ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಂತ್ಯವು ಸಮೀಪಿಸುತ್ತಿರುವುದರಿಂದ ಯೆಹೋವನಲ್ಲಿ ಭರವಸೆಯಿಡಿರಿ

ಅಂತ್ಯವು ಸಮೀಪಿಸುತ್ತಿರುವುದರಿಂದ ಯೆಹೋವನಲ್ಲಿ ಭರವಸೆಯಿಡಿರಿ

ಅಂತ್ಯವು ಸಮೀಪಿಸುತ್ತಿರುವುದರಿಂದ ಯೆಹೋವನಲ್ಲಿ ಭರವಸೆಯಿಡಿರಿ

“ಯೆಹೋವನಲ್ಲಿ ಸದಾ ಭರವಸವಿಡಿರಿ.”—ಯೆಶಾ. 26:4.

1. ದೇವರ ಸೇವಕರ ಮತ್ತು ಲೋಕದ ಜನರ ಮಧ್ಯೆ ಯಾವ ವ್ಯತ್ಯಾಸವಿದೆ?

ಲೋಕದಲ್ಲಿ ಅನೇಕ ಮಂದಿಗೆ ಏನನ್ನು ನಂಬಬೇಕು, ಯಾರಲ್ಲಿ ಭರವಸೆಯಿಡಬೇಕು ಎಂಬುದೇ ತೋಚುತ್ತಿಲ್ಲ. ಇತರರು ಅವರನ್ನು ಲೆಕ್ಕವಿಲ್ಲದಷ್ಟು ಬಾರಿ ನೋಯಿಸಿರುವುದರಿಂದಲೋ ನಿರಾಶೆಗೊಳಿಸಿರುವುದರಿಂದಲೋ ಅವರಿಗೆ ಹಾಗನಿಸುತ್ತಿರಬಹುದು. ಆದರೆ ಯೆಹೋವನ ಸೇವಕರು ಎಷ್ಟೊಂದು ಭಿನ್ನರು! ದೈವಿಕ ವಿವೇಕದಿಂದ ಮಾರ್ಗದರ್ಶಿಸಲ್ಪಟ್ಟ ಅವರಿಗೆ ಈ ಲೋಕದಲ್ಲಿ ಅಥವಾ ಅದರ “ಪ್ರಭುಗಳಲ್ಲಿ” ಭರವಸೆಯಿಡುವುದಕ್ಕಿಂತ ಯಾರಲ್ಲಿ ಭರವಸೆಯಿಡುವುದು ಒಳಿತು ಎಂಬುದು ತಿಳಿದಿದೆ. (ಕೀರ್ತ. 146:3) ಅವರು ತಮ್ಮ ಜೀವನವನ್ನು ಹಾಗೂ ಭವಿಷ್ಯವನ್ನು ಯೆಹೋವನ ಕೈಗೆ ಒಪ್ಪಿಸುತ್ತಾರೆ. ಏಕೆಂದರೆ ಆತನು ತಮ್ಮನ್ನು ಪ್ರೀತಿಸುತ್ತಾನೆ ಹಾಗೂ ಕೊಟ್ಟ ಮಾತನ್ನು ಯಾವಾಗಲೂ ಪೂರೈಸುತ್ತಾನೆ ಎಂಬುದು ಅವರಿಗೆ ಗೊತ್ತಿದೆ.—ರೋಮ. 3:4; 8:38, 39.

2. ದೇವರು ಭರವಸಾರ್ಹನೆಂಬುದನ್ನು ಯೆಹೋಶುವನು ಹೇಗೆ ದೃಢೀಕರಿಸಿದನು?

2 ದೇವರು ಭರವಸಾರ್ಹನೆಂಬುದನ್ನು ಯೆಹೋಶುವನು ದೃಢೀಕರಿಸಿದನು. ಅವನು ತನ್ನ ಜೀವನಾಂತ್ಯದಲ್ಲಿ ಜೊತೆ ಇಸ್ರಾಯೇಲ್ಯರಿಗೆ ಅಂದದ್ದು: “ನಿಮ್ಮ ದೇವರಾದ ಯೆಹೋವನು ನಿಮ್ಮ ವಿಷಯದಲ್ಲಿ ನುಡಿದ ಆಶೀರ್ವಚನಗಳಲ್ಲಿ ಒಂದೂ ವ್ಯರ್ಥವಾಗಲಿಲ್ಲ; ಎಲ್ಲವೂ ತಪ್ಪದೆ ನೆರವೇರಿದವೆಂಬದು ನಿಮಗೆ ಮಂದಟ್ಟಾಯಿತಲ್ಲಾ.”—ಯೆಹೋ. 23:14.

3. ದೇವರ ಹೆಸರು ಆತನ ಕುರಿತು ಏನನ್ನು ತಿಳಿಯಪಡಿಸುತ್ತದೆ?

3 ಯೆಹೋವನು ತನ್ನ ವಾಗ್ದಾನಗಳನ್ನು ಪೂರೈಸುವುದು ಕೇವಲ ತನ್ನ ಸೇವಕರ ಮೇಲಿರುವ ಪ್ರೀತಿಯ ನಿಮಿತ್ತದಿಂದಲ್ಲ, ಅದಕ್ಕೆ ಮುಖ್ಯ ಕಾರಣ ಆತನ ನಾಮವೇ. (ವಿಮೋ. 3:14; 1 ಸಮು. 12:22) ದೇವರ ನಾಮದ ಅರ್ಥ, ದೇವರು ತನ್ನ ವಾಗ್ದಾನಗಳನ್ನು ಪೂರೈಸಲು ಏನಾಗಿ ಬೇಕಾದರೂ ಪರಿಣಮಿಸಬಲ್ಲನೆಂದಾಗಿದೆ ಎಂದು ದಿ ಎಂಫೆಸೈಸ್ಡ್‌ ಬೈಬಲ್‌ನ ಪೀಠಿಕೆಯಲ್ಲಿ ಜೆ. ಬಿ. ರಾಥರ್‌ಹ್ಯಾಮ್‌ ವಿವರಿಸಿದರು. ನಾವು ಆತನ ನಾಮವನ್ನು ಕೇಳಿದಾಗೆಲ್ಲಾ, ಆತನು ಏನನ್ನು ನುಡಿಯುತ್ತಾನೋ ಅದೆಲ್ಲವನ್ನು ಪೂರೈಸುತ್ತಾನೆ ಎಂಬುದು ನೆನಪಿಗೆ ಬರುತ್ತದೆ. ತಾನೇನು ಪೂರೈಸಬೇಕಾಗಿದೆಯೋ ಅದನ್ನು ಯಾವುದೇ ಸಮಯದಲ್ಲಿ, ಯಾವುದೇ ಸ್ಥಳದಲ್ಲಿ ಆತನು ಪೂರೈಸಶಕ್ತನು. ಆತನಿಗೆ ಯಾವುದೂ ಕಷ್ಟಕರವಲ್ಲ. ದೇವರು ಸದಾ ತನ್ನ ಹೆಸರಿಗೆ ತಕ್ಕಂತೆ ಜೀವಿಸುತ್ತಾನೆ.

