“ಶಿಷ್ಟರ ಗುಡಾರಕ್ಕೆ ಏಳಿಗೆ”
“ಶಿಷ್ಟರ ಗುಡಾರಕ್ಕೆ ಏಳಿಗೆ”
ಹರ್ಮಗೆದೋನ್ ಒಂದು ಬಿರುಗಾಳಿಯಂತೆ ಎರಗಿ, ಸೈತಾನನ ದುಷ್ಟ ವಿಷಯಗಳ ವ್ಯವಸ್ಥೆಯನ್ನು ಕೊನೆಗೊಳಿಸುವಾಗ, ‘ದುಷ್ಟರ ಮನೆ ನಾಶವಾಗುವುದು.’ ಆದರೆ ‘ಶಿಷ್ಟರ ಗುಡಾರಕ್ಕೆ’ ಏನಾಗುವುದು? ದೇವರು ನಿರ್ಮಿಸುವ ಹೊಸ ಲೋಕದಲ್ಲಿ ಅದು “ಏಳಿಗೆ” ಹೊಂದುವುದು.’—ಜ್ಞಾನೋಕ್ತಿ 14:11.
ಆದರೆ ‘ದುಷ್ಟರು ದೇಶದೊಳಗಿಂದ ಕೀಳಲ್ಪಡುವ ಮತ್ತು ದ್ರೋಹಿಗಳು ನಿರ್ಮೂಲರಾಗುವ’ ಸಮಯದ ವರೆಗೆ, ನಿರ್ದೋಷಿಗಳು ಅವರ ಜೊತೆಯಲ್ಲಿ ವಾಸಿಸಬೇಕಾಗುವುದು. (ಜ್ಞಾನೋಕ್ತಿ 2:21, 22) ಇಂಥ ಪರಿಸ್ಥಿತಿಗಳಲ್ಲಿ ಶಿಷ್ಟರು ಇಲ್ಲವೆ ಯಥಾರ್ಥವಂತರು ಏಳಿಗೆಹೊಂದಬಲ್ಲರೊ? ಬೈಬಲ್ ಪುಸ್ತಕವಾದ ಜ್ಞಾನೋಕ್ತಿಯ ಅಧ್ಯಾಯ 14ರ 1ರಿಂದ 11ನೆಯ ವಚನಗಳು, ವಿವೇಕವು ನಮ್ಮ ನಡೆನುಡಿಗಳನ್ನು ಮಾರ್ಗದರ್ಶಿಸುವಂತೆ ಅನುಮತಿಸುವ ಮೂಲಕ, ನಾವು ಸ್ವಲ್ಪಮಟ್ಟಿಗೆ ಸಮೃದ್ಧಿ ಹಾಗೂ ಸ್ಥಿರತೆಯನ್ನು ಈಗಲೂ ಅನುಭವಿಸಬಲ್ಲೆವೆಂಬುದನ್ನು ತೋರಿಸುತ್ತವೆ.
ವಿವೇಕವು ಒಂದು ಮನೆಯನ್ನು ಕಟ್ಟಿಕೊಳ್ಳುವಾಗ
ಒಂದು ಕುಟುಂಬದಲ್ಲಿ ಹೆಂಡತಿಯು ಬೀರುವ ಪ್ರಭಾವದ ಕುರಿತಾಗಿ ಹೇಳುತ್ತಾ, ಪುರಾತನ ಇಸ್ರಾಯೇಲಿನ ರಾಜ ಸೊಲೊಮೋನನು ಹೇಳುವುದು: “ಜ್ಞಾನವಂತೆಯು ತನ್ನ ಮನೆಯನ್ನು ಕಟ್ಟಿಕೊಳ್ಳುವಳು; ಜ್ಞಾನಹೀನಳು ಅದನ್ನು ಸ್ವಂತ ಕೈಯಿಂದ ಮುರಿದುಬಿಡುವಳು.” (ಜ್ಞಾನೋಕ್ತಿ 14:1) ಜ್ಞಾನವಂತೆ ಇಲ್ಲವೆ ವಿವೇಕಿಯಾದ ಸ್ತ್ರೀಯೊಬ್ಬಳು ತನ್ನ ಮನೆಯನ್ನು ಹೇಗೆ ಕಟ್ಟಿಕೊಳ್ಳುತ್ತಾಳೆ? ಅವಳು ತಲೆತನದ ಸಂಬಂಧದಲ್ಲಿ ದೇವರು ಇಟ್ಟಿರುವ ಏರ್ಪಾಡನ್ನು ಗೌರವಿಸುತ್ತಾಳೆ. (1 ಕೊರಿಂಥ 11:3) ಸೈತಾನನ ಲೋಕವನ್ನು ಪೂರ್ತಿಯಾಗಿ ವ್ಯಾಪಿಸಿರುವ ಸ್ವತಂತ್ರ ಆತ್ಮದಿಂದ ಅವಳು ಪ್ರಭಾವಿಸಲ್ಪಟ್ಟಿರುವುದಿಲ್ಲ. (ಎಫೆಸ 2:2) ಅವಳು ತನ್ನ ಗಂಡನಿಗೆ ಅಧೀನಳಾಗಿದ್ದು, ಅವನ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡುತ್ತಾಳೆ ಮತ್ತು ಹೀಗೆ ಇತರರಿಗೆ ಅವನ ಬಗ್ಗೆ ಇರಬಹುದಾದ ಗೌರವವನ್ನು ಹೆಚ್ಚಿಸುತ್ತಾಳೆ. ಒಬ್ಬ ವಿವೇಕಯುತ ಸ್ತ್ರೀಯು ತನ್ನ ಮಕ್ಕಳ ಆಧ್ಯಾತ್ಮಿಕ ಹಾಗೂ ಪ್ರಾಯೋಗಿಕ ಶಿಕ್ಷಣದಲ್ಲಿ ಸಕ್ರಿಯ ಪಾತ್ರವನ್ನು ವಹಿಸುತ್ತಾಳೆ. ಅವಳು ಮನೆಯಲ್ಲಿರುವವರ ಒಳಿತಿಗಾಗಿ ಕಷ್ಟಪಟ್ಟು ದುಡಿಯುತ್ತಾ, ಮನೆಯನ್ನು ಕುಟುಂಬಕ್ಕಾಗಿ ಹಿತಕರ ಹಾಗೂ ಆರಾಮದಾಯಕ ಸ್ಥಳವನ್ನಾಗಿ ಮಾಡುತ್ತಾಳೆ. ಅವಳ ನಿರ್ವಹಣಾ ವಿಧಾನವು, ದೂರದೃಷ್ಟಿ ಹಾಗೂ ಮಿತವ್ಯಯವನ್ನು ತೋರಿಸುತ್ತದೆ. ನಿಜವಾಗಿಯೂ ವಿವೇಕವುಳ್ಳ ಸ್ತ್ರೀಯೊಬ್ಬಳು, ತನ್ನ ಮನೆತನದ ಸಮೃದ್ಧಿ ಹಾಗೂ ಸ್ಥಿರತೆಗೆ ನೆರವು ನೀಡುತ್ತಾಳೆ.
