ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಮನಸ್ಸಾಕ್ಷಿಯನ್ನು ಭದ್ರವಾಗಿ ಕಾಪಾಡಿಕೊಳ್ಳಿರಿ

ನಿಮ್ಮ ಮನಸ್ಸಾಕ್ಷಿಯನ್ನು ಭದ್ರವಾಗಿ ಕಾಪಾಡಿಕೊಳ್ಳಿರಿ

ನಿಮ್ಮ ಮನಸ್ಸಾಕ್ಷಿಯನ್ನು ಭದ್ರವಾಗಿ ಕಾಪಾಡಿಕೊಳ್ಳಿರಿ

ತಪ್ಪಾಗಿ ಪ್ರೋಗ್ರ್ಯಾಮ್‌ ಮಾಡಲ್ಪಟ್ಟಿರುವ ಕಂಪ್ಯೂಟರಿನೊಂದಿಗೆ ಒಂದು ವಿಮಾನವನ್ನು ಚಲಾಯಿಸುವುದರ ಕುರಿತು ಯೋಚಿಸುವಾಗಲೇ ದಿಗಿಲುಹುಟ್ಟುತ್ತದೆ. ಆದರೆ ಯಾರಾದರೂ ವಿಮಾನದ ಮಾರ್ಗದರ್ಶಕ ವ್ಯವಸ್ಥೆಯ ಕ್ರಮ ತಪ್ಪಿಸಿ, ಅದರ ದತ್ತಾಂಶವನ್ನು ಬೇಕುಬೇಕೆಂದು ತಪ್ಪಾಗಿ ನಿರೂಪಿಸಿದರೆ ಏನಾಗುವುದೆಂದು ಸ್ವಲ್ಪ ಊಹಿಸಿಕೊಳ್ಳಿರಿ! ಸಾಂಕೇತಿಕ ಅರ್ಥದಲ್ಲಿ, ನಿಮ್ಮ ಮನಸ್ಸಾಕ್ಷಿಗೆ ಅದನ್ನೇ ಮಾಡಲು ಒಬ್ಬನು ಪ್ರಯತ್ನಿಸುತ್ತಾ ಇದ್ದಾನೆ. ನಿಮ್ಮ ನೈತಿಕ ಮಾರ್ಗದರ್ಶಕ ವ್ಯವಸ್ಥೆಯನ್ನು ವಿಧ್ವಂಸಗೊಳಿಸುವುದೇ ಅವನ ದೃಢನಿಶ್ಚಯವಾಗಿದೆ. ದೇವರೊಂದಿಗೆ ಡಿಕ್ಕಿಹೊಡೆಯುವ ಮಾರ್ಗದಲ್ಲಿ ನಿಮ್ಮನ್ನು ಹಾಕುವುದೇ ಅವನ ದುರುದ್ದೇಶ!​—ಯೋಬ 2:​2-5; ಯೋಹಾನ 8:44.

ಈ ಕುಟಿಲ ವಿಧ್ವಂಸಕನಾದರೂ ಯಾರು? ಬೈಬಲಿನಲ್ಲಿ ಅವನನ್ನು “ಭೂಲೋಕದವರನ್ನೆಲ್ಲಾ ಮರುಳುಗೊಳಿಸುವ ಆ ಮಹಾ ಘಟಸರ್ಪನು ಅಂದರೆ ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳ ಪುರಾತನ ಸರ್ಪ” ಎಂದು ಕರೆಯಲಾಗಿದೆ. (ಪ್ರಕಟನೆ 12:​9, ಓರೆ ಅಕ್ಷರಗಳು ನಮ್ಮವು.) ಅವನ ಕುಟಿಲ ಕ್ರಿಯೆಯು ಏದೆನ್‌ ತೋಟದಲ್ಲಿದ್ದಾಗ ತೋರಿಬಂತು. ಮೇಲ್ನೋಟಕ್ಕೆ ಒಳ್ಳೆಯದಾಗಿ ತೋರುವ ತರ್ಕವನ್ನು ಉಪಯೋಗಿಸುತ್ತಾ, ಯಾವುದು ಸರಿಯೋ ಅದನ್ನು ತಿರಸ್ಕರಿಸುವಂತೆ ಮತ್ತು ದೇವರಿಗೆ ಎದುರಾಗಿ ದಂಗೆಯೇಳುವಂತೆ ಅವನು ಹವ್ವಳನ್ನು ಪುಸಲಾಯಿಸಿದನು. (ಆದಿಕಾಂಡ 3:​1-6, 16-19) ಅಂದಿನಿಂದ ಹಿಡಿದು ಅವನು ಜನರನ್ನು ಒಟ್ಟಾಗಿ ದೇವರ ವಿರುದ್ಧ ಶತ್ರುತ್ವಕ್ಕೆ ನಡಿಸಲು, ಮೋಸಕರವಾದ ಇಡೀ ಸಂಘಟನೆಗಳನ್ನೇ ತಂತ್ರೋಪಾಯದಿಂದ ರಚಿಸಿರುತ್ತಾನೆ. ಈ ಸಂಘಟನೆಗಳಲ್ಲಿ ಅತ್ಯಂತ ನಿಂದನೀಯವಾದದ್ದು ಸುಳ್ಳು ಧರ್ಮದ ಸಂಘಟನೆಯೇ.​—2 ಕೊರಿಂಥ 11:​14, 15.

