ನನ್ನ ತಂದೆತಾಯಿಯ ಮಾದರಿ ನನ್ನನ್ನು ಬಲಪಡಿಸಿತು
ಜೀವನ ಕಥೆ
ನನ್ನ ತಂದೆತಾಯಿಯ ಮಾದರಿ ನನ್ನನ್ನು ಬಲಪಡಿಸಿತು
ಯಾನೆಸ್ ರೀಕೆಲ್ ಅವರು ಹೇಳಿದಂತೆ
ಅದು ಇಸವಿ 1958 ಆಗಿತ್ತು. ನಾನು ಮತ್ತು ನನ್ನ ಪತ್ನಿ ಸ್ಟಾಂಕಾ ಆಸ್ಟ್ರೀಯಕ್ಕೆ ಪಲಾಯನ ಮಾಡಲಿಕ್ಕಾಗಿ, ಯುಗೊಸ್ಲಾವ್-ಆಸ್ಟ್ರೀಯ ಗಡಿಯಲ್ಲಿರುವ ಕಾರವಾಂಕನ್ ಆಲ್ಪ್ಸ್ ಪರ್ವತಗಳ ಮೇಲಿದ್ದೆವು. ಇದು ಅಪಾಯಕಾರಿಯಾಗಿತ್ತು, ಏಕೆಂದರೆ ಯುಗೊಸ್ಲಾವ್ ಗಡಿಯಲ್ಲಿ ಗಸ್ತುತಿರುಗುತ್ತಿದ್ದ ಶಸ್ತ್ರಸಜ್ಜಿತ ಸೈನಿಕರು ಯಾರೂ ಗಡಿ ದಾಟಿಹೋಗದಂತೆ ಕಾಯಲು ದೃಢಮನಸ್ಕರಾಗಿದ್ದರು. ನಾವು ಮುಂದೆ ಹೋಗುತ್ತಿದ್ದಂತೆ ಕಡಿದಾದ ಪ್ರಪಾತದ ಅಂಚಿಗೆ ಬಂದುತಲಪಿದೆವು. ಈ ಪರ್ವತಗಳ ಆಸ್ಟ್ರೀಯದ ಮಗ್ಗುಲನ್ನು ನಾವು ಈ ಮೊದಲು ನೋಡಿರಲಿಲ್ಲ. ನಾವು ಪೂರ್ವ ದಿಕ್ಕಿಗೆ ನಡೆಯುತ್ತ ಬಂಡೆ ಮತ್ತು ಗರಸುಕಲ್ಲುಗಳಿಂದ ಕೂಡಿದ ಉಬ್ಬುತಗ್ಗುಗಳುಳ್ಳ ಇಳಿಜಾರಿಗೆ ಬಂದೆವು. ನಮ್ಮ ಬಳಿಯಿದ್ದ ದಪ್ಪ ಟಾರ್ಪಾಲಿನನ್ನು ನಮಗೆ ಬಿಗಿದುಕೊಂಡು, ನಾವು ಆ ಪರ್ವತದ ಪಕ್ಕದಿಂದ ಜಾರುತ್ತಾ ಒಂದು ಅನಿಶ್ಚಿತ ಭವಿಷ್ಯದತ್ತ ಬಂದಿಳಿದೆವು.
ಈ ಸ್ಥಿತಿಗೆ ನಾವು ಹೇಗೆ ತಲಪಿದೆವು ಮತ್ತು ನನ್ನ ತಂದೆತಾಯಿಯ ನಂಬಿಗಸ್ತಿಕೆಯ ಮಾದರಿಯು ನಾನು ಈ ಕಷ್ಟಸಮಯದಲ್ಲಿ ನಿಷ್ಠಾವಂತನಾಗಿರುವಂತೆ ಹೇಗೆ ಸಹಾಯಮಾಡಿತೆಂಬುದನ್ನು ಹೇಳುತ್ತೇನೆ.
ನಾನು ಸ್ಲೊವೇನಿಯದಲ್ಲಿ ಬೆಳೆದೆ. ಈಗ ಅದು ಮಧ್ಯ ಯೂರೋಪಿನ ಒಂದು ಚಿಕ್ಕ ದೇಶವಾಗಿದೆ. ಈ ದೇಶ ಯೂರೋಪಿಯನ್ ಆಲ್ಪ್ಸ್ ಪರ್ವತಗಳಲ್ಲಿದ್ದು, ಇದರ ಉತ್ತರಕ್ಕೆ ಆಸ್ಟ್ರೀಯ, ಪಶ್ಚಿಮಕ್ಕೆ ಇಟಲಿ, ದಕ್ಷಿಣಕ್ಕೆ ಕ್ರೊಏಷಿಯ ಮತ್ತು ಪೂರ್ವಕ್ಕೆ ಹಂಗೆರಿ ದೇಶ ಇದೆ. ಆದರೆ ನನ್ನ ತಂದೆತಾಯಿಯಾದ ಫ್ರಾನ್ಟ್ಸ್ ಮತ್ತು ರೋಸಲೀಯಾ ರೀಕೆಲ್ ಹುಟ್ಟಿದಾಗ ಸ್ಲೊವೇನಿಯವು ಆಸ್ಟ್ರೊ-ಹಂಗೆರಿಯನ್ ಸಾಮ್ರಾಜ್ಯದ ಭಾಗವಾಗಿತ್ತು. ಒಂದನೆಯ ಲೋಕಯುದ್ಧದ ಅಂತ್ಯದಲ್ಲಿ ಸ್ಲೊವೇನಿಯವು ಸರ್ಬ್, ಕ್ರೋಎಟ್ ಮತ್ತು ಸ್ಲೊವೀನ್ ಜನರ ರಾಜ್ಯವೆಂದು ಕರೆಯಲ್ಪಟ್ಟ ಒಂದು ಹೊಸ ರಾಜ್ಯದ ಭಾಗವಾಯಿತು. 1929ರಲ್ಲಿ ಆ ದೇಶದ ಹೆಸರನ್ನು “ದಕ್ಷಿಣ ಸ್ಲಾವಿಯ” ಎಂಬ ಅಕ್ಷರಾರ್ಥವಿರುವ ಯುಗೊಸ್ಲಾವಿಯ ಎಂಬುದಕ್ಕೆ ಬದಲಾಯಿಸಲಾಯಿತು. ಅದೇ ವರ್ಷದ ಜನವರಿ 9ರಂದು, ಲೇಕ್ ಬ್ಲೆಡ್ ಎಂಬ ರಮ್ಯ ಸರೋವರದ ಬಳಿ ಇರುವ ಪೋಡ್ಹೋಮ್ ಹಳ್ಳಿಯ ಹೊರ ವಲಯದಲ್ಲಿ ನಾನು ಹುಟ್ಟಿದೆ.
ನನ್ನ ತಾಯಿ ಕಟ್ಟುನಿಟ್ಟಾದ ಕ್ಯಾಥೊಲಿಕ್ ಕುಟುಂಬದಲ್ಲಿ ಬೆಳೆದು ಬಂದಿದ್ದರು. ಅವರ ಮಾವಂದಿರಲ್ಲಿ ಒಬ್ಬರು ಪಾದ್ರಿಯಾಗಿದ್ದರು ಮತ್ತು ಮೂವರು ಅತ್ತೆಯಂದಿರು ಕ್ರೈಸ್ತಮತದ ಸನ್ಯಾಸಿನಿಯರಾಗಿದ್ದರು. ತಾಯಿಗೆ ತನಗೊಂದು ಸ್ವಂತ ಬೈಬಲ್ ಇರಬೇಕು ಮತ್ತು ಅದನ್ನು ತಾನು ಓದಿ ತಿಳಿಯಬೇಕೆಂಬ ತೀವ್ರ ಬಯಕೆಯಿತ್ತು. ಆದರೆ ತಂದೆಯವರಿಗೆ ಧರ್ಮದ ವಿಷಯದಲ್ಲಿ ಒಳ್ಳೇ ಅಭಿಪ್ರಾಯವಿರಲಿಲ್ಲ. ಧರ್ಮವು 1914-18ರ ಮಹಾ ಯುದ್ಧದಲ್ಲಿ ವಹಿಸಿದ ಪಾತ್ರದಿಂದಾಗಿ ಅದರ ಬಗ್ಗೆ ಅವರಿಗೆ ಜುಗುಪ್ಸೆ ಹುಟ್ಟಿತ್ತು.
