ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಯೆಹೋವನ ಭಯವೇ—ವಿವೇಕ’

‘ಯೆಹೋವನ ಭಯವೇ—ವಿವೇಕ’

‘ಯೆಹೋವನ ಭಯವೇ—ವಿವೇಕ’

“ವಿಷಯವು ತೀರಿತು; ಎಲ್ಲವೂ ಕೇಳಿ ಮುಗಿಯಿತು; ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು; ಮನುಷ್ಯರೆಲ್ಲರ [ಕರ್ತವ್ಯವು] ಇದೇ.” (ಪ್ರಸಂಗಿ 12:13) ದೈವಿಕ ಪ್ರೇರಣೆಯ ಕೆಳಗೆ ಪುರಾತನ ಇಸ್ರಾಯೇಲಿನ ರಾಜ ಸೊಲೊಮೋನನು ಎಷ್ಟೊಂದು ಗಹನವಾದ ತೀರ್ಮಾನಕ್ಕೆ ಬಂದನು! ಮೂಲಪಿತೃವಾದ ಯೋಬನು ಸಹ, ದೇವರ ಭಯದ ಮೌಲ್ಯವೇನೆಂಬುದನ್ನು ಗ್ರಹಿಸಿದನು; ಅವನು ಹೇಳಿದ್ದು: “ಇಗೋ, ಕರ್ತನ [ಯೆಹೋವನ] ಭಯವೇ ಜ್ಞಾನವು [“ವಿವೇಕವು,” NW] ದುಷ್ಟತನವನ್ನು ಬಿಡುವದೇ ವಿವೇಕ [“ತಿಳಿವಳಿಕೆ,” NW].”​—⁠ಯೋಬ 28:⁠28.

ಯೆಹೋವನಿಗೆ ಭಯಪಡುವ ವಿಷಯಕ್ಕೆ ಬೈಬಲ್‌ ತುಂಬ ಮಹತ್ವವನ್ನು ಕೊಡುತ್ತದೆ. ಹಾಗಾದರೆ ನಾವು ದೇವರ ಬಗ್ಗೆ ಪೂಜ್ಯ ಭಯವನ್ನು ಬೆಳೆಸಿಕೊಳ್ಳುವುದು ಏಕೆ ವಿವೇಕಪ್ರದವಾಗಿದೆ? ದೈವಿಕ ಭಯದಿಂದ ವ್ಯಕ್ತಿಗತವಾಗಿಯೂ, ಸತ್ಯಾರಾಧಕರ ಒಂದು ಗುಂಪಾಗಿಯೂ ನಮಗೆ ಹೇಗೆ ಪ್ರಯೋಜನ ಆಗುತ್ತದೆ? ಜ್ಞಾನೋಕ್ತಿ ಅಧ್ಯಾಯ 14ರ, 26ರಿಂದ 35ನೇ ವಚನಗಳು ಈ ಪ್ರಶ್ನೆಗಳಿಗೆ ಉತ್ತರವನ್ನು ಕೊಡುತ್ತವೆ. *

‘ಬಲವಾದ ಭರವಸೆಯ’ ಮೂಲ

ಸೊಲೊಮೋನನು ಹೇಳಿದ್ದು: “ಯೆಹೋವನಿಗೆ ಭಯಪಡುವದರಿಂದ ಕೇವಲ ನಿರ್ಭಯ [“ಬಲವಾದ ಭರವಸೆ,” NIBV]; ಆತನ ಮಕ್ಕಳಿಗೆ ಆಶ್ರಯವಿದ್ದೇ ಇರುವದು.” (ಜ್ಞಾನೋಕ್ತಿ 14:26) ದೇವಭಯವುಳ್ಳ ವ್ಯಕ್ತಿಯೊಬ್ಬನ ಭರವಸೆಯ ಮೂಲ, ನಿಷ್ಠಾವಂತ ಹಾಗೂ ಸರ್ವಶಕ್ತ ದೇವರಾದ ಯೆಹೋವನೇ ಆಗಿರುತ್ತಾನೆ. ಆದುದರಿಂದಲೇ ಇಂಥ ವ್ಯಕ್ತಿಯು ಬಲವಾದ ಭರವಸೆಯಿಂದ ಭವಿಷ್ಯಕ್ಕೆ ಎದುರುನೋಡುತ್ತಿರುವುದರಲ್ಲಿ ಏನೂ ಆಶ್ಚರ್ಯವಿಲ್ಲ! ಅವನ ಭವಿಷ್ಯತ್ತು ದೀರ್ಘವೂ ಸಂತುಷ್ಟಿಕರವೂ ಆಗಿರುತ್ತದೆ.

