ನನ್ನ ಕೋಪಕ್ಕೆ ಹೇಗೆ ಕಡಿವಾಣ ಹಾಕಲಿ?
ಯುವ ಜನರು ಪ್ರಶ್ನಿಸುವುದು
ನನ್ನ ಕೋಪಕ್ಕೆ ಹೇಗೆ ಕಡಿವಾಣ ಹಾಕಲಿ?
ನಿಮಗೆ ಯಾವಾಗೆಲ್ಲ ಕೋಪ ಬರುತ್ತದೆ?
❑ ಯಾವತ್ತೂ ಇಲ್ಲ
❑ ಪ್ರತಿ ತಿಂಗಳು
❑ ಪ್ರತಿ ವಾರ
❑ ಪ್ರತಿ ದಿನ
ಹೆಚ್ಚಾಗಿ ನಿಮಗೆ ಸಿಟ್ಟು ಬರಿಸುವವರು ಯಾರು?
❑ ಯಾರೂ ಇಲ್ಲ
❑ ಸಹಪಾಠಿಗಳು
❑ ಹೆತ್ತವರು
❑ ಒಡಹುಟ್ಟಿದವರು
❑ ಇತರರು
ಹೆಚ್ಚಾಗಿ ನಿಮಗೆ ಸಿಟ್ಟೇರಿಸುವ ಒಂದು ಸನ್ನಿವೇಶವನ್ನು ಕೆಳಗೆ ಬರೆಯಿರಿ.
❑ .....
ನೀವು ಒಂದುವೇಳೆ “ಯಾವತ್ತೂ ಇಲ್ಲ” ಮತ್ತು “ಯಾರೂ ಇಲ್ಲ” ಎಂಬದಕ್ಕೆ ✔ ಹಾಕಿ, ನಿಮಗೆ ಕೊನೆಯ ಸಾಲುಗಳಲ್ಲಿ ಬರೆಯಲು ಏನೂ ಇಲ್ಲದಿರುವಲ್ಲಿ ಶಹಬಾಸ್! ಕೋಪ ನಿಮ್ಮ ಹತೋಟಿಯಲ್ಲಿದೆ ಎಂದಾಯಿತು.
ಆದರೆ ಕಿರಿಕಿರಿಯಾದಾಗ ಒಬ್ಬೊಬ್ಬರ ಪ್ರತಿಕ್ರಿಯೆ ಒಂದೊಂದು ರೀತಿ ಇರುತ್ತದೆ. ಎಲ್ಲರಲ್ಲೂ ಒಂದಲ್ಲ ಒಂದು ಬಲಹೀನತೆ ಇದ್ದೇ ಇರುತ್ತದೆ. “ನಾವೆಲ್ಲರೂ ಅನೇಕ ಬಾರಿ ಎಡವುತ್ತೇವೆ” ಎಂದು ಬರೆದನು ಬೈಬಲಿನ ಒಬ್ಬ ಲೇಖಕನಾದ ಯಾಕೋಬ. (ಯಾಕೋಬ 3:2) 17 ವರ್ಷದ ಸಾರಿಕಾಳಂತೆ * ನಿಮಗೂ ಅನಿಸಬಹುದು. ಅವಳನ್ನುವುದು: “ಮೊದಲೇ ನನಗೆ ಮೂಗಿನ ತುದಿಯಲ್ಲಿ ಕೋಪ. ಸಿಟ್ಟು ನೆತ್ತಿಗೇರಿದರೆ ಯಾರಂತ ನೋಡುವುದಿಲ್ಲ. ಅಪ್ಪಅಮ್ಮ ಇರಲಿ, ತಂಗಿ ಇರಲಿ, ಕೆಲವೊಮ್ಮೆ ನನ್ನ ನಾಯಿ ಮೇಲೂ ಸಿಟ್ಟನ್ನು ತೋರಿಸಿಬಿಡುತ್ತೇನೆ.”
