ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಲೋಕದ ಮನೋಭಾವವನ್ನಲ್ಲ, ದೇವರಾತ್ಮವನ್ನು ಪಡೆದುಕೊಳ್ಳಿ

ಲೋಕದ ಮನೋಭಾವವನ್ನಲ್ಲ, ದೇವರಾತ್ಮವನ್ನು ಪಡೆದುಕೊಳ್ಳಿ

ಲೋಕದ ಮನೋಭಾವವನ್ನಲ್ಲ, ದೇವರಾತ್ಮವನ್ನು ಪಡೆದುಕೊಳ್ಳಿ

“ನಾವು ಲೋಕದ ಮನೋಭಾವವನ್ನಲ್ಲ, ದೇವರಿಂದ ಬರುವ ಆತ್ಮವನ್ನು ಪಡೆದುಕೊಂಡಿದ್ದೇವೆ; ಹೀಗೆ ದೇವರು ನಮಗೆ ದಯೆಯಿಂದ ನೀಡಿರುವಂಥ ವಿಷಯಗಳನ್ನು ನಾವು ಅರ್ಥಮಾಡಿಕೊಳ್ಳುವಂತಾಗುವುದು.”—1 ಕೊರಿಂ. 2:12.

1, 2. (ಎ) ನಿಜ ಕ್ರೈಸ್ತರು ಯಾವ ಅರ್ಥದಲ್ಲಿ ಯುದ್ಧ ಮಾಡುತ್ತಿದ್ದಾರೆ? (ಬಿ) ನಾವು ಯಾವ ಪ್ರಶ್ನೆಗಳನ್ನು ಪರಿಗಣಿಸಲಿದ್ದೇವೆ?

ನಿಜ ಕ್ರೈಸ್ತರು ಯುದ್ಧ ಮಾಡುತ್ತಿದ್ದಾರೆ! ನಮ್ಮ ವೈರಿ ಸಾಮಾನ್ಯನಲ್ಲ, ತುಂಬ ಶಕ್ತಿಶಾಲಿ, ಕುತಂತ್ರಿ, ನಿರ್ದಯಿ. ಅವನ ಬಳಿ ಶತಸಿದ್ಧವಾಗಿರುವ ಅಸ್ತ್ರವು ಎಷ್ಟೊಂದು ಪರಿಣಾಮಕಾರಿಯೆಂದರೆ ಅವನದನ್ನು ಪ್ರಯೋಗಿಸಿ ಅತ್ಯಧಿಕ ಜನರ ಮೇಲೆ ಯಶಸ್ಸು ಗಳಿಸಿದ್ದಾನೆ. ಹಾಗಿದ್ದರೂ ನಾವು ದುರ್ಬಲರು, ನಮಗೆ ಸೋಲು ಕಟ್ಟಿಟ್ಟಬುತ್ತಿ ಎಂದು ನೆನಸಬಾರದು. (ಯೆಶಾ. 41:10) ಏಕೆಂದರೆ ಯಾವುದೇ ಆಕ್ರಮಣವನ್ನು ಎದುರಿಸಿ ಜಯಿಸಬಲ್ಲ ರಕ್ಷಣಾಸಾಧನ ನಮಗೆ ಲಭ್ಯವಿದೆ.

2 ನಮ್ಮದು ಶಾರೀರಿಕ ಯುದ್ಧವಲ್ಲ ಆಧ್ಯಾತ್ಮಿಕ ಯುದ್ಧ. ನಮ್ಮ ವೈರಿ ಪಿಶಾಚನಾದ ಸೈತಾನನು. ಅವನು ಬಳಸುವ ಪ್ರಧಾನ ಅಸ್ತ್ರ “ಲೋಕದ ಮನೋಭಾವ” ಆಗಿದೆ. (1 ಕೊರಿಂ. 2:12) ಅವನ ಆಕ್ರಮಣವನ್ನು ಎದುರಿಸಿ ಜಯಿಸಲು ನಮಗಿರುವ ಪ್ರಮುಖ ರಕ್ಷಣಾಸಾಧನ ದೇವರಾತ್ಮವೇ. ಈ ಯುದ್ಧದಲ್ಲಿ ಬದುಕುಳಿಯಲು ಮತ್ತು ಆಧ್ಯಾತ್ಮಿಕವಾಗಿ ಸಚೇತನರಾಗಿ ಉಳಿಯಲು ದೇವರಾತ್ಮಕ್ಕಾಗಿ ಬೇಡಿಕೊಳ್ಳಬೇಕು ಹಾಗೂ ಅದರ ಫಲವನ್ನು ನಮ್ಮ ಜೀವನದಲ್ಲಿ ತೋರಿಸಬೇಕು. (ಗಲಾ. 5:22, 23) ಹಾಗಾದರೆ ಲೋಕದ ಮನೋಭಾವ ಅಂದರೇನು? ಅದು ಅಷ್ಟು ಪ್ರಭಾವಶಾಲಿಯಾದದ್ದು ಹೇಗೆ? ಲೋಕದ ಮನೋಭಾವ ನಮ್ಮನ್ನು ಪ್ರಭಾವಿಸುತ್ತಿದೆಯೋ ಎಂಬುದನ್ನು ನಾವು ಹೇಗೆ ತಿಳಿಯಸಾಧ್ಯ? ದೇವರಾತ್ಮವನ್ನು ಪಡೆದುಕೊಳ್ಳುವ ಮತ್ತು ಲೋಕದ ಮನೋಭಾವವನ್ನು ಪ್ರತಿರೋಧಿಸುವ ವಿಷಯದಲ್ಲಿ ಯೇಸುವಿನಿಂದ ನಾವೇನು ಕಲಿಯಬಲ್ಲೆವು?

ಲೋಕದ ಮನೋಭಾವ ತುಂಬ ವ್ಯಾಪಕವಾಗಿದೆಯೇಕೆ?

3. ಲೋಕದ ಮನೋಭಾವ ಅಂದರೇನು?

3 ಈ ಲೋಕದ ಮನೋಭಾವದ ಮೂಲನು “ಲೋಕದ ಅಧಿಪತಿ” ಆದ ಸೈತಾನನೇ. ಈ ಮನೋಭಾವವು ದೇವರ ಪವಿತ್ರಾತ್ಮಕ್ಕೆ ವಿರುದ್ಧವಾದದ್ದಾಗಿದೆ. (ಯೋಹಾ. 12:31; 14:30; 1 ಯೋಹಾ. 5:19) ಇದು ಈ ಲೋಕದ ಪ್ರಮುಖ ಪ್ರವೃತ್ತಿಯಾಗಿದ್ದು, ಜನರನ್ನು ಕ್ರಿಯೆಗೈಯುವಂತೆ ಪ್ರಚೋದಿಸುತ್ತದೆ. ಈ ಪ್ರೇರಕ ಶಕ್ತಿ ಮಾನವ ಸಮಾಜವನ್ನು ದೇವರ ಚಿತ್ತ ಹಾಗೂ ಉದ್ದೇಶಕ್ಕೆ ವಿರುದ್ಧವಾಗಿ ನಡೆಸುತ್ತದೆ.

