ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜಗತ್ತನ್ನು ಗಮನಿಸುವುದು

ಜಗತ್ತನ್ನು ಗಮನಿಸುವುದು

ಜಗತ್ತನ್ನು ಗಮನಿಸುವುದು

ಚೋಷಣ ಕುಳಿಯುಳ್ಳ ನಾಲಗೆ

ಗೋಸುಂಬೆಯು ಹಲ್ಲಿಗಳನ್ನು ಮತ್ತು ತನ್ನ ತೂಕದ 10 ಪ್ರತಿಶತದಷ್ಟು ಭಾರವುಳ್ಳ ಹಕ್ಕಿಗಳನ್ನು ಹೇಗೆ ಹಿಡಿಯಬಲ್ಲದು? ಇದುವರೆಗೆ, ಆ ಆಹಾರ ಪ್ರಾಣಿಗಳು ಗೋಸುಂಬೆಯ ಒರಟಾದ ಮತ್ತು ಅಂಟಾದ ನಾಲಗೆಗೆ ಅಂಟಿಕೊಂಡವು ಎಂದು ನಂಬಲಾಗುತ್ತಿತ್ತು. ಆದರೆ ಸಾಕಷ್ಟು ಭಾರವಿರುವ ಆಹಾರವನ್ನು ಈ ಪ್ರಾಣಿ ಹೇಗೆ ಹಿಡಿಯುತ್ತದೆ ಎಂಬುದನ್ನು ಇದು ವಿವರಿಸಲಿಲ್ಲ. ಇದನ್ನು ಕಂಡುಹಿಡಿಯಲು, ಬೆಲ್ಜಿಯಮ್‌ನ ಆ್ಯಂಟ್ವರ್ಪ್‌ನ ವಿಜ್ಞಾನಿಗಳು, ಗೋಸುಂಬೆಯು ಆಹಾರವನ್ನು ಹಿಡಿಯುವಾಗ ಹೊರಹಾಕುವ ಮಿಂಚಿನ ವೇಗದ ನಾಲಗೆಯ ಹೈಸ್ಪೀಡ್‌ ವಿಡಿಯೋ ರೆಕಾರ್ಡಿಂಗನ್ನು ಮಾಡಿದರೆಂದು ಬಿಲ್ಟ್‌ ಡೇರ್‌ ವಿಷನ್‌ಶಾಫ್ಟ್‌-ಆನ್ಲೈನ್‌ ಎಂಬ ಜರ್ಮನ್‌ ಸೈಅನ್ಸ್‌ ನ್ಯೂಸ್‌ ಸರ್ವಿಸ್‌ ವರದಿಮಾಡುತ್ತದೆ. ವೇಗದಿಂದ ಹೊರಹಾಕುವಾಗ ಗೋಸುಂಬೆಯು ನಾಲಗೆಯ ತುದಿಯಲ್ಲಿ ಒಂದು ಚೆಂಡನ್ನು ರೂಪಿಸುತ್ತದೆಂದು ವಿಜ್ಞಾನಿಗಳು ಕಂಡುಹಿಡಿದರು. ಅದು ಆಹಾರಕ್ಕೆ ಬಡಿಯುವುದಕ್ಕೆ ತುಸು ಮೊದಲು ನಾಲಗೆಯ ಎರಡು ಸ್ನಾಯುಗಳು ಸಂಕುಚಿತಗೊಂಡು ನಾಲಗೆಯ ತುದಿಯನ್ನು ಆಹಾರಕ್ಕೆ ಅಂಟಿಕೊಳ್ಳುವ ಚೋಷಣೆಯ ಕುಳಿಯಾಗಿ ರೂಪಿಸುತ್ತದೆ. (g01 7/22)

