ಸತ್ಯ ಬೋಧನೆಗಳನ್ನು ನೀವು ಎಲ್ಲಿ ಕಂಡುಕೊಳ್ಳಸಾಧ್ಯವಿದೆ?
ಸತ್ಯ ಬೋಧನೆಗಳನ್ನು ನೀವು ಎಲ್ಲಿ ಕಂಡುಕೊಳ್ಳಸಾಧ್ಯವಿದೆ?
ಟಿಬೆಟ್ಟಿನಲ್ಲಿರುವ ಒಬ್ಬ ಮನುಷ್ಯನು, ಸ್ತೋತ್ರಪಾಠಗಳನ್ನು ಒಳಗೊಂಡಿರುವ ಉರುಳೆಯಾಕಾರದ ಒಂದು ಪ್ರಾರ್ಥನಾ ಚಕ್ರವನ್ನು ತಿರುಗಿಸುತ್ತಾನೆ. ಪ್ರತಿಬಾರಿ ತಾನು ಆ ಚಕ್ರವನ್ನು ತಿರುಗಿಸುವಾಗ, ತನ್ನ ಪ್ರಾರ್ಥನೆಗಳು ಪುನರಾವರ್ತಿಸಲ್ಪಡುತ್ತವೆ ಎಂದು ಅವನು ಭಾವಿಸುತ್ತಾನೆ. ಭಾರತದ ವಿಶಾಲವಾದ ಮನೆಯೊಂದರಲ್ಲಿ, ಪೂಜೆಗಾಗಿ ಒಂದು ಸಣ್ಣ ಕೋಣೆಯನ್ನು ಪ್ರತ್ಯೇಕಿಸಿಡಲಾಗುತ್ತದೆ. ಅಲ್ಲಿ, ವಿವಿಧ ದೇವದೇವತೆಗಳ ಮೂರ್ತಿಗಳಿಗೆ ಧೂಪ, ಹೂವುಗಳು ಮತ್ತು ಇತರ ವಸ್ತುಗಳನ್ನು ಅರ್ಪಿಸಲಾಗುತ್ತದೆ. ಅಲ್ಲಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಇಟಲಿಯಲ್ಲಿ, ವಿಪುಲವಾಗಿ ಅಲಂಕೃತವಾಗಿರುವ ಒಂದು ಚರ್ಚ್‌ನಲ್ಲಿ ಒಬ್ಬಾಕೆ ಸ್ತ್ರೀಯು, ಯೇಸುವಿನ ತಾಯಿಯಾದ ಮರಿಯಳ ಪ್ರತಿಮೆಯ ಮುಂದೆ ಮೊಣಕಾಲೂರಿ, ಮಣಿಗಳುಳ್ಳ ಜಪಸರವನ್ನು ಕೈಯಲ್ಲಿ ಹಿಡಿದುಕೊಂಡು ಪ್ರಾರ್ಥಿಸುತ್ತಾಳೆ.
ಜನರ ಜೀವಿತದ ಮೇಲೆ ಧರ್ಮವು ಬೀರಿರುವ ಪ್ರಭಾವವನ್ನು ನೀವು ಸ್ವತಃ ಕಂಡಿರಬಹುದು. “ಲೋಕಾದ್ಯಂತವಿರುವ ಮಾನವ ಸಮಾಜಗಳಲ್ಲಿ ಧರ್ಮವು . . . ಪ್ರಾಮುಖ್ಯ ಪಾತ್ರವನ್ನು ವಹಿಸಿದೆ ಮತ್ತು ವಹಿಸುತ್ತಾ ಇದೆ,” ಎಂಬುದಾಗಿ ಲೋಕದ ಧರ್ಮಗಳು—ಅಸ್ತಿತ್ವದಲ್ಲಿರುವ ಧರ್ಮಗಳನ್ನು ಅರ್ಥಮಾಡಿಕೊಳ್ಳುವುದು (ಇಂಗ್ಲಿಷ್) ಎಂಬ ಪುಸ್ತಕವು ತಿಳಿಸುತ್ತದೆ. ದೇವರು—ಒಂದು ಚುಟುಕಾದ ಇತಿಹಾಸ (ಇಂಗ್ಲಿಷ್) ಎಂಬ ತಮ್ಮ ಪುಸ್ತಕದಲ್ಲಿ ಜಾನ್ ಬೋಕರ್‌ರವರು ಹೀಗೆ ಹೇಳಿದ್ದಾರೆ: “ದೇವರಲ್ಲಿ ನಂಬಿಕೆ, ಅಂದರೆ ಆತನು ನಿಯಂತ್ರಕನು ಮತ್ತು ಸೃಷ್ಟಿಕರ್ತನು ಎಂಬ ನಂಬಿಕೆ ಇದ್ದಿರದಂಥ ಒಂದು ಮಾನವ ಸಮಾಜವು ಎಂದೂ ಅಸ್ತಿತ್ವದಲ್ಲಿರಲಿಲ್ಲ. ಉದ್ದೇಶಪೂರ್ವಕವಾಗಿ ನಾಸ್ತಿಕವಾದವನ್ನು ಆಯ್ಕೆಮಾಡಿರುವ ಸಮಾಜಗಳ ವಿಷಯದಲ್ಲೂ ಇದು ಸತ್ಯ.”
