ದೇವರ ದೃಷ್ಟಿಕೋನ
ಹಿಂಸೆ
ಇತಿಹಾಸದುದ್ದಕ್ಕೂ ಜನರು ಹಿಂಸೆಯಲ್ಲಿ ಮುಳುಗಿಹೋಗಿದ್ದಾರೆ. ಇದು ಹೀಗೇ ಮುಂದುವರಿಯುತ್ತಾ?
ಹಿಂಸೆಯ ಬಗ್ಗೆ ದೇವರ ದೃಷ್ಟಿಕೋನವೇನು?
ಜನರು ಏನು ಹೇಳುತ್ತಾರೆ?
ಅನೇಕರು, ದೇವರಲ್ಲಿ ಭಯ-ಭಕ್ತಿ ಇರುವವರು ಕೂಡ ‘ಹಿಂಸೆಯೇನು ದೊಡ್ಡ ತಪ್ಪಲ್ಲ. ಜನ ತಮ್ಮ ಮಾತು-ನಡತೆಯಿಂದ ಒಬ್ಬರನ್ನೊಬ್ಬರು ರೇಗಿಸುತ್ತಾರೆ, ಅದಕ್ಕೆ ಹಿಂಸೆ ಶುರುವಾಗುತ್ತದೆ’ ಎಂದು ಹೇಳುತ್ತಾರೆ. ‘ಟಿ.ವಿ, ಚಲನಚಿತ್ರಗಳಲ್ಲಿನ ಹಿಂಸಾಚಾರ ನಮ್ಮ ಖುಷಿಗಷ್ಟೇ, ಅದರಿಂದ ಏನೂ ಹಾನಿ ಆಗಲ್ಲ’ ಎಂದು ಲಕ್ಷಾಂತರ ಜನರು ನೆನೆಸುತ್ತಾರೆ.
ಬೈಬಲ್ ಏನು ಹೇಳುತ್ತದೆ?
ಉತ್ತರ ಇರಾಕ್‍ನಲ್ಲಿ ಮೊಸಲ್ ಎಂಬ ನಗರದ ಹತ್ತಿರ ಪಾಳುಬಿದ್ದಿರುವ ಒಂದು ಪ್ರದೇಶವಿದೆ. ಆದರೆ ಈ ಪ್ರದೇಶ, ಹಿಂದೆ ಒಂದು ದೊಡ್ಡ ಪಟ್ಟಣವಾಗಿತ್ತು. ಆ ಪಟ್ಟಣ ಅಸ್ಸೀರಿಯನ್ ಸಾಮ್ರಾಜ್ಯದ ರಾಜಧಾನಿ ನಿನೆವೆಯಾಗಿತ್ತು. ಆದರೆ ಇಂಥ ದೊಡ್ಡ ಪಟ್ಟಣವನ್ನು ‘ಹಾಳುಮಾಡಿ ಮರುಭೂಮಿಯಂತೆ ಒಣಗಿಸಿಬಿಡುವೆನು’ ಎಂದು ದೇವರು ಬೈಬಲ್‍ನಲ್ಲಿ ಮುಂತಿಳಿಸಿದ್ದನು. (ಚೆಫನ್ಯ 2:13) ‘ನಿನೆವೆಯ ನಾಶನವನ್ನು ಎಲ್ಲರೂ ನೋಡುತ್ತಾರೆ’ ಎಂದು ಕೂಡ ದೇವರು ಹೇಳಿದ್ದನು. ಇಷ್ಟಕ್ಕೂ ಅದನ್ನು ಯಾಕೆ ನಾಶ ಮಾಡಬೇಕಿತ್ತು? ‘ನಿನೆವೆ ರಕ್ತಮಯ ಪಟ್ಟಣವಾಗಿತ್ತು’ ಅಂದರೆ ಎಲ್ಲೆಲ್ಲೂ ಹಿಂಸೆ ತುಂಬಿತ್ತು. (ನಹೂಮ 1:1, 3:1, 6) ‘ನರಹತ್ಯ ಮಾಡುವವರನ್ನು ಯೆಹೋವ ದೇವರು ದ್ವೇಷಿಸುತ್ತಾನೆ’ ಅಂತ ಬೈಬಲ್ ಹೇಳುತ್ತದೆ. (ಕೀರ್ತನೆ 5:6) ಆದ್ದರಿಂದ ದೇವರು ನಿನೆವೆ ಪಟ್ಟಣವನ್ನು ಸರ್ವನಾಶ ಮಾಡಿದನು.