4, 5. ಸೈತಾನನು ಪ್ರವರ್ತಿಸುವ ಮನೋಭಾವ ವ್ಯಾಪಕವಾಗಿ ಹರಡಿದ್ದು ಹೇಗೆ?

4 ಸೈತಾನನು ಪ್ರವರ್ತಿಸುವ ಈ ಮನೋಭಾವವು ವ್ಯಾಪಕವಾಗಿ ಹರಡಿದ್ದು ಹೇಗೆ? ಸೈತಾನನು ಮೊತ್ತಮೊದಲು ಏದೆನ್‌ ತೋಟದಲ್ಲಿ ಹವ್ವಳನ್ನು ವಂಚಿಸಿದನು. ದೇವರಿಂದ ಸ್ವತಂತ್ರಳಾದರೆ ಜೀವನ ಇನ್ನೂ ಉತ್ತಮಗೊಳ್ಳುವುದೆಂದು ಆಕೆಯನ್ನು ನಂಬಿಸಿದನು. (ಆದಿ. 3:13) ಎಂಥ ಸುಳ್ಳುಗಾರ ಅವನು! (ಯೋಹಾ. 8:44) ಅನಂತರ ಸೈತಾನನು ಕುತಂತ್ರದಿಂದ ಆ ಸ್ತ್ರೀಯ ಮೂಲಕ ಆದಾಮನು ಸಹ ಯೆಹೋವನಿಗೆ ಅವಿಧೇಯನಾಗುವಂತೆ ಮಾಡಿದನು. ಆದಾಮನ ಈ ಆಯ್ಕೆಯು ಮಾನವಕುಲವನ್ನು ಪಾಪದ ದಾಸತ್ವಕ್ಕೆ ಮಾರಿತು. ಹೀಗೆ ಸೈತಾನನ ಅವಿಧೇಯ ಮನೋಭಾವವನ್ನು ತೋರಿಸುವ ಪ್ರವೃತ್ತಿಯನ್ನು ಮಾನವಕುಲವು ಬಾಧ್ಯತೆಯಾಗಿ ಪಡೆಯಿತು.—ಎಫೆಸ 2:1-3 ಓದಿ.

5 ಸೈತಾನನು ಅನೇಕ ಮಂದಿ ದೇವದೂತರ ಮೇಲೂ ಪ್ರಭಾವಬೀರಿದನು. ಅನಂತರ ಅವರು ದೆವ್ವಗಳಾದರು. (ಪ್ರಕ. 12:3, 4) ಅವರು ಹೀಗೆ ದೇವರಿಗೆ ದ್ರೋಹವೆಸಗಿದ್ದು ನೋಹನ ದಿನದಲ್ಲಾದ ಜಲಪ್ರಳಯಕ್ಕೆ ಮುಂಚೆ. ಸ್ವರ್ಗದಲ್ಲಿರುವ ತಮ್ಮ ನೇಮಿತ ಸ್ಥಾನ ತೊರೆದು ಭೂಮಿಯ ಮೇಲೆ ಅಸ್ವಾಭಾವಿಕ ಇಚ್ಛೆಗಳನ್ನು ನಿರ್ಲಜ್ಜೆಯಿಂದ ನಡೆಸುವಲ್ಲಿ ತಾವು ಇನ್ನಷ್ಟು ಸಂತೋಷವಾಗಿರಬಹುದೆಂದು ಆ ದೇವದೂತರು ಎಣಿಸಿದರು. (ಯೂದ 6) ಈಗ ಮನುಷ್ಯದೇಹವನ್ನು ಧರಿಸಲು ಅಶಕ್ತವಾದ ಈ ದೆವ್ವಗಳ ಸಹಾಯದಿಂದ ಸೈತಾನನು ‘ಇಡೀ ನಿವಾಸಿತ ಭೂಮಿಯನ್ನು ತಪ್ಪುದಾರಿಗೆ ನಡಿಸುತ್ತಿದ್ದಾನೆ.’ (ಪ್ರಕ. 12:9) ದುಃಖಕರವಾಗಿ ಮಾನವಕುಲದ ಬಹುತೇಕ ಮಂದಿಗೆ ಈ ಪೈಶಾಚಿಕ ಪ್ರಭಾವದ ಅರಿವೇ ಇಲ್ಲ.—2 ಕೊರಿಂ. 4:4.

ಲೋಕದ ಮನೋಭಾವ ನಿಮ್ಮನ್ನು ಪ್ರಭಾವಿಸುತ್ತಿದೆಯೇ?

6. ಲೋಕದ ಮನೋಭಾವ ಯಾವಾಗ ಮಾತ್ರ ನಮ್ಮನ್ನು ಪ್ರಭಾವಿಸುತ್ತದೆ?

6 ಸೈತಾನನ ಪ್ರಭಾವದ ಅರಿವು ಅನೇಕರಿಗೆ ಇಲ್ಲವಾದರೂ ನಿಜ ಕ್ರೈಸ್ತರಿಗೆ ಬೈಬಲಿನ ಸಹಾಯದಿಂದ ಸೈತಾನನ ಕುತಂತ್ರಗಳು ತಿಳಿದಿವೆ. (2 ಕೊರಿಂ. 2:11) ನಿಜವೇನೆಂದರೆ, ನಾವು ಅನುಮತಿಸಿದರೆ ಮಾತ್ರ ಲೋಕದ ಮನೋಭಾವ ನಮ್ಮ ಮೇಲೆ ಪ್ರಭಾವಬೀರುತ್ತದೆ. ನಮ್ಮ ಮೇಲೆ ಯಾವುದು ಪ್ರಭಾವಬೀರುತ್ತಿದೆ? ದೇವರಾತ್ಮವೋ, ಲೋಕದ ಮನೋಭಾವವೋ? ಇದನ್ನು ತಿಳಿಯಲು ಸಹಾಯಮಾಡುವ ನಾಲ್ಕು ಪ್ರಶ್ನೆಗಳನ್ನು ನಾವೀಗ ಪರಿಗಣಿಸೋಣ.

7. ನಮ್ಮನ್ನು ಯೆಹೋವನಿಂದ ದೂರಮಾಡಲು ಸೈತಾನನು ಬಳಸುವ ಒಂದು ವಿಧ ಯಾವುದು?

