ಪ್ರೀತಿಪಾತ್ರರು ಗಂಭೀರ ಕಾಯಿಲೆಗೆ ತುತ್ತಾದಾಗ
ಡೊರೀನ್ಳ ಗಂಡ ವೆಸ್ಲೀಗೆ ಆಗ 54 ವರ್ಷ. ಅವರಿಗೆ ಭಯಂಕರವಾದ ಬ್ರೇನ್ ಟ್ಯೂಮರ್ ಇದೆ ಎಂದು ಗೊತ್ತಾದಾಗ ಡೊರೀನ್ಳಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಯಿತು. * ಅವರು ಕೇವಲ ಕೆಲವೇ ತಿಂಗಳು ಬದುಕುತ್ತಾರೆಂದು ವೈದ್ಯರು ಹೇಳಿದರು. “ಅವರು ಹೇಳಿದ್ದನ್ನು ನನಗೆ ನಂಬಲಿಕ್ಕೇ ಆಗಲಿಲ್ಲ. ಅವರು ನಮ್ಮ ಬಗ್ಗೆ ಅಲ್ಲ, ಬೇರೆ ಯಾರ ಬಗ್ಗೆನೋ ಹೇಳ್ತಿದ್ದಾರೇನೋ ಅಂತ ಅನಿಸುತ್ತಿತ್ತು. ಅದನ್ನ ಒಪ್ಪಿಕೊಳ್ಳೋಕೇ ಆಗಲಿಲ್ಲ” ಎಂದು ಅವಳು ಹೇಳುತ್ತಾಳೆ.
ಇಂಥ ಪರಿಸ್ಥಿತಿಯಲ್ಲಿರುವ ಯಾರಿಗಾದರೂ ಡೊರೀನ್ಳ ಹಾಗೇ ಅನಿಸುತ್ತೆ. ಗಂಭೀರ ಕಾಯಿಲೆಗೆ ಯಾರು ಯಾವಾಗ ಬೇಕಾದರೂ ತುತ್ತಾಗಬಹುದು. ತಮ್ಮ ಆಪ್ತರಿಗೆ ಇಂಥ ಕಷ್ಟ ಬಂದಾಗ ಅನೇಕರು ಅವರ ಕೈ ಬಿಡಲ್ಲ. ಇಂಥವರನ್ನಂತೂ ನಾವು ಮೆಚ್ಚಲೇಬೇಕು. ಆದರೆ ಅವರನ್ನು ನೋಡಿಕೊಳ್ಳೋದು ಹೇಳಿದಷ್ಟು ಸುಲಭ ಅಲ್ಲ. ಕಾಯಿಲೆಗೆ ತುತ್ತಾಗಿರುವ ಆಪ್ತರನ್ನು ಕುಟುಂಬಸ್ಥರು ಸಂತೈಸಿ ಪರಾಮರಿಸಲು ಏನೆಲ್ಲಾ ಮಾಡಬಹುದು? ಇಂಥ ಸಂದರ್ಭದಲ್ಲಿ ಮನೆಯವರು ಹೇಗೆ ತಮ್ಮ ಭಾವನೆಗಳನ್ನು ನಿಭಾಯಿಸಬಹುದು? ಕಾಯಿಲೆ ಬಿದ್ದವರು ಸಾವಿಗೆ ಹತ್ತಿರ ಆಗುತ್ತಿದ್ದಂತೆ ಯಾವೆಲ್ಲಾ ವಿಷಯಗಳನ್ನು ಮನಸ್ಸಿನಲ್ಲಿಡಬೇಕು? ನಾವೀಗ, ಗಂಭೀರ ಕಾಯಿಲೆಗೆ ತುತ್ತಾಗಿರುವವರನ್ನು ನೋಡಿಕೊಳ್ಳೋದು ಯಾಕೆ ಇಷ್ಟು ಕಷ್ಟ ಅಂತ ನೋಡೋಣ.