ಸತ್ಯವನ್ನು ಕಲಿತದ್ದು
ಆ ಯುದ್ಧ ಮುಗಿದ ಬಳಿಕ ನನ್ನ ತಾಯಿಯ ಸೋದರಸಂಬಂಧಿ ಯಾನೆಸ್ ಬ್ರೇಯಟ್ಸ್ ಮತ್ತು ಅವನ ಪತ್ನಿ ಆಂಚ್ಕಾ, ಬೈಬಲ್ ವಿದ್ಯಾರ್ಥಿಗಳಾದರು (ಯೆಹೋವನ ಸಾಕ್ಷಿಗಳ ಆಗಿನ ಹೆಸರು). ಆ ಸಮಯದಲ್ಲಿ ಅವರು ಆಸ್ಟ್ರೀಯದಲ್ಲಿ ವಾಸಿಸುತ್ತಿದ್ದರು. ಹೆಚ್ಚುಕಡಿಮೆ 1936ರಿಂದ, ಆಂಚ್ಕಾ ನನ್ನ ತಾಯಿಯನ್ನು ಅನೇಕ ಬಾರಿ ಸಂದರ್ಶಿಸಿದಳು. ಆಕೆ ನನ್ನ ತಾಯಿಗೆ ಒಂದು ಬೈಬಲನ್ನು ಕೊಡಲಾಗಿ ಅವರು ಅದರೊಂದಿಗೆ ಸ್ಲೊವೇನಿಯನ್ ಭಾಷೆಯ ಕಾವಲಿನಬುರುಜು ಮತ್ತು ಬೇರೆ ಬೈಬಲ್ ಸಾಹಿತ್ಯವನ್ನೂ ತುಂಬ ಉತ್ಸುಕತೆಯಿಂದ ಓದಿದರು. ಕೊನೆಗೆ ಹಿಟ್ಲರನು 1938ರಲ್ಲಿ ಆಸ್ಟ್ರೀಯವನ್ನು ಸ್ವಾಧೀನಮಾಡಿಕೊಂಡಾಗ ಯಾನೆಸ್ ಮತ್ತು ಆಂಚ್ಕಾ ಸ್ಲೊವೇನಿಯಕ್ಕೆ ಹಿಂದೆ ಹೋದರು. ಅವರು ಯೆಹೋವನ ಮೇಲೆ ನಿಜ ಪ್ರೀತಿಯನ್ನು ಹೊಂದಿದ್ದ ವಿದ್ಯಾವಂತ ಮತ್ತು ವಿವೇಚನಾಶಕ್ತಿಯುಳ್ಳ ದಂಪತಿಯಾಗಿದ್ದರೆಂಬುದನ್ನು ನಾನು ಈಗಲೂ ಜ್ಞಾಪಿಸಿಕೊಳ್ಳುತ್ತೇನೆ. ಅವರು ತಾಯಿಯೊಂದಿಗೆ ಅನೇಕ ಬಾರಿ ಬೈಬಲ್ ಸತ್ಯಗಳ ಕುರಿತು ಚರ್ಚಿಸುತ್ತಿದ್ದರು ಮತ್ತು ಇದು ತಾಯಿ ತನ್ನ ಜೀವನವನ್ನು ಯೆಹೋವನಿಗೆ ಸಮರ್ಪಿಸಿಕೊಳ್ಳುವಂತೆ ಪ್ರಚೋದಿಸಿತು. ಅವರು 1938ರಲ್ಲಿ ದೀಕ್ಷಾಸ್ನಾನ ಪಡೆದುಕೊಂಡರು.
ತಾಯಿಯು ಕ್ರಿಸ್ಮಸ್ ಆಚರಣೆಯಂಥ ಅಶಾಸ್ತ್ರೀಯ ಪದ್ಧತಿಗಳನ್ನು ಪಾಲಿಸುವುದನ್ನು ನಿಲ್ಲಿಸಿದಾಗ, ರಕ್ತ ಕೂಡಿದ ಸಾಸೆಜ್ ತಿನ್ನುವುದನ್ನು ನಿಲ್ಲಿಸಿದಾಗ ಮತ್ತು ವಿಶೇಷವಾಗಿ, ನಮ್ಮ ಬಳಿಯಿದ್ದ ಎಲ್ಲ ವಿಗ್ರಹಗಳನ್ನು ತೆಗೆದುಹಾಕಿ ಸುಟ್ಟುಬಿಟ್ಟಾಗ ಅದು ಆ ಕ್ಷೇತ್ರದಲ್ಲಿ ದೊಡ್ಡ ಗಲಭೆಯನ್ನು ಉಂಟುಮಾಡಿತು. ವಿರೋಧವು ಏಳಲು ತಡವಾಗಲಿಲ್ಲ. ಸಂನ್ಯಾಸಿನಿಯರಾಗಿದ್ದ ತಾಯಿಯ ಅತ್ತೆಯಂದಿರು ತಾಯಿಗೆ ಪತ್ರ ಬರೆದು, ಅವರು ಪುನಃ ಮರಿಯಳ ಬಳಿಗೂ ಚರ್ಚಿಗೂ ಹಿಂದಿರುಗುವಂತೆ ಮನವೊಪ್ಪಿಸಲು ಪ್ರಯತ್ನಿಸಿದರು. ಆದರೆ ತಾಯಿ ನಿರ್ದಿಷ್ಟ ಬೈಬಲ್ ಪ್ರಶ್ನೆಗಳಿಗೆ ಉತ್ತರವನ್ನು ಕೇಳುತ್ತಾ ಪತ್ರ ಬರೆದಾಗ, ಅವರಿಂದ ಯಾವ ಉತ್ತರವೂ ಬರಲಿಲ್ಲ. ನನ್ನ ಅಜ್ಜ ಕೂಡ ತಾಯಿಯನ್ನು ಬಲವಾಗಿ ವಿರೋಧಿಸಿದರು. ಅಜ್ಜ ಕೆಟ್ಟ ವ್ಯಕ್ತಿಯಾಗಿರಲಿಲ್ಲ, ಆದರೆ ನಮ್ಮ ಸಂಬಂಧಿಗಳು ಮತ್ತು ಸಮಾಜ ಅವರ ಮೇಲೆ ಬಹಳ ಒತ್ತಡವನ್ನು ಹೇರಿತು. ಇದರ ಪರಿಣಾಮವಾಗಿ, ಅವರು ಅನೇಕಾವರ್ತಿ ಬೈಬಲ್ ಸಾಹಿತ್ಯವನ್ನು ನಾಶಮಾಡಿದರೂ ತಾಯಿಯ ಬೈಬಲನ್ನು ಮಾತ್ರ ಮುಟ್ಟಲಿಲ್ಲ. ಅವರು ತಾಯಿಯ ಮುಂದೆ ಮೊಣಕಾಲೂರಿ ಚರ್ಚಿಗೆ ಹಿಂದಿರುಗುವಂತೆ ಕೇಳಿಕೊಂಡರು. ಅವರು ಚಾಕು ಹಿಡಿದು ತಾಯಿಯನ್ನು ಬೆದರಿಸಿದರು ಕೂಡ. ಆದರೆ ನನ್ನ ತಂದೆಯವರು ಅಂತಹ ವರ್ತನೆಯನ್ನು ತಾನು ಸಹಿಸುವುದಿಲ್ಲವೆಂದು ಅಜ್ಜನಿಗೆ ನೇರವಾಗಿ ಹೇಳಿದರು.