7ನಾನು ಆಯ್ಕೆಮಾಡುವ ಮನೋರಂಜನೆ ನನ್ನ ಕುರಿತು ಏನನ್ನು ತಿಳಿಸುತ್ತದೆ? (ಯಾಕೋಬ 3:14-18 ಓದಿ.) ಹಿಂಸಾಚಾರವನ್ನು ಪ್ರೀತಿಸುವಂತೆ ಪ್ರೇರೇಪಿಸುವ ಮೂಲಕ ಸೈತಾನನು ನಮ್ಮನ್ನು ಯೆಹೋವನಿಂದ ದೂರಮಾಡಲು ಪ್ರಯತ್ನಿಸುತ್ತಾನೆ. ಹಿಂಸಾಚಾರವನ್ನು ಪ್ರೀತಿಸುವವರನ್ನು ಯೆಹೋವನು ದ್ವೇಷಿಸುತ್ತಾನೆಂಬುದು ಪಿಶಾಚನಿಗೆ ತಿಳಿದಿದೆ. (ಕೀರ್ತ. 11:5) ಹಾಗಾಗಿಯೇ ಪುಸ್ತಕಗಳು, ಚಲನಚಿತ್ರಗಳು, ಸಂಗೀತಗಳು ಹಾಗೂ ಅನೈತಿಕತೆ, ಕ್ರೌರ್ಯದಲ್ಲಿ ಒಳಗೂಡುವಂತೆ ಪ್ರೇರೇಪಿಸುವ ಎಲೆಕ್ಟ್ರಾನಿಕ್‌ ಗೇಮ್‌ಗಳನ್ನು ಬಳಸಿ ನಮ್ಮ ಶಾರೀರಿಕ ಬಯಕೆಗಳನ್ನು ಆಕರ್ಷಿಸಲು ಸೈತಾನನು ಪ್ರಯತ್ನಿಸುತ್ತಾನೆ. ನಾವು ಸೈತಾನನು ಪ್ರವರ್ತಿಸುವ ಕೆಟ್ಟತನವನ್ನು ಸ್ವಲ್ಪ ಪ್ರೀತಿಸಿದರೂ ಸಾಕು ಅವನಿಗೆ ಸಂತೋಷ; ಕೆಟ್ಟದ್ದರ ಜೊತೆಗೆ ನಾವು ಒಳ್ಳೇದನ್ನು ಪ್ರೀತಿಸಿದರೂ ಅವನಿಗೇನು ಚಿಂತೆಯಿಲ್ಲ.—ಕೀರ್ತ. 97:10.

8, 9. ಮನೋರಂಜನೆಯ ವಿಷಯದಲ್ಲಿ ನಾವು ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು?

8 ಆದರೆ ದೇವರಾತ್ಮವನ್ನು ಪಡೆದುಕೊಳ್ಳುವವರು ಶುದ್ಧರೂ ಶಾಂತಿಶೀಲರೂ ಕರುಣಾಮಯಿಗಳೂ ಆಗಿರುವಂತೆ ಪ್ರೇರಿಸಲ್ಪಡುತ್ತಾರೆ. ಆದ್ದರಿಂದ, ‘ನಾನು ಆಯ್ಕೆಮಾಡುವ ಮನೋರಂಜನೆ ಸದ್ಗುಣಗಳನ್ನು ಬೆಳೆಸಿಕೊಳ್ಳುವಂತೆ ನನ್ನನ್ನು ಪ್ರಚೋದಿಸುತ್ತದೋ?’ ಎಂದು ಸ್ವತಃ ಕೇಳಿಕೊಳ್ಳುವುದು ಉತ್ತಮ. ಮೇಲಣಿಂದ ಬರುವ ವಿವೇಕವು ‘ಕಪಟವಿಲ್ಲದ್ದು.’ ಹಾಗಾಗಿ ದೇವರಾತ್ಮದಿಂದ ಪ್ರಭಾವಿತರಾದವರು ಶುದ್ಧತೆ, ಶಾಂತಿಯ ಬಗ್ಗೆ ಇತರರಿಗೆ ಸಾರಿ ಹೇಳಿ ಮನೆಯಲ್ಲಿ ಒಬ್ಬರೇ ಇರುವಾಗ ಹಿಂಸಾಚಾರ, ಅನೈತಿಕತೆಯನ್ನು ವೀಕ್ಷಿಸುವುದರಲ್ಲಿ ಖುಷಿಪಡುವುದಿಲ್ಲ.

9 ಯೆಹೋವನು ಸಂಪೂರ್ಣ ಭಕ್ತಿಯನ್ನು ಅಪೇಕ್ಷಿಸುತ್ತಾನೆ. ಆದರೆ ಸೈತಾನನು ಒಂದೇ ಒಂದು ಆರಾಧನಾ ಕ್ರಿಯೆಯಲ್ಲಿ ತೃಪ್ತನಾಗುತ್ತಾನೆ. ಯೇಸುವಿನಿಂದ ಅವನು ಅದನ್ನೇ ಕೇಳಿಕೊಂಡನಲ್ಲಾ. (ಲೂಕ 4:7, 8) ನಾವು ನಮ್ಮನ್ನೇ ಹೀಗೆ ಕೇಳಿಕೊಳ್ಳಬೇಕು: ‘ನಾನು ಆಯ್ಕೆಮಾಡುವ ಮನೋರಂಜನೆ ದೇವರಿಗೆ ಸಂಪೂರ್ಣ ಭಕ್ತಿಯನ್ನು ಸಲ್ಲಿಸಲು ಸಾಧ್ಯಮಾಡುತ್ತದೋ? ಅದರಿಂದಾಗಿ ಲೋಕದ ಮನೋಭಾವವನ್ನು ಪ್ರತಿರೋಧಿಸಲು ನನಗೆ ಕಷ್ಟವಾಗುತ್ತದೋ ಸುಲಭವಾಗುತ್ತದೋ? ಇನ್ನು ಮುಂದೆ ಮನೋರಂಜನೆ ಆಯ್ಕೆಮಾಡುವ ವಿಷಯದಲ್ಲಿ ನಾನೇನಾದರೂ ಬದಲಾವಣೆಗಳನ್ನು ಮಾಡಬೇಕೋ?’

10, 11. (ಎ) ಸಿರಿಸಂಪತ್ತಿನ ವಿಷಯದಲ್ಲಿ ಲೋಕದ ಮನೋಭಾವವು ನಮ್ಮಲ್ಲಿ ಯಾವ ಭಾವನೆಯನ್ನು ಹುಟ್ಟಿಸುತ್ತದೆ? (ಬಿ) ದೇವರಾತ್ಮ ಪ್ರೇರಿತ ವಾಕ್ಯ ಯಾವ ಮನೋಭಾವವನ್ನು ಉತ್ತೇಜಿಸುತ್ತದೆ?

