ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ವಿರುದ್ಧ ಹೋರಾಡುವವರು ಜಯಗಳಿಸಲಾರರು!

ದೇವರ ವಿರುದ್ಧ ಹೋರಾಡುವವರು ಜಯಗಳಿಸಲಾರರು!

ದೇವರ ವಿರುದ್ಧ ಹೋರಾಡುವವರು ಜಯಗಳಿಸಲಾರರು!

“ಅವರು ನಿನಗೆ ವಿರುದ್ಧವಾಗಿ ಯುದ್ಧಮಾಡುವರು, ಆದರೆ ನಿನ್ನನ್ನು ಸೋಲಿಸಲಾಗುವದಿಲ್ಲ.”ಯೆರೆಮೀಯ 1:19.

1. ಯೆರೆಮೀಯನು ಯಾವ ನೇಮಕವನ್ನು ಪಡೆದುಕೊಂಡನು, ಮತ್ತು ಅವನ ಕೆಲಸವು ಎಷ್ಟರ ವರೆಗೆ ಮುಂದುವರಿಯಿತು?

ಯೆಹೋವನು ಯುವ ಯೆರೆಮೀಯನನ್ನು ಜನಾಂಗಗಳ ಪ್ರವಾದಿಯನ್ನಾಗಿ ನೇಮಿಸಿದನು. (ಯೆರೆಮೀಯ 1:5) ಯೆಹೂದದ ಒಳ್ಳೆಯ ಅರಸನಾದ ಯೋಷೀಯನ ಆಳ್ವಿಕೆಯ ಕಾಲದಲ್ಲಿ ಇದು ನಡೆಯಿತು. ಯೆರೆಮೀಯನ ಪ್ರವಾದನ ಶುಶ್ರೂಷೆಯು, ಬಬಿಲೋನ್ಯರು ಯೆರೂಸಲೇಮನ್ನು ಆಕ್ರಮಿಸಿ, ದೇವಜನರನ್ನು ದೇಶಭ್ರಷ್ಟರನ್ನಾಗಿ ಕೊಂಡೊಯ್ಯುವದಕ್ಕೆ ಮುಂಚಿನ ಗೊಂದಲಮಯ ಅವಧಿಯಾದ್ಯಂತ ನಡೆಯಿತು.—ಯೆರೆಮೀಯ 1:1-3.

2. ಯೆಹೋವನು ಯೆರೆಮೀಯನಿಗೆ ಹೇಗೆ ಧೈರ್ಯ ನೀಡಿದನು, ಮತ್ತು ಆ ಪ್ರವಾದಿಯ ವಿರುದ್ಧ ಹೋರಾಡುವುದರ ಅರ್ಥವೇನಾಗಿತ್ತು?

2 ಯೆರೆಮೀಯನು ಸಾರಲಿದ್ದ ದೈವಿಕ ನ್ಯಾಯತೀರ್ಪಿನ ಸಂದೇಶಗಳು ಖಂಡಿತವಾಗಿಯೂ ವಿರೋಧವನ್ನು ಎಬ್ಬಿಸಲಿದ್ದವು. ಆದುದರಿಂದ ಮುಂದೆ ನಡೆಯಲಿದ್ದ ಸಂಭವಗಳಿಗಾಗಿ ದೇವರು ಅವನನ್ನು ಬಲಪಡಿಸಿದನು. (ಯೆರೆಮೀಯ 1:8-10) ಉದಾಹರಣೆಗಾಗಿ, “ಅವರು ನಿನಗೆ ವಿರುದ್ಧವಾಗಿ ಯುದ್ಧಮಾಡುವರು, ಆದರೆ ನಿನ್ನನ್ನು ಸೋಲಿಸಲಾಗುವದಿಲ್ಲ; ನಿನ್ನನ್ನುದ್ಧರಿಸಲು ನಾನೇ ನಿನ್ನೊಂದಿಗಿರುವೆನು, ಇದು ಯೆಹೋವನಾದ ನನ್ನ ಮಾತು” ಎಂಬ ನುಡಿಗಳಿಂದ ಆ ಪ್ರವಾದಿಯು ಮನೋಸ್ಥೈರ್ಯವನ್ನು ಪಡೆದುಕೊಂಡನು. (ಯೆರೆಮೀಯ 1:19) ಯೆರೆಮೀಯನ ವಿರುದ್ಧ ಹೋರಾಡುವುದೆಂದರೆ ದೇವರ ವಿರುದ್ಧ ಹೋರಾಡುವುದಾಗಿತ್ತು. ಇಂದು ಸಹ, ಯೆಹೋವನಿಗೆ ಪ್ರವಾದಿಸದೃಶ ಸೇವಕರ ಗುಂಪೊಂದಿದೆ. ಇವರ ಕೆಲಸವೂ ಯೆರೆಮೀಯನ ಕೆಲಸದಂತೆಯೇ ಇದೆ. ಅವನಂತೆಯೇ ಈ ಸೇವಕರು ದೇವರ ಪ್ರವಾದನ ವಾಕ್ಯವನ್ನು ಧೈರ್ಯದಿಂದ ಪ್ರಕಟಪಡಿಸುತ್ತಾರೆ. ಮತ್ತು ಈ ಸಂದೇಶವು ಎಲ್ಲ ವ್ಯಕ್ತಿಗಳನ್ನು ಮತ್ತು ಜನಾಂಗಗಳನ್ನು, ಅವರವರ ಪ್ರತಿಕ್ರಿಯೆಗನುಸಾರ ಒಳ್ಳೇದಕ್ಕಾಗಿ ಇಲ್ಲವೇ ಕೆಟ್ಟದ್ದಕ್ಕಾಗಿ ಪ್ರಭಾವಿಸುತ್ತದೆ. ಯೆರೆಮೀಯನ ಸಮಯದಲ್ಲಿದ್ದಂತೆ, ದೇವರ ಸೇವಕರನ್ನು ಮತ್ತು ದೈವಿಕವಾಗಿ ಅವರಿಗೆ ನೇಮಿಸಲ್ಪಟ್ಟಿರುವ ಚಟುವಟಿಕೆಗಳನ್ನು ವಿರೋಧಿಸುವ ಮೂಲಕ ದೇವರ ವಿರುದ್ಧ ಹೋರಾಡುವವರು ಈಗಲೂ ಇದ್ದಾರೆ.

ಯೆಹೋವನ ಸೇವಕರು ಆಕ್ರಮಣಕ್ಕೆ ಗುರಿಯಾಗಿದ್ದಾರೆ

3. ಯೆಹೋವನ ಸೇವಕರು ಏಕೆ ಆಕ್ರಮಣಕ್ಕೊಳಗಾಗಿದ್ದಾರೆ?

3 ಇಪ್ಪತ್ತನೆಯ ಶತಮಾನದ ಆರಂಭದಿಂದಲೇ ಯೆಹೋವನ ಜನರು ಆಕ್ರಮಣಕ್ಕೊಳಗಾಗಿದ್ದಾರೆ. ಅನೇಕ ದೇಶಗಳಲ್ಲಿ, ಕೆಟ್ಟ ಉದ್ದೇಶಗಳುಳ್ಳ ವ್ಯಕ್ತಿಗಳು, ದೇವರ ರಾಜ್ಯದ ಕುರಿತಾದ ಸುವಾರ್ತೆಯ ಘೋಷಣೆಯನ್ನು ತಡೆಯಲು, ಹೌದು, ಅದರ ಸದ್ದಡಗಿಸಲು ಪ್ರಯತ್ನಿಸಿದ್ದಾರೆ. ಅವರು “ಗರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗು”ತ್ತಿರುವ ನಮ್ಮ ಮಹಾ ವೈರಿಯಾದ ಪಿಶಾಚನಿಂದ ಹುರಿದುಂಬಿಸಲ್ಪಟ್ಟಿದ್ದಾರೆ. (1 ಪೇತ್ರ 5:8) 1914ರಲ್ಲಿ “ಅನ್ಯದೇಶದವರ ಸಮಯಗಳು” ಮುಕ್ತಾಯಗೊಂಡ ತರುವಾಯ, ಯೆಹೋವನು ತನ್ನ ಮಗನನ್ನು ಈ ಭೂಮಿಯ ಹೊಸ ರಾಜನಾಗಿ ಪಟ್ಟಕ್ಕೇರಿಸಿ, “ನಿನ್ನ ವೈರಿಗಳ ಮಧ್ಯದಲ್ಲಿ ದೊರೆತನಮಾಡು” ಎಂಬ ಆಜ್ಞೆಯನ್ನು ಕೊಟ್ಟನು. (ಲೂಕ 21:24; ಕೀರ್ತನೆ 110:2) ತನ್ನ ಅಧಿಕಾರವನ್ನು ಉಪಯೋಗಿಸುತ್ತಾ, ಕ್ರಿಸ್ತ ಯೇಸು ಮಹಾ ಘಟಸರ್ಪನಾದ ಸೈತಾನನನ್ನು ಸ್ವರ್ಗದಿಂದ ದೊಬ್ಬಿ, ಅವನನ್ನು ಈ ಭೂಮಿಯ ಕ್ಷೇತ್ರಕ್ಕೆ ನಿರ್ಬಂಧಿಸಿದನು. ತನ್ನ ಸಮಯವು ತೀರ ಕಡಿಮೆಯಾಗಿದೆ ಎಂದು ಪಿಶಾಚನಿಗೆ ತಿಳಿದಿರುವುದರಿಂದ, ಅಭಿಷಿಕ್ತರ ಮೇಲೆ ಹಾಗೂ ಅವರ ಸಂಗಾತಿಗಳ ಮೇಲೆ ತನ್ನ ಕೋಪವನ್ನು ಕಾರುತ್ತಿದ್ದಾನೆ. (ಪ್ರಕಟನೆ 12:9, 17) ದೇವರ ವಿರುದ್ಧ ಹೋರಾಡುತ್ತಿರುವವರು ಪದೇಪದೇ ನಡೆಸುತ್ತಿರುವ ಆಕ್ರಮಣಗಳ ಪರಿಣಾಮಗಳೇನು?