ಜ್ಞಾನಹೀನಳು ಇಲ್ಲವೆ ಮೂರ್ಖ ಹೆಂಗಸು, ತಲೆತನದ ವಿಷಯದಲ್ಲಿ ದೇವರಿಟ್ಟಿರುವ ಏರ್ಪಾಡನ್ನು ಗೌರವಿಸುವುದಿಲ್ಲ. ತನ್ನ ಗಂಡನ ಬಗ್ಗೆ ಕೆಟ್ಟದ್ದನ್ನು ಮಾತಾಡಲು ಯಾವಾಗಲೂ ತುದಿಗಾಲಲ್ಲಿ ನಿಂತಿರುತ್ತಾಳೆ. ಮಿತವ್ಯಯಿಯಾಗಿರದೆ, ಮನೆಯವರು ಕಷ್ಟಪಟ್ಟು ಸಂಪಾದಿಸಿರುವ ಹಣವನ್ನು ನೀರಿನಂತೆ ಖರ್ಚುಮಾಡುತ್ತಾಳೆ. ಅವಳು ಸಮಯವನ್ನೂ ಹಾಳುಮಾಡುತ್ತಾಳೆ. ಇದರಿಂದಾಗಿ, ಮನೆಯು ಸ್ವಚ್ಛ ಹಾಗೂ ಚೊಕ್ಕಟ್ಟವಾಗಿರುವುದಿಲ್ಲ, ಮತ್ತು ಅವಳ ಮಕ್ಕಳು ಶಾರೀರಿಕವಾಗಿಯೂ ಆಧ್ಯಾತ್ಮಿಕವಾಗಿಯೂ ದುಸ್ಥಿತಿಯಲ್ಲಿರುತ್ತಾರೆ. ಹೌದು, ಮೂರ್ಖ ಹೆಂಗಸು ತನ್ನ ಮನೆಯನ್ನು ಮುರಿದುಬಿಡುತ್ತಾಳೆ.
ಆದರೆ ಒಬ್ಬ ವ್ಯಕ್ತಿಯು ವಿವೇಕಿಯಾಗಿದ್ದಾನೊ ಮೂರ್ಖನಾಗಿದ್ದಾನೊ ಎಂಬುದನ್ನು ನಿರ್ಧರಿಸುವುದು ಹೇಗೆ? ಜ್ಞಾನೋಕ್ತಿ 14:2 ಹೇಳುವುದು: “ಸರಳಮಾರ್ಗಿಯು ಯೆಹೋವನಿಗೆ ಭಯಪಡುವನು; ವಕ್ರಮಾರ್ಗಿಯು ಆತನನ್ನು ಅಸಡ್ಡೆಮಾಡುವನು.” ಸರಳಮಾರ್ಗಿ ಇಲ್ಲವೆ ಯಥಾರ್ಥವಂತ ವ್ಯಕ್ತಿಯು ಸತ್ಯ ದೇವರಿಗೆ ಭಯಪಡುವವನಾಗಿದ್ದಾನೆ, ಮತ್ತು “ಯೆಹೋವನ ಭಯವೇ ಜ್ಞಾನಕ್ಕೆ [“ವಿವೇಕಕ್ಕೆ,” NW] ಮೂಲವು.” (ಕೀರ್ತನೆ 111:10) ನಿಜವಾಗಿಯೂ ವಿವೇಕಿಯಾಗಿರುವ ವ್ಯಕ್ತಿಯು, ‘ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳುವುದು’ ತನ್ನ ಕರ್ತವ್ಯವೆಂದು ತಿಳಿದುಕೊಂಡಿರುತ್ತಾನೆ. (ಪ್ರಸಂಗಿ 12:13) ಇನ್ನೊಂದು ಬದಿಯಲ್ಲಿ, ಮೂರ್ಖ ವ್ಯಕ್ತಿಯು ದೇವರ ಯಥಾರ್ಥತೆಯ ಮಟ್ಟಗಳಿಗೆ ಹೊಂದಿಕೆಯಲ್ಲಿರುವ ಮಾರ್ಗದಲ್ಲಿ ನಡೆಯುವುದಿಲ್ಲ. ಅವನ ಮಾರ್ಗಗಳು ವಕ್ರವಾಗಿರುತ್ತವೆ. ಅಂಥ ವ್ಯಕ್ತಿಯು ಮನಸ್ಸಲ್ಲೇ “ದೇವರಿಲ್ಲ” ಎಂದು ಹೇಳುತ್ತಾ ಆತನನ್ನು ತುಚ್ಛೀಕರಿಸುತ್ತಾನೆ.—ಕೀರ್ತನೆ 14:1.
ವಿವೇಕವು ತುಟಿಗಳನ್ನು ಕಾಯುವಾಗ
ಯೆಹೋವನಿಗೆ ಭಯಪಡುವ ವ್ಯಕ್ತಿ ಮತ್ತು ಯೆಹೋವನನ್ನು ತುಚ್ಛೀಕರಿಸುವ ವ್ಯಕ್ತಿಯ ಮಾತಿನ ಕುರಿತಾಗಿ ಏನು ಹೇಳಬಹುದು? “ಮೂರ್ಖನ ಬಾಯಲ್ಲಿ ಗರ್ವವು ಅಂಕುರಿಸುವದು; ಜ್ಞಾನಿಗಳ ತುಟಿಗಳು ಅವರನ್ನು ಕಾಯುವವು” ಎಂದು ರಾಜ ಸೊಲೊಮೋನನು ಹೇಳುತ್ತಾನೆ. (ಜ್ಞಾನೋಕ್ತಿ 14:3) ಮೇಲಣಿಂದ ಬರುವ ವಿವೇಕವನ್ನು ಹೊಂದದಿರುವ ಮೂರ್ಖ ವ್ಯಕ್ತಿಯು ಶಾಂತಿಸ್ಥಾಪಿಸುವವನೂ ಅಲ್ಲ ನ್ಯಾಯಸಮ್ಮತನೂ ಅಲ್ಲ. ಅವನ ಹೆಜ್ಜೆಗಳನ್ನು ಮಾರ್ಗದರ್ಶಿಸುವ ವಿವೇಕವು ಭೂಸಂಬಂಧವಾದದ್ದು, ಪ್ರಾಕೃತಭಾವವಾದದ್ದು, ದೆವ್ವಗಳಿಗೆ ಸಂಬಂಧಪಟ್ಟದ್ದು ಆಗಿರುತ್ತದೆ. ಅವನು ನುಡಿಯುವ ಮಾತುಗಳು ಭೇದಹುಟ್ಟಿಸುವಂಥವುಗಳೂ ಅಹಂಭಾವದವುಗಳೂ ಆಗಿರುತ್ತವೆ. ಅವನ ಬಾಯಲ್ಲಿರುವ ಗರ್ವವು, ಅವನನ್ನೂ ಇತರರನ್ನೂ ತೊಂದರೆಯಲ್ಲಿ ಸಿಲುಕಿಸುತ್ತದೆ.—ಯಾಕೋಬ 3:13-18.
