ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಧೈರ್ಯದಿಂದಿರು ಯೆಹೋವನು ನಿನ್ನ ಸಂಗಡ ಇದ್ದಾನೆ

ಧೈರ್ಯದಿಂದಿರು ಯೆಹೋವನು ನಿನ್ನ ಸಂಗಡ ಇದ್ದಾನೆ

ಧೈರ್ಯದಿಂದಿರು ಯೆಹೋವನು ನಿನ್ನ ಸಂಗಡ ಇದ್ದಾನೆ

‘ಸ್ಥಿರಚಿತ್ತನಾಗಿರು, ಧೈರ್ಯ ದಿಂದಿರು. ನಿನ್ನ ದೇವರಾದ ಯೆಹೋವನು ನಿನ್ನ ಸಂಗಡ ಇದ್ದಾನೆ.’—ಯೆಹೋ. 1:9.

ನಿಮ್ಮ ಉತ್ತರವೇನು?

ಸದಾ ಧೈರ್ಯದಿಂದಿರಲು ಮತ್ತು ನಂಬಿಕೆ ಬಲಪಡಿಸಿಕೊಳ್ಳಲು ಯೆಹೋಶುವನು ಏನು ಮಾಡಬೇಕಿತ್ತು?

ಧೈರ್ಯ ತೋರಿಸಿದವರಲ್ಲಿ ನಿಮ್ಮ ಮನಮುಟ್ಟಿದ ಉದಾಹರಣೆ ಯಾವುದು?

ನಂಬಿಕೆ, ಧೈರ್ಯ ತೋರಿಸಿದವರಲ್ಲಿ ಯಾರ ಮಾದರಿ ಸುವಾರ್ತೆ ಸಾರಲು ನಿಮಗೆ ಸಹಾಯಮಾಡುವುದು?

1, 2. (1) ಕಷ್ಟಗಳನ್ನು ತಾಳಿಕೊಳ್ಳಲು ಯಾವ ಗುಣಗಳು ನಮ್ಮಲ್ಲಿರಬೇಕು? (2) ನಂಬಿಕೆಯಿರುವುದರ ಅರ್ಥವೇನು? ಉದಾಹರಣೆ ಕೊಡಿ.

ಯೆಹೋವನ ಸೇವೆ ನಮಗೆ ಮಹದಾನಂದ ತರುತ್ತದೆ! ಹಾಗಿದ್ದರೂ ಸಾಮಾನ್ಯವಾಗಿ ಎಲ್ಲರಿಗೆ ಬರುವ ಕಷ್ಟಸಮಸ್ಯೆಗಳಿಂದ ನಾವು ಮುಕ್ತರಲ್ಲ. ಜೊತೆಗೆ ‘ನೀತಿಯ ನಿಮಿತ್ತ ಸಹ ಕಷ್ಟವನ್ನು ಅನುಭವಿಸಬೇಕಾಗುತ್ತದೆ.’ (1 ಪೇತ್ರ 3:14; 5:8, 9; 1 ಕೊರಿಂ. 10:13) ಇದೆಲ್ಲವನ್ನು ತಾಳಿಕೊಳ್ಳಬೇಕಾದರೆ ನಮಗೆ ನಂಬಿಕೆ, ಧೈರ್ಯ ಅತ್ಯಗತ್ಯ.

2 ನಂಬಿಕೆ ಅಂದರೇನು? “ನಂಬಿಕೆಯು ನಿರೀಕ್ಷಿಸುವ ವಿಷಯಗಳ ನಿಶ್ಚಿತ ಭರವಸೆಯೂ ಕಣ್ಣಿಗೆ ಕಾಣದಿರುವ ನಿಜತ್ವಗಳ ಪ್ರತ್ಯಕ್ಷ ನಿದರ್ಶನವೂ ಆಗಿದೆ” ಎಂದು ಪೌಲ ವಿವರಿಸಿದನು. (ಇಬ್ರಿ. 11:1) ಈ ವಚನ ಇನ್ನೊಂದು ಬೈಬಲ್‌ ಭಾಷಾಂತರದಲ್ಲಿ ಹೀಗಿದೆ: “ನಂಬಿಕೆಯು ನಾವು ನಿರೀಕ್ಷಿಸುವ ವಿಷಯಗಳ ಹಕ್ಕುಪತ್ರವಾಗಿದೆ. ನಾವು ನೋಡದಿರುವ ವಿಷಯಗಳ ಕುರಿತು ನಿಶ್ಚಯದಿಂದ ಇರುವುದೇ ನಂಬಿಕೆಯಾಗಿದೆ.” (ದ ಸಿಂಪಲ್‌ ಇಂಗ್ಲಿಷ್‌ ಬೈಬಲ್‌) ಆಸ್ತಿಯೊಂದರ ಹಕ್ಕುಪತ್ರ ನಮ್ಮಲ್ಲಿದ್ದರೆ ಆ ಆಸ್ತಿ ನಮ್ಮದೇ ಎನ್ನುವ ಭರವಸೆ ನಮಗಿರುತ್ತದೆ. ಅಂತೆಯೇ ದೇವರು ಕೊಟ್ಟ ಮಾತನ್ನು ಯಾವಾಗಲೂ ಪೂರೈಸುತ್ತಾನೆಂಬ ನಂಬಿಕೆ ನಮಗಿದ್ದರೆ ಅದು ನಮ್ಮ ಹತ್ತಿರ ಒಂದು ಹಕ್ಕುಪತ್ರವಿದ್ದಂತೆ. ಈ ನಂಬಿಕೆ ಭವಿಷ್ಯತ್ತಿನ ಕುರಿತು ಬೈಬಲಿನಲ್ಲಿ ಹೇಳಲಾಗಿರುವ ವಾಗ್ದಾನಗಳು ಖಂಡಿತ ನೆರವೇರುತ್ತವೆಂಬ ಖಾತ್ರಿಯನ್ನು ನಮಗೆ ಕೊಡುತ್ತದೆ. ನಾವಿಂದು ನೋಡದಿರುವ ವಿಷಯಗಳೂ ನಿಜವಾಗಿ ಸಂಭವಿಸುವವು ಎಂಬ ನಿಶ್ಚಯ ನಮಗಿರುತ್ತದೆ.

