ವಾಚಕರಿಂದ ಪ್ರಶ್ನೆಗಳು
ವಾಚಕರಿಂದ ಪ್ರಶ್ನೆಗಳು
ಗರ್ಭದಲ್ಲಿ ಸಾಯುವ ಶಿಶುವಿಗೆ ಪುನರುತ್ಥಾನವಾಗುವುದೋ?
ಗರ್ಭದಲ್ಲಿರುವ ಮಗುವನ್ನು ಮರಣದಲ್ಲಿ ಕಳೆದುಕೊಳ್ಳುವ ನೋವು ಅದನ್ನು ಅನುಭವಿಸಿದವರಿಗೇ ಗೊತ್ತು. ಕೆಲವು ಹೆತ್ತವರಂತೂ ತುಂಬ ಸಂಕಟಪಡುತ್ತಾರೆ. ಒಬ್ಬ ತಾಯಿ, ಐದು ಮಕ್ಕಳನ್ನು ಈ ರೀತಿ ಕಳೆದುಕೊಂಡಳು. ಕಾಲಾನಂತರ ಇಬ್ಬರು ಆರೋಗ್ಯವಂತ ಪುತ್ರರನ್ನು ಬೆಳೆಸುವ ಖುಷಿ ಅವಳದ್ದಾಯಿತು. ಹಾಗಿದ್ದರೂ, ತಾನು ಹಿಂದೆ ಕಳೆದುಕೊಂಡ ಪ್ರತಿಯೊಂದು ಮಗುವಿನ ನೆನಪು ಆಕೆಗಿತ್ತು. ಗರ್ಭಸ್ರಾವವಾಗಿ ಹೋದ ಇಲ್ಲವೇ ಮೃತಸ್ಥಿತಿಯಲ್ಲಿ ಹುಟ್ಟಿದ ಆ ಮಕ್ಕಳು ಒಂದುವೇಳೆ ಬದುಕಿದ್ದರೆ ಎಷ್ಟು ದೊಡ್ಡವರಾಗಿರುತ್ತಿದ್ದರು ಎಂಬುದನ್ನು ಅವಳು ಜೀವಮಾನಪೂರ್ತಿ ನೆನಸಿಕೊಳ್ಳುತ್ತಿದ್ದಳು. ಇಂಥ ಕ್ರೈಸ್ತರಿಗೆ, ಅವರು ಕಳೆದುಕೊಂಡ ಶಿಶುಗಳ ಪುನರುತ್ಥಾನವಾಗುವುದೆಂದು ನಿರೀಕ್ಷಿಸಲು ಏನಾದರೂ ಆಧಾರವಿದೆಯೋ?
ನಮಗೆ ತಿಳಿದಿಲ್ಲ ಎಂಬುದೇ ಈ ಪ್ರಶ್ನೆಗೆ ಸರಳ ಉತ್ತರ. ಗರ್ಭಸ್ರಾವದಿಂದ ಕಳೆದುಕೊಂಡಿರುವ ಶಿಶುಗಳ ಇಲ್ಲವೇ ಹುಟ್ಟುವಾಗಲೇ ಸತ್ತಿರುವ ಶಿಶುಗಳ ಪುನರುತ್ಥಾನದ ಸಂಬಂಧದಲ್ಲಿ ಬೈಬಲ್ ನೇರವಾಗಿ ಏನನ್ನೂ ತಿಳಿಸುವುದಿಲ್ಲ. ಹಾಗಿದ್ದರೂ, ಈ ಪ್ರಶ್ನೆಗೆ ಸಂಬಂಧಿಸಿದ ಮತ್ತು ಸ್ವಲ್ಪ ಮಟ್ಟಿಗಿನ ಸಾಂತ್ವನಕೊಡಬಲ್ಲ ಮೂಲತತ್ತ್ವಗಳು ದೇವರ ವಾಕ್ಯದಲ್ಲಿವೆ.
ಪರಸ್ಪರ ಸಂಬಂಧವಿರುವ ಎರಡು ಪ್ರಶ್ನೆಗಳನ್ನು ನಾವೀಗ ಚರ್ಚಿಸೋಣ. ಮೊದಲನೆಯದಾಗಿ, ಯೆಹೋವನ ದೃಷ್ಟಿಯಲ್ಲಿ ಮಾನವ ಜೀವ ಯಾವಾಗ ಆರಂಭವಾಗುತ್ತದೆ—ಗರ್ಭಧಾರಣೆಯಾದಾಗಲೋ ಜನನವಾದಾಗಲೋ? ಎರಡನೆಯದಾಗಿ, ಗರ್ಭದಲ್ಲಿರುವ ಶಿಶುವಿನ ಬಗ್ಗೆ ಯೆಹೋವನ ನೋಟವೇನು—ಅದನ್ನು ಒಂದು ಅಪೂರ್ವ ವ್ಯಕ್ತಿಯಾಗಿ ಪರಿಗಣಿಸುತ್ತಾನೋ, ಸ್ತ್ರೀಯ ಗರ್ಭದಲ್ಲಿರುವ ಜೀವಕೋಶಗಳ ಹಾಗೂ ಕಣಗಳ ಮುದ್ದೆಯಾಗಿ ಪರಿಗಣಿಸುತ್ತಾನೋ? ಈ ಎರಡೂ ಪ್ರಶ್ನೆಗಳಿಗೆ ಬೈಬಲ್ ಮೂಲತತ್ತ್ವಗಳು ಸ್ಪಷ್ಟ ಉತ್ತರಗಳನ್ನು ಕೊಡುತ್ತವೆ.
ಜೀವವು ಜನನದ ಸಮಯದಲ್ಲಲ್ಲ ಬದಲಾಗಿ ಅದಕ್ಕಿಂತ ಎಷ್ಟೋ ಮುಂಚೆಯೇ ಆರಂಭವಾಗುತ್ತದೆಂದು ಮೋಶೆಯ ಧರ್ಮಶಾಸ್ತ್ರವು ಸ್ಪಷ್ಟವಾಗಿ ತೋರಿಸಿತು. ಹೇಗೆ? ಗರ್ಭದಲ್ಲಿರುವ ಮಗುವನ್ನು ಕೊಲ್ಲುವ ಅಪರಾಧಿಗೆ ಮರಣದಂಡನೆ ವಿಧಿಸುವ ಮೂಲಕವೇ. ಈ ನಿಯಮವನ್ನು ಪರಿಗಣಿಸಿ: “ಪ್ರಾಣಕ್ಕೆ ಪ್ರತಿಯಾಗಿ ಪ್ರಾಣವನ್ನು ಕೊಡಿಸಬೇಕು.” * (ವಿಮೋ. 21:22, 23) ಇದು, ಗರ್ಭದಲ್ಲಿರುವ ಮಗು ಒಂದು ಜೀವವಾಗಿದ್ದು, ಅದೊಂದು ವ್ಯಕ್ತಿಯೆಂದು ತೋರಿಸಿತು. ಈ ಅನಂತ ಸತ್ಯವನ್ನು ಅರ್ಥಮಾಡಿಕೊಂಡಿರುವುದರಿಂದಲೇ ಲಕ್ಷಾಂತರ ಕ್ರೈಸ್ತರು ಗರ್ಭಪಾತಮಾಡುವುದನ್ನು ದೇವರ ವಿರುದ್ಧ ಗಂಭೀರ ಪಾಪವಾಗಿದೆಯೆಂದು ಪರಿಗಣಿಸಿ, ಅದರಿಂದ ದೂರವಿರುತ್ತಾರೆ.
ಗರ್ಭದಲ್ಲಿರುವ ಮಗು ಒಂದು ಜೀವವಾಗಿದೆ ನಿಜ, ಆದರೆ ಯೆಹೋವನ ದೃಷ್ಟಿಯಲ್ಲಿ ಅದಕ್ಕೆ ಯಾವ ಮೌಲ್ಯವಿದೆ? ಮೇಲೆ ಉಲ್ಲೇಖಿಸಲಾದ ನಿಯಮಕ್ಕನುಸಾರ, ಒಬ್ಬ ವ್ಯಕ್ತಿ ಇನ್ನೂ ಹುಟ್ಟಿರದ ಶಿಶುವಿನ ಮರಣಕ್ಕೆ ಕಾರಣನಾದರೂ ಅವನಿಗೆ ಮರಣಶಿಕ್ಷೆ ಕೊಡಬೇಕಿತ್ತು. ಹಾಗಾದರೆ, ದೇವರ ದೃಷ್ಟಿಯಲ್ಲಿ ಅಜಾತ ಮಗುವಿನ ಜೀವವು ಬಹುಮೂಲ್ಯವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಅಷ್ಟುಮಾತ್ರವಲ್ಲದೆ, ಬೈಬಲ್‌ನಲ್ಲಿರುವ ಇನ್ನೂ ಹಲವಾರು ವಚನಗಳು ಯೆಹೋವನು ಅಜಾತ ಶಿಶುಗಳನ್ನು ಪ್ರತ್ಯೇಕ ವ್ಯಕ್ತಿಗಳಾಗಿ ಪರಿಗಣಿಸುತ್ತಾನೆಂದು ತೋರಿಸುತ್ತವೆ. ಉದಾಹರಣೆಗೆ ರಾಜ ದಾವೀದನು ಪವಿತ್ರಾತ್ಮದಿಂದ ಪ್ರೇರಿತನಾಗಿ ಯೆಹೋವನ ಬಗ್ಗೆ ಹೀಗಂದನು: “ತಾಯಿಯ ಗರ್ಭದಲ್ಲಿ ನನ್ನನ್ನು ಬಚ್ಚಿಟ್ಟಿದ್ದಿ . . . ನಿನ್ನ ಕಣ್ಣುಗಳು ನನ್ನ ಭ್ರೂಣವನ್ನೂ ನೋಡಿದವು, ಮತ್ತು ನಿನ್ನ ಪುಸ್ತಕದಲ್ಲಿ ಅದರ ಸಕಲ ಭಾಗಗಳು ಬರೆದಿಡಲ್ಪಟ್ಟವು. ಅವುಗಳಲ್ಲಿ ಒಂದೂ ಇಲ್ಲದಿದ್ದ ಸಮಯದಲ್ಲಿ ಅವು ಯಾವ ದಿನ ರಚಿಸಲ್ಪಡುವವು ಎಂಬುದು ಬರೆಯಲ್ಪಟ್ಟಿತ್ತು.”—ಕೀರ್ತ. 139:13-16, NW; ಯೋಬ 31:14, 15.
ಇನ್ನೂ ಹುಟ್ಟಿರದ ಶಿಶುವಿಗಿರುವ ವಿಶಿಷ್ಟ ಲಕ್ಷಣಗಳನ್ನು ಮತ್ತು ಅದು ಮುಂದೆ ಎಂಥ ವ್ಯಕ್ತಿಯಾಗಲಿದೆ ಎಂಬುದನ್ನು ಯೆಹೋವನು ನೋಡುತ್ತಾನೆ. ಇಸಾಕನ ಪತ್ನಿ ರೆಬೆಕ್ಕ ಗರ್ಭವತಿಯಾಗಿದ್ದಾಗ, ಆಕೆಯ ಗರ್ಭದಲ್ಲಿ ಒಂದನ್ನೊಂದು ನೂಕಿಕೊಳ್ಳುತ್ತಿದ್ದ ಅವಳಿಗಳ ಬಗ್ಗೆ ಯೆಹೋವನು ಪ್ರವಾದನೆಮಾಡಿದನು. ಇದು, ಭವಿಷ್ಯದಲ್ಲಿ ಹಲವಾರು ಜನರ ಮೇಲೆ ಪ್ರಭಾವಬೀರಲಿರುವ ಅವರ ಲಕ್ಷಣಗಳನ್ನು ಆತನು ಈಗಾಗಲೇ ನೋಡಿದ್ದನೆಂಬುದನ್ನು ಸೂಚಿಸುತ್ತದೆ.—ಆದಿ. 25:22, 23; ರೋಮ. 9:10-13.
ಸ್ನಾನಿಕನಾದ ಯೋಹಾನನ ಕುರಿತ ಪ್ರಸಂಗವೂ ಆಸಕ್ತಿಕರವಾಗಿದೆ. ಸುವಾರ್ತಾ ವೃತ್ತಾಂತವು ಹೇಳುವುದು: ‘ಎಲಿಸಬೇತಳು ಮರಿಯಳ ವಂದನೆಯನ್ನು ಕೇಳಿಸಿಕೊಳ್ಳುತ್ತಲೇ ಅವಳ ಗರ್ಭದಲ್ಲಿದ್ದ ಶಿಶು ಜಿಗಿಯಿತು; ಎಲಿಸಬೇತಳು ಪವಿತ್ರಾತ್ಮಭರಿತಳಾದಳು.’ (ಲೂಕ 1:41) ಈ ಘಟನೆಯನ್ನು ವರ್ಣಿಸುವಾಗ ವೈದ್ಯನಾದ ಲೂಕನು ಬಳಸಿದ ಪದವು, ಭ್ರೂಣಕ್ಕೆ ಇಲ್ಲವೇ ಜನಿಸಿರುವ ಕೂಸಿಗೆ ಸೂಚಿಸಬಲ್ಲದು. ಗೋದಲಿಯಲ್ಲಿದ್ದ ಶಿಶು ಯೇಸುವಿನ ಬಗ್ಗೆ ತಿಳಿಸುವಾಗಲೂ ಲೂಕನು ಇದೇ ಪದವನ್ನು ಬಳಸಿದನು.—ಲೂಕ 2:12, 16; 18:15.