10ಸಿರಿಸಂಪತ್ತಿನ ವಿಷಯದಲ್ಲಿ ನನ್ನ ಮನೋಭಾವವೇನು? (ಲೂಕ 18:24-30 ಓದಿ.) ಲೋಕದ ಮನೋಭಾವವು ಲೋಭ ಹಾಗೂ ಪ್ರಾಪಂಚಿಕತೆಯನ್ನು ಪ್ರೋತ್ಸಾಹಿಸುವ ಮೂಲಕ ‘ಕಣ್ಣಿನಾಶೆಯನ್ನು’ ಪ್ರವರ್ತಿಸುತ್ತದೆ. (1 ಯೋಹಾ. 2:16) ಅಲ್ಲದೆ ಐಶ್ವರ್ಯವಂತರಾಗುವ ದೃಢನಿರ್ಧಾರ ಮಾಡುವಂತೆ ಅದು ಅನೇಕರನ್ನು ಪ್ರೇರಿಸಿದೆ. (1 ತಿಮೊ. 6:9, 10) ನಾವು ಹೆಚ್ಚೆಚ್ಚು ಭೌತಿಕ ವಸ್ತುಗಳನ್ನು ಶೇಖರಿಸಿಕೊಂಡಲ್ಲಿ ಶಾಶ್ವತ ಭದ್ರತೆ ಸಿಗುವುದೆಂದು ನಂಬುವಂತೆ ಸಹ ಮಾಡುತ್ತದೆ. (ಜ್ಞಾನೋ. 18:11) ನಾವೇನಾದರೂ ದೇವರಿಗಿಂತಲೂ ಹೆಚ್ಚಾಗಿ ಹಣವನ್ನು ಪ್ರೀತಿಸತೊಡಗಿದರೆ ಸೈತಾನನು ಜಯಹೊಂದಿದಂತೆ! ಹಾಗಾಗಿ, ‘ಸುಖಸೌಕರ್ಯಗಳಿಂದ ಕೂಡಿದ ಜೀವನ ನಡೆಸುವುದೇ ನನ್ನ ಗುರಿಯಾಗಿದೆಯೋ?’ ಎಂದು ನಮ್ಮನ್ನು ಕೇಳಿಕೊಳ್ಳಬೇಕು.

11 ಹಣದ ವಿಷಯದಲ್ಲಿ ಸಮತೂಕದ ನೋಟ ಹೊಂದಿರುವಂತೆಯೂ ನಮ್ಮ ಹಾಗೂ ನಮ್ಮ ಕುಟುಂಬದ ಭೌತಿಕ ಅಗತ್ಯಗಳನ್ನು ಪೂರೈಸಲು ಕಷ್ಟಪಟ್ಟು ದುಡಿಯುವಂತೆಯೂ ದೇವರಾತ್ಮ ಪ್ರೇರಿತ ವಾಕ್ಯ ನಮ್ಮನ್ನು ಉತ್ತೇಜಿಸುತ್ತದೆ. (1 ತಿಮೊ. 5:8) ದೇವರಾತ್ಮವು, ಅದನ್ನು ಹೊಂದಿದವರಿಗೆ ಯೆಹೋವನ ಉದಾರ ವ್ಯಕ್ತಿತ್ವವನ್ನು ಅನುಕರಿಸಲು ಸಹಾಯಮಾಡುತ್ತದೆ. ಅಂಥವರು ಕೊಡುವವರಾಗಿರುತ್ತಾರೇ ವಿನಾ ತೆಗೆದುಕೊಳ್ಳುವವರಾಗಿರುವುದಿಲ್ಲ. ಅವರು ವಸ್ತುಗಳಿಗಲ್ಲ, ಮನುಷ್ಯರಿಗೆ ಹೆಚ್ಚು ಬೆಲೆಕೊಡುತ್ತಾರೆ. ಸಾಧ್ಯವಿರುವಾಗ ತಮ್ಮ ಬಳಿಯಿರುವುದನ್ನು ಸಂತೋಷದಿಂದ ಇತರರೊಂದಿಗೆ ಹಂಚಿಕೊಳ್ಳುತ್ತಾರೆ. (ಜ್ಞಾನೋ. 3:27, 28) ಹಣದ ಹಿಂದೆಬಿದ್ದು ಅವರೆಂದೂ ದೇವರ ಸೇವೆಯನ್ನು ಬದಿಗೊತ್ತುವುದಿಲ್ಲ.

12, 13. ಲೋಕದ ಮನೋಭಾವಕ್ಕೆ ವ್ಯತಿರಿಕ್ತವಾಗಿ ದೇವರಾತ್ಮವು ನಮ್ಮ ಮೇಲೆ ಯಾವ ಸತ್ಪ್ರಭಾವಬೀರುತ್ತದೆ?

12ನನ್ನ ವ್ಯಕ್ತಿತ್ವವು ದೇವರಾತ್ಮವನ್ನು ಪ್ರತಿಫಲಿಸುತ್ತದೋ, ಲೋಕದ ಮನೋಭಾವವನ್ನು ಪ್ರತಿಫಲಿಸುತ್ತದೋ? (ಕೊಲೊಸ್ಸೆ 3:8-10, 13 ಓದಿ.) ಲೋಕದ ಮನೋಭಾವವು ‘ಶರೀರಭಾವದ ಕಾರ್ಯಗಳಿಗೆ’ ಇಂಬುಕೊಡುತ್ತದೆ. (ಗಲಾ. 5:19-21) ನಾವು ನಿಜವಾಗಿಯೂ ಯಾವುದರಿಂದ ಪ್ರಭಾವಿಸಲ್ಪಡುತ್ತಿದ್ದೇವೆ ಎಂಬುದು ಗೊತ್ತಾಗುವುದು ಎಲ್ಲಾ ವಿಷಯಗಳು ಯಾವುದೇ ತೊಡಕಿಲ್ಲದೆ ಸುಗಮವಾಗಿ ಸಾಗುವಾಗ ಅಲ್ಲ, ಬದಲಾಗಿ ತೊಡಕುಗಳು ಏಳುವಾಗಲೇ. ಉದಾಹರಣೆಗೆ ನಮ್ಮ ಸಹೋದರ ಯಾ ಸಹೋದರಿ ನಮ್ಮನ್ನು ಕಡೆಗಣಿಸಿದಾಗ, ನಮ್ಮ ಮನನೋಯಿಸಿದಾಗ ಅಥವಾ ನಮ್ಮ ವಿರುದ್ಧ ಪಾಪಮಾಡಿದಾಗ ನಾವು ಪ್ರತಿಕ್ರಿಯಿಸುವ ವಿಧದಲ್ಲಿ ವ್ಯಕ್ತವಾಗುತ್ತದೆ. ನಾವು ನಮ್ಮ ಮನೆಮಂದಿಯೊಂದಿಗೆ ಹೇಗೆ ವರ್ತಿಸುತ್ತೇವೆ? ಅವರೊಂದಿಗೆ ನಾವು ವ್ಯವಹರಿಸುವ ವಿಧ ಸಹ ನಮ್ಮನ್ನು ಯಾವುದು ಪ್ರಭಾವಿಸುತ್ತಿದೆ ಎಂಬುದನ್ನು ತೋರಿಸುತ್ತದೆ. ಹಾಗಾಗಿ ಸ್ವಪರೀಕ್ಷೆಮಾಡಿಕೊಳ್ಳುವುದು ಅಗತ್ಯ. ಹೀಗೆ ಕೇಳಿಕೊಳ್ಳಿ: ‘ಕಳೆದ ಆರು ತಿಂಗಳಲ್ಲಿ ನನ್ನ ವ್ಯಕ್ತಿತ್ವ ಹೆಚ್ಚೆಚ್ಚು ಕ್ರಿಸ್ತನಂತಾಗಿದೆಯೋ ಅಥವಾ ಅದರಲ್ಲಿ ಕೆಟ್ಟ ಅಭ್ಯಾಸಗಳು ಮತ್ತೆ ನುಸುಳಿವೆಯೋ?’