3, 4. (1) ಧೈರ್ಯ ಎಂದರೇನು? (2) ನಂಬಿಕೆ ಮತ್ತು ಧೈರ್ಯವನ್ನು ಹೆಚ್ಚಿಸುವ ಒಂದು ವಿಧ ಯಾವುದು?

3 ಒಂದು ಶಬ್ದಕೋಶಕ್ಕನುಸಾರ ಧೈರ್ಯವೆಂದರೆ, “ಅಡೆತಡೆಗಳು ಎದುರಾದರೂ ಅಪಾಯದ ಸನ್ನಿವೇಶದಲ್ಲಿದ್ದರೂ ಹೆದರದೆ ಮಾತಾಡಲು ಮತ್ತು ಕ್ರಿಯೆಗೈಯಲು ನಮ್ಮಲ್ಲಿರುವ ಆಧ್ಯಾತ್ಮಿಕ, ಭಾವನಾತ್ಮಕ, ನೈತಿಕ ಸ್ಥೈರ್ಯವಾಗಿದೆ.” (ದ ನ್ಯೂ ಇಂಟಪ್ರೆಟರ್ಸ್‌ ಡಿಕ್ಷನರಿ ಆಫ್‌ ದ ಬೈಬಲ್‌) ನಮ್ಮಲ್ಲಿ ಧೈರ್ಯವಿದ್ದರೆ ನಾವು ದೃಢರು, ನಿರ್ಭಯರು ಆಗಿರುತ್ತೇವೆ. ಕಷ್ಟ ಅನುಭವಿಸಬೇಕಾದರೂ ನಂಬಿರುವ ವಿಷಯಗಳನ್ನು ಬಿಟ್ಟುಕೊಡುವುದಿಲ್ಲ.—ಮಾರ್ಕ 6:49, 50; 2 ತಿಮೊ. 1:7.

4 ನಂಬಿಕೆ ಮತ್ತು ಧೈರ್ಯ—ನಮ್ಮಲ್ಲಿರಬೇಕಾದ ಗುಣಗಳಿವು. ಒಂದುವೇಳೆ ನಮ್ಮಲ್ಲಿ ನಂಬಿಕೆಯ ಕೊರತೆಯಿದೆ, ಧೈರ್ಯ ಕಡಿಮೆಯಿದೆ ಎಂದು ಅನಿಸುವಲ್ಲಿ ಏನು ಮಾಡೋಣ? ಈ ಗುಣಗಳನ್ನು ತೋರಿಸಿದ ಸಾವಿರಾರು ಜನರ ಉದಾಹರಣೆಗಳು ಬೈಬಲಿನಲ್ಲಿವೆ. ಅವರಲ್ಲಿ ಕೆಲವರ ಉದಾಹರಣೆಗಳನ್ನು ನಾವು ಅವಲೋಕಿಸೋಣ. ನಮ್ಮ ನಂಬಿಕೆಯನ್ನು ಬಲಗೊಳಿಸುವ, ನಮ್ಮಲ್ಲಿ ಧೈರ್ಯ ತುಂಬುವ ಒಂದು ವಿಧ ಇದಾಗಿದೆ.

ಯೆಹೋವನು ಯೆಹೋಶುವನ ಸಂಗಡ ಇದ್ದನು

5. ಯೆಹೋಶುವನು ತನ್ನ ನೇಮಕವನ್ನು ಯಶಸ್ವಿಯಾಗಿ ಪೂರೈಸಲು ಅವನಲ್ಲಿ ಯಾವ ಗುಣಗಳು ಇರಬೇಕಿತ್ತು?