4. (ಎ) ಏನು ಮಾಡುವಂತೆ ಯೆಶಾಯ 26:4 ನಮ್ಮನ್ನು ಉತ್ತೇಜಿಸುತ್ತದೆ? (ಬಿ) ಈ ಲೇಖನದಲ್ಲಿ ನಾವೇನನ್ನು ಪರಿಗಣಿಸಲಿದ್ದೇವೆ?

4 ಹೀಗೆ ಕೇಳಿಕೊಳ್ಳಿ: ‘ಯೆಹೋವನ ಮೇಲೆ ಪೂರ್ಣ ಭರವಸೆಯಿಡುವಷ್ಟರ ಮಟ್ಟಿಗೆ ನಾನು ಆತನ ಬಗ್ಗೆ ತಿಳಿದಿದ್ದೇನೋ? ಎಲ್ಲವೂ ದೇವರ ಹತೋಟಿಯಲ್ಲಿದೆ ಎಂಬುದನ್ನು ಮನಸ್ಸಿನಲ್ಲಿಟ್ಟು ಭವಿಷ್ಯವನ್ನು ಭರವಸೆಯಿಂದ ಎದುರಿಸುತ್ತೇನೋ?’ “ಯೆಹೋವನಲ್ಲಿ ಸದಾ ಭರವಸವಿಡಿರಿ; ಯಾಹುಯೆಹೋವನು ಶಾಶ್ವತವಾಗಿ ಆಶ್ರಯಗಿರಿಯಾಗಿದ್ದಾನೆ [“ನಿತ್ಯವಾದ ಬಂಡೆಯಾಗಿದ್ದಾನೆ,” NIBV]” ಎನ್ನುತ್ತದೆ ಯೆಶಾಯ 26:4. ಇದರರ್ಥ, ಯೆಹೋವನು ಬಂಡೆಯಂತೆ ಬಲವಾದವನು, ಸ್ಥಿರವಾಗಿರುವವನು, ಆತನೆಂದೂ ಬದಲಾಗುವುದಿಲ್ಲ ಎಂದಾಗಿದೆ. ಯೆಹೋವನು ಬೈಬಲ್‌ ಕಾಲಗಳಲ್ಲಿ ಮಾಡಿದಂತೆ ಇಂದು ಜನರ ಜೀವನಗಳಲ್ಲಿ ಅದ್ಭುತಕರವಾಗಿ ಹಸ್ತಕ್ಷೇಪ ಮಾಡುವುದಿಲ್ಲ ನಿಜ. ಆದಾಗ್ಯೂ ಆತನು “ನಿತ್ಯವಾದ ಬಂಡೆಯಾಗಿದ್ದಾನೆ,” ಆತನಲ್ಲಿ ನಾವು “ಸದಾ” ಭರವಸೆಯಿಡಸಾಧ್ಯ. ನಮ್ಮ ಭರವಸಾರ್ಹ ದೇವರು ಇಂದು ತನ್ನ ನಂಬಿಗಸ್ತ ಆರಾಧಕರಿಗೆ ಹೇಗೆ ಸಹಾಯಮಾಡುತ್ತಾನೆ? ನಾವೀಗ ಮೂರು ವಿಧಗಳನ್ನು ಪರಿಗಣಿಸೋಣ. ಪ್ರಲೋಭನೆಗಳನ್ನು ಪ್ರತಿರೋಧಿಸಲು ಸಹಾಯ ಕೋರುವಾಗ ಆತನು ನಮ್ಮನ್ನು ಬಲಗೊಳಿಸುತ್ತಾನೆ, ನಿರಾಸಕ್ತಿಯನ್ನು ಅಥವಾ ನೇರವಾದ ವಿರೋಧವನ್ನು ಎದುರಿಸುತ್ತಿರುವಾಗ ಆತನು ನಮ್ಮನ್ನು ಬೆಂಬಲಿಸುತ್ತಾನೆ, ಚಿಂತೆಗಳಿಂದ ಕುಗ್ಗಿಹೋಗಿರುವಾಗ ಆತನು ನಮ್ಮನ್ನು ಮೇಲಕ್ಕೆತ್ತುತ್ತಾನೆ. ಈ ಮೂರು ಕ್ಷೇತ್ರಗಳನ್ನು ಪರಿಗಣಿಸುವಾಗ ಯೆಹೋವನ ಮೇಲೆ ನಿಮಗಿರುವ ಭರವಸೆಯನ್ನು ನೀವು ಹೇಗೆ ಬಲಗೊಳಿಸಬಹುದು ಎಂಬುದನ್ನು ಪರ್ಯಾಲೋಚಿಸಲು ಮರೆಯಬೇಡಿ.

ತಪ್ಪು ಮಾಡಲು ಪ್ರಲೋಭಿಸಲ್ಪಡುವಾಗ ದೇವರಲ್ಲಿ ಭರವಸೆಯಿಡಿರಿ

5. ದೇವರ ಮೇಲಿನ ಭರವಸೆಯ ಸಂಬಂಧದಲ್ಲಿ ಯಾವಾಗ ಸವಾಲೆದುರಾಗುತ್ತದೆ?

5 ನಾವು ಹಾತೊರೆಯುವಂಥ ವಿಷಯಗಳಲ್ಲಿ ಉದಾಹರಣೆಗೆ, ಪರದೈಸ್‌ ಅಥವಾ ಪುನರುತ್ಥಾನದ ಕುರಿತ ದೇವರ ವಾಗ್ದಾನದಲ್ಲಿ ಭರವಸೆಯಿಡುವುದು ಸುಲಭ. ಆದರೆ ಯೆಹೋವನ ಮಾರ್ಗಗಳಿಗೂ ಮಟ್ಟಗಳಿಗೂ ಅಧೀನರಾಗುವುದೇ ಸರಿಯಾದದ್ದು ಮತ್ತು ಅದು ಮಹದಾನಂದವನ್ನು ತರುತ್ತದೆ ಎಂಬ ಪೂರ್ಣ ಮನವರಿಕೆಯಿಂದ ನೈತಿಕ ವಿಷಯಗಳಲ್ಲಿ ಆತನ ಮೇಲೆ ಭರವಸೆಯಿಡುವುದು ಕಷ್ಟಕರ. ರಾಜ ಸೊಲೊಮೋನನು ಈ ಬುದ್ಧಿವಾದವನ್ನು ಕೊಡುತ್ತಾನೆ: “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.” (ಜ್ಞಾನೋ. 3:5, 6) ಇಲ್ಲಿ ನಮ್ಮ “ನಡವಳಿ” ಮತ್ತು ‘ಮಾರ್ಗಗಳಿಗೆ’ ಸೂಚಿಸಲಾಗಿರುವುದನ್ನು ಗಮನಿಸಿ. ಹೌದು ನಮ್ಮ ಕ್ರೈಸ್ತ ನಿರೀಕ್ಷೆ ಮಾತ್ರವಲ್ಲ ನಮ್ಮ ಇಡೀ ಜೀವನ ರೀತಿಯು ದೇವರಲ್ಲಿ ನಮಗಿರುವ ಭರವಸೆಯನ್ನು ಪ್ರತಿಫಲಿಸಬೇಕು. ಹಾಗಾದರೆ ಪ್ರಲೋಭನೆಗಳು ಬಂದಾಗ ನಾವು ಅಂಥ ಭರವಸೆಯನ್ನು ಹೇಗೆ ತೋರಿಸಬಹುದು?