13 ‘ಹಳೆಯ ವ್ಯಕ್ತಿತ್ವವನ್ನು ಅದರ ಅಭ್ಯಾಸಗಳೊಂದಿಗೆ ತೆಗೆದುಹಾಕಿ ನೂತನ ವ್ಯಕ್ತಿತ್ವವನ್ನು’ ಧರಿಸಿಕೊಳ್ಳಲು ದೇವರಾತ್ಮವು ನಮಗೆ ಸಹಾಯಮಾಡಬಲ್ಲದು. ನೂತನ ವ್ಯಕ್ತಿತ್ವವು ನಾವು ಪ್ರೀತಿಪರರೂ ದಯಾಪರರೂ ಆಗಿರಲು ನೆರವಾಗುತ್ತದೆ. ಇತರರ ಮೇಲೆ ದೂರುಹೊರಿಸಲು ನ್ಯಾಯವಾದ ಕಾರಣವಿದ್ದರೂ ನಾವು ಅವರನ್ನು ಉದಾರವಾಗಿ ಕ್ಷಮಿಸುವವರಾಗುತ್ತೇವೆ. ನಾವು ಅನ್ಯಾಯವನ್ನು ಕಂಡು ಮುಂಚಿನಂತೆ ‘ದ್ವೇಷಭರಿತ ವೈಷಮ್ಯ, ಕೋಪ, ಕ್ರೋಧ, ಕಿರಿಚಾಟ ಮತ್ತು ನಿಂದಾತ್ಮಕ ಮಾತುಗಳಿಂದ’ ಸಿಡಿದೇಳುವುದಿಲ್ಲ. ಬದಲಾಗಿ ‘ಕೋಮಲ ಸಹಾನುಭೂತಿಯುಳ್ಳವರಾಗಿರಲು’ ಪ್ರಯತ್ನಿಸುತ್ತೇವೆ.—ಎಫೆ. 4:31, 32.

14. ಲೋಕದಲ್ಲಿ ಹೆಚ್ಚಿನವರು ದೇವರ ವಾಕ್ಯವನ್ನು ಹೇಗೆ ವೀಕ್ಷಿಸುತ್ತಾರೆ?

14ಬೈಬಲಿನ ನೈತಿಕ ಮಟ್ಟಗಳನ್ನು ನಾನು ಗೌರವಿಸಿ ಪ್ರೀತಿಸುತ್ತೇನೋ? (ಜ್ಞಾನೋಕ್ತಿ 3:5, 6 ಓದಿ.) ದೇವರ ವಾಕ್ಯದ ವಿರುದ್ಧ ದಂಗೆ ಏಳುವ ಮನೋಭಾವ ಈ ಲೋಕದ್ದಾಗಿದೆ. ಈ ಮನೋಭಾವದಿಂದ ಪ್ರಭಾವಿಸಲ್ಪಟ್ಟವರು ತಮಗೆ ಬೈಬಲಿನಲ್ಲಿ ಯಾವ ಭಾಗ ಇಷ್ಟವಾಗುವುದಿಲ್ಲವೋ ಅದನ್ನು ಕಡೆಗಣಿಸಿ ಮಾನವ ಸಂಪ್ರದಾಯ, ತತ್ತ್ವಜ್ಞಾನದ ಮೊರೆಹೋಗುತ್ತಾರೆ. (2 ತಿಮೊ. 4:3, 4) ಕೆಲವರು ದೇವರ ವಾಕ್ಯವನ್ನು ಪೂರ್ತಿಯಾಗಿ ಅಸಡ್ಡೆ ಮಾಡುತ್ತಾರೆ. ಅಂಥವರು ಬೈಬಲಿನ ಮಹತ್ವ ಹಾಗೂ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನಿಸುತ್ತಾ ತಾವೇ ಬುದ್ಧಿವಂತರೆಂದುಕೊಳ್ಳುತ್ತಾರೆ. ವ್ಯಭಿಚಾರ, ಸಲಿಂಗಕಾಮ ಹಾಗೂ ವಿವಾಹ ವಿಚ್ಛೇದನದ ಬಗ್ಗೆ ದೇವರ ವಾಕ್ಯದಲ್ಲಿರುವ ಶುದ್ಧ ಮಟ್ಟಗಳ ಮಹತ್ವವನ್ನು ತಗ್ಗಿಸುತ್ತಾರೆ. ಹೀಗೆ ಅವರು “ಕೆಟ್ಟದ್ದನ್ನು ಒಳ್ಳೇದೆಂದೂ ಒಳ್ಳೇದನ್ನು ಕೆಟ್ಟದ್ದೆಂದೂ” ಬೋಧಿಸುತ್ತಾರೆ. (ಯೆಶಾ. 5:20) ಈ ಮನೋಭಾವ ನಮಗೂ ಸೋಂಕಿದೆಯೋ? ಸಮಸ್ಯೆಗಳು ಎದುರಾದಾಗ ನಾವು ನಮ್ಮ ಸ್ವಂತ ಬುದ್ಧಿಯನ್ನು ಅಥವಾ ಮಾನವ ವಿವೇಕವನ್ನು ಅವಲಂಬಿಸುತ್ತೇವೋ? ಇಲ್ಲವೆ ಬೈಬಲ್‌ ಸಲಹೆಯನ್ನು ಪಾಲಿಸಲು ಶ್ರಮಿಸುತ್ತೇವೋ?

15. ನಾವು ಸ್ವಂತ ವಿವೇಕವನ್ನು ಅವಲಂಬಿಸುವ ಬದಲು ಏನು ಮಾಡಬೇಕು?

15 ದೇವರಾತ್ಮ ನಮ್ಮಲ್ಲಿ ಬೈಬಲಿಗಾಗಿ ಗೌರವವನ್ನು ಹುಟ್ಟಿಸುತ್ತದೆ. ಕೀರ್ತನೆಗಾರನಂತೆ ನಾವೂ ದೇವರ ವಾಕ್ಯವನ್ನು ನಮ್ಮ ಕಾಲಿಗೆ ದೀಪವಾಗಿಯೂ ದಾರಿಗೆ ಬೆಳಕಾಗಿಯೂ ವೀಕ್ಷಿಸುತ್ತೇವೆ. (ಕೀರ್ತ. 119:105) ಸರಿತಪ್ಪುಗಳ ಭೇದವನ್ನು ಗ್ರಹಿಸಲು ಸ್ವಂತ ವಿವೇಕದ ಮೇಲೆ ಹೊಂದಿಕೊಳ್ಳದೆ ಪೂರ್ಣ ಭರವಸೆಯಿಂದ ದೇವರ ಲಿಖಿತ ವಾಕ್ಯದ ಮೇಲೆ ಆತುಕೊಳ್ಳುತ್ತೇವೆ. ನಾವು ಬೈಬಲನ್ನು ಗೌರವಿಸಲು ಮಾತ್ರವಲ್ಲ ಅದರಲ್ಲಿರುವ ದೇವರ ನಿಯಮಗಳನ್ನು ಪ್ರೀತಿಸಲು ಸಹ ಕಲಿಯುತ್ತೇವೆ.—ಕೀರ್ತ. 119:97.