5 ಕಾಲಘಟ್ಟದಲ್ಲಿ ನಾವು ಸುಮಾರು 3,500 ವರ್ಷ ಹಿಂದಕ್ಕೆ ಹೋಗೋಣ. ಅದು ಇಸ್ರಾಯೇಲ್ಯರ ಸಮಯ. ಈಜಿಪ್ಟಿನ ದಾಸತ್ವದಿಂದ ಅವರನ್ನು ಯೆಹೋವನು ತನ್ನ ಬಲಾಢ್ಯ ಹಸ್ತದಿಂದ ಬಿಡುಗಡೆಮಾಡಿ 40 ವರ್ಷಗಳು ಕಳೆದಿವೆ. ಇಷ್ಟರ ವರೆಗೂ ಮೋಶೆ ಅವರ ನಾಯಕನಾಗಿದ್ದನು. 120 ವರ್ಷ ಪ್ರಾಯದ ಮೋಶೆ ವಾಗ್ದತ್ತ ದೇಶವನ್ನು ದೂರದಿಂದಲೇ ನೋಡಿ ನೆಬೋ ಪರ್ವತದ ಮೇಲೆ ಕೊನೆಯುಸಿರೆಳೆಯುತ್ತಾನೆ. “ಜ್ಞಾನವರಸಂಪನ್ನನಾದ” ಯೆಹೋಶುವನು ಈಗ ನಾಯಕನಾಗುತ್ತಾನೆ. (ಧರ್ಮೋ. 34:1-9) ಇಸ್ರಾಯೇಲ್ಯರು ಇನ್ನೇನು ಕಾನಾನ್‌ ದೇಶವನ್ನು ವಶಪಡಿಸಿಕೊಳ್ಳಬೇಕು. ನಾಯಕನಾಗಿ ತನ್ನ ನೇಮಕವನ್ನು ಯೆಹೋಶುವನು ಉತ್ತಮ ರೀತಿಯಲ್ಲಿ ಪೂರೈಸುವನೇ? ಹಾಗೆ ಮಾಡಲು ಅವನಿಗೆ ದೈವಿಕ ವಿವೇಕ ಬೇಕು. ಮಾತ್ರವಲ್ಲ, ಯೆಹೋವನಲ್ಲಿ ನಂಬಿಕೆಯಿಟ್ಟು ಶೂರನಾಗಿ ಧೈರ್ಯದಿಂದಿರಬೇಕು.—ಧರ್ಮೋ. 31:22, 23.

6. (1) ಯೆಹೋಶುವ 23:6ಕ್ಕನುಸಾರ ಏನು ಮಾಡಲು ನಮಗೆ ಧೈರ್ಯ ಬೇಕು? (2) ಅಪೊಸ್ತಲರ ಕಾರ್ಯಗಳು 4:18-20 ಮತ್ತು 5:29ರಿಂದ ನಾವೇನು ಕಲಿಯಬಹುದು?

6 ಕಾನಾನ್‌ ದೇಶವನ್ನು ವಶಪಡಿಸಿಕೊಳ್ಳುವ ಸಮಯದಾದ್ಯಂತ ಯೆಹೋಶುವನು ವಿವೇಕ, ಧೈರ್ಯ, ನಂಬಿಕೆ ತೋರಿಸಿದನು. ಇದು ಇಸ್ರಾಯೇಲ್ಯರನ್ನು ತುಂಬ ಪ್ರಭಾವಿಸಿದ್ದಿರಬೇಕು. ಇಸ್ರಾಯೇಲ್ಯರಿಗೆ ಯುದ್ಧದಲ್ಲಿ ಶೌರ್ಯ ತೋರಿಸಲು ಮಾತ್ರವಲ್ಲ ಯೆಹೋಶುವನು ಹೇಳಿದಂತೆ ನಡೆಯಲು ಸಹ ಧೈರ್ಯ ಬೇಕಿತ್ತು. ಅದನ್ನೇ ಯೆಹೋಶುವನು ತಾನು ಸಾಯುವ ಮುಂಚೆ ಅವರಿಗೆ ಹೇಳಿದನು: “ಮೋಶೆಯ ಧರ್ಮಶಾಸ್ತ್ರವಿಧಿಗಳನ್ನೆಲ್ಲಾ ಸ್ಥಿರಚಿತ್ತದಿಂದ [ಬಹು ಧೈರ್ಯದಿಂದ, NW] ಕೈಕೊಳ್ಳಿರಿ; ಎಡಕ್ಕಾದರೂ ಬಲಕ್ಕಾದರೂ ಓರೆಯಾಗಬೇಡಿರಿ.” (ಯೆಹೋ. 23:6) ಇಸ್ರಾಯೇಲ್ಯರಂತೆ ನಮಗೂ ಎಲ್ಲ ಸಮಯದಲ್ಲಿ ದೇವರಿಗೆ ವಿಧೇಯರಾಗಿ ನಡೆಯಲು ಧೈರ್ಯ ಬೇಕು. ಅದರಲ್ಲೂ ದೇವರ ಚಿತ್ತಕ್ಕೆ ವಿರುದ್ಧವಾದುದನ್ನು ಮಾಡಲು ಮನುಷ್ಯರು ಹೇಳುವಾಗ. (ಅಪೊಸ್ತಲರ ಕಾರ್ಯಗಳು 4:18-20; 5:29 ಓದಿ.) ನಾವು ಪ್ರಾರ್ಥಿಸುತ್ತಾ ಯೆಹೋವನ ಮೇಲೆ ಆತುಕೊಳ್ಳುವುದಾದರೆ ಧೈರ್ಯದಿಂದಿರಲು ಆತನೇ ಸಹಾಯಮಾಡುವನು.