ಇದೆಲ್ಲವನ್ನು ಪರಿಗಣಿಸುವಾಗ, ಗರ್ಭದಲ್ಲಿರುವ ಮಗುವಿನ ಮತ್ತು
ಗರ್ಭದಿಂದ ಹೊರಬಂದು ಉಸಿರಾಡಲಾರಂಭಿಸಿರುವ ಮಗುವಿನ ಮಧ್ಯೆ ದೊಡ್ಡ ವ್ಯತ್ಯಾಸವಿರುವುದಾಗಿ ಬೈಬಲ್ ಹೇಳುತ್ತದೆಂದು ತೋರುತ್ತದೋ? ಇಲ್ಲ. ಇದು ಆಧುನಿಕ ವಿಜ್ಞಾನದ ಕಂಡುಹಿಡಿತಗಳೊಂದಿಗೂ ತಾಳೆಬೀಳುತ್ತದೆ. ಉದಾಹರಣೆಗೆ ಸಂಶೋಧಕರಿಗನುಸಾರ, ಇನ್ನೂ ಹುಟ್ಟಿರದ ಶಿಶು ಗರ್ಭದ ಹೊರಗೆ ಏನೇನು ನಡೆಯುತ್ತಿದೆಯೋ ಅದನ್ನು ಗ್ರಹಿಸಬಲ್ಲದು ಮತ್ತು ಅದಕ್ಕೆ ಪ್ರತಿಕ್ರಿಯಿಸಬಲ್ಲದು. ಹೀಗಿರುವುದರಿಂದಲೇ ಗರ್ಭವತಿ ಸ್ತ್ರೀ ಮತ್ತು ಆಕೆಯ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಮಧ್ಯೆ ಆಪ್ತ ಬಂಧವು ಬೆಸೆಯುತ್ತದೆ.ಶಿಶುಗಳು ಹುಟ್ಟುವ ಸಮಯಗಳು ಭಿನ್ನ ಭಿನ್ನವಾಗಿರುತ್ತವೆ. ಉದಾಹರಣೆಗೆ, ಒಬ್ಬ ತಾಯಿ ಅಕಾಲ ಪ್ರಸವಕ್ಕೊಳಗಾಗಿ ಜೀವಂತ ಮಗುವಿಗೆ ಜನ್ಮಕೊಡುತ್ತಾಳೆ, ಆದರೆ ಅದು ಕೆಲವೇ ದಿನಗಳಲ್ಲಿ ಸಾಯುತ್ತದೆ. ಇನ್ನೊಬ್ಬಳು ತಾಯಿ ಪೂರ್ತಿ ಒಂಬತ್ತು ತಿಂಗಳುಗಳ ವರೆಗೆ ಮಗುವನ್ನು ಗರ್ಭದಲ್ಲಿ ಹೊರುತ್ತಾಳೆ, ಆದರೆ ಅದು ಹುಟ್ಟುವ ಸ್ವಲ್ಪ ಮುಂಚೆ ಸಾಯುತ್ತದೆ. ಆ ಮೊದಲ ತಾಯಿಯ ಮಗು ಅಕಾಲಿಕವಾಗಿ ಹುಟ್ಟಿತ್ತು ಎಂದಮಾತ್ರಕ್ಕೆ ಅದರ ಪುನರುತ್ಥಾನವಾಗುವುದೆಂದು ಆಕೆ ನಿರೀಕ್ಷಿಸಬಲ್ಲಳೋ? ಎರಡನೆಯ ತಾಯಿಗೆ ಅಂಥ ನಿರೀಕ್ಷೆ ಇಲ್ಲವೋ?