ನಿದ್ರೆ ಮತ್ತು ಸ್ಮರಣೆ

“ಮುಂದಿನ ವಾರಗಳಲ್ಲಿ ಪರಿಣಾಮಕಾರಿಯಾಗಿ ಸ್ಮರಿಸಲು ಆವಶ್ಯಕವಾಗಿರುವ ಒಂದು ಪೂರ್ವಾಪೇಕ್ಷಿತ ವಿಷಯವು” ರಾತ್ರಿಯಲ್ಲಿ ಎಚ್ಚರವಿರುವುದಲ್ಲ, ಉತ್ತಮವಾಗಿ ನಿದ್ರಿಸುವುದೇ ಆಗಿದೆ ಎಂದು ನಿದ್ರಾಸಂಶೋಧಕರು ಕಂಡುಹಿಡಿದಿದ್ದಾರೆಂದು ಲಂಡನ್‌ನ ದಿ ಇಂಡಿಪೆಂಡೆಂಟ್‌ ವಾರ್ತಾಪತ್ರಿಕೆಯು ಹೇಳುತ್ತದೆ. ಹಾರ್ವರ್ಡ್‌ ಮೆಡಿಕಲ್‌ ಸ್ಕೂಲ್‌ನ ಪ್ರೊಫೆಸರ್‌ ರಾಬರ್ಟ್‌ ಸ್ಟಿಗ್ಗೋಲ್ಡ್‌ ಇದಕ್ಕೆ 24 ಮಂದಿ ಸ್ವಯಂಸೇವಕರನ್ನು ಉಪಯೋಗಿಸಿದರು. ಅವರಲ್ಲಿ ಅರ್ಧದಷ್ಟು ಮಂದಿಯನ್ನು ಕಲಿಕೆಯ ಕಾರ್ಯಕ್ರಮದ ಬಳಿಕ ರಾತ್ರಿ ನಿದ್ರಿಸುವಂತೆ ಬಿಡಲಾಯಿತು. ಉಳಿದವರನ್ನು ಇಡೀ ರಾತ್ರಿ ಎಚ್ಚರವಾಗಿರಿಸಲಾಯಿತು. ಆ ಬಳಿಕ, ಈ ಎರಡೂ ಗುಂಪುಗಳು ಎರಡು ರಾತ್ರಿ ಸಹಜವಾಗಿ ನಿದ್ರಿಸಿದವು. ಇದು ನಿದ್ರೆ ಕಳೆದುಕೊಂಡಿದ್ದ ಗುಂಪು ತಮ್ಮ ಬಳಲಿಕೆಯನ್ನು ನಿವಾರಿಸುವಂತೆ ಸಹಾಯಮಾಡಿತು. ಸ್ಮರಣಪರೀಕ್ಷೆ ತೋರಿಸಿದ್ದೇನೆಂದರೆ, ಪ್ರಥಮ ರಾತ್ರಿಯಲ್ಲಿ ನಿದ್ರೆ ಮಾಡಿದ್ದವರು, “ವಿಶೇಷವಾದ ರೀತಿಯಲ್ಲಿ ಮತ್ತು ಹೊಂದಿಕೆಯಾಗಿ ಸ್ಮರಿಸುವ ಕೆಲಸದಲ್ಲಿ ಉತ್ತಮವಾಗಿ ಕಾರ್ಯನಡಿಸಿದರು. ಆದರೆ ಎರಡನೆಯ ಗುಂಪು ಆ ನಿದ್ರೆಯನ್ನು ಪುನಃ ಪಡೆದಿದ್ದರೂ ಯಾವುದೇ ಅಭಿವೃದ್ಧಿಯನ್ನು ಹೊಂದಿರಲಿಲ್ಲ.” ನಿದ್ರೆಯು ಸ್ಮರಣೆಗಳನ್ನು ಸಂಘಟಿಸಲು ಸಹಾಯ ಮಾಡುವುದರಿಂದ ನಿದ್ರೆಗೆ ಬದಲಿಯಾಗಿ, ವಿಶೇಷವಾಗಿ ಆದಿಯಲ್ಲಿ ಬರುವ ಗಾಢವಾದ ಅಥವಾ “ನಿಧಾನ ತರಂಗ” ನಿದ್ದೆಯ ಬದಲಿಗೆ ಅಭ್ಯಾಸಮಾಡುವುದು ಯಾವುದೇ ಪ್ರಯೋಜನವನ್ನು ತರುವುದಿಲ್ಲವೆಂದು ಈ ಸಂಶೋಧನೆಗಳು ತೋರಿಸುತ್ತವೆ.(g01 8/8)