ಒಬ್ಬ ಜ್ಞಾನಿ ಇಲ್ಲವೆ ವಿವೇಕಿಯ ತುಟಿಗಳಾದರೊ ಅವನನ್ನು ಕಾಯುತ್ತವೆ ಅಥವಾ ಸಂರಕ್ಷಿಸುತ್ತವೆ ಮತ್ತು ಹೀಗೆ ಅವನ ಸುಕ್ಷೇಮದ ಭಾವನೆಯನ್ನು ಹೆಚ್ಚಿಸುತ್ತವೆ. ಹೇಗೆ? ದೇವರ ವಾಕ್ಯವು ಹೀಗನ್ನುತ್ತದೆ: “ಕತ್ತಿತಿವಿದ ಹಾಗೆ ದುಡುಕಿ ಮಾತಾಡುವವರುಂಟು; ಮತಿವಂತರ ಮಾತೇ ಮದ್ದು.” (ಜ್ಞಾನೋಕ್ತಿ 12:18) ಒಬ್ಬ ವಿವೇಕಿಯ ಮಾತುಗಳು ದುಡುಕಿ ಆಡಿದಂಥವುಗಳಾಗಿರುವುದಿಲ್ಲ, ಇಲ್ಲವೆ ಚುಚ್ಚುವಮಾತುಗಳಾಗಿರುವುದಿಲ್ಲ. ಅವನ ಹೃದಯವು ವಿವೇಚಿಸಿ ಉತ್ತರಕೊಡುತ್ತದೆ. (ಜ್ಞಾನೋಕ್ತಿ 15:28) ಅವನು ಯೋಚಿಸಿ ನುಡಿಯುವ ಮಾತುಗಳು ಮದ್ದಿನಂತಿರುತ್ತವೆ, ಖಿನ್ನರಾಗಿರುವವರಿಗೆ ಪ್ರೋತ್ಸಾಹನೀಡಿ, ಶೋಷಿತರಿಗೆ ಚೇತೋಹಾರಿಯಾಗಿರುತ್ತವೆ. ಇತರರನ್ನು ಕೆರಳಿಸುವ ಬದಲು, ಅವನ ತುಟಿಗಳು ಸಮಾಧಾನ ಹಾಗೂ ಪ್ರಶಾಂತತೆಗೆ ಇಂಬುಕೊಡುತ್ತವೆ.
ವಿವೇಕವು ಮಾನವ ಯತ್ನಗಳನ್ನು ನಿರ್ದೇಶಿಸುವಾಗ
ಸೊಲೊಮೋನನು ಮುಂದಕ್ಕೆ ಆಸಕ್ತಿಕೆರಳಿಸುವ ಒಂದು ಜ್ಞಾನೋಕ್ತಿಯನ್ನು ಮುಂದಿಡುತ್ತಾನೆ. ಅದು, ನಿರ್ದಿಷ್ಟವಾದ ಕೆಲಸವೊಂದಕ್ಕೆ ಕೈಹಾಕುವುದರ ಸಾಧಕಬಾಧಕಗಳನ್ನು ತೂಗಿನೋಡುವುದರ ಅಗತ್ಯದ ಕುರಿತಾಗಿ ಚರ್ಚಿಸುತ್ತಿರುವಂತೆ ತೋರುತ್ತದೆ. ಸೊಲೊಮೋನನು ಹೇಳುವುದು: “ಎತ್ತುಗಳಿಲ್ಲದಿರುವಾಗ ಗೋದಲಿಯು ಶುದ್ಧ, ಆದರೆ ಎತ್ತಿನ ಶಕ್ತಿಯಿಂದಲೇ ಬೆಳೆಯ ವೃದ್ಧಿಯಲ್ಲವೆ.”—ಜ್ಞಾನೋಕ್ತಿ 14:4.
ಈ ಜ್ಞಾನೋಕ್ತಿಯ ಅರ್ಥದ ಕುರಿತಾಗಿ ಒಂದು ಪರಾಮರ್ಶನ ಕೃತಿಯು ಹೇಳುವುದು: “ಖಾಲಿಯಾಗಿರುವ ಕೊಟ್ಟಿಗೆಯು [ಗೋದಲಿ] ಮೇವು ಕೊಡಲಿಕ್ಕಾಗಿ ಎತ್ತುಗಳಿಲ್ಲ ಎಂಬುದನ್ನು ಸೂಚಿಸುತ್ತದೆ. ಹೀಗಿರುವುದರಿಂದ ಅದನ್ನು ಶುಚಿಗೊಳಿಸುವ ಮತ್ತು ಪಶುಗಳ ಆರೈಕೆಮಾಡುವ ತೊಂದರೆ ಇರುವುದಿಲ್ಲ, ಮತ್ತು ಖರ್ಚೂ ಕಡಿಮೆಯಾಗಿರುತ್ತದೆ. ಆದರೆ ಈ ‘ಲಾಭ’ವನ್ನು ವಚನ 4ರ ಎರಡನೇ ಭಾಗದಲ್ಲಿ ನಿಷ್ಪ್ರಯೋಜಕವೆಂದು ತೋರಿಸಲಾಗಿದೆ: ಎತ್ತುಗಳು ಬಳಸಲ್ಪಡದಿರುವಾಗ, ಕೊಯ್ಲು ಹೆಚ್ಚಾಗಿರದೆಂದು ಸೂಚಿಸಲಾಗಿದೆ.” ಆದುದರಿಂದ ರೈತನು ಬುದ್ಧಿವಂತಿಕೆಯಿಂದ ಈ ಎರಡರ ನಡುವೆ ಆಯ್ಕೆಮಾಡಬೇಕು.