ವಿಷಯವನ್ನು ಸಾರಾಂಶಿಸಿ ಹೇಳುವುದಾದರೆ, ಗರ್ಭಧಾರಣೆಯಾದಾಗಲೇ ಜೀವದ ಆರಂಭವಾಗುತ್ತದೆ ಮತ್ತು ಯೆಹೋವನು ಅಜಾತ ಶಿಶುವನ್ನು ಸಹ ಒಂದು ಅಪೂರ್ವ ವ್ಯಕ್ತಿಯಾಗಿ ಪರಿಗಣಿಸುತ್ತಾ ಅದಕ್ಕೆ ಮಹತ್ತ್ವಕೊಡುತ್ತಾನೆಂದು ಬೈಬಲ್ ಸ್ಪಷ್ಟವಾಗಿ ಬೋಧಿಸುತ್ತದೆ. ಈ ಶಾಸ್ತ್ರಾಧಾರಿತ ಸತ್ಯಗಳನ್ನು ಪರಿಗಣಿಸುವಾಗ, ಹುಟ್ಟುವ ಮುಂಚೆ ಗರ್ಭದಲ್ಲೇ ಸತ್ತಿರುವ ಶಿಶುವಿನ ಪುನರುತ್ಥಾನವಾಗಲಿಕ್ಕಿಲ್ಲ ಎಂದು ಹೇಳುವುದು ಆ ಸತ್ಯಗಳಿಗೆ ವಿರುದ್ಧವಾದದ್ದೆಂದು ಕೆಲವರು ನೆನಸಬಹುದು. ಅಂಥ ವಾದವು, ಗರ್ಭಪಾತ ಮಾಡಿಸಿಕೊಳ್ಳುವ ವಿಷಯದಲ್ಲಿ ನಮ್ಮ ಶಾಸ್ತ್ರಾಧಾರಿತ ನಿಲುವಿನ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸುತ್ತದೆಂದು ಅವರಿಗನಿಸಬಹುದು. ಏಕೆಂದರೆ ಆ ಶಾಸ್ತ್ರಾಧಾರಿತ ನಿಲುವು ಪ್ಯಾರದ ಆರಂಭದಲ್ಲಿ ತಿಳಿಸಲಾಗಿರುವ ಸತ್ಯಗಳ ಮೇಲೆಯೇ ಆಧರಿತವಾಗಿದೆ.
ಈ ಹಿಂದೆ ಇದೇ ಪತ್ರಿಕೆಯು, ಹುಟ್ಟುವ ಮುಂಚೆಯೇ ಸತ್ತಿರುವ ಶಿಶುಗಳ ಪುನರುತ್ಥಾನವಾಗುವ ಸಾಧ್ಯತೆಯ ಬಗ್ಗೆ ಕೆಲವು ಪ್ರಾಯೋಗಿಕ ಪ್ರಶ್ನೆಗಳನ್ನು ಎಬ್ಬಿಸಿತ್ತು. ಉದಾಹರಣೆಗೆ, ಪೂರ್ತಿಯಾಗಿ ಬೆಳೆದಿರದ ಭ್ರೂಣವನ್ನು ಸಹ ದೇವರು ಪರದೈಸಿನಲ್ಲಿ ಒಬ್ಬ ಸ್ತ್ರೀಯ ಗರ್ಭದೊಳಗೆ ಸೇರಿಸುವನೋ? ಎಂಬುದು ಒಂದು ಪ್ರಶ್ನೆಯಾಗಿತ್ತು. ಆದರೆ ಇದರ ಬಗ್ಗೆ ಆಡಳಿತ ಮಂಡಳಿಯು ಹೆಚ್ಚಿನ ಅಧ್ಯಯನ ಹಾಗೂ ಪ್ರಾರ್ಥನಾಪೂರ್ವಕ ಧ್ಯಾನಮಾಡಿ, ಈ ವಿಷಯಗಳು ಪುನರುತ್ಥಾನದ ನಿರೀಕ್ಷೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲವೆಂಬ ತೀರ್ಮಾನಕ್ಕೆ ಬಂದಿದೆ. ಯೇಸು ಹೇಳಿದ್ದು: “ದೇವರಿಗೆ ಎಲ್ಲವೂ ಸಾಧ್ಯ.” (ಮಾರ್ಕ 10:27) ಈ ವಾಕ್ಯದ ಸತ್ಯತೆಯು ಯೇಸುವಿನಲ್ಲೇ ತೋರಿಬರುತ್ತದೆ. ಅವನ ಜೀವವನ್ನು ಸ್ವರ್ಗದಿಂದ ಒಬ್ಬಾಕೆ ಯುವ ಕನ್ನಿಕೆಯ ಗರ್ಭಕ್ಕೆ ಸ್ಥಳಾಂತರಿಸುವ ಮೂಲಕ ಮಾನವ ದೃಷ್ಟಿಕೋನದಿಂದ ಪೂರ್ತಿಯಾಗಿ ಅಸಾಧ್ಯವಾದ ಸಂಗತಿಯನ್ನು ದೇವರು ನಡೆಸಿದ್ದನು.