ನಾವು ಸಫಲರಾಗುವುದು ಹೇಗೆ?

7. ಧೈರ್ಯದಿಂದಿರಲು ಮತ್ತು ಸಫಲನಾಗಲು ಯೆಹೋಶುವ ಏನು ಮಾಡಬೇಕಿತ್ತು?

7 ದೇವರ ಚಿತ್ತಕ್ಕನುಸಾರ ನಡೆಯಲು ಬೇಕಾದ ಧೈರ್ಯವನ್ನು ಪಡೆದುಕೊಳ್ಳಲಿಕ್ಕಾಗಿ ನಾವು ಬೈಬಲ್‌ ಅಧ್ಯಯನ ಮಾಡಿ ಅದನ್ನು ಅನ್ವಯಿಸಬೇಕು. ಅದನ್ನೇ ಮಾಡುವಂತೆ ಯೆಹೋಶುವನಿಗೆ ಯೆಹೋವನು ಹೇಳಿದನು. “ನನ್ನ ಸೇವಕನಾದ ಮೋಶೆ ನಿನಗೆ ಬೋಧಿಸಿದ ಧರ್ಮೋಪದೇಶವನ್ನೆಲ್ಲಾ ಕೈಕೊಂಡು ನಡೆಯುವದರಲ್ಲಿ ಸ್ಥಿರಚಿತ್ತನಾಗಿರು, ಪೂರ್ಣಧೈರ್ಯದಿಂದಿರು. . . . ಈ ಧರ್ಮಶಾಸ್ತ್ರವು ಯಾವಾಗಲೂ ನಿನ್ನ ಬಾಯಲ್ಲಿರಲಿ; ಹಗಲಿರುಳು ಅದನ್ನು ಧ್ಯಾನಿಸುತ್ತಾ ಅದರಲ್ಲಿ ಬರೆದಿರುವದನ್ನೆಲ್ಲಾ ಕೈಕೊಂಡು ನಡಿ. ಆಗ ನಿನ್ನ ಮಾರ್ಗದಲ್ಲೆಲ್ಲಾ ಸಫಲನಾಗುವಿ, ಕೃತಾರ್ಥನಾಗುವಿ.” (ಯೆಹೋ. 1:7, 8) ಈ ಸಲಹೆಯನ್ನು ಪಾಲಿಸಿದ ಕಾರಣ ಯೆಹೋಶುವ ತನ್ನ ‘ಮಾರ್ಗಗಳಲ್ಲಿ ಸಫಲನಾದನು.’ ನಾವು ಸಹ ಆ ಸಲಹೆ ಪಾಲಿಸುವುದಾದರೆ ದೇವರ ಸೇವೆಯಲ್ಲಿ ಸಾಫಲ್ಯ ಪಡೆಯುವೆವು, ಧೈರ್ಯಶಾಲಿಗಳಾಗುವೆವು.

8. (1) 2013ರ ವರ್ಷವಚನ ಯಾವುದು? (2) ಆ ಮಾತುಗಳು ನಿಮಗೆ ಹೇಗೆ ಪ್ರಯೋಜನ ತರುವವು?