ಸುಳ್ಳು ಧರ್ಮವು ಮನಸ್ಸಾಕ್ಷಿಯನ್ನು ಭ್ರಷ್ಟಗೊಳಿಸುತ್ತದೆ

ಬೈಬಲಿನ ಪ್ರಕಟನೆ ಪುಸ್ತಕದಲ್ಲಿ ಸುಳ್ಳು ಧರ್ಮವು ಮಹಾ ಬಾಬೆಲು ಎಂದು ಕರೆಯಲ್ಪಟ್ಟ ಸಾಂಕೇತಿಕ ವೇಶ್ಯೆಯಾಗಿ ಸೂಚಿಸಲ್ಪಟ್ಟಿದೆ. ಅವಳ ಬೋಧನೆಗಳು ಅನೇಕ ಜನರ ನೈತಿಕ ಸಂವೇದನಾ ಶಕ್ತಿಗಳನ್ನು ವಕ್ರಗೊಳಿಸಿ, ಬೇರೆ ನಂಬಿಕೆಗಳಿರುವ ಜನರನ್ನು ದ್ವೇಷಿಸುವಂತೆಯೂ ಅವರ ವಿರುದ್ಧವಾಗಿ ಹಿಂಸಾಚಾರದ ಕೃತ್ಯಗಳನ್ನು ನಡೆಸುವಂತೆಯೂ ಪ್ರೇರೇಪಿಸಿವೆ. ವಾಸ್ತವವಾಗಿ ಪ್ರಕಟನೆ ಪುಸ್ತಕಕ್ಕನುಸಾರ, “ಭೂಮಿಯ ಮೇಲೆ ಕೊಲ್ಲಲ್ಪಟ್ಟವರೆಲ್ಲರ” ರಕ್ತಕ್ಕಾಗಿ ದೇವರು ಸುಳ್ಳು ಧರ್ಮವನ್ನು ಮುಖ್ಯ ಹೊಣೆಗಾರಳನ್ನಾಗಿ ಮಾಡಿದ್ದಾನೆ.​—ಪ್ರಕಟನೆ 17:​1-6; 18:​3, 24.

ಸುಳ್ಳು ಧರ್ಮವು ಕೆಲವರ ಸಾಂಕೇತಿಕ ನೈತಿಕ ದಿಕ್ಸೂಚಿಯನ್ನು ಎಷ್ಟರ ಮಟ್ಟಿಗೆ ವಕ್ರಗೊಳಿಸುವದೆಂದು ಸೂಚಿಸುತ್ತಾ ಯೇಸು ಅಂದದ್ದು: “ನಿಮ್ಮನ್ನು ಕೊಲ್ಲುವವನು ತಾನು ದೇವರಿಗೆ ಯಜ್ಞವನ್ನು ಮಾಡಿದ್ದೇನೆಂದು ನೆನಸುವ ಕಾಲ ಬರುತ್ತದೆ.” ಅಂಥ ಹಿಂಸಾತ್ಮಕ ವ್ಯಕ್ತಿಗಳು ನೈತಿಕ ರೀತಿಯಲ್ಲಿ ಎಷ್ಟರ ಮಟ್ಟಿಗೆ ಕುರುಡುಗೊಳಿಸಲ್ಪಟ್ಟಿದ್ದಾರೆ! “ಅವರು ತಂದೆಯನ್ನಾದರೂ ನನ್ನನ್ನಾದರೂ ತಿಳಿಯದವರಾಗಿ”ದ್ದಾರೆ ಎಂದು ಯೇಸು ಹೇಳಿದನು. (ಯೋಹಾನ 16:​2, 3, ಓರೆ ಅಕ್ಷರಗಳು ನಮ್ಮವು.) ಈ ಮಾತುಗಳನ್ನು ನುಡಿದಾದ ಸ್ವಲ್ಪ ಸಮಯದೊಳಗೆ ಯೇಸು ತಾನೇ ಕೆಲವು ಧಾರ್ಮಿಕ ಮುಖಂಡರ ಕೆಟ್ಟ ಆಜ್ಞೆಯ ಮೇರೆಗೆ ಕೊಲ್ಲಲ್ಪಟ್ಟನು. ಅವರು ತಮ್ಮ ದುಷ್ಕರ್ಮದ ವಿಷಯದಲ್ಲಿ ತಮ್ಮ ಮನಸ್ಸಾಕ್ಷಿಯನ್ನು ಶಮನಗೊಳಿಸಲು ಶಕ್ತರಾದರು. (ಯೋಹಾನ 11:​47-50) ಇದಕ್ಕೆ ವ್ಯತಿರಿಕ್ತವಾಗಿ, ತನ್ನ ಹಿಂಬಾಲಕರಾದರೋ ಅವರ ಮಧ್ಯೆಯಿರುವ ಪ್ರೀತಿಯಿಂದ ಗುರುತಿಸಲ್ಪಡುವರೆಂದು ಯೇಸುವೇ ಹೇಳಿದನು. ಆದರೆ ಅವರ ಪ್ರೀತಿಯು ಇನ್ನಷ್ಟು ಹೆಚ್ಚು ವಿಸ್ತಾರವಾಗಿದೆ, ಯಾಕೆಂದರೆ ಅದು ಅವರ ಶತ್ರುಗಳ ಕಡೆಗೂ ತೋರಿಸಲ್ಪಡುತ್ತದೆ.​—ಮತ್ತಾಯ 5:​44-48; ಯೋಹಾನ 13:35.

ಸುಳ್ಳು ಧರ್ಮವು ಅನೇಕರ ಮನಸ್ಸಾಕ್ಷಿಗಳನ್ನು ವಿಧ್ವಂಸಗೊಳಿಸಿರುವ ಇನ್ನೊಂದು ವಿಧಾನವು ಯಾವುದೆಂದರೆ, ಚಾಲ್ತಿಯಲ್ಲಿರುವ ಯಾವುದೇ ರೀತಿಯ ಜನಪ್ರಿಯ ನೈತಿಕತೆ ಅಥವಾ ನೀಚ ಮನೋದ್ರೇಕಗಳಿಗೆ ಒಪ್ಪಿಗೆ ಅಥವಾ ಸಹಾಯವನ್ನು ನೀಡುವ ಮೂಲಕವೇ. ಇದನ್ನು ಮುಂತಿಳಿಸುತ್ತಾ ಅಪೊಸ್ತಲ ಪೌಲನಂದದ್ದು: “ಜನರು ಸ್ವಸ್ಥಬೋಧನೆಯನ್ನು ಸಹಿಸಲಾರದ ಕಾಲವು ಬರುತ್ತದೆ; ಅದರಲ್ಲಿ ಅವರು ತೀಟೇ ಕಿವಿಗಳುಳ್ಳವರಾಗಿ ತಮ್ಮ ದುರಾಶೆಗಳಿಗೆ ಅನುಕೂಲರಾದ ಅನೇಕ ಉಪದೇಶಕರನ್ನು ಇಟ್ಟುಕೊಳ್ಳುವರು.”​—2 ತಿಮೊಥೆಯ 4:3.