ಮಿಥ್ಯ x ಸತ್ಯ
ಕೋಪಕ್ಕೆ ಮೂಗುದಾರ ಹಾಕಲು ನಿಮಗೆ ಕಷ್ಟವೋ? ಇದೋ ಇಲ್ಲಿದೆ ಸಹಾಯ! ಆದರೆ ಮೊದಲು ಕೆಲವು ತಪ್ಪಾಭಿಪ್ರಾಯಗಳನ್ನು ತೊಲಗಿಸೋಣ.
◼ ಮಿಥ್ಯ: “ನನ್ನ ಕುಟುಂಬದಲ್ಲಿ ಹೆಚ್ಚಿನವರಿಗೆ ಮೂಗಿನ ಮೇಲೆ ಕೋಪ. ನಾನೂ ಹಾಗೆ. ನನ್ನ ಕೋಪವನ್ನು ನಿಯಂತ್ರಿಸಲು ಆಗುವುದೇ ಇಲ್ಲ!”
ಸತ್ಯ: ನಿಮ್ಮ “ಕ್ರೋಧಶೀಲ” ಮನೋಭಾವಕ್ಕೆ ಕಾರಣ ಕುಟುಂಬ, ಪರಿಸರ ಇತ್ಯಾದಿ ಇರಬಹುದು. ಆದರೆ ಆ ಕ್ರೋಧವನ್ನು ತೋರಿಸುವುದು ತೋರಿಸದಿರುವುದು ನಿಮ್ಮ ಕೈಯಲ್ಲಿದೆ. (ಜ್ಞಾನೋಕ್ತಿ 29:22) ನಿಮ್ಮ ಭಾವನೆಗಳನ್ನು ನೀವು ನಿಯಂತ್ರಿಸುತ್ತೀರೋ ಅಥವಾ ಭಾವನೆಗಳು ನಿಮ್ಮನ್ನು ನಿಯಂತ್ರಿಸುತ್ತವೋ? ಎಂಬುದೇ ಈಗಿರುವ ಪ್ರಶ್ನೆ. ಇತರರು ತಮ್ಮ ಕೋಪಕ್ಕೆ ಕಡಿವಾಣಹಾಕಲು ಕಲಿತ್ತಿದ್ದಾರೆ. ಆದ್ದರಿಂದ ನಿಮಗೂ ಅದು ಸಾಧ್ಯ!—ಕೊಲೊಸ್ಸೆ 3:8-10.
ಮುಖ್ಯ ವಚನ: “ಎಲ್ಲ ದ್ವೇಷಭರಿತ ವೈಷಮ್ಯ, ಕೋಪ, ಕ್ರೋಧ, ಕಿರಿಚಾಟ ಮತ್ತು ನಿಂದಾತ್ಮಕ ಮಾತುಗಳನ್ನು . . . ನಿಮ್ಮಿಂದ ತೆಗೆದುಹಾಕಿರಿ.”—ಎಫೆಸ 4:31.
◼ ಮಿಥ್ಯ: “ಸಿಟ್ಟನ್ನು ಮನಸ್ಸಿನಲ್ಲಿಟ್ಟುಕೊಂಡು ಒಳಗೊಳಗೆ ಕುದಿಯುವ ಬದಲು, ಅದನ್ನು ಹೊರಹಾಕುವುದು ಒಳ್ಳೇದಲ್ಲವಾ?”
ಸತ್ಯ: ಸಿಟ್ಟನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದೂ ಆರೋಗ್ಯಕ್ಕೆ ಹಾನಿಕರ ಹೊರಹಾಕುವುದೂ ಹಾನಿಕರ. ನಿಮ್ಮ ಅಸಹನೆಯ ಬಗ್ಗೆ “ಮನಬಿಚ್ಚಿ” ಮಾತಾಡುವುದಕ್ಕೂ ಒಂದು ಸಮಯವಿದೆ ನಿಜ. (ಯೋಬ 10:1, NIBV) ಆದರೆ ಇದರರ್ಥ ನೀವು ಎಲ್ಲದಕ್ಕೂ ಬುಸುಗುಟ್ಟುತ್ತಾ ಇರಬೇಕೆಂದಿಲ್ಲ. ಕೆಂಡಕಾರದೆ ನಿಮ್ಮ ತೀಕ್ಷ್ಣ ಭಾವನೆಗಳನ್ನು ವ್ಯಕ್ತಪಡಿಸಲು ಖಂಡಿತ ಕಲಿಯಬಲ್ಲಿರಿ.
