ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಂಕಷ್ಟಗಳ ಸಮಯದಲ್ಲೂ ಮನಃಪೂರ್ವಕವಾಗಿ ಸೇವೆಮಾಡುವುದು

ಸಂಕಷ್ಟಗಳ ಸಮಯದಲ್ಲೂ ಮನಃಪೂರ್ವಕವಾಗಿ ಸೇವೆಮಾಡುವುದು

ಜೀವನ ಕಥೆ

ಸಂಕಷ್ಟಗಳ ಸಮಯದಲ್ಲೂ ಮನಃಪೂರ್ವಕವಾಗಿ ಸೇವೆಮಾಡುವುದು

ರೊಡೊಲ್ಫೊ ಲೊಸಾನೊ ಅವರು ಹೇಳಿರುವಂತೆ

ಇಸವಿ 1917ರ ಸೆಪ್ಟೆಂಬರ್‌ 17ರಂದು, ನಾನು ಮೆಕ್ಸಿಕೊ ದೇಶದ ಡ್ಯೂರಾಂಗೋ ರಾಜ್ಯದ ಗೊಮೆಜ್‌ ಪಾಲಾಸ್ಯೊ ಎಂಬ ನಗರದಲ್ಲಿ ಹುಟ್ಟಿದೆ. ಆ ಸಮಯದಲ್ಲಿ ಮೆಕ್ಸಿಕನ್‌ ಕ್ರಾಂತಿಯು ಬಿರುಸಿನಿಂದ ನಡೆಯುತ್ತಾ ಇತ್ತು. ಈ ಕ್ರಾಂತಿಯು 1920ರಲ್ಲಿ ಕೊನೆಗೊಂಡರೂ, ಮುಂದಿನ ಅನೇಕ ವರ್ಷಗಳ ವರೆಗೆ ನಾವು ವಾಸಿಸುತ್ತಿದ್ದ ಕ್ಷೇತ್ರಗಳಲ್ಲಿನ ಗಲಭೆಗಳು ಮುಂದುವರಿದವು. ಮತ್ತು ಇದು ನಮ್ಮ ಜೀವಿತವನ್ನು ತುಂಬ ಕಷ್ಟಕರವನ್ನಾಗಿ ಮಾಡಿತು.

ಒಮ್ಮೆ, ಬಂಡಾಯಗಾರರು ಮತ್ತು ಸೇನೆಯ ನಡುವೆ ಒಂದು ಹೋರಾಟ ನಡೆಯಲಿದೆ ಎಂದು ತಾಯಿಗೆ ಗೊತ್ತಾದಾಗ, ಅವರು ನನ್ನನ್ನು, ನನ್ನ ಮೂರು ಮಂದಿ ಅಣ್ಣಂದಿರನ್ನು, ಒಬ್ಬ ಅಕ್ಕ ಮತ್ತು ತಂಗಿಯನ್ನು ಹಲವಾರು ದಿನಗಳ ವರೆಗೆ ಮನೆಯೊಳಗೆಯೇ ಇರಿಸಿದರು. ನಾನು ಮತ್ತು ನನ್ನ ತಂಗಿ ಮಂಚದ ಕೆಳಗೆ ಅಡಗಿಕೊಂಡಿದ್ದದ್ದು ನನಗೆ ಈಗಲೂ ನೆನಪಿದೆ. ಆಗ ಸಾಕಷ್ಟು ಊಟವೂ ಸಿಗುತ್ತಿರಲಿಲ್ಲ. ಆ ಘಟನೆಯ ನಂತರ ನಮ್ಮ ತಾಯಿ, ಮಕ್ಕಳಾದ ನಮ್ಮನ್ನು ಅಮೆರಿಕಕ್ಕೆ ಕೊಂಡೊಯ್ಯುವ ನಿರ್ಣಯವನ್ನು ಮಾಡಿದರು. ಅನಂತರ ತಂದೆ ಸಹ ಬಂದು ನಮ್ಮೊಂದಿಗೆ ಜೊತೆಗೂಡಿದರು.

ಮಹಾ ಆರ್ಥಿಕ ಕುಸಿತವು ಅಮೆರಿಕವನ್ನು ಬಾಧಿಸುವ ಸ್ವಲ್ಪ ಮುಂಚೆ, ಅಂದರೆ 1926ರಲ್ಲಿ ನಾವು ಕ್ಯಾಲಿಫೋರ್ನಿಯವನ್ನು ತಲಪಿದೆವು. ನಮಗೆ ಎಲ್ಲಿ ಕೆಲಸ ಸಿಗುತ್ತಿತ್ತೊ ಅಲ್ಲಿಗೆ ನಾವು ಸ್ಥಳಾಂತರಿಸುತ್ತಿದ್ದೆವು. ಉದಾಹರಣೆಗೆ ಸಾನ್‌ ಜೊಆಕ್ವಿನ್‌ ಕಣಿವೆ, ಸಾಂಟಾ ಕ್ಲಾರಾ, ಸ್ಯಾಲಿನಾಸ್‌ ಮತ್ತು ಕಿಂಗ್‌ ಸಿಟಿಯಂಥ ಸ್ಥಳಗಳಿಗೆ ನಾವು ಹೋದೆವು. ಹೊಲಗಳಲ್ಲಿ ಕೆಲಸಮಾಡಲು ಮತ್ತು ಎಲ್ಲ ರೀತಿಯ ಹಣ್ಣುತರಕಾರಿಗಳನ್ನು ಕೊಯ್ಲುಮಾಡಲು ನಾವು ಕಲಿತುಕೊಂಡೆವು. ನನ್ನ ಯೌವನವೆಲ್ಲವೂ ಈ ರೀತಿಯ ಕಷ್ಟಕರವಾದ ದುಡಿಮೆಯಲ್ಲಿ ಕಳೆದರೂ, ಅದು ನನ್ನ ಜೀವಿತದಲ್ಲೇ ಅತಿ ಸಂತೋಷಕರವಾದ ಸಮಯವಾಗಿತ್ತು.

ಬೈಬಲ್‌ ಸತ್ಯವನ್ನು ಕಂಡುಕೊಂಡದ್ದು

1928ರ ಮಾರ್ಚ್‌ ತಿಂಗಳಿನಲ್ಲಿ, ಒಬ್ಬ ಬೈಬಲ್‌ ವಿದ್ಯಾರ್ಥಿಯು (ಆ ಸಮಯದಲ್ಲಿ ಯೆಹೋವನ ಸಾಕ್ಷಿಗಳನ್ನು ಹೀಗೆ ಕರೆಯಲಾಗುತ್ತಿತ್ತು) ನಮ್ಮ ಮನೆಗೆ ಬಂದರು. ಅವರೊಬ್ಬ ವೃದ್ಧ ವ್ಯಕ್ತಿಯಾಗಿದ್ದು, ಸ್ಪ್ಯಾನಿಷ್‌ ಭಾಷೆಯನ್ನಾಡುತ್ತಿದ್ದರು. ಅವರ ಹೆಸರು, ಎಸ್ಟೆಬಾನ್‌ ರಿವೇರಾ ಆಗಿತ್ತು. ಅವರು, “ಮೃತರು ಎಲ್ಲಿದ್ದಾರೆ?” ಎಂಬ ಶೀರ್ಷಿಕೆಯನ್ನು ನಮ್ಮೊಂದಿಗೆ ಬಿಟ್ಟುಹೋದರು. ಈ ಶೀರ್ಷಿಕೆ ಮತ್ತು ಅದರೊಳಗಿದ್ದ ವಿಷಯವು ನನ್ನ ಮನತಟ್ಟಿದವು. ನಾನು ಎಳೆಯವನಾಗಿದ್ದರೂ, ಬೈಬಲ್‌ ವಿದ್ಯಾರ್ಥಿಗಳೊಂದಿಗೆ ಬೈಬಲ್‌ ಅಭ್ಯಾಸವನ್ನು ಮತ್ತು ಸಹವಾಸವನ್ನು ಮಾಡಲಾರಂಭಿಸಿದೆ. ಸಮಯಾನಂತರ, ನನ್ನ ಅಮ್ಮ ಮತ್ತು ತಂಗಿ ಸಹ ಯೆಹೋವನ ಹುರುಪಿನ ಸ್ತುತಿಗಾರರಾದರು.

