ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಯೆಹೋವನೇ, ನಿನ್ನ ಕೈಕೆಲಸಗಳು ಎಷ್ಟೋ ವಿಧವಾಗಿವೆ”!

“ಯೆಹೋವನೇ, ನಿನ್ನ ಕೈಕೆಲಸಗಳು ಎಷ್ಟೋ ವಿಧವಾಗಿವೆ”!

ಯೆಹೋವನ ಸೃಷ್ಟಿಯ ವೈಭವ

“ಯೆಹೋವನೇ, ನಿನ್ನ ಕೈಕೆಲಸಗಳು ಎಷ್ಟೋ ವಿಧವಾಗಿವೆ”!

ನಾವು ಹಳ್ಳಿಯಲ್ಲಿ ವಾಸಿಸುತ್ತಿರಲಿ ಇಲ್ಲವೆ ನಗರದಲ್ಲಿರಲಿ, ಬೆಟ್ಟಗಳ ಎತ್ತರ ಪ್ರದೇಶಗಳಲ್ಲಿ ವಾಸಿಸುತ್ತಿರಲಿ ಇಲ್ಲವೆ ಕೆಳಗೆ ಸಮುದ್ರದ ಕರಾವಳಿ ಪ್ರದೇಶದಲ್ಲಿ ಜೀವಿಸುತ್ತಿರಲಿ, ಸೃಷ್ಟಿಯ ಭಯವಿಸ್ಮಯಕಾರಕ ವೈಭವವು ನಮ್ಮ ಸುತ್ತಮುತ್ತಲೂ ಇದೆ. ಇದಕ್ಕೆ ತಕ್ಕದ್ದಾಗಿಯೇ, ಇಸವಿ 2004ರ ಯೆಹೋವನ ಸಾಕ್ಷಿಗಳ ಕ್ಯಾಲೆಂಡರ್‌ (ಇಂಗ್ಲಿಷ್‌) ಯೆಹೋವ ದೇವರ ದಂಗುಬಡಿಸುವಂಥ ಕೈಕೃತಿಯ ಒಂದು ಸುತ್ತುನೋಟವನ್ನು ತೋರಿಸುತ್ತದೆ.

ಗಣ್ಯತಾಭಾವವುಳ್ಳ ಮಾನವರು ಯಾವಾಗಲೂ ದೇವರ ಕೃತಿಗಳಲ್ಲಿ ತಮ್ಮ ಆಸಕ್ತಿಯನ್ನು ತೋರಿಸಿದ್ದಾರೆ. ಉದಾಹರಣೆಗೆ, ಸೊಲೊಮೋನನನ್ನು ತೆಗೆದುಕೊಳ್ಳಿ. ಅವನ “ಜ್ಞಾನವು ಮೂಡಣದೇಶದವರೆಲ್ಲರ ಜ್ಞಾನಕ್ಕಿಂತಲೂ ಐಗುಪ್ತ್ಯರ ಜ್ಞಾನಕ್ಕಿಂತಲೂ ಮಿಗಿಲಾದದ್ದು” ಆಗಿತ್ತು. ಬೈಬಲ್‌ ಹೇಳುವುದು: “ಅವನು ಲೆಬನೋನಿನ ದೇವದಾರುವೃಕ್ಷ ಮೊದಲುಗೊಂಡು ಗೋಡೆಯಲ್ಲಿ ಬೆಳೆಯುವ ಹಿಸ್ಸೋಪ್‌ ಗಿಡದ ವರೆಗಿರುವ ಎಲ್ಲಾ ವನಸ್ಪತಿಗಳನ್ನೂ ಎಲ್ಲಾ ಪಶುಪಕ್ಷಿಜಲಜಂತುಕ್ರಿಮಿಕೀಟಗಳನ್ನೂ ಕುರಿತು ಪ್ರಸ್ತಾಪಿಸಿದನು.” (1 ಅರಸುಗಳು 4:30, 33) ಸೊಲೊಮೋನನ ತಂದೆಯಾದ ರಾಜ ದಾವೀದನು ಅನೇಕವೇಳೆ ದೇವರ ಕುಶಲಕೃತಿಗಳ ಕುರಿತು ಧ್ಯಾನಿಸಿದನು. ತನ್ನ ನಿರ್ಮಾಣಿಕನಿಗೆ ಹೀಗೆ ಉದ್ಗಾರವೆತ್ತಲು ಅವನು ಪ್ರಚೋದಿಸಲ್ಪಟ್ಟನು: “ಯೆಹೋವನೇ, ನಿನ್ನ ಕೈಕೆಲಸಗಳು ಎಷ್ಟೋ ವಿಧವಾಗಿವೆ. ಅವುಗಳನ್ನೆಲ್ಲಾ ಜ್ಞಾನದಿಂದಲೇ ಮಾಡಿದ್ದೀ; ಭೂಲೋಕವು ನಿನ್ನ ಆಸ್ತಿಯಿಂದ ತುಂಬಿರುತ್ತದೆ.”​—⁠ಕೀರ್ತನೆ 104:⁠24. *