4. ಒಂದನೆಯ ಜಾಗತಿಕ ಯುದ್ಧದ ಸಮಯದಲ್ಲಿ ಯೆಹೋವನ ಸಾಕ್ಷಿಗಳು ಯಾವ ಸಂಕಷ್ಟಗಳನ್ನು ಅನುಭವಿಸಿದರು, ಆದರೆ 1919 ಮತ್ತು 1922ರಲ್ಲಿ ಏನು ಸಂಭವಿಸಿತು?

4 ಒಂದನೆಯ ಜಾಗತಿಕ ಯುದ್ಧದ ಸಮಯದಲ್ಲಿ, ಯೆಹೋವನ ಅಭಿಷಿಕ್ತ ಸೇವಕರು ನಂಬಿಕೆಯನ್ನು ಪರೀಕ್ಷಿಸುವಂತಹ ಅನೇಕ ಸಂಕಷ್ಟಗಳನ್ನು ಎದುರಿಸಿದರು. ಅವರು ಅಪಹಾಸ್ಯ ಹಾಗೂ ನಿಂದೆಗೆ ಗುರಿಯಾದರು, ದೊಂಬಿಗುಂಪುಗಳಿಂದ ಓಡಿಸಲ್ಪಟ್ಟರು, ಮತ್ತು ಹೊಡೆಯಲ್ಪಟ್ಟರು. ಯೇಸು ಮುಂತಿಳಿಸಿದಂತೆ, ಅವರು ‘ಎಲ್ಲಾ ಜನಾಂಗಗಳವರ ಹಗೆಗೆ’ ಗುರಿಯಾದರು. (ಮತ್ತಾಯ 24:9) ಯುದ್ಧೋನ್ಮಾದದ ಮಧ್ಯೆ ದೇವರ ರಾಜ್ಯದ ವೈರಿಗಳು, ಯೇಸು ಕ್ರಿಸ್ತನ ವಿರುದ್ಧ ಉಪಯೋಗಿಸಲ್ಪಟ್ಟಿದ್ದಂತಹ ಒಂದು ತಂತ್ರವನ್ನೇ ಬಳಸಿದರು. ಯೆಹೋವನ ಜನರು ರಾಜ್ಯದ್ರೋಹಿಗಳಾಗಿದ್ದಾರೆಂಬ ಸುಳ್ಳಾರೋಪವನ್ನು ಹೊರಿಸಿ, ದೇವರ ದೃಶ್ಯ ಸಂಸ್ಥೆಯ ಕೇಂದ್ರಬಿಂದುವಿನ ಮೇಲೆಯೇ ಅವರು ದಾಳಿನಡಿಸಿದರು. ಮೇ 1918ರಲ್ಲಿ, ಸೊಸೈಟಿಯ ಅಧ್ಯಕ್ಷರಾದ ಜೆ. ಎಫ್‌. ರದರ್‌ಫರ್ಡ್‌ ಮತ್ತು ಅವರ ಏಳು ಮಂದಿ ಆಪ್ತ ಸಂಗಡಿಗರ ದಸ್ತಗಿರಿಗಾಗಿ ಫೆಡರಲ್‌ ಕೋರ್ಟಿನಿಂದ ವಾರಂಟ್‌ಗಳನ್ನು ಹೊರಡಿಸಲಾಯಿತು. ಈ ಎಂಟು ಮಂದಿಗೆ ಉಗ್ರವಾದ ಸೆರೆವಾಸದ ದಂಡನೆಯು ವಿಧಿಸಲ್ಪಟ್ಟಿತು, ಮತ್ತು ಅವರನ್ನು ಅಮೆರಿಕದಲ್ಲಿ ಜಾರ್ಜಿಯದ ಅಟ್ಲಾಂಟದಲ್ಲಿರುವ ಫೆಡರಲ್‌ ಕಾರಾಗೃಹಕ್ಕೆ ಕಳುಹಿಸಲಾಯಿತು. ಒಂಬತ್ತು ತಿಂಗಳುಗಳ ನಂತರ ಅವರನ್ನು ಬಿಡುಗಡೆಗೊಳಿಸಲಾಯಿತು. ಪ್ರತಿವಾದಿಗಳ ಪರವಾಗಿ ನ್ಯಾಯವಾದ ಮೊಕದ್ದಮೆಯು ನಡೆಯಲಿಲ್ಲವೆಂದು ಮೇ 1919ರಲ್ಲಿ ಅಪೀಲ್ಸ್‌ ಕೋರ್ಟು ಪ್ರಕಟಿಸಿತು. ಈ ಕಾರಣದಿಂದ ನ್ಯಾಯತೀರ್ಪನ್ನು ಹಿಂದೆಗೆದುಕೊಳ್ಳಲಾಯಿತು. ಈ ಕೇಸನ್ನು ಪುನಃ ಹೊಸ ವಿಚಾರಣೆಗೆ ಒಳಪಡಿಸಲಾಯಿತಾದರೂ, ತದನಂತರ ಸರಕಾರವು ಫಿರ್ಯಾದನ್ನು ಹಿಂದೆಗೆದುಕೊಂಡಿತು. ಹೀಗೆ, ಸಹೋದರರಾದ ರದರ್‌ಫರ್ಡ್‌ ಮತ್ತು ಅವರ ಸಂಗಡಿಗರು ಸಂಪೂರ್ಣವಾಗಿ ದೋಷಮುಕ್ತಗೊಳಿಸಲ್ಪಟ್ಟರು. ಅವರು ತಮ್ಮ ಚಟುವಟಿಕೆಗಳನ್ನು ಮತ್ತೆ ಆರಂಭಿಸಿದರು. ಮತ್ತು ಓಹಾಯೋದ ಸೀಡರ್‌ ಪಾಯಿಂಟ್‌ನಲ್ಲಿ 1919 ಮತ್ತು 1922ರಲ್ಲಿ ನಡೆದಂತಹ ಅಧಿವೇಶನಗಳು ರಾಜ್ಯ ಸಾರುವ ಕೆಲಸಕ್ಕೆ ಹೊಸದಾದ ಪ್ರಚೋದನೆಯನ್ನು ಕೊಟ್ಟವು.

5. ನಾಸಿ ಜರ್ಮನಿಯಲ್ಲಿ ಯೆಹೋವನ ಸಾಕ್ಷಿಗಳ ಸ್ಥಿತಿ ಹೇಗಿತ್ತು?