6. ಕೆಟ್ಟ ಆಲೋಚನೆಗಳನ್ನು ತ್ಯಜಿಸುವ ನಿಮ್ಮ ನಿರ್ಧಾರವನ್ನು ಹೇಗೆ ಬಲಗೊಳಿಸಬಲ್ಲಿರಿ?

6 ಕೆಟ್ಟದ್ದನ್ನು ತೊರೆಯುವ ಕ್ರಿಯೆ ನಮ್ಮ ಮನಸ್ಸಿನಿಂದ ಆರಂಭಗೊಳ್ಳುತ್ತದೆ. (ರೋಮನ್ನರಿಗೆ 8:5; ಎಫೆಸ 2:3 ಓದಿ.) ಹಾಗಾದರೆ ಕೆಟ್ಟ ಆಲೋಚನೆಗಳನ್ನು ತ್ಯಜಿಸುವ ನಿಮ್ಮ ನಿರ್ಧಾರವನ್ನು ಹೇಗೆ ಬಲಗೊಳಿಸಬಲ್ಲಿರಿ? ಈ ಮುಂದಿನ ಐದು ಮಾರ್ಗಗಳನ್ನು ಪರಿಗಣಿಸಿರಿ: 1. ಸಹಾಯಕ್ಕಾಗಿ ದೇವರಿಗೆ ಪ್ರಾರ್ಥಿಸಿರಿ. (ಮತ್ತಾ. 6:9, 13) 2. ಯೆಹೋವನಿಗೆ ಕಿವಿಗೊಟ್ಟವರ ಹಾಗೂ ಕಿವಿಗೊಡದವರ ಕುರಿತು ಬೈಬಲಿನಲ್ಲಿರುವ ಉದಾಹರಣೆಗಳನ್ನು ಧ್ಯಾನಿಸಿರಿ. ಅನಂತರ ಅವರು ತೆಗೆದುಕೊಂಡ ಹೆಜ್ಜೆಗಳ ಫಲಿತಾಂಶಗಳನ್ನು ಪರಿಗಣಿಸಿರಿ. * (1 ಕೊರಿಂ. 10:8-11) 3. ಪಾಪ ಮಾಡುವಲ್ಲಿ ಅದು ನಿಮ್ಮ ಹಾಗೂ ನಿಮ್ಮ ಆತ್ಮೀಯರ ಮೇಲೆ ತರುವ ಮಾನಸಿಕ, ಭಾವನಾತ್ಮಕ ಹಾನಿಯ ಕುರಿತು ಪರ್ಯಾಲೋಚಿಸಿರಿ. 4. ತನ್ನ ಸೇವಕನೊಬ್ಬನು ಘೋರ ಪಾಪಮಾಡಿದಾಗ ದೇವರಿಗೆ ಹೇಗನಿಸುತ್ತದೆ ಎಂಬುದರ ಕುರಿತು ಯೋಚಿಸಿ. (ಕೀರ್ತನೆ 78:40, 41 ಓದಿ.) 5. ನಿಷ್ಠಾವಂತ ಆರಾಧಕನು ಸಾರ್ವಜನಿಕವಾಗಿಯಾಗಲಿ ಏಕಾಂತದಲ್ಲಿಯಾಗಲಿ ಕೆಟ್ಟದ್ದನ್ನು ಹೇಸಿ ಒಳ್ಳೇದನ್ನು ಮಾಡುವಾಗ ಯೆಹೋವನಿಗಾಗುವ ಸಂತೋಷವನ್ನು ಊಹಿಸಿನೋಡಿ. (ಕೀರ್ತ. 15:1, 2; ಜ್ಞಾನೋ. 27:11) ಸರಿಯಾದದ್ದನ್ನು ಮಾಡುವ ಮೂಲಕ ಯೆಹೋವನಲ್ಲಿ ನಿಮಗಿರುವ ಭರವಸೆಯನ್ನು ನೀವೂ ತೋರಿಸಸಾಧ್ಯ.

ನಿರಾಸಕ್ತಿ ಹಾಗೂ ವಿರೋಧವನ್ನು ಎದುರಿಸುವಾಗ ದೇವರಲ್ಲಿ ಭರವಸೆಯಿಡಿರಿ

7. ಯೆರೆಮೀಯನು ಯಾವೆಲ್ಲ ಪರೀಕ್ಷೆಗಳನ್ನು ಎದುರಿಸಿದನು? ಕೆಲವೊಮ್ಮೆ ಅವನಿಗೆ ಹೇಗನಿಸುತ್ತಿತ್ತು?

7 ನಮ್ಮ ಸಹೋದರರಲ್ಲಿ ಅನೇಕರು ತುಂಬ ಕಷ್ಟಕರವಾದ ಟೆರಿಟೊರಿಗಳಲ್ಲಿ ಸೇವೆಮಾಡುತ್ತಿದ್ದಾರೆ. ಪ್ರವಾದಿ ಯೆರೆಮೀಯನು ಸಹ ಅಂಥದೊಂದು ಸನ್ನಿವೇಶದಲ್ಲಿ ಅಂದರೆ ಯೆಹೂದ ರಾಜ್ಯದ ಗೊಂದಲಮಯ ಕೊನೇ ದಿನಗಳಲ್ಲಿ ಸೇವೆಮಾಡಿದನು. ಅವನು ವಿಧೇಯತೆಯಿಂದ ದೇವರ ನ್ಯಾಯತೀರ್ಪಿನ ಸಂದೇಶವನ್ನು ಘೋಷಿಸುತ್ತಿದ್ದನು. ಆದ್ದರಿಂದ ಅವನಿಗೆ ಯೆಹೋವನಲ್ಲಿದ್ದ ಭರವಸೆಯು ದಿನಾಲೂ ಪರೀಕ್ಷೆಗೊಳಗಾಗುತ್ತಿತು. ಅಷ್ಟೇಕೆ ಒಂದು ಸಂದರ್ಭದಲ್ಲಿ ಅವನ ನಿಷ್ಠಾವಂತ ಲೇಖಕನಾದ ಬಾರೂಕನು ಸಹ ತಾನು ದಣಿದಿದ್ದೇನೆಂದು ದೂರಿದನು. (ಯೆರೆ. 45:2, 3) ಯೆರೆಮೀಯನು ಧೈರ್ಯ ಕಳೆದುಕೊಂಡನೋ? ಅವನು ಕೆಲವೊಮ್ಮೆ ನಿರುತ್ಸಾಹಗೊಂಡದ್ದು ನಿಜ. “ನಾನು ಹುಟ್ಟಿದ ದಿವಸವು ಶಾಪಗ್ರಸ್ತವಾಗಲಿ” ಎಂದು ಉದ್ಗರಿಸಿದ ಅವನು “ನಾನು ಶ್ರಮದುಃಖಗಳನ್ನು ನೋಡುವದಕ್ಕೂ ನನ್ನ ಆಯಸ್ಸು ಅವಮಾನದಿಂದ ಕ್ಷಯಿಸುವದಕ್ಕೂ ಗರ್ಭದಿಂದ ಏಕೆ ಹೊರಟುಬಂದೆನು?” ಎಂದೂ ಪ್ರಶ್ನಿಸಿದನು.—ಯೆರೆ. 20:14, 15, 18.