ನಾವೂ ಸೃಷ್ಟಿಯನ್ನು ಅವಲೋಕಿಸಿ ಅದರ ಬಗ್ಗೆ ಧ್ಯಾನಿಸಬೇಕು. ದೃಷ್ಟಾಂತಕ್ಕಾಗಿ, ನಾವು ನಮ್ಮ “ಕಣ್ಣುಗಳನ್ನು ಮೇಲಕ್ಕೆತ್ತಿಕೊಂಡು ನೋಡಿ” ಹೀಗೆ ಕೇಳಬಹುದು: “ಈ ನಕ್ಷತ್ರಗಳನ್ನು ಸೃಷ್ಟಿಸಿದಾತನು ಯಾರು?” ಯೆಹೋವ ದೇವರೇ. ಆತನು “ಅತಿ ಬಲಾಢ್ಯನೂ” ನಿಜವಾಗಿಯೂ “ಮಹಾಶಕ್ತನೂ” ಆಗಿದ್ದಾನೆ.​—⁠ಯೆಶಾಯ 40:⁠26.

ಯೆಹೋವನ ಸೃಷ್ಟಿಕಾರ್ಯಗಳ ಕುರಿತಾದ ಧ್ಯಾನಿಸುವಿಕೆಯು ನಮ್ಮನ್ನು ಹೇಗೆ ಬಾಧಿಸಬೇಕು? ಕಡಿಮೆಪಕ್ಷ ಮೂರು ವಿಧಗಳಲ್ಲಿ: (1) ನಮ್ಮ ಜೀವವನ್ನು ಪ್ರಿಯವೆಂದೆಣಿಸುವಂತೆ ನೆನಪುಹುಟ್ಟಿಸಬಲ್ಲದು, (2) ಸೃಷ್ಟಿಯಿಂದ ಕಲಿಯುವಂತೆ ಇತರರಿಗೆ ಸಹಾಯಮಾಡಲು ಪ್ರಚೋದಿಸಬಲ್ಲದು, ಮತ್ತು (3) ನಮ್ಮ ಸೃಷ್ಟಿಕರ್ತನನ್ನು ಪೂರ್ಣವಾಗಿ ತಿಳಿದುಕೊಂಡು ಗಣ್ಯಮಾಡುವಂತೆ ನಡೆಸಬಲ್ಲದು.

“ವಿವೇಕಶೂನ್ಯ ಪಶು”ಗಳಿಗಿಂತಲೂ ಹೆಚ್ಚು ಶ್ರೇಷ್ಠವಾಗಿರುವ ನಮ್ಮ ಮಾನವ ಜೀವವು, ಸೃಷ್ಟಿಯ ವಿಸ್ಮಯಗಳನ್ನು ಅವಲೋಕಿಸುವಂತೆ ಮತ್ತು ಮೌಲ್ಯವೆಂದೆಣಿಸುವಂತೆ ನಮ್ಮನ್ನು ಶಕ್ತಗೊಳಿಸುತ್ತದೆ. (2 ಪೇತ್ರ 2:12) ನಮ್ಮ ಕಣ್ಣುಗಳು ಚಿತ್ತಾಕರ್ಷಕವಾದ ಭೂದೃಶ್ಯವನ್ನು ನೋಡಬಲ್ಲವು. ನಮ್ಮ ಕಿವಿಗಳು, ಪಕ್ಷಿಗಳ ಸುಮಧುರವಾದ ಗಾನಗಳನ್ನು ಕೇಳಿಸಿಕೊಳ್ಳಬಲ್ಲವು. ಮತ್ತು ನಮ್ಮ ಸಮಯ ಹಾಗೂ ಸ್ಥಾನದ ಪ್ರಜ್ಞೆಯು, ಸವಿನೆನಪುಗಳಾಗಿ ಪರಿಣಮಿಸುವ ನಿರ್ದೇಶಕ ಹಂತಗಳನ್ನು ಕೊಡುತ್ತದೆ. ನಮ್ಮ ಸದ್ಯದ ಜೀವವು ಪರಿಪೂರ್ಣವಲ್ಲದಿದ್ದರೂ, ಬದುಕುವುದು ಖಂಡಿತವಾಗಿಯೂ ಸಾರ್ಥಕವಾಗಿದೆ!