5 ಇಸವಿ 1930ರ ವರ್ಷಗಳಲ್ಲಿ ನಿರಂಕುಶ ಪ್ರಭುತ್ವಗಳು ತಲೆದೋರಲಾರಂಭಿಸಿದವು ಮತ್ತು ಜರ್ಮನಿ, ಇಟಲಿ ಹಾಗೂ ಜಪಾನ್‌ ಒಟ್ಟುಗೂಡಿ ಒಂದು ರಾಜಕೀಯ ಮೈತ್ರಿ ಒಪ್ಪಂದವನ್ನು ಮಾಡಿಕೊಂಡವು. ಆ ದಶಕದ ಆದಿಭಾಗದಲ್ಲಿ, ದೇವಜನರು ಭೀಕರ ಹಿಂಸೆಗೆ ಗುರಿಯಾದರು ಮತ್ತು ವಿಶೇಷವಾಗಿ ನಾಸಿ ಜರ್ಮನಿಯಲ್ಲಿ ಇದು ತೀವ್ರವಾಗಿತ್ತು. ನಿಷೇಧಗಳನ್ನು ಹಾಕಲಾಯಿತು. ಮನೆಗಳಲ್ಲಿ ಶೋಧ ನಡೆಸಲಾಯಿತು, ಮತ್ತು ಅಲ್ಲಿದ್ದವರನ್ನು ಬಂಧಿಸಲಾಯಿತು. ಸಾವಿರಾರು ಜನರು ತಮ್ಮ ನಂಬಿಕೆಯನ್ನು ತ್ಯಜಿಸಲು ನಿರಾಕರಿಸಿದ್ದರಿಂದ ಅವರನ್ನು ಕೂಟ ಶಿಬಿರಗಳಿಗೆ ಹಾಕಲಾಯಿತು. ದೇವರ ಹಾಗೂ ಆತನ ಜನರ ವಿರುದ್ಧ ನಡೆಸಲ್ಪಟ್ಟ ಈ ಹೋರಾಟದ ಗುರಿಯು, ಆ ನಿರಂಕುಶ ಪ್ರಭುತ್ವದ ದೇಶದಿಂದ ಯೆಹೋವನ ಸಾಕ್ಷಿಗಳನ್ನು ಸಂಪೂರ್ಣವಾಗಿ ಅಳಿಸಿಹಾಕುವುದೇ ಆಗಿತ್ತು. * ಯೆಹೋವನ ಸಾಕ್ಷಿಗಳು ತಮ್ಮ ಹಕ್ಕುಗಳಿಗಾಗಿ ಹೋರಾಡಲು ಜರ್ಮನಿಯ ನ್ಯಾಯಾಲಯಗಳಿಗೆ ಮೊರೆಹೋದಾಗ, ಅವರಿಗೆ ಜಯ ದೊರಕದಂತೆ ಮಾಡಲು ಜರ್ಮನ್‌ ಶಾಸನ ಸಭೆಯ ನ್ಯಾಯಾಂಗ ಖಾತೆಯು ಒಂದು ಉದ್ದವಾದ ವಿದ್ಯುಕ್ತ ಹೇಳಿಕೆಯನ್ನು ತಯಾರಿಸಿತು. ಅದರಲ್ಲಿ ಹೀಗೆ ಹೇಳಲಾಗಿತ್ತು: “ಕೇವಲ ಕಾನೂನುಸಂಬಂಧಿತ ಕಾರ್ಯವಿಧಾನಗಳಿಂದಾಗಿ ನ್ಯಾಯಾಲಯಗಳು ವಿಫಲವಾಗಬಾರದು, ಬದಲಿಗೆ ವಿಧಿ ನಿಯಮಗಳ ಅಡಚಣೆಗಳ ಎದುರಿನಲ್ಲೂ ತಮ್ಮ ಉಚ್ಚ ಕರ್ತವ್ಯಗಳನ್ನು ಪೂರೈಸಲು ಮಾರ್ಗಗಳನ್ನು ಹುಡುಕತಕ್ಕದ್ದು.” ಇದರರ್ಥ, ಸಾಕ್ಷಿಗಳಿಗೆ ನ್ಯಾಯ ಸಿಗುವ ಸಾಧ್ಯತೆಯಿರಲಿಲ್ಲ. ಯೆಹೋವನ ಸಾಕ್ಷಿಗಳ ಚಟುವಟಿಕೆಗಳು ಹಗೆತನ ಇಲ್ಲವೆ ದ್ವೇಷದಿಂದ ಕೂಡಿದ್ದು, ‘ರಾಷ್ಟ್ರದ ಸಾಮಾಜಿಕ ರಚನೆಯನ್ನು ಕದಡಿಸುತ್ತಿದ್ದವು’ ಎಂಬ ಅಭಿಪ್ರಾಯ ನಾಸಿಗಳಿಗಿತ್ತು.

6. ಎರಡನೆಯ ಜಾಗತಿಕ ಯುದ್ಧದ ಸಮಯದಲ್ಲಿ ಮತ್ತು ಅನಂತರ ನಮ್ಮ ಕೆಲಸವನ್ನು ನಿಲ್ಲಿಸಲು ಯಾವ ಪ್ರಯತ್ನಗಳನ್ನು ಮಾಡಲಾಯಿತು?

6 ಎರಡನೆಯ ಜಾಗತಿಕ ಯುದ್ಧದ ಸಮಯದಲ್ಲಿ, ಆಸ್ಟ್ರೇಲಿಯ, ಕೆನಡ, ಮತ್ತು ಬ್ರಿಟಿಷ್‌ ಸಂಯುಕ್ತ ಸಂಸ್ಥಾನದೊಂದಿಗೆ ಸಂಬಂಧಿಸಿದ್ದ ಇತರ ದೇಶಗಳು, ಅಂದರೆ ಆಫ್ರಿಕ, ಏಷಿಯ, ಮತ್ತು ಕ್ಯಾರಿಬಿಯನ್‌ ಹಾಗೂ ಶಾಂತಸಾಗರದ ದ್ವೀಪಗಳಲ್ಲಿ ದೇವಜನರ ಮೇಲೆ ನಿಷೇಧ ಹಾಗೂ ತಡೆಗಳನ್ನು ಹಾಕಲಾಯಿತು. ಅಮೆರಿಕದಲ್ಲಿ, ಪ್ರಭಾವಶಾಲಿ ವೈರಿಗಳು ಮತ್ತು ತಪ್ಪುಮಾಹಿತಿಯನ್ನು ಪಡೆದುಕೊಂಡಿದ್ದ ಜನರು, ‘ಕಾನೂನಿನ ಮೂಲಕ ಕೇಡನ್ನು ಕಲ್ಪಿಸಿದರು.’ (ಕೀರ್ತನೆ 94:20, NW) ಆದರೆ ಧ್ವಜವಂದನೆಯ ವಿವಾದಾಂಶಗಳು ಮತ್ತು ಮನೆಯಿಂದ ಮನೆಗೆ ಸಾರುವುದನ್ನು ನಿಷೇಧಿಸಿದ ಸಮುದಾಯದ ಶಾಸನಗಳು ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಗಾದವು. ಅಮೆರಿಕದಲ್ಲಿ ದೊರೆತ ಅನುಕೂಲಕರವಾದ ನಿರ್ಣಯಗಳು, ಆರಾಧನಾ ಸ್ವಾತಂತ್ರ್ಯಕ್ಕೆ ರಕ್ಷಣೆಯನ್ನು ನೀಡುವ ಭಾರಿ ಬೆಂಬಲವನ್ನು ನೀಡಿದವು. ಯೆಹೋವನ ಸಹಾಯದಿಂದಾಗಿ ವೈರಿಗಳ ಪ್ರಯತ್ನಗಳು ಜಯಗಳಿಸಲಿಲ್ಲ. ಯುದ್ಧವು ಯೂರೋಪಿನಲ್ಲಿ ಕೊನೆಗೊಂಡಾಗ, ನಿಷೇಧಗಳನ್ನು ತೆಗೆದುಹಾಕಲಾಯಿತು. ಕೂಟ ಶಿಬಿರಗಳಲ್ಲಿ ಬಂಧಿಗಳಾಗಿದ್ದ ಸಾವಿರಾರು ಸಾಕ್ಷಿಗಳು ಬಿಡುಗಡೆ ಹೊಂದಿದರು. ಆದರೆ ಹೋರಾಟವು ಇನ್ನೂ ಕೊನೆಗೊಂಡಿರಲಿಲ್ಲ. ಎರಡನೆಯ ಜಾಗತಿಕ ಯುದ್ಧ ಕೊನೆಗೊಂಡ ಕೂಡಲೇ, ಶೀತಲ ಯುದ್ಧವು ಆರಂಭವಾಯಿತು. ಪೂರ್ವ ಯೂರೋಪಿನ ರಾಷ್ಟ್ರಗಳು ಯೆಹೋವನ ಜನರ ಮೇಲೆ ಮತ್ತಷ್ಟು ಒತ್ತಡವನ್ನು ತಂದವು. ನಮ್ಮ ಸಾಕ್ಷಿಕಾರ್ಯದ ಚಟುವಟಿಕೆಗಳನ್ನು ತಡೆಯಲು, ಸಾಹಿತ್ಯಗಳ ಸರಬರಾಯಿಯನ್ನು ನಿಲ್ಲಿಸಲು ಮತ್ತು ಸಾರ್ವಜನಿಕ ಕೂಟಗಳನ್ನು ರದ್ದುಪಡಿಸಲು ಅಧಿಕೃತ ಕ್ರಮವನ್ನು ಕೈಗೊಳ್ಳಲಾಯಿತು. ಅನೇಕರನ್ನು ಸೆರೆಮನೆಗಳಿಗೆ ದೊಬ್ಬಲಾಯಿತು ಇಲ್ಲವೆ ಕಾರ್ಮಿಕ ಶಿಬಿರಗಳಿಗೆ ಕಳುಹಿಸಲಾಯಿತು.

ಸಾರುವ ಕೆಲಸದೊಂದಿಗೆ ಮುಂದೆಸಾಗುವುದು!

