ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

“ಯೆಹೋವನು ತನ್ನ ಭಕ್ತರ ಮರಣವನ್ನು ಅಲ್ಪವೆಂದು ಎಣಿಸುವುದಿಲ್ಲ” ಎಂಬ ವಚನ ಏನನ್ನು ಸೂಚಿಸುತ್ತದೆ?

▪ “ಯೆಹೋವನು ತನ್ನ ಭಕ್ತರ ಮರಣವನ್ನು ಅಲ್ಪವೆಂದು ಎಣಿಸುವದಿಲ್ಲ” ಎಂದು ಕೀರ್ತನೆಗಾರನು ಹಾಡಿದನು. (ಕೀರ್ತ. 116:15) ಯೆಹೋವನಿಗೆ ಪ್ರತಿಯೊಬ್ಬ ಸತ್ಯಾರಾಧಕನ ಜೀವ ಅಮೂಲ್ಯವಾಗಿದೆ ಎಂದು ಈ ವಚನ ತೋರಿಸುತ್ತದೆ. ಆದರೆ ಈ ವಚನ ಬರೀ ಒಬ್ಬ ಭಕ್ತನ ಮರಣದ ಕುರಿತು ಮಾತ್ರ ಮಾತಾಡುತ್ತಿಲ್ಲ ಎನ್ನುವುದನ್ನು ನಾವು ಗಮನಿಸಬೇಕು.

ಶವಸಂಸ್ಕಾರ ಭಾಷಣ ಕೊಡುವಾಗ ಕೀರ್ತನೆ 116:15ನ್ನು ಮೃತ ವ್ಯಕ್ತಿಗೆ ಅನ್ವಯಿಸಿ ಹೇಳುವುದು ತಕ್ಕದ್ದಲ್ಲ. ಆ ಕ್ರೈಸ್ತನು ಯೆಹೋವ ದೇವರಿಗೆ ನಿಷ್ಠಾವಂತ ಸೇವಕನಾಗಿ ಸಾವನ್ನಪ್ಪಿದ್ದರೂ ಸರಿಯೇ. ಏಕೆಂದರೆ ಕೀರ್ತನೆಗಾರನ ಆ ಮಾತುಗಳು ವಿಶಾಲಾರ್ಥವನ್ನು ಹೊಂದಿವೆ. ಯೆಹೋವ ದೇವರಿಗೆ ತನ್ನ ನಿಷ್ಠಾವಂತ ಆರಾಧಕರ ಇಡೀ ಸಮೂಹ ಅಮೂಲ್ಯವಾಗಿದೆ, ತನ್ನ ಭಕ್ತರ ಇಡೀ ಸಮೂಹ ಮರಣಕ್ಕೀಡಾಗಿ ನಾಶವಾಗುವುದನ್ನು ಆತನು ಅನುಮತಿಸುವುದಿಲ್ಲ ಎಂದು ಆ ಮಾತುಗಳು ಸೂಚಿಸುತ್ತವೆ.—ಕೀರ್ತನೆ 72:14; 116:9 ನೋಡಿ.

ಯೆಹೋವನು ತನ್ನ ನಿಷ್ಠಾವಂತ ಆರಾಧಕರೆಲ್ಲರೂ ನಿರ್ನಾಮವಾಗುವಂತೆ ಬಿಡುವುದಿಲ್ಲ ಎಂದು ಕೀರ್ತನೆ 116:15 ನಮಗೆ ಭರವಸೆ ಕೊಡುತ್ತದೆ. ನಮ್ಮ ಆಧುನಿಕ ದಿನದ ಇತಿಹಾಸ ಇದಕ್ಕೆ ನೈಜ ಸಾಕ್ಷಿ. ಅನೇಕಾನೇಕ ಸತ್ಯಾರಾಧಕರು ತೀವ್ರ ಹಿಂಸೆ ಪರೀಕ್ಷೆಗಳನ್ನು ತಾಳಿಕೊಳ್ಳುವಂತೆ ಯೆಹೋವನು ಅನುಮತಿಸಿದರೂ ಅವರು ನಿರ್ನಾಮವಾಗುವಂತೆ ಬಿಡಲಿಲ್ಲ.