ಇಂದಿನ ದಿನಗಳಲ್ಲಿ ಧಾರ್ಮಿಕ ಮುಖಂಡರು ಜನರ ಕಿವಿಗಳನ್ನು ರಮಿಸುವುದು ಹೇಗೆ? ವಿವಾಹಬಾಹಿರ ಸೆಕ್ಸ್‌ ದೇವರಿಗೆ ಸ್ವೀಕಾರಾರ್ಹವಾಗಿರಬಹುದೆಂದು ಹೇಳುವ ಮೂಲಕವೇ. ಸಲಿಂಗೀಕಾಮವನ್ನು ಕೆಲವರು ಮನ್ನಿಸುತ್ತಾರೆ. ನಿಜ ಸಂಗತಿಯೇನೆಂದರೆ, ಕೆಲವು ಪಾದ್ರಿಗಳು ಸ್ವತಃ ಕ್ರಿಯಾಶೀಲ ಸಲಿಂಗೀಕಾಮಿಗಳಾಗಿದ್ದಾರೆ. ಬ್ರಿಟಿಷ್‌ ವಾರ್ತಾಪತ್ರಿಕೆಯಾದ ದ ಟೈಮ್ಸ್‌ನ ಲೇಖನವೊಂದು ಹೇಳಿದ್ದೇನೆಂದರೆ, “ಎಲ್ಲರಿಗೂ ತಿಳಿದಿರುವ ಹದಿಮೂರು ಮಂದಿ ಸಲಿಂಗೀಕಾಮಿಗಳನ್ನು” ಚರ್ಚ್‌ ಆಫ್‌ ಇಂಗ್ಲೆಂಡಿನ ಪ್ರತಿನಿಧಿ ಮಂಡಲಿಗೆ ಸದಸ್ಯರಾಗಿ ಆರಿಸಲಾಗಿದೆ. ಚರ್ಚ್‌ ಮುಖಂಡರು ಬೈಬಲಿನ ನೈತಿಕ ನಿಯಮಗಳನ್ನು ತ್ಯಜಿಸಿಬಿಡುವಾಗ ಮತ್ತು ಚರ್ಚು ಅದರ ಕುರಿತು ಯಾವುದೇ ಕ್ರಮವನ್ನು ಕೈಕೊಳ್ಳದಿರುವಾಗ, ಅವರ ಸಭಿಕರಾದರೋ ಯಾವ ನೈತಿಕ ಮಟ್ಟಗಳನ್ನು ಅವಲಂಬಿಸ್ಯಾರು? ಆದುದರಿಂದ, ಕೋಟ್ಯಂತರ ಜನರು ಪೂರಾ ರೀತಿಯಲ್ಲಿ ಗಲಿಬಿಲಿಗೊಂಡವರಾಗಿರುವುದರಲ್ಲಿ ಆಶ್ಚರ್ಯವೇನಿಲ್ಲ.

ಹೀಗಿರಲಾಗಿ, ಬೈಬಲಿನಲ್ಲಿ ಕಲಿಸಲ್ಪಟ್ಟಿರುವ, ಸಂಜ್ಞಾಜ್ಯೋತಿಗಳಂತಿರುವ ನೈತಿಕ ಮತ್ತು ಆತ್ಮಿಕ ಸತ್ಯಗಳಿಂದ ಮಾರ್ಗದರ್ಶಿಸಲ್ಪಡುವುದು ಅದೆಷ್ಟು ಹೆಚ್ಚು ಉತ್ತಮ! (ಕೀರ್ತನೆ 43:3; ಯೋಹಾನ 17:17) ಉದಾಹರಣೆಗೆ, ಜಾರರೂ ವ್ಯಭಿಚಾರಿಗಳೂ “ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ” ಎಂದು ಬೈಬಲು ಕಲಿಸುತ್ತದೆ. (1 ಕೊರಿಂಥ 6:​9, 10) ಗಂಡಸರು ಮತ್ತು ಹೆಂಗಸರು ಸಹ “ಸ್ವಾಭಾವಿಕವಾದ ಭೋಗವನ್ನು ಬಿಟ್ಟು ಸ್ವಭಾವಕ್ಕೆ ವಿರುದ್ಧವಾದ ಭೋಗವನ್ನು” ನಡಿಸುತ್ತಾರೆಂದೂ ಮತ್ತು ದೇವರ ದೃಷ್ಟಿಯಲ್ಲಿ “ಅವಲಕ್ಷಣವಾದದ್ದನ್ನು” ಮಾಡುತ್ತಾರೆಂದೂ ಅದು ತಿಳಿಸುತ್ತದೆ. (ರೋಮಾಪುರ 1:​26, 27, 32) ಈ ನೈತಿಕ ಸತ್ಯತೆಗಳು ಅಪರಿಪೂರ್ಣ ಮಾನವರಿಂದ ರಚಿಸಲ್ಪಟ್ಟ ಕಲ್ಪನೆಗಳಲ್ಲ; ಅವು ದೇವರ ಪ್ರೇರಿತ ಮಟ್ಟಗಳಾಗಿವೆ. ಅವುಗಳನ್ನು ಆತನು ಎಂದೂ ರದ್ದುಮಾಡಿಲ್ಲ. (ಗಲಾತ್ಯ 1:8; 2 ತಿಮೊಥೆಯ 3:16) ಆದರೆ ನಮ್ಮ ಮನಸ್ಸಾಕ್ಷಿಗಳನ್ನು ವಿಧ್ವಂಸಗೊಳಿಸುವ ಇತರ ವಿಧಾನಗಳು ಸೈತಾನನ ಬಳಿಯಿವೆ.