7. ಇತ್ತೀಚಿನ ವರ್ಷಗಳಲ್ಲಿ ಯೆಹೋವನ ಸಾಕ್ಷಿಗಳು ಪೋಲೆಂಡ್‌, ರಷ್ಯ, ಮತ್ತು ಇತರ ದೇಶಗಳಲ್ಲಿ ಏನನ್ನು ಅನುಭವಿಸಿದ್ದಾರೆ?

7 ದಶಕಗಳು ಗತಿಸಿದಂತೆ, ರಾಜ್ಯ ಸಾರುವಿಕೆಯ ಕೆಲಸವು ಪುನಃ ಪ್ರಾರಂಭವಾಯಿತು. ಪೋಲೆಂಡ್‌ ಇನ್ನೂ ಕಮ್ಯೂನಿಸ್ಟ್‌ ಆಳ್ವಿಕೆಯ ಕೆಳಗಿದ್ದಾಗಲೇ, 1982ರಲ್ಲಿ ಒಂದು ದಿನದ ಅಧಿವೇಶನಗಳನ್ನು ನಡೆಸುವುದಕ್ಕೆ ಅನುಮತಿ ನೀಡಿತು. 1985ರಲ್ಲಿ ಅಲ್ಲಿ ಅಂತಾರಾಷ್ಟ್ರೀಯ ಅಧಿವೇಶನಗಳು ಜರುಗಿದವು. ದೊಡ್ಡ ಅಂತಾರಾಷ್ಟ್ರೀಯ ಅಧಿವೇಶನಗಳು 1989ರಲ್ಲಿ ನಡೆದವು; ರಷ್ಯ ಮತ್ತು ಯುಕ್ರೇನ್‌ ದೇಶಗಳಿಂದ ಬಂದಿದ್ದ ಸಾವಿರಾರು ಜನರು ಅಲ್ಲಿ ಹಾಜರಿದ್ದರು. ಅದೇ ವರ್ಷ ಹಂಗೆರಿ ಮತ್ತು ಪೋಲೆಂಡ್‌ ದೇಶಗಳು ಯೆಹೋವನ ಸಾಕ್ಷಿಗಳಿಗೆ ಕಾನೂನುಬದ್ಧ ಮನ್ನಣೆಯನ್ನು ನೀಡಿದವು. 1989ರ ಶರತ್ಕಾಲದಲ್ಲಿ ಬರ್ಲಿನ್‌ ಗೋಡೆಯು ಕೆಳಗುರುಳಿತು. ಕೆಲವೇ ತಿಂಗಳುಗಳ ನಂತರ, ನಮಗೆ ಪೂರ್ವ ಜರ್ಮನಿಯಲ್ಲಿ ಕಾನೂನುಬದ್ಧ ಮನ್ನಣೆಯನ್ನು ನೀಡಲಾಯಿತು. ಇದಾದ ಸ್ವಲ್ಪ ಸಮಯದಲ್ಲೇ ಬರ್ಲಿನ್‌ನಲ್ಲಿ ಒಂದು ಅಂತಾರಾಷ್ಟ್ರೀಯ ಅಧಿವೇಶನವು ಜರುಗಿತು. ಮತ್ತು 20ನೆಯ ಶತಮಾನದ ಕೊನೆಯ ದಶಕದ ಆರಂಭದಲ್ಲಿ, ರಷ್ಯದಲ್ಲಿರುವ ನಮ್ಮ ಸಹೋದರರೊಂದಿಗೆ ವೈಯಕ್ತಿಕ ಸಂಪರ್ಕವನ್ನು ಇಟ್ಟುಕೊಳ್ಳಲು ಪ್ರಯತ್ನಗಳು ನಡೆಯುತ್ತಿದ್ದವು. ಮಾಸ್ಕೋದಲ್ಲಿದ್ದ ಕೆಲವು ಅಧಿಕಾರಿಗಳನ್ನು ಭೇಟಿಮಾಡಲಾಯಿತು, ಮತ್ತು 1991ರಲ್ಲಿ ಯೆಹೋವನ ಸಾಕ್ಷಿಗಳಿಗೆ ಕಾನೂನುಬದ್ಧ ಮನ್ನಣೆಯನ್ನು ಕೊಡಲಾಯಿತು. ಆ ಸಮಯದಂದಿನಿಂದ, ರಷ್ಯದಲ್ಲಿ ಮತ್ತು ಹಿಂದಿನ ಸೋವಿಯತ್‌ ಒಕ್ಕೂಟದ ಭಾಗವಾಗಿದ್ದ ರಿಪಬ್ಲಿಕ್‌ಗಳಲ್ಲೂ ಕೆಲಸವು ಪ್ರಚಂಡವಾಗಿ ಅಭಿವೃದ್ಧಿಹೊಂದಿದೆ.

8. ಎರಡನೆಯ ಜಾಗತಿಕ ಯುದ್ಧವು ಕೊನೆಗೊಂಡ ನಂತರದ 45 ವರ್ಷಗಳ ವರೆಗೆ ಯೆಹೋವನ ಸಾಕ್ಷಿಗಳಿಗೇನಾಯಿತು?

8 ಕೆಲವು ಕಡೆಗಳಲ್ಲಿ ಹಿಂಸೆಯು ನಿಂತುಹೋಗಿದ್ದರೂ, ಬೇರೆ ಕಡೆಗಳಲ್ಲಿ ಅದು ಹೆಚ್ಚಾಯಿತು. ಎರಡನೆಯ ಜಾಗತಿಕ ಯುದ್ಧವು ಕೊನೆಗೊಂಡ ನಂತರದ 45 ವರ್ಷಗಳ ವರೆಗೆ ಅನೇಕ ದೇಶಗಳು ಯೆಹೋವನ ಸಾಕ್ಷಿಗಳಿಗೆ ಕಾನೂನುಬದ್ಧ ಮನ್ನಣೆಯನ್ನು ನೀಡಲು ನಿರಾಕರಿಸಿದವು. ಅದಲ್ಲದೆ, ಆಫ್ರಿಕದ 23 ದೇಶಗಳಲ್ಲಿ, ಏಷಿಯದಲ್ಲಿ 9, ಯೂರೋಪ್‌ನಲ್ಲಿ 8, ಲ್ಯಾಟಿನ್‌ ಅಮೆರಿಕದಲ್ಲಿ 3, ಮತ್ತು ಕೆಲವೊಂದು ದ್ವೀಪ ರಾಷ್ಟ್ರಗಳ 4 ದೇಶಗಳಲ್ಲಿ, ನಮ್ಮ ಮೇಲೆ ಇಲ್ಲವೆ ನಮ್ಮ ಚಟುವಟಿಕೆಗಳ ಮೇಲೆ ನಿಷೇಧಗಳು ಹೇರಲ್ಪಟ್ಟವು.

9. ಮಲಾವಿಯಲ್ಲಿ ಯೆಹೋವನ ಸಾಕ್ಷಿಗಳು ಏನನ್ನು ಅನುಭವಿಸಿದ್ದಾರೆ?

9 ಮಲಾವಿಯಲ್ಲಿದ್ದ ಯೆಹೋವನ ಸಾಕ್ಷಿಗಳು 1967ರ ಆರಂಭದಿಂದ ಕ್ರೂರ ಹಿಂಸೆಯನ್ನು ಅನುಭವಿಸಿದರು. ಅಲ್ಲಿನ ನಮ್ಮ ಜೊತೆ ವಿಶ್ವಾಸಿಗಳು ಸತ್ಯ ಕ್ರೈಸ್ತರೋಪಾದಿ ತಟಸ್ಥ ನಿಲುವನ್ನು ತೆಗೆದುಕೊಂಡ ಕಾರಣ, ರಾಜಕೀಯ ಪಕ್ಷದ ಗುರುತು ಚೀಟಿಗಳನ್ನು ಖರೀದಿಸಲು ಅವರು ಬಯಸಲಿಲ್ಲ. (ಯೋಹಾನ 17:16) 1972ರಲ್ಲಿ ಮಲಾವಿ ಕಾಂಗ್ರೆಸ್‌ ಪಕ್ಷದ ಒಂದು ಕೂಟದ ನಂತರ, ಅವರ ಕ್ರೂರತನವು ಮತ್ತೆ ಆರಂಭವಾಯಿತು. ಸಹೋದರರು ತಮ್ಮ ಮನೆಗಳಿಂದ ಓಡಿಸಲ್ಪಟ್ಟರಲ್ಲದೆ, ಅವರಿಗೆ ಉದ್ಯೋಗವನ್ನೂ ನಿರಾಕರಿಸಲಾಯಿತು. ಕೊಲ್ಲಲ್ಪಡುವುದರಿಂದ ತಪ್ಪಿಸಿಕೊಳ್ಳಲು ಸಾವಿರಾರು ಸಹೋದರರು ಆ ದೇಶದಿಂದ ಪಲಾಯನಗೈದರು. ಆದರೆ ದೇವರ ವಿರುದ್ಧ ಹಾಗೂ ಆತನ ಜನರ ವಿರುದ್ಧ ಹೋರಾಡಿದವರು ಜಯಗಳಿಸಿದರೊ? ಖಂಡಿತವಾಗಿಯೂ ಇಲ್ಲ! ಪರಿಸ್ಥಿತಿಗಳು ಬದಲಾದವು ಮತ್ತು 1999ರಲ್ಲಿ ಮಲಾವಿ ದೇಶವು 43,767 ರಾಜ್ಯ ಪ್ರಚಾರಕರ ಉಚ್ಚಾಂಕವನ್ನು ವರದಿಸಿತು ಹಾಗೂ 1,20,000ಕ್ಕಿಂತಲೂ ಹೆಚ್ಚಿನ ಜನರು ಅಲ್ಲಿ ನಡೆದ ಜಿಲ್ಲಾ ಅಧಿವೇಶನಗಳಿಗೆ ಹಾಜರಾದರು. ರಾಜಧಾನಿಯಲ್ಲಿ ಒಂದು ಹೊಸ ಬ್ರಾಂಚ್‌ ಆಫೀಸು ನಿರ್ಮಿಸಲ್ಪಟ್ಟಿದೆ.

