ನಿಜ ಆಧ್ಯಾತ್ಮಿಕತೆ ನಿಮಗೆ ಹೇಗೆ ಲಭಿಸುವುದು?
ನಿಜ ಆಧ್ಯಾತ್ಮಿಕತೆ ನಿಮಗೆ ಹೇಗೆ ಲಭಿಸುವುದು?
“ಶಾರೀರಿಕ ಮನಸ್ಸುಳ್ಳವರಾಗಿರುವುದು ಮರಣವನ್ನು ತರುತ್ತದೆ; ಆದರೆ ಆಧ್ಯಾತ್ಮಿಕ ಮನಸ್ಸುಳ್ಳವರಾಗಿರುವುದು ಜೀವ ಹಾಗೂ ಶಾಂತಿಯನ್ನು ತರುತ್ತದೆ” ಎಂದು ಅಪೊಸ್ತಲ ಪೌಲನು ಬರೆದನು. (ರೋಮಾಪುರ 8:6, ಕಿಂಗ್ ಜೇಮ್ಸ್ ವರ್ಷನ್) ಇದನ್ನು ಹೇಳುವ ಮೂಲಕ ಆ ಅಪೊಸ್ತಲನು, ಆಧ್ಯಾತ್ಮಿಕ ವ್ಯಕ್ತಿಯಾಗಿರುವುದು ಒಬ್ಬನ ಇಷ್ಟ ಇಲ್ಲವೇ ಅನಿಸಿಕೆಗಿಂತಲೂ ಹೆಚ್ಚಾಗಿ, ಜೀವಮರಣಗಳ ವಿಷಯವಾಗಿದೆ ಎಂದು ತೋರಿಸಿದನು. ಆದರೆ ಒಬ್ಬ ಆಧ್ಯಾತ್ಮಿಕ ವ್ಯಕ್ತಿ ಯಾವ ಅರ್ಥದಲ್ಲಿ “ಜೀವ ಹಾಗೂ ಶಾಂತಿಯನ್ನು” ಪಡೆಯುತ್ತಾನೆ? ಬೈಬಲಿಗನುಸಾರ, ಅಂಥ ವ್ಯಕ್ತಿ ಈಗಲೇ ತನ್ನೊಂದಿಗೆ ಹಾಗೂ ದೇವರೊಂದಿಗೆ ಶಾಂತಿಯಲ್ಲಿ ಆನಂದಿಸುವನು ಮತ್ತು ಭವಿಷ್ಯದಲ್ಲಿ ನಿತ್ಯ ಜೀವವನ್ನು ಬಹುಮಾನವಾಗಿ ಪಡೆಯುವನು. (ರೋಮಾಪುರ 6:23; ಫಿಲಿಪ್ಪಿ 4:7) ಆದುದರಿಂದಲೇ ಯೇಸು ಹೇಳಿದ್ದು: “ತಮ್ಮ ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು ಸಂತೋಷಿತರು.”—ಮತ್ತಾಯ 5:3, NW.
ನೀವು ಈ ಪತ್ರಿಕೆಯನ್ನು ಓದುತ್ತಿರುವುದು ತಾನೇ, ನಿಮಗೆ ಆಧ್ಯಾತ್ಮಿಕತೆಯಲ್ಲಿ ಆಸಕ್ತಿಯಿದೆಯೆಂದು ತೋರಿಸುತ್ತದೆ. ಈ ರೀತಿಯ ಆಧ್ಯಾತ್ಮಿಕ ಆಸಕ್ತಿಯಿರುವುದು ವಿವೇಕಯುತ. ಆದರೆ ಆಧ್ಯಾತ್ಮಿಕತೆಯ ಕುರಿತಾದ ದೃಷ್ಟಿಕೋನಗಳು ಭಿನ್ನ ಭಿನ್ನವಾಗಿರುವುದರಿಂದ, ನೀವು ಹೀಗೆ ಯೋಚಿಸುತ್ತಿರಬಹುದು: ‘ನಿಜ ಆಧ್ಯಾತ್ಮಿಕತೆ ಅಂದರೇನು? ಅದು ಹೇಗೆ ಲಭಿಸುತ್ತದೆ?’
‘ಕ್ರಿಸ್ತನ ಮನಸ್ಸು’
ಆಧ್ಯಾತ್ಮಿಕ-ಮನಸ್ಸುಳ್ಳವರಾಗಿರುವುದರ ಮಹತ್ವ ಹಾಗೂ ಪ್ರಯೋಜನಗಳನ್ನು ಅಪೊಸ್ತಲ ಪೌಲನು ತೋರಿಸಿದ್ದಲ್ಲದೆ, ನಿಜ ಆಧ್ಯಾತ್ಮಿಕತೆ ಅಂದರೇನು ಎಂಬುದರ ಬಗ್ಗೆಯೂ ಬಹಳಷ್ಟನ್ನು ಹೇಳಿದನು. ತನ್ನ ಶರೀರದ ಆಸೆಗಳನ್ನು ಅನುಸರಿಸುವ ಭೌತಿಕ ಮನುಷ್ಯನು ಹಾಗೂ ಆಧ್ಯಾತ್ಮಿಕ ವಿಷಯಗಳನ್ನು ನೆಚ್ಚುವ ಒಬ್ಬ ಆಧ್ಯಾತ್ಮಿಕ ವ್ಯಕ್ತಿಯ ನಡುವಿನ ವ್ಯತ್ಯಾಸವನ್ನು ಪ್ರಾಚೀನ ಪಟ್ಟಣವಾದ ಕೊರಿಂಥದಲ್ಲಿದ್ದ ಕ್ರೈಸ್ತರಿಗೆ ಪೌಲನು ವಿವರಿಸಿದನು. ಅವನು ಬರೆದುದು: ‘ಆದರೆ ಭೌತಿಕ ಮನುಷ್ಯನು ದೇವರಾತ್ಮದ ವಿಷಯಗಳನ್ನು ಸ್ವೀಕರಿಸುವುದಿಲ್ಲ. ಅವು ಅವನಿಗೆ ಹುಚ್ಚುತನವಾಗಿ ತೋರುತ್ತವೆ.’ ಇನ್ನೊಂದು ಬದಿಯಲ್ಲಿ, ಆಧ್ಯಾತ್ಮಿಕ ಮನುಷ್ಯನಿಗೆ ‘ಕ್ರಿಸ್ತನ ಮನಸ್ಸು’ ಇರುತ್ತದೆಂದು ಪೌಲನು ವಿವರಿಸಿದನು.—1 ಕೊರಿಂಥ 2:14-16, NIBV.