ಮುಖ್ಯ ವಚನ: ‘ಕರ್ತನ ದಾಸನು ಜಗಳವಾಡದೆ ಎಲ್ಲರೊಂದಿಗೆ ಕೋಮಲಭಾವದಿಂದಿರಬೇಕು; ಅವನು ತಾಳಿಕೊಳ್ಳುವವನು ಆಗಿರಬೇಕು.’—2 ತಿಮೊಥೆಯ 2:24.
◼ ಮಿಥ್ಯ: “ನಾನು ‘ಎಲ್ಲರೊಂದಿಗೆ ಕೋಮಲಭಾವದಿಂದ’ ನಡೆದುಕೊಂಡರೆ ಮುಗೀತು ಕಥೆ. ನನಗೆ ಬಿಡಿಗಾಸು ಬೆಲೆಯೂ ಇರಲಿಕ್ಕಿಲ್ಲ.”
ಸತ್ಯ: ಸ್ವನಿಯಂತ್ರಣ ತೋರಿಸಲಿಕ್ಕೆ ಮನೋಬಲ ಅಗತ್ಯವೆಂದು ಜನರು ಗ್ರಹಿಸುತ್ತಾರೆ. ಆದ್ದರಿಂದ ನೀವದನ್ನು ತೋರಿಸಿದರೆ, ಅವರು ನಿಮಗೆ ಹೆಚ್ಚು ಮರ್ಯಾದೆ ಕೊಡುವರು.
ಮುಖ್ಯ ವಚನ: “ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರೊಂದಿಗೆ ಶಾಂತಿಶೀಲರಾಗಿರಿ.”—ರೋಮನ್ನರಿಗೆ 12:18.
ಕೋಪಕ್ಕೆ ಕಡಿವಾಣ ಹಾಕುವ ವಿಧ
ನೀವು ಸಿಡುಕು ಸ್ವಭಾವದವರಾಗಿರುವಲ್ಲಿ ಬಹುಶಃ ಈ ತನಕ, ನಿಮ್ಮ ಕೋಪಕ್ಕೆ ಬೇರೆಯವರಿಗೆ ಬೊಟ್ಟುಮಾಡುತ್ತಿದ್ದಿರಿ. ಉದಾಹರಣೆಗೆ, “ಅವಳೇ ನನಗೆ ಸಿಟ್ಟುಬರಿಸಿದ್ದು” ಅಥವಾ “ಅವನು ನನಗೆ ಕೋಪ ಬರುವ ಹಾಗೆ ಮಾಡಿದ” ಎಂದು ಹೇಳಿದ್ದೀರೋ? ಹಾಗಿರುವಲ್ಲಿ, ನಿಮ್ಮ ಭಾವನೆಗಳ ರಿಮೋಟ್ ಕಂಟ್ರೋಲ್ ಬೇರೆಯವರ ಕೈಯಲ್ಲಿದೆ ಎಂದಾಯಿತು. ಆ ಕಂಟ್ರೋಲ್ ಪುನಃ ನಿಮ್ಮ ಕೈಗೆ ಬರುವಂತೆ ಏನು ಮಾಡಬಲ್ಲಿರಿ? ಮುಂದಿನ ಸಲಹೆಗಳನ್ನು ಪ್ರಯತ್ನಿಸಿ ನೋಡಿ.