ವೈದ್ಯಕೀಯ ಕ್ಷೇತ್ರದಲ್ಲಾದ ಬೆಳವಣಿಗೆ
ವೈದ್ಯಕೀಯ ಕ್ಷೇತ್ರದಲ್ಲಾದ ಪ್ರಗತಿಯಿಂದಾಗಿ ತುಂಬಾ ಬದಲಾವಣೆ ಆಗಿದೆ. ಸುಮಾರು ನೂರು ವರ್ಷಗಳ ಹಿಂದೆ ಪ್ರಗತಿಪರ ದೇಶಗಳಲ್ಲೂ ಜನರ ಸರಾಸರಿ ಆಯಸ್ಸು ಕಡಿಮೆ ಇತ್ತು. ಸೋಂಕು ರೋಗಗಳು ಮತ್ತು ಅಪಘಾತಗಳಿಂದಾಗಿ ಜನ ಬೇಗ ಸಾಯುತ್ತಿದ್ದರು. ಆಸ್ಪತ್ರೆಗಳು ಕಡಿಮೆ ಇದ್ದಿದ್ದರಿಂದ ಕಾಯಿಲೆ ಬಿದ್ದವರನ್ನು ಕುಟುಂಬದವರೇ ನೋಡಿಕೊಳ್ಳುತ್ತಿದ್ದರು, ಹೀಗೆ ಚಿಕಿತ್ಸೆ ಇಲ್ಲದೆ ಅವರು ಮನೆಯಲ್ಲೇ ಸಾವನ್ನಪ್ಪುತ್ತಿದ್ದರು.
ಇಂದು ವೈದ್ಯಕೀಯ ಕ್ಷೇತ್ರದಲ್ಲಿ ತುಂಬಾ ಪ್ರಗತಿಯಾಗಿ, ಹೆಚ್ಚಿನ ಕಾಯಿಲೆಗಳಿಗೆ ವೈದ್ಯರು ಔಷಧಿ ಕಂಡುಹಿಡಿದಿರುವುದರಿಂದ ಮನುಷ್ಯರ ಆಯಸ್ಸು ಹೆಚ್ಚಾಗಿದೆ. ಈ ಹಿಂದೆ, ಕೆಲವು ಕಾಯಿಲೆಗಳು ಬಂದರೆ ಜನರು ಬೇಗ ಸತ್ತು ಹೋಗುತ್ತಿದ್ದರು. ಆದರೆ ಇವತ್ತು ಇಂಥ ಕಾಯಿಲೆಗಳೊಂದಿಗೆ ಹೋರಾಡಿ ಸುಮಾರು ವರ್ಷಗಳು ಬದುಕಬಹುದು. ಆದರೆ ಆಯಸ್ಸು ಹೆಚ್ಚಾಯಿತು ಅಂದ ಮಾತ್ರಕ್ಕೆ ಕಾಯಿಲೆ ವಾಸಿ ಆಗಿದೆ ಅಂತಲ್ಲ. ಯಾಕೆಂದರೆ, ಕಾಯಿಲೆ ಇದ್ದರೂ ಜನ ಕೆಲವು ವರ್ಷ ಬದುಕುತ್ತಾರೆ. ಆದರೆ ಅವರಿಗೆ ತಮ್ಮ ಕೆಲಸಗಳನ್ನೂ ಮಾಡಿಕೊಳ್ಳಲು
ಆಗಲ್ಲ. ಇಂಥವರನ್ನು ನೋಡಿಕೊಳ್ಳುವುದು ದಿನೇ ದಿನೇ ತುಂಬಾ ಕಷ್ಟವಾಗುತ್ತಿದೆ.ಆದ್ದರಿಂದ ಇಂದು ಮನೆಗಿಂತ ಆಸ್ಪತ್ರೆಯಲ್ಲೇ ಸಾಯುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಹೆಚ್ಚಿನ ಜನರಿಗೆ ಸಾಯುವಾಗ ಏನೆಲ್ಲಾ ಆಗುತ್ತದೆ ಎಂದು ತಿಳಿದಿಲ್ಲ. ಇನ್ನು ಎಷ್ಟೋ ಜನ ತಮ್ಮ ಕಣ್ಮುಂದೆ ಯಾರೂ ಸತ್ತಿರೋದನ್ನು ನೋಡಿಲ್ಲ. ಆದ್ದರಿಂದ ಗಂಭೀರ ಕಾಯಿಲೆಗೆ ತುತ್ತಾಗಿರುವವರನ್ನು ಹೇಗೆ ನೋಡಿಕೊಳ್ಳಬೇಕು, ಅವರಿಗೆ ಏನು ಮಾಡಬೇಕು ಅಂತ ಜನರಿಗೆ ಗೊತ್ತಿಲ್ಲ. ಇದನ್ನು ಹೇಗೆ ತಿಳಿದುಕೊಳ್ಳೋದು?