‘ಕ್ರಿಸ್ತನ ಮನಸ್ಸನ್ನು’ ಹೊಂದುವುದರ ಮೂಲ ಅರ್ಥ, ಯೇಸುವಿಗಿದ್ದ ಮನೋವೃತ್ತಿಯನ್ನು ಹೊಂದುವುದು ಎಂದಾಗಿದೆ. (ರೋಮಾಪುರ 15:5; ಫಿಲಿಪ್ಪಿ 2:5) ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಆಧ್ಯಾತ್ಮಿಕ ವ್ಯಕ್ತಿಯು ಯೇಸುವಿನಂತೆಯೇ ಯೋಚಿಸುತ್ತಾನೆ ಮತ್ತು ಅವನ ಹೆಜ್ಜೆಜಾಡಿನಲ್ಲಿ ನಡೆಯುತ್ತಾನೆ. (1 ಪೇತ್ರ 2:21; 4:1) ಒಬ್ಬ ವ್ಯಕ್ತಿಯ ಮನಸ್ಸು ಎಷ್ಟು ಹೆಚ್ಚಾಗಿ ಕ್ರಿಸ್ತನನ್ನು ಹೋಲುತ್ತದೊ, ಅವನ ಆಧ್ಯಾತ್ಮಿಕತೆಯು ಅಷ್ಟೇ ಬಲವಾಗಿರುವುದು ಮತ್ತು ‘ಜೀವ ಹಾಗೂ ಶಾಂತಿಯನ್ನು’ ಪಡೆಯಲಿಕ್ಕಾಗಿ ಅವನು ಅಷ್ಟೇ ಹತ್ತಿರವಾಗಿರುವನು.—ರೋಮಾಪುರ 13:14.
‘ಕ್ರಿಸ್ತನ ಮನಸ್ಸನ್ನು’ ತಿಳಿದುಕೊಳ್ಳುವುದು ಹೇಗೆ?
ಒಬ್ಬ ವ್ಯಕ್ತಿಗೆ ಕ್ರಿಸ್ತನ ಮನಸ್ಸು ಇರಬೇಕಾದರೆ, ಮೊದಲಾಗಿ ಆ ಮನಸ್ಸಿನ ಕುರಿತಾಗಿ ಅವನಿಗೆ ತಿಳಿದಿರಬೇಕು. ಆದುದರಿಂದ ಆಧ್ಯಾತ್ಮಿಕತೆಯನ್ನು ಬೆಳೆಸಿಕೊಳ್ಳುವುದರ ಪ್ರಥಮ ಹೆಜ್ಜೆಯು, ಯೇಸುವಿನ ಯೋಚನಾ ರೀತಿಯ ಕುರಿತು ತಿಳಿದುಕೊಳ್ಳುವುದೇ ಆಗಿದೆ. ಆದರೆ 2,000 ವರ್ಷಗಳ ಹಿಂದೆ ಜೀವಿಸಿದ್ದ ಒಬ್ಬ ವ್ಯಕ್ತಿಯ ಮನಸ್ಸನ್ನು ನೀವು ಹೇಗೆ ತಿಳಿದುಕೊಳ್ಳುವಿರಿ? ಒಳ್ಳೇದು, ನಿಮ್ಮ ದೇಶದ ಐತಿಹಾಸಿಕ ವ್ಯಕ್ತಿಗಳ ಕುರಿತಾಗಿ ನೀವು ಹೇಗೆ ಕಲಿತುಕೊಂಡಿರಿ? ಬಹುಶಃ ಅವರ ಬಗ್ಗೆ ಓದುವ ಮೂಲಕ ಅಲ್ಲವೇ? ಹಾಗೆಯೇ, ಯೇಸುವಿನ ಕುರಿತಾದ ಲಿಖಿತ ಇತಿಹಾಸವನ್ನು ಓದುವುದು, ಅವನ ಮನಸ್ಸಿನ ಕುರಿತಾಗಿ ತಿಳಿಯುವ ಒಂದು ಪ್ರಾಮುಖ್ಯ ವಿಧಾನವಾಗಿದೆ.—ಯೋಹಾನ 17:3.