ಬೈಬಲನ್ನು ಓದಲು ಮತ್ತು ನಂಬಿಕೆಯ ವಿಷಯದಲ್ಲಿ ಸ್ವಂತ ನಿರ್ಣಯಗಳನ್ನು ಮಾಡಲು ತಾಯಿಗಿರುವ ಹಕ್ಕನ್ನು ತಂದೆ ಬೆಂಬಲಿಸುವುದನ್ನು ಮುಂದುವರಿಸಿದರು. ಇಸವಿ 1946ರಲ್ಲಿ ಅವರೂ ದೀಕ್ಷಾಸ್ನಾನ ಪಡೆದರು. ವಿರೋಧದ ಎದುರಿನಲ್ಲೂ ನನ್ನ ತಾಯಿ ಧೈರ್ಯದಿಂದ ನಿಲ್ಲುವಂತೆ ಯೆಹೋವನು ಅವರನ್ನು ಬಲಪಡಿಸಿದ್ದನ್ನೂ ಅವರ ನಂಬಿಕೆಗೆ ಪ್ರತಿಫಲ ಕೊಟ್ಟದ್ದನ್ನೂ ನೋಡಿದಾಗ, ದೇವರೊಂದಿಗೆ ನಾನೂ ನನ್ನ ಸ್ವಂತ ಸಂಬಂಧವನ್ನು ಬೆಳೆಸಿಕೊಳ್ಳುವಂತೆ ಪ್ರಚೋದಿಸಲ್ಪಟ್ಟೆ. ತಾಯಿಯವರಿಗೆ ಬೈಬಲಿನಿಂದ ಮತ್ತು
ಬೈಬಲಾಧಾರಿತ ಸಾಹಿತ್ಯಗಳಿಂದ ನನಗೋಸ್ಕರ ಗಟ್ಟಿಯಾಗಿ ಓದುವ ಅಭ್ಯಾಸ ಇದ್ದುದರಿಂದಲೂ ನಾನು ತುಂಬ ಪ್ರಯೋಜನವನ್ನು ಪಡೆದುಕೊಂಡೆ.ತಾಯಿಯವರು ಅವರ ತಂಗಿ ಮಾರಿಯಾ ರೀಪೆಯೊಂದಿಗೂ ದೀರ್ಘ ಚರ್ಚೆಗಳನ್ನು ನಡೆಸುತ್ತಿದ್ದರು. ಕಟ್ಟಕಡೆಗೆ 1942ರ ಜುಲೈ ತಿಂಗಳ ಮಧ್ಯಭಾಗದಲ್ಲಿ ನಾನು ಮತ್ತು ನನ್ನ ಚಿಕ್ಕಮ್ಮ ಮಾರಿಯಾ, ಇಬ್ಬರೂ ಒಂದೇ ದಿನ ದೀಕ್ಷಾಸ್ನಾನ ಪಡೆದುಕೊಂಡೆವು. ಒಬ್ಬ ಸಹೋದರನು ಒಂದು ಚಿಕ್ಕ ಭಾಷಣವನ್ನು ಕೊಡಲು ಬಂದನು, ಮತ್ತು ನಮ್ಮ ಮನೆಯಲ್ಲಿದ್ದ ಒಂದು ದೊಡ್ಡ ಮರದ ತೊಟ್ಟಿಯಲ್ಲಿ ನಮಗೆ ದೀಕ್ಷಾಸ್ನಾನವನ್ನು ಕೊಡಲಾಯಿತು.
ಎರಡನೆಯ ಲೋಕಯುದ್ಧದ ಸಮಯದಲ್ಲಿ ಕಡ್ಡಾಯ ದುಡಿಮೆ
ಎರಡನೆಯ ಲೋಕಯುದ್ಧದ ಮಧ್ಯಭಾಗದಲ್ಲಿ ಅಂದರೆ 1942ರಲ್ಲಿ ಜರ್ಮನಿ ಮತ್ತು ಇಟಲಿಯು ಸ್ಲೊವೇನಿಯವನ್ನು ಆಕ್ರಮಿಸಿ ಅದನ್ನು ತಮಗೂ ಹಂಗೆರಿಗೂ ಪಾಲುಮಾಡಿಕೊಂಡಿತು. ನನ್ನ ಹೆತ್ತವರು ಫಾಲ್ಕ್ಸ್ಬುಂಟ್ ಎಂಬ ನಾಸಿ ಜನರ ಸಂಘಟನೆಯನ್ನು ಸೇರಲು ನಿರಾಕರಿಸಿದರು. ನಾನು ಶಾಲೆಯಲ್ಲಿ “ಹೈಲ್ ಹಿಟ್ಲರ್” ಎಂದು ಹೇಳಲು ನಿರಾಕರಿಸಿದೆ. ಸುವ್ಯಕ್ತವಾಗಿಯೇ, ನನ್ನ ಉಪಾಧ್ಯಾಯರು ಇದನ್ನು ಅಧಿಕಾರಿಗಳಿಗೆ ತಿಳಿಸಿದ್ದರು.
ನಮ್ಮನ್ನು ರೈಲಿನಲ್ಲಿ ಬವೇರಿಯದ ಹುವೆಟನ್ಬಾಕ್ ಹಳ್ಳಿಯ ಸಮೀಪದಲ್ಲಿರುವ ಒಂದು ಕೋಟೆಮನೆಗೆ ಕಳುಹಿಸಲಾಯಿತು. ಇದನ್ನು ಕಡ್ಡಾಯ ದುಡಿಮೆಯ ಶಿಬಿರವಾಗಿ ಉಪಯೋಗಿಸಲಾಗುತ್ತಿತ್ತು. ಸ್ಥಳಿಕ ಬ್ರೆಡ್ ಅಂಗಡಿಯವನ ಕುಟುಂಬದೊಂದಿಗೆ ನಾನು ಕೆಲಸಮಾಡಿ ಜೀವಿಸುವಂತೆ ತಂದೆಯವರು ಏರ್ಪಡಿಸಿದರು. ಈ ಸಮಯದಲ್ಲಿ ನಾನು ಬೇಕರಿ ಕೆಲಸ ಕಲಿತುಕೊಂಡೆ ಮತ್ತು ಇದು ಮುಂದಕ್ಕೆ ಬಹಳ ಉಪಯುಕ್ತವಾಗಿ ಪರಿಣಮಿಸಿತು. ಸಮಯಾನಂತರ, ನನ್ನನ್ನು ಬಿಟ್ಟು ನನ್ನ ಕುಟುಂಬದಲ್ಲಿ ಉಳಿದವರೆಲ್ಲರನ್ನು (ಚಿಕ್ಕಮ್ಮ ಮಾರಿಯಾ ಮತ್ತು ಅವರ ಕುಟುಂಬವನ್ನು ಸಹ) ಗುನ್ಸನ್ಹೌಸನ್ ಶಿಬಿರಕ್ಕೆ ಒಯ್ಯಲಾಯಿತು.
