪ್ರಯತ್ನಿಸಿದ. ಆಮೇಲೆ ಅವನು ಯೆರೂಸಲೇಮನ್ನು ನಾಶಮಾಡುವಂತೆ ಅಶ್ಶೂರ್ಯರಿಗೆ ಯೆಹೋವನೇ ಅಪ್ಪಣೆ ಕೊಟ್ಟಿದ್ದಾನೆಂದು ಹೇಳಿದ. ಇದಕ್ಕೆ ಯೆಹೋವನ ಪ್ರತಿಕ್ರಿಯೆ ಏನಾಗಿತ್ತು? “ನೀನು ಕೇಳಿದ ಮಾತುಗಳ ದೆಸೆಯಿಂದ ಹೆದರಬೇಡ; ಅಶ್ಶೂರದ ಅರಸನ ಸೇವಕರು ಆ ಮಾತುಗಳಿಂದ ನನ್ನನ್ನೇ ದೂಷಿಸಿದ್ದಾರೆ.” (2 ಅರ. 18:22-25; 19:6) ಆಮೇಲೆ ಯೆಹೋವನು ತನ್ನ ಒಬ್ಬ ದೂತನನ್ನು ಕಳುಹಿಸಿ ಒಂದೇ ರಾತ್ರಿಯಲ್ಲಿ 1,85,000 ಅಶ್ಶೂರ್ಯರನ್ನು ಹತಿಸಿದನು!—2 ಅರ. 19:35.

ವಿವೇಕಿಗಳಾಗಿರಿ—ಯಾವಾಗಲೂ ಯೆಹೋವನ ಮಾತಿಗೆ ಕಿವಿಗೊಡಿರಿ

ನೀವು ಒಂದು ಸಿನೆಮಾ ನೋಡುತ್ತಿದ್ದಾಗ ಅದರಲ್ಲಿ ಒಬ್ಬ ಅಮಾಯಕ ವ್ಯಕ್ತಿಗೆ ಮೋಸ ಆಗುತ್ತಾ ಇತ್ತೆಂದು ಇಟ್ಟುಕೊಳ್ಳಿ. ಅದು ಅವರಿಗೆ ಗೊತ್ತಾಗದೆ ಇರುವುದನ್ನು ನೋಡಿ ನಿಮಗೆ ಏನು ಮಾಡಬೇಕು ಅನಿಸಿತು? ‘ಅಯ್ಯೋ ಅವರನ್ನು ನಂಬಬೇಡ, ನಿನಗೆ ಮೋಸಮಾಡುತ್ತಿದ್ದಾರೆ’ ಅಂತ ಕೂಗಿಹೇಳಲು ಮನಸ್ಸಾಗಿತ್ತಾ? ಇದೇ ರೀತಿ ದೇವದೂತರು ನಿಮಗೆ “ಸೈತಾನನ ಸುಳ್ಳುಗಳಿಂದ ಮೋಸಹೋಗಬೇಡ!” ಎಂದು ಕೂಗಿಹೇಳುತ್ತಿರುವುದನ್ನು ನೀವು ಕಲ್ಪಿಸಿಕೊಳ್ಳಬಲ್ಲಿರಾ?

ಹಾಗಾಗಿ ಸೈತಾನನ ಮೋಸಕರ ಮಾಹಿತಿಗೆ ಕಿವಿಗೊಡಬೇಡಿ. (ಜ್ಞಾನೋ. 26:24, 25) ಯೆಹೋವನಿಗೆ ಕಿವಿಗೊಡಿ. ಯಾವಾಗಲೂ ಆತನ ಮೇಲೆ ಭರವಸೆಯಿಡಿ. (ಜ್ಞಾನೋ. 3:5-7) ಆತನಿಗೆ ನಿಮ್ಮ ಮೇಲೆ ಪ್ರೀತಿ ಇರುವುದರಿಂದ “ಮಗನೇ, ಜ್ಞಾನವನ್ನು ಪಡೆದುಕೊಂಡು ನನ್ನ ಮನಸ್ಸನ್ನು ಸಂತೋಷಪಡಿಸು” ಎಂದು ಉತ್ತೇಜಿಸುತ್ತಾನೆ. (ಜ್ಞಾನೋ. 27:11) ನೀವು ಜ್ಞಾನ ಪಡೆದುಕೊಂಡು ವಿವೇಕಿಗಳಾಗಿ ನಡೆದರೆ, ನಿಮ್ಮ ಮನಸ್ಸಿಗಾಗಿ ನಡೆಯುತ್ತಿರುವ ಯುದ್ಧವನ್ನು ಖಂಡಿತ ಗೆಲ್ಲುವಿರಿ!