ಯೇಸುವಿನ ಬಗ್ಗೆ ನಾಲ್ಕು ಐತಿಹಾಸಿಕ ವೃತ್ತಾಂತಗಳಿವೆ. ಅವು ಮತ್ತಾಯ, ಮಾರ್ಕ, ಲೂಕ, ಯೋಹಾನರು ಬರೆದ ಸುವಾರ್ತಾ ಪುಸ್ತಕಗಳಾಗಿವೆ. ಈ ವೃತ್ತಾಂತಗಳನ್ನು ಜಾಗ್ರತೆಯಿಂದ ಓದುವ ಮೂಲಕ, ನೀವು ಯೇಸುವಿನ ಯೋಚನಾ ಶೈಲಿ, ಅವನ ಅಂತರಂಗದ ಭಾವನೆಗಳು ಮತ್ತು ಅವನ ಕೃತ್ಯಗಳ ಹಿಂದಿದ್ದ ಪ್ರಚೋದನೆಯನ್ನು ಗ್ರಹಿಸುವಿರಿ. ನೀವು ಯೇಸುವಿನ ಬಗ್ಗೆ ಓದಿದ ವಿಷಯಗಳ ಕುರಿತು ಧ್ಯಾನಿಸಲು ಸಮಯ ತೆಗೆದುಕೊಳ್ಳುವಾಗ, ಅವನು ಎಂಥ ವ್ಯಕ್ತಿ ಆಗಿದ್ದನೆಂಬುದನ್ನು ನಿಮ್ಮ ಮನಸ್ಸಿನಲ್ಲೇ ಚಿತ್ರಿಸಿಕೊಳ್ಳತೊಡಗುವಿರಿ. ನೀವು ಈಗಾಗಲೇ ಕ್ರಿಸ್ತನ ಒಬ್ಬ ಹಿಂಬಾಲಕರಾಗಿದ್ದೀರೆಂದು ನೆನಸುತ್ತಿರಲೂಬಹುದು. ಆದರೂ, ಅಂಥ ವಾಚನ ಹಾಗೂ ಗಾಢವಾದ ಯೋಚಿಸುವಿಕೆಯು “ನೀವು ಕೃಪೆಯಲ್ಲಿಯೂ ನಮ್ಮ ಕರ್ತನೂ ರಕ್ಷಕನೂ ಆಗಿರುವ ಯೇಸು ಕ್ರಿಸ್ತನ ವಿಷಯವಾದ ಜ್ಞಾನದಲ್ಲಿಯೂ ಅಭಿವೃದ್ಧಿಯನ್ನು ಹೊಂದುತ್ತಾ” ಇರುವಂತೆ ಸಹಾಯ ಮಾಡುವುದು.—2 ಪೇತ್ರ 3:18.
ಇದನ್ನು ಮನಸ್ಸಿನಲ್ಲಿಟ್ಟು ನಾವು ಸುವಾರ್ತಾ ಪುಸ್ತಕದಲ್ಲಿನ ಕೆಲವೊಂದು ಭಾಗಗಳನ್ನು ಪರಿಶೀಲಿಸಿ ಯೇಸು ಹೇಗೆ ಅಷ್ಟೊಂದು ಆಧ್ಯಾತ್ಮಿಕ ವ್ಯಕ್ತಿ ಆಗಿದ್ದನೆಂಬುದನ್ನು ನೋಡೋಣ. ತದನಂತರ ನೀವು, ಅವನಿಟ್ಟಿರುವ ಮಾದರಿಯನ್ನು ಹೇಗೆ ಅನುಸರಿಸಬಲ್ಲಿರೆಂದು ನಿಮ್ಮನ್ನು ಕೇಳಿಕೊಳ್ಳಿ.—ಆಧ್ಯಾತ್ಮಿಕತೆ ಮತ್ತು ‘ಆತ್ಮದ ಫಲ’
ಸುವಾರ್ತಾ ಲೇಖಕನಾದ ಲೂಕನು ಹೇಳಿದ್ದೇನೆಂದರೆ, ಯೇಸುವಿನ ದೀಕ್ಷಾಸ್ನಾನದ ಸಮಯದಲ್ಲಿ ದೇವರ ಪವಿತ್ರಾತ್ಮವು ಅವನ ಮೇಲೆ ಸುರಿಸಲ್ಪಟ್ಟಿತು ಮತ್ತು ಅವನು ‘ಪವಿತ್ರಾತ್ಮಭರಿತ’ನಾದನು. (ಲೂಕ 3:21, 22; 4:1) ಅಂತೆಯೇ, ದೇವರ ಪವಿತ್ರಾತ್ಮ ಅಂದರೆ ಕಾರ್ಯಕಾರಿ ಶಕ್ತಿಯಿಂದ ನಿರ್ದೇಶಿಸಲ್ಪಡುವುದರ ಮಹತ್ವವನ್ನು ಯೇಸು ತನ್ನ ಹಿಂಬಾಲಕರ ಮನಸ್ಸಿನಲ್ಲಿ ಅಚ್ಚೊತ್ತಿದನು. (ಆದಿಕಾಂಡ 1:2; ಲೂಕ 11:9-13) ಪವಿತ್ರಾತ್ಮದಿಂದ ನಿರ್ದೇಶಿಸಲ್ಪಡುವುದು ಏಕೆ ಪ್ರಾಮುಖ್ಯ? ಏಕೆಂದರೆ ಪವಿತ್ರಾತ್ಮಕ್ಕೆ ಒಬ್ಬ ವ್ಯಕ್ತಿಯ ಮನಸ್ಸನ್ನು ಪರಿವರ್ತಿಸುವ ಶಕ್ತಿಯಿದೆ. ಈ ಮೂಲಕ ಒಬ್ಬನ ಮನಸ್ಸು ಕ್ರಿಸ್ತನ ಮನಸ್ಸನ್ನು ಹೋಲಲು ಆರಂಭಿಸುತ್ತದೆ. (ರೋಮಾಪುರ 12:1, 2) ಪವಿತ್ರಾತ್ಮವು ಒಬ್ಬ ವ್ಯಕ್ತಿಯಲ್ಲಿ “ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ದಯೆ ಉಪಕಾರ ನಂಬಿಕೆ ಸಾಧುತ್ವ ಶಮೆದಮೆ”ಯಂಥ ಗುಣಗಳನ್ನು ಫಲಿಸುತ್ತದೆ. ಈ ಗುಣಗಳನ್ನು ಬೈಬಲ್ ‘ಪವಿತ್ರಾತ್ಮದ ಫಲ’ ಎಂದು ಕರೆಯುತ್ತದೆ ಮತ್ತು ಇವುಗಳು ನಿಜವಾಗಿಯೂ ಆಧ್ಯಾತ್ಮಿಕ ವ್ಯಕ್ತಿಯ ಗುರುತಾಗಿವೆ. (ಗಲಾತ್ಯ 5:22, 23) ಚುಟುಕಾಗಿ ಹೇಳುವುದಾದರೆ, ಆಧ್ಯಾತ್ಮಿಕ-ಮನಸ್ಸಿನ ವ್ಯಕ್ತಿಯೊಬ್ಬನು ದೇವರ ಆತ್ಮದಿಂದ ನಡೆಸಲ್ಪಡುವವನಾಗಿದ್ದಾನೆ.
ಯೇಸು ತನ್ನ ಶುಶ್ರೂಷೆಯಾದ್ಯಂತ ಪವಿತ್ರಾತ್ಮದ ಫಲಗಳನ್ನು ವ್ಯಕ್ತಪಡಿಸಿದನು. ಸಮಾಜದಲ್ಲಿ ಕೀಳಾಗಿ ಎಣಿಸಲ್ಪಟ್ಟವರನ್ನು ಅವನು ಉಪಚರಿಸಿದ ರೀತಿಯಲ್ಲಿ ಪ್ರೀತಿ, ದಯೆ ಹಾಗೂ ಒಳ್ಳೇತನ (ಉಪಕಾರ)ದಂಥ ಗುಣಗಳು ವಿಶೇಷವಾಗಿ ವ್ಯಕ್ತವಾಗುತ್ತಿದ್ದವು. (ಮತ್ತಾಯ 9:36) ಉದಾಹರಣೆಗಾಗಿ ಅಪೊಸ್ತಲ ಯೋಹಾನನು ವರ್ಣಿಸಿದ ಒಂದು ಸನ್ನಿವೇಶವನ್ನು ಗಮನಿಸಿರಿ. ಅದರ ಕುರಿತು ಹೀಗೆ ಬರೆಯಲಾಗಿದೆ: “ಯೇಸು ಹಾದುಹೋಗುತ್ತಿರುವಾಗ ಒಬ್ಬ ಹುಟ್ಟುಕುರುಡನನ್ನು ಕಂಡನು.” ಯೇಸುವಿನ ಶಿಷ್ಯರು ಸಹ ಇವನನ್ನು ಗಮನಿಸಿದರು, ಆದರೆ ಅವರ ದೃಷ್ಟಿಯಲ್ಲಿ ಅವನೊಬ್ಬ ಪಾಪಿ ಆಗಿದ್ದನು ಅಷ್ಟೇ. “ಯಾರು ಪಾಪಮಾಡಿದರು? ಇವನೋ? ಇವನ ತಂದೆತಾಯಿಗಳೋ?” ಎಂದವರು ಕೇಳಿದರು. ಆ ಕುರುಡನ ನೆರೆಯವರು ಸಹ ಅವನನ್ನು ನೋಡುತ್ತಿದ್ದರು, ಆದರೆ ಅವರಿಗೆ ಅವನೊಬ್ಬ ಭಿಕ್ಷುಕನಾಗಿದ್ದನು, ಅಷ್ಟೇ. ‘ಇವನು ಆ ಭಿಕ್ಷುಕನಲ್ಲವೇ’ ಎಂದವರು ಹೇಳಿದರು. ಆದರೆ ಯೇಸುವಿಗೆ, ಸಹಾಯದ ಅಗತ್ಯವಿರುವ ಒಬ್ಬ ವ್ಯಕ್ತಿಯಂತೆ ಅವನು ಕಂಡುಬಂದನು. ಅವನು ಆ ಕುರುಡನೊಂದಿಗೆ ಮಾತಾಡಿ ಅವನನ್ನು ಗುಣಪಡಿಸಿದನು.—ಯೋಹಾನ 9:1-8.