ಮುಂದಾಲೋಚನೆ ಇರಲಿ
ಡೊರೀನ್ಳಿಗೆ ಆದಂತೆ ನಮ್ಮ ಪ್ರಿಯರಿಗೆ ಗಂಭೀರ ಕಾಯಿಲೆ ಬಂದಾಗ ತಾಳಿಕೊಳ್ಳಲು ಕಷ್ಟ ಆಗುತ್ತದೆ. ಚಿಂತೆ, ಭಯ, ನೋವು ನಮ್ಮನ್ನು ಆವರಿಸುತ್ತದೆ. ಇವೆಲ್ಲವುಗಳ ಮಧ್ಯದಲ್ಲೂ ಈ ಪರಿಸ್ಥಿತಿಯನ್ನು ಎದುರಿಸಲು ನಮಗೆ ಯಾವುದು ಸಹಾಯ ಮಾಡುತ್ತದೆ? ಒಬ್ಬ ದೇವಭಕ್ತ ಹೀಗೆ ಪ್ರಾರ್ಥಿಸಿದ: “ನಮ್ಮ ದಿನಗಳು ಕೊಂಚವೇ ಎಂದು ಎಣಿಸಿಕೊಳ್ಳುವ ಹಾಗೆ ನಮಗೆ ಕಲಿಸು; ಆಗ ಜ್ಞಾನದ ಹೃದಯವನ್ನು ಪಡಕೊಳ್ಳುವೆವು.” (ಕೀರ್ತನೆ 90:12) ‘ದಿನಗಳನ್ನು ಎಣಿಸುವಂತೆ’ ಅಂದರೆ ಉಳಿದಿರುವ ದಿನಗಳನ್ನು ವಿವೇಕಯುತವಾಗಿ ಆಪ್ತರೊಂದಿಗೆ ಹೇಗೆ ಕಳೆಯಬೇಕೆಂದು ಕಲಿಸುವಂತೆ ನಾವು ಯೆಹೋವ ದೇವರಿಗೆ ಪ್ರಾರ್ಥಿಸಬೇಕು.
ಇದನ್ನು ಮಾಡಲು ಮುಂದಾಲೋಚನೆ ಬೇಕು. ಅಸ್ವಸ್ಥರಾಗಿರುವ ನಿಮ್ಮ ಆಪ್ತರಿಗೆ ಮಾತಾಡಲು ಸಾಧ್ಯವಿದ್ದರೆ ಮತ್ತು ಅವರಿಗೆ ಇಷ್ಟ ಇದ್ದರೆ ಕೆಲವು ವಿಷಯಗಳ ಬಗ್ಗೆ ಮಾತಾಡಿ. ಉದಾಹರಣೆಗೆ, ನಿರ್ಣಯಗಳನ್ನು ಮಾಡಲು ಅವರಿಂದ ಆಗದಿದ್ದಾಗ ಅವರ ಪರವಾಗಿ ಯಾರು ನಿರ್ಣಯಗಳನ್ನು ಮಾಡಬೇಕು? ಯಾವ ರೀತಿಯ ಚಿಕಿತ್ಸೆ ಕೊಡಿಸಬೇಕು? ಕೃತಕ ವಿಧಾನದಿಂದ ಅವರನ್ನು ಉಳಿಸಿಕೊಳ್ಳಲು ಎಷ್ಟರವರೆಗೆ ಪ್ರಯತ್ನಿಸಬೇಕು ಅಂತ ಮೊದಲೇ ಕೇಳುವುದು ಒಳ್ಳೇದು. ಇದರಿಂದ ಅಸ್ವಸ್ಥ ವ್ಯಕ್ತಿ ಅಸಹಾಯಕ ಸ್ಥಿತಿಯಲ್ಲಿರುವಾಗ ಮನೆಯವರು ನಿರ್ಧಾರ ಮಾಡಲು ಸಾಧ್ಯವಾಗುತ್ತದೆ. ಕುಟುಂಬದವರಲ್ಲಿ ಅಪಾರ್ಥ ಮತ್ತು ದೋಷಿ ಮನೋಭಾವ ಬರದಂತೆ ತಡೆಯುತ್ತದೆ. ಮೊದಲೇ ಮುಕ್ತವಾಗಿ ಮಾತಾಡಿಕೊಂಡರೆ ರೋಗಿಗೆ ಸರಿಯಾಗಿ ಪರಾಮರಿಸಲು ಸಾಧ್ಯವಾಗುತ್ತದೆ. “ಯೋಚನೆ ಹೇಳುವವರಿಲ್ಲದೆ ಉದ್ದೇಶಗಳು ನೆರವೇರವು” ಎಂದು ಬೈಬಲ್ ಹೇಳುತ್ತದೆ.—ಜ್ಞಾನೋಕ್ತಿ 15:22.