1930ನೆಯ ದಶಕದ ಮಧ್ಯಭಾಗದಲ್ಲಿ, ಇಂಗ್ಲಿಷ್‌ ಭಾಷೆಯ ಸಭೆಗಾಗಿ ಸಾನ್‌ ಜೋಸ್‌ನಲ್ಲಿ ಒಂದು ರಾಜ್ಯ ಸಭಾಗೃಹವನ್ನು ಕಟ್ಟಿಸಲಾಯಿತು. ಆ ಕ್ಷೇತ್ರದಲ್ಲಿ ಅನೇಕ ಹಿಸ್ಪ್ಯಾನಿಕ್‌ ಜನರು ಫಾರ್ಮ್‌ಗಳಲ್ಲಿ ಕೆಲಸಮಾಡುತ್ತಿದ್ದದ್ದರಿಂದ, ನಾವು ಅವರಿಗೆ ಸುವಾರ್ತೆಯನ್ನು ಸಾರಲು ಆರಂಭಿಸಿದೆವು ಮತ್ತು ಕಾವಲಿನಬುರುಜು ಅಭ್ಯಾಸವನ್ನು ಸಹ ನಡೆಸಲಾರಂಭಿಸಿದೆವು. ಸುಮಾರು 80 ಕಿಲೊಮೀಟರುಗಳಷ್ಟು ದೂರದಲ್ಲಿರುವ ಸಾನ್‌ ಫ್ರಾನ್ಸಿಸ್ಕೊದಲ್ಲಿದ್ದ ಹಿಸ್ಪ್ಯಾನಿಕ್‌ ಸಾಕ್ಷಿಗಳ ಸಹಾಯದೊಂದಿಗೆ ನಾವು ಇದನ್ನು ಮಾಡಿದೆವು. ಕಾಲಾನಂತರ, ಸಾನ್‌ ಜೋಸ್‌ ರಾಜ್ಯ ಸಭಾಗೃಹದಲ್ಲಿ ಸುಮಾರು 60 ಮಂದಿ ಸ್ಪ್ಯಾನಿಷ್‌ ಭಾಷೆಯ ಕೂಟಗಳಿಗೆ ಹಾಜರಾಗುತ್ತಿದ್ದರು.

1940ರ ಫೆಬ್ರವರಿ 28ರಂದು ಸಾನ್‌ ಜೋಸ್‌ನಲ್ಲಿ ನಡೆದ ಒಂದು ಸಮ್ಮೇಳನದಲ್ಲಿ ನೀರಿನ ದೀಕ್ಷಾಸ್ನಾನದ ಮೂಲಕ ನಾನು ಯೆಹೋವನಿಗೆ ಮಾಡಿದಂತಹ ಸಮರ್ಪಣೆಯನ್ನು ಸಂಕೇತಿಸಿದೆ. ಮುಂದಿನ ವರ್ಷ, ನಾನೊಬ್ಬ ಪಯನೀಯರನಾಗಿ, ಅಂದರೆ ಯೆಹೋವನ ಸಾಕ್ಷಿಗಳ ಪೂರ್ಣ ಸಮಯದ ಶುಶ್ರೂಷಕನಾಗಿ ನೇಮಿಸಲ್ಪಟ್ಟೆ. ಅನಂತರ 1943ರ ಏಪ್ರಿಲ್‌ ತಿಂಗಳಿನಲ್ಲಿ, ಸುಮಾರು 130 ಕಿಲೊಮೀಟರ್‌ ದೂರದಲ್ಲಿ ಸ್ಪ್ಯಾನಿಷ್‌ ಭಾಷೆಯ ಸಭೆಯೊಂದನ್ನು ಸ್ಥಾಪಿಸಲಿಕ್ಕಾಗಿ ಸ್ಟಾಕ್ಟ್‌ನ್‌ಗೆ ಸ್ಥಳಾಂತರಿಸುವಂತೆ ನನ್ನನ್ನು ಕೇಳಿಕೊಳ್ಳಲಾಯಿತು. ಆ ನೇಮಕವು ಸಿಕ್ಕಿದ ಸಮಯದಲ್ಲಿ, ನಾನು ಸಾನ್‌ ಜೋಸ್‌ನಲ್ಲಿದ್ದ ಇಂಗ್ಲಿಷ್‌ ಸಭೆಯ ಅಧ್ಯಕ್ಷ ಮೇಲ್ವಿಚಾರಕನಾಗಿದ್ದೆ ಮತ್ತು ಅಲ್ಲಿದ್ದ ಸ್ಪ್ಯಾನಿಷ್‌ ಭಾಷೆಯನ್ನಾಡುತ್ತಿದ್ದ ಸಾಕ್ಷಿಗಳನ್ನು ಸಹ ನೋಡಿಕೊಳ್ಳುತ್ತಿದ್ದೆ. ಈ ಜವಾಬ್ದಾರಿಗಳನ್ನು ಬೇರೆಯವರು ವಹಿಸಿಕೊಳ್ಳುವಂತೆ ಏರ್ಪಾಡುಗಳನ್ನು ಮಾಡಿದ ನಂತರ, ನಾನು ಸ್ಟಾಕ್ಟನ್‌ಗೆ ಸ್ಥಳಾಂತರಿಸಿದೆ.

ಸಮಗ್ರತೆಯ ಪರೀಕ್ಷೆ

1940ರಲ್ಲಿ ಆರಂಭಿಸಿ, ಬಲಾತ್ಕಾರದಿಂದ ಸೈನ್ಯಕ್ಕೆ ಸೇರಿಸಿಕೊಳ್ಳುವ ಮಂಡಳಿಯ ಮುಂದೆ ನನ್ನನ್ನು ಪದೇ ಪದೇ ಕರೆಸಲಾಯಿತು. ಆದರೆ ಪ್ರತಿ ಸಾರಿಯೂ ನಾನು ನನ್ನ ಮನಸ್ಸಾಕ್ಷಿಯ ಕಾರಣ ಸೇನೆಗೆ ಸೇರಲಾರೆ ಎಂದು ಹೇಳಿದಾಗ ನನ್ನ ನಿಲುವನ್ನು ಗೌರವಿಸಲಾಯಿತು. 1941ರ ಡಿಸೆಂಬರ್‌ ತಿಂಗಳಲ್ಲಿ, ಅಮೆರಿಕವು ಎರಡನೆಯ ವಿಶ್ವ ಯುದ್ಧವನ್ನು ಪ್ರವೇಶಿಸಿದಾಗಲಂತೂ ಅವರು ನನ್ನ ಮೇಲೆ ಹೆಚ್ಚು ಒತ್ತಡವನ್ನು ಹಾಕಿದರು. ಕೊನೆಗೆ 1944ರಲ್ಲಿ ನನ್ನನ್ನು ಜೈಲಿಗೆ ಕಳುಹಿಸಲಾಯಿತು. ನನ್ನ ದಂಡನೆಯ ತೀರ್ಪು ಆಗುವವರೆಗೆ ನನ್ನನ್ನು ಪಾತಕಿಗಳೊಂದಿಗೆ ನೆಲಮಾಳಿಗೆಯಲ್ಲಿ ಇರಿಸಲಾಯಿತು. ನಾನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿದ್ದೇನೆಂದು ತಿಳಿದುಕೊಂಡ ನಂತರ, ಅವರಲ್ಲಿ ಅನೇಕರು ತಾವು ನಡೆಸಿದಂತಹ ಪಾತಕಗಳು ದೇವರ ಮುಂದೆ ತಮಗಿರುವ ನಿಲುವಿನ ಮೇಲೆ ಹೇಗೆ ಪರಿಣಾಮ ಬೀರುವವು ಎಂಬುದರ ಕುರಿತಾಗಿ ಪ್ರಶ್ನೆಗಳನ್ನು ಕೇಳಿದರು.