ಆದರೆ ಈ ಲೋಕದ ಯೋಜನೆಗಳು, ಸಂಘಟನೆಗಳು, ಭಾವನಾಶಾಸ್ತ್ರಗಳು ಮತ್ತು ಅದರ ಸರಕುಗಳ ಮೇಲೆ ತಮ್ಮ ಭರವಸೆಯನ್ನಿಡುವವರ ಭವಿಷ್ಯದ ಕುರಿತಾಗಿ ಏನು ಹೇಳಬಹುದು? ಅವರು ನಿರೀಕ್ಷಿಸಬಹುದಾದ ಯಾವುದೇ ಭವಿಷ್ಯತ್ತು ಅಲ್ಪಕಾಲಿಕವಾಗಿರುವುದು. ಏಕೆಂದರೆ ಬೈಬಲ್‌ ಹೀಗನ್ನುತ್ತದೆ: “ಲೋಕವೂ ಅದರ ಆಶೆಯೂ ಗತಿಸಿ ಹೋಗುತ್ತವೆ; ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.” (1 ಯೋಹಾನ 2:17) ಹೀಗಿರುವಾಗ, ‘ಲೋಕವನ್ನಾಗಲಿ ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಲು’ ನಮಗೆ ಯಾವುದೇ ಕಾರಣವು ಉಳಿದಿದೆಯೊ?​—⁠1 ಯೋಹಾನ 2:⁠15.

ದೇವಭಯವುಳ್ಳ ಹೆತ್ತವರು ತಮ್ಮ ಮಕ್ಕಳಿಗೆ “ಆಶ್ರಯ”ವಿರುವಂತೆ ಯಾವ ಕ್ರಮಗಳನ್ನು ಕೈಗೊಳ್ಳಬಹುದು? “ಮಕ್ಕಳಿರಾ, ಬನ್ನಿರಿ, ನನ್ನ ಮಾತನ್ನು ಕೇಳಿರಿ; ನಾನು ಯೆಹೋವನ ಭಯವನ್ನು ನಿಮಗೆ ಕಲಿಸುವೆನು” ಎಂದು ಕೀರ್ತನೆಗಾರನು ಹಾಡಿದನು. (ಕೀರ್ತನೆ 34:11) ಹೆತ್ತವರು ತಮ್ಮ ಮಾದರಿ ಹಾಗೂ ಉಪದೇಶದ ಮುಖಾಂತರ ದೇವರಿಗೆ ಭಯಪಡುವಂತೆ ಮಕ್ಕಳಿಗೆ ಕಲಿಸುವಾಗ, ಅವರು ದೊಡ್ಡವರಾಗಿ ಯೆಹೋವನಲ್ಲಿ ಬಲವಾದ ಭರವಸೆಯಿರುವ ಸ್ತ್ರೀಪುರುಷರಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.​—⁠ಜ್ಞಾನೋಕ್ತಿ 22:⁠6.

ಸೊಲೊಮೋನನು ಮುಂದುವರಿಸಿ ಹೇಳಿದ್ದು: “ಯೆಹೋವನ ಭಯ ಜೀವದ ಬುಗ್ಗೆ; ಮೃತ್ಯುಪಾಶದಿಂದ ತಪ್ಪಿಸಿಕೊಳ್ಳಲು ಅದು ಸಾಧನ.” (ಜ್ಞಾನೋಕ್ತಿ 14:27) ಯೆಹೋವನ ಭಯ “ಜೀವದ ಬುಗ್ಗೆ”ಯಾಗಿದೆ, ಯಾಕಂದರೆ ಸತ್ಯ ದೇವರಾಗಿರುವ ಈತನು “ಜೀವಜಲದ ಬುಗ್ಗೆ” ಆಗಿದ್ದಾನೆ. (ಯೆರೆಮೀಯ 2:13) ಯೆಹೋವನ ಮತ್ತು ಯೇಸು ಕ್ರಿಸ್ತನ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುವುದರಿಂದ ನಮಗೆ ನಿತ್ಯಜೀವ ಸಿಗಬಲ್ಲದು. (ಯೋಹಾನ 17:⁠3) ದೇವಭಯವು ನಮ್ಮನ್ನು ಮರಣದ ಪಾಶಗಳಿಂದಲೂ ತಪ್ಪಿಸಬಲ್ಲದು. ಹೇಗೆ? ಜ್ಞಾನೋಕ್ತಿ 13:14 ತಿಳಿಸುವುದು: “ಜ್ಞಾನಿಯ ಬೋಧೆ ಜೀವದ ಬುಗ್ಗೆ; ಅದನ್ನಾಲಿಸುವವನು ಮೃತ್ಯುಪಾಶದಿಂದ ತಪ್ಪಿಸಿಕೊಳ್ಳುವನು.” ನಾವು ಯೆಹೋವನಿಗೆ ಭಯಪಡುವಾಗ, ಆತನ ಆಜ್ಞೆಗಳಿಗೆ ವಿಧೇಯರಾಗುವಾಗ ಮತ್ತು ಆತನ ವಾಕ್ಯವು ನಮ್ಮ ಹೆಜ್ಜೆಗಳನ್ನು ಮಾರ್ಗದರ್ಶಿಸುವಂತೆ ಅನುಮತಿಸುವಾಗ, ಅಕಾಲಿಕ ಮರಣಕ್ಕೆ ನಡೆಸಬಲ್ಲ ಹಾನಿಕರ ರೂಢಿಗಳು ಮತ್ತು ಭಾವೋದ್ವೇಗಗಳಿಂದ ನಮ್ಮನ್ನೇ ಸಂರಕ್ಷಿಸಿಕೊಳ್ಳುತ್ತೇವಲ್ಲವೊ?

“ರಾಜನ ಮಹಿಮೆ”

ಸೊಲೊಮೋನನ ಆಳ್ವಿಕೆಯ ಅವಧಿಯಲ್ಲಿ ಹೆಚ್ಚಿನ ಸಮಯ ಅವನು ಯೆಹೋವನಿಗೆ ವಿಧೇಯನಾಗಿದ್ದ ದೇವಭಯವುಳ್ಳ ರಾಜನಾಗಿದ್ದನು. ಇದರಿಂದಾಗಿ ಅವನ ಆಳ್ವಿಕೆಯು ಯಶಸ್ವಿಯಾಯಿತು. ಒಬ್ಬ ರಾಜನು ಎಷ್ಟು ಚೆನ್ನಾಗಿ ಆಳುತ್ತಾನೆಂಬುದನ್ನು ಹೇಗೆ ನಿರ್ಧರಿಸಲಾಗುತ್ತದೆ? ಜ್ಞಾನೋಕ್ತಿ 14:28 ಉತ್ತರಿಸುವುದು: “ಪ್ರಜೆಗಳ ವೃದ್ಧಿ ರಾಜನ ಮಹಿಮೆ; ಪ್ರಜೆಗಳ ಕ್ಷಯ ಪ್ರಭುವಿಗೆ ಭಯ.” ಒಬ್ಬ ರಾಜನ ಯಶಸ್ಸನ್ನು, ಅವನ ಪ್ರಜೆಗಳ ಕ್ಷೇಮದ ಆಧಾರದ ಮೇಲೆ ಅಳೆಯಲಾಗುತ್ತದೆ. ಒಂದು ದೊಡ್ಡ ಜನಸಮೂಹವು ಅವನ ಆಳಿಕೆಯಡಿಯಲ್ಲಿ ಇರಲು ಆಶಿಸುವುದಾದರೆ, ಇದರರ್ಥ ಅವನೊಬ್ಬ ಒಳ್ಳೇ ಅಧಿಪತಿಯಾಗಿದ್ದಾನೆ. ಸೊಲೊಮೋನನಿಗೆ, “[ಕೆಂಪು] ಸಮುದ್ರದಿಂದ [ಮೆಡಿಟರೇನಿಯನ್‌] ಸಮುದ್ರದ ವರೆಗೂ [ಯೂಫ್ರೇಟೀಸ್‌] ನದಿಯಿಂದ ಭೂಮಿಯ ಕಟ್ಟಕಡೆಯ ವರೆಗೂ” ಪ್ರಜೆಗಳಿದ್ದರು. (ಕೀರ್ತನೆ 72:6-8) ಅವನ ಆಳ್ವಿಕೆಯು ಹಿಂದೆಂದೂ ಇದ್ದಿರದಷ್ಟು ಶಾಂತಿ ಮತ್ತು ಸಮೃದ್ಧಿಯಿಂದ ಕೂಡಿತ್ತು. (1 ಅರಸುಗಳು 4:​24, 25) ಸೊಲೊಮೋನನ ಆಳ್ವಿಕೆಯು ಯಶಸ್ವಿಕರವಾಗಿತ್ತು. ಇನ್ನೊಂದು ಪಕ್ಕದಲ್ಲಿ, ಒಬ್ಬ ಪ್ರಭುವು ಒಂದುವೇಳೆ ಜನಸಾಮಾನ್ಯರಿಂದ ಮೆಚ್ಚುಗೆಯನ್ನು ಪಡೆಯದಿರುವಲ್ಲಿ ಅದು ಅವನಿಗೆ ಅವಮಾನವಾಗಿರುತ್ತದೆ.