ಪುರುಷರು ಮತ್ತು ಸ್ತ್ರೀಯರ ಕೇಳಿಸಿಕೊಳ್ಳುವಿಕೆ ವಿಭಿನ್ನ

ಸ್ತ್ರೀಯರು ಕೇಳಿಸಿಕೊಳ್ಳುವಾಗ ಮಿದುಳಿನ ಎರಡೂ ಪಕ್ಕಗಳನ್ನು ಉಪಯೋಗಿಸುತ್ತಾರೆ, ಆದರೆ ಪುರುಷರು ಒಂದು ಪಕ್ಕವನ್ನು ಮಾತ್ರ ಉಪಯೋಗಿಸುತ್ತಾರೆ ಎಂದು ಸಂಶೋಧಕರು ನಿರ್ಣಯಿಸಿದ್ದಾರೆಂದು ಡಿಸ್ಕವರಿಡಾಟ್‌ಕಾಮ್‌ ನ್ಯೂಸ್‌ ವರದಿಸಿದೆ. ಒಂದು ಅಧ್ಯಯನದಲ್ಲಿ, 20 ಮಂದಿ ಪುರುಷರೂ 20 ಮಂದಿ ಸ್ತ್ರೀಯರೂ ಒಂದು ಪುಸ್ತಕದ ಟೇಪ್‌ ರೆಕಾರ್ಡಿಂಗನ್ನು ಕೇಳಿಸಿಕೊಳ್ಳುತ್ತಿದ್ದಾಗ ಅವರ ಮಿದುಳನ್ನು ಸ್ಕ್ಯಾನ್‌ ಮಾಡಲಾಯಿತು. ಈ ಬ್ರೇನ್‌ ಸ್ಕ್ಯಾನ್‌ ತೋರಿಸಿದ್ದೇನಂದರೆ, ಪುರುಷರು ಹೆಚ್ಚಾಗಿ ಮಿದುಳಿನ ಎಡಪಕ್ಕದಿಂದ ಕೇಳಿಸಿಕೊಂಡರು. ಈ ಪಕ್ಕವು ಕೇಳಿಸಿಕೊಳ್ಳುವಿಕೆ ಮತ್ತು ಮಾತಿಗೆ ಸಂಬಂಧಿಸಿರುವ ಪಕ್ಕವಾಗಿದೆ. ಆದರೆ ಸ್ತ್ರೀಯರ ಮಿದುಳಿನ ಎರಡೂ ಪಕ್ಕಗಳಲ್ಲಿ ಚಟುವಟಿಕೆಯು ಕಂಡುಬಂತು. ಇಂಡಿಯಾನ ಯೂನಿವರ್ಸಿಟಿ ಸ್ಕೂಲ್‌ ಆಫ್‌ ಮೆಡಿಸಿನ್‌ನ ಅಸಿಸ್ಟೆಂಟ್‌ ರೇಡಿಯಾಲಜಿ ಪ್ರೊಫೆಸರರಾದ ಡಾ. ಜೋಸೆಫ್‌ ಟಿ. ಲೂರೀಟೋ ಹೇಳುವುದು: “ಭಾಷಾ ಕಾರ್ಯವಿಧಾನವು ಪುರುಷ ಮತ್ತು ಸ್ತ್ರೀಯ ಮಧ್ಯೆ ಭಿನ್ನವಾಗಿದೆಯೆಂದು ನಮ್ಮ ಸಂಶೋಧನೆ ಸೂಚಿಸುತ್ತದೆ. ಆದರೆ ಸಾಧನೆಯಲ್ಲಿ ಅವರು ಅನಿವಾರ್ಯವಾಗಿ ಭಿನ್ನರೆಂದು ಇದರ ಅರ್ಥವಲ್ಲ.” ಆದರೂ, ಸ್ತ್ರೀಯರು “ಒಂದೇ ಸಮಯದಲ್ಲಿ ಎರಡು ಸಂಭಾಷಣೆಗಳನ್ನು ಕೇಳಿಸಿಕೊಳ್ಳಶಕ್ತರು” ಎಂದು ಇತರ ಅಧ್ಯಯನಗಳು ತೋರಿಸುವಂತೆ ಕಾಣುತ್ತದೆ ಎನ್ನುತ್ತಾರೆ ಡಾ. ಲೂರೀಟೋ. (g01 8/8)