ಸ್ಯಾನ್‌ ಜೋಸ್‌ನಲ್ಲಿದ್ದ ಸಾಕ್ಷಿಗಳು, ನನ್ನ ವಿಚಾರಣೆಯು ಇತ್ಯರ್ಥವಾಗುವ ತನಕ ಬಿಡುಗಡೆಯಾಗುವಂತೆ ಜಾಮೀನನ್ನು ಕೊಟ್ಟರು. ಲಾಸ್‌ ಏಂಜಲಿಸ್‌ನಲ್ಲಿದ್ದ, ಪೌರ ಹಕ್ಕುಗಳ ಮೊಕದ್ದಮೆಗಳಲ್ಲಿ ಪ್ರತಿವಾದಿಗಳನ್ನು ಪ್ರತಿನಿಧಿಸುವ ಒಬ್ಬ ವಕೀಲರು, ಹಣವನ್ನು ತೆಗೆದುಕೊಳ್ಳದೆ ನನ್ನ ಮೊಕದ್ದಮೆಯನ್ನು ನಡೆಸಲು ಸಿದ್ಧರಾಗಿದ್ದರು. ನ್ಯಾಯಾಧೀಶರು ನನ್ನನ್ನು ಒಂದು ಷರತ್ತಿನ ಮೇರೆಗೆ ಬಿಡುಗಡೆಮಾಡಲು ನಿರ್ಣಯಿಸಿದರು. ಅದೇನೆಂದರೆ, ನಾನು ಪಯನೀಯರ್‌ ಸೇವೆಯನ್ನು ನಿಲ್ಲಿಸಿ, ಒಂದು ಕೆಲಸಕ್ಕೆ ಸೇರಿ, ಪ್ರತಿ ತಿಂಗಳು ಸಂಯುಕ್ತ ಪ್ರಾಧಿಕಾರಿಗಳಿಗೆ ವರದಿಸಬೇಕು. ಆದರೆ ನಾನು ಆ ನಿರ್ಣಯಕ್ಕೆ ಒಪ್ಪಿಕೊಳ್ಳಲಿಲ್ಲ. ಆದುದರಿಂದ ನನಗೆ ವಾಷಿಂಗ್ಟನ್‌ ಸ್ಟೇಟ್‌ನಲ್ಲಿರುವ ಮ್ಯಾಕ್‌ನೀಲ್‌ ಐಲೆಂಡ್‌ ಸೆರೆಮನೆಯಲ್ಲಿ ಎರಡು ವರ್ಷಗಳ ಸೆರೆವಾಸವನ್ನು ವಿಧಿಸಲಾಯಿತು. ಅಲ್ಲಿ ನನಗೆ ಸಿಕ್ಕಿದ ಸಮಯವನ್ನು, ಗಾಢವಾದ ಬೈಬಲ್‌ ಅಭ್ಯಾಸಕ್ಕಾಗಿ ಉಪಯೋಗಿಸಿಕೊಂಡೆ. ನಾನು ಬೆರಳಚ್ಚನ್ನೂ ಕಲಿತುಕೊಂಡೆ. ಎರಡು ವರ್ಷಗಳು ಮುಗಿಯುವ ಮುಂಚೆಯೇ, ನನ್ನ ಒಳ್ಳೇ ನಡತೆಗಾಗಿ ನನ್ನನ್ನು ಬಿಡುಗಡೆಮಾಡಲಾಯಿತು. ಆ ಕೂಡಲೇ ನಾನು ಪಯನೀಯರ್‌ ಸೇವೆಯಲ್ಲಿ ಮುಂದುವರಿಯಲಿಕ್ಕಾಗಿ ಏರ್ಪಾಡುಗಳನ್ನು ಮಾಡಿದೆ.

ಹೆಚ್ಚಿನ ಚಟುವಟಿಕೆ

1947ರ ಚಳಿಗಾಲದಲ್ಲಿ, ಟೆಕ್ಸಾಸ್‌ನ ಕೊಲರಾಡೊ ನಗರದಲ್ಲಿರುವ ಸ್ಪ್ಯಾನಿಷ್‌ ಭಾಷೆಯನ್ನಾಡುವ ಜನರೊಂದಿಗೆ ಕೆಲಸಮಾಡಲು ನನ್ನನ್ನು ನೇಮಿಸಲಾಯಿತು. ನನಗೊಬ್ಬ ಪಯನೀಯರ್‌ ಸಂಗಾತಿಯನ್ನೂ ಕೊಡಲಾಯಿತು. ಆದರೆ ಅಲ್ಲಿ ತುಂಬ ಚಳಿ ಇದ್ದದ್ದರಿಂದ, ನಾವು ಹೆಚ್ಚು ಬೆಚ್ಚಗಿನ ಹವಾಮಾನ ಇರುವ ಸಾನ್‌ ಆಂಟೋನಿಯೊಗೆ ಹೋದೆವು. ಆದರೆ ಅಲ್ಲಿ ಎಷ್ಟು ಮಳೆ ಸುರಿಯಿತ್ತೆಂದರೆ, ನಾವು ಮನೆಯಿಂದ ಮನೆಗೆ ಹೋಗಲು ಸಾಧ್ಯವಾಗಲಿಲ್ಲ. ನಮ್ಮ ಬಳಿಯಿದ್ದ ಹಣವೆಲ್ಲ ಬೇಗನೆ ಮುಗಿದುಹೋಯಿತು. ಎಷ್ಟೋ ವಾರಗಳ ವರೆಗೆ ನಾವು ಹಸಿ ಎಲೆಕೋಸಿನ ಸ್ಯಾಂಡ್‌ವಿಚ್‌ಗಳು ಮತ್ತು ಆ್ಯಲ್ಫಾಲ್ಫಾ ಚಹಾದಿಂದ ಹೊಟ್ಟೆ ತುಂಬಿಸುತ್ತಿದ್ದೆವು. ನನ್ನ ಸಂಗಾತಿಯು ತನ್ನ ಮನೆಗೆ ಹಿಂದಿರುಗಿ ಹೋದನು, ಆದರೆ ನಾನು ಅಲ್ಲಿಯೇ ಉಳಿದೆ. ಇಂಗ್ಲಿಷ್‌ ಭಾಷೆಯನ್ನಾಡುವ ಸಾಕ್ಷಿಗಳಿಗೆ ನನ್ನ ಶಾರೀರಿಕ ಅಗತ್ಯಗಳ ಕುರಿತಾಗಿ ತಿಳಿದುಬಂದಾಗ, ಅವರು ನನಗೆ ಸಹಾಯಮಾಡಲಾರಂಭಿಸಿದರು.