8 ಯೆಹೋವನು ತದನಂತರ ಹೇಳಿದ ಮಾತುಗಳು ಯೆಹೋಶುವನನ್ನು ತುಂಬ ಬಲಪಡಿಸಿರಬೇಕು. ಆತನಂದದ್ದು: “ಸ್ಥಿರಚಿತ್ತನಾಗಿರು, ಧೈರ್ಯದಿಂದಿರು. ಅಂಜಬೇಡ, ಕಳವಳಗೊಳ್ಳಬೇಡ. ನೀನು ಹೋಗುವಲ್ಲೆಲ್ಲಾ ನಿನ್ನ ದೇವರಾದ ಯೆಹೋವನು ನಿನ್ನ ಸಂಗಡ ಇರುತ್ತಾನೆ.” (ಯೆಹೋ. 1:9) ಯೆಹೋವನು ನಮ್ಮ ಸಂಗಡ ಸಹ ಇದ್ದಾನೆ. ಆದ್ದರಿಂದ ಏನೇ ಸಂಕಷ್ಟ ಬರಲಿ ನಾವು ‘ಅಂಜಬೇಕಾಗಿಲ್ಲ, ಕಳವಳಪಡಬೇಕಾಗಿಲ್ಲ.’ ಮೇಲಿನ ವಚನದಲ್ಲಿರುವ ‘ಸ್ಥಿರಚಿತ್ತನಾಗಿರು, ಧೈರ್ಯದಿಂದಿರು. ನಿನ್ನ ದೇವರಾದ ಯೆಹೋವನು ನಿನ್ನ ಸಂಗಡ ಇದ್ದಾನೆ’ ಎಂಬ ಮಾತಂತೂ ಎಷ್ಟು ಹೃದಯಸ್ಪರ್ಶಿಯಾಗಿದೆ ಅಲ್ಲವೇ? ಯೆಹೋಶುವ 1:9⁠ರ ಈ ಮಾತುಗಳನ್ನೇ 2013ರ ವರ್ಷವಚನವಾಗಿ ಆರಿಸಿಕೊಳ್ಳಲಾಗಿದೆ. ಈ ವರ್ಷವಚನ ಮತ್ತು ನಂಬಿಕೆ, ಧೈರ್ಯ ತೋರಿಸಿದವರ ಮಾತುಗಳೂ ಕ್ರಿಯೆಗಳೂ ಮುಂಬರುವ ತಿಂಗಳುಗಳಲ್ಲಿ ಭರವಸೆಯಿಂದ ಮುಂದೆಸಾಗಲು ನಮಗೆ ಬೇಕಾದ ಬಲವನ್ನು ಕೊಡುವವು ಎಂಬುದು ಖಂಡಿತ!

ಅವರ ಧೈರ್ಯದ ನಿಲುವು

9. ರಾಹಾಬಳು ಹೇಗೆ ನಂಬಿಕೆ, ಧೈರ್ಯ ತೋರಿಸಿದಳು?

9 ಕಾನಾನ್‌ ದೇಶವನ್ನು ನೋಡಿಬರಲು ಯೆಹೋಶುವನು ಕಳುಹಿಸಿದ ಇಬ್ಬರು ಗೂಢಚಾರರಿಗೆ ರಾಹಾಬ್‌ ಎಂಬ ವೇಶ್ಯೆ ನೆರವಾದಳು. ಆಕೆ ಅವರನ್ನು ಅಡಗಿಸಿಟ್ಟು ರಕ್ಷಿಸಿದಳು. ಅವರನ್ನು ಹುಡುಕಿಕೊಂಡು ಬಂದ ಶತ್ರುಗಳ ದಾರಿತಪ್ಪಿಸಿದಳು. ಆಕೆ ಈ ರೀತಿ ತೋರಿಸಿದ ನಂಬಿಕೆ ಮತ್ತು ಧೈರ್ಯದ ಪರಿಣಾಮ? ಇಸ್ರಾಯೇಲ್ಯರು ಯೆರಿಕೋ ಪಟ್ಟಣವನ್ನು ನಾಶಮಾಡಿದಾಗ ಆಕೆ ಮತ್ತು ಆಕೆಯ ಕುಟುಂಬ ಪಾರಾಗಿ ಉಳಿಯಿತು. (ಇಬ್ರಿ. 11:30, 31; ಯಾಕೋ. 2:25) ಯೆಹೋವನ ಮೆಚ್ಚಿಕೆ ಪಡೆಯಲು ಬಯಸಿದ ಆಕೆ ತನ್ನ ಅನೈತಿಕ ಜೀವನವನ್ನೂ ಬಿಟ್ಟಳು. ಇಂದು ಸಹ ಕೆಲವರು ಯೆಹೋವನನ್ನು ಮೆಚ್ಚಿಸಲಿಕ್ಕಾಗಿ ತಮ್ಮ ಜೀವನದಲ್ಲಿ ಇಂಥದ್ದೇ ದೊಡ್ಡ ಬದಲಾವಣೆಗಳನ್ನು ಮಾಡಿಕೊಳ್ಳಲು ಧೈರ್ಯ, ನಂಬಿಕೆ, ನೈತಿಕ ಸ್ಥೈರ್ಯ ತೋರಿಸಿದ್ದಾರೆ.

10. (1) ಯಾವ ಸನ್ನಿವೇಶದಲ್ಲಿ ರೂತಳು ಸತ್ಯಾರಾಧನೆಗಾಗಿ ಧೈರ್ಯದ ನಿಲುವು ತಕ್ಕೊಂಡಳು? (2) ಇದರಿಂದ ಯಾವ ಆಶೀರ್ವಾದಗಳನ್ನು ಪಡೆದಳು?