ಭೂಮಿ ಮೇಲೆ ಹಿಂಸೆ ಶುರುವಾಗಿದ್ದೇ ದುಷ್ಟಶಕ್ತಿಯಾಗಿರುವ ಸೈತಾನನಿಂದ. ಆತನು ದೇವರಿಗೂ, ನಮ್ಮೆಲ್ಲರಿಗೂ ಶತ್ರು. ಯೇಸು ಅವನನ್ನು “ನರಹಂತಕ” ಎಂದು ಕರೆದಿದ್ದಾನೆ. (ಯೋಹಾನ 8:44) ‘ಇಡೀ ಲೋಕವು ಅವನ ವಶದಲ್ಲಿರುವುದರಿಂದ’ ಜನರೂ ಹಿಂಸೆಯಲ್ಲಿ ಮುಳುಗಿ ಹೋಗಿದ್ದಾರೆ. ಎಷ್ಟರ ಮಟ್ಟಿಗೆಂದರೆ, ಊಟದಲ್ಲಿ ಉಪ್ಪಿಲ್ಲದಿದ್ದರೆ ಹೇಗೆ ರುಚಿ ಇರುವುದಿಲ್ಲವೋ ಹಾಗೇ ಮನೋರಂಜನೆಯಲ್ಲಿ ಹಿಂಸೆ ಇಲ್ಲದಿದ್ದರೆ ಮಜಾ ಇರೋದಿಲ್ಲ ಅಂತ ಜನ ಹೇಳುತ್ತಾರೆ. (1 ಯೋಹಾನ 5:19) ದೇವರನ್ನು ಮೆಚ್ಚಿಸಬೇಕೆಂದರೆ ಹಿಂಸೆಯನ್ನು ದ್ವೇಷಿಸಿ, * ದೇವರು ಇಷ್ಟಪಡುವುದನ್ನು ನಾವೂ ಇಷ್ಟಪಡಬೇಕು.
‘ಯೆಹೋವನು ಬಲಾತ್ಕಾರಿಗಳನ್ನು (ಹಿಂಸೆಯನ್ನು ಇಷ್ಟಪಡುವವರನ್ನು) ದ್ವೇಷಿಸುತ್ತಾನೆ.’ —ಕೀರ್ತನೆ 11:5.
ಕ್ರೂರ ವ್ಯಕ್ತಿಗಳು ಬದಲಾಗುತ್ತಾರಾ?
ಜನರು ಏನು ಹೇಳುತ್ತಾರೆ?
‘ಹುಟ್ಟು ಗುಣ ಸುಟ್ಟರೂ ಹೋಗಲ್ಲ, ಕ್ರೂರ ವ್ಯಕ್ತಿಗಳು ಬದಲಾಗಲು ಸಾಧ್ಯನೇ ಇಲ್ಲ.’
ಬೈಬಲ್ ಏನು ಹೇಳುತ್ತದೆ?
‘ಕ್ರೋಧ, ಕೋಪ, ಕೆಟ್ಟತನ, ನಿಂದಾತ್ಮಕ ಮಾತು ಮತ್ತು ಅಶ್ಲೀಲವಾದ ಮಾತು ಇವೆಲ್ಲವುಗಳನ್ನು ನಿಮ್ಮಿಂದ ತೊಲಗಿಸಿಬಿಡಿರಿ. ಹಳೆಯ ವ್ಯಕ್ತಿತ್ವವನ್ನು, ದುರಾಭ್ಯಾಸಗಳನ್ನು ತೆಗೆದುಹಾಕಿರಿ ಮತ್ತು ನೂತನ ವ್ಯಕ್ತಿತ್ವವನ್ನು ಧರಿಸಿಕೊಳ್ಳಿರಿ’ ಎಂದು ದೇವರು ಸಲಹೆ ಕೊಟ್ಟಿದ್ದಾನೆ. (ಕೊಲೊಸ್ಸೆ 3:8-10) ಈ ಸಲಹೆ ಪಾಲಿಸುವುದಕ್ಕೆ ತುಂಬ ಕಷ್ಟನಾ? ಇಲ್ಲ, ನಮ್ಮಿಂದಾಗುತ್ತೆ. * ಹೇಗೆ?