ಯೆಹೋವನಲ್ಲಿ ಅಪರಿಮಿತ ಶಕ್ತಿ ಇದೆ. ಆತನು ಉದ್ದೇಶಿಸಿದ ಕಾರ್ಯ ಯಾವತ್ತೂ ವಿಫಲವಾಗುವುದಿಲ್ಲ. ಹಾಗಾಗಿ ತನ್ನ ಭಕ್ತರ ಗುಂಪನ್ನು ಸಂಪೂರ್ಣವಾಗಿ ನಾಶವಾಗಲು ಅವನೆಂದೂ ಬಿಡನು. ಒಂದು ವೇಳೆ ಬಿಡುವಲ್ಲಿ ವಿರೋಧಿಗಳು ಆತನಿಗಿಂತ ಹೆಚ್ಚು ಬಲಿಷ್ಠರೆಂದಾಗುವುದು. ಅದು ಅಸಂಭವನೀಯ ಸಂಗತಿಯಷ್ಟೆ! ಮಾತ್ರವಲ್ಲ ನೀತಿವಂತರು ಭೂಮಿಯಲ್ಲಿ ತುಂಬಿಕೊಂಡು ವಾಸಿಸುವ ಯೆಹೋವನ ಉದ್ದೇಶವೂ ನೆರವೇರದೇ ಹೋಗುವುದು. ಅದೂ ಅಸಾಧ್ಯವಷ್ಟೆ! (ಯೆಶಾ. 45:18; 55:10, 11) ಅಷ್ಟೇಕೆ, ಭೂಮಿ ಮೇಲೆ ಸತ್ಯಾರಾಧಕರೇ ಇಲ್ಲದಿರುವಲ್ಲಿ ಆಧ್ಯಾತ್ಮಿಕ ದೇವಾಲಯದ ಭೂಅಂಗಣದಲ್ಲಿ ಯೆಹೋವನಿಗೆ ಪವಿತ್ರ ಸೇವೆ ಸಲ್ಲಿಸಲು ಯಾರೂ ಇರರು. “ನೂತನ ಭೂಮಿಯ” ಅಸ್ತಿವಾರಕ್ಕಾಗಿಯೂ ಪ್ರಪಂಚದಲ್ಲಿ ನೀತಿವಂತ ಜನರು ಉಳಿದಿರುವುದಿಲ್ಲ. (ಪ್ರಕ. 21:1) ಭೂಮಿಯಲ್ಲಿ ಪ್ರಜೆಗಳೇ ಇಲ್ಲದಿರುವಲ್ಲಿ ಕ್ರಿಸ್ತನ ಸಾವಿರ ವರ್ಷದಾಳ್ವಿಕೆ ಸಹ ಇರುವುದಿಲ್ಲ.—ಪ್ರಕ. 20:4, 5.