ಮುಂದಿನ ವಸಂತಋತುವಿನಲ್ಲಿ, ನಾನು ಕೊಲರಾಡೊ ನಗರದಲ್ಲಿನ ನನ್ನ ನೇಮಕಕ್ಕೆ ಹಿಂದಿರುಗಿದೆ. ಮತ್ತು ಅಲ್ಲಿ ಕೊನೆಗೆ ಸ್ಪ್ಯಾನಿಷ್‌ ಭಾಷೆಯ ಒಂದು ಚಿಕ್ಕ ಸಭೆಯು ಆರಂಭಿಸಲ್ಪಟ್ಟಿತು. ಅನಂತರ ನಾನು ಟೆಕ್ಸಾಸ್‌ನಲ್ಲಿರುವ ಸ್ವೀಟ್‌ವಾಟರ್‌ ಎಂಬಲ್ಲಿಗೆ ಸ್ಥಳಾಂತರಿಸಿದೆ, ಮತ್ತು ಅಲ್ಲಿ ಸ್ಪ್ಯಾನಿಷ್‌ ಭಾಷೆಯ ಇನ್ನೊಂದು ಸಭೆಯನ್ನು ರಚಿಸಲು ಸಹಾಯಮಾಡಿದೆ. ಸ್ವೀಟ್‌ವಾಟರ್‌ನಲ್ಲಿದ್ದಾಗ, ನನ್ನನ್ನು ಮಿಷನೆರಿ ತರಬೇತಿಗಾಗಿ ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌ಗೆ ಆಮಂತ್ರಿಸುವ ಒಂದು ಪತ್ರ ಸಿಕ್ಕಿತ್ತು. ಆ ಶಾಲೆಯು 1950ರ ಫೆಬ್ರವರಿ 22ರಂದು ಆರಂಭವಾಗಲಿತ್ತು. ಮತ್ತು ಬೇಸಗೆ ಕಾಲದಲ್ಲಿ ನ್ಯೂಯಾರ್ಕ್‌ ನಗರದ ಯಾಂಕೀ ಸ್ಟೇಡಿಯಮ್‌ನಲ್ಲಿ ಪದವಿಯನ್ನು ಪಡೆದ ನಂತರ, ನಾನು ಬ್ರೂಕ್ಲಿನ್‌ನಲ್ಲಿರುವ ಯೆಹೋವನ ಸಾಕ್ಷಿಗಳ ಜಾಗತಿಕ ಮುಖ್ಯಕಾರ್ಯಾಲಯದಲ್ಲಿ ಮೂರು ತಿಂಗಳುಗಳ ವರೆಗೆ ಉಳಿದೆ. ಮೆಕ್ಸಿಕೊ ಬ್ರಾಂಚ್‌ ಆಫೀಸಿನಲ್ಲಿನ ನನ್ನ ನೇಮಕಕ್ಕಾಗಿ ನನಗೆ ಅಲ್ಲಿ ತರಬೇತಿಯನ್ನು ಕೊಡಲಾಯಿತು.

ಮೆಕ್ಸಿಕೊದಲ್ಲಿ ಕೆಲಸ

ನಾನು 1950ರ ಅಕ್ಟೋಬರ್‌ 20ರಂದು ಮೆಕ್ಸಿಕೊ ನಗರವನ್ನು ತಲಪಿದೆ. ಎರಡು ವಾರಗಳ ನಂತರ, ನನ್ನನ್ನು ಬ್ರಾಂಚ್‌ ಮೇಲ್ವಿಚಾರಕನಾಗಿ ನೇಮಿಸಲಾಯಿತು. ನಾಲ್ಕೂವರೆ ವರ್ಷಗಳ ವರೆಗೆ ನಾನು ಆ ನೇಮಕದಲ್ಲಿದ್ದೆ. ಪಯನೀಯರ್‌ ಸೇವೆಯಲ್ಲಿ, ಸೆರೆಮನೆಯಲ್ಲಿ, ಗಿಲ್ಯಡ್‌ನಲ್ಲಿ, ಮತ್ತು ಬ್ರೂಕ್ಲಿನ್‌ನಲ್ಲಿ ನಾನು ಪಡೆದಂತಹ ಅನುಭವವು ಇಲ್ಲಿ ಉಪಯೋಗಕ್ಕೆ ಬಂತು. ಮೆಕ್ಸಿಕೊ ತಲಪಿದಾಗ, ಅಲ್ಲಿರುವ ನಮ್ಮ ಸಹೋದರ ಸಹೋದರಿಯರ ಆತ್ಮಿಕತೆಯನ್ನು ಕಟ್ಟುವುದರ ಆವಶ್ಯಕತೆಯನ್ನು ನಾನು ಬೇಗನೆ ಮನಗಂಡೆ. ಅವರು ದೇವರ ವಾಕ್ಯದ ಉಚ್ಚ ನೈತಿಕ ಮಟ್ಟಗಳಿಗನುಸಾರ ಜೀವಿಸುವಂತೆ ಸಹಾಯಮಾಡುವ ವಿಶೇಷ ಅಗತ್ಯವಿತ್ತು.

ಮೆಕ್ಸಿಕೊ ದೇಶವನ್ನು ಸೇರಿಸಿ ಲ್ಯಾಟಿನ್‌ ಅಮೆರಿಕಾದ ದೇಶಗಳಲ್ಲಿ, ಒಬ್ಬ ಪುರುಷ ಮತ್ತು ಸ್ತ್ರೀಯು ಕಾನೂನುಬದ್ಧವಾಗಿ ಮದುವೆಯಾಗದೆ ಜೊತೆಯಾಗಿ ಜೀವಿಸುವುದು ಸಾಮಾನ್ಯವಾಗಿತ್ತು. ಕ್ರೈಸ್ತಪ್ರಪಂಚದ ಧರ್ಮಗಳು, ವಿಶೇಷವಾಗಿ ರೋಮನ್‌ ಕ್ಯಾಥೊಲಿಕ್‌ ಚರ್ಚು ಈ ಅಶಾಸ್ತ್ರೀಯ ಪದ್ಧತಿಗೆ ಅನುಮತಿಯನ್ನು ನೀಡಿದ್ದವು. (ಇಬ್ರಿಯ 13:4) ಹೀಗಿರುವುದರಿಂದ ಕೆಲವರು ಕಾನೂನುಬದ್ಧವಾಗಿ ಮದುವೆಯಾಗಿರದಿದ್ದರೂ, ಯೆಹೋವನ ಸಾಕ್ಷಿಗಳ ಸಭೆಗಳ ಸದಸ್ಯರಾಗಿದ್ದರು. ಈಗ, ಅಂಥವರು ತಮ್ಮ ವಿವಾಹವನ್ನು ಕಾನೂನುಬದ್ಧಗೊಳಿಸಲಿಕ್ಕಾಗಿ ಆರು ತಿಂಗಳುಗಳ ಸಮಯವನ್ನು ಕೊಡಲಾಯಿತು. ಅವರು ಹಾಗೆ ಮಾಡದಿದ್ದಲ್ಲಿ, ಅವರನ್ನು ಯೆಹೋವನ ಸಾಕ್ಷಿಗಳೋಪಾದಿ ಅಂಗೀಕರಿಸಲಾಗುವುದಿಲ್ಲವೆಂದು ತಿಳಿಸಲಾಯಿತು.

ಅನೇಕರಿಗೆ ಇದನ್ನು ಮಾಡಲು ಕಷ್ಟವಾಗಲಿಲ್ಲ. ಏಕೆಂದರೆ ಅವರು ಈಗಾಗಲೇ ಹೊಂದಿದ ಸಂಬಂಧವನ್ನು ಕೇವಲ ಮದುವೆಯಾಗುವ ಮೂಲಕ ಕಾನೂನುಬದ್ಧಗೊಳಿಸಬೇಕಾಗಿತ್ತು. ಇನ್ನಿತರರು ಹೆಚ್ಚು ಜಟಿಲವಾದ ಸನ್ನಿವೇಶಗಳಲ್ಲಿ ಸಿಲುಕಿದ್ದರು. ಉದಾಹರಣೆಗೆ, ಕೆಲವರು ಕಾನೂನುಬದ್ಧ ವಿವಾಹವಿಚ್ಛೇದವನ್ನು ಪಡೆಯದೇ ಎರಡು ಸಲ, ಮತ್ತು ಕೆಲವೊಮ್ಮೆ ಮೂರು ಸಲ ಕೂಡ ಮದುವೆಯಾಗಿದ್ದರು. ಆದರೆ ಯೆಹೋವನ ಜನರ ನಡುವೆ ಇದ್ದ ದಂಪತಿಗಳು ತಮ್ಮ ವೈವಾಹಿಕ ಸ್ಥಿತಿಯನ್ನು ಕೊನೆಯಲ್ಲಿ ದೇವರ ವಾಕ್ಯದ ಬೋಧನೆಗಳಿಗೆ ಹೊಂದಿಕೆಯಲ್ಲಿ ತಂದಾಗ, ಆ ಸಭೆಗಳಿಗೆ ಒಳ್ಳೆಯ ಆತ್ಮಿಕ ಆಶೀರ್ವಾದಗಳು ಸಿಕ್ಕಿದವು.​—1 ಕೊರಿಂಥ 6:​9-11.

