ಅವರು ಕಿವುಡರೊಂದಿಗೆ ಸುವಾರ್ತೆಯನ್ನು ಹಂಚಿಕೊಳ್ಳುತ್ತಾರೆ
ಅವರು ಕಿವುಡರೊಂದಿಗೆ ಸುವಾರ್ತೆಯನ್ನು ಹಂಚಿಕೊಳ್ಳುತ್ತಾರೆ
“ಅವರು ನಿಮ್ಮಲ್ಲಿ ಆಧ್ಯಾತ್ಮಿಕತೆಯನ್ನು ಮೂಡಿಸುತ್ತಾರೆ!” ಸ್ಪೆಯಿನ್ನ ಮಾಡ್ರಿಡ್ನಲ್ಲಿರುವ ನಾವಾಲ್ಕಾರ್ನೇರೊದ ಹಿರಿಯ ನಾಗರಿಕರ ವೃದ್ಧಾಶ್ರಮವೊಂದರ ನಿರ್ದೇಶಕರು, ತಮ್ಮ ವೃದ್ಧಾಶ್ರಮಕ್ಕೆ ಯೆಹೋವನ ಸಾಕ್ಷಿಗಳು ನೀಡುವ ಭೇಟಿಗಳನ್ನು ಇತ್ತೀಚಿಗೆ ಈ ಮಾತುಗಳಿಂದ ವರ್ಣಿಸಿದರು. ಯಾವುದು ಅವರನ್ನು ಹೀಗೆ ಹೇಳುವಂತೆ ಮಾಡಿತು?
ರೋಸಾಸ್ ಡೆಲ್ ಕಾಮೇನೋ ಕೇಂದ್ರದ ನಿವಾಸಿಗಳಲ್ಲಿ ಅನೇಕರು ಕಿವುಡರಾಗಿದ್ದಾರೆ. ಹಾಗಿದ್ದರೂ, ಸಾಕ್ಷಿಗಳು ಸ್ಪ್ಯಾನಿಷ್ ಸನ್ನೆ ಭಾಷೆಯನ್ನು ಕಲಿಯಲು ಪ್ರಯತ್ನಿಸಿರುವುದರಿಂದ, ಅವರು ಈ ನಿವಾಸಿಗಳೊಂದಿಗೆ ಸಂವಾದಿಸಬಲ್ಲರು. ಯಾರಿಗೆ ಆಧ್ಯಾತ್ಮಿಕ ಮೌಲ್ಯಗಳನ್ನು ಕಲಿಯಲು ವಿಶೇಷ ಸಹಾಯದ ಅಗತ್ಯವಿದೆಯೋ ಅವರಿಗೆ ಅದನ್ನು ಕಲಿಸಲು ತಮ್ಮ ಸಮಯವನ್ನು ಉಚಿತವಾಗಿ ನೀಡುತ್ತಿರುವುದಕ್ಕಾಗಿ ಆ ಕೇಂದ್ರದ ನಿರ್ದೇಶಕರು ಸಾಕ್ಷಿಗಳನ್ನು ಪ್ರಶಂಸಿಸಿದರು. ರಾಜ್ಯದ ಸುವಾರ್ತೆಯ ಬೋಧನೆಯು ಈ ನಿವಾಸಿಗಳ ಮೇಲೆ ಬೀರಿರುವ ಸಕಾರಾತ್ಮಕ ಪರಿಣಾಮವನ್ನು ಅವರು ಗಮನಿಸಿದರು. ಮತ್ತು ಸಾಕ್ಷಿಗಳ ಭೇಟಿಗಳನ್ನು ಅಲ್ಲಿನ ನಿವಾಸಿಗಳು, ವಿಶೇಷವಾಗಿ ಶ್ರವಣ ಹಾಗೂ ದೃಷ್ಟಿಯ ತೊಂದರೆಗಳಿರುವವರು ಸಹ ತುಂಬ ಅಮೂಲ್ಯವಾಗಿ ಪರಿಗಣಿಸುತ್ತಾರೆ.
ಆ ನಿವಾಸಿಗಳಲ್ಲಿ, ಕುರುಡರೂ ಕಿವುಡರೂ ಆಗಿರುವ ಯೂಲೋಹೀಯೋ ಎಂಬವರು ಈಗ ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್ ಅಧ್ಯಯನಮಾಡುತ್ತಿದ್ದಾರೆ. ಒಂದು ದಿನ ಅಧ್ಯಯನವು ನಡೆಯುತ್ತಿದ್ದಾಗ, ಒಬ್ಬ ವೃದ್ಧ ವ್ಯಕ್ತಿಯು ಸಾಕ್ಷಿಯ ಬಳಿಗೆ ಬಂದು ಒಂದು ಕವಿತೆಯನ್ನು ನೀಡಿದನು. ಆ ವೃದ್ಧಾಶ್ರಮದ ನಿವಾಸಿಗಳು ತಮ್ಮ ಕೃತಜ್ಞತೆಯ ಅಭಿವ್ಯಕ್ತಿಯಾಗಿ ಈ ಕವಿತೆಯನ್ನು ರಚಿಸಿದ್ದರು. ಅದರ ಶೀರ್ಷಿಕೆ “ಒಬ್ಬ ಸಾಕ್ಷಿಯಾಗಿರುವುದು” ಎಂದಾಗಿತ್ತು. ಭಾಗಶಃ ಅದರಲ್ಲಿ ಹೀಗಿತ್ತು: “ಸಾಕ್ಷಿಗಳು ನಡೆಸುತ್ತಾರೆ ಅರ್ಥವತ್ತಾದ ಶಿಸ್ತುಭರಿತ ಜೀವನ, ಪಡೆದುಕೊಳ್ಳುತ್ತಾರೆ ಅವರು ಯೆಹೋವನಿಂದ ಯುಕ್ತಾಯುಕ್ತ ಪರಿಜ್ಞಾನ, ಯೆಹೋವನಲ್ಲಿನ ಭರವಸೆಯಿಂದ ಭೇಟಿಮಾಡುತ್ತಾರೆ ಅವರು ಮನೆಗಳನ್ನು ಆಗಾಗ.”
ನಿರ್ದಿಷ್ಟವಾಗಿ ಯೆಹೋವನಲ್ಲಿನ ಈ ಭರವಸೆಯು, ಲೋಕದಾದ್ಯಂತ ಇರುವ ಅನೇಕ ಸಾಕ್ಷಿಗಳು ತಮ್ಮ ದೇಶದಲ್ಲಿರುವ ಕಿವುಡರ ಸನ್ನೆ ಭಾಷೆಯನ್ನು ಕಲಿಯುವಂತೆ ಅವರನ್ನು ಪ್ರಚೋದಿಸಿದೆ. ಈ ರೀತಿಯಲ್ಲಿ ಅವರು, ಇಂಥವರೊಂದಿಗೆ ಬೈಬಲಿನಲ್ಲಿ ಕಂಡುಬರುವ ನಿರೀಕ್ಷೆಯ ಉತ್ತೇಜನದಾಯಕ ಸಂದೇಶವನ್ನು ಹಂಚಿಕೊಳ್ಳುತ್ತಾರೆ.