ಈ ಜ್ಞಾನೋಕ್ತಿಯ ಮೂಲತತ್ತ್ವವು, ನಾವು ಉದ್ಯೋಗವನ್ನು ಬದಲಾಯಿಸುವ, ನಿರ್ದಿಷ್ಟ ತರದ ಮನೆಯನ್ನು ಆಯ್ಕೆಮಾಡುವ, ಒಂದು ಕಾರನ್ನು ಖರೀದಿಸುವ, ಮನೆಗೆ ಸಾಕುಪ್ರಾಣಿಯನ್ನು ತರುವ ಮುಂತಾದ ವಿಷಯಗಳ ಕುರಿತು ಪರಿಗಣಿಸುವಾಗಲೂ ಅನ್ವಯವಾಗಬಹುದಲ್ಲವೊ? ಯಾವುದೇ ಕಾರ್ಯಕ್ಕೆ ಕೈಹಾಕುವ ಮುಂಚೆ ಒಬ್ಬ ವಿವೇಕಿಯು ಸಾಧಕಬಾಧಕಗಳನ್ನು ತೂಗಿನೋಡಿ, ಅಷ್ಟೊಂದು ಪ್ರಯತ್ನ ಹಾಗೂ ಖರ್ಚಿಗೆ ಅದು ಯೋಗ್ಯವಾಗಿದೆಯೊ ಎಂಬುದನ್ನು ವಿಮರ್ಶಿಸಿನೋಡುವನು.
ಒಬ್ಬ ಸಾಕ್ಷಿ ವಿವೇಕಿಯಾಗಿರುವಾಗ
ಸೊಲೊಮೋನನು ಮುಂದುವರಿಸಿದ್ದು: “ಸತ್ಯಸಾಕ್ಷಿಯು ಸುಳ್ಳಾಡನು; ಸುಳ್ಳುಸಾಕ್ಷಿಯು ಅಸತ್ಯವನ್ನೇ ಆಡುವನು.” (ಜ್ಞಾನೋಕ್ತಿ 14:5) ಒಬ್ಬ ಸುಳ್ಳು ಸಾಕ್ಷಿಯ ಅಸತ್ಯ ಮಾತುಗಳು ಖಂಡಿತವಾಗಿಯೂ ತುಂಬ ಹಾನಿಯನ್ನು ಮಾಡಬಲ್ಲವು. ಇಜ್ರೇಲಿನವನಾದ ನಾಬೋತನ ವಿರುದ್ಧ ಇಬ್ಬರು ದುಷ್ಟ ಮನುಷ್ಯರು ಸುಳ್ಳು ಸಾಕ್ಷ್ಯವನ್ನು ಕೊಟ್ಟದ್ದರಿಂದ ಅವನನ್ನು ಕಲ್ಲೆಸೆದು ಕೊಲ್ಲಲಾಯಿತು. (1 ಅರಸುಗಳು 21:7-13) ಮತ್ತು ಯೇಸುವಿನ ಮರಣಕ್ಕೆ ನಡಿಸಿದಂಥ ಸಂಗತಿ ಯಾವುದು? ಅವನ ವಿರುದ್ಧವಾಗಿ ಮುಂದೆಬಂದ ಸುಳ್ಳು ಸಾಕ್ಷಿಗಳಲ್ಲವೊ? (ಮತ್ತಾಯ 26:59-61) ತಮ್ಮ ನಂಬಿಕೆಗಾಗಿ ಕೊಲ್ಲಲ್ಪಟ್ಟವರಲ್ಲಿ ಯೇಸುವಿನ ಮೊದಲ ಶಿಷ್ಯ ಸ್ತೆಫನನ ವಿರುದ್ಧವಾಗಿಯೂ ಸುಳ್ಳು ಸಾಕ್ಷಿಗಳೇ ಸಾಕ್ಷ್ಯಕೊಟ್ಟರು.—ಅ. ಕೃತ್ಯಗಳು 6:10, 11.
ಅಸತ್ಯವನ್ನಾಡುವ ವ್ಯಕ್ತಿಯ ಕೃತ್ಯಗಳು ಸದ್ಯಕ್ಕೆ ಸ್ವಲ್ಪ ಸಮಯ ಬೆಳಕಿಗೆ ಬರಲಿಕ್ಕಿಲ್ಲ, ಆದರೆ ಅವನ ಭವಿಷ್ಯವೇನೆಂಬುದನ್ನು ಪರಿಗಣಿಸಿರಿ. ಯೆಹೋವನು ‘ಸುಳ್ಳಿನ ನಾಲಿಗೆಯನ್ನು’ ಹಗೆಮಾಡುತ್ತಾನೆಂದು ಬೈಬಲ್ ಹೇಳುತ್ತದೆ. (ಜ್ಞಾನೋಕ್ತಿ 6:16-19) ಅಂಥ ವ್ಯಕ್ತಿಗೆ ಸಿಗುವ ಪಾಲು, ಕೊಲೆಗಾರರು, ಜಾರರು ಮತ್ತು ವಿಗ್ರಹಾರಾಧಕರಂಥ ಅಪರಾಧಿಗಳೊಂದಿಗೆ ಬೆಂಕಿ ಗಂಧಕಗಳುರಿಯುವ ಕೆರೆ, ಎರಡನೆಯ ಮರಣ ಆಗಿರುವುದು.—ಪ್ರಕಟನೆ 21:8.