ಹೆತ್ತವರು ಸೃಷ್ಟಿಯ ಕಡೆಗೆ ತಮ್ಮ ಮಕ್ಕಳಿಗಿರುವ ಸಹಜ ಆಕರ್ಷಣೆಯನ್ನು ನೋಡಿ ಆನಂದಿಸಬಲ್ಲರು. ಸಮುದ್ರತೀರದಲ್ಲಿ ಶಂಖಗಳನ್ನು ಒಟ್ಟುಗೂಡಿಸುವುದು, ಒಂದು ಪ್ರಾಣಿಯನ್ನು ಮುದ್ದುಮಾಡುವುದು, ಮರಗಳನ್ನು ಹತ್ತುವುದೆಂದರೆ ಮಕ್ಕಳಿಗೆ ಪಂಚಪ್ರಾಣ! ಈ ಸೃಷ್ಟಿ ಮತ್ತು ಸೃಷ್ಟಿಕರ್ತನ ನಡುವೆಯಿರುವ ಸಂಬಂಧವನ್ನು ನೋಡುವಂತೆ ಹೆತ್ತವರು ತಮ್ಮ ಪುಟ್ಟ ಮಕ್ಕಳಿಗೆ ಸಹಾಯಮಾಡಬೇಕು. ಯೆಹೋವನ ಸೃಷ್ಟಿಗಾಗಿ ಮಕ್ಕಳಲ್ಲಿ ಬೆಳೆಸಲಾಗುವಂಥ ವಿಸ್ಮಯ ಹಾಗೂ ಗೌರವವು ಜೀವನಪರ್ಯಂತವೂ ಅವರಲ್ಲಿ ಉಳಿಯುವುದು.​—⁠ಕೀರ್ತನೆ 111:​2, 10.

ಒಂದುವೇಳೆ ನಾವು ಸೃಷ್ಟಿಯನ್ನು ಹಾಡಿಹೊಗಳಿ, ಸೃಷ್ಟಿಕರ್ತನಿಗೆ ಕೀರ್ತಿಯನ್ನು ಸಲ್ಲಿಸಲು ತಪ್ಪುವಲ್ಲಿ ವಿಪರೀತವಾಗಿ ವಿಚಾರಹೀನರಾಗುವೆವು. ವಿಶೇಷವಾಗಿ ಈ ವಿಷಯದ ಕುರಿತು ಚಿಂತಿಸುವಂತೆ ಯೆಶಾಯನ ಪ್ರವಾದನೆಯು ನಮಗೆ ಸಹಾಯಮಾಡುತ್ತದೆ: “ನೀನು ಗ್ರಹಿಸಲಿಲ್ಲವೋ? ಕೇಳಲಿಲ್ಲವೋ? ಯೆಹೋವನು ನಿರಂತರದೇವರೂ ಭೂಮಿಯ ಕಟ್ಟಕಡೆಗಳನ್ನು ನಿರ್ಮಿಸಿದವನೂ ಆಗಿದ್ದಾನೆ; ಆತನು ದಣಿದು ಬಳಲುವದಿಲ್ಲ; ಆತನ ವಿವೇಕವು ಪರಿಶೋಧನೆಗೆ ಅಗಮ್ಯ.”​—⁠ಯೆಶಾಯ 40:⁠28.