ಈ ಸನ್ನಿವೇಶವು ಕ್ರಿಸ್ತನ ಮನಸ್ಸಿನ ಬಗ್ಗೆ ನಿಮಗೇನು ಹೇಳುತ್ತದೆ? ಮೊದಲನೆಯದಾಗಿ, ಯೇಸು ದೀನಜನರನ್ನು ಉಪೇಕ್ಷಿಸಲಿಲ್ಲ ಬದಲಾಗಿ ಕೋಮಲ ಕನಿಕರದಿಂದ ಉಪಚರಿಸಿದನು. ಎರಡನೆಯದಾಗಿ, ಅವನು ಇತರರಿಗೆ ಸಹಾಯ ಮಾಡಲು ತಾನಾಗಿಯೇ ಮುಂದಾದನು. ಯೇಸುವಿಟ್ಟ ಈ ಮಾದರಿಯನ್ನು ನೀವು ಅನುಸರಿಸುತ್ತೀರೆಂದು ನೆನಸುತ್ತೀರೋ? ಜನರ ಬಗ್ಗೆ ನಿಮಗೆ ಯೇಸುವಿನಂಥದ್ದೇ ದೃಷ್ಟಿಕೋನ ಇದೆಯೋ? ಅವರು ತಮ್ಮ ಜೀವನವನ್ನು ಸುಧಾರಿಸಿ, ಭವಿಷ್ಯತ್ತನ್ನು ಉಜ್ವಲಗೊಳಿಸಲು ಬೇಕಾದ ಸಹಾಯ ಕೊಡುತ್ತೀರೋ? ಅಥವಾ ಪ್ರತಿಷ್ಠಿತ ಜನರನ್ನು ಮಾತ್ರ ಒಲಿದು, ಪ್ರತಿಷ್ಠೆಯಿಲ್ಲದವರನ್ನು ಉಪೇಕ್ಷಿಸುತ್ತೀರೋ? ನೀವು ಜನರಿಗೆ ಸಹಾಯ ಕೊಡುತ್ತಿರುವಲ್ಲಿ, ಯೇಸುವಿನ ಮಾದರಿಯನ್ನು ಖಂಡಿತವಾಗಿಯೂ ಅನುಸರಿಸುತ್ತಿರುವಿರಿ.—ಕೀರ್ತನೆ 72:12-14.
ಆಧ್ಯಾತ್ಮಿಕತೆ ಮತ್ತು ಪ್ರಾರ್ಥನೆ
ಯೇಸು ಅನೇಕಸಲ ದೇವರಿಗೆ ಪ್ರಾರ್ಥನೆ ಮಾಡಿದನೆಂದು ಸುವಾರ್ತಾ ವೃತ್ತಾಂತಗಳು ತೋರಿಸುತ್ತವೆ. (ಮಾರ್ಕ 1:35; ಲೂಕ 5:16; 22:41) ಭೂಮಿಯ ಮೇಲೆ ಯೇಸು ತನ್ನ ಶುಶ್ರೂಷೆಯಾದ್ಯಂತ ಪ್ರಾರ್ಥನೆಮಾಡಲಿಕ್ಕಾಗಿ ಯೋಜಿಸಿ ಸಮಯ ಬದಿಗಿರಿಸಿದನು. ಶಿಷ್ಯ ಮತ್ತಾಯನು ಬರೆದುದು: “ಆತನು [ಯೇಸು] ಜನರ ಗುಂಪುಗಳನ್ನು ಕಳುಹಿಸಿಬಿಟ್ಟ ಮೇಲೆ ಪ್ರಾರ್ಥನೆಮಾಡುವದಕ್ಕೆ ಏಕಾಂತವಾಗಿ ಬೆಟ್ಟವನ್ನು ಹತ್ತಿದನು.” (ಮತ್ತಾಯ 14:23) ತನ್ನ ಸ್ವರ್ಗೀಯ ತಂದೆಯೊಂದಿಗೆ ಮೌನ ಸಂವಾದದಲ್ಲಿ ಕಳೆದಂಥ ಆ ಕ್ಷಣಗಳಿಂದ ಯೇಸು ಬಲ ಹೊಂದಿದನು. (ಮತ್ತಾಯ 26:36-44) ಅದೇ ರೀತಿಯಲ್ಲಿ, ಇಂದು ಆಧ್ಯಾತ್ಮಿಕ ಮನಸ್ಸುಳ್ಳವರು ದೇವರೊಂದಿಗೆ ಸಂವಾದಿಸಲು ಅವಕಾಶಗಳಿಗಾಗಿ ಹುಡುಕುತ್ತಾರೆ. ಇದು, ಸೃಷ್ಟಿಕರ್ತನೊಂದಿಗಿನ ತಮ್ಮ ಸಂಬಂಧವನ್ನು ಬಲಪಡಿಸಿ, ತಮ್ಮ ಯೋಚನೆಯಲ್ಲಿ ಹೆಚ್ಚೆಚ್ಚಾಗಿ ಕ್ರಿಸ್ತನಂತಾಗಲು ಸಹಾಯ ಮಾಡುವುದೆಂದು ಅವರಿಗೆ ತಿಳಿದಿದೆ.