ಮನೋರಂಜನೆಯನ್ನು ಆಯ್ಕೆಮಾಡಿ

ದುಷ್ಕೃತ್ಯವೆಸಗುವಂತೆ ಒಬ್ಬನನ್ನು ಒತ್ತಾಯಿಸುವುದು ಬಹಳಷ್ಟು ಕೆಟ್ಟದ್ದೇ, ಆದರೆ ಅಂಥ ಒಂದು ಕೃತ್ಯವನ್ನು ನಡಿಸುವಂಥ ಬಯಕೆಯನ್ನು ಅವನಲ್ಲಿ ಹುಟ್ಟಿಸುವುದು ಇನ್ನಷ್ಟು ಕೆಟ್ಟದ್ದಾಗಿದೆ. “ಇಹಲೋಕಾಧಿಪತಿ”ಯಾದ ಸೈತಾನನ ಹೇತು ಇದೇ ಆಗಿದೆ. ತನ್ನ ನೀಚ ಆಲೋಚನಾ ರೀತಿಯನ್ನು ಮೂಢರೂ ಅರಿವಿಲ್ಲದವರೂ ಆಗಿರುವವರ, ವಿಶೇಷವಾಗಿ ಅತಿ ಸುಲಭವಾಗಿ ಬಲಿಬೀಳುವ ಯುವ ಜನರ ಮನಸ್ಸಿನಲ್ಲಿ ಅಚ್ಚೊತ್ತಲು ಅವನು ಪ್ರಯತ್ನಿಸುತ್ತಾನೆ. ಆಕ್ಷೇಪಣೀಯ ಸಾಹಿತ್ಯ, ಚಲನಚಿತ್ರಗಳು, ಸಂಗೀತ, ಕಂಪ್ಯೂಟರ್‌ ಆಟಗಳು ಮತ್ತು ಇಂಟರ್‌ನೆಟ್‌ನಲ್ಲಿ ಲಂಪಟ ಸಾಹಿತ್ಯದ ಸೈಟ್‌ಗಳೇ ಮುಂತಾದ ಸಾಧನಗಳನ್ನು ಉಪಯೋಗಿಸುವ ಮೂಲಕ ಅವನು ಇದನ್ನು ಮಾಡುತ್ತಾನೆ.​—ಯೋಹಾನ 14:30; ಎಫೆಸ 2:2.

“[ಅಮೆರಿಕದಲ್ಲಿ] ಯುವ ಜನರು ಪ್ರತಿ ವರ್ಷ ಸುಮಾರು 10,000 ಹಿಂಸಾಚಾರದ ಕೃತ್ಯಗಳನ್ನು ನೋಡುತ್ತಾರೆ. ಅದರಲ್ಲೂ ಮಕ್ಕಳಿಗಾಗಿ ರಚಿಸಲ್ಪಟ್ಟಿರುವ ಟಿವಿ ಕಾರ್ಯಕ್ರಮಗಳು ಅತಿರೇಕ ಹಿಂಸಾಚಾರದಿಂದ ಕೂಡಿರುತ್ತವೆ” ಎಂದು ಮಕ್ಕಳ ವೈದ್ಯಶಾಸ್ತ್ರ (ಇಂಗ್ಲಿಷ್‌) ಎಂಬ ಪತ್ರಿಕೆಯಲ್ಲಿನ ಒಂದು ವರದಿಯು ಹೇಳಿತು. “ಹದಿಹರೆಯದವರು ಪ್ರತಿ ವರ್ಷ ಸುಮಾರು 15,000 ಲೈಂಗಿಕ ಪ್ರಸ್ತಾಪಗಳನ್ನು, ಹೀನಾಯ ವ್ಯಂಗ್ಯೋಕ್ತಿಗಳನ್ನು ಮತ್ತು ಜೋಕುಗಳನ್ನು ವೀಕ್ಷಿಸುತ್ತಾರೆ” ಎಂದೂ ಆ ಪತ್ರಿಕೆಯು ಪ್ರಕಟಿಸಿತು. ಹೆಚ್ಚಿನ ವೀಕ್ಷಕರು ಇರುವ ಸಾಯಂಕಾಲದ ಟಿವಿ ಕಾರ್ಯಕ್ರಮಗಳಲ್ಲೂ “ತಾಸಿಗೆ 8ಕ್ಕಿಂತಲೂ ಹೆಚ್ಚು ಲೈಂಗಿಕ ಪ್ರಕರಣಗಳು ಇದ್ದೇ ಇರುತ್ತವೆ. 1976ರಲ್ಲಿ ಇದ್ದುದಕ್ಕಿಂತ ಇದು ನಾಲ್ಕು ಪಟ್ಟು ಹೆಚ್ಚು” ಎಂದು ಆ ಪತ್ರಿಕೆಯು ವರದಿಮಾಡಿದೆ. “ಅಶ್ಲೀಲ ಭಾಷೆಯೂ ದಿನೇ ದಿನೇ ಗಮನಾರ್ಹವಾಗಿ ವೃದ್ಧಿಯಾಗುತ್ತಿದೆ” ಎಂದು ಆ ಅಧ್ಯಯನವು ಕಂಡುಕೊಂಡದ್ದರಲ್ಲಿ ಆಶ್ಚರ್ಯವೇನಿಲ್ಲ. ಆದರೂ ಬೈಬಲು ಮತ್ತು ಹಲವಾರು ವೈಜ್ಞಾನಿಕ ಅಧ್ಯಯನಗಳು ಎಚ್ಚರಿಕೆಯನ್ನಿತ್ತಿವೆ. ಅದೇನೆಂದರೆ, ಇಂಥ ಮಾಹಿತಿಯ ಪಥ್ಯವನ್ನು ಸೇವಿಸುವುದು ಜನರನ್ನು ಇನ್ನಷ್ಟು ಕೆಟ್ಟವರನ್ನಾಗಿ ಮಾಡುತ್ತದೆ. ಆದುದರಿಂದ ನೀವು ನಿಜವಾಗಿ ದೇವರನ್ನು ಮೆಚ್ಚಿಸಲು ಮತ್ತು ಪ್ರಯೋಜನ ಹೊಂದಲು ಬಯಸುವುದಾದರೆ, ಜ್ಞಾನೋಕ್ತಿ 4:23ರ ಈ ಮಾತುಗಳನ್ನು ಪಾಲಿಸಿರಿ: “ನಿನ್ನ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೋ; ಅದರೊಳಗಿಂದ ಜೀವಧಾರೆಗಳು ಹೊರಡುವವು.”​—ಯೆಶಾಯ 48:17.