ಯುದ್ಧಾಂತ್ಯದಲ್ಲಿ, ನಾನು ಒಂದು ಗುಂಪನ್ನು ಸೇರಿಕೊಂಡು ನನ್ನ ಹೆತ್ತವರು ಇದ್ದಲ್ಲಿಗೆ ಪ್ರಯಾಣ ಬೆಳೆಸುವುದರಲ್ಲಿದ್ದೆ. ಆದರೆ ನಾನು ಹೊರಡುವ ಹಿಂದಿನ ದಿನ ತಂದೆಯವರು ಅನಿರೀಕ್ಷಿತವಾಗಿ ನಾನಿದ್ದಲ್ಲಿಗೆ ಬಂದರು. ನಾನು ಆ ಗುಂಪಿನೊಂದಿಗೆ ಹೋಗಿದ್ದರೆ ನನ್ನ ಗತಿ ಏನಾಗುತ್ತಿತ್ತೊ ತಿಳಿಯೆ, ಏಕೆಂದರೆ ಆ ಗುಂಪಿನವರು ಭರವಸಾರ್ಹರಾಗಿರಲಿಲ್ಲ. ಯೆಹೋವನು ನನ್ನನ್ನು ಸಂರಕ್ಷಿಸಲು ಮತ್ತು ತರಬೇತಿಗೊಳಿಸಲು ನನ್ನ ಹೆತ್ತವರನ್ನು ಉಪಯೋಗಿಸಿದಾಗ ನಾನು ಪುನಃ ಒಮ್ಮೆ ಆತನ ಪ್ರೀತಿಯ ಪರಾಮರಿಕೆಯನ್ನು ಅನುಭವಿಸಿದೆ. ನಾನು ಮತ್ತು ತಂದೆ ನಮ್ಮ ಕುಟುಂಬದವರೊಂದಿಗೆ ಜೊತೆ ಸೇರಲು ಮೂರು ದಿನ ನಡೆದೆವು. 1945ರ ಜೂನ್ ತಿಂಗಳೊಳಗೆ ನಾವೆಲ್ಲರೂ ಮನೆಗೆ ಹಿಂದಿರುಗಿದೆವು.
ಯುದ್ಧಾನಂತರ, ಯುಗೊಸ್ಲಾವಿಯದಲ್ಲಿ ಕಮ್ಯೂನಿಸ್ಟರು ಯೋಸೀಪ್ ಬ್ರಾಸ್ ಟೀಟೊ ನಾಯಕತ್ವದಲ್ಲಿ ಅಧಿಕಾರಕ್ಕೆ ಬಂದರು. ಈ ಕಾರಣದಿಂದ, ಯೆಹೋವನ ಸಾಕ್ಷಿಗಳ ಸ್ಥಿತಿ ಕಷ್ಟಕರವಾಗಿಯೇ ಉಳಿಯಿತು.
ಇಸವಿ 1948ರಲ್ಲಿ ಆಸ್ಟ್ರೀಯದಿಂದ ಒಬ್ಬ ಸಹೋದರನು ಬಂದಿದ್ದನು ಮತ್ತು ಅವನು ನಮ್ಮೊಂದಿಗೆ ಊಟಮಾಡಿದನು. ಅವನು ಹೋದಲ್ಲೆಲ್ಲ ಪೊಲೀಸರು ಅವನನ್ನು ಹಿಂಬಾಲಿಸಿ ಅವನು ಭೇಟಿಕೊಟ್ಟ ಸಹೋದರರನ್ನು ದಸ್ತಗಿರಿಮಾಡಿದರು. ಅತಿಥಿಸತ್ಕಾರ ತೋರಿಸಿದ್ದಕ್ಕಾಗಿ ಮತ್ತು ಆ ಸಹೋದರನ ಭೇಟಿಯ ಕುರಿತು ಪೊಲೀಸರಿಗೆ ತಿಳಿಸದೆ ಇದುದಕ್ಕಾಗಿ ತಂದೆಯವರನ್ನೂ ದಸ್ತಗಿರಿಮಾಡಲಾಯಿತು. ಇದರ ಪರಿಣಾಮವಾಗಿ ಅವರು ಎರಡು ವರುಷ ಸೆರೆಮನೆಯಲ್ಲಿದ್ದರು. ತಾಯಿಯವರಿಗೆ ಇದು ಅತಿ ಕಷ್ಟಕಾಲವಾಗಿತ್ತು, ಏಕೆಂದರೆ ತಂದೆಯವರು ಮನೆಯಲ್ಲಿರಲಿಲ್ಲ ಮಾತ್ರವಲ್ಲ, ಬೇಗನೆ ನಾನೂ ನನ್ನ ತಮ್ಮನೂ ತಾಟಸ್ಥ್ಯದ ಪರೀಕ್ಷೆಯನ್ನು ಎದುರಿಸಲಿದ್ದೇವೆಂದು ಅವರಿಗೆ ತಿಳಿದಿತ್ತು.
ಮ್ಯಾಸಡೋನ್ಯದಲ್ಲಿ ಸೆರೆವಾಸದ ಸಜೆ
ನವೆಂಬರ್ 1949ರಲ್ಲಿ, ನನಗೆ ಮಿಲಿಟರಿಯನ್ನು ಸೇರಲು ಕರೆಬಂತು. ಅಧಿಕಾರಿಗಳ ಮುಂದೆ ಹಾಜರಾಗಿ, ಆ ಸೇವೆ ಮಾಡಲು ನನ್ನ ಮನಸ್ಸಾಕ್ಷಿ ನಿರಾಕರಿಸುತ್ತದೆಂಬುದನ್ನು ವಿವರಿಸಲು ನಾನು ಹೋದೆ. ಅವರು ನನಗೆ ಕಿವಿಗೊಡದೆ, ಪಡೆಗೆ ಸೇರಲಿಕ್ಕಿದ್ದ ಇತರ ಉಮೇದ್ವಾರರೊಂದಿಗೆ ಯುಗೊಸ್ಲಾವಿಯದ ಇನ್ನೊಂದು ಪಕ್ಕದಲ್ಲಿದ್ದ ಮ್ಯಾಸಡೋನ್ಯಕ್ಕೆ ನನ್ನನ್ನೂ ರೈಲಿನಲ್ಲಿ ಕಳುಹಿಸಿದರು.
ಮೂರು ವರುಷ ಕಾಲ ನಾನು, ನನ್ನ ಕುಟುಂಬ ಮತ್ತು ಸಹೋದರತ್ವದೊಂದಿಗೆ ಯಾವ ಸಂಪರ್ಕವೂ ಇಲ್ಲದವನಾಗಿದ್ದೆ ಮಾತ್ರವಲ್ಲ, ಯಾವುದೇ ಸಾಹಿತ್ಯವಾಗಲಿ ಬೈಬಲಾಗಲಿ ನನ್ನ ಬಳಿಯಿರಲಿಲ್ಲ. ಬಹಳ ಕಷ್ಟದ ಪರಿಸ್ಥಿತಿಯಲ್ಲಿದ್ದೆ. ಯೆಹೋವನ ಕುರಿತಾದ ಮತ್ತು ಆತನ ಪುತ್ರನಾದ ಯೇಸು ಕ್ರಿಸ್ತನ ಮಾದರಿಯ ಕುರಿತಾದ ಧ್ಯಾನ ಮಾತ್ರ ನನ್ನನ್ನು ಬಲಪಡಿಸಿತು. ನನ್ನ ಹೆತ್ತವರ ಮಾದರಿಯೂ ನನಗೆ ಬಲವನ್ನಿತ್ತಿತು. ಇದರೊಂದಿಗೆ, ಬಲವನ್ನು ದಯಪಾಲಿಸುವಂತೆ ನಾನು ಎಡೆಬಿಡದೆ ಮಾಡುತ್ತಿದ್ದ ಪ್ರಾರ್ಥನೆಗಳು ಹತಾಶನಾಗದಂತೆ ನನಗೆ ಸಹಾಯಮಾಡಿದವು.