8, 9. ನಾವು ಒಳ್ಳೇ ಫಲವನ್ನು ಕೊಡುತ್ತಾ ಇರಬೇಕಾದರೆ ಯೆರೆಮೀಯ 17:7, 8 ಹಾಗೂ ಕೀರ್ತನೆ 1:1-3ಕ್ಕನುಸಾರ ಏನು ಮಾಡಬೇಕು?

8 ಹಾಗಿದ್ದರೂ ಯೆರೆಮೀಯನು ತನ್ನ ಸೇವೆಯನ್ನು ನಿಲ್ಲಿಸಿಬಿಡಲಿಲ್ಲ. ಅವನು ಯೆಹೋವನಲ್ಲಿ ಭರವಸೆಯಿಡುವುದನ್ನು ಮುಂದುವರಿಸಿದನು. ಫಲಿತಾಂಶವಾಗಿ ಯೆರೆಮೀಯ 17:7, 8ರಲ್ಲಿರುವ ಯೆಹೋವನ ಮಾತುಗಳು ಸ್ವತಃ ತನ್ನಲ್ಲಿ ನೆರವೇರುವುದನ್ನು ಈ ನಂಬಿಗಸ್ತ ಪ್ರವಾದಿ ಕಂಡನು. ಅದನ್ನುವುದು: “ಯಾವನು ಯೆಹೋವನಲ್ಲಿ ನಂಬಿಕೆಯಿಟ್ಟಿದ್ದಾನೋ ಯಾವನಿಗೆ ಯೆಹೋವನು ಭರವಸವಾಗಿದ್ದಾನೋ ಅವನು ಧನ್ಯನು. ನೀರಾವರಿಯಲ್ಲಿ ನೆಡಲ್ಪಟ್ಟು ಹೊಳೆಯ ದಡದಲ್ಲಿ ತನ್ನ ಬೇರುಗಳನ್ನು ಹರಡಿ ದಗೆಗೆ ಭಯಪಡದೆ ಹಸುರೆಲೆಯನ್ನು ಬಿಡುತ್ತಾ ಕ್ಷಾಮವರ್ಷದಲ್ಲಿಯೂ ನಿಶ್ಚಿಂತೆಯಾಗಿ ಸದಾ ಫಲಕೊಡುತ್ತಾ ಇರುವ ಮರಕ್ಕೆ ಸಮಾನನಾಗಿರುವನು.”

9 “ನೀರಿನ ಕಾಲಿವೆಗಳ ಬಳಿಯಲ್ಲಿ” ಅಥವಾ ನೀರಾವರಿ ಪ್ರದೇಶದ ಫಲೋದ್ಯಾನದಲ್ಲಿ ಬೆಳೆದು ಯಥೇಚ್ಛವಾಗಿ ಹಣ್ಣು ಕೊಡುವ ಮರದಂತೆ ಯೆರೆಮೀಯನು ‘ಸದಾ ಫಲಕೊಡುತ್ತಾ ಇದ್ದನು.’ ತನ್ನ ಸುತ್ತಲೂ ಇದ್ದ ದುಷ್ಟ ಕುಚೋದ್ಯಗಾರರ ಪ್ರಭಾವಕ್ಕೆ ಅವನು ಒಳಗಾಗಲಿಲ್ಲ. ಬದಲಾಗಿ ಜೀವಪೋಷಕ “ನೀರಿನ” ಉಗಮನಾದ ಯೆಹೋವನಿಗೆ ಅಂಟಿಕೊಂಡಿದ್ದನು ಹಾಗೂ ಆತನು ಹೇಳಿದ ವಿಷಯಗಳನ್ನೆಲ್ಲ ಹೃದಯದಲ್ಲಿಟ್ಟುಕೊಂಡಿದ್ದನು. (ಕೀರ್ತನೆ 1:1-3 ಓದಿ; ಯೆರೆ. 20:9) ನಮಗೆ, ಅದರಲ್ಲೂ ಮುಖ್ಯವಾಗಿ ಕಷ್ಟಕರ ಟೆರಿಟೊರಿಗಳಲ್ಲಿ ಸೇವೆಮಾಡುತ್ತಿರುವವರಿಗೆ ಯೆರೆಮೀಯನು ಎಂಥ ಒಳ್ಳೇ ಮಾದರಿ! ನಿಮ್ಮ ಪರಿಸ್ಥಿತಿಯೂ ಹಾಗೇ ಇರುವಲ್ಲಿ ಪೂರ್ಣವಾಗಿ ಯೆಹೋವನ ಮೇಲೆ ಆತುಕೊಳ್ಳುವುದನ್ನು ಮುಂದುವರಿಸಿರಿ. ನೀವು ‘ಆತನ ಹೆಸರಿಗೆ ಬಹಿರಂಗ ಪ್ರಕಟನೆಯನ್ನು ಮಾಡುವಾಗ’ ನಿಮಗಾತನು ತಾಳ್ಮೆಯನ್ನು ಒದಗಿಸುವನು.—ಇಬ್ರಿ. 13:15.

10. ನಮಗೆ ಯಾವೆಲ್ಲ ಆಶೀರ್ವಾದಗಳಿವೆ? ನಾವು ಸ್ವತಃ ಏನು ಕೇಳಿಕೊಳ್ಳಬೇಕು?

10 ಈ ಕಡೇ ದಿವಸಗಳಲ್ಲಿ ಜೀವನದ ಸಂಕಷ್ಟಗಳನ್ನು ನಿಭಾಯಿಸಲು ಯೆಹೋವನು ನಮಗೆ ಅನೇಕ ವಿಷಯಗಳನ್ನು ಒದಗಿಸಿದ್ದಾನೆ. ಆತನು ನಮಗೆ ಒದಗಿಸಿರುವ ಸಂಪೂರ್ಣ ಬೈಬಲ್‌ ಅವುಗಳಲ್ಲಿ ಒಂದು. ಅದು ಹೆಚ್ಚೆಚ್ಚು ಭಾಷೆಗಳಲ್ಲಿ ನಿಷ್ಕೃಷ್ಟವಾಗಿ ತರ್ಜುಮೆಯಾಗುತ್ತಿದೆ. ಆತನು ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು ವರ್ಗದ ಮೂಲಕ ಸಮಯಕ್ಕೆ ಸರಿಯಾಗಿ ಹೇರಳವಾದ ಆಧ್ಯಾತ್ಮಿಕ ಆಹಾರವನ್ನು ಒದಗಿಸುತ್ತಿದ್ದಾನೆ. ಹಾಗೂ ನಮ್ಮನ್ನು ಬೆಂಬಲಿಸಲಿಕ್ಕಾಗಿ ಕೂಟಗಳಲ್ಲೂ ಸಮ್ಮೇಳನಗಳಲ್ಲೂ ಅನೇಕಾನೇಕ ಜೊತೆ ವಿಶ್ವಾಸಿಗಳನ್ನು ಸಂಗಡಿಗರಾಗಿ ಕೊಟ್ಟಿದ್ದಾನೆ. ನೀವು ಈ ಏರ್ಪಾಡುಗಳ ಪೂರ್ಣ ಪ್ರಯೋಜನ ಪಡೆಯುತ್ತಿದ್ದೀರೋ? ಯಾರು ಪೂರ್ಣ ಪ್ರಯೋಜನ ಪಡೆಯುತ್ತಾರೋ ಅವರು “ಹೃದಯಾನಂದದಿಂದ ಹರ್ಷಧ್ವನಿಗೈಯುವರು.” ಆದರೆ ದೇವರಿಗೆ ಕಿವಿಗೊಡದವರು ‘ಮನೋವ್ಯಥೆಯಿಂದ ಮೊರೆಯಿಟ್ಟು ಆತ್ಮಕ್ಲೇಶದಿಂದ ಗೋಳಾಡುವರು.’—ಯೆಶಾ. 65:13, 14.