ಹೌದು, ಯೆಹೋವನ ಕೆಲಸಗಳು ಆತನ ಸರಿಸಾಟಿಯಿಲ್ಲದ ವಿವೇಕ, ಪ್ರತಿಸ್ಪರ್ಧಿಸಲಾಗದ ಶಕ್ತಿ ಮತ್ತು ನಮಗಾಗಿ ಆತನಿಗಿರುವ ಗಾಢವಾದ ಪ್ರೀತಿಗೆ ಸಾಕ್ಷ್ಯವಾಗಿದೆ. ನಮ್ಮ ಸುತ್ತಲಿರುವ ಸೌಂದರ್ಯವನ್ನು ನೋಡಿ, ಅದೆಲ್ಲವನ್ನೂ ಮಾಡಿರುವಾತನ ಗುಣಗಳನ್ನು ವಿವೇಚಿಸಿತಿಳಿಯುವಾಗ ನಾವು ದಾವೀದನ ಈ ಮಾತುಗಳನ್ನು ಪ್ರತಿಧ್ವನಿಸಲು ಪ್ರಚೋದಿತರಾಗೋಣ: “ಕರ್ತನೇ [“ಯೆಹೋವನೇ,” NW], . . . ನಿನಗೆ ಸಮಾನನೇ ಇಲ್ಲ; ನಿನ್ನ ಕೃತ್ಯಗಳಿಗೆ ಸರಿಯಾದದ್ದು ಇನ್ನೊಂದಿಲ್ಲ.”​—⁠ಕೀರ್ತನೆ 86:⁠8.

ವಿಧೇಯ ಮಾನವರು ಯೆಹೋವನ ಸೃಷ್ಟಿಕಾರ್ಯಗಳಿಂದ ಮಂತ್ರಮುಗ್ಧರಾಗುತ್ತಾ ಇರುವರೆಂದು ನಮಗೆ ನಿಶ್ಚಯವಿರಬಲ್ಲದು. ಎಂದೆಂದಿಗೂ, ನಮಗೆ ಯೆಹೋವನ ಬಗ್ಗೆ ಹೆಚ್ಚನ್ನು ಕಲಿಯುತ್ತಾ ಇರಲು ಅಂತ್ಯವಿಲ್ಲದ ಅವಕಾಶಗಳಿರುವವು. (ಪ್ರಸಂಗಿ 3:11) ಮತ್ತು ನಮ್ಮ ಸೃಷ್ಟಿಕರ್ತನ ಕುರಿತಾಗಿ ಹೆಚ್ಚನ್ನು ಕಲಿಯುತ್ತಾ ಹೋದಂತೆ ನಾವು ಆತನನ್ನು ಅಷ್ಟೇ ಹೆಚ್ಚಾಗಿ ಪ್ರೀತಿಸುವೆವು.

[ಪಾದಟಿಪ್ಪಣಿ]

^ ಪ್ಯಾರ. 4 ಇಸವಿ 2004ರ ಯೆಹೋವನ ಸಾಕ್ಷಿಗಳ ಕ್ಯಾಲೆಂಡರ್‌ (ಇಂಗ್ಲಿಷ್‌)ನ ನವೆಂಬರ್‌/ಡಿಸೆಂಬರ್‌ ತಿಂಗಳುಗಳ ಚಿತ್ರವನ್ನು ನೋಡಿರಿ.

[ಪುಟ 9ರಲ್ಲಿರುವ ಚೌಕ]

ಸೃಷ್ಟಿಕರ್ತನಿಗಾಗಿ ಸ್ತುತಿ

ಅನೇಕ ಗಣ್ಯತಾಭಾವವುಳ್ಳ ವಿಜ್ಞಾನಿಗಳು ಸೃಷ್ಟಿಯಲ್ಲಿ ದೇವರ ಹಸ್ತವಿರುವುದನ್ನು ಒಪ್ಪಿಕೊಳ್ಳುತ್ತಾರೆ. ಇವುಗಳಲ್ಲಿ ಕೆಲವೊಂದು ಉದಾಹರಣೆಗಳು ಹೀಗಿವೆ:

