ವಿಮೋಚನಾ ಮೌಲ್ಯವು ದೇವರ ನೀತಿಯನ್ನು ಎತ್ತಿಹಿಡಿಯುತ್ತದೆ
ವಿಮೋಚನಾ ಮೌಲ್ಯವು ದೇವರ ನೀತಿಯನ್ನು ಎತ್ತಿಹಿಡಿಯುತ್ತದೆ
ಆದಾಮಹವ್ವರ ದಂಗೆಯ ಬಳಿಕ ಯೆಹೋವನು, ಯಾರ ಹಿಮ್ಮಡಿಯು ಕಚ್ಚಲ್ಪಡುತ್ತದೋ ಆ ಸಂತಾನವನ್ನು ಉಂಟುಮಾಡುವ ತನ್ನ ಉದ್ದೇಶವನ್ನು ತಿಳಿಯಪಡಿಸಿದನು. (ಆದಿಕಾಂಡ 3:15) ಈ ಹಿಮ್ಮಡಿಯ ಕಚ್ಚುವಿಕೆಯು, ಯಾತನಾ ಕಂಬದ ಮೇಲೆ ಯೇಸು ಕ್ರಿಸ್ತನು ಸಾಯುವಂತೆ ದೇವರ ವೈರಿಗಳು ಮಾಡಿದಾಗ ನೆರವೇರಿತು. (ಗಲಾತ್ಯ 3:13, 16) ಪವಿತ್ರಾತ್ಮದ ಶಕ್ತಿಯ ಮೂಲಕ ಯೇಸು ಅದ್ಭುತಕರವಾಗಿ ಕನ್ಯೆಯೊಬ್ಬಳಲ್ಲಿ ಹುಟ್ಟಿದ್ದರಿಂದ ಪಾಪರಹಿತನಾಗಿದ್ದನು. ಆದುದರಿಂದ, ಅವನು ಸುರಿಸಿದ ರಕ್ತವನ್ನು, ಪಾಪ ಮತ್ತು ಮರಣವನ್ನು ಆದಾಮನಿಂದ ಬಾಧ್ಯತೆಯಾಗಿ ಪಡೆದ ಮಾನವರನ್ನು ಬಿಡುಗಡೆಮಾಡಲಿಕ್ಕಾಗಿ ವಿಮೋಚನಾ ಬೆಲೆಯಾಗಿ ಉಪಯೋಗಿಸಸಾಧ್ಯವಿದೆ.—ರೋಮಾಪುರ 5:12, 19.
ಸರ್ವಶಕ್ತ ದೇವರಾದ ಯೆಹೋವನು ಏನನ್ನು ಉದ್ದೇಶಿಸುತ್ತಾನೋ ಅದನ್ನು ಪೂರೈಸುವುದರಿಂದ ಆತನನ್ನು ಯಾವುದೂ ತಡೆಯಲಾರದು. ಆದುದರಿಂದ, ಮನುಷ್ಯನು ಪಾಪಕ್ಕೆ ಬಲಿಯಾದ ಬಳಿಕ ಇನ್ನೂ ವಿಮೋಚನಾ ಮೌಲ್ಯವು ತೆರಲ್ಪಟ್ಟಿರಲಿಲ್ಲವಾದರೂ, ಆತನ ದೃಷ್ಟಿಯಲ್ಲಿ ಅದು ಈಗಾಗಲೇ ತೆರಲ್ಪಟ್ಟಂತಿತ್ತು ಮತ್ತು ತನ್ನ ವಾಗ್ದಾನಗಳ ನೆರವೇರಿಕೆಯಲ್ಲಿ ನಂಬಿಕೆಯನ್ನಿಟ್ಟವರೊಂದಿಗೆ ಆತನು ವ್ಯವಹರಿಸಸಾಧ್ಯವಿತ್ತು. ಇದು ಹನೋಕ, ನೋಹ ಮತ್ತು ಅಬ್ರಹಾಮರಂಥ ಆದಾಮನ ಪಾಪಭರಿತ ಸಂತತಿಯವರು ದೇವರ ಪಾವಿತ್ರ್ಯವನ್ನು ಹಾಳುಮಾಡದೇ ಆತನೊಂದಿಗೆ ನಡೆಯುವಂತೆ ಮತ್ತು ಆತನ ಸ್ನೇಹವನ್ನು ಪಡೆದುಕೊಳ್ಳುವಂತೆ ಶಕ್ತಗೊಳಿಸಿತು.—ಆದಿಕಾಂಡ 5:24; 6:9; ಯಾಕೋಬ 2:23.