ಈ ವಿಷಯದಲ್ಲಿ, ಮಹಾ ಸೊಲೊಮೋನನಾಗಿರುವ ಮೆಸ್ಸೀಯ ರಾಜನಾದ ಯೇಸು ಕ್ರಿಸ್ತನ ಮಹಿಮೆಯ ಕುರಿತು ಏನು ಹೇಳಸಾಧ್ಯವಿದೆ? ಈಗಿರುವ ಅವನ ಪ್ರಜೆಗಳ ಕುರಿತಾಗಿ ಯೋಚಿಸಿರಿ. ಲೋಕದ ಒಂದು ಮೂಲೆಯಿಂದ ಇನ್ನೊಂದು ಮೂಲೆಯ ವರೆಗೂ, ಈಗಾಗಲೇ 60 ಲಕ್ಷಕ್ಕಿಂತಲೂ ಹೆಚ್ಚು ಮಂದಿ ದೇವಭಯವುಳ್ಳ ಸ್ತ್ರೀಪುರುಷರು ಕ್ರಿಸ್ತನ ಆಳ್ವಿಕೆಯ ಕೆಳಗೆ ಜೀವಿಸಲು ಆಯ್ಕೆಮಾಡಿದ್ದಾರೆ. ಅವರು ಯೇಸುವಿನಲ್ಲಿ ನಂಬಿಕೆಯಿಡುತ್ತಾರೆ ಮತ್ತು ಜೀವವುಳ್ಳ ದೇವರ ಸತ್ಯಾರಾಧನೆಯಲ್ಲಿ ಐಕ್ಯರಾಗಿದ್ದಾರೆ. (ಯೋಹಾನ 14:⁠1) ದೇವರ ಸ್ಮರಣೆಯಲ್ಲಿರುವವರೆಲ್ಲರೂ ಸಹಸ್ರವರ್ಷಗಳ ಆಳ್ವಿಕೆಯು ಅಂತ್ಯವಾಗುವುದರೊಳಗೆ ಪುನರುತ್ಥಾನಗೊಳಿಸಲ್ಪಡುವರು. ಆಗ ಪರದೈಸ ಭೂಮಿಯು, ತಮ್ಮ ರಾಜನಿಗಾಗಿ ಗಣ್ಯತೆಯನ್ನು ವ್ಯಕ್ತಪಡಿಸಿರುವ ಸಂತೋಷಭರಿತ, ನೀತಿವಂತ ಜನರಿಂದ ತುಂಬಿಕೊಂಡಿರುವುದು. ಕ್ರಿಸ್ತನ ಆಳ್ವಿಕೆಯ ಯಶಸ್ಸಿಗೆ ಅದೆಂಥ ಸಾಕ್ಷ್ಯವಾಗಿರುವುದು! ಹೀಗಿರುವುದರಿಂದ, ನಮ್ಮ ಅದ್ಭುತಕರವಾದ ಈ ರಾಜ್ಯ ನಿರೀಕ್ಷೆಗೆ ನಾವು ಬಿಗಿಯಾಗಿ ಅಂಟಿಕೊಳ್ಳೋಣ.

ಆಧ್ಯಾತ್ಮಿಕ ಮತ್ತು ಶಾರೀರಿಕ ಪ್ರಯೋಜನಗಳು

ದೇವರ ಕಡೆಗಿನ ಪೂಜ್ಯಭಾವನೆಯ ಭಯವು ನಮಗೆ ಪ್ರಶಾಂತ ಹೃದಯ ಹಾಗೂ ಸಮಾಧಾನಭರಿತ ಮನಸ್ಸನ್ನು ಕೊಡಬಲ್ಲದು. ಇದಕ್ಕೆ ಕಾರಣವೇನೆಂದರೆ, ವಿವೇಕದ ಅನೇಕ ಮುಖಗಳಲ್ಲಿ ಒಳ್ಳೇ ತೀರ್ಮಾನಶಕ್ತಿ ಹಾಗೂ ವಿವೇಚನಾಶಕ್ತಿಯೂ ಒಳಗೂಡಿದೆ. ಜ್ಞಾನೋಕ್ತಿ 14:29 ತಿಳಿಸುವುದು: “ದೀರ್ಘಶಾಂತನು ಕೇವಲ ಬುದ್ಧಿವಂತನು” ಇಲ್ಲವೆ ವಿವೇಚನಾಶಕ್ತಿಯಲ್ಲಿ ಸಮೃದ್ಧನು, ಆದರೆ “ಮುಂಗೋಪಿಯು” ಅಥವಾ ಅಸಹನೆಯುಳ್ಳವನು “ಮೂರ್ಖತನವನ್ನು [ಧ್ವಜವಾಗಿ] ಎತ್ತುವನು.” ಅನಿಯಂತ್ರಿತ ಕೋಪವು ನಮ್ಮ ಆಧ್ಯಾತ್ಮಿಕತೆಯ ಮೇಲೆ ಹಾನಿಕರವಾದ ಪರಿಣಾಮವನ್ನು ಬೀರಬಲ್ಲದೆಂಬುದನ್ನು ಗ್ರಹಿಸುವಂತೆ ವಿವೇಚನಾಶಕ್ತಿಯು ನಮಗೆ ಸಹಾಯಮಾಡಬಲ್ಲದು. ನಮ್ಮನ್ನು ‘ದೇವರ ರಾಜ್ಯಕ್ಕೆ ಬಾಧ್ಯರಾಗುವುದರಿಂದ’ ತಡೆಯಬಲ್ಲ ಕೆಲಸಗಳ ಪಟ್ಟಿಯಲ್ಲಿ, “ಹಗೆತನ ಜಗಳ ಹೊಟ್ಟೇಕಿಚ್ಚು ಸಿಟ್ಟು ಕಕ್ಷಭೇದ ಭಿನ್ನಮತ” ಇವುಗಳನ್ನು ಒಳಗೂಡಿಸಲಾಗಿದೆ. (ಗಲಾತ್ಯ 5:19-21) ನ್ಯಾಯವಾದ ಕೋಪವನ್ನು ಸಹ ಮನಸ್ಸಲ್ಲಿ ಇಟ್ಟುಕೊಳ್ಳುವುದರ ವಿರುದ್ಧ ನಮಗೆ ಸಲಹೆ ನೀಡಲಾಗಿದೆ. (ಎಫೆಸ 4:​26, 27) ಅಲ್ಲದೆ ಅಸಹನೆಯುಳ್ಳವರಾಗಿರುವುದು ನಾವು ಮುಂದಕ್ಕೆ ವಿಷಾದಪಡುವಂಥ ರೀತಿಯ ಮೂರ್ಖ ಮಾತುಗಳು ಹಾಗೂ ಕ್ರಿಯೆಗಳಿಗೆ ನಡೆಸಬಲ್ಲದು.