ನೀವೇನು ಮಾಡುತ್ತೀರೋ ಅದಕ್ಕೆ ನೀವೇ ಹೊಣೆಯೆಂದು ಒಪ್ಪಿಕೊಳ್ಳಿ. ಮೊಟ್ಟಮೊದಲು ನೀವು ಒಪ್ಪಿಕೊಳ್ಳಬೇಕಾದ ಸಂಗತಿಯೇನೆಂದರೆ, ನಿಮ್ಮಲ್ಲಿ ಕ್ರೋಧಬರುವಂತೆ ಮಾಡಲು ಬರೀ ನಿಮಗೆ ಮಾತ್ರ ಸಾಧ್ಯ. ಆದುದರಿಂದ ಬೇರೆಯವರಿಗೆ ಬೊಟ್ಟುಮಾಡುವಂಥ ಮಾತುಗಳನ್ನು ನಿಮ್ಮ ಶಬ್ದಭಂಡಾರದಿಂದ ಅಳಿಸಿಹಾಕಿ. “ಅವಳೇ ನನಗೆ ಸಿಟ್ಟುಬರಿಸಿದ್ದು” ಎಂದು ಹೇಳುವ ಬದಲು “ನಾನೇ ಸಿಟ್ಟುಮಾಡಿಕೊಂಡೆ” ಎಂದು ಒಪ್ಪಿಕೊಳ್ಳಿ. “ಅವನು ನನಗೆ ಕೋಪ ಬರುವ ಹಾಗೆ ಮಾಡಿದ” ಎಂದು ಹೇಳುವ ಬದಲು “ನಾನೇ ಸ್ವಲ್ಪ ವಿಪರೀತಕ್ಕೆ ಹೋದೆ” ಎಂದು ಅಂಗೀಕರಿಸಿ. ನೀವೇನು ಮಾಡುತ್ತೀರೋ ಅದಕ್ಕೆ ನೀವೇ ಜವಾಬ್ದಾರರೆಂದು ಒಪ್ಪಿಕೊಂಡರೆ, ನಿಮ್ಮ ಪ್ರತಿಕ್ರಿಯೆಯನ್ನು ನಿಯಂತ್ರಿಸಲು ನಿಮಗೆ ಸುಲಭವಾಗುವುದು.—ಗಲಾತ್ಯ 6:5.
ನಿಮಗೆ ಯಾವಾಗೆಲ್ಲ ಕೋಪ ಬರುತ್ತದೆಂದು ಯೋಚಿಸಿ. “ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು; ಬುದ್ಧಿಹೀನನು ಮುಂದೆ ಹೋಗಿ ನಷ್ಟಪಡುವನು” ಎನ್ನುತ್ತದೆ ಬೈಬಲ್. (ಜ್ಞಾನೋಕ್ತಿ 22:3) ಹಾಗಾದರೆ ಮುಖ್ಯ ಸಂಗತಿಯೇನೆಂದರೆ, ನಿಮಗೆ ಕೋಪ ಬರುವ ಸನ್ನಿವೇಶದ ಬಗ್ಗೆ ಮೊದಲೇ ಯೋಚಿಸಿ. “ನಾನು ಹೆಚ್ಚಾಗಿ ಉರಿದುಬೀಳುವುದು ಯಾವಾಗ?” ಎಂದು ನಿಮ್ಮನ್ನೇ ಕೇಳಿಕೊಳ್ಳಿ. ಉದಾಹರಣೆಗೆ ಮೇಘನಾ ಎಂಬ ಹುಡುಗಿ ಹೇಳುವುದು: “ನಾನು ನೈಟ್ ಶಿಫ್ಟಲ್ಲಿ ಕೆಲಸ ಮಾಡುತ್ತೇನೆ. ಕೆಲಸ ಮುಗಿಯುವಷ್ಟರಲ್ಲಿ ತುಂಬ ಸುಸ್ತಾಗಿಬಿಡುತ್ತೇನೆ. ಅಂಥ ಸಮಯಗಳಲ್ಲಿ ಚಿಕ್ಕ ಚಿಕ್ಕ ವಿಷಯಕ್ಕೂ ಸಿಡಿದುಬೀಳುತ್ತೇನೆ.”