ಯೆಹೋವನಲ್ಲಿ ನಂಬಿಕೆಯನ್ನು ಇಟ್ಟಿದ್ದಂಥ ಕೆಲವು ವ್ಯಕ್ತಿಗಳು ಗಂಭೀರವಾದ ಪಾಪಗಳನ್ನು ಮಾಡಿದರು. ಇದಕ್ಕೆ ಅರಸನಾದ ದಾವೀದನು ಒಂದು ಉದಾಹರಣೆಯಾಗಿದ್ದಾನೆ. ‘ಅರಸನಾದ ದಾವೀದನು ಬತ್ಷೆಬೆಯೊಂದಿಗೆ ವ್ಯಭಿಚಾರಮಾಡಿ, ಅವಳ ಗಂಡನಾದ ಊರೀಯನನ್ನು ಕೊಲ್ಲಿಸಿದ ಬಳಿಕವೂ ಯೆಹೋವನು ಅವನನ್ನು ಹೇಗೆ ಆಶೀರ್ವದಿಸುತ್ತಾ ಇರಸಾಧ್ಯವಿತ್ತು?’ ಎಂದು ನೀವು ಕೇಳಬಹುದು. ಇದರಲ್ಲಿ ಪ್ರಮುಖ ಅಂಶವು ದಾವೀದನ ಯಥಾರ್ಥ ಪಶ್ಚಾತ್ತಾಪ ಮತ್ತು ನಂಬಿಕೆಯೇ ಆಗಿತ್ತು. (2 ಸಮುವೇಲ 11:1-17; 12:1-14) ಮುಂದೆ ತೆರಲ್ಪಡಲಿಕ್ಕಿದ್ದ ಯೇಸು ಕ್ರಿಸ್ತನ ಯಜ್ಞದ ಆಧಾರದ ಮೇಲೆ ಪಶ್ಚಾತ್ತಾಪಪಟ್ಟ ದಾವೀದನ ಪಾಪಗಳನ್ನು ದೇವರು ಮನ್ನಿಸಸಾಧ್ಯವಿತ್ತು ಮತ್ತು ಅದೇ ಸಮಯದಲ್ಲಿ ತನ್ನ ನ್ಯಾಯ ಹಾಗೂ ನೀತಿಯನ್ನು ಕಾಪಾಡಿಕೊಳ್ಳಸಾಧ್ಯವಿತ್ತು. (ಕೀರ್ತನೆ 32:1, 2) ಇದಕ್ಕೆ ರುಜುವಾತಾಗಿ, ಯೇಸುವಿನ ವಿಮೋಚನಾ ಮೌಲ್ಯದ ಅತ್ಯಂತ ಅಪೂರ್ವ ಸಾಧನೆಯು ಏನಾಗಿದೆ ಎಂಬುದನ್ನು ಬೈಬಲ್ ಹೀಗೆ ವಿವರಿಸಿ ಹೇಳುತ್ತದೆ: ‘ದೇವರು ಹಿಂದಿನ ಕಾಲದ ಪಾಪಗಳನ್ನು ದಂಡಿಸದೆ ಸಹಿಸಿಕೊಂಡಿರಲಾಗಿ [“ಕ್ಷಮಿಸಿರಲಾಗಿ,” NW] ತನ್ನ ನೀತಿಯನ್ನು ಈಗಿನ ಕಾಲದಲ್ಲಿ ಹೀಗೆ ತೋರಿಸಿದನು.’—ರೋಮಾಪುರ 3:25, 26.
ಹೌದು, ಯೇಸುವಿನ ರಕ್ತದ ಮೌಲ್ಯದ ಕಾರಣದಿಂದಲೇ ಮಾನವಕುಲವು ಮಹತ್ತರ ಪ್ರಯೋಜನಗಳನ್ನು ಪಡೆದುಕೊಳ್ಳುತ್ತದೆ. ವಿಮೋಚನಾ ಮೌಲ್ಯದ ಆಧಾರದ ಮೇಲೆ, ಪಶ್ಚಾತ್ತಾಪಪಡುವ ಮಾನವ ಪಾಪಿಗಳು ದೇವರೊಂದಿಗೆ ಅತಿ ಆಪ್ತ ಸಂಬಂಧವನ್ನು ಪಡೆದುಕೊಳ್ಳಸಾಧ್ಯವಿದೆ. ಅ. ಕೃತ್ಯಗಳು 24:15) ಆ ಸಮಯದಲ್ಲಿ, ವಿಮೋಚನಾ ಮೌಲ್ಯದ ಆಧಾರದ ಮೇಲೆ ಯೆಹೋವನು ಎಲ್ಲ ವಿಧೇಯ ಮಾನವರಿಗೆ ನಿತ್ಯಜೀವವನ್ನು ದಯಪಾಲಿಸುವನು. (ಯೋಹಾನ 3:36) ಸ್ವತಃ ಯೇಸುವೇ ವಿವರಿಸಿದ್ದು: “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” (ಯೋಹಾನ 3:16) ದೇವರು ವಿಮೋಚನಾ ಯಜ್ಞದ ಒದಗಿಸುವಿಕೆಯನ್ನು ಮಾಡಿದ್ದರಿಂದಲೇ ಈ ಎಲ್ಲ ಪ್ರಯೋಜನಗಳು ಮಾನವಕುಲಕ್ಕೆ ಧಾರಾಳವಾಗಿ ಲಭ್ಯಗೊಳಿಸಲ್ಪಡುವವು.