ಹೆಚ್ಚಿನ ಜನಪ್ರಿಯ ಸಂಗೀತಗಳು ಕೂಡ ಮನಸ್ಸಾಕ್ಷಿಯನ್ನು ಭ್ರಷ್ಟಗೊಳಿಸುತ್ತವೆ. ಯಾರ ಸಂಗೀತಗಳು ಅತ್ಯಂತ ಜನಪ್ರಿಯವಾಗಿವೆಯೋ ಮತ್ತು ಅನೇಕ ಪಾಶ್ಚಿಮಾತ್ಯ ದೇಶಗಳಲ್ಲಿ ಉನ್ನತ ದರ್ಜೆಗೇರಿವೆಯೋ ಆ ಗಾಯಕನು “ಜನರಿಗೆ ಧಕ್ಕೆ ತಗಲಿಸಲು ವಿಶೇಷ ಪ್ರಯತ್ನವನ್ನು” ಮಾಡುತ್ತಾನೆ ಎಂಬುದಾಗಿ ಆಸ್ಟ್ರೇಲಿಯದ ವಾರ್ತಾಪತ್ರವಾದ ದ ಸಂಡೇ ಮೇಲ್‌ ಎಚ್ಚರಿಸುತ್ತದೆ.“ಅವನ ಹಾಡುಗಳು, ಅಮಲೌಷಧ, ಅಗಮ್ಯಗಮನ ಮತ್ತು ಬಲಾತ್ಕಾರ ಸಂಭೋಗವನ್ನು ಹೊಗಳುತ್ತವೆ.” ಮತ್ತು ಅವನು “ತನ್ನ ಹೆಂಡತಿಯನ್ನು ಕೊಂದು ಅವಳ ಶವವನ್ನು ಕೆರೆಗೆಸೆಯುವುದರ ಕುರಿತು ಹಾಡುತ್ತಾನೆ” ಎಂದು ಆ ಲೇಖನವು ತಿಳಿಸುತ್ತದೆ. ಇತರ ಕೆಲವು ಹಾಡುಗಳ ಪದಗಳು ಇಲ್ಲಿ ಪುನರುಚ್ಚರಿಸಲು ಅಸಾಧ್ಯವಾಗಿರುವಷ್ಟು ಅಸಹ್ಯಕರವಾಗಿವೆ. ಆದರೂ ಅವನ ಸಂಗೀತಕ್ಕಾಗಿ ಅವನಿಗೆ ಒಂದು ಪ್ರತಿಷ್ಠಿತ ಪುರಸ್ಕಾರವು ಕೊಡಲ್ಪಟ್ಟಿತು. ಮೇಲೆ ತಿಳಿಸಿದಂಥ ಹೊಲಸು ವಿಚಾರಗಳನ್ನು, ಅವುಗಳಿಗೆ ಸಂಗೀತ ಎಂಬ ಸಕ್ಕರೆಲೇಪವಿದ್ದರೂ, ಅವನ್ನು ನಿಮ್ಮ ಹೃದಮನಗಳಲ್ಲಿ ಬಿತ್ತಲು ಬಯಸುತ್ತೀರೋ? ನೀವದನ್ನು ಬಯಸಲಾರಿರಿ, ಏಕೆಂದರೆ ಯಾರು ಆ ರೀತಿ ಮಾಡುತ್ತಾರೋ ಅವರು ತಮ್ಮ ಮನಸ್ಸಾಕ್ಷಿಗಳನ್ನು ಕಲುಷಿತಗೊಳಿಸುತ್ತಾರೆ ಮತ್ತು ಕಟ್ಟಕಡೆಗೆ ತಮ್ಮೊಳಗೆ “ಕೆಟ್ಟ ಹೃದಯ”ವನ್ನು ಬೆಳೆಸಿಕೊಳ್ಳುತ್ತಾರೆ. ಇದು ಅವರನ್ನು ದೇವರ ವೈರಿಗಳನ್ನಾಗಿ ಮಾಡುತ್ತದೆ.​—ಇಬ್ರಿಯ 3:12; ಮತ್ತಾಯ 12:​33-35.

ಆದುದರಿಂದ, ಮನೋರಂಜನೆಯ ಆಯ್ಕೆಯಲ್ಲಿ ವಿವೇಕಯುತರಾಗಿರ್ರಿ. ಬೈಬಲು ನಮ್ಮನ್ನು ಪ್ರೇರೇಪಿಸುವುದು: “ಯಾವಾವದು ಸತ್ಯವೂ ಮಾನ್ಯವೂ ನ್ಯಾಯವೂ ಶುದ್ಧವೂ ಪ್ರೀತಿಕರವೂ ಮನೋಹರವೂ ಆಗಿದೆಯೋ, ಯಾವದು ಸದ್ಗುಣವಾಗಿದೆಯೋ, ಯಾವದು ಕೀರ್ತಿಗೆ ಯೋಗ್ಯವೋ, ಅವೆಲ್ಲವುಗಳನ್ನೂ ಲಕ್ಷ್ಯಕ್ಕೆ ತಂದುಕೊಳ್ಳಿರಿ.”​—ಫಿಲಿಪ್ಪಿ 4:8.

