ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಓಬೀರಾಯನ ಕಾಲದ್ದಾ? ವಿಜ್ಞಾನಿಗಳಿಗಿಂತ ಒಂದು ಹೆಜ್ಜೆ ಮುಂದಿದೆಯಾ?

ಓಬೀರಾಯನ ಕಾಲದ್ದಾ? ವಿಜ್ಞಾನಿಗಳಿಗಿಂತ ಒಂದು ಹೆಜ್ಜೆ ಮುಂದಿದೆಯಾ?

ವಿಜ್ಞಾನ

ಬೈಬಲ್‌ ವಿಜ್ಞಾನದ ಪಠ್ಯಪುಸ್ತಕವಲ್ಲ. ಆದರೂ ಅದರಲ್ಲಿರುವ ಕೆಲವು ಹೇಳಿಕೆಗಳು ವಿಜ್ಞಾನಿಗಳು ನೂರಾರು ವರ್ಷಗಳ ನಂತರ ಕಂಡುಹಿಡಿದ ವಿಷಯಗಳಿಗೆ ಸರಿಹೊಂದುತ್ತವೆ. ಕೆಲವು ಉದಾಹರಣೆಗಳು ಇಲ್ಲಿವೆ.

ಈ ವಿಶ್ವಕ್ಕೆ ಆರಂಭ ಇತ್ತಾ?

‘ಇಲ್ಲ’ ಅಂತ ಪ್ರಧಾನ ವಿಜ್ಞಾನಿಗಳು ಒಂದೊಮ್ಮೆ ದೃಢವಾಗಿ ನಂಬುತ್ತಿದ್ದರು. ಆದರೆ ಈಗ ಅವರಲ್ಲಿ ಹೆಚ್ಚಿನವರು ವಿಶ್ವಕ್ಕೆ ಒಂದು ಆರಂಭ ಇತ್ತೆಂದು ಒಪ್ಪಿಕೊಳ್ಳುತ್ತಾರೆ. ಈ ಮಾತನ್ನು ಬೈಬಲು ಎಷ್ಟೋ ಹಿಂದೆಯೇ ಸ್ಪಷ್ಟವಾಗಿ ತಿಳಿಸಿತ್ತು. —ಆದಿಕಾಂಡ 1:1.

ಭೂಮಿಯ ಆಕಾರ ಏನು?

ಪುರಾತನ ಕಾಲಗಳಲ್ಲಿ ಅನೇಕರು ಭೂಮಿ ಚಪ್ಪಟೆ ಆಗಿದೆ ಅಂತ ನೆನಸುತ್ತಿದ್ದರು. ಕ್ರಿ.ಪೂ. 5​ನೇ ಶತಮಾನದಲ್ಲಿ ಗ್ರೀಕ್‌ ವಿಜ್ಞಾನಿಗಳು ಭೂಮಿ ಗೋಳ ಆಗಿದೆಯೆಂದು ಹೇಳಿದರು. ಆದರೆ ಅದಕ್ಕೂ ಎಷ್ಟೋ ಹಿಂದೆ ಕ್ರಿ.ಪೂ. 8​ನೇ ಶತಮಾನದಲ್ಲಿ ಬೈಬಲಿನ ಒಬ್ಬ ಬರಹಗಾರನಾದ ಯೆಶಾಯನು ಭೂಮಿಗೆ ಸೂಚಿಸುತ್ತಾ “ಭೂಮಂಡಲ” ಎಂಬ ಪದ ಬಳಸಿದನು. ಈ ಪದವನ್ನು “ಗೋಳ” ಎಂದೂ ಭಾಷಾಂತರಿಸಬಹುದು.—ಯೆಶಾಯ 40:22.

ಸಮಯ ದಾಟಿದಂತೆ ಆಕಾಶವು ಕ್ಷಯಿಸಿಹೋಗುವ ಸಾಧ್ಯತೆ ಇದೆಯಾ?