ಯೇಸು ಅನೇಕವೇಳೆ ಪ್ರಾರ್ಥನೆಯಲ್ಲಿ ದೀರ್ಘ ಸಮಯ ಕಳೆದನು. (ಯೋಹಾನ 17:1-26) ದೃಷ್ಟಾಂತಕ್ಕಾಗಿ, ತನ್ನ ಅಪೊಸ್ತಲರಾಗಲಿದ್ದ 12 ಮಂದಿ ಪುರುಷರನ್ನು ಆಯ್ಕೆಮಾಡುವ ಮುಂಚೆ ಯೇಸು “ಬೆಟ್ಟಕ್ಕೆ ಹೋಗಿ ರಾತ್ರಿಯನ್ನೆಲ್ಲಾ ಪ್ರಾರ್ಥನೆಯಲ್ಲೇ ಕಳೆದನು.” (ಲೂಕ 6:12) ಆಧ್ಯಾತ್ಮಿಕ ಮನಸ್ಸುಳ್ಳವರು ರಾತ್ರಿಯನ್ನೆಲ್ಲಾ ಪ್ರಾರ್ಥನೆಯಲ್ಲಿ ಕಳೆಯಲಿಕ್ಕಿಲ್ಲವಾದರೂ ಅವರು ಯೇಸುವಿನ ಮಾದರಿಯನ್ನು ಅನುಸರಿಸುತ್ತಾರೆ. ಜೀವನದಲ್ಲಿ ಯಾವುದೇ ದೊಡ್ಡ ನಿರ್ಣಯಗಳನ್ನು ಮಾಡುವ ಮುಂಚೆ ದೇವರಿಗೆ ಪ್ರಾರ್ಥನೆಮಾಡಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾ, ತಮ್ಮ ಆಧ್ಯಾತ್ಮಿಕತೆಯನ್ನು ಬಲಪಡಿಸುವ ಆಯ್ಕೆಗಳನ್ನು ಮಾಡಲಿಕ್ಕಾಗಿ ಅವರು ಪವಿತ್ರಾತ್ಮದ ನಿರ್ದೇಶನವನ್ನು ಕೋರುತ್ತಾರೆ.
ಯೇಸುವಿನ ಪ್ರಾರ್ಥನೆಗಳು ಯಥಾರ್ಥವೂ ಆಗಿದ್ದವು. ನಮ್ಮ ಪ್ರಾರ್ಥನೆಗಳೂ ಹಾಗೆಯೇ ಇರಬೇಕು. ಯೇಸುವಿನ ಮರಣದ ಮುಂಚಿನ ಸಾಯಂಕಾಲದಂದು ಅವನು ಪ್ರಾರ್ಥಿಸಿದ ವಿಧದ ಕುರಿತಾಗಿ ಲೂಕನು ಏನು ದಾಖಲಿಸಿದನೆಂಬುದನ್ನು ಗಮನಿಸಿರಿ. “ಆತನು [ಯೇಸು] ಮನೋವ್ಯಥೆಯುಳ್ಳವನಾಗಿ ಇನ್ನೂ ಆಸಕ್ತಿಯಿಂದ ಪ್ರಾರ್ಥಿಸುತ್ತಿರಲಾಗಿ ಆತನ ಬೆವರು ಭೂಮಿಗೆ ಬೀಳುತ್ತಿರುವ ರಕ್ತದ ದೊಡ್ಡ ಹನಿಗಳೋಪಾದಿಯಲ್ಲಿತ್ತು.” (ಲೂಕ 22:44) ಯೇಸು ಈ ಹಿಂದೆಯೂ ಆಸಕ್ತಿಯಿಂದ ಪ್ರಾರ್ಥಿಸಿದ್ದನು. ಆದರೆ ಈಗ ತನ್ನ ಭೂಜೀವನದಲ್ಲಿ ಅತ್ಯಂತ ಕಠಿನವಾದ ಪರೀಕ್ಷೆಯನ್ನು ಎದುರಿಸುತ್ತಿದ್ದಾಗ ಅವನು “ಇನ್ನೂ ಆಸಕ್ತಿಯಿಂದ” ಪ್ರಾರ್ಥಿಸಿದನು, ಮತ್ತು ಅವನ ಪ್ರಾರ್ಥನೆಗೆ ಉತ್ತರ ಸಿಕ್ಕಿತು. (ಇಬ್ರಿಯ 5:7) ಆಧ್ಯಾತ್ಮಿಕ ಮನಸ್ಸುಳ್ಳ ಜನರು ಯೇಸುವಿನ ಮಾದರಿಯನ್ನು ಅನುಸರಿಸುತ್ತಾರೆ. ಅತಿ ತೀಕ್ಷ್ಣವಾದ ಕಷ್ಟಗಳನ್ನು ಎದುರಿಸುತ್ತಿರುವಾಗ ಅವರು ಪವಿತ್ರಾತ್ಮಕ್ಕಾಗಿ, ಮಾರ್ಗದರ್ಶನಕ್ಕಾಗಿ ಹಾಗೂ ಬೆಂಬಲಕ್ಕಾಗಿ ಹೆಚ್ಚು ಆಸಕ್ತಿಯಿಂದ ದೇವರಿಗೆ ಪ್ರಾರ್ಥಿಸುತ್ತಾರೆ.
ಯೇಸು ಅನೇಕಾವರ್ತಿ ಪ್ರಾರ್ಥನೆ ಮಾಡುತ್ತಿದ್ದದರಿಂದ, ಅವನ ಶಿಷ್ಯರು ಅವನನ್ನು ಈ ವಿಷಯದಲ್ಲಿ ಅನುಸರಿಸಲು ಬಯಸಿದ್ದು ಅಚ್ಚರಿಯೇನಲ್ಲ. ಆದುದರಿಂದ ಅವರು ಅವನಿಗೆ ಕೇಳಿದ್ದು: “ನಮಗೂ ಪ್ರಾರ್ಥನೆಮಾಡುವದನ್ನು ಕಲಿಸು.” (ಲೂಕ 11:1) ಅದೇ ರೀತಿಯಲ್ಲಿ ಇಂದು, ಆಧ್ಯಾತ್ಮಿಕ ವಿಷಯಗಳನ್ನು ಬಹುಮೂಲ್ಯವೆಂದೆಣಿಸುವವರು ಮತ್ತು ದೇವರ ಪವಿತ್ರಾತ್ಮದಿಂದ ಮಾರ್ಗದರ್ಶಿಸಲ್ಪಡಲು ಬಯಸುವವರು, ದೇವರಿಗೆ ಪ್ರಾರ್ಥಿಸುವ ವಿಧದಲ್ಲಿ ಯೇಸುವಿನ ಮಾದರಿಯನ್ನು ಅನುಸರಿಸುತ್ತಾರೆ. ನಿಜವಾದ ಆಧ್ಯಾತ್ಮಿಕತೆಗೂ ಪ್ರಾರ್ಥನೆಗೂ ಬಿಡಿಸಲಾಗದ ನಂಟಿದೆ.