ಸಹಾಯ ಮಾಡಿ
ಆಪ್ತರ ಮುಖ್ಯ ಜವಾಬ್ದಾರಿ ರೋಗಿ ಆರಾಮವಾಗಿರುವಂತೆ ನೋಡಿಕೊಳ್ಳೋದು. ಮರಣದಂಚಿನಲ್ಲಿರುವ ವ್ಯಕ್ತಿಗೆ ನಾವು ಅವರನ್ನು ಪ್ರೀತಿಸುತ್ತೇವೆ ಮತ್ತು ಅವರ ಜೊತೆಗಿರುತ್ತೇವೆ ಎಂದು ಭರವಸೆ ಮೂಡಿಸುವುದು ತುಂಬ ಮುಖ್ಯ. ಇದನ್ನೆಲ್ಲಾ ಹೇಗೆ ಮಾಡೋದು? ಅವರಿಗೆ ಪ್ರೋತ್ಸಾಹ ಮತ್ತು ಸಂತೋಷ ಕೊಡುವ ಸಾಹಿತ್ಯಗಳನ್ನು ಓದಿ ಮತ್ತು ಹಾಡುಗಳನ್ನು ಹಾಡಿ. ತುಂಬ ಜನರಿಗೆ ಕುಟುಂಬ ಸದಸ್ಯರು ಅವರ ಕೈ ಹಿಡಿದು ಮೃದುವಾಗಿ ಮಾತಾಡಿದರೆ ಖುಷಿಯಾಗುತ್ತದೆ.
ಭೇಟಿ ಮಾಡಲು ಬರುವವರನ್ನು ಗುರುತಿಸಲು ಸಹಾಯ ಮಾಡಿ. ಒಂದು ವರದಿ ಹೇಳುವುದೇನೆಂದರೆ, ‘ಎಲ್ಲ ಇಂದ್ರಿಯಗಳಲ್ಲಿ ಕೊನೆಯವರೆಗೆ ಕೆಲಸ ಮಾಡುವುದು ಕಿವಿ ಒಂದೇ. ಅಸ್ವಸ್ಥರಾದವರು ನಿದ್ದೆ ಹೋಗುತ್ತಿರುವಂತೆ ಕಾಣಿಸಿದರೂ ಅವರಿಗೆ ಚೆನ್ನಾಗಿ ಕೇಳಿಸುತ್ತಿರಬಹುದು. ಆದ್ದರಿಂದ ಎಚ್ಚರ ಇರುವಾಗ ಹೇಳಲಿಕ್ಕಾಗದ್ದನ್ನು ಅವರು ಮಲಗಿರುವಾಗಲೂ ಹೇಳಬೇಡಿ.’
2 ಕೊರಿಂಥ 1:8-11) ಇಂಥ ಒತ್ತಡ ಮತ್ತು ನೋವಿನಲ್ಲೂ ದೇವರಿಗೆ ಪ್ರಾರ್ಥಿಸುವುದು ಹೇಳಲಾಗದ ಮನಸ್ಶಾಂತಿಯನ್ನು ತರುತ್ತದೆ.