10 ಯೆಹೋಶುವನ ಮರಣದ ನಂತರ ಸತ್ಯಾರಾಧನೆಗಾಗಿ ಧೈರ್ಯದ ನಿಲುವು ತೆಗೆದುಕೊಂಡ ಇನ್ನೊಬ್ಬ ಸ್ತ್ರೀ ಮೋವಾಬ್ಯಳಾದ ವಿಧವೆ ರೂತಳು. ಒಬ್ಬ ಇಸ್ರಾಯೇಲ್ಯನ ಮಡದಿಯಾಗಿದ್ದರಿಂದ ಆಕೆಗೆ ಯೆಹೋವನ ಕುರಿತು ಸ್ವಲ್ಪ ಮಟ್ಟಿಗೆ ಗೊತ್ತಿದ್ದಿರಬೇಕು. ವಿಧವೆಯಾಗಿದ್ದ ಆಕೆಯ ಅತ್ತೆ ನೊವೊಮಿ ಮೋವಾಬ್‌ ದೇಶವನ್ನು ಬಿಟ್ಟು ತಿರುಗಿ ಇಸ್ರಾಯೇಲಿನ ಬೇತ್ಲೆಹೇಮ್‌ ಪಟ್ಟಣಕ್ಕೆ ಹೊರಟಾಗ ರೂತಳೂ ಜೊತೆಯಲ್ಲಿದ್ದಳು. ದಾರಿಮಧ್ಯೆ ನೊವೊಮಿ ರೂತಳಿಗೆ ಆಕೆಯ ಜನರಿರುವ ದೇಶಕ್ಕೆ ವಾಪಸ್ಸು ಹೋಗುವಂತೆ ಒತ್ತಾಯಿಸಿದಳು. ಅದಕ್ಕೆ ರೂತಳು ಏನಂದಳು? “ನಿನ್ನನ್ನು ಬಿಟ್ಟು ಹಿಂದಿರುಗಬೇಕೆಂದು ನನ್ನನ್ನು ಒತ್ತಾಯಪಡಿಸಬೇಡ. . . . ನಿನ್ನ ಜನರೇ ನನ್ನ ಜನರು; ನಿನ್ನ ದೇವರೇ ನನ್ನ ದೇವರು.” (ರೂತ. 1:16) ರೂತಳು ಹೇಳಿದಂತೆಯೇ ನಡೆದಳು. ಸಮಯಾನಂತರ ನೊವೊಮಿಯ ಸಂಬಂಧಿಯಾದ ಬೋವಜನನ್ನು ಮದುವೆಯಾದ ಆಕೆ ಒಬ್ಬ ಮಗನಿಗೆ ಜನ್ಮನೀಡಿದಳು. ಹೀಗೆ ದಾವೀದ ಹಾಗೂ ಯೇಸುವಿನ ಪೂರ್ವಜೆಯಾದಳು! ನಂಬಿಕೆ, ಧೈರ್ಯ ತೋರಿಸಿದವರನ್ನು ಯೆಹೋವನು ಆಶೀರ್ವದಿಸುತ್ತಾನೆ ಎಂಬುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕೆ?—ರೂತ. 2:12; 4:17-22; ಮತ್ತಾ. 1:1-6.

ಜೀವವನ್ನೇ ಅಪಾಯಕ್ಕೊಡ್ಡಿದವರು

11. (1) ಯೆಹೋಯಾದಾವ ಮತ್ತು ಯೆಹೋಷೆಬ ಹೇಗೆ ಧೈರ್ಯ ತೋರಿಸಿದರು? (2) ಇದರಿಂದ ಯಾವ ಪ್ರಯೋಜನವಾಯಿತು?