ಕೋಪದಿಂದುಂಟಾಗುವ ಹಾನಿಕಾರಕ ಶಾರೀರಿಕ ಪರಿಣಾಮಗಳ ಕುರಿತು ಇಸ್ರಾಯೇಲಿನ ರಾಜನು ಹೇಳುವುದು: “ಶಾಂತಿಗುಣವು ದೇಹಕ್ಕೆ ಜೀವಾಧಾರವು; ಕ್ರೋಧವು ಎಲುಬಿಗೆ ಕ್ಷಯವು.” (ಜ್ಞಾನೋಕ್ತಿ 14:30) ಕೋಪಕ್ರೋಧಗಳಿಂದ ಉಂಟಾಗುವ ಕಾಯಿಲೆಗಳಲ್ಲಿ, ಶ್ವಾಸಸಂಬಂಧಿತ ತೊಂದರೆಗಳು, ಅಧಿಕ ರಕ್ತದೊತ್ತಡ, ಪಿತ್ತಜನಕಾಂಗದ ಅಸ್ವಸ್ಥತೆಗಳು ಮತ್ತು ಮೇದೋಜೀರಕ ಗ್ರಂಥಿಯ ಮೇಲಿನ ಹಾನಿಕರ ಪರಿಣಾಮಗಳು ಒಳಗೂಡಿರುತ್ತವೆ. ವೈದ್ಯರು ಕೋಪ ಮತ್ತು ಕ್ರೋಧವನ್ನು ಹೊಟ್ಟೆಹುಣ್ಣುಗಳು, ಚರ್ಮದ ಮೇಲಿನ ಗುಳ್ಳೆಗಳು, ಉಬ್ಬಸ, ಚರ್ಮರೋಗಗಳು ಮತ್ತು ಪಚನಕ್ರಿಯೆಸಂಬಂಧಿತ ಸಮಸ್ಯೆಗಳಂಥ ರೋಗಗಳನ್ನು ಹೆಚ್ಚಿಸಬಲ್ಲ ಇಲ್ಲವೆ ಉಂಟುಮಾಡಬಲ್ಲ ಭಾವವೇಶಗಳ ಪಟ್ಟಿಯಲ್ಲಿ ಸೇರಿಸುತ್ತಾರೆ. ಇನ್ನೊಂದು ಬದಿಯಲ್ಲಿ, “ಸಮಾಧಾನದಿಂದಿರುವ ಹೃದಯವು ದೇಹಕ್ಕೆ ಜೀವಕೊಡುತ್ತದೆ.” (ಜ್ಞಾನೋಕ್ತಿ 14:​30, ನ್ಯೂ ಇಂಟರ್‌ನ್ಯಾಷನಲ್‌ ವರ್ಷನ್‌) ಆದುದರಿಂದ “ಸಮಾಧಾನಕ್ಕೂ ಪರಸ್ಪರ ಭಕ್ತಿವೃದ್ಧಿಗೂ ಅನುಕೂಲವಾಗಿರುವವುಗಳನ್ನು ಸಾಧಿಸಿ”ಕೊಳ್ಳುವುದು ವಿವೇಕಯುತವಾಗಿದೆ.​—⁠ರೋಮಾಪುರ 14:⁠19.

