ಕಿವಿಗೊಡಿರಿ ಹಾಗೂ ಕಲಿಯಿರಿ
ಕಿವಿಗೊಡಿರಿ ಹಾಗೂ ಕಲಿಯಿರಿ
“ನಮಗಿರುವ ತಿಳಿವಳಿಕೆಯಲ್ಲಿ 85 ಪ್ರತಿಶತವನ್ನು ನಾವು ಕಲಿತಿರುವುದು ಕಿವಿಗೊಡುವುದರ ಮೂಲಕವೇ,” ಎನ್ನುತ್ತದೆ ಟೊರಾಂಟೊ ಸ್ಟಾರ್ ವಾರ್ತಾಪತ್ರಿಕೆಯಲ್ಲಿನ ಒಂದು ವರದಿ. ನಾವು ಹೆಚ್ಚು ಸಮಯವನ್ನು ಕಿವಿಗೊಡುವುದರಲ್ಲಿ ಕಳೆಯುತ್ತೇವಾದರೂ, ನಾವು ಅಪಕರ್ಷಿಸಲ್ಪಡುತ್ತೇವೆ ಅಥವಾ ಬೇರೇನನ್ನೊ ಮಾಡುವುದರಲ್ಲಿ ತಲ್ಲೀನರಾಗಿರುತ್ತೇವೆ ಅಥವಾ ನಾವೇನನ್ನು ಕೇಳುತ್ತೇವೊ ಅದರಲ್ಲಿ 75 ಪ್ರತಿಶತದಷ್ಟನ್ನು ಮರೆತುಬಿಡುತ್ತೇವೆ. ಈ ಗಮನಾರ್ಹವಾದ ಸಂಖ್ಯಾಸಂಗ್ರಹಣವು, ಕಿವಿಗೊಡುವುದಕ್ಕಾಗಿರುವ ನಮ್ಮ ಸಾಮರ್ಥ್ಯವನ್ನು ಬೆಳೆಸುವ ಆವಶ್ಯಕತೆಯನ್ನು ಎತ್ತಿ ತೋರಿಸುತ್ತದೆ.
ಆ ವರದಿಗನುಸಾರ, “ಕಿವಿಗೊಡುವ ವಿಷಯದಲ್ಲಿರುವ ನ್ಯೂನ ಕೌಶಲಗಳು ಸಮಾಜದ ಅನೇಕ ಸಮಸ್ಯೆಗಳಿಗೆ ಮೂಲಕಾರಣವಾಗಿದೆ.” ರಿಬೆಕ ಶೇಫರ್ ಎಂಬ ವಾಕ್ರೋಗಶಾಸ್ತ್ರಜ್ಞೆ ಮತ್ತು ವಾಕ್ಸಂಪರ್ಕ ಪರಿಣತೆ ಅಭಿಪ್ರಯಿಸುವುದೇನಂದರೆ, ಆತ್ಮಹತ್ಯೆ, ಶಾಲಾ ಹಿಂಸಾಚಾರ, ಕುಟುಂಬಗಳ ಒಡೆತ ಮತ್ತು ಅಮಲೌಷಧದ ದುರುಪಯೋಗಗಳಿಗೆ ಇದು ಅನೇಕವೇಳೆ ಒಂದು ಕಾರಣವಾಗಿರುತ್ತದೆ.
