ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿನೆವೆಯಲ್ಲಿ ಭವ್ಯ ಕಟ್ಟಡಗಳು, ದೊಡ್ಡದೊಡ್ಡ ಸ್ಮಾರಕಗಳು ಇದ್ದವು

ನಿಮಗೆ ಗೊತ್ತಿತ್ತಾ?

ನಿಮಗೆ ಗೊತ್ತಿತ್ತಾ?

ಯೋನನ ಕಾಲದ ನಂತರ ನಿನೆವೆಗೆ ಏನಾಯ್ತು?

ಸುಮಾರು ಕ್ರಿಸ್ತಪೂರ್ವ 670ರಲ್ಲಿ ಅಶ್ಶೂರ, ಇಡೀ ಪ್ರಪಂಚದಲ್ಲೇ ದೊಡ್ಡ ಸಾಮ್ರಾಜ್ಯವಾಗಿತ್ತು. ಬ್ರಿಟಿಷ್‌ ಮ್ಯೂಸಿಯಂನ ಒಂದು ವೆಬ್‌ಸೈಟ್‌ನಲ್ಲಿ ಹೀಗಿದೆ: “ಅಶ್ಶೂರ ಸಾಮ್ರಾಜ್ಯ ಪಶ್ಚಿಮದಲ್ಲಿ ಸೈಪ್ರಸ್‌ನಿಂದ ಹಿಡಿದು ಪೂರ್ವದಲ್ಲಿ ಇರಾನ್‌ ತನಕ ಹರಡಿತ್ತು. ಸ್ವಲ್ಪ ಸಮಯ ಈಜಿಪ್ಟ್‌ ಕೂಡ ಇವರ ಕೈಕೆಳಗಿತ್ತು.” ಅದರ ರಾಜಧಾನಿಯಾದ ನಿನೆವೆ ಇಡೀ ಜಗತ್ತಿಗೇ ದೊಡ್ಡ ನಗರ ಆಗಿತ್ತು. ಅಲ್ಲಿ ಭವ್ಯವಾದ ಕಟ್ಟಡಗಳು, ಸುಂದರವಾದ ಹೂದೋಟಗಳು, ವೈಭವದಿಂದ ತುಂಬಿದ ಅರಮನೆಗಳು ಮತ್ತು ದೊಡ್ಡ ಗ್ರಂಥಾಲಯಗಳು ಇದ್ದವು. ಆ ನಿನೆವೆಯ ಗೋಡೆಗಳ ಮೇಲಿದ್ದ ಬರವಣಿಗೆಗಳನ್ನ ನೋಡಿದ್ರೆ ಆಗಿನ ಕಾಲದಲ್ಲಿದ್ದ ರಾಜ ಅಶ್ಶೂರ್‌ಬನಿಪಾಲನೂ ಬೇರೆ ಅಶ್ಶೂರದ ರಾಜರ ತರ ‘ನಾನು ಇಡೀ ಜಗತ್ತಿಗೇ ರಾಜ’ ಅಂತ ಹೇಳಿಕೊಳ್ಳುತ್ತಿದ್ದ ಅಂತ ಗೊತ್ತಾಗುತ್ತೆ. ಅವನ ಕಾಲದಲ್ಲಿ ಅಶ್ಶೂರ ಮತ್ತು ನಿನೆವೆಯನ್ನ ಯಾರಿಂದನೂ ಸೋಲಿಸೋಕೆ ಆಗಲ್ಲ ಅನ್ನೋ ತರ ಇತ್ತು.

ಆ ಕಾಲದಲ್ಲಿ ಅಶ್ಶೂರ ಇಡೀ ಲೋಕಕ್ಕೆ ಮಹಾ ಸಾಮ್ರಾಜ್ಯವಾಗಿತ್ತು

ಇಂಥ ಸಮಯದಲ್ಲಿ ಯೆಹೋವ “ತನ್ನ ಕೈಯನ್ನ . . . ಚಾಚಿ ಅಶ್ಶೂರ್‌ ದೇಶವನ್ನ ನಾಶಮಾಡ್ತಾನೆ. ಆತನು ನಿನೆವೆಯನ್ನ ನಿರ್ಜನ ಪ್ರದೇಶವಾಗಿ ಮಾಡ್ತಾನೆ. ಅದನ್ನ ಮರುಭೂಮಿ ತರ ಒಣಗಿಸಿಬಿಡ್ತಾನೆ” ಅಂತ ಚೆಫನ್ಯನಿಂದ ಭವಿಷ್ಯವಾಣಿ ಹೇಳಿಸಿದನು. ಅಷ್ಟೇ ಅಲ್ಲ, ನಹೂಮನಿಂದನೂ ಒಂದು ಭವಿಷ್ಯವಾಣಿ ಹೇಳಿಸಿದನು. ಅದೇನಂದ್ರೆ “ಚಿನ್ನ ಬೆಳ್ಳಿ ಎಲ್ಲ ಲೂಟಿ ಮಾಡಿ . . . ಪಟ್ಟಣ ಖಾಲಿ ಖಾಲಿ ಹೊಡಿತಿದೆ, ನಿರ್ಜನವಾಗಿ ಹಾಳುಬಿದ್ದಿದೆ! . . . ನಿನ್ನನ್ನ ನೋಡುವವ್ರೆಲ್ಲ ನಿನ್ನಿಂದ ಓಡಿಹೋಗ್ತಾ, ‘ನಿನೆವೆ ಹಾಳಾಗಿ ಹೋಗಿದೆ’ . . . ಅಂತಾರೆ.” (ಚೆಫ. 2:13; ನಹೂ. 2:9, 10; 3:7) ಈ ಭವಿಷ್ಯವಾಣಿ ಕೇಳಿಸಿಕೊಂಡಾಗ ಜನರು, ‘ಇದೆಲ್ಲಾ ಹೇಗೆ ಸಾಧ್ಯ? ಅಶ್ಶೂರವನ್ನ ಯಾರಾದ್ರೂ ಸೋಲಿಸೋಕೆ ಆಗುತ್ತಾ? ಅದನ್ನ ನಾಶಮಾಡೋಕೆ ಆಗುತ್ತಾ? ಇದೆಲ್ಲಾ ನಂಬೋ ಮಾತೇ ಅಲ್ಲ’ ಅಂದುಕೊಂಡಿರಬೇಕು.