ಕ್ಷಯಿಸುವಿಕೆ ಬರೀ ಭೂಮಿಯಲ್ಲಾಗುತ್ತದೆ, ತಾರೆಗಳಿಂದ ತುಂಬಿರುವ ಆಕಾಶ ಯಾವತ್ತೂ ಬದಲಾಗಲು ಅಥವಾ ಕ್ಷಯಿಸಲು ಸಾಧ್ಯವಿಲ್ಲ ಎಂದು ಕ್ರಿ.ಪೂ. 4​ನೇ ಶತಮಾನದ ಗ್ರೀಕ್‌ ವಿಜ್ಞಾನಿ ಅರಿಸ್ಟಾಟಲ್‌ ಕಲಿಸಿದ್ದನು. ಈ ಅಭಿಪ್ರಾಯ ಅನೇಕ ಶತಮಾನಗಳ ವರೆಗೆ ಇತ್ತು. ಆದರೆ 19​ನೇ ಶತಮಾನದಲ್ಲಿ ವಿಜ್ಞಾನಿಗಳು ಎಂಟ್ರೋಪಿ ಎಂಬ ಸಿದ್ಧಾಂತವನ್ನು ಮಂಡಿಸಿದರು. ಈ ಸಿದ್ಧಾಂತಕ್ಕನುಸಾರ ಆಕಾಶದ್ದಾಗಿರಲಿ, ಭೂಮಿಯದ್ದಾಗಿರಲಿ ಎಲ್ಲ ಭೌತದ್ರವ್ಯ ಕ್ಷಯಿಸುವ ಸಾಧ್ಯತೆ ಇದೆ. ಈ ಸಿದ್ಧಾಂತವನ್ನು ಮಂಡಿಸಲು ಸಹಾಯಮಾಡಿದ ವಿಜ್ಞಾನಿಗಳಲ್ಲಿ ಒಬ್ಬರಾದ ಲಾರ್ಡ್‌ ಕೆಲ್ವಿನ್‌ ಎಂಬವರು ಆಕಾಶ ಮತ್ತು ಭೂಮಿ ಬಗ್ಗೆ ಬೈಬಲ್‌ ಹೇಳುವ ಈ ಮಾತಿನ ಕಡೆಗೆ ಗಮನಸೆಳೆದರು: “ಅವೆಲ್ಲವೂ ವಸ್ತ್ರದಂತೆ ಹಳೆಯವಾಗುವವು” ಅಥವಾ ಸವೆದುಹೋಗುವವು. (ಕೀರ್ತನೆ 102:25, 26) ದೇವರು ತನ್ನ ಸೃಷ್ಟಿಯಾಗಿರುವ ಆಕಾಶ ಮತ್ತು ಭೂಮಿ ಕ್ಷಯಿಸುವ ಪ್ರಕ್ರಿಯೆಯಿಂದ ನಾಶವಾಗದಂತೆ ತಡೆಯಶಕ್ತನೆಂದು ಬೈಬಲ್‌ ಕಲಿಸುವ ಮಾತನ್ನು ಕೆಲ್ವಿನ್‌ ನಂಬುತ್ತಿದ್ದರು.—ಪ್ರಸಂಗಿ 1:4.

ಭೂಮಿ ಮತ್ತು ಬೇರೆ ಗ್ರಹಗಳು ಯಾವುದರ ಮೇಲಾದರೂ ನಿಂತಿವೆಯಾ?

ಗೋಳಾಕಾರದ ಆಕಾಶಕಾಯಗಳು ಒಂದರೊಳಗೆ ಒಂದು ಇದ್ದು, ಮಧ್ಯದಲ್ಲಿ ಭೂಮಿ ಇದೆ ಎಂದು ಅರಿಸ್ಟಾಟಲ್‌ ಕಲಿಸಿದ್ದನು. ನಕ್ಷತ್ರಗಳು ಮತ್ತು ಗ್ರಹಗಳು ಶೂನ್ಯದಲ್ಲಿ ತೂಗಾಡುತ್ತಿರಬಹುದು ಎಂದು ಕ್ರಿ.ಶ. 18​ನೇ ಶತಮಾನದಷ್ಟಕ್ಕೆ ವಿಜ್ಞಾನಿಗಳು ಒಪ್ಪಿಕೊಳ್ಳುತ್ತಿದ್ದರು. ಆದರೆ ಸೃಷ್ಟಿಕರ್ತನು “ಭೂಲೋಕವನ್ನು ಯಾವ ಆಧಾರವೂ ಇಲ್ಲದೆ ತೂಗ ಹಾಕಿದ್ದಾನೆ” ಎಂದು ಕ್ರಿ.ಪೂ. 15​ನೇ ಶತಮಾನದಷ್ಟು ಹಿಂದೆಯೇ ಯೋಬ ಎಂಬ ಬೈಬಲ್‌ ಪುಸ್ತಕದಲ್ಲಿ ತಿಳಿಸಲಾಗಿತ್ತು.—ಯೋಬ 26:7.