ಸತ್ಯಸಾಕ್ಷಿಯಾದರೊ, ಸಾಕ್ಷ್ಯವನ್ನು ಕೊಡುವಾಗ ಸುಳ್ಳುಪ್ರಮಾಣ ಮಾಡುವುದಿಲ್ಲ. ಅವನ ಸಾಕ್ಷ್ಯವು ಸುಳ್ಳುಗಳಿಂದ ತುಂಬಿರುವುದಿಲ್ಲ. ಆದರೆ ಅವನು, ಯೆಹೋವನ ಜನರಿಗೆ ಯಾವುದೇ ರೀತಿಯಲ್ಲಿ ಕೇಡನ್ನು ತರಲು ಬಯಸುವವರಿಗೆ ಎಲ್ಲಾ ಮಾಹಿತಿಯನ್ನು ಕೊಡುವ ಹಂಗಿನಲ್ಲಿದ್ದಾನೆಂದು ಇದರರ್ಥವಲ್ಲ. ಮೂಲಪಿತೃಗಳಾದ ಅಬ್ರಹಾಮ ಇಸಾಕರು, ಯೆಹೋವನನ್ನು ಆರಾಧಿಸದಿದ್ದ ಕೆಲವರಿಂದ ವಾಸ್ತವಾಂಶಗಳನ್ನು ತಡೆದಿಟ್ಟರು. (ಆದಿಕಾಂಡ 12:10-19; 20:1-18; 26:1-10) ಯೆರಿಕೋವಿನ ರಾಹಾಬಳು ರಾಜನ ಆಳುಗಳಿಗೆ ತಪ್ಪಾದ ಮಾಹಿತಿಯನ್ನು ಕೊಟ್ಟಳು. (ಯೆಹೋಶುವ 2:1-7) ಸ್ವತಃ ಯೇಸು ಕ್ರಿಸ್ತನೇ ಎಲ್ಲಾ ಮಾಹಿತಿಯನ್ನು ಬಯಲುಪಡಿಸಲಿಲ್ಲ. ಏಕೆಂದರೆ ಅದು ಅನಾವಶ್ಯಕವಾದ ಕೇಡನ್ನು ಉಂಟುಮಾಡಸಾಧ್ಯವಿತ್ತು. (ಯೋಹಾನ 7:1-10) ಅವನಂದದ್ದು: “ದೇವರ ವಸ್ತುವನ್ನು ನಾಯಿಗಳಿಗೆ ಹಾಕಬೇಡಿರಿ.” ಯಾಕೆ? ಅವು “ಹಿಂತಿರುಗಿ ಬಂದು ನಿಮ್ಮನ್ನು ಸೀಳಿಬಿಟ್ಟಾವು.”—ಮತ್ತಾಯ 7:6.
‘ಜ್ಞಾನವು ಸುಲಭವಾಗಿ ದೊರೆಯುವಾಗ’
ಎಲ್ಲಾ ಜನರಿಗೆ ವಿವೇಕ ಇರುತ್ತದೊ? ಜ್ಞಾನೋಕ್ತಿ 14:6 ಹೇಳುವುದು: “ಧರ್ಮನಿಂದಕನಿಗೆ ಹುಡುಕಿದರೂ ಜ್ಞಾನವು [“ವಿವೇಕವು,” NW] ಸಿಕ್ಕದು; ವಿವೇಕಿಗೆ [“ತಿಳಿವಳಿಕೆಯುಳ್ಳವನಿಗೆ,” NW] ತಿಳುವಳಿಕೆಯು [“ಜ್ಞಾನವು,” NW] ಸುಲಭವಾಗಿ ದೊರೆಯುವದು.” ಒಬ್ಬ ನಿಂದಕನು, ಇಲ್ಲವೆ ಅಪಹಾಸ್ಯಮಾಡುವವನು ವಿವೇಕಕ್ಕಾಗಿ ಹುಡುಕಬಹುದು, ಆದರೆ ನಿಜ ವಿವೇಕವು ಅವನಿಗೆಂದೂ ಸಿಗುವುದಿಲ್ಲ. ಅಂಥ ನಿಂದಕನು ದೇವರ ವಿಷಯಗಳನ್ನು ಗರ್ವದಿಂದ ಹೀಯಾಳಿಸುತ್ತಾನೆ. ಹೀಗೆ ಮಾಡುವುದರಿಂದ ಅವನು ವಿವೇಕವನ್ನು ಪಡೆಯಲಿಕ್ಕಾಗಿ ಇರುವಂಥ ಅತಿ ಮೂಲಭೂತ ಆವಶ್ಯಕತೆಯನ್ನು ಪೂರೈಸಲು ಅಂದರೆ ಸತ್ಯ ದೇವರ ಬಗ್ಗೆ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಲು ತಪ್ಪುತ್ತಾನೆ. ಅವನ ಅಹಂಕಾರ ಮತ್ತು ಗರ್ವವು, ದೇವರ ಬಗ್ಗೆ ಕಲಿಯುವುದರಿಂದ ಮತ್ತು ವಿವೇಕವನ್ನು ಪಡೆದುಕೊಳ್ಳುವುದರಿಂದ ಅವನನ್ನು ತಡೆಗಟ್ಟುತ್ತದೆ. (ಜ್ಞಾನೋಕ್ತಿ 11:2) ಅವನು ವಿವೇಕಕ್ಕಾಗಿ ಹುಡುಕುವ ಗೊಡವೆಗೆ ಹೋಗುವುದಾದರೂ ಏಕೆ? ಕಾರಣವೇನೆಂದು ಆ ಜ್ಞಾನೋಕ್ತಿಯು ಹೇಳುವುದಿಲ್ಲ, ಆದರೆ ಇತರರು ತಾನು ಬುದ್ಧಿವಂತನೆಂದು ಯೋಚಿಸಲಿ ಎಂಬ ಕಾರಣಕ್ಕೋಸ್ಕರ ಅವನು ಹಾಗೆ ಮಾಡುತ್ತಿರಬಹುದು.
ತಿಳಿವಳಿಕೆಯುಳ್ಳ ಒಬ್ಬ ವ್ಯಕ್ತಿಗೆ ‘ಜ್ಞಾನವು ಸುಲಭವಾಗಿ’ ಲಭ್ಯವಿರುತ್ತದೆ. ತಿಳಿವಳಿಕೆಯನ್ನು, “ಮಾನಸಿಕ ಹಿಡಿತ: ಗ್ರಹಿಕೆ,” “ನಿರ್ದಿಷ್ಟ ವಿವರಗಳಿಗೂ ಸಮಗ್ರ ವಿಷಯಕ್ಕೂ ಇರುವ ಸಂಬಂಧವನ್ನು ಗುರುತಿಸುವ ಸಾಮರ್ಥ್ಯ” ಎಂದು ಅರ್ಥನಿರೂಪಿಸಲಾಗಿದೆ. ಅದು, ಒಂದು ವಿಷಯದ ವಿಭಿನ್ನ ಅಂಶಗಳನ್ನು ಪ್ರತ್ಯೇಕವಾದ ಭಾಗಗಳೋಪಾದಿ ಅಲ್ಲ ಬದಲಾಗಿ ಅವುಗಳನ್ನು ಪರಸ್ಪರ ಜೋಡಿಸಿ ಇಡೀ ಚಿತ್ರವನ್ನು ನೋಡುವ ಸಾಮರ್ಥ್ಯ ಆಗಿದೆ. ಈ ಸಾಮರ್ಥ್ಯವುಳ್ಳ ಒಬ್ಬ ವ್ಯಕ್ತಿಗೆ ಜ್ಞಾನವು ಸುಲಭವಾಗಿ ದೊರೆಯುತ್ತದೆಂದು ಆ ಜ್ಞಾನೋಕ್ತಿಯು ಹೇಳುತ್ತಿದೆ.