ಅವರು ನೆಪವನ್ನು ಹುಡುಕುತ್ತಾರೆ

10. ದಾನಿಯೇಲನ ವಿಷಯದಲ್ಲಿ ಸತ್ಯವಾಗಿದ್ದಂತೆ, ಸದ್ಯದ ದಿನದಲ್ಲಿನ ದೇವಜನರ ವಿರೋಧಿಗಳು ಏನನ್ನು ಮಾಡಿದ್ದಾರೆ?

10 ಧರ್ಮಭ್ರಷ್ಟರು, ಪಾದ್ರಿಗಳು ಮತ್ತು ಇತರರಿಗೆ, ದೇವರ ವಾಕ್ಯದಲ್ಲಿರುವ ನಮ್ಮ ಸಂದೇಶವನ್ನು ಸಹಿಸಿಕೊಳ್ಳಲಾಗುತ್ತಿಲ್ಲ. ಕ್ರೈಸ್ತಪ್ರಪಂಚದ ಕೆಲವು ಧಾರ್ಮಿಕ ಮೂಲಗಳಿಂದ ಬರುವ ಒತ್ತಡದಿಂದಾಗಿ, ವಿರೋಧಿಗಳು ನಮ್ಮ ವಿರುದ್ಧ ಕೈಗೊಳ್ಳುವ ಹೋರಾಟವನ್ನು ಸಮರ್ಥಿಸಿಕೊಳ್ಳಲು, ನಾಮಮಾತ್ರದ ಕಾನೂನುಬದ್ಧ ವಿಧಾನಕ್ಕಾಗಿ ಹುಡುಕುತ್ತಾರೆ. ಕೆಲವೊಮ್ಮೆ ಯಾವ ತಂತ್ರಗಳನ್ನು ಉಪಯೋಗಿಸಲಾಗುತ್ತದೆ? ಪ್ರವಾದಿ ದಾನಿಯೇಲನ ಮೇಲೆ ಆಕ್ರಮಣ ಮಾಡಲು ಸಂಚುಗಾರರು ಏನು ಮಾಡಿದರು? ದಾನಿಯೇಲ 6:4, 5ರಲ್ಲಿ ನಾವು ಹೀಗೆ ಓದುತ್ತೇವೆ: “ಮುಖ್ಯಾಧಿಕಾರಿಗಳೂ ದೇಶಾಧಿಪತಿಗಳೂ ರಾಜ್ಯಭಾರದ ವಿಷಯವಾಗಿ ದಾನಿಯೇಲನ ಮೇಲೆ ತಪ್ಪುಹೊರಿಸುವದಕ್ಕೆ ಸಂದರ್ಭಹುಡುಕುತ್ತಿದ್ದರು; ಆದರೆ ತಪ್ಪುಹೊರಿಸುವದಕ್ಕೆ ಯಾವ ಸಂದರ್ಭವನ್ನೂ ಯಾವ ತಪ್ಪನ್ನೂ ಕಾಣಲಾರದೆ ಹೋದರು; ಅವನು ನಂಬಿಗಸ್ತನೇ ಆಗಿದ್ದನು, ಅವನಲ್ಲಿ ಆಲಸ್ಯವಾಗಲಿ ಅಕ್ರಮವಾಗಲಿ ಸಿಕ್ಕಲಿಲ್ಲ. ಆಗ ಆ ಮನುಷ್ಯರು—ಈ ದಾನಿಯೇಲನ ಮೇಲೆ ತಪ್ಪುಹೊರಿಸಲು ಇವನ ದೇವಧರ್ಮದ ಮೂಲಕವೇ ಹೊರತು ಇನ್ನಾವದರಲ್ಲಿಯೂ ನಮಗೆ ಅವಕಾಶ ದೊರೆಯದು ಅಂದುಕೊಂಡರು.” ತದ್ರೀತಿಯಲ್ಲಿ ಇಂದು ಸಹ, ವಿರೋಧಿಗಳು ನಮ್ಮ ವಿರುದ್ಧ ಒಂದು ನೆಪವನ್ನು ಹುಡುಕುತ್ತಿರುತ್ತಾರೆ. ಅವರು “ಅಪಾಯಕರ ಕುಪಂಥಗಳ” ಕುರಿತು ಹುಯಿಲೆಬ್ಬಿಸುತ್ತಾರೆ. ಮತ್ತು ಈ ನಾಮಪಟ್ಟಿಯನ್ನು ಯೆಹೋವನ ಸಾಕ್ಷಿಗಳಿಗೆ ಅಂಟಿಸಲು ಪ್ರಯತ್ನಿಸುತ್ತಾರೆ. ತಪ್ಪು ವರದಿಗಳು, ವ್ಯಂಗ್ಯೋಕ್ತಿಗಳು, ಮತ್ತು ಸುಳ್ಳುಗಳ ಮೂಲಕ, ಅವರು ನಮ್ಮ ಆರಾಧನೆ ಹಾಗೂ ದೈವಿಕ ತತ್ವಗಳಿಗೆ ನಾವು ತೋರಿಸುವ ನಿಷ್ಠೆಯ ಮೇಲೆ ಆಕ್ರಮಣ ನಡೆಸುತ್ತಾರೆ.

11. ಯೆಹೋವನ ಸಾಕ್ಷಿಗಳ ಕೆಲವೊಂದು ವಿರೋಧಿಗಳು ಯಾವ ಸುಳ್ಳು ಹೇಳಿಕೆಗಳನ್ನು ನೀಡಿದ್ದಾರೆ?

11 ನಾವು “ದೇವರ ಸನ್ನಿಧಾನದಲ್ಲಿ ಶುದ್ಧವೂ ನಿರ್ಮಲವೂ ಆಗಿರುವ ಭಕ್ತಿ”ಯನ್ನು ಅನುಸರಿಸುವ ಜನರಾಗಿದ್ದೇವೆಂಬುದನ್ನು ಕೆಲವು ದೇಶಗಳಲ್ಲಿನ ಧಾರ್ಮಿಕ ಹಾಗೂ ರಾಜಕೀಯ ಶಕ್ತಿಗಳು ಒಪ್ಪಿಕೊಳ್ಳಲು ಬಯಸುವುದಿಲ್ಲ. (ಯಾಕೋಬ 1:27) ನಮ್ಮ ಕ್ರೈಸ್ತ ಚಟುವಟಿಕೆಗಳು 234 ದೇಶಗಳಲ್ಲಿ ನಡೆಯುತ್ತಿದ್ದರೂ, ನಮ್ಮದು ಒಂದು “ಜ್ಞಾತ ಧರ್ಮ”ವಲ್ಲವೆಂಬುದು ವಿರೋಧಿಗಳ ಹೇಳಿಕೆಯಾಗಿದೆ. ಯೆಹೋವನ ಸಾಕ್ಷಿಗಳ ಧರ್ಮವು ಜ್ಞಾತ ಧರ್ಮವೆಂದು ಯೂರೋಪಿಯನ್‌ ಕೋರ್ಟ್‌ ಆಫ್‌ ಹ್ಯೂಮನ್‌ ರೈಟ್ಸ್‌ ತೀರ್ಪು ಕೊಟ್ಟಿದ್ದರೂ, “[ಯೆಹೋವನ ಸಾಕ್ಷಿಗಳದ್ದು] ‘ಜ್ಞಾತ ಧರ್ಮ’ವಲ್ಲ” ಎಂಬ ಗ್ರೀಕ್‌ ಆರ್ತೊಡಾಕ್ಸ್‌ ಪಾದ್ರಿಗಳ ಹೇಳಿಕೆಯನ್ನು ಅಥೇನ್ಸ್‌ನ ಒಂದು ವಾರ್ತಾಪತ್ರಿಕೆಯು 1998ರಲ್ಲಿ ಒಂದು ಅಂತಾರಾಷ್ಟ್ರೀಯ ಅಧಿವೇಶನದ ಸ್ವಲ್ಪ ಸಮಯಕ್ಕೆ ಮುಂಚೆ ಉದ್ಧರಿಸಿತು. ಕೆಲವು ದಿನಗಳ ನಂತರ, ಅದೇ ನಗರದ ಮತ್ತೊಂದು ವಾರ್ತಾಪತ್ರಿಕೆಯು, ಚರ್ಚಿನ ಪ್ರತಿನಿಧಿಯೊಬ್ಬನು ಹೀಗೆ ಹೇಳಿದನೆಂಬುದನ್ನು ವರದಿಸಿತು: “[ಯೆಹೋವನ ಸಾಕ್ಷಿಗಳು] ‘ಒಂದು ಕ್ರೈಸ್ತ ಸಭೆ’ಯಾಗಿರಲು ಸಾಧ್ಯವಿಲ್ಲ, ಏಕೆಂದರೆ ಯೇಸು ಕ್ರಿಸ್ತನ ಕುರಿತಾಗಿರುವ ಕ್ರೈಸ್ತ ನಂಬಿಕೆಗೆ ಅನುರೂಪವಾದ ಯಾವ ವಿಷಯವೂ ಅವರಲ್ಲಿ ಇಲ್ಲ.” ಇದು ನಿಜವಾಗಿಯೂ ಅಚ್ಚರಿಗೊಳಿಸುವಂಥ ಸಂಗತಿಯಾಗಿದೆ, ಏಕೆಂದರೆ ಯೇಸುವನ್ನು ಅನುಕರಿಸುವುದಕ್ಕೆ ಯೆಹೋವನ ಸಾಕ್ಷಿಗಳು ಕೊಡುವಷ್ಟು ಮಹತ್ವವನ್ನು ಇನ್ನಾವ ಧಾರ್ಮಿಕ ಗುಂಪಿನವರೂ ಕೊಡುವುದಿಲ್ಲ!