ಚಿಂತೆಗಳನ್ನು ನಿಭಾಯಿಸುವಾಗ ದೇವರಲ್ಲಿ ಭರವಸೆಯಿಡಿರಿ

11, 12. ಲೋಕದಲ್ಲಿರುವ ಸಮಸ್ಯೆಗಳನ್ನು ನೋಡುವಾಗ ವಿವೇಕಯುತ ಮಾರ್ಗ ಯಾವುದಾಗಿದೆ?

11 ಮುಂತಿಳಿಸಲಾದಂತೆ, ಪ್ರವಾಹದೋಪಾದಿ ಹೆಚ್ಚೆಚ್ಚು ಸಂಕಷ್ಟಗಳು ಮಾನವಕುಲವನ್ನು ಬಾಧಿಸುತ್ತಿವೆ. (ಮತ್ತಾ. 24:6-8; ಪ್ರಕ. 12:12) ಪ್ರವಾಹ ಬಂದಾಗ ಸಾಮಾನ್ಯವಾಗಿ ಜನರು ಓಡಿಹೋಗಿ ಎತ್ತರವಾದ ಪ್ರದೇಶವನ್ನೋ ದೊಡ್ಡ ಕಟ್ಟಡವನ್ನೋ ಏರುತ್ತಾರೆ. ಅದೇ ರೀತಿಯಲ್ಲಿ ಲೋಕದ ಸಮಸ್ಯೆಗಳು ಹೆಚ್ಚಾದಂತೆ ಲಕ್ಷಾಂತರ ಮಂದಿ ಆಶ್ರಯಕ್ಕಾಗಿ ಹೊರನೋಟಕ್ಕೆ ದೊಡ್ಡದೆಂಬಂತೆ ತೋರುವ ಹಣಕಾಸಿನ, ರಾಜಕೀಯ ಅಥವಾ ಧಾರ್ಮಿಕ ಸಂಸ್ಥೆಗಳ ಹಾಗೂ ವಿಜ್ಞಾನ, ತಂತ್ರಜ್ಞಾನದ ಮೊರೆಹೋಗುತ್ತಾರೆ. ಆದರೆ ಇವ್ಯಾವುವೂ ನಿಜ ಭದ್ರತೆಯನ್ನು ಕೊಡಲಾರವು. (ಯೆರೆ. 17:5, 6) ಯೆಹೋವನ ಸಾಕ್ಷಿಗಳಿಗಾದರೋ ‘ನಿತ್ಯವಾದ ಬಂಡೆಯಾಗಿರುವ’ ಯೆಹೋವನು ನೈಜ ಆಶ್ರಯಸ್ಥಾನವಾಗಿದ್ದಾನೆ. (ಯೆಶಾ. 26:4, NIBV) “ಜನರೇ, ಯಾವಾಗಲೂ ಆತನನ್ನೇ ನಂಬಿ . . . ದೇವರು ನಮ್ಮ ಆಶ್ರಯವು” ಎಂದನು ಕೀರ್ತನೆಗಾರ. (ಕೀರ್ತನೆ 62:6-9 ಓದಿ.) ನಿತ್ಯವಾದ ಬಂಡೆಯಾಗಿರುವ ಯೆಹೋವನನ್ನು ನಾವು ಹೇಗೆ ಆಶ್ರಯವನ್ನಾಗಿ ಮಾಡಿಕೊಳ್ಳಬಹುದು?

12 ಯೆಹೋವನ ವಾಕ್ಯವು ಹೆಚ್ಚಿನ ಸಂದರ್ಭಗಳಲ್ಲಿ ಮಾನವ ವಿವೇಕಕ್ಕೆ ವಿರುದ್ಧವಾಗಿರುತ್ತದೆ. ಹಾಗಿದ್ದರೂ ನಾವು ಅದಕ್ಕನುಸಾರ ನಡೆಯುವಾಗ ಆತನಿಗೆ ಅತ್ಯಾಪ್ತರಾಗುತ್ತೇವೆ. (ಕೀರ್ತ. 73:23, 24) ಉದಾಹರಣೆಗೆ ಮಾನವ ವಿವೇಕದಿಂದ ಪ್ರಭಾವಿಸಲ್ಪಟ್ಟಿರುವ ಜನರು, ‘ಇರೋದು ಒಂದೇ ಜೀವನ, ಚೆನ್ನಾಗಿ ಮಜಾ ಮಾಡು,’ ‘ಒಳ್ಳೇ ಕೆಲಸ ಹುಡುಕಿಕೋ,’ ‘ತುಂಬ ಹಣ ಮಾಡಿಕೋ,’ ‘ಮಾರುಕಟ್ಟೆಯಲ್ಲಿ ಸಿಗುವುದನ್ನೆಲ್ಲ ಕೊಂಡುಕೋ,’ ‘ದೇಶವೆಲ್ಲ ಸುತ್ತಾಡಿ ಎಂಜಾಯ್‌ ಮಾಡು’ ಎಂದೆಲ್ಲ ಹೇಳಬಹುದು. ಆದರೆ ದೇವರ ವಿವೇಕವಾದರೋ ನಮಗೆ ಈ ಬುದ್ಧಿವಾದವನ್ನು ಕೊಡುತ್ತದೆ: “ಲೋಕವನ್ನು ಅನುಭೋಗಿಸುವವರು ಅದನ್ನು ಪೂರ್ಣವಾಗಿ ಅನುಭೋಗಿಸದವರಂತೆಯೂ ಇರಲಿ; ಏಕೆಂದರೆ ಈ ಲೋಕದ ದೃಶ್ಯವು ಮಾರ್ಪಡುತ್ತಾ ಇದೆ.” (1 ಕೊರಿಂ. 7:31) ಅದೇ ರೀತಿಯಲ್ಲಿ ಯೇಸು ಸಹ ರಾಜ್ಯದ ಅಭಿರುಚಿಗಳಿಗೆ ಯಾವಾಗಲೂ ಪ್ರಥಮ ಸ್ಥಾನಕೊಡುವಂತೆ ಮತ್ತು ಹೀಗೆ ಪೂರ್ತಿ ಸುರಕ್ಷಿತವಾಗಿರುವ ಸ್ಥಳದಲ್ಲಿ ಅಂದರೆ ‘ಸ್ವರ್ಗದಲ್ಲಿ ಸಂಪತ್ತನ್ನು’ ಕೂಡಿಸಿಟ್ಟುಕೊಳ್ಳುವಂತೆ ಉತ್ತೇಜಿಸಿದನು.—ಮತ್ತಾ. 6:19, 20.

13. ಒಂದನೇ ಯೋಹಾನ 2:15-17ನ್ನು ಮನಸ್ಸಿನಲ್ಲಿಟ್ಟು ನಾವು ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು?