ಕೊನೆಗೆ ನನ್ನನ್ನು ಸ್ಕಾಪ್ಯೆಯ ಸಮೀಪದಲ್ಲಿದ್ದ ಇಡ್ರಿಸೋವೊ ಸೆರೆಮನೆಗೆ ಕಳುಹಿಸಲಾಯಿತು. ಅಲ್ಲಿ ಸೆರೆವಾಸಿಗಳು ವಿವಿಧ ಕೆಲಸಗಳನ್ನು ಮತ್ತು ಕಸಬುಗಳನ್ನು ಮಾಡುತ್ತಿದ್ದರು. ಆರಂಭದಲ್ಲಿ, ನಾನು ಸಫಾಯಿ ಕೆಲಸವನ್ನೂ ಆಫೀಸುಗಳ ಮಧ್ಯೆ ತುರ್ತುಚಾರನಾಗಿಯೂ ಕೆಲಸಮಾಡಿದೆ. ಹಿಂದೆ ಗುಪ್ತ ಪೊಲೀಸ್ ಪಡೆಯವನಾಗಿದ್ದ ಒಬ್ಬ ಸೆರೆವಾಸಿಯು ನನ್ನನ್ನು ಆಗಾಗ ಪೀಡಿಸುತ್ತಿದ್ದರೂ, ಬೇರೆಲ್ಲ ಸಿಪಾಯಿಗಳು, ಸೆರೆವಾಸಿಗಳು ಮತ್ತು ಸೆರೆಮನೆಯ ಕಾರ್ಖಾನೆಯ ಮ್ಯಾನೆಜರನೊಂದಿಗೂ ನಾನು ಒಳ್ಳೆಯ ಸಂಬಂಧವನ್ನು ಇಟ್ಟುಕೊಂಡಿದ್ದೆ.
ತರುವಾಯ, ಸೆರೆಮನೆಯ ಬೇಕರಿಯಲ್ಲಿ ಒಬ್ಬ ಬೇಕರ್ನ (ಬ್ರೆಡ್ ಇತ್ಯಾದಿ ತಯಾರಿಸುವವನ) ಅಗತ್ಯವಿದೆಯೆಂದು ನನಗೆ ತಿಳಿದುಬಂತು. ಕೆಲವು ದಿನಗಳ ನಂತರ, ಮ್ಯಾನೇಜರರು ಹಾಜರಿ ತೆಗೆದುಕೊಳ್ಳಲು ಬಂದು, ನಮ್ಮ ಸಾಲಿನಲ್ಲಿ ನಡೆಯುತ್ತ, ನನ್ನ ಮುಂದೆ ನಿಂತು ‘ನೀನು ಒಬ್ಬ ಬೇಕರ್ ಆಗಿದ್ದೀಯೊ?’ ಎಂದು ಕೇಳಿದರು. ‘ಹೌದು ಸರ್’ ಎಂದೆ ನಾನು. ‘ನಾಳೆ ಬೆಳಗ್ಗೆ ಬೇಕರಿಯಲ್ಲಿ ಹಾಜರಾಗು’ ಎಂದು ಅವರಂದರು. ನನ್ನನ್ನು ಪೀಡಿಸುತ್ತಿದ್ದ ಆ ಕೈದಿಯು ಬೇಕರಿಯನ್ನು ಅನೇಕ ಸಲ ದಾಟಿಹೋದರೂ, ನನ್ನನ್ನು ಪೀಡಿಸಲು ಅವನಿಂದಾಗಲಿಲ್ಲ. ನಾನು ಅಲ್ಲಿ 1950ರ ಫೆಬ್ರವರಿಯಿಂದ ಜುಲೈ ತನಕ ಕೆಲಸಮಾಡಿದೆ.
ನನ್ನನ್ನು ಅಲ್ಲಿಂದ ಮ್ಯಾಸಡೋನ್ಯದ ದಕ್ಷಿಣದಲ್ಲಿ ಪ್ರೆಸ್ಪ ಸರೋವರದ ಬಳಿಯಿದ್ದ ವೋಲ್ಕೋಡೆರಿ ಪಾಳೆಯಕ್ಕೆ ಕಳುಹಿಸಲಾಯಿತು. ಹತ್ತಿರದಲ್ಲಿದ್ದ ಓಟೆಶೋವೋ ಪಟ್ಟಣದಿಂದ ನಾನು ಮನೆಗೆ ಪತ್ರಗಳನ್ನು ಬರೆದು ಕಳುಹಿಸಲು ಶಕ್ತನಾದೆ. ನಾನು ರಸ್ತೆ ನಿರ್ಮಾಣ ಕೆಲಸವನ್ನು ಮಾಡುತ್ತಿದ್ದ ಸೆರೆವಾಸಿಗಳ ಗುಂಪಿನಲ್ಲಿದ್ದರೂ, ಹೆಚ್ಚಿನ ಕಾಲ ಒಂದು ಬೇಕರಿಯಲ್ಲಿ ಕೆಲಸಮಾಡುತ್ತಿದುದರಿಂದ ನನಗೆ ಅಷ್ಟೇನೂ ಕಷ್ಟವಾಗುತ್ತಿರಲಿಲ್ಲ. 1952ರ ನವೆಂಬರ್ನಲ್ಲಿ ನನಗೆ ಬಿಡುಗಡೆಯಾಯಿತು.
ನಾನು ಪೋಡ್ಹೋಮ್ನಲ್ಲಿ ಇಲ್ಲದಿದ್ದ ಸಮಯದಲ್ಲಿ ಆ ಪ್ರದೇಶದಲ್ಲೊಂದು ಸಭೆ ರಚಿಸಲ್ಪಟ್ಟಿತ್ತು. ಆರಂಭದಲ್ಲಿ ಸಭೆಯು, ಸ್ಪೋಡ್ನೆ ಗೋರ್ಯೇ ಪಟ್ಟಣದ ಒಂದು ಚಿಕ್ಕ ಹೋಟೇಲಿನಲ್ಲಿ ಕೂಡಿಬರುತ್ತಿತ್ತು. ಆ ಬಳಿಕ, ನಮ್ಮ ಮನೆಯಲ್ಲಿ ಸಭೆಸೇರುವಂತೆ ತಂದೆಯವರು ಒಂದು ಕೋಣೆಯನ್ನು ಲಭ್ಯಗೊಳಿಸಿದರು. ನಾನು ಮ್ಯಾಸಡೋನ್ಯದಿಂದ ಹಿಂದಿರುಗಿದಾಗ ಅವರೊಂದಿಗೆ ಜೊತೆಗೂಡಲು ಸಂತೋಷಪಟ್ಟೆ. ಆಗ ನಾನು, ಸೆರೆಮನೆಗೆ ಹೋಗುವ ಮೊದಲು ಭೇಟಿಯಾಗಿದ್ದ ಸ್ಟಾಂಕಾಳೊಡನೆ ಪರಿಚಯವನ್ನು ನವೀಕರಿಸಿದೆ. 1954ರ ಏಪ್ರಿಲ್ 24ರಂದು ನಮ್ಮ ವಿವಾಹವಾಯಿತು. ಆದರೆ ನನ್ನ ವಿರಾಮ ಅವಧಿಯು ಬೇಗನೆ ಕೊನೆಗೊಂಡಿತು.