ಯೇಸುವಿನ ಮಾದರಿಯಿಂದ ಕಲಿಯಿರಿ

16. “ಕ್ರಿಸ್ತನ ಮನಸ್ಸನ್ನು” ಹೇಗೆ ಹೊಂದಸಾಧ್ಯ?

16 ನಾವು ದೇವರಾತ್ಮವನ್ನು ಪಡೆಯಬೇಕಾದರೆ “ಕ್ರಿಸ್ತನ ಮನಸ್ಸನ್ನು” ಬೆಳೆಸಿಕೊಳ್ಳಬೇಕು. (1 ಕೊರಿಂ. 2:16) “ಕ್ರಿಸ್ತ ಯೇಸುವಿನಲ್ಲಿದ್ದ ಅದೇ ಮನೋಭಾವವನ್ನು” ನಾವೂ ಹೊಂದಬೇಕಾದರೆ ಆತನು ಯೋಚಿಸುತ್ತಿದ್ದ, ವರ್ತಿಸುತ್ತಿದ್ದ ವಿಧವನ್ನು ಅರಿತು ಅದನ್ನು ಅನುಕರಿಸಬೇಕು. (ರೋಮ. 15:5; 1 ಪೇತ್ರ 2:21) ಇದನ್ನು ನಾವು ಮಾಡಬಲ್ಲ ಕೆಲವು ವಿಧಗಳನ್ನು ಪರಿಗಣಿಸೋಣ.

17, 18. (ಎ) ಪ್ರಾರ್ಥನೆಯ ವಿಷಯದಲ್ಲಿ ನಾವು ಯೇಸುವಿನಿಂದ ಏನನ್ನು ಕಲಿಯುತ್ತೇವೆ? (ಬಿ) ನಾವು ‘ಬೇಡಿಕೊಳ್ಳುತ್ತಾ ಇರಬೇಕು’ ಏಕೆ?

17ದೇವರಾತ್ಮಕ್ಕಾಗಿ ಪ್ರಾರ್ಥಿಸಿ. ಯೇಸು ಕಷ್ಟಪರೀಕ್ಷೆಗಳನ್ನು ಎದುರಿಸುವ ಮುಂಚೆ ಸಹಾಯಕ್ಕಾಗಿ ಯಾಚಿಸುತ್ತಾ ದೇವರಾತ್ಮಕ್ಕಾಗಿ ಪ್ರಾರ್ಥಿಸಿದನು. (ಲೂಕ 22:40, 41) ನಾವೂ ಸಹ ಪವಿತ್ರಾತ್ಮಕ್ಕಾಗಿ ದೇವರಲ್ಲಿ ಬೇಡಿಕೊಳ್ಳಬೇಕು. ಯಾರು ನಂಬಿಕೆಯಿಂದ ಬೇಡಿಕೊಳ್ಳುತ್ತಾರೋ ಅವರಿಗೆ ಯೆಹೋವನು ಅದನ್ನು ಉದಾರವಾಗಿ ಕೊಡುತ್ತಾನೆ. (ಲೂಕ 11:13) ಯೇಸು ಅಂದದ್ದು: “ಬೇಡಿಕೊಳ್ಳುತ್ತಾ ಇರಿ, ಅದು ನಿಮಗೆ ಕೊಡಲ್ಪಡುವುದು; ಹುಡುಕುತ್ತಾ ಇರಿ, ನೀವು ಕಂಡುಕೊಳ್ಳುವಿರಿ; ತಟ್ಟುತ್ತಾ ಇರಿ, ಅದು ನಿಮಗೆ ತೆರೆಯಲ್ಪಡುವುದು. ಏಕೆಂದರೆ ಬೇಡಿಕೊಳ್ಳುತ್ತಿರುವ ಪ್ರತಿಯೊಬ್ಬನು ಹೊಂದುವನು, ಹುಡುಕುತ್ತಿರುವ ಪ್ರತಿಯೊಬ್ಬನು ಕಂಡುಕೊಳ್ಳುವನು ಮತ್ತು ತಟ್ಟುತ್ತಿರುವ ಪ್ರತಿಯೊಬ್ಬನಿಗೆ ತೆರೆಯಲ್ಪಡುವುದು.”—ಮತ್ತಾ. 7:7, 8.

18 ಯೆಹೋವನ ಆತ್ಮಕ್ಕಾಗಿ ಹಾಗೂ ಸಹಾಯಕ್ಕಾಗಿ ಕೇವಲ ಒಂದೆರಡು ಸಲ ಬೇಡಿ ಸುಮ್ಮನಾಗಬೇಡಿ. ಪದೇಪದೇ ಪ್ರಾರ್ಥಿಸಿರಿ; ಯೆಹೋವನೊಂದಿಗೆ ಮಾತಾಡುವುದರಲ್ಲಿ ಹೆಚ್ಚು ಸಮಯ ಕಳೆಯಿರಿ. ಕೆಲವೊಮ್ಮೆ ಯೆಹೋವನು ಪ್ರಾರ್ಥನೆಗಳಿಗೆ ಉತ್ತರಿಸುವ ಮುಂಚೆ ತನ್ನನ್ನು ಬೇಡಿಕೊಳ್ಳುವವರು ತಮ್ಮ ಚಿಂತೆಯ ಗಹನತೆಯನ್ನು ಹಾಗೂ ನಂಬಿಕೆಯ ಯಥಾರ್ಥತೆಯನ್ನು ವ್ಯಕ್ತಪಡಿಸಲು ಅವಕಾಶ ಕೊಡುತ್ತಾನೆ. *

19. ಯೇಸು ಯಾವಾಗಲೂ ಏನು ಮಾಡಿದನು? ನಾವೇಕೆ ಅವನನ್ನು ಅನುಕರಿಸಬೇಕು?