ಧರ್ಮವು ಕೋಟ್ಯಂತರ ಜನರ ಜೀವಿತವನ್ನು ಪ್ರಭಾವಿಸಿದೆ ಎಂಬುದು ಸತ್ಯ. ಮನುಷ್ಯನಲ್ಲಿ ಆಧ್ಯಾತ್ಮಿಕ ಅಗತ್ಯ ಮತ್ತು ಹಂಬಲವಿದೆ ಎಂಬುದಕ್ಕೆ ಇದು ಬಲವಾದ ಪುರಾವೆಯಾಗಿಲ್ಲವೆ? ಹೆಚ್ಚು ಉನ್ನತವಾದ ಶಕ್ತಿಯನ್ನು ಆರಾಧಿಸುವ ಮನುಷ್ಯನ ಅಗತ್ಯದ ಬಗ್ಗೆ ಸೂಚಿಸುತ್ತಾ “ಅದರ ಅಭಿವ್ಯಕ್ತಿಗಳನ್ನು ಮಾನವ ಇತಿಹಾಸದಲ್ಲೆಲ್ಲಾ ಕಾಣಸಾಧ್ಯವಿದೆ” ಎಂಬುದಾಗಿ ಕಂಡುಹಿಡಿಯದ ತನ್ನತನ (ಇಂಗ್ಲಿಷ್) ಎಂಬ ತಮ್ಮ ಪುಸ್ತಕದಲ್ಲಿ ಪ್ರಖ್ಯಾತ ಮನಶ್ಶಾಸ್ತ್ರಜ್ಞರಾದ ಡಾ. ಕಾರ್ಲ್ ಜಿ. ಜಂಗ್ ತಿಳಿಸಿದ್ದಾರೆ.