ಈ ವಿಷಯದ ಸಂಬಂಧದಲ್ಲಿ, ಶಾಸ್ತ್ರಾಧಾರಿತ ಸತ್ಯದ ಕುರಿತಾದ ಜ್ಞಾನವನ್ನು ಗಳಿಸುವ ನಿಮ್ಮ ಸ್ವಂತ ಅನುಭವವನ್ನು ತೆಗೆದುಕೊಳ್ಳಿ. ನೀವು ಬೈಬಲನ್ನು ಅಧ್ಯಯನ ಮಾಡಲಾರಂಭಿಸಿದಾಗ, ಕಲಿತಂಥ ಆರಂಭದ ಸತ್ಯಗಳಲ್ಲಿ ದೇವರ, ಆತನ ವಾಗ್ದಾನಗಳ ಮತ್ತು ಆತನ ಮಗನ ಕುರಿತಾದ ಮೂಲಭೂತ ಬೋಧನೆಗಳು ಸೇರಿದ್ದವೆಂಬುದು ಅತಿ ಸಂಭವನೀಯ. ಆರಂಭದಲ್ಲಿ ಇವು ನಿಮಗೆ ಬಿಡಿಬಿಡಿಯಾದ ವಿವರಗಳಾಗಿದ್ದವು ಅಷ್ಟೇ. ಆದರೆ ನೀವು ಅಧ್ಯಯನ ಮಾಡುತ್ತಾ ಹೋದಂತೆ, ಈ ಬಿಡಿ ವಿವರಗಳು ಒಂದಕ್ಕೊಂದು ಜೋಡಿಸಲ್ಪಟ್ಟು, ಮಾನವರಿಗಾಗಿ ಮತ್ತು ಭೂಮಿಗಾಗಿರುವ ಯೆಹೋವನ ಸಮಗ್ರ ಉದ್ದೇಶಕ್ಕೆ ಈ ಭಿನ್ನಭಿನ್ನ ವಿವರಗಳು ಹೇಗೆ ಸಂಬಂಧಿಸಿದವೆಂಬುದನ್ನು ನೀವು ಸ್ಪಷ್ಟವಾಗಿ ನೋಡಸಾಧ್ಯವಿತ್ತು. ಬೈಬಲಿನಲ್ಲಿದ್ದ ಸತ್ಯವು ನಿಮಗೆ ಹೆಚ್ಚು ತರ್ಕಸಂಗತವೂ
ಪರಸ್ಪರ ಹೆಣೆದಿರುವಂಥದ್ದೂ ಆಗಿ ತೋರಿಬಂತು. ಹೊಸ ವಿವರಗಳನ್ನು ಕಲಿಯುವುದು ಮತ್ತು ನೆನಪಿನಲ್ಲಿಡುವುದು ಆಗ ಹೆಚ್ಚು ಸುಲಭವಾಯಿತು, ಯಾಕಂದರೆ ಅವುಗಳನ್ನು ಆ ಇಡೀ ಚಿತ್ರದಲ್ಲಿ ಎಲ್ಲಿಡಬೇಕೆಂದು ನೀವು ನೋಡಸಾಧ್ಯವಿತ್ತು.ಜ್ಞಾನವು ಎಲ್ಲಿ ಸಿಗುವುದಿಲ್ಲ ಎಂಬುದರ ಕುರಿತಾಗಿ ವಿವೇಕಿಯಾದ ಅರಸನು ಎಚ್ಚರಿಸುತ್ತಾನೆ. ಅವನು ಹೇಳುವುದು: “ನೀನು ಜ್ಞಾನಹೀನನ ಬಳಿಗೆ ಹೋದರೆ ಅವನ ತುಟಿಗಳಲ್ಲಿ ಯಾವ ತಿಳುವಳಿಕೆಯನ್ನೂ ಕಾಣಲಾರೆ.” (ಜ್ಞಾನೋಕ್ತಿ 14:7) ಜ್ಞಾನಹೀನನ ಬಳಿ ನಿಜವಾದ ತಿಳುವಳಿಕೆ ಅಥವಾ ಜ್ಞಾನವಿರುವುದಿಲ್ಲ. ಅವನ ತುಟಿಗಳು ಜ್ಞಾನವನ್ನು ಸೂಸುವಂಥವುಗಳಲ್ಲ. ಅಂಥ ವ್ಯಕ್ತಿಯಿಂದ ದೂರಹೋಗುವಂತೆ ಬುದ್ಧಿವಾದ ಕೊಡಲಾಗಿದೆ, ಮತ್ತು ಅವನಿಂದ ದೂರವಿರುವುದೇ ಬುದ್ಧಿವಂತಿಕೆಯಾಗಿದೆ. ಏಕೆಂದರೆ “ಜ್ಞಾನಹೀನರ ಒಡನಾಡಿ” ಆಗಿರುವ ಯಾವನೂ “ಸಂಕಟಪಡುವನು.”—ಜ್ಞಾನೋಕ್ತಿ 13:20.