ಸಾಧ್ಯವಾದರೆ, ಜೊತೆಯಾಗಿ ಪ್ರಾರ್ಥಿಸಿ. ಬೈಬಲಿನಲ್ಲಿ ಒಂದು ಸನ್ನಿವೇಶದ ಬಗ್ಗೆ ಹೇಳಲಾಗಿದೆ. ಅಲ್ಲಿ ಅಪೊಸ್ತಲ ಪೌಲ ಮತ್ತು ಅವನ ಜೊತೆಗಿರುವವರು ತುಂಬ ಒತ್ತಡದಲ್ಲಿದ್ದರು, ಜೀವವನ್ನೇ ಕಳೆದುಕೊಳ್ಳುವ ಸಂದರ್ಭದಲ್ಲಿದ್ದರು. ಅವರಿಗೆ ಆ ಸಮಯದಲ್ಲಿ ಯಾವುದು ಸಹಾಯ ಮಾಡಿತು? ಪೌಲ ಅವರಿಗೆ, “ನೀವು ಸಹ ನಿಮ್ಮ ಯಾಚನೆಯ ಮೂಲಕ ನಮಗೆ ಸಹಾಯಮಾಡಬಲ್ಲಿರಿ” ಎಂದು ಹೇಳಿದನು. (ನಿಜತ್ವವನ್ನು ಸ್ವೀಕರಿಸಿ
ನಮ್ಮ ಆಪ್ತರು ಸಾಯುತ್ತಿದ್ದಾರೆ ಅನ್ನುವ ಯೋಚನೆಯೇ ಬಹಳ ನೋವನ್ನುಂಟು ಮಾಡುತ್ತದೆ. ಸಾವು ಜೀವನದ ಒಂದು ಭಾಗ ಎಂದು ಒಪ್ಪಿಕೊಳ್ಳಲು ಕಷ್ಟ ಆಗುತ್ತದೆ. ಯಾಕೆಂದರೆ ನಮ್ಮನ್ನು ಆ ರೀತಿ ಸೃಷ್ಟಿಸಲಾಗಿಲ್ಲ. (ರೋಮನ್ನರಿಗೆ 5:12) ದೇವರ ವಾಕ್ಯ ಮರಣವನ್ನು ಶತ್ರು ಎಂದು ಕರೆದಿದೆ. (1 ಕೊರಿಂಥ 15:26) ಆದ್ದರಿಂದಲೇ ನಮ್ಮ ಪ್ರಿಯರ ಮರಣದ ಬಗ್ಗೆ ಯೋಚಿಸುವುದು ತುಂಬ ಕಷ್ಟವಾಗುತ್ತದೆ.
ಆದರೆ ಮುಂದೆ ಏನೇನು ಆಗಬಹುದು ಎಂದು ಮೊದಲೇ ಯೋಚಿಸಿದರೆ ಮನೆಯವರು ಭಯವಿಲ್ಲದೆ, ರೋಗಿಯನ್ನು ಸಾಧ್ಯವಾದಷ್ಟು ಚೆನ್ನಾಗಿ ನೋಡಿಕೊಳ್ಳಲು ಆಗುತ್ತದೆ. ಇಂಥ ಸಮಯದಲ್ಲಿ ಏನೆಲ್ಲ ಆಗಬಹುದೆಂದು “ ಜೀವನದ ಕೊನೆ ದಿನಗಳು” ಎಂಬ ಚೌಕದಲ್ಲಿ ಕೊಡಲಾಗಿದೆ. ಇಲ್ಲಿ ತಿಳಿಸಿರುವ ಎಲ್ಲ ಅಂಶಗಳು ಎಲ್ಲ ರೋಗಿಗಳಲ್ಲಿ ಕಂಡುಬರಲಿಕ್ಕಿಲ್ಲ ಅಥವಾ ಅದೇ ಕ್ರಮದಲ್ಲಿ ಸಂಭವಿಸಲಿಕ್ಕಿಲ್ಲ. ಆದರೆ ಹೆಚ್ಚಿನ ರೋಗಿಗಳು ಇಲ್ಲಿನ ಕೆಲವು ಅಂಶಗಳನ್ನಾದರೂ ಅನುಭವಿಸುತ್ತಾರೆ.
ಆಪ್ತರ ಸಾವಿನ ನಂತರ, ನಿಮಗೆ ಸಹಾಯ ಮಾಡಲು ಈಗಾಗಲೇ ಒಪ್ಪಿದ್ದ ಒಬ್ಬ ಆಪ್ತ ಸ್ನೇಹಿತನನ್ನು ಸಂಪರ್ಕಿಸುವುದು ಒಳ್ಳೇದು. ರೋಗಿಯನ್ನು ನೋಡಿಕೊಳ್ಳುತ್ತಿದ್ದವರಿಗೆ ಅಥವಾ ಅವರ ಕುಟುಂಬದ ಇತರರಿಗೆ, ‘ಅವರ ನರಳಾಟ ಮುಗಿಯಿತು, ಅವರಿನ್ನು ನೋವು ಅನುಭವಿಸಬೇಕಾಗಿಲ್ಲ’ ಎಂದು ಹೇಳುವುದರಿಂದ ಸಮಾಧಾನವಾಗಬಹುದು. ಮನುಷ್ಯರನ್ನು ಸೃಷ್ಟಿಸಿರುವ ದೇವರು “ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ” ಎಂಬ ಆಶ್ವಾಸನೆ ಕೊಟ್ಟಿದ್ದಾನೆ.—ಪ್ರಸಂಗಿ 9:5.