11 ಸ್ವಂತ ವಿಷಯಗಳಿಗಿಂತ ದೇವರ ಸೇವೆಗೆ ಹಾಗೂ ಜೊತೆ ವಿಶ್ವಾಸಿಗಳ ಒಳಿತಿಗೆ ಆದ್ಯತೆ ಕೊಡುವವರನ್ನು ಯೆಹೋವನು ಬೆಂಬಲಿಸುವುದನ್ನು ನೋಡುವಾಗ ನಮ್ಮಲ್ಲೂ ಧೈರ್ಯ, ನಂಬಿಕೆ ಹೆಚ್ಚಾಗುತ್ತದೆ. ಮಹಾ ಯಾಜಕ ಯೆಹೋಯಾದಾವ ಮತ್ತು ಅವನ ಪತ್ನಿ ಯೆಹೋಷೆಬಳ ಉದಾಹರಣೆ ನಮಗಿದೆ. ರಾಜ ಅಹಜ್ಯನು ಮರಣಪಟ್ಟ ನಂತರ ಅವನ ತಾಯಿ ಅತಲ್ಯಳು ಅಹಜ್ಯನ ಮಕ್ಕಳನ್ನು ಕೊಂದು ಪಟ್ಟವೇರಿದಳು. ಆದರೆ ಮಹಾ ಯಾಜಕ ಯೆಹೋಯಾದಾವನು ಮತ್ತು ಯೆಹೋಷೆಬ ತಮ್ಮ ಜೀವವನ್ನೇ ಅಪಾಯಕ್ಕೊಡ್ಡಿ ಅಹಜ್ಯನ ಮಗನಾದ ಯೆಹೋವಾಷನನ್ನು ಕಾಪಾಡಿ ಆರು ವರ್ಷಗಳ ವರೆಗೆ ಅಡಗಿಸಿಟ್ಟರು. ಏಳನೇ ವರ್ಷದಲ್ಲಿ ಮಹಾ ಯಾಜಕನು ಅವನನ್ನು ರಾಜನಾಗಿ ಘೋಷಿಸಿ ಅತಲ್ಯಳನ್ನು ಕೊಲ್ಲಿಸಿದನು. (2 ಅರ. 11:1-16) ಅನಂತರ ಯೆಹೋಯಾದಾವನು ದೇವಾಲಯದ ಜೀರ್ಣೋದ್ಧಾರ ಕಾರ್ಯದಲ್ಲಿಯೂ ರಾಜನೊಂದಿಗೆ ಕೈಜೋಡಿಸಿದನು. “ಇಸ್ರಾಯೇಲ್ಯರ ವಿಷಯದಲ್ಲಿಯೂ ದೇವರ ಮತ್ತು ದೇವಾಲಯದ ವಿಷಯದಲ್ಲಿಯೂ ಸತ್ಕಾರ್ಯಮಾಡಿದ್ದರಿಂದ” 130 ವರ್ಷ ಪ್ರಾಯದಲ್ಲಿ ಮೃತಪಟ್ಟ ಯೆಹೋಯಾದಾವನನ್ನು ರಾಜಸ್ಮಶಾನದಲ್ಲಿ ಸಮಾಧಿಮಾಡಲಾಯಿತು. (2 ಪೂರ್ವ. 24:15, 16) ಯೆಹೋಯಾದಾವ ಮತ್ತು ಅವನ ಪತ್ನಿಯ ಧೀರ ಕೆಲಸದಿಂದಾಗಿ ಮೆಸ್ಸೀಯ ಬರಲಿದ್ದ ದಾವೀದನ ರಾಜವಂಶ ಸಂರಕ್ಷಿಸಲ್ಪಟ್ಟಿತು.

12. ಎಬೆದ್ಮೆಲೆಕನು ಯಾವ ಧೀರ ಕೆಲಸ ಮಾಡಿದನು?

12 ರಾಜ ಚಿದ್ಕೀಯನ ಅರಮನೆಯ ಕಂಚುಕಿಯಾದ ಎಬೆದ್ಮೆಲೆಕನು ಯೆರೆಮೀಯನನ್ನು ರಕ್ಷಿಸಲಿಕ್ಕಾಗಿ ತನ್ನ ಜೀವವನ್ನು ಅಪಾಯಕ್ಕೊಡ್ಡಿದನು. ಹೇಗೆ ಅಂತೀರಾ? ಪ್ರಜೆಗಳ ಶಾಂತಿಭಂಗ ಮಾಡುತ್ತಿದ್ದಾನೆಂದು ಯೆಹೂದದ ಪ್ರಧಾನರು ಯೆರೆಮೀಯನ ಮೇಲೆ ಸುಳ್ಳು ಆರೋಪ ಹೊರಿಸಿದ್ದರು. ಹಾಗಾಗಿ ರಾಜನು ಯೆರೆಮೀಯನನ್ನು ಪ್ರಧಾನರ ಕೈಗೊಪ್ಪಿಸಿದ್ದನು. ಅವರು ಯೆರೆಮೀಯನನ್ನು ಕೆಸರಿನ ಬಾವಿಯೊಳಗೆ ಹಾಕಿದರು. (ಯೆರೆ. 38:4-6) ಆ ಪ್ರಧಾನರು ಯೆರೆಮೀಯನನ್ನು ದ್ವೇಷಿಸುತ್ತಿದ್ದರಿಂದ ಅವನಿಗೆ ಸಹಾಯಮಾಡಲು ಹೋದರೆ ಅದು ಎಬೆದ್ಮೆಲಕನ ಜೀವಕ್ಕೂ ಕುತ್ತು ತರಲಿತ್ತು. ಆದರೂ ಅವನು ರಾಜ ಚಿದ್ಕೀಯನ ಬಳಿ ಹೋಗಿ ಯೆರೆಮೀಯನ ಪರವಾಗಿ ಮನವಿಮಾಡಿದನು. ರಾಜನು ಅದಕ್ಕೊಪ್ಪಿ ಎಬೆದ್ಮೆಲಕನಿಗೆ ನೆರವಾಗುವಂತೆ 30 ಜನರನ್ನು ಕಳುಹಿಸಿದನು. ಎಬೆದ್ಮೆಲಕನು ಅವರೊಂದಿಗೆ ಹೋಗಿ ಪ್ರವಾದಿ ಯೆರೆಮೀಯನನ್ನು ರಕ್ಷಿಸಿದನು. ಹಾಗಾಗಿ ಬಾಬೆಲಿನವರು ಯೆರೂಸಲೇಮನ್ನು ಮುತ್ತಿಗೆಹಾಕುವಾಗ ಎಬೆದ್ಮೆಲೆಕನನ್ನು ಉಳಿಸುವೆನೆಂದು ಯೆಹೋವನು ತನ್ನ ಪ್ರವಾದಿಯ ಮೂಲಕ ಮಾತುಕೊಟ್ಟನು. (ಯೆರೆ. 39:15-18) ದೇವರ ಚಿತ್ತ ಮಾಡಲು ಧೈರ್ಯ ತೋರಿಸಿದ್ದಕ್ಕಾಗಿ ಎಂಥ ಆಶೀರ್ವಾದ ಸಿಕ್ಕಿತು!