ಜನರು ವಿಭಿನ್ನ ರೀತಿಗಳಲ್ಲಿ ಕಿವಿಗೊಡುತ್ತಾರೆಂದು ಸಮಾಜ ವಿಜ್ಞಾನಿಗಳು ಅವಲೋಕಿಸುತ್ತಾರೆ. ಕೆಲವರು, ಜನರ ಕುರಿತಾದ ವಿಷಯಗಳನ್ನು ಕೇಳಿಸಿಕೊಳ್ಳುವುದರಲ್ಲಿ ಮತ್ತು ಒಂದು ಕಥೆಯಲ್ಲಿ ಕೂಡಿಕೊಂಡಿರುವ ವರ್ಣರಂಜಿತ ವಿವರಣೆಗಳಿಗೆ ಕಿವಿಗೊಡುವುದರಲ್ಲಿ ಆಸಕ್ತರಾಗಿರುತ್ತಾರೆ. ಇತರರು ಆ ಕಥೆಯಲ್ಲಿ ನಡೆದ ಘಟನೆಗಳ ಕುರಿತು ಕೇಳಿಸಿಕೊಳ್ಳುವುದರಲ್ಲಿ ಆಸಕ್ತರಾಗಿದ್ದು, ಮಾತಾಡುವವನು ವಿಷಯವನ್ನು ಬೇಗನೆ ಹೇಳುವಂತೆ ಅಪೇಕ್ಷಿಸುತ್ತಾರೆ. ಸ್ಟಾರ್ ವಾರ್ತಾಪತ್ರಿಕೆ ಹೇಳುವುದು: “ಹೀಗೆ, ಜನಾಸಕ್ತ ಕಿವಿಗೊಡುವವರ ಮತ್ತು ಘಟನಾಸಕ್ತ ಕಿವಿಗೊಡುವವರ ಮಧ್ಯೆ ನಡೆಯುವ ಸಂಭಾಷಣೆಯಲ್ಲಿ ಸಂಪರ್ಕವು ಮುರಿದು ಬೀಳುವುದನ್ನು ನಾವು ಅಪೇಕ್ಷಿಸಬಹುದು.”
ಆದುದರಿಂದ ಸಕಾರಣದಿಂದಲೇ ಯೇಸು, “ನೀವು ಹೇಗೆ ಕಿವಿಗೊಡಬೇಕೋ ನೋಡಿಕೊಳ್ಳಿರಿ” ಎಂದು ಒತ್ತಿಹೇಳಿದನು. (ಓರೆ ಅಕ್ಷರಗಳು ನಮ್ಮವು.) (ಲೂಕ 8:18) ಒಳ್ಳೆಯದಾಗಿ ಕಿವಿಗೊಡುವುದು ಸಭ್ಯ ನಡತೆಯನ್ನು ತೋರಿಸುತ್ತದೆ. ಒಳ್ಳೆಯ ಸಂಭಾಷಣೆಯಲ್ಲಿ ಇದು ಮಹತ್ವವುಳ್ಳ ಭಾಗವಾಗಿದೆ. ಸಂಭಾಷಣೆಯ ಸಮಯದಲ್ಲಿ ಕಿವಿಗೊಡುವುದು ಹೇಗೆ ಎಂಬುದಕ್ಕಿರುವ ಪ್ರಾಯೋಗಿಕ ಸೂಚನೆಗಳಲ್ಲಿ, ಅಪಕರ್ಷಣೆಗಳನ್ನು ಅಲಕ್ಷಿಸುವುದು, ತುಸು ಮುಂದಕ್ಕೆ ಓಲಿಕೊಂಡು ಕಿವಿಗೊಡುವುದು, ದೃಷ್ಟಿಸಂಪರ್ಕದಿಂದ ಕ್ರಿಯಾಶೀಲ ಪ್ರತ್ಯುತ್ತರವನ್ನು ಕೊಡುವುದು ಮತ್ತು ತಲೆಯಲ್ಲಾಡಿಸುವುದು ಎಂಬ ವಿಷಯಗಳು ಸೇರಿವೆ. ನಮ್ಮ ಕಲಿಯುವಿಕೆಯಲ್ಲಿ ಹೆಚ್ಚಿನದ್ದು ಕಾರ್ಯಸಾಧಕವಾದ ಕಿವಿಗೊಡುವಿಕೆಯ ಮೇಲೆ ಹೊಂದಿಕೊಂಡಿರುವುದರಿಂದ, ಗಮನಕೊಡುವಿಕೆಯು ನಾವೆಲ್ಲರೂ ಪ್ರಯತ್ನಪಟ್ಟು ಬೆಳೆಸುತ್ತಾ ಹೋಗಬೇಕಾದ ವಿಷಯವಾಗಿದೆ. (g02 4/8)