“ನಾನು ಯಾವುದೊ ಹೊಸ ವಿಷಯವನ್ನು ಕಂಡುಹಿಡಿದು, ‘ಓಹೋ, ಹಾಗಾದರೆ ದೇವರು ಅದನ್ನು ಮಾಡಿದ್ದು ಹೀಗೆ’ ಎಂದು ನನ್ನಷ್ಟಕ್ಕೆ ಹೇಳುವ ಕ್ಷಣಗಳು, ನನ್ನ ವಿಜ್ಞಾನದ ಕ್ಷೇತ್ರದಲ್ಲಿನ ಅತಿ ಮಹತ್ವಪೂರ್ಣ ಹಾಗೂ ಆನಂದದ ಸಮಯವಾಗಿರುತ್ತದೆ. ದೇವರ ಯೋಜನೆಯ ಒಂದು ಚಿಕ್ಕ ಅಂಶವನ್ನಾದರೂ ಅರ್ಥಮಾಡಿಕೊಳ್ಳಬೇಕೆಂಬುದೇ ನನ್ನ ಗುರಿ.”​—⁠ಹೆನ್ರಿ ಶೇಫರ್‌, ರಾಸಾಯನ ವಿಜ್ಞಾನದ ಪ್ರೊಫೆಸರ್‌.

“ವಿಶ್ವದ ಹಿಗ್ಗುವಿಕೆಗೆ ಕಾರಣ ಏನೆಂಬುದರ ಕುರಿತು ವಾಚಕನು ತನ್ನ ಸ್ವಂತ ತೀರ್ಮಾನಕ್ಕೆ ಬರಬೇಕು, ಆದರೆ ಆತನು [ದೇವರು] ಇಲ್ಲದೆ ಅದರ ಮೂಲಕಾರಣದ ಕುರಿತಾದ ನಮ್ಮ ತಿಳಿವಳಿಕೆಯು ಅಪೂರ್ಣವಾಗಿರುತ್ತದೆ.”​—⁠ಎಡ್ವರ್ಡ್‌ ಮಿಲ್ನ್‌, ಬ್ರಿಟಿಷ್‌ ವಿಶ್ವವಿಜ್ಞಾನಿ.

“ಪ್ರಕೃತಿಯು ಅತ್ಯುತ್ತಮವಾದ ಗಣಿತಶಾಸ್ತ್ರದಿಂದ ವರ್ಣಿಸಲ್ಪಟ್ಟಿದೆ, ಏಕೆಂದರೆ ದೇವರೇ ಅದನ್ನು ಸೃಷ್ಟಿಸಿದನು.”​—⁠ಅಲೆಗ್ಸಾಂಡರ್‌ ಪಾಲ್ಯಾಕಾವ್‌, ರಷ್ಯನ್‌ ಗಣಿತಶಸ್ತ್ರಜ್ಞ.

“ನೈಸರ್ಗಿಕ ವಸ್ತುಗಳ ನಮ್ಮ ಅಧ್ಯಯನದಲ್ಲಿ ನಾವು ಸೃಷ್ಟಿಕರ್ತನ ವಿಚಾರಗಳನ್ನು ಪರಿಗಣಿಸುತ್ತಿದ್ದೇವೆ, ಆತನ ಆಲೋಚನೆಗಳನ್ನು ಓದುತ್ತಿದ್ದೇವೆ, ನಮ್ಮದಲ್ಲ ಬದಲಾಗಿ ಆತನದ್ದಾಗಿರುವ ಒಂದು ವ್ಯವಸ್ಥೆಯ ಅರ್ಥವಿವರಣೆಯನ್ನು ಕೊಡುತ್ತಿದ್ದೇವೆ.”​—⁠ಲೂಯಿ ಅಗಾಸೀಸ್‌, ಅಮೆರಿಕನ್‌ ಜೀವಶಾಸ್ತ್ರಜ್ಞ.

[ಪುಟ 8, 9ರಲ್ಲಿರುವ ಚಿತ್ರ]

ಜೆಂಟೂ ಪೆಂಗ್ವಿನ್‌ಗಳು, ಅಂಟಾರ್ಟಿಕ ದ್ವೀಪಕಲ್ಪದಲ್ಲಿ

[ಪುಟ 9ರಲ್ಲಿರುವ ಚಿತ್ರ]

ಗ್ರ್ಯಾಂಡ್‌ ಟೆಟನ್‌ ನ್ಯಾಷನಲ್‌ ಪಾರ್ಕ್‌, ವೈಓಮಿಂಗ್‌, ಅಮೆರಿಕ

[ಕೃಪೆ]

Jack Hoehn/Index Stock Photography