ನಿನೆವೆ ಜನರಿಲ್ಲದೆ ಬಿಕೋ ಅಂತಿದೆ!

ಆದ್ರೆ ಭವಿಷ್ಯವಾಣಿ ಹೇಳಿದ ಹಾಗೇ ನಡಿತು. ಕ್ರಿಸ್ತಪೂರ್ವ 600ಕ್ಕಿಂತ ಸ್ವಲ್ಪ ಸಮಯದ ಮುಂಚೆ ಬಾಬೆಲ್‌ ಮತ್ತು ಮೇದ್ಯ ಸಾಮ್ರಾಜ್ಯ ಅಶ್ಶೂರವನ್ನ ವಶಮಾಡಿಕೊಳ್ತು. ಸಮಯ ಕಳೆದ ಹಾಗೆ ನಿನೆವೆಯಲ್ಲಿ ಜನ ವಾಸ ಮಾಡೋದನ್ನ ಬಿಟ್ಟುಬಿಟ್ರು. ಕೊನೆಗೆ ಅಲ್ಲೊಂದು ನಗರ ಇತ್ತು ಅನ್ನೋದನ್ನೇ ಜನ ಮರೆತುಬಿಟ್ರು. ದ ಮೆಟ್ರೋಪೊಲಿಟನ್‌ ಮ್ಯೂಸಿಯಂ ಆಫ್‌ ಆರ್ಟ್‌ ಅನ್ನೋ ಒಂದು ಪ್ರಕಾಶನದಲ್ಲಿ ಹೀಗಿತ್ತು: “ಮಧ್ಯಯುಗದಷ್ಟಕ್ಕೆ ನಿನೆವೆ ಸಂಪೂರ್ಣವಾಗಿ ಪಾಳುಬಿದ್ದು ಹೋಗಿತ್ತು. ಅದರ ಬಗ್ಗೆ ಬೈಬಲಿನಲ್ಲಿ ಬಿಟ್ರೆ ಬೇರೆಲ್ಲೂ ಇರಲಿಲ್ಲ.” ಅಷ್ಟೇ ಅಲ್ಲ, ಬಿಬ್ಲಿಕಲ್‌ ಆರ್ಕಿಯಾಲಜಿ ಸೊಸೈಟಿಯ ಪ್ರಕಾರ “ಇಲ್ಲಿ ಅಶ್ಶೂರದ ರಾಜಧಾನಿ ಅಂತ ಒಂದಿತ್ತು ಅನ್ನೋದನ್ನೇ ಜನ ನಂಬ್ತಿಲ್ಲ.” ಆದ್ರೆ 1845ರಲ್ಲಿ ಅಗೆತಶಾಸ್ತ್ರಜ್ಞರಾದ ಆಸ್ಟನ್‌ ಹೆನ್ರಿ ಲೆಯಾರ್ಡ್‌ ನಿನೆವೆ ಪಟ್ಟಣವನ್ನ ಅಗೆದು ನೋಡಿದಾಗ ಕೆಲವೊಂದು ಅವಶೇಷಗಳು ಸಿಕ್ಕಿದವು. ಈ ಅವಶೇಷಗಳನ್ನ ನೋಡಿದಾಗ ನಿಜವಾಗಲೂ ಅಲ್ಲಿ ನಿನೆವೆ ಅನ್ನೋ ಪಟ್ಟಣ ಇತ್ತು ಮತ್ತು ಅದು ತುಂಬ ದೊಡ್ಡ ನಗರ ಆಗಿತ್ತು ಅಂತ ಗೊತ್ತಾಯ್ತು.

ನಿನೆವೆ ಬಗ್ಗೆ ಬೈಬಲಿನಲ್ಲಿ ಹೇಳಿರೋ ಭವಿಷ್ಯವಾಣಿ ನಡೆದಿರೋದನ್ನ ನೋಡುವಾಗ ಯೆಹೋವ ದೇವರು ಮುಂದೆ ಈ ಸರ್ಕಾರಗಳನ್ನ ತೆಗೆದುಹಾಕಿಬಿಡ್ತೀನಿ ಅಂತ ಹೇಳಿರೋ ಭವಿಷ್ಯವಾಣಿನೂ ನೆರವೇರುತ್ತೆ ಅಂತ ನಾವು ನಂಬಬಹುದು.—ದಾನಿ. 2:44; ಪ್ರಕ. 19:15, 19-21.