ನಿಮ್ಮ ಮನಸ್ಸಾಕ್ಷಿಯನ್ನು ಪ್ರಭಾವಿಸುವ ಸಹವಾಸಗಳು

ಮಕ್ಕಳಾದ ನೀಲ್‌ ಮತ್ತು ಫ್ರಾನ್ಸ್‌ ಎಂಬುವವರು ನಿಜ ಕ್ರೈಸ್ತರೊಂದಿಗಿನ ಒಳ್ಳೆಯ ಸಹವಾಸದಲ್ಲಿ ಆನಂದಿಸುತ್ತಿದ್ದರು. * ಆದರೆ ಸಮಯಾನಂತರ “ನಾನು ಕೆಟ್ಟ ಜನರೊಂದಿಗೆ ಸಹವಾಸ ಮಾಡತೊಡಗಿದೆ” ಎಂದನು ನೀಲ್‌. ಇದರ ಪರಿಣಾಮವು ಅಪರಾಧ ಮತ್ತು ಸೆರೆವಾಸವಾಗಿತ್ತು. ಇದಕ್ಕಾಗಿ ಅವನು ತುಂಬ ವಿಷಾದಿಸಿದನು. ಫ್ರಾನ್ಸ್‌ನ ಕಥೆಯು ಸಹ ಅದೇ ರೀತಿಯದ್ದಾಗಿತ್ತು. “ಲೋಕದ ಯುವ ಜನರಿಂದ ಪ್ರಭಾವಿತನಾಗದೆ ನಾನು ಅವರೊಂದಿಗೆ ಸಹವಾಸ ಮಾಡಬಲ್ಲೆನೆಂದು ನಾನು ನೆನಸಿದೆ. ಆದರೆ ‘ಮೋಸಹೋಗಬೇಡಿರಿ. ದೇವರು ತಿರಸ್ಕಾರ ಸಹಿಸುವವನಲ್ಲ. ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು’ ಎಂದು ಗಲಾತ್ಯ 6:7 ಹೇಳುತ್ತದೆ. ನಾನು ಏನನ್ನು ನೆನಸಿದ್ದೆನೊ ಅದು ತಪ್ಪು, ಆದರೆ ಯೆಹೋವನೇ ಸರಿ ಎಂದು ಕಹಿ ಅನುಭವದಿಂದ ನಾನು ತಿಳಿದುಕೊಂಡೆ. ನಾನು ಮಾಡಿದ ಕೆಟ್ಟತನಕ್ಕಾಗಿ ನನಗೆ ಜೀವಾವಧಿಯ ಶಿಕ್ಷೆಯನ್ನು ವಿಧಿಸಲಾಗಿದೆ” ಎಂದವನು ಪ್ರಲಾಪಿಸುತ್ತಾನೆ.

ನೀಲ್‌ ಮತ್ತು ಫ್ರಾನ್ಸ್‌ರಂಥ ಜನರು ಸಾಮಾನ್ಯವಾಗಿ ಒಂದೇ ದಿನದಲ್ಲಿ ಅಪರಾಧಕ್ಕಿಳಿಯುವುದಿಲ್ಲ. ಆರಂಭದಲ್ಲಿ, ದುಷ್ಕರ್ಮಕ್ಕಿಳಿಯುವ ವಿಚಾರವೇ ಅವರಿಗೆ ಹೇವರಿಕೆಯನ್ನುಂಟುಮಾಡುತ್ತಿತ್ತು. ಈ ಸರಿಯುವಿಕೆಯು ಹಂತಹಂತವಾಗಿ ಸಂಭವಿಸುತ್ತದೆ, ಮತ್ತು ಅನೇಕವೇಳೆ ಮೊದಲನೆಯ ಹಂತ ದುಸ್ಸಹವಾಸವಾಗಿರುತ್ತದೆ. (1 ಕೊರಿಂಥ 15:33) ಅನಂತರ ಅಮಲೌಷಧ ಮತ್ತು ಮದ್ಯಸಾರದ ವ್ಯಸನ ಆರಂಭವಾಗಬಹುದು. ಮನಸ್ಸಾಕ್ಷಿಯನ್ನು “ಮದ್ಯಸಾರದಲ್ಲಿ ಕರಗಿಹೋಗುವ ವ್ಯಕ್ತಿತ್ವದ ಭಾಗ” ಎಂದು ಯುಕ್ತವಾಗಿಯೇ ವರ್ಣಿಸಲಾಗಿದೆ. ಅಲ್ಲಿಂದ ದುಷ್ಕರ್ಮ ಮತ್ತು ಅನೈತಿಕತೆಗಿಳಿಯಲು ಕೇವಲ ಒಂದು ಚಿಕ್ಕ ಹೆಜ್ಜೆ ಸಾಕು.