ಔಷಧಶಾಸ್ತ್ರ

ಬೈಬಲ್‌ ವೈದ್ಯಕೀಯ ಪಠ್ಯಪುಸ್ತಕವಲ್ಲ. ಹೀಗಿದ್ದರೂ ಅದರಲ್ಲಿ ಆರೋಗ್ಯದ ಬಗ್ಗೆ ಈಗಿನ ಕಾಲದಲ್ಲಿ ಕಂಡುಹಿಡಿಯಲಾದ ಕೆಲವೊಂದು ತತ್ವಗಳಿವೆ.

ಅಸ್ವಸ್ಥರನ್ನು ಪ್ರತ್ಯೇಕವಾಗಿ ಇಡುವುದು.

ಕುಷ್ಠ ರೋಗಿಗಳನ್ನು ಬೇರೆಯವರಿಂದ ಪ್ರತ್ಯೇಕಿಸಬೇಕೆಂದು ಮೋಶೆಯ ಮೂಲಕ ದೇವರು ಕೊಟ್ಟ ನಿಯಮಗಳಲ್ಲಿ ತಿಳಿಸಲಾಗಿತ್ತು. ಈ ತತ್ವವನ್ನು ಪಾಲಿಸಬೇಕೆಂದು ವೈದ್ಯರು ತಿಳಿದುಕೊಂಡದ್ದು 14 ಮತ್ತು 15​ನೇ ಶತಮಾನಗಳಲ್ಲಿ ಮಹಾಮಾರಿ ಕಾಯಿಲೆಗಳು ಬಂದ ನಂತರವೇ. ಹೀಗೆ ಮಾಡುವುದು ಒಳ್ಳೇದೆಂದು ಈಗಲೂ ನಂಬಲಾಗುತ್ತದೆ.—ಯಾಜಕಕಾಂಡ, 13 ಮತ್ತು 14​ನೇ ಅಧ್ಯಾಯಗಳು.

ಶವವನ್ನು ಮುಟ್ಟಿದ ನಂತರ ಕೈತೊಳೆಯುವುದು.

19​ನೇ ಶತಮಾನದ ಕೊನೆ ಭಾಗದ ವರೆಗೆ ವೈದ್ಯರು ಶವಗಳನ್ನು ಮುಟ್ಟಿದ ನಂತರ ಕೈ ತೊಳೆಯದೇ ರೋಗಿಗಳನ್ನು ಮುಟ್ಟಿ ಚಿಕಿತ್ಸೆ ನೀಡುತ್ತಿದ್ದರು. ಇದರಿಂದಾಗಿ ಅನೇಕ ರೋಗಿಗಳು ಸಾವನ್ನಪ್ಪಿದರು. ಆದರೆ ಮೋಶೆಯ ಮೂಲಕ ದೇವರು ಕೊಟ್ಟ ನಿಯಮಗಳಲ್ಲಿ, ಶವವನ್ನು ಮುಟ್ಟಿದವರು ಅಶುದ್ಧರಾಗಿರುತ್ತಾರೆಂದು ತಿಳಿಸಲಾಗಿತ್ತು. ಅಂಥವರು ನೀರಿನಿಂದ ತಮ್ಮನ್ನು ಶುದ್ಧಪಡಿಸಿಕೊಳ್ಳಬೇಕೆಂದು ಅದು ಹೇಳಿತು. ಈ ರೀತಿಯ ರೂಢಿಗಳಿಂದಾಗಿ ಆರೋಗ್ಯವೂ ಚೆನ್ನಾಗಿರುತ್ತಿತ್ತು.—ಅರಣ್ಯಕಾಂಡ 19:11, 19.