12. ನಮ್ಮ ಆತ್ಮಿಕ ಹೋರಾಟವನ್ನು ನಡೆಸಲಿಕ್ಕಾಗಿ ನಾವೇನು ಮಾಡಬೇಕು?

12 ನಾವು ಸುವಾರ್ತೆಯನ್ನು ಕಾನೂನುಬದ್ಧ ವಿಧಾನಗಳ ಮೂಲಕ ಸಂರಕ್ಷಿಸಿ, ಸ್ಥಾಪಿಸಲು ಪ್ರಯತ್ನಿಸುತ್ತೇವೆ. (ಫಿಲಿಪ್ಪಿ 1:7) ಅದಲ್ಲದೆ, ದೇವರ ನೀತಿಯ ಮಟ್ಟಗಳ ಕಡೆಗಿನ ದೃಢವಾದ ನಿಷ್ಠೆಯನ್ನು ನಾವೆಂದಿಗೂ ಸಂಧಾನಮಾಡಿಕೊಳ್ಳುವುದಿಲ್ಲ ಇಲ್ಲವೆ ಅವುಗಳ ಮಹತ್ವವನ್ನು ಕಡಿಮೆಗೊಳಿಸುವುದಿಲ್ಲ. (ತೀತ 2:10, 12) ದೇವರ ವಿರುದ್ಧ ಹೋರಾಡುವವರು ನಮ್ಮಲ್ಲಿ ಭಯಹುಟ್ಟಿಸುವಂತೆ ಬಿಡದಿರುವ ಮೂಲಕ, ಯೆರೆಮೀಯನಂತೆ ನಾವು ‘ನಡುಕಟ್ಟಿಕೊಂಡು ದೇವರು ನಮಗೆ ಆಜ್ಞಾಪಿಸುವದನ್ನೆಲ್ಲಾ ಹೇಳುತ್ತೇವೆ.’ (ಯೆರೆಮೀಯ 1:17, 18) ನಾವು ಆರಿಸಿಕೊಳ್ಳಬೇಕಾದ ಸರಿಯಾದ ಮಾರ್ಗವನ್ನು ಯೆಹೋವನ ಪವಿತ್ರ ವಾಕ್ಯವು ಸ್ಪಷ್ಟವಾಗಿ ಗುರುತಿಸಿದೆ. ನಾವು ದುರ್ಬಲವಾದ ‘ಮಾಂಸದ ತೋಳಿನ’ ಮೇಲೆ ಆತುಕೊಳ್ಳಲು ಇಲ್ಲವೇ ‘ಐಗುಪ್ತದ,’ ಅಂದರೆ ಈ ಲೋಕದ ‘ನೆರಳಿನಲ್ಲಿ ಆಶ್ರಯ’ವನ್ನು ಪಡೆದುಕೊಳ್ಳಲು ಎಂದೂ ಬಯಸುವುದಿಲ್ಲ. (2 ಪೂರ್ವಕಾಲವೃತ್ತಾಂತ 32:8; ಯೆಶಾಯ 30:3; 31:1-3) ಆತ್ಮಿಕ ಹೋರಾಟವನ್ನು ನಡೆಸುತ್ತಿರುವಾಗ ನಾವು ನಿರಂತರವಾಗಿ ಪೂರ್ಣಮನಸ್ಸಿನಿಂದ ಯೆಹೋವನ ಮೇಲೆ ಭರವಸೆಯಿಡಬೇಕು, ಆತನು ನಮ್ಮ ಹೆಜ್ಜೆಗಳನ್ನು ನಿರ್ದೇಶಿಸುವಂತೆ ಬಿಡಬೇಕು ಮತ್ತು ಸ್ವಬುದ್ಧಿಯನ್ನು ಆಧಾರಮಾಡಿಕೊಳ್ಳಬಾರದು. (ಜ್ಞಾನೋಕ್ತಿ 3:5-7) ನಮಗೆ ಯೆಹೋವನ ಬೆಂಬಲ ಹಾಗೂ ರಕ್ಷಣೆ ಇರದಿದ್ದರೆ, ನಮ್ಮ ಎಲ್ಲ ಕೆಲಸವು ‘ವ್ಯರ್ಥವೇ’ ಸರಿ.—ಕೀರ್ತನೆ 127:1.

ಹಿಂಸಿಸಲ್ಪಟ್ಟರೂ ರಾಜಿಮಾಡಿಕೊಳ್ಳದವರು

13. ಯೇಸುವಿನ ಮೇಲೆ ಸೈತಾನನು ನಡೆಸಿದ ಆಕ್ರಮಣವು ವಿಫಲವಾಯಿತೆಂದು ಏಕೆ ಹೇಳಸಾಧ್ಯವಿದೆ?