ಭೂಮಿಯ ಮೇಲಿರುವ ತನ್ನ ಜನರನ್ನು ವೈರಿಗಳು ಸಂಪೂರ್ಣವಾಗಿ ನಾಶಮಾಡಲು ಯೆಹೋವನು ಬಿಡುವುದಾದರೆ ಆತನ ಸ್ಥಾನ ಮತ್ತು ಕೀರ್ತಿ ಸಂದೇಹಕ್ಕೊಳಗಾಗುವುದು. ವಿಶ್ವ ಪರಮಾಧಿಕಾರಿಯಾಗಿ ಆತನಿಗಿರುವ ಸ್ಥಾನಕ್ಕೆ ಕಳಂಕವುಂಟಾಗುವುದು. ಆದ್ದರಿಂದ ತನ್ನ ಗೌರವ ಮತ್ತು ಪವಿತ್ರ ಹೆಸರಿನ ಘನತೆಯ ನಿಮಿತ್ತ ತನ್ನ ನಿಷ್ಠಾವಂತ ಭಕ್ತರು ಇಡೀ ಸಮೂಹವಾಗಿ ಮರಣಕ್ಕೀಡಾಗಲು ಆತನು ಅನುಮತಿಸುವುದಿಲ್ಲ. ಗಮನಿಸಬೇಕಾದ ಮತ್ತೊಂದು ವಿಷಯವೂ ಇದೆ. ದೇವರು “ನಡಿಸುವದೆಲ್ಲ ನ್ಯಾಯ” ಆಗಿರುವುದರಿಂದ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವ ತನ್ನ ಸೇವಕರನ್ನು ಸಮೂಹವಾಗಿ ಕಾಪಾಡೇ ಕಾಪಾಡುವನು. (ಧರ್ಮೋ. 32:4; ಆದಿ. 18:25) ವೈರಿಗಳು ತನ್ನ ಸೇವಕರನ್ನು ಸಂಪೂರ್ಣವಾಗಿ ಅಳಿಸಿ ಹಾಕುವಂತೆ ಆತನು ಬಿಡುವಲ್ಲಿ ಆತನ ವಾಕ್ಯವಾದ ಬೈಬಲೇ ಸುಳ್ಳಾಗುವುದು. ಏಕೆಂದರೆ, “ಯೆಹೋವನು ತನ್ನ ಮಹೋನ್ನತ ನಾಮದ ನಿಮಿತ್ತವಾಗಿ ನಿಮ್ಮನ್ನು ಕೈಬಿಡುವದೇ ಇಲ್ಲ” ಎಂದು ಅದು ನಮಗೆ ಆಶ್ವಾಸನೆ ಕೊಟ್ಟಿದೆ. (1 ಸಮು. 12:22) “ಯೆಹೋವನು ತನ್ನ ಜನರನ್ನು ಬೇಡವೆಂದು ತಳ್ಳಿಬಿಡುವದಿಲ್ಲ; ತನ್ನ ಸ್ವಾಸ್ತ್ಯವನ್ನು ಕೈಬಿಡುವದಿಲ್ಲ” ಎಂಬುದು ಸರ್ವಕಾಲಿಕ ಸತ್ಯ.—ಕೀರ್ತ. 94:14.

ಯೆಹೋವನ ಜನರು ಭೂಮಿಯಿಂದ ಅಳಿದು ಹೋಗುವುದೇ ಇಲ್ಲ ಎಂದು ತಿಳಿಯುವುದು ಬಹಳ ಸಾಂತ್ವನ ಕೊಡುತ್ತದೆ. ಆದ್ದರಿಂದ ಯೆಹೋವನಿಗೆ ಸದಾ ನಿಷ್ಠೆ ತೋರಿಸೋಣ. ಆತನ ಈ ವಾಗ್ದಾನದಲ್ಲಿ ನಂಬಿಕೆ ಇಡೋಣ, “ನಿನ್ನನ್ನು ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸದು; ನ್ಯಾಯವಿಚಾರಣೆಯಲ್ಲಿ ನಿನಗೆ ವಿರುದ್ಧವಾಗಿ ಏಳುವ ಪ್ರತಿಯೊಂದು ನಾಲಿಗೆಯನ್ನು ದೋಷಿಯೆಂದು ನೀನು ಖಂಡಿಸುವಿ. ಈ ಸ್ಥಿತಿಯೇ ಯೆಹೋವನ ಸೇವಕರ ಸ್ವಾಸ್ತ್ಯವೂ ನಾನು ದಯಪಾಲಿಸುವ ಸದ್ಧರ್ಮಫಲವೂ ಆಗಿದೆ.”—ಯೆಶಾ. 54:17.

[ಪುಟ 22ರಲ್ಲಿರುವ ಸಂಕ್ಷಿಪ್ತ ವಿವರಣೆ]

ತನ್ನ ಜನರು ಅಳಿದು ಹೋಗುವಂತೆ ಯೆಹೋವನೆಂದೂ ಬಿಡನು