ದೇವಭಯವು ನಮಗೆ ಪಕ್ಷಪಾತವಿಲ್ಲದವರಾಗಿರಲು ಸಹಾಯಮಾಡುತ್ತದೆ

ಸೊಲೊಮೋನನು ಹೇಳಿದ್ದು: “ಬಡವರನ್ನು ಹಿಂಸಿಸುವವನು ಸೃಷ್ಟಿಕರ್ತನನ್ನು ಹೀನೈಸುವನು; ಗತಿಯಿಲ್ಲದವರನ್ನು ಕರುಣಿಸುವವನು ಆತನನ್ನು ಘನಪಡಿಸುವನು.” (ಜ್ಞಾನೋಕ್ತಿ 14:31) ಎಲ್ಲ ಮಾನವರಿಗೂ ಯೆಹೋವ ದೇವರೆಂಬ ಒಬ್ಬನೇ ನಿರ್ಮಾಣಿಕನಿದ್ದಾನೆಂದು ದೇವಭಯವುಳ್ಳ ವ್ಯಕ್ತಿಯೊಬ್ಬನು ಗ್ರಹಿಸುತ್ತಾನೆ. ಆದುದರಿಂದ ಬಡವನು ಸಹ ಒಬ್ಬ ಜೊತೆ ಮಾನವನಾಗಿದ್ದಾನೆ, ಮತ್ತು ಅವನೊಂದಿಗೆ ಹೇಗೆ ವರ್ತಿಸಲಾಗುತ್ತದೊ ಅದು ಮಾನವಕುಲದ ಸೃಷ್ಟಿಕರ್ತನ ಮೇಲೆ ಪ್ರಭಾವ ಬೀರುತ್ತದೆ. ದೇವರನ್ನು ಘನಪಡಿಸಲಿಕ್ಕಾಗಿ ನಾವು ಇತರರೊಂದಿಗೆ ನ್ಯಾಯವಾಗಿ ಮತ್ತು ನಿಷ್ಪಕ್ಷಪಾತದಿಂದ ವ್ಯವಹರಿಸಬೇಕು. ಬಡವನಾಗಿರುವ ಕ್ರೈಸ್ತನಿಗೂ ಪಕ್ಷಪಾತವಿಲ್ಲದೆ ಆಧ್ಯಾತ್ಮಿಕ ಗಮನ ಸಿಗಬೇಕು. ಬಡವರಾಗಿರಲಿ ಧನಿಕರಾಗಿರಲಿ ನಾವು ಎಲ್ಲರಿಗೂ ಸಮಾನವಾಗಿ ದೇವರ ರಾಜ್ಯದ ಸುವಾರ್ತೆಯನ್ನು ತಲಪಿಸಬೇಕು.

ದೈವಿಕ ಭಯದ ಇನ್ನೊಂದು ಪ್ರಯೋಜನಕ್ಕೆ ಸೂಚಿಸುತ್ತಾ ವಿವೇಕಿಯಾದ ರಾಜನು ಹೇಳುವುದು: “ದುಷ್ಟನು ವಿಪತ್ತಿಗೊಳಗಾಗಿ ಹಾಳಾಗುವನು; ಶಿಷ್ಟನು ಮರಣಕಾಲದಲ್ಲಿಯೂ [“ತನ್ನ ಸಮಗ್ರತೆಯಲ್ಲಿಯೂ,” NW] ಆಶ್ರಯಹೊಂದುವನು.” (ಜ್ಞಾನೋಕ್ತಿ 14:32) ದುಷ್ಟ ವ್ಯಕ್ತಿಯು ಹೇಗೆ ಹಾಳಾಗುವನು? ಇದರರ್ಥ, ಅವನೊಂದು ಆಪತ್ತಿಗೆ ಸಿಲುಕುವಾಗ ಅದರಿಂದ ಚೇತರಿಸಿಕೊಳ್ಳುವ ಯಾವುದೇ ಸಂಭಾವ್ಯತೆ ಅವನಿಗಿರುವುದಿಲ್ಲ ಎಂದು ಸೂಚಿಸಲಾಗಿದೆ. ಇನ್ನೊಂದು ಬದಿಯಲ್ಲಿ, ಆಪತ್ತು ಬಡಿಯುವಾಗ, ದೇವಭಯವುಳ್ಳ ವ್ಯಕ್ತಿಯೊಬ್ಬನು ದೇವರ ಕಡೆಗಿನ ತನ್ನ ಸಮಗ್ರತೆಯಲ್ಲಿ ಆಶ್ರಯವನ್ನು ಪಡೆಯುತ್ತಾನೆ. ಮರಣದ ವರೆಗೂ ಯೆಹೋವನಲ್ಲಿ ಸಂಪೂರ್ಣ ಭರವಸೆಯಿಡುತ್ತಾ, ಯೋಬನಂಥದ್ದೇ ದೃಢನಿರ್ಧಾರವನ್ನು ಅವನು ತೋರಿಸುತ್ತಾನೆ. ಯೋಬನು ಹೇಳಿದ್ದು: “ಸಾಯುವ ತನಕ ನನ್ನ ಯಥಾರ್ಥತ್ವದ” ಇಲ್ಲವೆ ಸಮಗ್ರತೆಯ “ಹೆಸರನ್ನು ಕಳಕೊಳ್ಳೆನು.”​—⁠ಯೋಬ 27:⁠5.