ಹೀಗಿರಲಾಗಿ ಆ ಮೊದಲನೆಯ ಹೆಜ್ಜೆಯನ್ನೇಕೆ ತೆಗೆದುಕೊಳ್ಳಬೇಕು? ಅದರ ಬದಲಿಗೆ ದೇವರನ್ನು ನಿಜವಾಗಿಯೂ ಪ್ರೀತಿಸುವ ವಿವೇಕಿಗಳೊಂದಿಗೆ ಸಹವಾಸ ಮಾಡಿರಿ. ನಿಮ್ಮ ಮನಸ್ಸಾಕ್ಷಿಯು ನಿಮ್ಮನ್ನು ಯೋಗ್ಯವಾಗಿ ಮಾರ್ಗದರ್ಶಿಸುವಂತೆ ಅದನ್ನು ಬಲಪಡಿಸಲು ಅವರು ನಿಮಗೆ ಸಹಾಯಮಾಡುವರು. ಇದರಿಂದಾಗಿ ಅನೇಕ ನೋವುಗಳನ್ನು ನೀವು ತಪ್ಪಿಸಿಕೊಳ್ಳಲು ಶಕ್ತರಾಗುವಿರಿ. (ಜ್ಞಾನೋಕ್ತಿ 13:20) ನೀಲ್‌ ಮತ್ತು ಫ್ರಾನ್ಸ್‌ ಇನ್ನೂ ಸೆರೆಯಲ್ಲಿದ್ದಾಗ್ಯೂ, ತಮ್ಮ ಮನಸ್ಸಾಕ್ಷಿಯು ಒಂದು ದೈವಿಕ ಕೊಡುಗೆಯಾಗಿದೆಯೆಂಬುದನ್ನು ಅವರು ಈಗ ಅರಿತುಕೊಳ್ಳುತ್ತಿದ್ದಾರೆ. ಅದನ್ನು ಯೋಗ್ಯ ರೀತಿಯಲ್ಲಿ ತರಬೇತಿಗೊಳಿಸಬೇಕು ಮತ್ತು ಅದನ್ನು ಬೆಲೆಯುಳ್ಳದ್ದಾಗಿ ಎಣಿಸಬೇಕೆಂದು ಅವರಿಗೆ ಮನದಟ್ಟಾಗಿದೆ. ಅದಲ್ಲದೆ, ಈಗ ಅವರು ಯೆಹೋವ ದೇವರೊಂದಿಗೆ ಒಂದು ಸುಸಂಬಂಧವನ್ನು ಕಟ್ಟಲಿಕ್ಕಾಗಿ ಪರಿಶ್ರಮಿಸುತ್ತಿದ್ದಾರೆ. ವಿವೇಕಿಗಳಾಗಿರಿ, ಮತ್ತು ಇವರು ಮಾಡಿದ ತಪ್ಪುಗಳಿಂದ ಪಾಠವನ್ನು ಕಲಿಯಿರಿ.​—ಜ್ಞಾನೋಕ್ತಿ 22:3.

ನಿಮ್ಮ ಮನಸ್ಸಾಕ್ಷಿಯನ್ನು ಜಾಗ್ರತೆಯಿಂದ ನೋಡಿಕೊಳ್ಳಿ

ದೇವರಲ್ಲಿ ಪ್ರೀತಿ ಮತ್ತು ನಂಬಿಕೆಯನ್ನು, ಆತನ ಹಿತಕರವಾದ ಭಯದೊಂದಿಗೆ ನಾವು ಕಟ್ಟುವಾಗ, ನಮ್ಮ ಮನಸ್ಸಾಕ್ಷಿಯನ್ನು ಜಾಗ್ರತೆಯಿಂದ ನೋಡಿಕೊಳ್ಳಲು ನಾವು ಬಯಸುತ್ತೇವೆಂಬುದನ್ನು ತೋರಿಸುತ್ತೇವೆ. (ಜ್ಞಾನೋಕ್ತಿ 8:​13; 1 ಯೋಹಾನ 5:3) ಮನಸ್ಸಾಕ್ಷಿಗೆ ಈ ಪ್ರಭಾವಗಳಿಲ್ಲದಿರುವಲ್ಲಿ ಅದಕ್ಕೆ ನೈತಿಕ ಸ್ಥಿರತೆಯೂ ಇರುವುದಿಲ್ಲವೆಂದು ಬೈಬಲು ತೋರಿಸುತ್ತದೆ. ಉದಾಹರಣೆಗೆ, “ದೇವರಿಲ್ಲ” ಎಂದು ಮನಸ್ಸಿನಲ್ಲಿ ಅಂದುಕೊಳ್ಳುವವರ ಕುರಿತು ಕೀರ್ತನೆ 14:1 ತಿಳಿಸುತ್ತದೆ. ಈ ನಂಬಿಕೆಯ ಕೊರತೆಯು ಅವರ ನಡತೆಯ ಮೇಲೆ ಯಾವ ಪ್ರಭಾವವನ್ನು ಬೀರುತ್ತದೆ? ವಚನವು ಮುಂದುವರಿಸುತ್ತಾ, “ಅವರು ಕೆಟ್ಟುಹೋದವರು; ಹೇಯಕೃತ್ಯಗಳನ್ನು ನಡಿಸುತ್ತಾರೆ” ಎನ್ನುತ್ತದೆ.

ದೇವರಲ್ಲಿ ನಿಜ ನಂಬಿಕೆಯಿಲ್ಲದ ಜನರಿಗೆ ಒಂದು ಒಳ್ಳೆಯ ಭವಿಷ್ಯಕ್ಕಾಗಿ ದೃಢವಾದ ನಿರೀಕ್ಷೆಯೂ ಇರುವುದಿಲ್ಲ. ಆದುದರಿಂದ, ಅವರು ಕೇವಲ ವರ್ತಮಾನಕಾಲಕ್ಕಾಗಿ ಜೀವಿಸುವ ಪ್ರವೃತ್ತಿಯುಳ್ಳವರಾಗಿದ್ದಾರೆ. ಅವರು ಇವತ್ತಿಗಾಗಿ, ತಮ್ಮ ಶಾರೀರಿಕ ಅಭಿಲಾಷೆಗಳನ್ನು ಪೂರೈಸಲಿಕ್ಕಾಗಿ ಮಾತ್ರವೇ ಜೀವಿಸುತ್ತಾರೆ. “ತಿನ್ನೋಣ, ಕುಡಿಯೋಣ, ನಾಳೆ ಸಾಯುತ್ತೇವಲ್ಲಾ” ಎಂಬುದೇ ಅವರ ಜೀವನದ ತತ್ತ್ವಜ್ಞಾನ. (1 ಕೊರಿಂಥ 15:32) ಆದರೆ ಯಾರು ನಿತ್ಯಜೀವದ ಕೊಡುಗೆಯ ಮೇಲೆ ದೃಷ್ಟಿಯಿಡುತ್ತಾರೋ ಅವರು ಈ ಲೋಕದ ಕ್ಷಣಿಕ ಸುಖವಿಲಾಸಗಳಿಂದಾಗಿ ದಾರಿತಪ್ಪಿಹೋಗುವುದಿಲ್ಲ. ನಿಖರವಾದ ವಾಯುಯಾನಶಾಸ್ತ್ರದ ಕಂಪ್ಯೂಟರಿನಂತೆ, ಅವರ ಶಿಕ್ಷಿತ ಮನಸ್ಸಾಕ್ಷಿಯು ದೇವರಿಗೆ ವಿಧೇಯತೆಯ ನಿಷ್ಠಾವಂತ ಮಾರ್ಗದಲ್ಲಿ ಅವರನ್ನು ನೇರವಾಗಿ ಇರಿಸುವುದು.​—ಫಿಲಿಪ್ಪಿ 3:8.