ಆಧ್ಯಾತ್ಮಿಕತೆ ಮತ್ತು ಸುವಾರ್ತೆ ಸಾರುವಿಕೆ
ಮಾರ್ಕನ ಸುವಾರ್ತಾ ಪುಸ್ತಕದಲ್ಲಿ, ಯೇಸು ಅನೇಕ ಮಂದಿ ಅಸ್ವಸ್ಥರನ್ನು ರಾತ್ರಿ ಬಹು ಹೊತ್ತಿನ ವರೆಗೂ ಗುಣಪಡಿಸಿದ್ದರ ಕುರಿತಾದ ದಾಖಲೆಯಿದೆ. ಮರುದಿನ ಮುಂಜಾನೆ ಅವನು ಒಂಟಿಯಾಗಿ ಪ್ರಾರ್ಥನೆ ಮಾಡುತ್ತಿದ್ದಾಗ ಅವನ ಅಪೊಸ್ತಲರು ಬಂದು, ಅನೇಕ ಜನರು ಬಹುಶಃ ಗುಣಹೊಂದಲಿಕ್ಕಾಗಿ ಬಯಸುತ್ತಾ ಅವನಿಗಾಗಿ ಕಾಯುತ್ತಿದ್ದಾರೆಂದು ಹೇಳಿದರು. ಆದರೆ ಯೇಸು ಅವರಿಗೆ ಹೀಗಂದನು: “ನಾವು ಸಮೀಪದಲ್ಲಿರುವ ಬೇರೆ ಊರುಗಳಿಗೆ ಹೋಗೋಣ; ಅಲ್ಲಿಯೂ ನಾನು ಸುವಾರ್ತೆಯನ್ನು ಸಾರಬೇಕು.” ಅನಂತರ ಯೇಸು ಇದಕ್ಕೆ ಕಾರಣವನ್ನು ವಿವರಿಸಿದನು: “ಇದಕ್ಕಾಗಿಯೇ ನಾನು ಹೊರಟುಬಂದಿದ್ದೇನೆ.” (ಮಾರ್ಕ 1:32-38; ಲೂಕ 4:43) ಜನರನ್ನು ಗುಣಪಡಿಸುವುದು ಯೇಸುವಿಗೆ ಪ್ರಾಮುಖ್ಯವಾಗಿದ್ದರೂ, ದೇವರ ರಾಜ್ಯದ ಸುವಾರ್ತೆಯನ್ನು ಸಾರುವುದು ಅವನ ಪ್ರಧಾನ ನಿಯೋಗವಾಗಿತ್ತು.—ಮಾರ್ಕ 1:14, 15.
ಇಂದು ಇತರರಿಗೆ ದೇವರ ರಾಜ್ಯದ ಕುರಿತಾಗಿ ತಿಳಿಸುವುದು, ಕ್ರಿಸ್ತನ ಮನಸ್ಸುಳ್ಳವರ ಗುರುತು ಚಿಹ್ನೆಯಾಗಿದೆ. ತನ್ನ ಹಿಂಬಾಲಕರಾಗಲು ಬಯಸುವವರೆಲ್ಲರಿಗೆ ಯೇಸು ಈ ಆಜ್ಞೆ ಕೊಟ್ಟನು: “ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಮತ್ತಾಯ 28:19, 20) ಅಷ್ಟುಮಾತ್ರವಲ್ಲದೆ ಯೇಸು ಮುಂತಿಳಿಸಿದ್ದು: “ಇದಲ್ಲದೆ ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.” (ಮತ್ತಾಯ 24:14) ದೇವರ ವಾಕ್ಯವು ಸೂಚಿಸುವಂತೆ ಸಾರುವ ಕೆಲಸವು ಪವಿತ್ರಾತ್ಮದ ಶಕ್ತಿಯಿಂದ ಸಾಧಿಸಲ್ಪಡುತ್ತಿರುವ ಕಾರಣ, ಆ ಕೆಲಸದಲ್ಲಿ ಅರ್ಥಪೂರ್ಣ ರೀತಿಯಲ್ಲಿ ಪಾಲ್ಗೊಳ್ಳುವುದು ನಿಜ ಆಧ್ಯಾತ್ಮಿಕತೆಯ ಗುರುತಾಗಿದೆ.—ಅ. ಕೃತ್ಯಗಳು 1:8.