13 “ಲೋಕ” ಹಾಗೂ “ಲೋಕದಲ್ಲಿರುವ” ವಿಷಯಗಳ ಕಡೆಗೆ ನಿಮಗಿರುವ ಮನೋಭಾವವು ಯೆಹೋವನಲ್ಲಿ ನಿಮಗೆ ಸಂಪೂರ್ಣ ಭರವಸೆಯಿದೆಯೆಂದು ತೋರಿಸುತ್ತದೋ? (1 ಯೋಹಾ. 2:15-17) ನಿಮಗೆ ಲೋಕ ಕೊಡುವ ವಿಷಯಗಳಿಗಿಂತ ಆಧ್ಯಾತ್ಮಿಕ ಸಂಪತ್ತು ಹಾಗೂ ರಾಜ್ಯದ ಸೇವೆಗೆ ಸಂಬಂಧಿಸಿದ ಸುಯೋಗಗಳು ಹೆಚ್ಚು ಇಷ್ಟವೂ ಪ್ರಾಮುಖ್ಯವೂ ಆಗಿವೆಯೋ? (ಫಿಲಿ. 3:8) ನೀವು ‘ಕಣ್ಣನ್ನು ಸರಳವಾಗಿಡಲು’ ಪ್ರಯತ್ನಿಸುತ್ತೀರೋ? (ಮತ್ತಾ. 6:22) ನೀವು, ಅದರಲ್ಲೂ ಮುಖ್ಯವಾಗಿ ಕುಟುಂಬಸ್ಥರು ಜವಾಬ್ದಾರಿಯನ್ನು ನಿರ್ಲಕ್ಷಿಸಬೇಕೆಂದಾಗಲಿ ಬೇಜವಾಬ್ದಾರಿಯಿಂದ ನಡೆದುಕೊಳ್ಳಬೇಕೆಂದಾಗಲಿ ದೇವರು ಹೇಳುತ್ತಿಲ್ಲ. (1 ತಿಮೊ. 5:8) ಬದಲಾಗಿ ನಾಶವಾಗಲಿಕ್ಕಿರುವ ಈ ಸೈತಾನನ ಲೋಕದ ಮೇಲೆ ತನ್ನ ಸೇವಕರು ಭರವಸೆಯಿಡದೆ ತನ್ನಲ್ಲಿ ಪೂರ್ಣ ಭರವಸೆಯಿಡಬೇಕೆಂದು ದೇವರು ಬಯಸುತ್ತಾನೆ.—ಇಬ್ರಿ. 13:5.

14-16. ‘ಕಣ್ಣನ್ನು ಸರಳವಾಗಿಟ್ಟು’ ರಾಜ್ಯದ ಅಭಿರುಚಿಗಳಿಗೆ ಪ್ರಥಮ ಸ್ಥಾನ ಕೊಟ್ಟವರು ಹೇಗೆ ಪ್ರಯೋಜನ ಹೊಂದಿದ್ದಾರೆ?

14 ಮೂರು ಚಿಕ್ಕ ಮಕ್ಕಳ ಹೆತ್ತವರಾದ ರಿಚರ್ಡ್‌ ಹಾಗೂ ರೂತರ ಉದಾಹರಣೆಯನ್ನು ಗಮನಿಸಿ. ರಿಚರ್ಡ್‌ ಹೇಳುವುದು: “ಯೆಹೋವನ ಸೇವೆಯನ್ನು ನಾನು ಇನ್ನೂ ಹೆಚ್ಚು ಮಾಡಬಹುದೆಂದು ನನ್ನ ಹೃದಯ ಹೇಳುತ್ತಿತ್ತು. ನಾನು ಆರಾಮದಾಯಕ ಜೀವನವನ್ನು ನಡೆಸುತ್ತಿದ್ದೇನೆ, ಆದರೆ ದೇವರಿಗೆ ಮಾತ್ರ ಮಿಕ್ಕಿ ಉಳಿದ ಸಮಯವನ್ನು ಕೊಡುತ್ತಿದ್ದೇನೆ ಎಂದು ನನಗನಿಸಿತು. ನಾನು ಮತ್ತು ರೂತ್‌ ಈ ಬಗ್ಗೆ ಪ್ರಾರ್ಥಿಸಿ ಖರ್ಚುವೆಚ್ಚಗಳ ಲೆಕ್ಕಾಚಾರ ಮಾಡಿದೆವು. ಆಗ ದೇಶದಲ್ಲಿ ಆರ್ಥಿಕ ಬಿಕ್ಕಟ್ಟಿತ್ತಾದರೂ ವಾರದಲ್ಲಿ ನಾಲ್ಕೇ ದಿನ ಕೆಲಸಮಾಡಲು ನಾನು ನಿರ್ಣಯಿಸಿದೆ. ರೂತ್‌ ಕೂಡ ಅದಕ್ಕೆ ಒಪ್ಪಿದಳು. ನನ್ನ ಸೂಪರ್‌ವೈಸರ್‌ ಬಳಿ ಹೋಗಿ ಅದಕ್ಕಾಗಿ ಅನುಮತಿ ಕೋರಿದೆ. ಅವರದಕ್ಕೆ ಸಮ್ಮತಿಸಿದರು. ಒಂದು ತಿಂಗಳೊಳಗೆ ನಾನು ಹೊಸ ಕಾರ್ಯತಖ್ತೆಗನುಸಾರ ಕೆಲಸಮಾಡಲು ಆರಂಭಿಸಿದೆ.” ರಿಚರ್ಡ್‌ಗೆ ಈಗ ಹೇಗನಿಸುತ್ತದೆ?

15 ಅವರು ಹೇಳುವುದು: “ನನಗೀಗ ಮುಂಚೆಗಿಂತ 20 ಪ್ರತಿಶತ ಕಡಿಮೆ ಸಂಬಳ ಸಿಗುತ್ತದೆ ನಿಜ. ಆದರೆ ವರ್ಷದಲ್ಲಿ 50 ದಿನ ಹೆಚ್ಚು ಸಿಗುತ್ತದೆ. ಕುಟುಂಬದೊಂದಿಗಿರಲು ಮತ್ತು ಮಕ್ಕಳಿಗೆ ತರಬೇತಿ ನೀಡಲು ಹೆಚ್ಚು ಸಮಯ ಸಿಗುತ್ತಿದೆ. ನಾನೀಗ ಕ್ಷೇತ್ರ ಸೇವೆಯಲ್ಲಿ ಮುಂಚೆಗಿಂತ ಎರಡುಪಟ್ಟು ಹೆಚ್ಚು ಸಮಯ ಕಳೆಯುತ್ತಿದ್ದೇನೆ. ಮೂರುಪಟ್ಟು ಹೆಚ್ಚು ಬೈಬಲ್‌ ಅಧ್ಯಯನಗಳನ್ನು ನಡೆಸುತ್ತಿದ್ದೇನೆ. ಸಭೆಯಲ್ಲಿ ಇನ್ನೂ ಒಳ್ಳೇದಾಗಿ ಮುಂದಾಳುತ್ವವಹಿಸಲು ನನಗೆ ಸಾಧ್ಯವಾಗಿದೆ. ನನ್ನ ಮಕ್ಕಳಿಗೆ ಸಹಾಯಮಾಡಲು ನನಗೆ ಹೆಚ್ಚು ಸಮಯವಿರುವುದರಿಂದ ರೂತಳಿಗೂ ಆಗಾಗ್ಗೆ ಆಕ್ಸಿಲಿಯರಿ ಪಯನೀಯರ್‌ ಸೇವೆಮಾಡಲು ಸಮಯ ಸಿಗುತ್ತದೆ. ಆದಷ್ಟು ಹೆಚ್ಚು ಸಮಯದ ವರೆಗೆ ಈ ಕಾರ್ಯತಖ್ತೆಯನ್ನು ಮುಂದುವರಿಸುವುದೇ ನನ್ನ ದೃಢತೀರ್ಮಾನ.”