ಪ್ರಶ್ನೆ: ನಿಮಗೆ ಯಾವ ಸನ್ನಿವೇಶಗಳಲ್ಲಿ ಸಿಟ್ಟುಬರಬಹುದು?
.....
ಉತ್ತಮವಾಗಿ ಪ್ರತಿಕ್ರಿಯಿಸಲು ಈಗಲೇ ಯೋಜಿಸಿರಿ. ನೀವು ಕೆರಳಿದಾಗ ದೀರ್ಘ ಉಸಿರೆಳೆದು, ಧ್ವನಿಯನ್ನು ತಗ್ಗಿಸಿ, ನಿಧಾನವಾಗಿ ಮಾತಾಡಿರಿ. ಆರೋಪಿಸುವ ಮಾತುಗಳನ್ನು (“ಏಯ್ ಕಳ್ಳ! ಹೇಳದೆಕೇಳದೆ ನನ್ನ ಸ್ವೆಟರ್ ತೆಕ್ಕೊಂಡಿಯ!”) ಹೇಳುವ ಬದಲು ನಿಮ್ಮ ಮೇಲಾದ ಪರಿಣಾಮವನ್ನು ತಿಳಿಸಿರಿ. (“ನನಗೆ ಸ್ವೆಟರ್ ಬೇಕಾದಾಗಲೆಲ್ಲ ಹುಡುಕಿ, ಹುಡುಕಿ ಸಾಕಾಗುತ್ತದೆ. ನನ್ನನ್ನು ಒಂದು ಮಾತು ಕೇಳದೆ ನೀನು ತಕ್ಕೊಂಡು ಹೋಗಿದ್ದೀ ಎಂದು ಆಮೇಲೆ ಗೊತ್ತಾಗುವಾಗ ನನಗೆ ತುಂಬ ಬೇಜಾರಾಗುತ್ತದೆ.”)
ಹೀಗೆ ಮಾಡಿ: ಇತ್ತೀಚೆಗೆ ನೀವು ಸಿಡಿಮಿಡಿಗೊಂಡ ಸಂದರ್ಭವನ್ನು ನೆನಪಿಸಿಕೊಳ್ಳಿ.
1. ನಿಮಗೆ ಸಿಟ್ಟೆಬ್ಬಿಸಿದ ಸಂಗತಿ ಯಾವುದು?
.....
2. ನಿಮ್ಮ ಪ್ರತಿಕ್ರಿಯೆ ಹೇಗಿತ್ತು? (ಏನು ಹೇಳಿದ್ದಿರಿ/ಮಾಡಿದ್ದಿರಿ?)
.....
3. ನೀವು ಹೇಗೆ ಉತ್ತಮವಾಗಿ ಪ್ರತಿಕ್ರಿಯಿಸಬಹುದಿತ್ತು?
.....
ಪರಿಣಾಮಗಳ ಬಗ್ಗೆ ಯೋಚಿಸಿ. ಇದಕ್ಕೆ ಹಲವಾರು ಬೈಬಲ್ ಮೂಲತತ್ತ್ವಗಳು ನೆರವಾಗುವವು. ಉದಾಹರಣೆಗೆ:
◼ ಜ್ಞಾನೋಕ್ತಿ 12:18: “ಕತ್ತಿತಿವಿದ ಹಾಗೆ ದುಡುಕಿ ಮಾತಾಡುವವರುಂಟು.” ಮಾತುಗಳು ಮನಸ್ಸಿಗೆ ಗಾಯ ಮಾಡಬಲ್ಲವು. ಸಿಟ್ಟಿನಿಂದ ಏನಾದರೂ ಹೇಳಿದರಂತೂ ಆಮೇಲೆ ನೀವು, ‘ಹಾಗೆ ಹೇಳಬಾರದಿತ್ತು’ ಎಂದು ಪರಿತಪಿಸುವಿರಿ.