ಸೊಲೊಮೋನನು ಮುಂದುವರಿಸಿ ಹೇಳಿದ್ದು: “ಮಾರ್ಗವನ್ನು ಗ್ರಹಿಸಿಕೊಳ್ಳುವದೇ ಜಾಣನ ಜ್ಞಾನ [“ವಿವೇಕ,” NW]; ಮೂಢರ ಮೂರ್ಖತನ ಮೋಸಕರ.” (ಜ್ಞಾನೋಕ್ತಿ 14:8) ವಿವೇಕಿಯು ತನ್ನ ಕೃತ್ಯಗಳ ಬಗ್ಗೆ ಯೋಚಿಸುತ್ತಾನೆ. ಅವನ ಮುಂದಿರುವ ಭಿನ್ನಭಿನ್ನ ಆಯ್ಕೆಗಳನ್ನು ಪರಿಗಣಿಸಿ, ಪ್ರತಿಯೊಂದು ಆಯ್ಕೆ ಯಾವ ಫಲಿತಾಂಶಕ್ಕೆ ನಡೆಸಸಾಧ್ಯವಿದೆ ಎಂಬುದರ ಕುರಿತಾಗಿ ಜಾಗರೂಕತೆಯಿಂದ ಯೋಚಿಸುತ್ತಾನೆ. ತನ್ನ ಮಾರ್ಗಕ್ರಮವನ್ನು ವಿವೇಕದಿಂದ ಆಯ್ಕೆಮಾಡುತ್ತಾನೆ. ಮೂಢನ ಕುರಿತಾಗಿ ಏನು? ತಾನೇನು ಮಾಡುತ್ತೇನೆಂದು ತನಗೆ ಚೆನ್ನಾಗಿ ತಿಳಿದಿದೆ ಮತ್ತು ಅತ್ಯುತ್ತಮವಾದ ಆಯ್ಕೆಯನ್ನೇ ಮಾಡುತ್ತಿದ್ದೇನೆಂದು ನೆನಸುತ್ತಾ ಅವನು ಮೂರ್ಖತನದ ಮಾರ್ಗವನ್ನು ಆಯ್ಕೆಮಾಡುತ್ತಾನೆ. ಅವನ ಈ ಮೂರ್ಖತನವೇ ಅವನನ್ನು ಮೋಸಗೊಳಿಸುತ್ತದೆ.
ವಿವೇಕವು ಸಂಬಂಧಗಳನ್ನು ಮಾರ್ಗದರ್ಶಿಸುವಾಗ
ವಿವೇಕದಿಂದ ಮಾರ್ಗದರ್ಶಿಸಲ್ಪಟ್ಟಿರುವವನಿಗೆ, ಇತರರೊಂದಿಗೆ ಶಾಂತಿಭರಿತ ಸಂಬಂಧಗಳಿರುತ್ತವೆ. ಇಸ್ರಾಯೇಲಿನ ರಾಜನು ಅವಲೋಕಿಸುವುದು: “ಮೂರ್ಖರನ್ನು ಅವರ ದೋಷವೇ ಹಾಸ್ಯಮಾಡುವದು [“ದೋಷಭಾವವನ್ನು ಹಾಸ್ಯಮಾಡುವವರು ಮೂರ್ಖರು,” NW]; ಯಥಾರ್ಥವಂತರಲ್ಲಿ [ದೇವರ] ದಯೆಯಿರುವದು.” (ಜ್ಞಾನೋಕ್ತಿ 14:9) ದೋಷ ಇಲ್ಲವೆ ಖೇದದ ಭಾವನೆಯು ಒಬ್ಬ ಮೂರ್ಖನಿಗೆ ಹಾಸ್ಯಪರ ಸಂಗತಿಯಾಗಿದೆ. ಅವನು ಶಾಂತಿಯನ್ನು ಕಾಪಾಡಲಿಕ್ಕಾಗಿ “ತಿದ್ದುಪಡಿಮಾಡಲು ತೀರ ಗರ್ವಿಷ್ಠನು” ಆಗಿರುವುದರಿಂದ ಮನೆಯಲ್ಲೂ ಹೊರಗೂ ಅವನಿಗಿರುವ ಸಂಬಂಧಗಳು ಹಾಳಾಗಿರುತ್ತವೆ. (ದ ನ್ಯೂ ಇಂಗ್ಲಿಷ್ ಬೈಬಲ್) ಯಥಾರ್ಥವಂತ ವ್ಯಕ್ತಿಯು ಇತರರ ಕುಂದುಕೊರತೆಗಳನ್ನು ಸಹಿಸಲು ಸಿದ್ಧಮನಸ್ಸಿನವನಾಗಿರುತ್ತಾನೆ. ಮತ್ತು ಸ್ವತಃ ಅವನೇ ತಪ್ಪುಮಾಡುವಾಗ ಕ್ಷಮೆಯಾಚಿಸಲು ಹಾಗೂ ತಿದ್ದುಪಡಿಗಳನ್ನು ಮಾಡಲು ಸಿದ್ಧನಾಗಿರುತ್ತಾನೆ. ಅವನು ಸಮಾಧಾನದಿಂದಿರಲು ಪ್ರಯತ್ನಿಸುವುದರಿಂದ, ಅವನಿಗೆ ಇತರರೊಂದಿಗೆ ಸಂತೋಷಭರಿತ ಸ್ಥಿರ ಸಂಬಂಧಗಳಿರುತ್ತವೆ.—ಇಬ್ರಿಯ 12:14.
ಸೊಲೊಮೋನನು ಮುಂದೆ, ಮಾನವ ಸಂಬಂಧಗಳಲ್ಲಿರುವ ಒಂದು ನಿರ್ಬಂಧಕ ಅಂಶಕ್ಕೆ ಕೈತೋರಿಸುತ್ತಾನೆ. ಅವನನ್ನುವುದು: “ಪ್ರತಿಯೊಬ್ಬನು ತನ್ನ ಹೃದಯದ ವ್ಯಾಕುಲವನ್ನು ತಾನು ಗ್ರಹಿಸಿಕೊಳ್ಳುವನು; ಅವನ ಆನಂದದಲ್ಲಿಯೂ ಯಾರೂ ಪಾಲುಗಾರರಾಗುವದಿಲ್ಲ.” (ಜ್ಞಾನೋಕ್ತಿ 14:10) ನಮ್ಮ ಅಂತರಂಗದ ಭಾವನೆಗಳನ್ನು—ದುಃಖದ್ದಾಗಿರಲಿ ಸಂತೋಷದ್ದಾಗಿರಲಿ—ಯಾವಾಗಲೂ ಇತರರಿಗೆ ವ್ಯಕ್ತಪಡಿಸಲು ಮತ್ತು ನಾವು ಏನನ್ನು ಅನುಭವಿಸುತ್ತಿದ್ದೇವೊ ಅದನ್ನು ಸರಿಯಾಗಿ ತಿಳಿಸಲು ಸಾಧ್ಯವಾಗುತ್ತದೊ? ಅಷ್ಟುಮಾತ್ರವಲ್ಲದೆ ಇನ್ನೊಬ್ಬ ವ್ಯಕ್ತಿಗೆ ಹೇಗನಿಸುತ್ತಾ ಇದೆಯೆಂಬುದನ್ನು ನಾವು ಯಾವಾಗಲೂ ಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿದೆಯೊ? ಈ ಎರಡೂ ಪ್ರಶ್ನೆಗಳಿಗೆ ಉತ್ತರ ‘ಇಲ್ಲ’ ಎಂದಾಗಿದೆ.