16 ರಾಯ್‌ ಹಾಗೂ ಪೆಟೀನ ಎಂಬವರ ಉದಾಹರಣೆಯನ್ನೂ ಪರಿಗಣಿಸಿ. ಇವರಿಗೆ ಪ್ರಾಯದ ಮಗಳೊಬ್ಬಳಿರುವುದಾದರೂ ಶುಶ್ರೂಷೆಯಲ್ಲಿ ಪೂರ್ಣಸಮಯ ಕಳೆಯಲಿಕ್ಕಾಗಿ ಅವರು ತಮ್ಮ ಐಹಿಕ ಕೆಲಸವನ್ನು ಕಡಿಮೆಮಾಡಿದ್ದಾರೆ. ರಾಯ್‌ ಹೇಳುವುದು: “ನಾನು ವಾರದಲ್ಲಿ ಮೂರು ದಿನ ಮಾತ್ರ ಕೆಲಸಮಾಡುತ್ತೇನೆ. ಪೆಟೀನ ಎರಡು ದಿನ ಕೆಲಸಮಾಡುತ್ತಾಳೆ. ಅಲ್ಲದೆ ನಮ್ಮ ಮನೆಯನ್ನೂ ಬದಲಾಯಿಸಿದೆವು. ಈಗ ಮನೆ ಚಿಕ್ಕದಾಗಿರುವುದರಿಂದ ಅಚ್ಚುಕಟ್ಟಾಗಿಡಲು ಅಷ್ಟೇನು ಕಷ್ಟಪಡಬೇಕಾಗಿಲ್ಲ. ನಮ್ಮ ಮಗ ಹಾಗೂ ಮಗಳು ಹುಟ್ಟುವ ಮುಂಚೆ ನಾವು ಪಯನೀಯರ್‌ ಸೇವೆ ಮಾಡುತ್ತಿದ್ದೆವು. ಇಂದಿನ ವರೆಗೂ ಪಯನೀಯರ್‌ ಸೇವೆ ಮಾಡುವ ಆಸಕ್ತಿಯನ್ನು ಕಳೆದುಕೊಂಡಿರಲಿಲ್ಲ. ಹಾಗಾಗಿ ನಮ್ಮ ಮಕ್ಕಳು ದೊಡ್ಡವರಾದಂತೆ ಪೂರ್ಣಸಮಯದ ಸೇವೆಯನ್ನು ಪುನಃ ಆರಂಭಿಸಿದೆವು. ಎಷ್ಟೇ ಮೊತ್ತದ ಹಣವೂ ನಾವು ಪಡೆದಿರುವ ಆಶೀರ್ವಾದಗಳಿಗೆ ಸರಿಸಾಟಿಯಾಗದು.”

“ದೇವಶಾಂತಿಯು” ನಿಮ್ಮ ಹೃದಯವನ್ನು ಕಾಯಲಿ

17. ಜೀವನದ ಬಗ್ಗೆ ಅನಿಶ್ಚಿತತೆ ಇರುವುದಾದರೂ ಶಾಸ್ತ್ರವಚನಗಳು ನಿಮ್ಮನ್ನು ಹೇಗೆ ಸಾಂತ್ವನಗೊಳಿಸಿವೆ?

17 “ಕಾಲವೂ ಪ್ರಾಪ್ತಿಯೂ ಯಾರಿಗೂ ತಪ್ಪಿದ್ದಲ್ಲ.” ಆದ್ದರಿಂದ ನಾಳೆ ಏನಾಗುತ್ತದೆಂದು ನಮಗ್ಯಾರಿಗೂ ಗೊತ್ತಿಲ್ಲ. (ಪ್ರಸಂ. 9:11) ಹಾಗಂತ ಇಂದಿನ ಮನಶ್ಶಾಂತಿಯನ್ನು ಕಳಕೊಳ್ಳಬೇಕಾಗಿಲ್ಲ. ದೇವರೊಂದಿಗಿನ ಆಪ್ತ ಸಂಬಂಧದಿಂದ ಸಿಗುವ ಭದ್ರತೆ ಯಾರಿಗೆ ಇಲ್ಲವೋ ಅಂಥವರು ಮಾತ್ರ ನಾಳಿನ ಬಗ್ಗೆ ಯೋಚಿಸುತ್ತಾ ಇಂದಿನ ಮನಶ್ಶಾಂತಿಯನ್ನು ಕಳಕೊಳ್ಳುತ್ತಾರೆ. (ಮತ್ತಾ. 6:34) “ಯಾವ ವಿಷಯದ ಕುರಿತಾಗಿಯೂ ಚಿಂತೆಮಾಡಬೇಡಿರಿ; ಎಲ್ಲ ವಿಷಯಗಳಲ್ಲಿ ಕೃತಜ್ಞತಾಸ್ತುತಿಯಿಂದ ಕೂಡಿದ ಪ್ರಾರ್ಥನೆ ಮತ್ತು ಯಾಚನೆಗಳಿಂದ ನಿಮ್ಮ ಬಿನ್ನಹಗಳನ್ನು ದೇವರಿಗೆ ತಿಳಿಯಪಡಿಸಿರಿ. ಆಗ ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ನಿಮ್ಮ ಮಾನಸಿಕ ಶಕ್ತಿಗಳನ್ನೂ . . . ಕಾಯುವುದು” ಎಂದು ಅಪೊಸ್ತಲ ಪೌಲನು ಬರೆದನು.—ಫಿಲಿ. 4:6, 7.

18, 19. ಯೆಹೋವನು ಯಾವ ವಿಧಗಳಲ್ಲಿ ನಮಗೆ ಸಾಂತ್ವನ ಕೊಡುತ್ತಾನೆ? ದೃಷ್ಟಾಂತಿಸಿ.

18 ಸಂಕಷ್ಟಕರ ಸನ್ನಿವೇಶದಲ್ಲಿರುವ ಅನೇಕ ಸಹೋದರ ಸಹೋದರಿಯರು ಸಹ ಯೆಹೋವನಿಂದ ಆಂತರಿಕ ಸಮಾಧಾನ ಹಾಗೂ ಶಾಂತಿಯನ್ನು ಅನುಭವಿಸಿದ್ದಾರೆ. ಒಬ್ಬಾಕೆ ಸಹೋದರಿ ಹೇಳುವುದು: “ಶಸ್ತ್ರಚಿಕಿತ್ಸಕನೊಬ್ಬನು ರಕ್ತ ತೆಗೆದುಕೊಳ್ಳುವಂತೆ ಅನೇಕ ಬಾರಿ ನನ್ನನ್ನು ಬೆದರಿಸುತ್ತಿದ್ದ. ‘ರಕ್ತ ಬೇಡವೆನ್ನುತ್ತಿಯಲ್ಲ ನಿನಗೇನು ತಲೆಕೆಟ್ಟಿದೆಯಾ’ ಎಂದವನು ಬಂದಾಕ್ಷಣ ಹೇಳುತ್ತಿದ್ದ. ಆಗಲೂ ಇತರ ಸಂದರ್ಭಗಳಲ್ಲೂ ನಾನು ಯೆಹೋವನಿಗೆ ಮೌನವಾಗಿ ಪ್ರಾರ್ಥಿಸುತ್ತಿದ್ದೆ. ಆಗ ದೇವಶಾಂತಿಯು ನನ್ನನ್ನು ಆವರಿಸುತ್ತಿತ್ತು, ಬಂಡೆಯಷ್ಟು ಬಲ ಸಿಕ್ಕಿದಂತಾಗುತ್ತಿತ್ತು. ರಕ್ತಹೀನತೆಯಿಂದಾಗಿ ನಾನು ತುಂಬ ಬಲಹೀನಳಾಗಿದ್ದರೂ ನನ್ನ ನಿಲುವಿಗೆ ಕಾರಣಗಳೇನೆಂದು ಶಾಸ್ತ್ರವಚನಗಳಿಂದ ಸ್ಪಷ್ಟವಾಗಿ ವಿವರಿಸಶಕ್ತಳಾದೆ.”