ಮಾರೀಬಾರ್ನಲ್ಲಿ ಸೆರೆವಾಸದ ಸಜೆ
ಸೆಪ್ಟೆಂಬರ್ 1954ರಲ್ಲಿ ನನಗೆ ಮಿಲಿಟರಿಯಿಂದ ಇನ್ನೊಂದು ಕರೆಬಂತು. ಈ ಬಾರಿ ನನಗೆ ಸ್ಲೊವೇನಿಯದ ಪೂರ್ವ ಅಂಚಿನಲ್ಲಿರುವ ಮಾರೀಬಾರ್ನ ಸೆರೆಮನೆಯಲ್ಲಿ ಮೂರೂವರೆ ವರುಷಗಳಿಗೂ ಹೆಚ್ಚು ಅವಧಿಯ ಶಿಕ್ಷೆ ವಿಧಿಸಲಾಯಿತು. ನನಗೆ ಸಾಧ್ಯವಾದ ಕೂಡಲೆ ನಾನು ಸ್ವಲ್ಪ ಪೇಪರ್ ಮತ್ತು ಪೆನ್ಸಿಲ್ಗಳನ್ನು ಕೊಂಡುಕೊಂಡೆ. ನನ್ನ ನೆನಪಿಗೆ ಬಂದ ಎಲ್ಲವನ್ನೂ, ಅಂದರೆ ಶಾಸ್ತ್ರವಚನಗಳು, ಕಾವಲಿನಬುರುಜು ಪತ್ರಿಕೆಯಲ್ಲಿದ್ದಂಥ ವಿಷಯಗಳು ಮತ್ತು ಇತರ ಕ್ರೈಸ್ತ ಸಾಹಿತ್ಯದಲ್ಲಿದ್ದ ವಿಚಾರಗಳನ್ನು ಬರೆದಿಡತೊಡಗಿದೆ. ನಾನು ನನ್ನ ಟಿಪ್ಪಣಿಗಳನ್ನು ಓದಿ, ಹೆಚ್ಚು ವಿಚಾರಗಳನ್ನು ಜ್ಞಾಪಿಸಿಕೊಂಡಾಗ, ಆ ಪೇಪರ್ಗಳಿಂದ ನಾನು ತಯಾರಿಸಿದ್ದಂಥ ಪುಸ್ತಕಕ್ಕೆ ಅವನ್ನು ಸೇರಿಸಿದೆ. ಕೊನೆಗೆ, ನನ್ನ ಪುಸ್ತಕವು ತುಂಬಿಹೋದಾಗ ನಾನು ಸತ್ಯದ ಮೇಲೆ ಗಮನವನ್ನು ಕೇಂದ್ರೀಕರಿಸಲು ಮತ್ತು ಆಧ್ಯಾತ್ಮಿಕವಾಗಿ ಬಲಗೊಳ್ಳಲು ಶಕ್ತನಾದೆ. ನನ್ನ ಆಧ್ಯಾತ್ಮಿಕ ಬಲಕ್ಕೆ ಪ್ರಾರ್ಥನೆ ಮತ್ತು ಧ್ಯಾನಗಳು ಅಮೂಲ್ಯ ಸಹಾಯಕಗಳಾಗಿದ್ದವು. ನಾನು ಧೈರ್ಯದಿಂದ ಇತರರಿಗೆ ಸತ್ಯವನ್ನು ತಿಳಿಸಲು ಇದು ನನಗೆ ಸಾಮರ್ಥ್ಯವನ್ನು ಕೊಟ್ಟಿತು.
ಆ ಸಮಯದಲ್ಲಿ ನನಗೆ ತಿಂಗಳಿಗೆ ಒಂದು ಪತ್ರವನ್ನು ಪಡೆದುಕೊಳ್ಳುವಂತೆ ಅನುಮತಿಸಲಾಯಿತು ಮತ್ತು ತಿಂಗಳಿಗೆ 15 ನಿಮಿಷಗಳ ಒಂದು ಭೇಟಿಯ ಅವಕಾಶವಿತ್ತು. ಸೆರೆಮನೆಗೆ ಬೆಳಗ್ಗೆ ಬೇಗನೆ ಬಂದು ನನ್ನನ್ನು ಭೇಟಿಯಾಗಲು ಸ್ಟಾಂಕಾ ಇಡೀ ರಾತ್ರಿ ರೈಲು ಪ್ರಯಾಣಮಾಡುತ್ತಿದ್ದಳು ಮತ್ತು ಇದರಿಂದಾಗಿ ಅವಳು ಅದೇ ದಿನ ಹಿಂದೆ ಪ್ರಯಾಣಿಸಲು ಶಕ್ತಳಾಗುತ್ತಿದ್ದಳು. ನನಗಾದರೊ ಈ ಭೇಟಿಗಳು ಅತಿ ಪ್ರೋತ್ಸಾಹದಾಯಕವಾಗಿದ್ದವು. ಆಗ ನಾನು ಒಂದು ಬೈಬಲನ್ನು ಪಡೆದುಕೊಳ್ಳಬೇಕೆಂಬ ನನ್ನ ಯೋಜನೆಯನ್ನು ಕಾರ್ಯರೂಪಕ್ಕೆ ಹಾಕಿದೆ. ಸ್ಟಾಂಕಾ ಮತ್ತು ನಾನು ಮೇಜಿನ ಪಕ್ಕದಲ್ಲಿ ಎದುರುಬದುರಾಗಿ ಕುಳಿತುಕೊಳ್ಳುತ್ತಿದ್ದೆವು. ನಮ್ಮ ಮೇಲೆ ಕಣ್ಣಿಡಲು ಒಬ್ಬ ಕಾವಲುಗಾರನನ್ನು ನೇಮಿಸಲಾಗುತ್ತಿತ್ತು. ಕಾವಲುಗಾರನು ನಮ್ಮ ಮೇಲೆ ನಿಗಾ ಇಡದಿದ್ದಾಗ, ನಾನು ಅವಳ ಕೈಚೀಲದಲ್ಲಿ ಒಂದು ಪತ್ರವನ್ನು ತುರುಕಿಸಿದೆ. ‘ಇನ್ನೊಮ್ಮೆ ಬರುವಾಗ ನಿನ್ನ ಕೈಚೀಲದಲ್ಲಿ ಒಂದು ಬೈಬಲನ್ನು ಇಟ್ಟುಕೊಂಡು ಬಾ’ ಎಂದು ಆ ಪತ್ರದಲ್ಲಿ ತಿಳಿಸಿದೆ.