ರಷ್ಯದಲ್ಲಿನ ಸಾಕ್ಷಿಗಳಿಗೆ ಕೋರ್ಟ್‌ ವಿಜಯ

ಇಸವಿ 2001, ಫೆಬ್ರವರಿ 24ರ ದ ನ್ಯೂ ಯಾರ್ಕ್‌ ಟೈಮ್ಸ್‌ ಹೀಗೆ ವರದಿಸಿತು: “ಯೆಹೋವನ ಸಾಕ್ಷಿಗಳು ಇಂದು [ಫೆಬ್ರವರಿ 23] ಒಂದು ಮಾಸ್ಕೋ ಕೋರ್ಟಿನಲ್ಲಿ ವಿಶೇಷ ಪರಿಣಾಮವನ್ನು ತರುವ ಸಾಮರ್ಥ್ಯವಿರುವ ವಿಜಯವನ್ನು ಪಡೆದರು. ಫಿರ್ಯಾದಿ ಪಕ್ಷವು 1997ರ, ಮತ್ಸರ ಮತ್ತು ಅಸಹಿಷ್ಣುತೆಯನ್ನು ಉದ್ರೇಕಿಸುವ ಧಾರ್ಮಿಕ ಪಂಥಗಳೆದುರು ಜಾರಿಗೆ ಬಂದ ಒಂದು ಕಾನೂನಿನ ಪ್ರಕಾರ ಸಾಕ್ಷಿಗಳನ್ನು ನಿಷೇಧಿಸಲು ಪ್ರಯತ್ನಿಸಿತ್ತು.” 1999ರ ಮಾರ್ಚ್‌ 12ರಂದು, ವಿಚಾರಣೆಯನ್ನು ತಾತ್ಕಾಲಿಕವಾಗಿ ರದ್ದುಪಡಿಸಿ, ಐದು ಮಂದಿ ಪರಿಣತರು ಸಾಕ್ಷಿಗಳ ನಂಬಿಕೆಗಳನ್ನು ಪರೀಕ್ಷಿಸುವಂತೆ ನೇಮಿಸಲಾಯಿತು. ಈ ಮೊಕದ್ದಮೆ ಸುಮಾರು ಎರಡು ವರ್ಷಕಾಲ ವಿರಾಮದಲ್ಲಿತ್ತು. 2001ರ ಫೆಬ್ರವರಿ 6ರಂದು ಇದು ಪುನಃ ಆರಂಭಗೊಂಡಾಗ, ಫಿರ್ಯಾದಿ ಪಕ್ಷದ ಆರೋಪಕ್ಕೆ ಆಧಾರವಿಲ್ಲವೆಂದು ಪತ್ತೆಹಚ್ಚಲು ಕೋರ್ಟಿಗೆ ಮೂರು ವಾರಗಳಿಗಿಂತಲೂ ಕಡಿಮೆ ಸಮಯ ಹಿಡಿಯಿತು. ಆದರೆ, ಮಾಸ್ಕೋ ಸಿಟಿ ಕೋರ್ಟ್‌ ಪುನರ್ವಿಚಾರಣೆ ನಡೆಸುವಂತೆ ಫಿರ್ಯಾದಿ ಪಕ್ಷವು ಕೇಳಿಕೊಂಡಿತು. ಮೇ 30ರಂದು ಇದಕ್ಕೆ ಅಪ್ಪಣೆ ಸಿಕ್ಕಿ, ಮೊಕದ್ದಮೆಯನ್ನು ಪುನಃ ವಿಚಾರಿಸುವಂತೆ ಟ್ರೈಯಲ್‌ ಕೋರ್ಟಿಗೆ ವಾಪಸ್ಸು ಕಳುಹಿಸಲಾಯಿತು. ಲಾಸ್‌ ಆ್ಯಂಜಲೀಸ್‌ ಟೈಮ್ಸ್‌ ಹೇಳಿದ್ದು: “ಅನೇಕ ಪಂಥಗಳನ್ನು ಕಷ್ಟಕರವಾದ ಕಾರ್ಯವಿಧಾನದಲ್ಲಿ ರಿಜಿಸ್ಟರ್‌ ಮಾಡುವಂತೆ ನಿರ್ಬಂಧಿಸಿದ, 1997ರ ಧಾರ್ಮಿಕ ಕಾಯಿದೆಯ ಪ್ರಧಾನ ಪ್ರತಿಪಾದಕರಲ್ಲಿ, ಮಿಷನೆರಿ ಕಾರ್ಯಗಳನ್ನು ಕಟುವಾಗಿ ವಿರೋಧಿಸುವ ರಷ್ಯನ್‌ ಆರ್ತಡಾಕ್ಸ್‌ ಚರ್ಚು ಒಂದಾಗಿತ್ತು.” (g01 8/22)