19 ಅಗತ್ಯವಿರುವ ಬೆಂಬಲವನ್ನು ದೇವರು ಕೆಲವೊಮ್ಮೆ ಸಾಂತ್ವನ ಕೊಡುವ ಜೊತೆ ವಿಶ್ವಾಸಿಗಳ ಮೂಲಕ ಅಥವಾ ಸಮಯೋಚಿತ ಆಧ್ಯಾತ್ಮಿಕ ಆಹಾರದ ಮೂಲಕ ಕೊಡುತ್ತಾನೆ. “ನನಗೆ ಬೇಕಾಗಿರುವ ವಿಷಯವೇ ಈ ಲೇಖನದಲ್ಲಿದೆ. ಇದು ನನಗಾಗಿಯೇ ಬರೆದಂತಿದೆ!” ಎಂದು ಒಬ್ಬ ಸಹೋದರನೋ ಸಹೋದರಿಯೋ ಹೇಳಿರುವುದನ್ನು ನೀವು ಕೇಳಿಸಿಕೊಂಡಿರಬಹುದು. ಹೌದು ನಮ್ಮ ಸನ್ನಿವೇಶ, ಅಗತ್ಯ ಯಾವುದೇ ಆಗಿರಲಿ ನಾವು ಯೆಹೋವನಲ್ಲಿ ಭರವಸೆಯಿಟ್ಟರೆ ಆತನು ನಮ್ಮ ಮೇಲಿರುವ ತನ್ನ ಪ್ರೀತಿಯನ್ನು ರುಜುಪಡಿಸುವನು. ಎಷ್ಟೆಂದರೂ ನಾವಾತನ ‘ಕುರಿಗಳು’ ಹಾಗೂ ಆತನು ತನ್ನ ಹೆಸರನ್ನು ನಮಗೆ ಕೊಟ್ಟಿದ್ದಾನೆ.—ಕೀರ್ತ. 100:3; ಯೋಹಾ. 10:16; ಅ. ಕಾ. 15:14, 17.

20. ಸೈತಾನನ ಲೋಕ ಅಂತ್ಯಗೊಳ್ಳುವಾಗ ಯೆಹೋವನ ಸೇವಕರಾದರೋ ಸುರಕ್ಷಿತರಾಗಿರುವರು ಏಕೆ?

20 ಸೈತಾನನ ಲೋಕ ಯಾವುದರ ಮೇಲೆಲ್ಲ ಭರವಸೆಯಿಡುತ್ತದೋ ಅದೆಲ್ಲ ಧಾವಿಸಿ ಬರುತ್ತಿರುವ “ಯೆಹೋವನ ರೌದ್ರದ ದಿನದಲ್ಲಿ” ಹೇಳಹೆಸರಿಲ್ಲದಂತಾಗುವುದು. ಬೆಳ್ಳಿಯಾಗಲಿ, ಬಂಗಾರವಾಗಲಿ ಬೇರಾವುದೇ ಅಮೂಲ್ಯ ವಸ್ತುವಾಗಲಿ ಯಾವುದೇ ಭದ್ರತೆಯನ್ನು ಕೊಡಲಾರದು. (ಚೆಫ. 1:18; ಜ್ಞಾನೋ. 11:4) ‘ನಿತ್ಯವಾದ ಬಂಡೆಯಾಗಿರುವ ಯೆಹೋವನು’ ಮಾತ್ರವೇ ಆಶ್ರಯ ಕೊಡಶಕ್ತನು. (ಯೆಶಾ. 26:4, NIBV) ಹಾಗಾದರೆ ಈಗ ವಿಧೇಯತೆಯಿಂದ ಯೆಹೋವನ ನೀತಿಯುತ ಮಾರ್ಗದಲ್ಲಿ ನಡೆಯುವ ಮೂಲಕ, ನಿರಾಸಕ್ತಿ ಅಥವಾ ವಿರೋಧದ ಮಧ್ಯೆಯೂ ಆತನ ರಾಜ್ಯದ ಸಂದೇಶವನ್ನು ಸಾರುತ್ತಿರುವ ಮೂಲಕ ಹಾಗೂ ನಮ್ಮ ಚಿಂತೆಯನ್ನೆಲ್ಲ ಆತನ ಮೇಲೆ ಹಾಕುವ ಮೂಲಕ ಆತನಲ್ಲಿ ನಮಗಿರುವ ಸಂಪೂರ್ಣ ಭರವಸೆಯನ್ನು ತೋರ್ಪಡಿಸೋಣ. ಹೀಗೆ ಮಾಡುವಾಗ ನಾವು ನಿಶ್ಚಯವಾಗಿಯೂ ‘ಯಾವ ಕೇಡಿಗೂ ಭಯಪಡದೆ ಸುರಕ್ಷಿತರಾಗಿರುವೆವು.’—ಜ್ಞಾನೋ. 1:33.

[ಪಾದಟಿಪ್ಪಣಿ]

ನೀವು ವಿವರಿಸಬಲ್ಲಿರೊ?

• ತಪ್ಪು ಮಾಡಲು ಪ್ರಲೋಭಿಸಲ್ಪಡುವಾಗ,

• ನಿರಾಸಕ್ತಿ ಅಥವಾ ವಿರೋಧವನ್ನು ಎದುರಿಸುವಾಗ,

• ಚಿಂತೆಗಳನ್ನು ನಿಭಾಯಿಸುವಾಗ

ನಾವು ಹೇಗೆ ಯೆಹೋವನಲ್ಲಿ ಭರವಸೆ ಇಡಬಲ್ಲೆವು?

[ಅಧ್ಯಯನ ಪ್ರಶ್ನೆಗಳು]

[ಪುಟ 13ರಲ್ಲಿರುವ ಚಿತ್ರ]

ದೇವರ ಮಟ್ಟಗಳಿಗೆ ಅಂಟಿಕೊಳ್ಳುವುದು ಸಂತೋಷವನ್ನು ತರುತ್ತದೆ

[ಪುಟ 15ರಲ್ಲಿರುವ ಚಿತ್ರ]

“ಯೆಹೋವನೇ ನಿತ್ಯವಾದ ಬಂಡೆಯಾಗಿದ್ದಾನೆ”