ಸ್ಟಾಂಕಾ ಮತ್ತು ನನ್ನ ತಂದೆತಾಯಿ, ಇದು ತೀರ ಅಪಾಯಕರವೆಂದು ನೆನಸಿದರು. ಆದುದರಿಂದ ಅವರು ಕ್ರೈಸ್ತ ಗ್ರೀಕ್ ಶಾಸ್ತ್ರಗಳ ಒಂದು ಪ್ರತಿಯಿಂದ ಕೆಲವು ಪುಟಗಳನ್ನು ತೆಗೆದು ಅದನ್ನು ಕೆಲವು ಬನ್ ರೊಟ್ಟಿಗಳೊಳಗೆ ಹಾಕಿ ಕಳುಹಿಸಿಕೊಟ್ಟರು. ಈ ರೀತಿ ನನಗೆ ಬೇಕಾಗಿದ್ದ ಬೈಬಲ್ ಲಭ್ಯವಾಯಿತು. ಇದೇ ರೀತಿಯಲ್ಲಿ, ಸ್ಟಾಂಕಾ
ಸ್ವತಃ ಕೈಯಿಂದ ಬರೆದಿದ್ದ ಕಾವಲಿನಬುರುಜು ಪತ್ರಿಕೆಯ ಪ್ರತಿಗಳು ನನಗೆ ದೊರೆತವು. ನಾನು ಕೂಡಲೆ ನನ್ನ ಸ್ವಂತ ಕೈಬರಹದಿಂದ ಒಂದು ಪ್ರತಿಯನ್ನು ಮಾಡಿ, ಮೂಲ ಪ್ರತಿಯನ್ನು ನಾಶಮಾಡುತ್ತಿದ್ದೆ. ಹೀಗೆ, ಆ ಲೇಖನಗಳನ್ನು ಯಾವನಾದರೂ ಕಂಡುಹಿಡಿಯುವಲ್ಲಿ ಅವು ನನಗೆ ಹೇಗೆ ದೊರೆತವೆಂದು ಪತ್ತೆಹಚ್ಚುವ ಸಾಧ್ಯತೆ ಇರಲಿಲ್ಲ.ನಾನು ಪಟ್ಟುಹಿಡಿದು ಸಾಕ್ಷಿಕೊಡುತ್ತಿದ್ದುದರಿಂದ, ನಾನು ತೊಂದರೆಯಲ್ಲಿ ಸಿಕ್ಕಿಬೀಳುವುದು ಖಂಡಿತವೆಂದು ಜೊತೆಕೈದಿಗಳು ಹೇಳುತ್ತಿದ್ದರು. ಒಂದು ಸಂದರ್ಭದಲ್ಲಿ, ನಾನು ಒಬ್ಬ ಜೊತೆಕೈದಿಯೊಂದಿಗೆ ಉತ್ಸಾಹಭರಿತ ಬೈಬಲ್ ಚರ್ಚೆಯನ್ನು ಮಾಡುತ್ತಿದ್ದೆ. ಆಗ ಬೀಗ ತೆರೆಯುವ ಸದ್ದು ಕೇಳಿಬಂತು. ಒಬ್ಬ ಕಾವಲುಗಾರನು ಒಳಬಂದನು. ನನಗೆ ಏಕಾಂತ ಬಂಧನದ ಶಿಕ್ಷೆ ದೊರೆಯುತ್ತದೆಂದು ನಾನು ಒಡನೆ ನೆನಸಿದೆ. ಆದರೆ ಅದು ಆ ಕಾವಲುಗಾರನ ಉದ್ದೇಶವಾಗಿರಲಿಲ್ಲ. ಅವನು ಆ ಚರ್ಚೆಯನ್ನು ಕೇಳಿಸಿಕೊಂಡು ಅದರಲ್ಲಿ ಸೇರಿಕೊಳ್ಳಲು ಒಳಗೆ ಬಂದಿದ್ದನು. ಅವನ ಪ್ರಶ್ನೆಗಳಿಗೆ ಕೊಡಲ್ಪಟ್ಟ ಉತ್ತರದಿಂದ ಸಂತುಷ್ಟನಾಗಿ, ಅವನು ಅಲ್ಲಿಂದ ಹೊರಹೋಗಿ ಬಾಗಿಲಿಗೆ ಬೀಗಹಾಕಿದನು.
ನನ್ನ ಶಿಕ್ಷೆಯ ಕೊನೆಯ ತಿಂಗಳಲ್ಲಿ, ಕೈದಿಗಳನ್ನು ಸುಧಾರಣೆಮಾಡುವ ಕೆಲಸದ ಕಮಿಷನರ್ ಸತ್ಯಕ್ಕಾಗಿ ನಾನು ತೆಗೆದುಕೊಂಡಿದ್ದ ದೃಢ ನಿಲುವಿಗಾಗಿ ನನ್ನನ್ನು ಪ್ರಶಂಸಿಸಿದನು. ಯೆಹೋವನ ಹೆಸರನ್ನು ಪ್ರಸಿದ್ಧಪಡಿಸುವ ನನ್ನ ಪ್ರಯತ್ನಗಳಿಗೆ ಇದೊಂದು ಉತ್ತಮ ಬಹುಮಾನವೆಂದು ನನಗನಿಸಿತು. 1958ರ ಮೇ ತಿಂಗಳಲ್ಲಿ ನನಗೆ ಸೆರೆಮನೆಯಿಂದ ಪುನಃ ಬಿಡುಗಡೆಯಾಯಿತು.
ಆಸ್ಟ್ರೀಯಕ್ಕೆ ಪಲಾಯನ, ಬಳಿಕ ಆಸ್ಟ್ರೇಲಿಯದಲ್ಲಿ
ಇಸವಿ 1958ರ ಆಗಸ್ಟ್ ತಿಂಗಳಲ್ಲಿ ನನ್ನ ತಾಯಿಯವರು ತೀರಿಕೊಂಡರು. ಅವರು ಕೆಲವು ಸಮಯದಿಂದ ರೋಗಪೀಡಿತರಾಗಿದ್ದರು. 1958ರ ಸೆಪ್ಟೆಂಬರ್ನಲ್ಲಿ, ಮಿಲಿಟರಿ ಸೇವೆಗಾಗಿ ನನಗೆ ಮೂರನೆಯ ಬಾರಿ ಕರೆಬಂತು. ಆ ಸಾಯಂಕಾಲವೇ ನಾನು ಮತ್ತು ಸ್ಟಾಂಕಾ ಆರಂಭದಲ್ಲಿ ಹೇಳಿರುವಂತೆ, ಆ ರೋಮಾಂಚಕ ಗಡಿ ದಾಟುವಿಕೆಗೆ ನಡೆಸಿದ ಮಹತ್ವಪೂರ್ಣ ನಿರ್ಣಯವನ್ನು ಮಾಡಿದೆವು. ಯಾರಿಗೂ ತಿಳಿಸದೆ, ನಾವು ಕೆಲವು ಬೆನ್ನುಹೊರೆಯ ಚೀಲಗಳನ್ನೂ ಒಂದು ಟಾರ್ಪಾಲಿನನ್ನೂ ತೆಗೆದುಕೊಂಡು ಕಿಟಿಕಿಯ ಮೂಲಕ ಹೊರಗೆ ಬಂದು ಮೌಂಟ್ ಸ್ಟೋಲ್ನ ಪಶ್ಚಿಮದಲ್ಲಿದ್ದ ಆಸ್ಟ್ರೀಯ ಗಡಿಯತ್ತ ಸಾಗಿದೆವು. ನಮಗೆ ತುಸು ಉಪಶಮನದ ಆವಶ್ಯಕತೆಯಿರುವುದನ್ನು ಕಂಡು ಯೆಹೋವನೇ ನಮ್ಮ ದಾರಿಯನ್ನು ಸರಾಗ ಮಾಡಿದನೆಂಬಂತೆ ತೋರಿತು.
ಆಸ್ಟ್ರೀಯದ ಅಧಿಕಾರಿಗಳು ನಮ್ಮನ್ನು ಸಾಲ್ಸ್ಬರ್ಗ್ ಸಮೀಪದಲ್ಲಿದ್ದ ನಿರಾಶ್ರಿತರ ಶಿಬಿರಕ್ಕೆ ಕಳುಹಿಸಿದರು. ನಾವು ಅಲ್ಲಿ ಕಳೆದ ಆರು ತಿಂಗಳುಗಳಲ್ಲಿ ಯಾವಾಗಲೂ ಸ್ಥಳಿಕ ಸಾಕ್ಷಿಗಳೊಂದಿಗೆ ಇದ್ದುದರಿಂದ ಶಿಬಿರದಲ್ಲಿ ಕಳೆದ ಕಾಲ ಕೊಂಚವೇ. ಶಿಬಿರದಲ್ಲಿದ್ದ ಇತರರು, ನಾವು ಅಷ್ಟು ಬೇಗ ಸ್ನೇಹಿತರನ್ನು ಮಾಡಿಕೊಂಡದ್ದನ್ನು ಕಂಡು ಸೋಜಿಗಪಟ್ಟರು. ನಾವು ನಮ್ಮ ಪ್ರಥಮ ಸಮ್ಮೇಳನಕ್ಕೆ ಹಾಜರಾದ್ದದ್ದು ಈ ಸಮಯದಲ್ಲಿಯೇ. ಅಲ್ಲದೆ, ಅಲ್ಲಿಯೇ ನಮಗೆ ಮನೆಯಿಂದ ಮನೆಗೆ ಸ್ವತಂತ್ರವಾಗಿ ಸಾರುವ ಪ್ರಥಮ ಅವಕಾಶವೂ ಸಿಕ್ಕಿತು. ನಮಗೆ ಹೊರಟುಹೋಗುವ ಸಮಯ ಬಂದಾಗ ಈ ಪ್ರಿಯ ಮಿತ್ರರನ್ನು ಬಿಟ್ಟುಹೋಗುವುದು ಬಹಳ ದುಃಖದ ವಿಷಯವಾಗಿತ್ತು.