ಆ ದಿನಗಳಲ್ಲಿ ಮೆಕ್ಸಿಕೊ ದೇಶದಲ್ಲಿ ಶಾಲಾ ಶಿಕ್ಷಣದ ಮಟ್ಟವು, ಬಹುಮಟ್ಟಿಗೆ ಕಡಿಮೆಯಾಗಿತ್ತು. ನಾನು 1950ರಲ್ಲಿ ಅಲ್ಲಿ ಬರುವುದಕ್ಕಿಂತಲೂ ಮುಂಚೆಯೇ, ಬ್ರಾಂಚ್‌ ಆಫೀಸು ಸಭೆಗಳಲ್ಲಿ ಓದುಬರಹದ ತರಗತಿಗಳನ್ನು ಏರ್ಪಡಿಸಲಾರಂಭಿಸಿತ್ತು. ಈಗ ಈ ತರಗತಿಗಳನ್ನು ಪುನಃ ಒಮ್ಮೆ ಏರ್ಪಡಿಸಲಾಯಿತು, ಮತ್ತು ಸರಕಾರದೊಂದಿಗೆ ಅವುಗಳನ್ನು ರೆಜಿಸ್ಟರ್‌ ಮಾಡುವ ಏರ್ಪಾಡುಗಳನ್ನು ಮಾಡಲಾಯಿತು. 1946ರಿಂದ ಇಡಲ್ಪಟ್ಟಿರುವ ದಾಖಲೆಗಳಿಗನುಸಾರ, ಸಾಕ್ಷಿಗಳು ನಡೆಸಿರುವ ಈ ತರಗತಿಗಳ ಮೂಲಕ ಮೆಕ್ಸಿಕೊದಲ್ಲಿ 1,43,000ಕ್ಕಿಂತಲೂ ಹೆಚ್ಚು ವ್ಯಕ್ತಿಗಳಿಗೆ ಓದುಬರಹವನ್ನು ಕಲಿಸಲಾಗಿದೆ!

ಮೆಕ್ಸಿಕೊ ದೇಶದ ಕಾನೂನುಗಳು ಧರ್ಮದ ಸಂಬಂಧದಲ್ಲಿ ತುಂಬ ನಿರ್ಬಂಧದಾಯಕವಾಗಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಸಂಬಂಧದಲ್ಲಿ ಬಹಳ ಪ್ರಾಮುಖ್ಯ ಬದಲಾವಣೆಗಳಾಗಿವೆ. 1992ರಲ್ಲಿ ಧಾರ್ಮಿಕ ವ್ಯವಹಾರಗಳ ಕುರಿತಾಗಿ ಒಂದು ಹೊಸ ಕಾನೂನನ್ನು ಜಾರಿಗೆ ತರಲಾಯಿತು. ಇದರಿಂದಾಗಿ, 1993ರಲ್ಲಿ ಮೆಕ್ಸಿಕೊದಲ್ಲಿರುವ ಯೆಹೋವನ ಸಾಕ್ಷಿಗಳನ್ನು ಒಂದು ಧಾರ್ಮಿಕ ಸಂಘಟನೆಯೋಪಾದಿ ರೆಜಿಸ್ಟರ್‌ ಮಾಡಲಾಯಿತು.

ಈ ಬದಲಾವಣೆಗಳು ನನಗೆ ತುಂಬ ಆನಂದವನ್ನು ತಂದವು. ಇದೆಲ್ಲವೂ ಅಸಾಧ್ಯವೆಂದು ನಾನು ಹಿಂದೆ ನೆನಸಿದ್ದೆ. ಯಾಕೆಂದರೆ ಎಷ್ಟೋ ವರ್ಷಗಳಿಂದ ನಾನು ಆಗಾಗ್ಗೆ ಸರಕಾರಿ ಆಫೀಸುಗಳಿಗೆ ಭೇಟಿನೀಡಿದ್ದೆ ಮತ್ತು ಅಲ್ಲಿದ್ದವರ ಸಂಶಯಗ್ರಸ್ತ ಮನೋಭಾವವನ್ನು ಎದುರಿಸಿದ್ದೆ. ಆದರೆ, ನಮ್ಮ ಬ್ರಾಂಚ್‌ ಆಫೀಸಿನಲ್ಲಿರುವ ಕಾನೂನು ಇಲಾಖೆಯ ಮೂಲಕ ಈ ವಿಷಯಗಳು ತುಂಬ ಚೆನ್ನಾಗಿ ನಿರ್ವಹಿಸಲ್ಪಡುವುದನ್ನು ನೋಡುವುದು ಸಂತೋಷವನ್ನು ತಂದಿತ್ತು. ಆದುದರಿಂದ ಈಗ ಹೆಚ್ಚುಕಡಿಮೆ ಯಾವುದೇ ಅಡ್ಡಿತಡೆಗಳಿಲ್ಲದೆ ನಾವು ನಮ್ಮ ಸಾರುವ ಕೆಲಸವನ್ನು ಮಾಡಬಲ್ಲೆವು.

ಒಬ್ಬ ಮಿಷನೆರಿ ಸಂಗಾತಿಯೊಂದಿಗೆ ಸೇವೆಮಾಡುವುದು

ನಾನು ಮೆಕ್ಸಿಕೊ ತಲಪಿದಾಗ, ಆ ದೇಶದಲ್ಲಿ ಈಗಾಗಲೇ ಹಿಂದಿನ ಗಿಲ್ಯಡ್‌ ತರಗತಿಗಳಿಂದ ಬಂದಿದ್ದ ಅನೇಕ ಮಿಷನೆರಿಗಳಿದ್ದರು. ಅವರಲ್ಲಿ ಒಬ್ಬಳು ಎಸ್ತೇರ್‌ ವಾರ್ಟಾನ್ಯನ್‌ ಎಂಬವಳಿದ್ದಳು. ಅವಳು ಅರ್ಮೆನಿಯದಿಂದ ಬಂದಿದ್ದ ಒಬ್ಬ ಸಾಕ್ಷಿಯಾಗಿದ್ದು, 1942ರಲ್ಲಿ ಕ್ಯಾಲಿಫೋರ್ನಿಯದ ವ್ಯಾಲೆಜೊವಿನಲ್ಲಿ ಪಯನೀಯರ್‌ ಸೇವೆಯನ್ನು ಆರಂಭಿಸಿದ್ದಳು. ನಾವು 1955ರ ಜುಲೈ 30ರಂದು ಮದುವೆಯಾದೆವು, ಮತ್ತು ತದನಂತರ ಮೆಕ್ಸಿಕೊವಿನಲ್ಲಿನ ನಮ್ಮ ನೇಮಕದಲ್ಲೇ ಮುಂದುವರಿದೆವು. ನಾವು ಅಲ್ಲಿನ ಬ್ರಾಂಚ್‌ನಲ್ಲಿಯೇ ವಾಸಿಸಿದೆವು ಮತ್ತು ಎಸ್ತೇರ್‌ ಮೆಕ್ಸಿಕೊ ನಗರದಲ್ಲಿ ತನ್ನ ಮಿಷನೆರಿ ಕೆಲಸದಲ್ಲಿ ಮುಂದುವರಿದಳು. ಆದರೆ ನಾನು ಬ್ರಾಂಚ್‌ನಲ್ಲೇ ಕೆಲಸಮಾಡಿದೆ.