ಹಾಗಾದರೆ ಇದರರ್ಥ, ಹುಟ್ಟುವ ಮುಂಚೆಯೇ ಸತ್ತಿರುವ ಮಕ್ಕಳ ಪುನರುತ್ಥಾನವಾಗುವುದೆಂದೋ? ಬೈಬಲ್ ಇದಕ್ಕೆ ನೇರವಾದ ಉತ್ತರ ಕೊಡುವುದಿಲ್ಲ ಎಂಬುದನ್ನು ಒತ್ತಿಹೇಳಬೇಕಾಗುತ್ತದೆ. ಆದುದರಿಂದ ಯಾರೂ ಈ ವಿಷಯದ ಬಗ್ಗೆ ಖಡಾಖಂಡಿತವಾಗಿ ಏನೂ ಹೇಳಲಾರರು. ಈ ವಿಷಯವು, ಕೊನೆಯಿಲ್ಲದ ಪ್ರಶ್ನೆಗಳನ್ನು ಎಬ್ಬಿಸಬಹುದು. ಆದರೆ ಊಹೆ ಮಾಡದಿರುವುದು ಉತ್ತಮ. ನಮಗೆ ಇದಂತೂ ನಿಶ್ಚಯವಾಗಿ ತಿಳಿದಿದೆ: ಈ ವಿಷಯವು ಅಪಾರ ಪ್ರೀತಿ ಹಾಗೂ ದಯೆಯುಳ್ಳ ಯೆಹೋವ ದೇವರ ಕೈಯಲ್ಲಿದೆ. (ಕೀರ್ತ. 86:15) ಮರಣದಿಂದಾಗಿರುವ ಹಾನಿಯನ್ನು ಪುನರುತ್ಥಾನದ ಮೂಲಕ ತೊಡೆದುಹಾಕುವುದು ಆತನ ಉತ್ಕಟ ಬಯಕೆ ಎಂಬ ವಿಷಯದಲ್ಲಿ ನಮಗೆ ಸಂದೇಹವಿಲ್ಲ. (ಯೋಬ 14:14, 15) ಆತನು ಯಾವಾಗಲೂ ಸರಿಯಾದದ್ದನ್ನೇ ಮಾಡುತ್ತಾನೆಂಬ ದೃಢಭರವಸೆ ನಮಗಿರಬಲ್ಲದು. ‘ಪಿಶಾಚನ ಕೆಲಸಗಳನ್ನು ಭಂಗಗೊಳಿಸುವಂತೆ’ ಆತನ ಪುತ್ರನಿಗೆ ಪ್ರೀತಿಯಿಂದ ನಿರ್ದೇಶನ ಕೊಡುವ ಮೂಲಕ, ಈ ದುಷ್ಟ ವ್ಯವಸ್ಥೆಯಲ್ಲಿನ ಜೀವನವು ನಮಗೆ ಮಾಡಿರುವ ಅನೇಕಾನೇಕ ಗಾಯಗಳನ್ನು ಆತನು ಖಂಡಿತ ವಾಸಿಮಾಡುವನು.—1 ಯೋಹಾ. 3:8.
[ಪಾದಟಿಪ್ಪಣಿ]
^ ಪ್ಯಾರ. 6 ಈ ವಚನಗಳನ್ನು ಕೆಲವೊಂದು ಬೈಬಲ್‌ಗಳಲ್ಲಿ ಭಾಷಾಂತರಿಸಲಾಗಿರುವ ವಿಧವು, ಕೇವಲ ತಾಯಿ ಸಾಯುವಲ್ಲಿ ಮರಣದಂಡನೆ ವಿಧಿಸಬೇಕೆಂಬುದನ್ನು ಸೂಚಿಸುತ್ತದೆ. ಆದರೆ ಮೂಲ ಹೀಬ್ರು ಗ್ರಂಥಪಾಠವು, ಆ ನಿಯಮವು ತಾಯಿ ಹಾಗೂ ಅಜಾತ ಮಗುವಿನ ಮರಣದ ಬಗ್ಗೆಯೂ ಮಾತಾಡುತ್ತದೆಂದು ತೋರಿಸುತ್ತದೆ.
[ಪುಟ 13ರಲ್ಲಿರುವ ಚಿತ್ರ]
ನಾವು ಅನುಭವಿಸಿರುವ ನೋವಿಗೆ ಯೆಹೋವನು ಉಪಶಮನ ಕೊಡುವನು