◼ ಜ್ಞಾನೋಕ್ತಿ 29:11: “ಮೂಢನು ತನ್ನ ಕೋಪವನ್ನೆಲ್ಲಾ ತೋರಿಸುವನು; ಜ್ಞಾನಿಯು ತನ್ನ ಕೋಪವನ್ನು ತಡೆದು ಶಮನಪಡಿಸಿಕೊಳ್ಳುವನು.” ಕೊನೆಯಲ್ಲಿ, ನಿಮ್ಮ ಬೈಗುಳದ ಸುರಿಮಳೆಯಿಂದ ಬೇರೆಯವರ ದೃಷ್ಟಿಯಲ್ಲಿ ಮೂರ್ಖರಾಗಿ ಕಾಣುವವರು ನೀವೇ.
◼ ಜ್ಞಾನೋಕ್ತಿ 14:30: “ಶಾಂತಿಗುಣವು ದೇಹಕ್ಕೆ ಜೀವಾಧಾರವು.” ಕೋಪ ನಿಮ್ಮ ಆರೋಗ್ಯಕ್ಕೆ ಕಂಟಕ! ಅನಿತಾ ಎಂಬ ಹುಡುಗಿ ಅನ್ನುವುದು: “ನನ್ನ ಕುಟುಂಬದಲ್ಲಿ ಹೆಚ್ಚಿನವರಿಗೆ ಹೈ ಬಿಪಿ ಇದೆ. ಅಲ್ಲದೆ ನನಗೆ ಮಾನಸಿಕ ಒತ್ತಡ ಬೇರೆ ಇದೆ. ಆದ್ದರಿಂದ ಸಿಟ್ಟುತೋರಿಸುವುದನ್ನು ಆದಷ್ಟು ತಡೆಯುತ್ತೇನೆ.”
ಇದರಿಂದ ಪಾಠವೇನು? ನೀವೇನು ಹೇಳುತ್ತೀರೋ ಮಾಡುತ್ತೀರೋ ಅದರ ಪರಿಣಾಮಗಳನ್ನು ಯೋಚಿಸಿರಿ. 18 ವರ್ಷದ ಹೇಮಾ ಹೇಳುವುದು: “‘ಈ ವ್ಯಕ್ತಿ ಮೇಲೆ ನಾನು ಸಿಟ್ಟು ತೋರಿಸಿದರೆ ಏನಾಗಬಹುದು? ಅವನು/ಳು ನನ್ನ ಬಗ್ಗೆ ಏನು ನೆನಸ್ಯಾನು/ಳು? ಅದು ನಮ್ಮ ಸಂಬಂಧಕ್ಕೆ ಹುಳಿ ಹಿಂಡುವುದೋ? ನನ್ನೊಟ್ಟಿಗೆ ಯಾರಾದರೂ ಹಾಗೆ ನಡೆದುಕೊಳ್ಳುತ್ತಿದ್ದರೆ ನನಗೆ ಹೇಗನಿಸುತ್ತಿತ್ತು?’ ಎಂದು ನನ್ನನ್ನೇ ಪ್ರಶ್ನಿಸುತ್ತೇನೆ.” ನೀವು ಸಹ ಮಾತಾಡುವ ಮುಂಚೆ ಇಲ್ಲವೆ ಪತ್ರ, ಫೋನ್, ಚ್ಯಾಟ್, ಎಸ್‌ಎಮ್‌ಎಸ್ ಅಥವಾ ಇ-ಮೇಲ್‌ನಲ್ಲಿ ಸಂದೇಶ ಕಳುಹಿಸುವ ಮುಂಚೆ ಇದೇ ರೀತಿಯ ಪ್ರಶ್ನೆಗಳನ್ನು ಕೇಳಿಕೊಳ್ಳಬಹುದು.
ಪ್ರಶ್ನೆ: ಯಾರ ಮೇಲಾದರೂ ನಿಮಗೆ ಸಿಟ್ಟುಬಂದಾಗ ನೀವು ಅವರಿಗೆ ಖಾರವಾದ ಸಂದೇಶ ಕಳುಹಿಸಿದರೆ ಏನಾಗಬಹುದು?