19ಯೆಹೋವನಿಗೆ ಸಂಪೂರ್ಣವಾಗಿ ವಿಧೇಯರಾಗಿರಿ. ಯೇಸು ಯಾವಾಗಲೂ ತನ್ನ ತಂದೆಗೆ ಮೆಚ್ಚುಗೆಯಾದದ್ದನ್ನೇ ಮಾಡಿದನು. ಆದರೆ ಕೇವಲ ಒಂದು ಸನ್ನಿವೇಶದಲ್ಲಿ ಯೇಸು ತನ್ನ ತಂದೆ ಬಯಸಿದ್ದಕ್ಕಿಂತ ಭಿನ್ನವಾಗಿ ವಿಷಯವು ನಿರ್ವಹಿಸಲ್ಪಡಬೇಕೆಂದು ಬಯಸಿದನು. ಆದರೂ ಅವನು ಪೂರ್ಣ ಭರವಸೆಯಿಂದ ತನ್ನ ತಂದೆಗೆ, “ನನ್ನ ಚಿತ್ತವಲ್ಲ ನಿನ್ನ ಚಿತ್ತವು ನೆರವೇರಲಿ” ಎಂದನು. (ಲೂಕ 22:42) ನಿಮ್ಮನ್ನು ಹೀಗೆ ಕೇಳಿಕೊಳ್ಳಿ: ‘ದೇವರಿಗೆ ವಿಧೇಯತೆ ತೋರಿಸುವುದು ಕಷ್ಟಕರವೆನಿಸುವಾಗಲೂ ನಾನು ವಿಧೇಯನಾಗುತ್ತೇನೋ?’ ಜೀವನದಲ್ಲಿ ದೇವರಿಗೆ ವಿಧೇಯತೆ ತೋರಿಸುವುದು ತುಂಬ ಅತ್ಯಗತ್ಯ. ನಮ್ಮ ಜೀವದ ಉಗಮನೂ ಪೋಷಕನೂ ಆದ ನಮ್ಮ ನಿರ್ಮಾಣಿಕನಿಗೆ ಸಂಪೂರ್ಣ ವಿಧೇಯತೆ ತೋರಿಸುವ ಹೊಣೆ ನಮಗಿದೆ. (ಕೀರ್ತ. 95:6, 7) ದೇವರ ಮೆಚ್ಚುಗೆ ಪಡೆಯಲು ವಿಧೇಯತೆ ತೋರಿಸಲೇಬೇಕು. ಪರ್ಯಾಯ ಮಾರ್ಗವಿಲ್ಲ.

20. ಯೇಸುವಿನ ಜೀವನ ಯಾವುದರ ಮೇಲೆ ಕೇಂದ್ರೀಕೃತವಾಗಿತ್ತು? ನಾವು ಹೇಗೆ ಆತನನ್ನು ಅನುಕರಿಸಬಹುದು?

20ಬೈಬಲನ್ನು ಚೆನ್ನಾಗಿ ತಿಳಿದುಕೊಳ್ಳಿ. ತನ್ನ ನಂಬಿಕೆಯ ಮೇಲೆ ಸೈತಾನನು ಮಾಡಿದ ನೇರ ಆಕ್ರಮಣವನ್ನು ಪ್ರತಿರೋಧಿಸುವಾಗ ಯೇಸು ಶಾಸ್ತ್ರವಚನಗಳನ್ನು ಉಲ್ಲೇಖಿಸಿ ಮಾತಾಡಿದನು. (ಲೂಕ 4:1-13) ಧಾರ್ಮಿಕ ವಿರೋಧಿಗಳೊಂದಿಗೆ ವ್ಯವಹರಿಸುವಾಗ ಯೇಸು ದೇವರ ವಾಕ್ಯವನ್ನು ಆಧಾರವಾಗಿ ಬಳಸಿದನು. (ಮತ್ತಾ. 15:3-6) ಯೇಸುವಿನ ಇಡೀ ಜೀವನವು ಧರ್ಮಶಾಸ್ತ್ರವನ್ನು ತಿಳಿದುಕೊಳ್ಳುವುದರ ಹಾಗೂ ನೆರವೇರಿಸುವುದರ ಮೇಲೆಯೇ ಕೇಂದ್ರೀಕೃತವಾಗಿತ್ತು. (ಮತ್ತಾ. 5:17) ನಾವು ಸಹ ನಂಬಿಕೆಯನ್ನು ಬಲಪಡಿಸುವಂಥ ದೇವರ ವಾಕ್ಯವನ್ನು ನಮ್ಮ ಮನದಲ್ಲಿ ತುಂಬಿಸಬೇಕು. (ಫಿಲಿ. 4:8, 9) ಕೆಲವರಿಗೆ ವೈಯಕ್ತಿಕ ಹಾಗೂ ಕುಟುಂಬ ಅಧ್ಯಯನಕ್ಕಾಗಿ ಸಮಯವನ್ನು ಕಂಡುಕೊಳ್ಳುವುದು ಸವಾಲಾಗಿದೆ. ಆದರೆ ನಾವು ಸಮಯ ಕಂಡುಕೊಳ್ಳುವುದಲ್ಲ ಬದಲಾಗಿ ಸಮಯ ಮಾಡಿಕೊಳ್ಳಬೇಕು.ಎಫೆ. 5:15-17.

21. ದೇವರ ವಾಕ್ಯವನ್ನು ಚೆನ್ನಾಗಿ ತಿಳಿದುಕೊಳ್ಳಲು ಹಾಗೂ ಅನ್ವಯಿಸಿಕೊಳ್ಳಲು ಯಾವ ಏರ್ಪಾಡನ್ನು ನಾವು ಸದುಪಯೋಗಿಸಬಹುದು?