ಹಾಗಿದ್ದರೂ, ಅನೇಕ ಜನರು ದೇವರಲ್ಲಿ ಯಾವುದೇ
ನಂಬಿಕೆಯನ್ನು ಅಥವಾ ಧರ್ಮದಲ್ಲಿ ಯಾವುದೇ ಆಸಕ್ತಿಯನ್ನು ತೋರಿಸುವುದಿಲ್ಲ. ದೇವರ ಅಸ್ತಿತ್ವದ ಬಗ್ಗೆ ಸಂಶಯವನ್ನು ವ್ಯಕ್ತಪಡಿಸುವ ಅಥವಾ ಆತನು ಅಸ್ತಿತ್ವದಲ್ಲಿಯೇ ಇಲ್ಲ ಎಂದು ಹೇಳುವ ಕೆಲವು ಜನರು, ಅವರ ಧರ್ಮವು ಅವರ ಆಧ್ಯಾತ್ಮಿಕ ಅಗತ್ಯವನ್ನು ಪೂರೈಸಲು ತಪ್ಪಿಹೋಗಿರುವ ಮುಖ್ಯ ಕಾರಣದಿಂದ ಹಾಗೆ ಹೇಳುತ್ತಾರೆ. ಧರ್ಮವನ್ನು ಈ ರೀತಿಯಾಗಿ ಅರ್ಥನಿರೂಪಿಸಲಾಗಿದೆ: “ಒಂದು ಮೂಲತತ್ತ್ವಕ್ಕೆ ಒಬ್ಬನು ತನ್ನನ್ನು ಅರ್ಪಿಸಿಕೊಂಡಿರುವುದು.” ಈ ಅರ್ಥನಿರೂಪಣೆಗನುಸಾರ, ಪ್ರತಿಯೊಬ್ಬರೂ ತಮ್ಮ ಜೀವಿತದಲ್ಲಿ ಒಂದಲ್ಲ ಒಂದು ರೀತಿಯ ಧಾರ್ಮಿಕ ಭಕ್ತಿಯನ್ನು ಪ್ರದರ್ಶಿಸುತ್ತಾರೆ ಎಂಬುದಾಗಿ ತಿಳಿದುಬರುತ್ತದೆ. ಇದರಲ್ಲಿ ನಾಸ್ತಿಕರು ಸಹ ಒಳಗೂಡಿದ್ದಾರೆ.ಮಾನವ ಇತಿಹಾಸದ ಸಾವಿರಾರು ವರುಷಗಳಲ್ಲಿ, ಮನುಷ್ಯನು ತನ್ನ ಆಧ್ಯಾತ್ಮಿಕ ಅಗತ್ಯವನ್ನು ಪೂರೈಸಿಕೊಳ್ಳುವ ಪ್ರಯತ್ನದಲ್ಲಿ ಆರಾಧನೆಯ ಅನೇಕ ರೂಪಗಳನ್ನು ಪ್ರಯತ್ನಿಸಿನೋಡಿದ್ದಾನೆ. ಇದರ ಫಲಿತಾಂಶವಾಗಿ ಇಂದು ಲೋಕಾದ್ಯಂತ ಧಾರ್ಮಿಕ ದೃಷ್ಟಿಕೋನಗಳಲ್ಲಿ ದೊಡ್ಡ ಭಿನ್ನತೆಯನ್ನು ನಾವು ಕಾಣಸಾಧ್ಯವಿದೆ. ಉದಾಹರಣೆಗೆ, ಹೆಚ್ಚುಕಡಿಮೆ ಎಲ್ಲ ಧರ್ಮಗಳೂ ಒಂದು ಉನ್ನತವಾದ ಶಕ್ತಿ ಇದೆಯೆಂದು ನಂಬುವಂತೆ ಉತ್ತೇಜಿಸುತ್ತವೆಯಾದರೂ, ಆ ಉನ್ನತವಾದ ಶಕ್ತಿ ಯಾರು ಅಥವಾ ಅದು ಏನು ಎಂಬುದರ ಬಗ್ಗೆ ಅವುಗಳಿಗೆ ವಿಭಿನ್ನವಾದ ಕಲ್ಪನೆಗಳಿವೆ. ಹೆಚ್ಚಿನ ಧರ್ಮಗಳು ರಕ್ಷಣೆಯ ಅಥವಾ ವಿಮೋಚನೆಯ ಮಹತ್ವವನ್ನು ಒತ್ತಿಹೇಳುತ್ತವೆ. ಆದರೆ ರಕ್ಷಣೆಯೆಂದರೆ ಏನು ಮತ್ತು ಅದನ್ನು ಹೇಗೆ ಗಳಿಸುವುದು ಎಂಬುದರ ಕುರಿತಾದ ಅವರ ಬೋಧನೆಗಳು ಭಿನ್ನಭಿನ್ನವಾಗಿವೆ. ಇಂಥ ಭಿನ್ನವಾದ ನಂಬಿಕೆಗಳ ಸರಣಿಯಲ್ಲಿ, ದೇವರನ್ನು ಮೆಚ್ಚಿಸುವಂಥ ಸತ್ಯ ಬೋಧನೆಗಳು ಯಾವುವು ಎಂಬುದನ್ನು ನಾವು ಹೇಗೆ ಗುರುತಿಸಬಲ್ಲೆವು?