ಇದಕ್ಕೆ ಕೂಡಿಸಿ, ವಿಮೋಚನಾ ಮೌಲ್ಯವು ದೇವರ ನೂತನ ಲೋಕದಲ್ಲಿ ಮೃತರ ಪುನರುತ್ಥಾನಕ್ಕಾಗಿ ಮಾರ್ಗವನ್ನು ತೆರೆಯುತ್ತದೆ. ಇವರಲ್ಲಿ, ಯೇಸುವು ವಿಮೋಚನಾ ಮೌಲ್ಯವನ್ನು ತೆರುವುದಕ್ಕೆ ಮುಂಚೆ ಮರಣಪಟ್ಟ ದೇವರ ನಂಬಿಗಸ್ತ ಸೇವಕರು ಒಳಗೂಡಿದ್ದಾರೆ ಮತ್ತು ಅಜ್ಞಾನದಲ್ಲಿದ್ದು ಸಾವನ್ನಪ್ಪಿದ ಹಾಗೂ ಆತನನ್ನು ಆರಾಧಿಸದಿದ್ದಂಥ ಅನೇಕರು ಸಹ ಸೇರಿದ್ದಾರೆ. ಬೈಬಲ್ ಹೇಳುವುದು: ‘ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವುದು.’ (ಆದರೂ, ವಿಮೋಚನಾ ಮೌಲ್ಯದ ವಿಷಯದಲ್ಲಿ ಎದ್ದುಕಾಣುವಂಥ ವಿಚಾರವು ನಾವು ಅದರಿಂದ ಪಡೆದುಕೊಳ್ಳಲಿರುವ ಪ್ರಯೋಜನಗಳಲ್ಲ. ಅತಿ ಹೆಚ್ಚು ಪ್ರಾಮುಖ್ಯವಾದದ್ದು, ಕ್ರಿಸ್ತನ ವಿಮೋಚನಾ ಮೌಲ್ಯವು ಯೆಹೋವನ ಹೆಸರಿಗಾಗಿ ಏನು ಮಾಡುತ್ತದೆ ಎಂಬುದೇ. ಇದು ಯೆಹೋವನು ಪರಿಪೂರ್ಣ ನ್ಯಾಯವುಳ್ಳ ದೇವರಾಗಿದ್ದಾನೆ ಮತ್ತು ಆತನು ಪಾಪಪೂರ್ಣ ಮಾನವರೊಂದಿಗೆ ವ್ಯವಹರಿಸಬಲ್ಲನು ಹಾಗೂ ಅದೇ ಸಮಯದಲ್ಲಿ ಶುದ್ಧನೂ ಪವಿತ್ರನೂ ಆಗಿ ಉಳಿಯಬಲ್ಲನು ಎಂಬುದನ್ನು ರುಜುಪಡಿಸುತ್ತದೆ. ಒಂದುವೇಳೆ ದೇವರಿಗೆ ವಿಮೋಚನಾ ಮೌಲ್ಯವನ್ನು ಒದಗಿಸುವ ಉದ್ದೇಶ ಇಲ್ಲದಿರುತ್ತಿದ್ದಲ್ಲಿ, ಆದಾಮನ ಸಂತತಿಯವರಲ್ಲಿ ಯಾರೇ ಆಗಲಿ, ಹನೋಕ, ನೋಹ ಮತ್ತು ಅಬ್ರಹಾಮರು ಸಹ ಯೆಹೋವನೊಂದಿಗೆ ನಡೆಯಲು ಅಥವಾ ಆತನ ಸ್ನೇಹಿತರಾಗಿರಲು ಸಾಧ್ಯವಿರುತ್ತಿರಲಿಲ್ಲ. ಕೀರ್ತನೆಗಾರನು ಇದನ್ನು ಮನಗಂಡು, “ಕರ್ತನೇ, ಯಾಹುವೇ, ನೀನು ಪಾಪಗಳನ್ನು ಎಣಿಸುವದಾದರೆ ನಿನ್ನ ಮುಂದೆ ಯಾರು ನಿಂತಾರು?” ಎಂದು ಬರೆದನು. (ಕೀರ್ತನೆ 130:3) ತನ್ನ ಪ್ರಿಯ ಪುತ್ರನನ್ನು ಭೂಮಿಗೆ ಕಳುಹಿಸಿದ್ದಕ್ಕಾಗಿ ಯೆಹೋವನಿಗೆ ಮತ್ತು ನಮಗೋಸ್ಕರ ಮನಃಪೂರ್ವಕವಾಗಿ ತನ್ನ ಜೀವವನ್ನು ‘ವಿಮೋಚನಾ ಮೌಲ್ಯವಾಗಿ’ ಕೊಟ್ಟದ್ದಕ್ಕಾಗಿ ಯೇಸುವಿಗೆ ನಾವೆಷ್ಟು ಕೃತಜ್ಞರಾಗಿರಬೇಕು!—ಮಾರ್ಕ 10:45, NW.