ನಿಮ್ಮ ಮನಸ್ಸಾಕ್ಷಿಯು ಅದರ ಶಕ್ತಿ ಮತ್ತು ನಿಖರತೆಯನ್ನು ಕಾಪಾಡಿಕೊಂಡುಹೋಗಬೇಕಾದರೆ, ದೇವರ ವಾಕ್ಯದಿಂದ ಕ್ರಮವಾದ ಮಾರ್ಗದರ್ಶನವು ಅದಕ್ಕೆ ಅಗತ್ಯವಾಗಿದೆ. ಅಂಥ ಮಾರ್ಗದರ್ಶನವು ಲಭ್ಯವಿದೆಯೆಂದು ಬೈಬಲು ಹೇಳುತ್ತದೆ. ಒಂದು ಚಿತ್ರಾತ್ಮಕ ಭಾಷೆಯಲ್ಲಿ ಅದನ್ನುವುದು: “ನೀವು ಬಲಕ್ಕಾಗಲಿ ಎಡಕ್ಕಾಗಲಿ ತಿರುಗಿಕೊಳ್ಳುವಾಗ ಇದೇ ಮಾರ್ಗ, ಇದರಲ್ಲೇ ನಡೆಯಿರಿ ಎಂದು ನಿಮ್ಮ ಹಿಂದೆ ಆಡುವ ಮಾತು ನಿಮ್ಮ ಕಿವಿಗೆ ಬೀಳುವದು.” (ಯೆಶಾಯ 30:21) ಆದುದರಿಂದ, ದೈನಂದಿನ ಬೈಬಲ್‌ ವಾಚನಕ್ಕಾಗಿ ಸಮಯವನ್ನು ಬದಿಗಿಡಿರಿ. ಯಾವುದು ಸರಿಯೋ ಅದನ್ನು ಮಾಡಲು ನೀವು ಒದ್ದಾಡುತ್ತಿರುವಾಗ ಅಥವಾ ಚಿಂತೆ ಮತ್ತು ವ್ಯಾಕುಲತೆಯ ಕಾರ್ಮೋಡಗಳು ನಿಮ್ಮ ಸುತ್ತಲೂ ಕವಿಯುವಾಗ, ಆ ವಾಚನವು ನಿಮ್ಮನ್ನು ಬಲಗೊಳಿಸುವುದು ಮತ್ತು ಪ್ರೋತ್ಸಾಹಿಸುವುದು. ಯೆಹೋವನಲ್ಲಿ ನೀವು ಸಂಪೂರ್ಣ ಭರವಸೆಯನ್ನಿಡುವುದಾದರೆ, ಆತನು ನಿಮ್ಮನ್ನು ನೈತಿಕವಾಗಿಯೂ ಆತ್ಮಿಕವಾಗಿಯೂ ಮಾರ್ಗದರ್ಶಿಸುವನೆಂಬ ಆಶ್ವಾಸನೆ ನಿಮಗಿರಲಿ. ಹೌದು, ಕೀರ್ತನೆಗಾರನನ್ನು ಅನುಕರಿಸಿರಿ. ಅವನು ಬರೆದದ್ದು: “ನಾನು ಯೆಹೋವನನ್ನು ಯಾವಾಗಲೂ ನನ್ನೆದುರಿಗೇ ಇಟ್ಟುಕೊಂಡಿದ್ದೇನೆ; ಆತನು ನನ್ನ ಬಲಗಡೆಯಲ್ಲಿ ಇರುವದರಿಂದ ನಾನು ಎಂದಿಗೂ ಕದಲುವದಿಲ್ಲ.”​—ಕೀರ್ತನೆ 16:8; 55:22.

[ಪಾದಟಿಪ್ಪಣಿ]

^ ಪ್ಯಾರ. 16 ಹೆಸರುಗಳನ್ನು ಬದಲಾಯಿಸಲಾಗಿದೆ.

[ಪುಟ 5ರಲ್ಲಿರುವ ಚಿತ್ರಗಳು]

ಬೈಬಲು ‘ಮಹಾ ಬಾಬೆಲ್‌’ ಎಂದು ವರ್ಣಿಸುವಂಥ ಸುಳ್ಳು ಧರ್ಮವು, ಅನೇಕರ ಮನಸ್ಸಾಕ್ಷಿಗಳನ್ನು ಮಂದಗೊಳಿಸುವುದಕ್ಕೆ ಹೊಣೆಯಾಗಿದೆ

[ಕೃಪೆ]

ಪಾದ್ರಿಯು ಸೈನ್ಯಗಳನ್ನು ಆಶೀರ್ವದಿಸುತ್ತಿರುವುದು: U.S. Army photo

[ಪುಟ 6ರಲ್ಲಿರುವ ಚಿತ್ರಗಳು]

ಹಿಂಸಾಚಾರ ಮತ್ತು ಅನೈತಿಕತೆಯನ್ನು ವೀಕ್ಷಿಸುವುದರಿಂದ ನಿಮ್ಮ ಮನಸ್ಸಾಕ್ಷಿಗೆ ಹಾನಿಯಾಗುವುದು

[ಪುಟ 7ರಲ್ಲಿರುವ ಚಿತ್ರ]

ದೇವರ ವಾಕ್ಯದ ಕ್ರಮವಾದ ಮಾರ್ಗದರ್ಶನವು ನಿಮ್ಮ ಮನಸ್ಸಾಕ್ಷಿಯನ್ನು ಭದ್ರವಾಗಿ ಕಾಪಾಡುವುದು