1947ರಲ್ಲಿ, ಎಸ್ತೇರ್‌ ಮೆಕ್ಸಿಕೊ ದೇಶದ ನ್ಯೂವೊ ಲೀಯೋನ್‌ನ ಮಾಂಟೇರಿಯಲ್ಲಿನ ತನ್ನ ಪ್ರಥಮ ಮಿಷನೆರಿ ನೇಮಕಕ್ಕೆ ಬಂದಿದ್ದಳು. ಆಗ ಮಾಂಟೇರಿಯಲ್ಲಿ 40 ಸಾಕ್ಷಿಗಳ ಒಂದೇ ಒಂದು ಸಭೆ ಇತ್ತು. ಆದರೆ ಅವಳು ಮೆಕ್ಸಿಕೊ ನಗರಕ್ಕೆ 1950ರಲ್ಲಿ ಸ್ಥಳಾಂತರಿಸಲ್ಪಡುವಷ್ಟರಲ್ಲಿ ಅಲ್ಲಿ ನಾಲ್ಕು ಸಭೆಗಳಿದ್ದವು. ಎಸ್ತೇರ್‌ ಮಾಂಟೇರಿಯಲ್ಲಿ ಸೇವೆಸಲ್ಲಿಸುತ್ತಿದ್ದಾಗ, ಬೈಬಲ್‌ ಅಭ್ಯಾಸಮಾಡಿದ್ದ ಕುಟುಂಬಗಳ ಇಬ್ಬರು ಯುವ ವಂಶಜರು ಮೆಕ್ಸಿಕೊ ನಗರದ ಸಮೀಪದಲ್ಲಿರುವ ನಮ್ಮ ಬ್ರಾಂಚ್‌ನಲ್ಲಿ ಈಗ ಕೆಲಸಮಾಡುತ್ತಿದ್ದಾರೆ.

1950ರಷ್ಟು ಹಿಂದೆ, ಮೆಕ್ಸಿಕೊ ನಗರದಲ್ಲಿದ್ದ ಮಿಷನೆರಿಗಳ ಟೆರಿಟೊರಿಯಲ್ಲಿ ಹೆಚ್ಚಿನ ಭಾಗವು ಆ ನಗರವೇ ಆಗಿತ್ತು. ಅವರು ತಮ್ಮ ನೇಮಕದ ಸ್ಥಳಗಳಿಗೆ ನಡೆದುಕೊಂಡೇ ಹೋಗುತ್ತಿದ್ದರು ಅಥವಾ ಜನರಿಂದ ಕಿಕ್ಕಿರಿದಿರುವ ಹಳೆಯ ಬಸ್ಸುಗಳಲ್ಲಿ ಪ್ರಯಾಣಿಸುತ್ತಿದ್ದರು. ನಾನು 1950ರಲ್ಲಿ ಅಲ್ಲಿ ತಲಪಿದಾಗ, ಏಳು ಸಭೆಗಳಿದ್ದವು. ಈಗ ಅವುಗಳ ಸಂಖ್ಯೆಯು ಸುಮಾರು 1,600ಕ್ಕೇರಿದೆ, ಮತ್ತು ಮೆಕ್ಸಿಕೊ ನಗರದಲ್ಲಿ 90,000ಕ್ಕಿಂತಲೂ ಹೆಚ್ಚು ರಾಜ್ಯ ಪ್ರಚಾರಕರಿದ್ದಾರೆ, ಮತ್ತು ಕಳೆದ ವರ್ಷ ಅಲ್ಲಿ, 2,50,000ಕ್ಕಿಂತಲೂ ಹೆಚ್ಚು ಜನರು ಕ್ರಿಸ್ತನ ಮರಣದ ಜ್ಞಾಪಕಾಚರಣೆಗೆ ಹಾಜರಾದರು! ಈ ಎಲ್ಲಾ ವರ್ಷಗಳಲ್ಲಿ ಎಸ್ತೇರ್‌ ಮತ್ತು ನಾನು, ಈ ಅನೇಕ ಸಭೆಗಳಲ್ಲಿ ಸೇವೆಸಲ್ಲಿಸುವ ಸುಯೋಗವನ್ನು ಪಡೆದಿದ್ದೇವೆ.

ಎಸ್ತೇರ್‌ ಮತ್ತು ನಾನು ಒಂದು ಬೈಬಲ್‌ ಅಭ್ಯಾಸವನ್ನು ಆರಂಭಿಸುವಾಗ, ನಾವು ಯಾವಾಗಲೂ ಕುಟುಂಬದಲ್ಲಿರುವ ತಂದೆಯ ಆಸಕ್ತಿಯನ್ನು ಕೆರಳಿಸುವಂತೆ ಪ್ರಯತ್ನಿಸುತ್ತೇವೆ. ಆಗ ಇಡೀ ಕುಟುಂಬವು ಅಭ್ಯಾಸದಲ್ಲಿ ಒಳಗೂಡುತ್ತದೆ. ಹೀಗೆ ಮಾಡುವುದರಿಂದ, ಅನೇಕ ದೊಡ್ಡ ಕುಟುಂಬಗಳು ಯೆಹೋವನನ್ನು ಸೇವಿಸಲಾರಂಭಿಸುವುದನ್ನು ನಾವು ನೋಡಿದ್ದೇವೆ. ಮೆಕ್ಸಿಕೊದಲ್ಲಿ ಶುದ್ಧಾರಾಧನೆಯಲ್ಲಿ ಆಗುತ್ತಿರುವ ಕ್ಷಿಪ್ರವಾದ ಬೆಳವಣಿಗೆಗೆ ಒಂದು ಕಾರಣ, ಇಡೀ ಕುಟುಂಬಗಳೇ ಸತ್ಯಾರಾಧನೆಯಲ್ಲಿ ಐಕ್ಯವಾಗಿ ಜೊತೆಗೂಡುತ್ತಿರುವುದೇ ಆಗಿದೆಯೆಂದು ನಾನು ನೆನಸುತ್ತೇನೆ.

ಯೆಹೋವನು ಕೆಲಸವನ್ನು ಆಶೀರ್ವದಿಸಿದ್ದಾನೆ

ಸಾಕ್ಷಿಗಳ ಸಂಖ್ಯೆಗಳಲ್ಲಿನ ವೃದ್ಧಿ ಮತ್ತು ಸಂಸ್ಥೆಯಲ್ಲಿನ ಬದಲಾವಣೆಗಳ ಸಂಬಂಧದಲ್ಲಿ 1950ರಿಂದ ಮೆಕ್ಸಿಕೊದಲ್ಲಿ ಕೆಲಸದ ಪ್ರಗತಿಯು ಗಮನಾರ್ಹವಾದದ್ದಾಗಿದೆ. ಇಷ್ಟೊಂದು ಸತ್ಕಾರಭಾವದ ಮತ್ತು ಸಂತೋಷಭರಿತ ಜನರೊಂದಿಗೆ ಕೆಲಸಮಾಡುತ್ತಾ, ಆ ವೃದ್ಧಿಗೆ ನಮ್ಮ ಚಿಕ್ಕ ಪಾಲನ್ನು ಕೊಡಲು ಶಕ್ತರಾಗಿದ್ದಕ್ಕಾಗಿ ನಮಗೆ ನಿಜವಾಗಿಯೂ ಹರ್ಷವನ್ನು ತಂದಿದೆ.