ತ್ಯಾಜ್ಯ ವಿಲೇವಾರಿ.

ಪ್ರತಿ ವರ್ಷ 5 ಲಕ್ಷಕ್ಕೂ ಹೆಚ್ಚು ಮಕ್ಕಳು ಅತಿಸಾರದಿಂದ (ಬೇಧಿ) ಸಾಯುತ್ತಾರೆ. ಹೆಚ್ಚಾಗಿ ಇದಕ್ಕೆ ಕಾರಣ ಅನಾರೋಗ್ಯಕರ ಶೌಚ ವ್ಯವಸ್ಥೆ ಆಗಿದೆ. ಮಾನವ ಮಲವನ್ನು ಮನುಷ್ಯರ ವಸತಿ ಪ್ರದೇಶದಿಂದ ದೂರ ಮಣ್ಣಿನಲ್ಲಿ ಮುಚ್ಚಿಬಿಡಬೇಕೆಂದು ಮೋಶೆಯ ಮೂಲಕ ದೇವರು ಕೊಟ್ಟ ನಿಯಮಗಳಲ್ಲಿ ಹೇಳಲಾಗಿತ್ತು.—ಧರ್ಮೋಪದೇಶಕಾಂಡ 23:13.

ಸುನ್ನತಿ ಮಾಡಬೇಕಾದ ಸಮಯ.

ಗಂಡು ಮಗು ಹುಟ್ಟಿದ ನಂತರ ಎಂಟನೇ ದಿನದಲ್ಲಿ ಅದಕ್ಕೆ ಸುನ್ನತಿ ಮಾಡಿಸಬೇಕೆಂದು ದೇವರ ನಿಯಮದಲ್ಲಿ ತಿಳಿಸಲಾಗಿತ್ತು. (ಯಾಜಕಕಾಂಡ 12:3) ನವಜಾತ ಶಿಶುಗಳಲ್ಲಿ ಏಳು ದಿನಗಳ ನಂತರವೇ ರಕ್ತ ಹೆಪ್ಪುಗಟ್ಟುವ ಸಾಮರ್ಥ್ಯ ಸಾಮಾನ್ಯ ಮಟ್ಟವನ್ನು ತಲಪುತ್ತದೆ ಎಂದು ಹೇಳಲಾಗುತ್ತದೆ. ಆಧುನಿಕ ವೈದ್ಯ ಚಿಕಿತ್ಸೆ ಲಭ್ಯವಿಲ್ಲದಿದ್ದ ಆ ಬೈಬಲ್‌ ಕಾಲಗಳಲ್ಲಿ ಶಿಶುಗಳಿಗೆ ಸುನ್ನತಿ ಮಾಡಿಸಲು ಒಂದು ವಾರದ ತನಕ ಕಾಯುವುದು ಒಂದು ಸುರಕ್ಷಿತ ಕ್ರಮವಾಗಿತ್ತು.

ಭಾವನಾತ್ಮಕ ಆರೋಗ್ಯ ಮತ್ತು ದೈಹಿಕ ಆರೋಗ್ಯದ ನಡುವಿನ ನಂಟು.

ಸಕಾರಾತ್ಮಕ ಭಾವನೆಗಳಾದ ಆನಂದ, ನಿರೀಕ್ಷೆ, ಕೃತಜ್ಞತಾಭಾವ, ಕ್ಷಮಾಗುಣವು ಆರೋಗ್ಯದ ಮೇಲೆ ಒಳ್ಳೇ ಪರಿಣಾಮ ಬೀರುತ್ತವೆಂದು ವೈದ್ಯಕೀಯ ಸಂಶೋಧಕರು ಮತ್ತು ವಿಜ್ಞಾನಿಗಳು ಹೇಳುತ್ತಾರೆ. “ಹರ್ಷಹೃದಯವು ಒಳ್ಳೇ ಔಷಧ, ಕುಗ್ಗಿದ ಮನದಿಂದ ಒಣಮೈ” ಎನ್ನುತ್ತದೆ ಬೈಬಲ್‌.—ಜ್ಞಾನೋಕ್ತಿ 17:22.