ಉದಾಹರಣೆಗಾಗಿ, ಆತ್ಮಹತ್ಯೆಗೆ ಸಂಬಂಧಪಟ್ಟ ಭಾವನೆಗಳನ್ನು ತೆಗೆದುಕೊಳ್ಳಿ. ಇಂಥ ಭಾವನೆಗಳುಳ್ಳ ವ್ಯಕ್ತಿ ಅದನ್ನು ಕುಟುಂಬದ ಸದಸ್ಯರೊಬ್ಬರಿಗೊ ಒಬ್ಬ ಸ್ನೇಹಿತನಿಗೊ ಅನೇಕವೇಳೆ ಸ್ಪಷ್ಟವಾಗಿ ತಿಳಿಸಲು ಶಕ್ತರಾಗಿರುವುದಿಲ್ಲ. ಇನ್ನೊಂದು ಬದಿಯಲ್ಲಿ ಇತರರು ತಮ್ಮ ಒಡನಾಡಿಗಳಲ್ಲಿರುವ ಇಂಥ ಭಾವನೆಗಳ ಲಕ್ಷಣಗಳನ್ನು ಗುರುತಿಸಲು ಯಾವಾಗಲೂ ಶಕ್ತರಾಗುವುದಿಲ್ಲ. ನಾವು ಈ ಲಕ್ಷಣಗಳನ್ನು ಗುರುತಿಸಿ, ಸಹಾಯಮಾಡಲಾಗದೇ ಹೋದ ಸಂದರ್ಭದಲ್ಲಿ ಅಪರಾಧಿಭಾವವನ್ನು ಹೊಂದಬೇಕಾಗಿಲ್ಲ. ಭಾವನಾತ್ಮಕ ಆಸರೆಗಾಗಿ ಸಹಾನುಭೂತಿಯುಳ್ಳ ಸ್ನೇಹಿತನ ಬಳಿ ಹೋಗುವುದು ಸಾಂತ್ವನದಾಯಕವಾಗಿದ್ದರೂ, ಮಾನವರು ನೀಡಬಲ್ಲ ಸಾಂತ್ವನವು ಸೀಮಿತವೆಂಬುದನ್ನೂ ಈ ಜ್ಞಾನೋಕ್ತಿಯು ಕಲಿಸುತ್ತದೆ. ಕೆಲವೊಂದು ಕಷ್ಟಗಳನ್ನು ತಾಳಿಕೊಳ್ಳುತ್ತಿರುವಾಗ ನಾವು ಯೆಹೋವನ ಮೇಲೆ ಮಾತ್ರ ಅವಲಂಬಿಸಬೇಕಾದೀತು.
“ಅವನ ಮನೆಯಲ್ಲಿ ಧನೈಶ್ವರ್ಯಗಳಿರುವವು”
“ದುಷ್ಟರ ಮನೆಗೆ ನಾಶನ; ಶಿಷ್ಟರ ಗುಡಾರಕ್ಕೆ ಏಳಿಗೆ” ಎಂದು ಇಸ್ರಾಯೇಲಿನ ರಾಜನು ತಿಳಿಸುತ್ತಾನೆ. (ಜ್ಞಾನೋಕ್ತಿ 14:11) ಒಬ್ಬ ದುಷ್ಟ ವ್ಯಕ್ತಿಯು ಈ ವ್ಯವಸ್ಥೆಯಲ್ಲಿ ಏಳಿಗೆಹೊಂದಬಹುದು ಮತ್ತು ಒಂದು ಸುಂದರ ಮನೆಯಲ್ಲಿ ಜೀವಿಸುತ್ತಿರಬಹುದು ಆದರೆ ಒಂದುವೇಳೆ ಅವನೇ ಇಲ್ಲವಾಗುವಲ್ಲಿ ಅದೆಲ್ಲ ಇದ್ದು ಏನು ಪ್ರಯೋಜನ? (ಕೀರ್ತನೆ 37:10) ಇನ್ನೊಂದು ಬದಿಯಲ್ಲಿ, ಒಬ್ಬ ಯಥಾರ್ಥವಂತನ ಬೀಡು ಅತಿ ಸಾಧಾರಣವಾದದ್ದಾಗಿರಬಹುದು. ಹಾಗಿದ್ದರೂ ‘ಅವನ ಮನೆಯಲ್ಲಿ ಧನೈಶ್ವರ್ಯಗಳಿವೆ’ ಎಂದು ಕೀರ್ತನೆ 112:3 ಹೇಳುತ್ತದೆ. ಇವು ಏನು?
ನಮ್ಮ ಮಾತು ಹಾಗೂ ಕೃತಿಗಳು ವಿವೇಕದಿಂದ ಮಾರ್ಗದರ್ಶಿಸಲ್ಪಡುವಾಗ, ನಮಗೆ ವಿವೇಕದೊಂದಿಗಿರುವ ‘ಧನಘನತೆಗಳು’ ಇರುತ್ತವೆ. (ಜ್ಞಾನೋಕ್ತಿ 8:18) ಇವುಗಳಲ್ಲಿ, ದೇವರೊಂದಿಗೆ ಮತ್ತು ನಮ್ಮ ಜೊತೆ ಮಾನವರೊಂದಿಗಿನ ಶಾಂತಿಭರಿತ ಸಂಬಂಧ, ಸುಕ್ಷೇಮದ ಭಾವನೆ ಮತ್ತು ಸ್ವಲ್ಪ ಮಟ್ಟಿಗಿನ ಸ್ಥಿರತೆ ಒಳಗೂಡಿರುತ್ತದೆ. ಹೌದು, ‘ಶಿಷ್ಟರ ಗುಡಾರವು’ ಈಗಲೂ “ಏಳಿಗೆ” ಹೊಂದಬಲ್ಲದು.
[ಪುಟ 27ರಲ್ಲಿರುವ ಚಿತ್ರ]
ವಿವೇಕಿಯಾದ ಸ್ತ್ರೀಯೊಬ್ಬಳು ತನ್ನ ಮನೆಯನ್ನು ಕಟ್ಟುತ್ತಾಳೆ
[ಪುಟ 28ರಲ್ಲಿರುವ ಚಿತ್ರ]
“ಮತಿವಂತರ ಮಾತೇ ಮದ್ದು”