ನೀರು ನಿಲ್ಲದ ಬಿರಿದ ತೊಟ್ಟಿಗಳು
ನೀರು ನಿಲ್ಲದ ಬಿರಿದ ತೊಟ್ಟಿಗಳು
ಬೈಬಲ್ ಕಾಲಗಳಲ್ಲಿ, ತೊಟ್ಟಿಗಳು ಮುಖ್ಯವಾಗಿ ನೀರನ್ನು ಶೇಖರಿಸಿಡಲು ಉಪಯೋಗಿಸಲ್ಪಡುತ್ತಿದ್ದ ಮಾನವನಿರ್ಮಿತ ಭೂಗತ ಕುಳಿಗಳಾಗಿದ್ದವು. ಕೆಲವು ಸಮಯಾವಧಿಯಲ್ಲಿ ವಾಗ್ದಾತ್ತ ದೇಶದಲ್ಲಿ ಅತಿ ಆವಶ್ಯಕವಾದ ನೀರಿನ ಸರಬರಾಯಿಯನ್ನು ಕಾಪಾಡಿಕೊಳ್ಳಲು ಇದೊಂದೇ ಸಾಧನವಾಗಿತ್ತು.
ದೇವರ ತೀರ್ಪನ್ನು ದಾಖಲಿಸುತ್ತಾ ಪ್ರವಾದಿಯಾದ ಯೆರೆಮೀಯನು, ತೊಟ್ಟಿಗಳನ್ನು ಸಾಂಕೇತಿಕಾರ್ಥದಲ್ಲಿ ಸೂಚಿಸಿದನು. ಅವನು ಹೇಳಿದ್ದು: “ನನ್ನ ಜನರು ಎರಡು ಅಪರಾಧಗಳನ್ನು ಮಾಡಿದ್ದಾರೆ; ಜೀವಜಲದ ಬುಗ್ಗೆಯಾದ ನನ್ನನ್ನು ಬಿಟ್ಟಿದ್ದಾರೆ, ತಮಗೋಸ್ಕರ ತೊಟ್ಟಿಗಳನ್ನು, ನೀರು ನಿಲ್ಲದ ಬಿರಿದ ತೊಟ್ಟಿಗಳನ್ನು ಕೊರೆದುಕೊಂಡಿದ್ದಾರೆ.”—ಯೆರೆಮೀಯ 2:13.
ಇಸ್ರಾಯೇಲ್ಯರು ಜೀವಜಲದ ಬುಗ್ಗೆಯಂತಿರುವ ತಮ್ಮ ದೇವರಾದ ಯೆಹೋವನನ್ನು ತ್ಯಜಿಸಿಬಿಟ್ಟು, ಭರವಸೆಗೆ ಯೋಗ್ಯರಲ್ಲದ ಸುಳ್ಳು ಜನಾಂಗಗಳೊಂದಿಗೆ ಸೇನಾ ಮೈತ್ರಿಯನ್ನು ಮಾಡಿಕೊಂಡಿದ್ದರು ಮತ್ತು ಅಶಕ್ತವಾದ ಸುಳ್ಳು ದೇವತೆಗಳ ಆರಾಧನೆಯ ಕಡೆಗೆ ತಿರುಗಿದ್ದರು. ಯೆರೆಮೀಯನು ಉಪಯೋಗಿಸಿದ ಹೋಲಿಕೆಗನುಸಾರವಾಗಿ, ನಿರೀಕ್ಷಿಸಲ್ಪಟ್ಟ ಅಂಥ ಭದ್ರತಾ ಸ್ಥಳಗಳು ಯಾವುದೇ ಭದ್ರತೆಯನ್ನು ನೀಡಲಶಕ್ಯವಾದ ಅಥವಾ ರಕ್ಷಣಾ ಶಕ್ತಿಯನ್ನು ಹೊಂದಿರದ ಸೋರುವ ತೊಟ್ಟಿಗಳಿಗೆ ಸಮಾನವಾಗಿ ಪರಿಣಮಿಸಿದವು.—ಧರ್ಮೋಪದೇಶಕಾಂಡ 28:20.