.....
ಸಹಾಯ ಪಡೆದುಕೊಳ್ಳಿ. “ಕಬ್ಬಿಣವು ಕಬ್ಬಿಣವನ್ನು ಹೇಗೋ ಮಿತ್ರನು ಮಿತ್ರನ ಬುದ್ಧಿಯನ್ನು ಹಾಗೆ ಹರಿತಮಾಡುವನು” ಎನ್ನುತ್ತದೆ ಜ್ಞಾನೋಕ್ತಿ 27:17. ಸಿಟ್ಟೇರಿಸುವಂಥ ಸನ್ನಿವೇಶಗಳಲ್ಲಿ ಹೇಗೆ ಶಾಂತರಾಗಿರುತ್ತಾರೆಂದು ಅಪ್ಪ/ಅಮ್ಮ ಅಥವಾ ಪ್ರೌಢ ಸ್ನೇಹಿತರೊಬ್ಬರನ್ನು ಏಕೆ ಕೇಳಬಾರದು?
ನೀವೆಷ್ಟು ಪ್ರಗತಿಮಾಡಿದ್ದೀರೆಂದು ಗಮನಿಸುತ್ತಾ ಇರಿ. ಡೈರಿ ಬರೆಯಿರಿ, ನೀವೆಷ್ಟು ಪ್ರಗತಿಮಾಡಿದ್ದೀರೆಂದು ಗಮನವಿಡಿ. ನೀವು ಸಿಟ್ಟುಗೊಂಡಾಗಲೆಲ್ಲ (1) ಏನು ನಡೆಯಿತು, (2) ನೀವು ಹೇಗೆ ಪ್ರತಿಕ್ರಿಯಿಸಿದ್ದಿರಿ ಮತ್ತು (3) ಹೇಗೆ ಉತ್ತಮ ರೀತಿಯಲ್ಲಿ ಪ್ರತಿಕ್ರಿಯಿಸಬಹುದಿತ್ತು ಎಂಬದನ್ನು ಬರೆದಿಡಿ. ನೀವು ಉತ್ತಮ ಪ್ರತಿಕ್ರಿಯೆ ಎಂದು ಏನನ್ನು ಬರೆಯುತ್ತೀರೋ ಕಾಲಾನಂತರ ಅದು ಯಾವುದೇ ಸ್ಫೋಟಕ ಸನ್ನಿವೇಶದಲ್ಲಿ ನಿಮ್ಮ ಪ್ರಥಮ ಪ್ರತಿಕ್ರಿಯೆ ಆಗುವುದು! (g09-E 09)
“ಯುವ ಜನರು ಪ್ರಶ್ನಿಸುವುದು” ಲೇಖನಮಾಲೆಯ ಹೆಚ್ಚಿನ ಲೇಖನಗಳು www.watchtower.org/ype ವೆಬ್‌ಸೈಟ್‌ನಲ್ಲಿವೆ
[ಪಾದಟಿಪ್ಪಣಿ]
^ ಹೆಸರುಗಳನ್ನು ಬದಲಾಯಿಸಲಾಗಿದೆ.
ಯೋಚಿಸಿ
ಯಾವತ್ತೂ ಸಿಟ್ಟುಮಾಡಲಿಕ್ಕಿಲ್ಲ ಎಂದು ನಾವೆಣಿಸುವ ಕೆಲವು ವ್ಯಕ್ತಿಗಳೂ ಕ್ಷಣಿಕವಾಗಿ ಸಿಡಿದುಬೀಳುತ್ತಾರೆ. ಈ ಮುಂದಿನ ಉದಾಹರಣೆಗಳಿಂದ ಏನು ಕಲಿಯಬಹುದು?
◼ ಮೋಶೆ.—ಅರಣ್ಯಕಾಂಡ 20:1-12; ಕೀರ್ತನೆ 106:32, 33.