ಯೆಹೋವನ ಸಾಕ್ಷಿಗಳ ಆಡಳಿತ ಮಂಡಳಿಯ ಒಬ್ಬ ಸದಸ್ಯರಾಗಿರುವ ಕಾರ್ಲ್‌ ಕ್ಲೈನ್‌ ಮತ್ತು ಅವರ ಹೆಂಡತಿ ಮಾರ್ಗರೆಟ್‌ರವರು, ಕೆಲವೊಂದು ವರ್ಷಗಳ ಹಿಂದೆ ಅವರು ರಜೆಯಲ್ಲಿದ್ದಾಗ ನಮ್ಮನ್ನು ಭೇಟಿಮಾಡಲು ಬಂದರು. ಸಹೋದರ ಕ್ಲೈನ್‌ ನಮ್ಮ ಮೆಕ್ಸಿಕನ್‌ ಟೆರಿಟೊರಿಯಲ್ಲಿ ಕೆಲಸವು ಹೇಗೆ ನಡೆಯುತ್ತಿದೆಯೆಂಬುದನ್ನು ಖುದ್ದಾಗಿ ನೋಡಿ ತಿಳಿಯಲು ಬಯಸಿದರು. ಆದುದರಿಂದ ಅವರು ಮತ್ತು ಮಾರ್ಗರೆಟ್‌ರವರು, ನಾವು ಆ ಸಮಯದಲ್ಲಿ ಹಾಜರಾಗುತ್ತಿದ್ದ, ಮೆಕ್ಸಿಕೊ ನಗರದ ಹತ್ತಿರದಲ್ಲಿರುವ ಸಾನ್‌ ಜುಆನ್‌ ಟೆಸೊಂಟ್ಲಾ ಸಭೆಗೆ ಬಂದರು. ನಮ್ಮ ಸಭಾಗೃಹವು ಚಿಕ್ಕದಾಗಿತ್ತು. ಅದು 4.5 ಮೀಟರ್‌ ಅಗಲ ಮತ್ತು 5.5 ಮೀಟರ್‌ ಉದ್ದವಾಗಿತ್ತು. ನಾವು ಅಲ್ಲಿಗೆ ತಲಪಿದಾಗ, 70 ಮಂದಿ ಈಗಾಗಲೇ ಅಲ್ಲಿ ಹಾಜರಿದ್ದರು, ಮತ್ತು ನಿಂತುಕೊಳ್ಳಲಿಕ್ಕೂ ಸಾಕಷ್ಟು ಸ್ಥಳವಿರಲಿಲ್ಲ. ವೃದ್ಧ ವ್ಯಕ್ತಿಗಳು ಕುರ್ಚಿಗಳ ಮೇಲೆ ಕುಳಿತುಕೊಂಡಿದ್ದರು, ಎಳೆಯರು ಬೆಂಚುಗಳ ಮೇಲೆ, ಮತ್ತು ಚಿಕ್ಕ ಮಕ್ಕಳು ಇಟ್ಟಿಗೆಗಳ ಮೇಲೆ ಅಥವಾ ನೆಲದ ಮೇಲೆ ಕುಳಿತುಕೊಂಡಿದ್ದರು.

ಸಹೋದರ ಕ್ಲೈನ್‌ ತುಂಬ ಪ್ರಭಾವಿತರಾದರು. ಯಾಕಂದರೆ ಅಲ್ಲಿದ್ದ ಎಲ್ಲ ಮಕ್ಕಳ ಬಳಿ ಅವರ ಸ್ವಂತ ಬೈಬಲ್‌ಗಳಿದ್ದವು. ಮತ್ತು ಭಾಷಣಕರ್ತನು ಬೈಬಲ್‌ ವಚನಗಳನ್ನು ಹೇಳುತ್ತಿದ್ದಂತೆ ಅವರು ತಮ್ಮ ಬೈಬಲ್‌ಗಳಲ್ಲಿ ತೆರೆದು ನೋಡುತ್ತಿದ್ದರು. ಬಹಿರಂಗ ಭಾಷಣದ ನಂತರ, ಸಹೋದರ ಕ್ಲೈನ್‌ರವರು ಮತ್ತಾಯ 13:​19-23ರ ಕುರಿತಾಗಿ ಮಾತಾಡಿ, ಯೇಸು ಹೇಳಿದಂಥ “ಒಳ್ಳೆಯ ನೆಲ” ಮೆಕ್ಸಿಕೊದಲ್ಲಿದೆಯೆಂದು ಹೇಳಿದರು. ಆ ದಿನ ಹಾಜರಿದ್ದ ಮಕ್ಕಳಲ್ಲಿ ಏಳು ಮಂದಿ, ಈಗ ಮೆಕ್ಸಿಕೊ ನಗರದ ಬಳಿ ನಮ್ಮ ಬ್ರಾಂಚ್‌ ಕಟ್ಟಡಗಳನ್ನು ವಿಸ್ತರಿಸುವ ದೊಡ್ಡ ನಿರ್ಮಾಣಕಾರ್ಯದಲ್ಲಿ ಕೆಲಸಮಾಡುತ್ತಿದ್ದಾರೆ. ಇನ್ನೊಬ್ಬನು ಬೆತೆಲ್‌ನಲ್ಲೇ ಕೆಲಸಮಾಡುತ್ತಿದ್ದಾನೆ, ಮತ್ತು ಇನ್ನೂ ಅನೇಕರು ಪಯನೀಯರರಾಗಿ ಸೇವೆಸಲ್ಲಿಸುತ್ತಿದ್ದಾರೆ!

ನಾನು ಮೆಕ್ಸಿಕೊ ನಗರಕ್ಕೆ ಬಂದಾಗ, ನಮ್ಮ ಬ್ರಾಂಚ್‌ನಲ್ಲಿ ಕೇವಲ 11 ಮಂದಿ ಸದಸ್ಯರಿದ್ದರು. ಈಗ, ಇಲ್ಲಿ ಸುಮಾರು 1,350 ಮಂದಿ ಕೆಲಸಮಾಡುತ್ತಿದ್ದು, ಅವರಲ್ಲಿ 250 ಮಂದಿ ಹೊಸ ಬ್ರಾಂಚ್‌ ಕಟ್ಟಡಗಳ ನಿರ್ಮಾಣ ಕೆಲಸವನ್ನು ಮಾಡುತ್ತಿದ್ದಾರೆ. ಈ ಎಲ್ಲ ಕೆಲಸವು ಬಹುಶಃ 2002ರಲ್ಲಿ ಪೂರ್ಣಗೊಳ್ಳುವಾಗ, ನಮ್ಮ ಈ ವಿಸ್ತರಿಸಲ್ಪಟ್ಟ ಕಟ್ಟಡಗಳಲ್ಲಿ ಇನ್ನೂ 1,300 ಮಂದಿಯನ್ನು ಕೂಡಿಸಬಹುದು. 1950ರಲ್ಲಿ ಇಡೀ ದೇಶದಲ್ಲಿ 7,000ಕ್ಕಿಂತಲೂ ಕಡಿಮೆ ಪ್ರಚಾರಕರಿದ್ದರು. ಆದರೆ ಈಗ 5,00,000ಕ್ಕಿಂತಲೂ ಹೆಚ್ಚು ಪ್ರಚಾರಕರಿದ್ದಾರೆ! ಯೆಹೋವನನ್ನು ಸ್ತುತಿಸಲಿಕ್ಕಾಗಿ ಇಷ್ಟೊಂದು ಕಷ್ಟಪಡುತ್ತಿರುವ, ಮೆಕ್ಸಿಕೊದಲ್ಲಿರುವ ನಮ್ಮ ನಮ್ರ ಸಹೋದರರ ಪ್ರಯತ್ನಗಳನ್ನು ಯೆಹೋವನು ಆಶೀರ್ವದಿಸಿರುವ ರೀತಿಯನ್ನು ನೋಡಿ ನನ್ನ ಹೃದಯವು ಆನಂದದಿಂದ ತುಂಬಿತುಳುಕುತ್ತದೆ.