ಸಾಂತ್ವನದ ದೇವರು
ಗಂಭೀರ ಕಾಯಿಲೆಯ ಸಮಯದಲ್ಲಿ ಮತ್ತು ಮರಣದ ನಂತರವೂ ದೇವರನ್ನು ಆತುಕೊಳ್ಳುವುದು ವಿವೇಕದ ವಿಷಯ. ಆತನು ನಮಗೆ ಇತರರ ಮಾತು ಮತ್ತು ಕ್ರಿಯೆಗಳಿಂದ ಸಹಾಯ ಮಾಡುತ್ತಾನೆ. ಡೊರೀನ್ ಹೀಗೆ ಹೇಳುತ್ತಾಳೆ: “ಬೇರೆಯವರ ಸಹಾಯವನ್ನು ತಳ್ಳಿಹಾಕಬಾರದೆಂದು ನಾನು ಕಲಿತೆ. ನಮಗೆ ಸಿಕ್ಕಿದ ಸಹಾಯದಿಂದ ಹೃದಯ ತುಂಬಿ ಬಂತು. ಯೆಹೋವನು ನಮಗೆ ‘ನಾನು ನಿಮ್ಮ ಪಕ್ಕದಲ್ಲೇ ಇದ್ದೇನೆ, ಭಯಪಡಬೇಡಿ, ನಿಮಗೆ ಸಹಾಯ ಮಾಡುತ್ತೇನೆ’ ಎಂದು ಹೇಳುತ್ತಿದ್ದಾನೆಂದು ನನಗೆ ಮತ್ತು ನನ್ನ ಗಂಡನಿಗೆ ಗೊತ್ತಿತ್ತು. ಅದನ್ನಂತೂ ನಾನು ಯಾವತ್ತೂ ಮರೆಯೋಕಾಗಲ್ಲ.”
ಹೌದು, ಯೆಹೋವ ದೇವರೇ ಸಕಲ ಸಾಂತ್ವನದ ದೇವರು. ನಮ್ಮನ್ನು ಸೃಷ್ಟಿಸಿದ ಆತನಿಗೆ ನಮ್ಮ ನೋವು ಮತ್ತು ವೇದನೆ ಅರ್ಥ ಆಗುತ್ತದೆ. ಇದನ್ನು ನಿಭಾಯಿಸಲು ಅಗತ್ಯವಿರುವ ಸಹಾಯ ಮತ್ತು ಪ್ರೋತ್ಸಾಹ ಕೊಡಲು ಯೆಹೋವನು ಆತುರದಿಂದ್ದಾನೆ. ಎಲ್ಲದಕ್ಕಿಂತ ಮುಖ್ಯವಾಗಿ, ಈ ಭೂಮಿಯಿಂದ ಮರಣವನ್ನೇ ನಿರ್ನಾಮ ಮಾಡುತ್ತೇನೆಂದು ಮತ್ತು ಈಗಾಗಲೇ ಸತ್ತಿರುವವರನ್ನು ಮತ್ತೆ ಎಬ್ಬಿಸುತ್ತೇನೆಂದು ಮಾತುಕೊಟ್ಟಿದ್ದಾನೆ. (ಯೋಹಾನ 5:28, 29; ಪ್ರಕಟನೆ 21:3, 4) ಆಗ, ನಾವೆಲ್ಲರೂ ಒಟ್ಟಾಗಿ “ಮರಣವೇ, ನಿನ್ನ ಜಯವೆಲ್ಲಿ? ಮರಣವೇ, ನಿನ್ನ ವಿಷದ ಕೊಂಡಿ ಎಲ್ಲಿ?” ಎಂಬ ಪೌಲನ ಮಾತುಗಳನ್ನು ಹೇಳಬಹುದು.—1 ಕೊರಿಂಥ 15:55.
^ ಪ್ಯಾರ. 2 ಹೆಸರುಗಳನ್ನು ಬದಲಾಯಿಸಲಾಗಿದೆ.