ಈ ಐತಿಹಾಸಿಕ ಉದಾಹರಣೆಯಿಂದ ಇಂದಿರುವ ನಮಗೇನಾದರೂ ಪಾಠವಿದೆಯೋ? ಯೆರೆಮೀಯನ ದಿನಗಳಲ್ಲಿದ್ದಂತೆ, ನಿತ್ಯನಾದ ದೇವರಾಗಿರುವ ಯೆಹೋವನು ಮಾತ್ರವೇ ಜೀವಜಲದ ಬುಗ್ಗೆಯಾಗಿ ಮುಂದುವರಿಯುತ್ತಾನೆ. (ಕೀರ್ತನೆ 36:9; ಪ್ರಕಟನೆ 4:11) ಆತನ ಮಗನಾದ ಯೇಸು ಕ್ರಿಸ್ತನ ಮೂಲಕ, ಕೇವಲ ಆತನಿಂದ ಮಾತ್ರ ಮಾನವರು ನಿತ್ಯಜೀವವನ್ನು ಪಡೆಯಬಲ್ಲರು. (ಯೋಹಾನ 4:14; 17:3) ಆದರೂ, ಯೆರೆಮೀಯನ ಸಮಕಾಲೀನರಂತೆ ಇಂದಿರುವ ಹೆಚ್ಚಿನ ಮಾನವರು ಬೈಬಲಿನಲ್ಲಿರುವ ದೇವರ ಮಾತನ್ನು ತಿರಸ್ಕರಿಸಲು ಮತ್ತು ಅದನ್ನು ಕಡೆಗಾಣಿಸಲು ಆಯ್ಕೆಮಾಡುತ್ತಾರೆ. ಅದಕ್ಕೆ ಬದಲಾಗಿ ಅವರು ಸಂದರ್ಭಾನುಸಾರ ನಡೆಯುವ ರಾಜಕೀಯದ ಪರಿಹಾರಗಳ, ಮಾನವರ ವ್ಯರ್ಥವಾದ ವಿವಾದಗಳ, ಮತ್ತು ದೇವರನ್ನು ಅಗೌರವಿಸುವ ವ್ಯರ್ಥವಾದ ಸ್ವಭಾವಶಾಸ್ತ್ರ ಹಾಗೂ ತತ್ತ್ವಜ್ಞಾನಗಳ ಮೇಲೆ ತಮ್ಮ ಭರವಸೆಯನ್ನು ಇಡುತ್ತಾರೆ. (1 ಕೊರಿಂಥ 3:18-20; ಕೊಲೊಸ್ಸೆ 2:8) ಆಯ್ಕೆಯು ಸುಸ್ಪಷ್ಟವಾಗಿದೆ. ನೀವು ನಿಮ್ಮ ಭರವಸೆಯನ್ನು ಯಾರಲ್ಲಿ ಇಡುತ್ತೀರಿ? “ಜೀವಜಲದ ಬುಗ್ಗೆಯಾದ” ಯೆಹೋವನಲ್ಲಿಯೋ ಅಥವಾ “ನೀರು ನಿಲ್ಲದ ಬಿರಿದ ತೊಟ್ಟಿ”ಗಳಲ್ಲಿಯೋ?
[ಪುಟ 32ರಲ್ಲಿರುವ ಚಿತ್ರ]
ಒಂದು ಇಸ್ರಾಯೇಲ್ ಸಮಾಧಿಯಲ್ಲಿ ಕಂಡುಬಂದ ಮಾತೃದೇವತೆಯ ಕೆಮ್ಮಣ್ಣಿನ ಸಣ್ಣ ಶಿಲಾಪ್ರತಿಮೆ
[ಕೃಪೆ]
Photograph taken by courtesy of the British Museum