ಕೊಲೊಸ್ಸೆ 3:10) ದೇವರಲ್ಲಿರುವ ಆಕರ್ಷಕ ಗುಣಗಳ ಮತ್ತು ಮಟ್ಟಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋದರೆ ನಮಗೆ ಆತನ ಬಗ್ಗೆ ಪ್ರೀತಿ ಮೂಡುತ್ತದೆ ಮತ್ತು ಆತನಿಗೆ ಇಷ್ಟವಾದದ್ದನ್ನೇ ಮಾಡುತ್ತೇವೆ.—1 ಯೋಹಾನ 5:3.
ಮೊದಲನೆಯದಾಗಿ, ದೇವರ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಬೇಕು. (ಎರಡನೆಯದಾಗಿ, ಒಳ್ಳೆಯವರ ಸಹವಾಸ ಮಾಡಬೇಕು. ‘ಕೋಪಿಷ್ಠನ ಸಂಗಡ ಸ್ನೇಹ ಬೆಳೆಸಬೇಡ; ಸಿಟ್ಟುಗಾರನ ಸಹವಾಸ ಮಾಡಬೇಡ. ಮಾಡಿದರೆ ಅವನ ದುರ್ನಡತೆಯನ್ನು ಅನುಸರಿಸಿ ನಿನ್ನನ್ನು ಉರುಲಿಗೆ ಸಿಕ್ಕಿಸಿಕೊಳ್ಳುವಿ ನೋಡಿಕೋ’ ಎಂದು ಬೈಬಲ್ ಎಚ್ಚರಿಸುತ್ತದೆ.—ಜ್ಞಾನೋಕ್ತಿ 22:24, 25.
ಮೂರನೆಯದಾಗಿ, ವಿವೇಚನೆ ಇರಬೇಕು. ಹಿಂಸಾತ್ಮಕವಾಗಿ ನಡೆದುಕೊಳ್ಳುವುದು ಸ್ವನಿಯಂತ್ರಣದ ಕೊರತೆಯಾಗಿದೆ, ಆದರೆ ಶಾಂತಿ-ಸಮಾಧಾನದಿಂದ ಇರುವುದು ಒಬ್ಬನ ಬಲಹೀನತೆಯಲ್ಲ, ಬಲ ಎಂದು ನಾವು ಅರ್ಥ ಮಾಡಿಕೊಳ್ಳಬೇಕು. “ದೀರ್ಘಶಾಂತನು ಶೂರನಿಗಿಂತಲೂ ಶ್ರೇಷ್ಠ” ಎನ್ನುತ್ತದೆ ಬೈಬಲಿನ ಜ್ಞಾನೋಕ್ತಿ 16:32.
‘ಎಲ್ಲರ ಜೊತೆ ಸಮಾಧಾನದಿಂದಿರಿ.’ —ಇಬ್ರಿಯ 12:14.
ಹಿಂಸೆ ಇಲ್ಲದ ಸಮಯ ಬರಬಹುದಾ?
ಜನರು ಏನು ಹೇಳುತ್ತಾರೆ?
ಹಿಂಸೆ ಹಿಂದೆನೂ ಇತ್ತು, ಇವತ್ತಿಗೂ ಇದೆ, ಮುಂದೆನೂ ಇರುತ್ತೆ ಅಂತ ಹೇಳುತ್ತಾರೆ.
ಬೈಬಲ್ ಏನು ಹೇಳುತ್ತದೆ?
“ಇನ್ನು ಸ್ವಲ್ಪಕಾಲದೊಳಗೆ ದುಷ್ಟನು ಕಾಣಿಸದೆ ಹೋಗುವನು . . . ಆದರೆ ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.” (ಕೀರ್ತನೆ 37:10, 11) ನಿನೆವೆಯಲ್ಲಿದ್ದ ದುಷ್ಟರನ್ನು ನಾಶ ಮಾಡಿದಂತೆ ದೀನಜನರನ್ನು, ಸಾಧು ಸ್ವಭಾವದರನ್ನು ಕಾಪಾಡುವ ಸಲುವಾಗಿ ದೇವರು ಈಗಿರುವ ಹಿಂಸಾತ್ಮಕ ವ್ಯಕ್ತಿಗಳನ್ನು ನಾಶ ಮಾಡುತ್ತಾನೆ. ನಂತರ ಭೂಮಿಯಲ್ಲಿ ಎಂದಿಗೂ ಹಿಂಸೆ ಅನ್ನುವುದೇ ಇರುವುದಿಲ್ಲ!—ಕೀರ್ತನೆ 72:7.