ಆಸ್ಟ್ರೀಯದ ಅಧಿಕಾರಿಗಳು ನಾವು ಆಸ್ಟ್ರೇಲಿಯಕ್ಕೆ ವಲಸೆಹೋಗುವ ಅವಕಾಶವನ್ನು ನೀಡಿದರು. ಅಷ್ಟು ದೂರ ಹೋಗುವೆವೆಂದು ನಾವು ಕನಸಿನಲ್ಲಿಯೂ ನೆನಸಿರಲಿಲ್ಲ. ನಾವು ಇಟಲಿಯ ಜಿನೋವಕ್ಕೆ ರೈಲುಪ್ರಯಾಣ ಬೆಳೆಸಿ, ಅಲ್ಲಿಂದ ಆಸ್ಟ್ರೇಲಿಯಕ್ಕೆ ಹೋಗಲು ಹಡಗು ಹತ್ತಿದೆವು. ನಾವು ಕೊನೆಯದಾಗಿ, ನ್ಯೂ ಸೌತ್ ವೇಲ್ಸ್ನ ವುಲನ್ಗಾಂಗ್ ನಗರದಲ್ಲಿ ನೆಲೆಸಿದೆವು. ಇಲ್ಲಿ ನಮ್ಮ ಮಗ ಫಿಲಿಪ್, 1965ರ ಮಾರ್ಚ್ 30ರಂದು ಜನಿಸಿದನು.
ಆಸ್ಟ್ರೇಲಿಯದ ಜೀವನವು ನಮಗೆ ಅನೇಕ ಸೇವಾಮಾರ್ಗಗಳನ್ನು ತೆರೆದಿದೆ. ಇದರಲ್ಲಿ, ಈ ಮೊದಲು ಯುಗೊಸ್ಲಾವಿಯ ಎಂದು ಕರೆಯಲ್ಪಡುತ್ತಿದ್ದ ಪ್ರದೇಶಗಳಿಂದ ವಲಸೆ ಬಂದವರಿಗೆ ಸಾರುವ ಸಂದರ್ಭವೂ ಸೇರಿದೆ. ಯೆಹೋವನ ಆಶೀರ್ವಾದಗಳಿಗೆ ನಾವು ಕೃತಜ್ಞರು. ಇದರಲ್ಲಿ ಒಂದು ಆಶೀರ್ವಾದ ಆತನನ್ನು ಒಂದು ಐಕ್ಯ ಕುಟುಂಬವಾಗಿ ಸೇವಿಸುವುದೇ ಆಗಿದೆ. ಫಿಲಿಪ್ ಮತ್ತು ಅವನ ಪತ್ನಿ ಸೂಸೀಗೆ ಯೆಹೋವನ ಸಾಕ್ಷಿಗಳ ಆಸ್ಟ್ರೇಲಿಯ ಬ್ರಾಂಚ್ ಆಫೀಸಿನಲ್ಲಿ ಸೇವೆಮಾಡುವ ಸದವಕಾಶವಿದೆ ಮಾತ್ರವಲ್ಲ, ಅವರಿಗೆ ಎರಡು ವರ್ಷಕಾಲ ಸ್ಲೊವೇನಿಯ ಬ್ರಾಂಚ್ ಆಫೀಸಿನಲ್ಲಿಯೂ ಸೇವೆಮಾಡುವ ಸಂದರ್ಭ ದೊರಕಿತ್ತು.
ವೃದ್ಧಾಪ್ಯ ಮತ್ತು ಆರೋಗ್ಯ ಸಮಸ್ಯೆಗಳು ತಂದೊಡ್ಡುವ ಪಂಥಾಹ್ವಾನಗಳ ಎದುರಿನಲ್ಲೂ ನಾನು ಮತ್ತು ನನ್ನ ಪತ್ನಿ ಯೆಹೋವನಿಗೆ ಸಲ್ಲಿಸುವ ಸೇವೆಯಲ್ಲಿ ಆನಂದಿಸುತ್ತ ಮುಂದುವರಿಯುತ್ತಿದ್ದೇವೆ. ನನ್ನ ತಂದೆತಾಯಿ ಒದಗಿಸಿದ ಉತ್ತಮ ಮಾದರಿಗಾಗಿ ನಾನು ನಿಶ್ಚಯವಾಗಿಯೂ ಆಭಾರಿ! ಇದು ನನ್ನನ್ನು ಬಲಪಡಿಸುತ್ತ, ಅಪೊಸ್ತಲ ಪೌಲನು ಹೇಳಿದಂತೆ ಮಾಡಲು ನನಗೆ ಸಹಾಯಮಾಡುತ್ತದೆ: “ಕ್ರೈಸ್ತರು ನಿರೀಕ್ಷಿಸುವ ಮಹಾಪದವಿಯನ್ನು ನೆನಸಿ ಉಲ್ಲಾಸವಾಗಿರ್ರಿ. ಉಪದ್ರವದಲ್ಲಿ ಸೈರಣೆಯುಳ್ಳವರಾಗಿರ್ರಿ. ಬೇಸರಗೊಳ್ಳದೆ ಪ್ರಾರ್ಥನೆ ಮಾಡಿರಿ.”—ರೋಮಾಪುರ 12:12.
[ಪುಟ 16, 17ರಲ್ಲಿರುವ ಚಿತ್ರ]
ನನ್ನ ತಂದೆತಾಯಿ; 1920ಗಳ ಕೊನೆಯ ಭಾಗದಲ್ಲಿ
[ಪುಟ 17ರಲ್ಲಿರುವ ಚಿತ್ರ]
ಬಲಪಕ್ಕದಲ್ಲಿ ನನ್ನ ತಾಯಿ, ಅವರಿಗೆ ಸತ್ಯ ಕಲಿಸಿಕೊಟ್ಟ ಆಂಚ್ಕಾರೊಂದಿಗೆ
[ಪುಟ 18ರಲ್ಲಿರುವ ಚಿತ್ರ]
ನನ್ನ ಪತ್ನಿ ಸ್ಟಾಂಕಾಳೊಂದಿಗೆ, ನಮ್ಮ ಮದುವೆಯಾದ ಸ್ವಲ್ಪದರಲ್ಲಿ
[ಪುಟ 19ರಲ್ಲಿರುವ ಚಿತ್ರ]
1955ರಲ್ಲಿ ನಮ್ಮ ಕುಟುಂಬವು ವಾಸಿಸುತ್ತಿದ್ದ ಮನೆಯಲ್ಲಿ ಕೂಡಿಬರುತ್ತಿದ್ದ ಸಭೆ
[ಪುಟ 20ರಲ್ಲಿರುವ ಚಿತ್ರ]
ನನ್ನ ಪತ್ನಿ, ನಮ್ಮ ಮಗ ಫಿಲಿಪ್ ಮತ್ತು ಅವನ ಹೆಂಡತಿ ಸೂಸೀಯೊಂದಿಗೆ