21 “ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು” ಕುಟುಂಬ ಆರಾಧನೆಯ ಸಂಜೆಯನ್ನು ಏರ್ಪಡಿಸಿದೆ. ಈ ಮೂಲಕ ಪ್ರತಿವಾರ ವೈಯಕ್ತಿಕ ಹಾಗೂ ಕುಟುಂಬ ಅಧ್ಯಯನಕ್ಕೆ ಸಮಯ ಮಾಡಿಕೊಳ್ಳಲು ಸಹಾಯಮಾಡಿದೆ. (ಮತ್ತಾ. 24:45) ನೀವು ಈ ಏರ್ಪಾಡಿನ ಸದ್ಬಳಕೆ ಮಾಡುತ್ತಿದ್ದೀರೋ? ಯೇಸು ಬೋಧಿಸಿದ ವಿಷಯಗಳನ್ನು ಪ್ರತಿವಾರ ಒಂದೊಂದರಂತೆ ಆರಿಸಿಕೊಂಡು ಅವುಗಳ ಬಗ್ಗೆ ಹೆಚ್ಚನ್ನು ಕಲಿಯಬಹುದಲ್ಲವೇ? ಇದು ಕ್ರಿಸ್ತನ ಮನಸ್ಸನ್ನು ಹೊಂದಲು ನಿಮಗೆ ಸಹಾಯಮಾಡುವುದು. ನೀವು ಕಲಿಯಬಯಸುವ ವಿಷಯದ ಕುರಿತು ಹೆಚ್ಚಿನ ಮಾಹಿತಿಯನ್ನು ಕಂಡುಕೊಳ್ಳಲು ಕಾವಲಿನ ಬುರುಜು ಪ್ರಕಾಶನಗಳ ವಿಷಯಸೂಚಿ (ಇಂಗ್ಲಿಷ್‌) ಅನ್ನು ಬಳಸಬಹುದು. ಉದಾಹರಣೆಗೆ, ಇಸವಿ 2008ರಿಂದ 2010ರ ತನಕ ಈ ಪತ್ರಿಕೆಯ ಸಾರ್ವಜನಿಕ ಆವೃತ್ತಿಯಲ್ಲಿ “ಯೇಸುವಿನಿಂದ ಕಲಿಯುವುದು . . . ” ಎಂಬ ಶೀರ್ಷಿಕೆಯನ್ನು ಹೊತ್ತ ಸುಮಾರು 7 ಲೇಖನಗಳು ಮೂಡಿಬಂದಿದ್ದವು. ಈ ಲೇಖನಗಳನ್ನು ನಿಮ್ಮ ಅಧ್ಯಯನಕ್ಕೆ ಆಧಾರವಾಗಿ ಬಳಸಬಹುದು. 2006ರಿಂದ ಎಚ್ಚರ! ಪತ್ರಿಕೆಯು “ನಿಮ್ಮ ಉತ್ತರವೇನು?” ಎಂಬ ವಿಶಿಷ್ಟಭಾಗವನ್ನು ಹೊಂದಿತ್ತು. ದೇವರ ವಾಕ್ಯದ ಬಗ್ಗೆ ನಿಮಗಿರುವ ಜ್ಞಾನವನ್ನು ವಿಶಾಲಗೊಳಿಸುವ ಹಾಗೂ ಗಾಢಗೊಳಿಸುವ ಉದ್ದೇಶದಿಂದ ಅದರಲ್ಲಿರುವ ಪ್ರಶ್ನೆಗಳನ್ನು ರಚಿಸಲಾಗಿತ್ತು. ಆಗಾಗ್ಗೆ ಅವನ್ನು ನಿಮ್ಮ ಕುಟುಂಬ ಆರಾಧನೆಯಲ್ಲಿ ಉಪಯೋಗಿಸಬಹುದಲ್ಲವೇ?

ನಾವು ಲೋಕವನ್ನು ಜಯಿಸಬಲ್ಲೆವು!

22, 23. ನಾವು ಲೋಕವನ್ನು ಜಯಿಸಬೇಕಾದರೆ ಏನು ಮಾಡಬೇಕು?

22 ದೇವರಾತ್ಮದಿಂದ ಮಾರ್ಗದರ್ಶಿಸಲ್ಪಡಬೇಕಾದರೆ ನಾವು ಲೋಕದ ಮನೋಭಾವವನ್ನು ಪ್ರತಿರೋಧಿಸಲೇಬೇಕು. ಆದರೆ ಅದು ಅಷ್ಟು ಸುಲಭವಲ್ಲ. ನಾವು ಕಠಿನ ಹೋರಾಟವನ್ನು ಮಾಡಬೇಕು. (ಯೂದ 3) ಆದರೆ ನಾವು ಗೆಲ್ಲಬಲ್ಲೆವು! ಯೇಸು ತನ್ನ ಶಿಷ್ಯರಿಗೆ ಹೇಳಿದ್ದು: “ಲೋಕದಲ್ಲಿ ನಿಮಗೆ ಸಂಕಟವಿರುವುದು, ಆದರೆ ಧೈರ್ಯವಾಗಿರಿ! ನಾನು ಲೋಕವನ್ನು ಜಯಿಸಿದ್ದೇನೆ.”—ಯೋಹಾ. 16:33

23 ನಾವು ಲೋಕದ ಮನೋಭಾವವನ್ನು ಪ್ರತಿರೋಧಿಸಿ ದೇವರಾತ್ಮವನ್ನು ಪಡೆದುಕೊಳ್ಳಲು ಸಾಧ್ಯವಿರುವುದನ್ನೆಲ್ಲ ಮಾಡುವಲ್ಲಿ ನಾವು ಸಹ ಲೋಕವನ್ನು ಜಯಿಸಬಲ್ಲೆವು. “ದೇವರು ನಮ್ಮ ಪಕ್ಷದಲ್ಲಿರುವುದಾದರೆ ನಮ್ಮನ್ನು ಎದುರಿಸುವವರು ಯಾರು?” (ರೋಮ. 8:31) ದೇವರಾತ್ಮವನ್ನು ಪಡೆದುಕೊಂಡು ಬೈಬಲಿನಲ್ಲಿರುವ ಅದರ ಮಾರ್ಗದರ್ಶನವನ್ನು ಅನುಸರಿಸುವಲ್ಲಿ ನಾವು ಖಂಡಿತ ಸಂತೃಪ್ತಿ, ಶಾಂತಿ ಮತ್ತು ಸಂತೋಷವನ್ನು ಕಂಡುಕೊಳ್ಳುವೆವು. ಬಲುಬೇಗನೆ ಬರಲಿರುವ ನೂತನ ಲೋಕದಲ್ಲಿ ನಿತ್ಯಜೀವ ಪಡೆಯುವ ಆಶ್ವಾಸನೆಯೂ ನಮಗಿರುವುದು.

[ಪಾದಟಿಪ್ಪಣಿ]

^ ಪ್ಯಾರ. 18 ಹೆಚ್ಚಿನ ಮಾಹಿತಿಗಾಗಿ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ ಪುಸ್ತಕದ ಪುಟ 169-173 ನೋಡಿ.

ನಿಮಗೆ ನೆನಪಿದೆಯೇ?

• ಲೋಕದ ಮನೋಭಾವ ತುಂಬ ವ್ಯಾಪಕವಾಗಿದೆಯೇಕೆ?

• ನಾವು ಯಾವ ನಾಲ್ಕು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು?

• ದೇವರಾತ್ಮವನ್ನು ಪಡೆದುಕೊಳ್ಳುವುದರ ಕುರಿತು ನಾವು ಯೇಸುವಿನಿಂದ ಕಲಿಯಬಲ್ಲ ಮೂರು ವಿಷಯಗಳಾವುವು?

[ಅಧ್ಯಯನ ಪ್ರಶ್ನೆಗಳು]

[ಪುಟ 8ರಲ್ಲಿರುವ ಚಿತ್ರ]

ಕೆಲವು ದೇವದೂತರು ದೆವ್ವಗಳಾದದ್ದು ಹೇಗೆ?

[ಪುಟ 10ರಲ್ಲಿರುವ ಚಿತ್ರ]

ಸೈತಾನನು ಜನರನ್ನು ತನ್ನ ನಿಯಂತ್ರಣದಲ್ಲಿಡಲು ಲೋಕದ ಮನೋಭಾವವನ್ನು ಬಳಸುತ್ತಾನೆ, ಆದರೆ ನಾವದರ ತೆಕ್ಕೆಯಿಂದ ಹೊರಬರಸಾಧ್ಯ