ನಮ್ಮಲ್ಲಿ ಇನ್ನೂ ಹಿಂಸಾತ್ಮಕ ಗುಣಗಳಿದ್ದರೆ ಅದನ್ನು ಬಿಟ್ಟು ಸಮಾಧಾನದಿಂದ ನಡೆದುಕೊಳ್ಳುವುದಕ್ಕೆ ಈಗಿನಿಂದಲೇ ಕಲಿಯೋಣ. ಹಾಗೆ ಮಾಡಿದರೆ ಮಾತ್ರ ನಾವು ದೇವರ ಮೆಚ್ಚಿಗೆಯನ್ನು ಪಡೆಯಲು ಸಾಧ್ಯ. ‘ಯಾವನಾದರೂ ನಾಶವಾಗುವುದನ್ನು ಇಷ್ಟಪಡದೆ ಎಲ್ಲರೂ ಪಶ್ಚಾತ್ತಾಪವನ್ನು ಹೊಂದಬೇಕೆಂದು ಬಯಸುವುದರಿಂದ ಯೆಹೋವನು ನಿಮ್ಮ ವಿಷಯದಲ್ಲಿ ತಾಳ್ಮೆಯಿಂದಿದ್ದಾನೆ’ ಎನ್ನುತ್ತದೆ ಬೈಬಲಿನ 2 ಪೇತ್ರ 3:9.
‘ಅವರು ತಮ್ಮ ಆಯುಧಗಳನ್ನು ಕುಲುಮೆಗೆ ಹಾಕಿ ಕತ್ತಿಗಳನ್ನು ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು.’ —ಯೆಶಾಯ 2:4.▪ (g15-E 05)
^ ಪ್ಯಾರ. 7 ಹಿಂದೆ, ಇಸ್ರೇಲಿನ ಜನರು ತಮ್ಮ ಪ್ರದೇಶಗಳನ್ನು ಶತ್ರುಗಳಿಂದ ಕಾಪಾಡಿಕೊಳ್ಳಬೇಕಾಗಿತ್ತು. ಆದ್ದರಿಂದ ಆಗ ದೇವರು ಯುದ್ಧವನ್ನು ಅನುಮತಿಸಿದ್ದನು. (2 ಪೂರ್ವಕಾಲವೃತ್ತಾಂತ 20:15, 17) ಆದರೆ ಇಸ್ರೇಲಿನ ಜನರ ಜೊತೆ ಮಾಡಿಕೊಂಡ ಒಪ್ಪಂದ ಕೊನೆಗೊಂಡು ಯೆಹೋವನು ಕ್ರೈಸ್ತ ಸಭೆಯನ್ನು ಸ್ಥಾಪಿಸಿದಾಗ ಪರಿಸ್ಥಿತಿ ಬದಲಾಯಿತು. ಈ ಕ್ರೈಸ್ತ ಸಭೆಯ ಭಾಗವಾಗಿರುವವರು ಜಗತ್ತಿನ ಎಲ್ಲಾ ಕಡೆಗಳಲ್ಲೂ ಇದ್ದಾರೆ. ಇವರ ಮಧ್ಯೆ ಪ್ರೀತಿ, ಶಾಂತಿ, ಐಕ್ಯತೆ ಇದೆ.
^ ಪ್ಯಾರ. 11 ದೇವರ ಸಲಹೆಯನ್ನು ಪಡೆದು ತಮ್ಮ ಜೀವನದಲ್ಲಿ ಬದಲಾವಣೆ ಮಾಡಿಕೊಂಡ ಅನೇಕರ ಅನುಭವಗಳನ್ನು ಕಾವಲಿನಬುರುಜು ಪತ್ರಿಕೆಯಲ್ಲಿ ಬರುವ “ಬದುಕನ್ನೇ ಬದಲಾಯಿಸಿತು ಬೈಬಲ್” ಎಂಬ ಸರಣಿ ಲೇಖನಗಳಲ್ಲಿ ನೋಡಬಹುದು. ಈಗ ಇದರ ಹೆಸರು “ಬದುಕು ಬದಲಾದ ವಿಧ” ಎಂದಾಗಿದೆ.