13 ರಾಜಿಮಾಡಿಕೊಳ್ಳದೆ ಯೆಹೋವನಿಗೆ ಭಕ್ತಿಯನ್ನು ಸಲ್ಲಿಸುವುದರಲ್ಲಿ ನಮ್ಮ ಅಗ್ರಗಣ್ಯ ಮಾದರಿಯು ಯೇಸುವಾಗಿದ್ದಾನೆ. ರಾಜ್ಯದ್ರೋಹದ ಮತ್ತು ಸ್ಥಾಪಿತ ವ್ಯವಸ್ಥೆಯಲ್ಲಿ ಗಲಿಬಿಲಿಯನ್ನುಂಟುಮಾಡುವ ಸುಳ್ಳಾರೋಪವನ್ನು ಅವನ ಮೇಲೆ ಹೊರಿಸಲಾಯಿತು. ಯೇಸುವಿನ ಮೇಲೆ ಹೊರಿಸಲಾಗಿದ್ದ ಅಪವಾದವನ್ನು ಪರೀಕ್ಷಿಸಿದ ನಂತರ, ಅವನನ್ನು ಬಿಡುಗಡೆಮಾಡಲು ಪಿಲಾತನು ಸಿದ್ಧನಾಗಿದ್ದನು. ಆದರೆ, ಧಾರ್ಮಿಕ ಮುಖಂಡರಿಂದ ಹುರಿದುಂಬಿಸಲ್ಪಟ್ಟ ಜನಸಮೂಹವು ಯೇಸು ನಿರ್ದೋಷಿಯಾಗಿದ್ದರೂ ಅವನನ್ನು ಶೂಲಕ್ಕೇರಿಸಬೇಕೆಂದು ಅಬ್ಬರಿಸಿತು. ಯೇಸುವಿಗೆ ಬದಲಾಗಿ, ರಾಜ್ಯದ್ರೋಹ ಮತ್ತು ಕೊಲೆಯ ಆರೋಪದ ಮೇಲೆ ಸೆರೆಮನೆಯಲ್ಲಿದ್ದ ಬರಬ್ಬನನ್ನು ಬಿಡುಗಡೆ ಮಾಡುವಂತೆ ಅವರು ಕೇಳಿಕೊಂಡರು! ಅನ್ಯಾಯವಾಗಿ ವಿರೋಧಿಸುತ್ತಿದ್ದವರನ್ನು ತಡೆಯಲು ಪಿಲಾತನು ಪುನಃ ಪ್ರಯತ್ನಿಸಿದನು, ಆದರೆ ಕೊನೆಗೆ ಅವನು ಜನಸಮೂಹದ ಗದ್ದಲ ಹಾಗೂ ಅಬ್ಬರಕ್ಕೆ ಮಣಿದನು. (ಲೂಕ 23:2, 5, 14, 18-25) ಯೇಸು ಯಾತನಾ ಕಂಭದ ಮೇಲೆ ಸತ್ತರೂ, ದೇವರ ಈ ನಿರ್ದೋಷಿ ಮಗನ ಮೇಲೆ ಸೈತಾನನು ನಡೆಸಿದ ಅತ್ಯಂತ ಹೇಯವಾದ ಆಕ್ರಮಣವು ಸಂಪೂರ್ಣವಾಗಿ ವಿಫಲವಾಯಿತು, ಏಕೆಂದರೆ ಯೆಹೋವನು ಯೇಸುವನ್ನು ಪುನರುತ್ಥಾನಗೊಳಿಸಿ, ಅವನನ್ನು ತನ್ನ ಬಲಗಡೆಯ ಸ್ಥಾನಕ್ಕೆ ಏರಿಸಿದನು. ಮಹಿಮಾಭರಿತ ಯೇಸುವಿನ ಮೂಲಕ, ಸಾ.ಶ. 33ರ ಪಂಚಾಶತ್ತಮದಂದು ಪವಿತ್ರಾತ್ಮವು ಸುರಿಸಲ್ಪಟ್ಟು, “ಹೊಸ ಸೃಷ್ಟಿ” ಅಂದರೆ ಕ್ರೈಸ್ತ ಸಭೆಯು ಸ್ಥಾಪಿಸಲ್ಪಟ್ಟಿತು.—2 ಕೊರಿಂಥ 5:17; ಅ. ಕೃತ್ಯಗಳು 2:1-4.

14. ಯೆಹೂದಿ ಧಾರ್ಮಿಕ ಶಕ್ತಿಗಳು ಯೇಸುವಿನ ಹಿಂಬಾಲಕರ ವಿರುದ್ಧ ಕ್ರಿಯೆಗೈದದ್ದರ ಪರಿಣಾಮವೇನಾಗಿತ್ತು?

14 ಇದಾದ ಸ್ವಲ್ಪದರಲ್ಲೇ, ಧಾರ್ಮಿಕ ಶಕ್ತಿಗಳು ಅಪೊಸ್ತಲರನ್ನು ಬೆದರಿಸಿದವು. ಆದರೆ ತಾವು ಕಣ್ಣಾರೆ ಕಂಡಿದ್ದ ಮತ್ತು ಕೇಳಿಸಿಕೊಂಡಿದ್ದ ವಿಷಯಗಳ ಕುರಿತು ಮಾತಾಡುವುದನ್ನು ಕ್ರಿಸ್ತನ ಆ ಹಿಂಬಾಲಕರು ನಿಲ್ಲಿಸಲಿಲ್ಲ. ಯೇಸುವಿನ ಶಿಷ್ಯರು ಪ್ರಾರ್ಥಿಸಿದ್ದು: “ಕರ್ತನೇ, ಈಗ ನೀನು ಅವರ ಬೆದರಿಸುವಿಕೆಗಳನ್ನು ನೋಡಿ . . . ನಿನ್ನ ದಾಸರು ನಿನ್ನ ವಾಕ್ಯವನ್ನು ಧೈರ್ಯದಿಂದ ಹೇಳುವ ಹಾಗೆ ಅನುಗ್ರಹಿಸು.” (ಅ. ಕೃತ್ಯಗಳು 4:29) ನಿರ್ಭೀತಿಯಿಂದ ಸಾರುವುದನ್ನು ಮುಂದುವರಿಸುವಂತೆ ಅವರಲ್ಲಿ ಪವಿತ್ರಾತ್ಮವನ್ನು ತುಂಬಿಸಿ, ಬಲಪಡಿಸುವ ಮೂಲಕ ಯೆಹೋವನು ಅವರ ಮೊರೆಗೆ ಕಿವಿಗೊಟ್ಟನು. ಸಾರುವ ಕೆಲಸವನ್ನು ನಿಲ್ಲಿಸುವಂತೆ ಅಪೊಸ್ತಲರಿಗೆ ಪುನಃ ಆಜ್ಞಾಪಿಸಲಾಯಿತು, ಆದರೆ ಪೇತ್ರನು ಮತ್ತು ಇತರ ಅಪೊಸ್ತಲರು ಉತ್ತರಿಸಿದ್ದು: “ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಬೇಕಲ್ಲಾ.” (ಅ. ಕೃತ್ಯಗಳು 5:29) ಬೆದರಿಕೆಗಳು, ದಸ್ತಗಿರಿಗಳು, ಮತ್ತು ಹೊಡೆತಗಳು, ರಾಜ್ಯದ ಚಟುವಟಿಕೆಯನ್ನು ವಿಸ್ತರಿಸುವುದರಿಂದ ಅವರನ್ನು ತಡೆಯಲಿಲ್ಲ.

15. ಗಮಲಿಯೇಲನು ಯಾರಾಗಿದ್ದನು, ಮತ್ತು ಯೇಸುವಿನ ಹಿಂಬಾಲಕರ ಧಾರ್ಮಿಕ ವಿರೋಧಿಗಳಿಗೆ ಅವನು ಯಾವ ಸಲಹೆಯನ್ನಿತ್ತನು?

15 ಇದಕ್ಕೆ ಧಾರ್ಮಿಕ ನಾಯಕರುಗಳು ಹೇಗೆ ಪ್ರತಿಕ್ರಿಯಿಸಿದರು? “ಸಭಿಕರು ಈ ಮಾತನ್ನು ಕೇಳಿ ರೌದ್ರವಾಗಿ [ಅಪೊಸ್ತಲರನ್ನು] ಕೊಲ್ಲಿಸಬೇಕೆಂದು ಯೋಚಿಸಿದರು.” ಆದರೆ, ಎಲ್ಲರ ಗೌರವಕ್ಕೂ ಪಾತ್ರನಾಗಿದ್ದು, ಧರ್ಮಶಾಸ್ತ್ರದ ಬೋಧಕನಾಗಿದ್ದ ಗಮಲಿಯೇಲನೆಂಬ ಫರಿಸಾಯನು ಅಲ್ಲಿ ಉಪಸ್ಥಿತನಿದ್ದನು. ಅಪೊಸ್ತಲರನ್ನು ಸ್ವಲ್ಪ ಹೊತ್ತು ಹಿರೀಸಭೆಯಿಂದ ಹೊರಗೆ ಕಳುಹಿಸಿದ ನಂತರ, ಅವನು ಆ ಧಾರ್ಮಿಕ ವಿರೋಧಿಗಳಿಗೆ ಈ ಸಲಹೆಯಿತ್ತನು: “ಇಸ್ರಾಯೇಲ್‌ ಜನರೇ, ನೀವು ಈ ಮನುಷ್ಯರ ವಿಷಯದಲ್ಲಿ ಮಾಡಬೇಕೆಂದಿರುವದನ್ನು ಕುರಿತು ಎಚ್ಚರಿಕೆಯುಳ್ಳವರಾಗಿರ್ರಿ. . . . ನಾನು ನಿಮಗೆ ಹೇಳುವದೇನಂದರೆ ನೀವು ಆ ಮನುಷ್ಯರ ಗೊಡವೆಗೆ ಹೋಗಬೇಡಿರಿ, ಅವರನ್ನು ಬಿಡಿರಿ; ಯಾಕಂದರೆ ಈ ಯೋಚನೆಯು ಅಥವಾ ಈ ಕೆಲಸವು ಮನುಷ್ಯರಿಂದಾಗಿದ್ದರೆ ತಾನೇ ಕೆಡುವದು; ಅದು ದೇವರಿಂದಾಗಿದ್ದರೆ ಅದನ್ನು ಕೆಡಿಸುವದಕ್ಕೆ ನಿಮ್ಮಿಂದ ಆಗುವದಿಲ್ಲ. ನೀವು ಒಂದು ವೇಳೆ ದೇವರ ಮೇಲೆ ಯುದ್ಧಮಾಡುವವರಾಗಿ ಕಾಣಿಸಿಕೊಂಡೀರಿ.”—ಅ. ಕೃತ್ಯಗಳು 5:33-39.