ಶಿಷ್ಯರನ್ನಾಗಿ ಮಾಡಿರಿ; . . . ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ.” (ಲೋಕದಾದ್ಯಂತ ಇರುವ ಜನರಿಗೆ ರಾಜ್ಯ ಸಂದೇಶವನ್ನು ಸಾರುವುದಕ್ಕಾಗಿ ಲಕ್ಷಾಂತರ ಜನರ ಐಕ್ಯ ಪ್ರಯತ್ನಗಳು ಅಗತ್ಯ. (ಯೋಹಾನ 17:20, 21) ಈ ಕೆಲಸದಲ್ಲಿ ತೊಡಗಿರುವವರು ಆಧ್ಯಾತ್ಮಿಕ ಮನಸ್ಸುಳ್ಳವರಾಗಿರಬೇಕು ಮಾತ್ರವಲ್ಲ, ಲೋಕವ್ಯಾಪಕವಾಗಿ ಸುಸಂಘಟಿತರೂ ಆಗಿರಬೇಕು. ಕ್ರಿಸ್ತನ ಹೆಜ್ಜೆಜಾಡಿನಲ್ಲಿ ನಡೆಯುತ್ತಿರುವ ಮತ್ತು ಲೋಕದಾದ್ಯಂತ ರಾಜ್ಯದ ಸುವಾರ್ತೆಯನ್ನು ಸಾರುತ್ತಿರುವ ಜನರು ಯಾರೆಂದು ನೀವು ಗುರುತಿಸಬಲ್ಲಿರೋ?
ಆಧ್ಯಾತ್ಮಿಕ ವ್ಯಕ್ತಿಯ ಆವಶ್ಯಕತೆಗಳನ್ನು ನೀವು ತಲಪುತ್ತೀರೊ?
ನಿಜ ಆಧ್ಯಾತ್ಮಿಕತೆಯುಳ್ಳ ಒಬ್ಬ ವ್ಯಕ್ತಿಯನ್ನು ಗುರುತಿಸುವ ಇತರ ಗುಣಲಕ್ಷಣಗಳು ಇವೆಯಾದರೂ, ಈಗಾಗಲೇ ಚರ್ಚಿಸಲಾಗಿರುವ ಆವಶ್ಯಕತೆಗಳನ್ನು ನೀವೆಷ್ಟರ ಮಟ್ಟಿಗೆ ತಲಪುತ್ತೀರಿ? ಇದನ್ನು ಕಂಡುಕೊಳ್ಳಲಿಕ್ಕಾಗಿ ನಿಮ್ಮನ್ನೇ ಹೀಗೆ ಕೇಳಿ: ‘ನಾನು ದೇವರ ವಾಕ್ಯವಾದ ಬೈಬಲನ್ನು ಕ್ರಮವಾಗಿ ಓದಿ, ಅದರ ಬಗ್ಗೆ ಗಾಢವಾಗಿ ಯೋಚಿಸುತ್ತೇನೊ? ನನ್ನ ಜೀವನದಲ್ಲಿ ಪವಿತ್ರಾತ್ಮದ ಫಲವನ್ನು ಪ್ರದರ್ಶಿಸುತ್ತೇನೋ? ನಾನು ಎಡೆಬಿಡದೆ ಪ್ರಾರ್ಥಿಸುತ್ತೇನೊ? ದೇವರ ರಾಜ್ಯದ ಸುವಾರ್ತೆಯನ್ನು ಲೋಕವ್ಯಾಪಕವಾಗಿ ಸಾರುತ್ತಿರುವ ಜನರೊಂದಿಗೆ ನಾನು ಸಹವಾಸ ಮಾಡಲು ಬಯಸುತ್ತೇನೋ?’
ಈ ಪ್ರಾಮಾಣಿಕ ಸ್ವಪರೀಕ್ಷೆಯು, ನಿಮ್ಮ ಆಧ್ಯಾತ್ಮಿಕತೆಯ ಆಳವನ್ನು ನಿರ್ಧರಿಸಲು ಸಹಾಯ ಮಾಡಬಹುದು. ನೀವೀಗಲೇ ಅಗತ್ಯವಿರುವ ಹೆಜ್ಜೆಗಳನ್ನು ತೆಗೆದುಕೊಳ್ಳುವಂತೆ ನಿಮ್ಮನ್ನು ಉತ್ತೇಜಿಸುತ್ತೇವೆ. ಹೀಗೆ ಮಾಡುವುದರಿಂದ ‘ಜೀವ ಹಾಗೂ ಶಾಂತಿ’ ನಿಮ್ಮದಾಗುವುದು.—ರೋಮಾಪುರ 8:6; ಮತ್ತಾಯ 7:13, 14; 2 ಪೇತ್ರ 1:5-11. (w07 8/1)
[ಪುಟ 7ರಲ್ಲಿರುವ ಚೌಕ/ಚಿತ್ರಗಳು]
ಆಧ್ಯಾತ್ಮಿಕತೆಯ ಗುರುತುಗಳು
◆ ದೇವರ ವಾಕ್ಯದ ಮೇಲೆ ಪ್ರೀತಿ
◆ ಆತ್ಮದ ಫಲವನ್ನು ತೋರಿಸುವುದು
◆ ಕ್ರಮವಾಗಿ ಹಾಗೂ ಯಥಾರ್ಥವಾಗಿ ದೇವರಿಗೆ ಪ್ರಾರ್ಥಿಸುವುದು
◆ ರಾಜ್ಯ ಸುವಾರ್ತೆಯನ್ನು ಸಾರುವುದು
[ಪುಟ 5ರಲ್ಲಿರುವ ಚಿತ್ರ]
‘ಕ್ರಿಸ್ತನ ಮನಸ್ಸನ್ನು’ ತಿಳಿದುಕೊಳ್ಳುವಂತೆ ಬೈಬಲ್ ನಿಮಗೆ ಸಹಾಯ ಮಾಡುತ್ತದೆ