ಸಮಗ್ರತೆಯನ್ನು ಕಾಪಾಡಿಕೊಳ್ಳುವುದಕ್ಕೆ ದೈವಿಕ ಭಯ ಹಾಗೂ ವಿವೇಕ ಆವಶ್ಯಕ. ಹಾಗಾದರೆ ವಿವೇಕವನ್ನು ಎಲ್ಲಿ ಕಂಡುಕೊಳ್ಳಸಾಧ್ಯವಿದೆ? “ವಿವೇಕಿಯ ಹೃದಯ ಜ್ಞಾನಾಶ್ರಯ; ಜ್ಞಾನಹೀನನ ಒಳಗುಟ್ಟು ರಟ್ಟು” ಎಂದು ಜ್ಞಾನೋಕ್ತಿ 14:33 ಉತ್ತರಿಸುತ್ತದೆ. ಹೌದು, ತಿಳಿವಳಿಕೆಯುಳ್ಳ ವ್ಯಕ್ತಿಯೊಬ್ಬನ ಹೃದಯದಲ್ಲಿ ವಿವೇಕವನ್ನು ಕಂಡುಕೊಳ್ಳಸಾಧ್ಯವಿದೆ. ಆದರೆ ವಿವೇಕವು ಜ್ಞಾನಹೀನರ ನಡುವೆ ಹೇಗೆ ಪ್ರಕಟವಾಗುತ್ತದೆ? ಒಂದು ಪರಾಮರ್ಶೆ ಕೃತಿಗನುಸಾರ, “ತಾನು ವಿವೇಕಿಯೆಂದು ತೋರಿಸಲು ತುದಿಗಾಲಲ್ಲಿ ನಿಂತಿರುವ ಮೂರ್ಖನು, ಅವನೇನನ್ನು ವಿವೇಕದ ಮಾತೆಂದು ನೆನಸುತ್ತಾನೊ ಅದನ್ನು ಒದರಿಬಿಡುತ್ತಾನೆ, ಆದರೆ ಅದು ಮೂಢತನವಾಗಿ ಪರಿಣಮಿಸುತ್ತದೆ.”

‘ಪ್ರಜೆಗೆ ಉನ್ನತಿ’

ಇಸ್ರಾಯೇಲಿನ ರಾಜನು ಈಗ ನಮ್ಮ ಗಮನವನ್ನು, ದೇವರ ಭಯವು ಒಬ್ಬ ವ್ಯಕ್ತಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ವಿಷಯದಿಂದ, ಅದು ಒಂದು ಇಡೀ ಜನಾಂಗದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ವಿಷಯಕ್ಕೆ ತಿರುಗಿಸುತ್ತಾನೆ. ಅವನು ಹೇಳುವುದು: “ಪ್ರಜೆಗೆ ಧರ್ಮವು ಉನ್ನತಿ, ಅಧರ್ಮವು ಅವಮಾನ.” (ಜ್ಞಾನೋಕ್ತಿ 14:34) ಇಸ್ರಾಯೇಲ್‌ ಜನಾಂಗದ ವಿಷಯದಲ್ಲಿ ಈ ಮೂಲತತ್ತ್ವವು ಎಷ್ಟು ಸ್ಪಷ್ಟವಾಗಿ ತೋರಿಸಲ್ಪಟ್ಟಿತು! ದೇವರ ಉಚ್ಚ ಮಟ್ಟಗಳಿಗೆ ಅಂಟಿಕೊಳ್ಳುವ ಮೂಲಕ ಇಸ್ರಾಯೇಲ್‌ ಜನಾಂಗವು ಅದರ ಸುತ್ತಮುತ್ತಲಿನ ಜನಾಂಗಗಳಿಗಿಂತ ಉನ್ನತಿಗೇರಿತು. ಆದರೆ ಆ ಜನಾಂಗವು ಪದೇ ಪದೇ ನಡೆಸಿದ ಅವಿಧೇಯ ಕೃತ್ಯಗಳು, ಅದರ ಅವಮಾನಕ್ಕೂ, ಕಟ್ಟಕಡೆಗೆ ಅದು ದೇವರಿಂದ ತಿರಸ್ಕರಿಸಲ್ಪಡುವುದಕ್ಕೂ ನಡೆಸಿದವು. ಈ ಮೂಲತತ್ತ್ವವು ಇಂದು ದೇವಜನರಿಗೆ ಅನ್ವಯವಾಗುತ್ತದೆ. ಕ್ರೈಸ್ತ ಸಭೆಯು ಲೋಕದಿಂದ ಭಿನ್ನವಾಗಿದೆ ಏಕೆಂದರೆ ಅದು ದೇವರ ನೀತಿಯ ಮೂಲತತ್ತ್ವಗಳಿಗೆ ಅಂಟಿಕೊಳ್ಳುತ್ತದೆ. ಆದರೆ ಆ ಉನ್ನತ ಸ್ಥಾನದಲ್ಲೇ ಮುಂದುವರಿಯಲಿಕ್ಕಾಗಿ, ನಮ್ಮಲ್ಲಿ ಒಬ್ಬೊಬ್ಬರೂ ಶುದ್ಧ ಜೀವನವನ್ನು ನಡೆಸಬೇಕು. ಪಾಪಾಚರಣೆಯು ವೈಯಕ್ತಿಕವಾಗಿ ನಮಗೇ ಅವಮಾನವನ್ನಲ್ಲದೆ, ಸಭೆಗೂ ದೇವರಿಗೂ ನಿಂದೆಯನ್ನು ಬರಮಾಡುತ್ತದೆ.