ಒಂದು ದೊಡ್ಡ ಸವಾಲನ್ನು ಎದುರಿಸುವುದು

ಇತ್ತೀಚಿಗೆ ನನ್ನ ಮುಂದಿರುವ ಅತಿ ದೊಡ್ಡ ಸವಾಲುಗಳಲ್ಲಿ ಒಂದು, ನನ್ನ ಕಾಯಿಲೆಯೇ ಆಗಿದೆ. ಸಾಮಾನ್ಯವಾಗಿ ನಾನೊಬ್ಬ ಆರೋಗ್ಯವಂತ ವ್ಯಕ್ತಿಯಾಗಿದ್ದೆ. ಆದರೆ 1988ರ ನವೆಂಬರ್‌ ತಿಂಗಳಲ್ಲಿ ನನಗೆ ಹೃದಯಾಘಾತವಾಯಿತು, ಮತ್ತು ಇದು ನನ್ನ ಶಾರೀರಿಕ ಸಾಮರ್ಥ್ಯಗಳನ್ನು ಬಾಧಿಸಿತು. ವ್ಯಾಯಾಮ ಮತ್ತು ಬೇರೆ ಚಿಕಿತ್ಸೆಗಳಿಂದಾಗಿ, ನಾನು ಸ್ವಲ್ಪ ಮಟ್ಟಿಗೆ ಗುಣಹೊಂದಿರುವುದಕ್ಕಾಗಿ ಯೆಹೋವನಿಗೆ ಉಪಕಾರ ಹೇಳುತ್ತೇನೆ. ಆದರೆ ನನ್ನ ದೇಹದ ಕೆಲವೊಂದು ಭಾಗಗಳು ನಾನು ಬಯಸುವಂಥ ರೀತಿಯಲ್ಲಿ ಪ್ರತಿಕ್ರಿಯಿಸುವುದಿಲ್ಲ. ತೀವ್ರವಾದ ತಲೆನೋವುಗಳು ಮತ್ತು ಈ ವರೆಗೂ ಉಳಿದಿರುವ ಬೇರೆ ಪರಿಣಾಮಗಳಿಂದ ದೂರವಿರಲಿಕ್ಕಾಗಿ ನಾನು ಈಗಲೂ ಔಷಧೋಪಚಾರ ಮತ್ತು ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುತ್ತಿದ್ದೇನೆ.

ನಾನು ಬಯಸುವಷ್ಟು ಕೆಲಸವನ್ನು ನಾನು ಈಗ ಮಾಡಲಾಗದಿದ್ದರೂ, ಯೆಹೋವನ ಉದ್ದೇಶಗಳ ಕುರಿತಾಗಿ ಕಲಿತುಕೊಂಡು ಆತನ ಸಮರ್ಪಿತ ಸೇವಕರಾಗುವಂತೆ ನಾನು ಅನೇಕರಿಗೆ ಸಹಾಯಮಾಡಲು ಶಕ್ತನಾದೆ ಎಂಬ ಅರಿವಿನಿಂದ ನನಗೆ ಸ್ವಲ್ಪ ಸಂತೃಪ್ತಿ ಸಿಗುತ್ತದೆ. ನಮ್ಮ ಬ್ರಾಂಚ್‌ ಅನ್ನು ಭೇಟಿಮಾಡಲು ಬರುವ ಕ್ರೈಸ್ತ ಸಹೋದರ ಸಹೋದರಿಯಲ್ಲಿ ಸಾಧ್ಯವಿರುವಷ್ಟು ಹೆಚ್ಚು ಮಂದಿಯೊಂದಿಗೆ ಮಾತಾಡಲು ನನಗೆ ತುಂಬ ಸಂತೋಷವಾಗುತ್ತದೆ. ಅವರಿಗೂ ನನಗೂ ಪ್ರೋತ್ಸಾಹ ಸಿಗುತ್ತದೆಂದು ನನಗನಿಸುತ್ತದೆ.

ನಾವು ಯೆಹೋವನಿಗೆ ಸಲ್ಲಿಸಿರುವ ಸೇವೆಯನ್ನು ಆತನು ಗಣ್ಯಮಾಡುತ್ತಾನೆ ಮತ್ತು ನಾವು ಮಾಡಿದಂಥ ಕೆಲಸವು ವ್ಯರ್ಥವಲ್ಲ ಎಂಬ ಸಂಗತಿಯು ನನಗೆ ತುಂಬ ಬಲವನ್ನು ಕೊಟ್ಟಿದೆ. (1 ಕೊರಿಂಥ 15:58) ನನಗಿರುವ ಇತಿಮಿತಿಗಳು ಮತ್ತು ಕಾಯಿಲೆಯ ಎದುರಿನಲ್ಲೂ, ನಾನು ಕೊಲೊಸ್ಸೆ 3:23, 24ರಲ್ಲಿರುವ ಮಾತುಗಳನ್ನು ಪಾಲಿಸಿದ್ದೇನೆ: “ನೀವು ಯಾವ ಕೆಲಸವನ್ನು ಮಾಡಿದರೂ ಅದನ್ನು ಮನುಷ್ಯರಿಗೋಸ್ಕರವೆಂದು ಮಾಡದೆ ಕರ್ತನಿಗೋಸ್ಕರವೇ ಎಂದು ಮನಃಪೂರ್ವಕವಾಗಿ ಮಾಡಿರಿ.” ಈ ಬುದ್ಧಿವಾದಕ್ಕನುಗುಣವಾಗಿ, ಪರೀಕ್ಷೆಯ ಸಮಯದಲ್ಲೂ ಮನಃಪೂರ್ವಕವಾಗಿ ಯೆಹೋವನ ಸೇವೆಮಾಡುವುದನ್ನು ನಾನು ಕಲಿತುಕೊಂಡಿದ್ದೇನೆ.

[ಪುಟ 24ರಲ್ಲಿರುವ ಚಿತ್ರ]

1942ರಲ್ಲಿ ನಾನೊಬ್ಬ ಪಯನೀಯರನಾಗಿದ್ದಾಗ

[ಪುಟ 24ರಲ್ಲಿರುವ ಚಿತ್ರ]

ನನ್ನ ಹೆಂಡತಿಯು 1947ರಲ್ಲಿ ಮೆಕ್ಸಿಕೊ ದೇಶದಲ್ಲಿ ತನ್ನ ಮಿಷನೆರಿ ನೇಮಕವನ್ನು ಆರಂಭಿಸಿದಳು

[ಪುಟ 24ರಲ್ಲಿರುವ ಚಿತ್ರ]

ಎಸ್ತೇರಳೊಂದಿಗೆ ಇಂದು

[ಪುಟ 26ರಲ್ಲಿರುವ ಚಿತ್ರಗಳು]

ಮೇಲೆ ಎಡಕ್ಕೆ: 1952ರಲ್ಲಿ ಮೆಕ್ಸಿಕೊದಲ್ಲಿನ ನಮ್ಮ ಬೆತೆಲ್‌ ಕುಟುಂಬ. ನಾನು ಮುಂದೆ ನಿಂತಿದ್ದೇನೆ

ಮೇಲೆ: 1999ರಲ್ಲಿ ಒಂದು ಜಿಲ್ಲಾ ಅಧಿವೇಶನಕ್ಕಾಗಿ 1,09,000ಕ್ಕಿಂತಲೂ ಹೆಚ್ಚು ಮಂದಿ ಈ ಮೆಕ್ಸಿಕೊ ನಗರದ ಸ್ಟೇಡಿಯಮ್‌ನಲ್ಲಿ ಕೂಡಿಬಂದರು

ಕೆಳಗೆ ಎಡಕ್ಕೆ: ಬೇಗನೆ ಪೂರ್ಣಗೊಳ್ಳಲಿರುವ ನಮ್ಮ ಹೊಸ ಬ್ರಾಂಚ್‌ ಕಟ್ಟಡಗಳು