◼ ಪೌಲ ಮತ್ತು ಬಾರ್ನಬ.—ಅ. ಕಾರ್ಯಗಳು 15:36-40.
[ಪುಟ 27ರಲ್ಲಿರುವ ಚೌಕ/ಚಿತ್ರಗಳು]
ನಿಮ್ಮ ಸಮಪ್ರಾಯದವರು ಹೇಳುವುದು
“ನನ್ನ ಭಾವನೆಗಳನ್ನು ಡೈರಿಯಲ್ಲಿ ಬರೆದಿಟ್ಟರೆ ಇಲ್ಲವೆ ಅಮ್ಮನ ಬಳಿ ಹೇಳಿಕೊಂಡರೆ ಮನಸ್ಸು ಶಾಂತವಾಗಿರುತ್ತದೆ.”—ಅಲೆಕ್ಸಿಸ್, ಯುನೈಟೆಡ್ ಸ್ಟೇಟ್ಸ್.
“ತುಂಬ ಟೆನ್ಷನ್‌ನಲ್ಲಿರುವಾಗ ವೇಗವಾದ ವಾಕಿಂಗ್‌ಗೆ ಹೋಗುತ್ತೇನೆ. ಇದು ನನ್ನ ಟೆನ್ಷನ್ ಅನ್ನು ಕಡಿಮೆಮಾಡುತ್ತದೆ. ಶುದ್ಧ ಗಾಳಿಯ ಸೇವನೆಯಿಂದ ತಲೆಭಾರ ಇಳಿದು ಸರಿಯಾಗಿ ಯೋಚಿಸಲು ಆಗುತ್ತದೆ.”—ಎಲಿಸಬೇತ್, ಐರ್ಲಂಡ್.
“‘ನಾನು ಒಂದುವೇಳೆ ಕಿರಿಚಾಡಲು ಆರಂಭಿಸಿದರೆ ಏನಾಗುವುದು?’ ಎಂದು ಮನಸ್ಸಲ್ಲೇ ಆಲೋಚಿಸುತ್ತೇನೆ. ಕಿರಿಚಾಡುವುದರಿಂದ ಏನೂ ಪ್ರಯೋಜನವಾಗದೆಂದು ನನಗೆ ಯಾವಾಗಲೂ ಅರಿವಾಗುತ್ತದೆ!”—ಗ್ರೇಮ್, ಆಸ್ಟ್ರೇಲಿಯಾ.
[ಪುಟ 27ರಲ್ಲಿರುವ ಚೌಕ]
ನಿಮಗೆ ಗೊತ್ತೇ?
ಕೆಲವೊಮ್ಮೆ ದೇವರಿಗೂ ಕೋಪ ಬರುತ್ತದೆ. ಆದರೆ ಆತನ ಕೋಪಕ್ಕೆ ಯಾವಾಗಲೂ ಸರಿಯಾದ ಕಾರಣವಿರುತ್ತದೆ ಮತ್ತು ಅದನ್ನು ಆತನು ಸಂಪೂರ್ಣ ಹತೋಟಿಯಲ್ಲಿಡುತ್ತಾನೆ. ಆತನೆಂದೂ ವಿಪರೀತ ಪ್ರತಿಕ್ರಿಯೆ ತೋರಿಸುವುದಿಲ್ಲ!—ವಿಮೋಚನಕಾಂಡ 34:6; ಧರ್ಮೋಪದೇಶಕಾಂಡ 32:4 ಮತ್ತು ಯೆಶಾಯ 48:9 ನೋಡಿ.
[ಪುಟ 28ರಲ್ಲಿರುವ ಚಿತ್ರ]
ನಿಮ್ಮ ಸಿಟ್ಟು ಕುದಿಯುವ ಹಂತಕ್ಕೆ ತಲಪುವ ಮುಂಚೆ ಆರಿಸಿಬಿಡುವುದು ನಿಮ್ಮ ಕೈಯಲ್ಲಿದೆ