ರಾಜನೊಬ್ಬನಿಗೆ ಯಾವುದು ಹರ್ಷವನ್ನು ತರುತ್ತದೆಂಬುದನ್ನು ವ್ಯಕ್ತಪಡಿಸುತ್ತಾ ಸೊಲೊಮೋನನು ಹೇಳುವುದು: “ಜಾಣನಾದ ಸೇವಕನಿಗೆ ರಾಜನ ಕೃಪೆ; ಮಾನಗೇಡಿಗೆ ರಾಜನ ರೌದ್ರ.” (ಜ್ಞಾನೋಕ್ತಿ 14:35) ಮತ್ತು ಜ್ಞಾನೋಕ್ತಿ 16:13 ತಿಳಿಸುವುದು: “ರಾಜರು ಸತ್ಯದ ತುಟಿಗಳನ್ನು ಮೆಚ್ಚುವರು; ಯಥಾರ್ಥವಾದಿಯನ್ನು ಪ್ರೀತಿಸುವರು.” ಹೌದು, ನಮ್ಮ ನಾಯಕನೂ ರಾಜನೂ ಆಗಿರುವ ಯೇಸು ಕ್ರಿಸ್ತನು, ನಾವು ನೀತಿಯಿಂದ ಮತ್ತು ಒಳನೋಟದಿಂದ ಕಾರ್ಯವೆಸಗುತ್ತಾ, ರಾಜ್ಯ ಸಾರುವಿಕೆ ಹಾಗೂ ಶಿಷ್ಯರನ್ನಾಗಿ ಮಾಡುವ ಚಟುವಟಿಕೆಯಲ್ಲಿ ನಮ್ಮ ತುಟಿಗಳನ್ನು ಬಳಸುವಾಗ ಬಹಳ ಸಂತೋಷಪಡುತ್ತಾನೆ. ಹೀಗಿರುವುದರಿಂದ, ನಾವು ಈ ಕೆಲಸದಲ್ಲಿ ಕಾರ್ಯಮಗ್ನರಾಗಿದ್ದು, ಅದೇ ಸಮಯದಲ್ಲಿ ಸತ್ಯ ದೇವರಿಗೆ ಭಯಪಡುವುದರಿಂದ ಬರುವ ಆಶೀರ್ವಾದಗಳಲ್ಲಿ ಆನಂದಿಸೋಣ.

[ಪಾದಟಿಪ್ಪಣಿ]

^ ಪ್ಯಾರ. 3 ಜ್ಞಾನೋಕ್ತಿ 14:​1-25ರ ವರೆಗಿನ ಚರ್ಚೆಗಾಗಿ, ಕಾವಲಿನಬುರುಜು ಪತ್ರಿಕೆಯ ನವೆಂಬರ್‌ 15, 2004, ಪುಟಗಳು 26-9ನ್ನು ಮತ್ತು ಜುಲೈ 15, 2005, ಪುಟಗಳು 17-20ನ್ನು ನೋಡಿ.

[ಪುಟ 15ರಲ್ಲಿರುವ ಚಿತ್ರ]

ದೈವಿಕ ಭಯವು ಕಲಿಸಸಾಧ್ಯವಿರುವ ವಿಷಯವಾಗಿದೆ