ನಮ್ಮನ್ನು ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸಲಾರದು

16. ಯೆಹೋವನು ತನ್ನ ಜನರಿಗೆ ಕೊಡುವ ಆಶ್ವಾಸನೆಯನ್ನು ನೀವು ನಿಮ್ಮ ಸ್ವಂತ ಮಾತುಗಳಲ್ಲಿ ಹೇಗೆ ಹೇಳುವಿರಿ?

16 ಗಮಲಿಯೇಲನ ಸಲಹೆಯು ಸಮಂಜಸವಾದದ್ದಾಗಿತ್ತು. ಮತ್ತು ಹೀಗೆ ಕೆಲವರು ನಮ್ಮ ಪರವಾಗಿ ಮಾತಾಡುವಾಗ ನಾವದನ್ನು ಗಣ್ಯಮಾಡುತ್ತೇವೆ. ನಿಷ್ಪಕ್ಷಪಾತಿ ನ್ಯಾಯಾಧೀಶರಿಂದ ಕೊಡಲ್ಪಡುವ ಕೋರ್ಟು ತೀರ್ಪುಗಳ ಮೂಲಕ ಆರಾಧನೆಯ ಸ್ವಾತಂತ್ರ್ಯವು ಎತ್ತಿಹಿಡಿಯಲ್ಪಟ್ಟಿದೆ ಎಂಬುದನ್ನು ಸಹ ನಾವು ಅಂಗೀಕರಿಸುತ್ತೇವೆ. ಬೈಬಲ್‌ ತತ್ವಗಳಿಗೆ ಹಾಗೂ ಬೋಧನೆಗಳಿಗೆ ನಾವು ನಿಕಟವಾಗಿ ಅಂಟಿಕೊಳ್ಳುತ್ತಿರುವುದು, ಕ್ರೈಸ್ತಪ್ರಪಂಚದ ಪಾದ್ರಿಗಳನ್ನು ಮತ್ತು ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾದ ಮಹಾ ಬಾಬೆಲಿನ ಇತರ ಧಾರ್ಮಿಕ ನಾಯಕರನ್ನು ಖಂಡಿತವಾಗಿಯೂ ಅಸಮಾಧಾನಪಡಿಸುತ್ತದೆ. (ಪ್ರಕಟನೆ 18:1-3) ಇವರು ಮತ್ತು ಇವರಿಂದ ಪ್ರಭಾವಿತರಾದ ಜನರು, ನಮಗೆ ವಿರೋಧವಾಗಿ ಹೋರಾಡುತ್ತಿದ್ದರೂ, ನಮಗೆ ಈ ಆಶ್ವಾಸನೆಯಿದೆ: “ನಿನ್ನನ್ನು ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸದು; ನ್ಯಾಯವಿಚಾರಣೆಯಲ್ಲಿ ನಿನಗೆ ವಿರುದ್ಧವಾಗಿ ಏಳುವ ಪ್ರತಿಯೊಂದು ನಾಲಿಗೆಯನ್ನು ದೋಷಿಯೆಂದು ನೀನು ಖಂಡಿಸುವಿ. ಈ ಸ್ಥಿತಿಯೇ ಯೆಹೋವನ ಸೇವಕರ ಸ್ವಾಸ್ತ್ಯವೂ ನಾನು ದಯಪಾಲಿಸುವ ಸದ್ಧರ್ಮಫಲವೂ ಆಗಿದೆ ಎಂದು ಯೆಹೋವನು ಅನ್ನುತ್ತಾನೆ.”—ಯೆಶಾಯ 54:17.

17. ವಿರೋಧಿಗಳು ನಮ್ಮ ವಿರುದ್ಧವಾಗಿ ಹೋರಾಡಿದರೂ, ನಾವೇಕೆ ಧೈರ್ಯದಿಂದಿದ್ದೇವೆ?

17 ನಮ್ಮ ಶತ್ರುಗಳು ವಿನಾಕಾರಣ ನಮ್ಮ ವಿರುದ್ಧವಾಗಿ ಹೋರಾಡುತ್ತಿರುವುದಾದರೂ ನಾವು ಧೃತಿಗೆಡುವುದಿಲ್ಲ. (ಕೀರ್ತನೆ 109:1-3) ನಮ್ಮ ಬೈಬಲ್‌ ಸಂದೇಶವನ್ನು ದ್ವೇಷಿಸುವವರು, ನಮ್ಮ ನಂಬಿಕೆಯನ್ನು ರಾಜಿಮಾಡಿಕೊಳ್ಳುವಷ್ಟರ ಮಟ್ಟಿಗೆ ನಮ್ಮನ್ನು ಹೆದರಿಸಲು ನಾವು ಖಂಡಿತವಾಗಿಯೂ ಬಿಡಲಾರೆವು. ನಮ್ಮ ಆತ್ಮಿಕ ಹೋರಾಟವು ಹೆಚ್ಚೆಚ್ಚು ತೀಕ್ಷ್ಣವಾಗುವುದನ್ನು ನಾವು ನಿರೀಕ್ಷಿಸುತ್ತೇವಾದರೂ, ಇದರ ಪರಿಣಾಮವು ಏನಾಗಿರುವುದೆಂಬುದು ನಮಗೆ ತಿಳಿದಿದೆ. ಯೆರೆಮೀಯನಂತೆ ನಾವು ಈ ಪ್ರವಾದನಾ ಮಾತುಗಳ ನೆರವೇರಿಕೆಯನ್ನು ಅನುಭವಿಸುವೆವು: “ಅವರು ನಿನಗೆ ವಿರುದ್ಧವಾಗಿ ಯುದ್ಧಮಾಡುವರು, ಆದರೆ ನಿನ್ನನ್ನು ಸೋಲಿಸಲಾಗುವದಿಲ್ಲ; ನಿನ್ನನ್ನುದ್ಧರಿಸಲು ನಾನೇ ನಿನ್ನೊಂದಿಗಿರುವೆನು, ಇದು ಯೆಹೋವನಾದ ನನ್ನ ಮಾತು.” (ಯೆರೆಮೀಯ 1:19) ಹೌದು, ದೇವರ ವಿರುದ್ಧ ಹೋರಾಡುವವರು ಜಯಗಳಿಸಲಾರರು ಎಂಬುದು ನಮಗೆ ತಿಳಿದಿದೆ!

[ಪಾದಟಿಪ್ಪಣಿಗಳು]

^ ಪ್ಯಾರ. 5 ಪುಟ 24-8ರಲ್ಲಿರುವ “ನಾಜಿ ದಬ್ಬಾಳಿಕೆಯ ಎದುರಿನಲ್ಲೂ ನಂಬಿಗಸ್ತರು ಹಾಗೂ ನಿರ್ಭೀತರು” ಎಂಬ ಲೇಖನವನ್ನು ನೋಡಿರಿ.

ನೀವು ಹೇಗೆ ಪ್ರತಿಕ್ರಿಯಿಸುವಿರಿ?

• ಯೆಹೋವನ ಸೇವಕರು ಏಕೆ ಆಕ್ರಮಣಕ್ಕೊಳಗಾಗಿದ್ದಾರೆ?

• ಯೆಹೋವನ ಜನರ ವಿರುದ್ಧವಾಗಿ ವಿರೋಧಿಗಳು ಯಾವ ರೀತಿಯಲ್ಲಿ ಹೋರಾಡಿದ್ದಾರೆ?

• ದೇವರ ವಿರುದ್ಧ ಹೋರಾಡುವವರು ಜಯಗಳಿಸುವುದಿಲ್ಲವೆಂದು ನಾವು ಏಕೆ ಖಾತ್ರಿಯಿಂದಿರಸಾಧ್ಯವಿದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 17ರಲ್ಲಿರುವ ಚಿತ್ರ]

ಯೆಹೋವನು ತನ್ನೊಂದಿಗಿರುವನೆಂಬ ಆಶ್ವಾಸನೆ ಯೆರೆಮೀಯನಿಗಿತ್ತು

[ಪುಟ 18ರಲ್ಲಿರುವ ಚಿತ್ರ]

ಕೂಟ ಶಿಬಿರದಿಂದ ಪಾರಾಗಿ ಉಳಿದವರು

[ಪುಟ 18ರಲ್ಲಿರುವ ಚಿತ್ರ]

ಯೆಹೋವನ ಸಾಕ್ಷಿಗಳ ವಿರುದ್ಧ ದೊಂಬಿ ಗಲಭೆ

[ಪುಟ 18ರಲ್ಲಿರುವ ಚಿತ್ರ]

ಜೆ. ಎಫ್‌. ರದರ್‌ಫರ್ಡ್‌ ಮತ್ತು ಅವರ ಸಂಗಡಿಗರು

[ಪುಟ 21ರಲ್ಲಿರುವ ಚಿತ್ರ]

ಯೇಸುವಿನ ವಿಷಯದಲ್ಲಿ, ದೇವರ ವಿರುದ್ಧ ಹೋರಾಡಿದವರು ಜಯಗಳಿಸಲಿಲ್ಲ