13. (1) ಮೂವರು ಇಬ್ರಿಯರು ಹೇಗೆ ಧೈರ್ಯ ತೋರಿಸಿದರು? (2) ಆ ವೃತ್ತಾಂತದಿಂದ ನಾವೇನು ಕಲಿಯುತ್ತೇವೆ?

13 ಕ್ರಿ.ಪೂ. 7ನೇ ಶತಮಾನದಲ್ಲಿ ಮೂವರು ಇಬ್ರಿಯ ಯುವಕರು ತೋರಿಸಿದ ನಂಬಿಕೆ ಹಾಗೂ ಧೈರ್ಯಕ್ಕೆ ಯೆಹೋವನು ಪ್ರತಿಫಲ ಕೊಟ್ಟನು. ನಡೆದ ಘಟನೆ ಇದು: ರಾಜ ನೆಬೂಕದ್ನೆಚ್ಚರನು ಬಹು ಎತ್ತರವಾದ ಬಂಗಾರದ ಪ್ರತಿಮೆಯನ್ನು ಮಾಡಿಸಿದ್ದನು ಮತ್ತು ಎಲ್ಲ ಪ್ರಧಾನ ಅಧಿಕಾರಿಗಳನ್ನು ಒಟ್ಟುಸೇರಿಸಿ ಅದನ್ನು ಆರಾಧಿಸುವಂತೆ ಆಜ್ಞೆಯಿತ್ತನು. ಯಾರು ಆರಾಧಿಸುವುದಿಲ್ಲವೋ ಅವರು ಉರಿಯುವ ಆವಿಗೆಯೊಳಗೆ ಹಾಕಲ್ಪಡಲಿದ್ದರು. ಇಂಥ ಸನ್ನಿವೇಶದಲ್ಲಿ ಮೂವರು ಇಬ್ರಿಯರು ಗೌರವಭರಿತವಾಗಿ ನೆಬೂಕದ್ನೆಚ್ಚರನಿಗೆ ಹೀಗಂದರು: “ಅರಸೇ, ನಾವು ಸೇವಿಸುವ ದೇವರಿಗೆ ಚಿತ್ತವಿದ್ದರೆ ಆತನು ಧಗಧಗನೆ ಉರಿಯುವ ಆವಿಗೆಯೊಳಗಿಂದ ನಮ್ಮನ್ನು ಬಿಡಿಸಬಲ್ಲನು; ಹೇಗೂ ನಿನ್ನ ಕೈಯಿಂದ ನಮ್ಮನ್ನು ಬಿಡಿಸುವನು. ಚಿತ್ತವಿಲ್ಲದಿದ್ದರೂ ರಾಜನೇ, ಇದು ನಿನಗೆ ತಿಳಿದಿರಲಿ, ನಾವು ನಿನ್ನ ದೇವರುಗಳನ್ನು ಸೇವಿಸುವದಿಲ್ಲ, ನೀನು ನಿಲ್ಲಿಸಿದ ಬಂಗಾರದ ಪ್ರತಿಮೆಯನ್ನು ಪೂಜಿಸುವದಿಲ್ಲ.” (ದಾನಿ. 3:16-18) ಮುಂದೇನಾಯಿತು? ಈ ಮೂವರು ಇಬ್ರಿಯರನ್ನು ಧಗಧಗನೆ ಉರಿಯುವ ಬೆಂಕಿಯೊಳಗೆ ಹಾಕಲಾಯಿತು. ಆದರೆ ದೇವರು ಅವರನ್ನು ರಕ್ಷಿಸಿದನು. ಆ ಮೈನವಿರೇಳಿಸುವ ಘಟನೆ ದಾನಿಯೇಲ 3:19-30ರಲ್ಲಿದೆ. ಆ ಇಬ್ರಿಯರಿಗಾದಂತೆ ನಮ್ಮನ್ನು ಉರಿಯುವ ಬೆಂಕಿಯೊಳಗೆ ಹಾಕಲಾಗುವುದೆಂದು ಯಾರೂ ಬೆದರಿಸಲಿಕ್ಕಿಲ್ಲ. ಆದರೆ ನಂಬಿಕೆಯ ಪರೀಕ್ಷೆಗಳನ್ನು ನಾವು ಎದುರಿಸುತ್ತೇವೆ. ಅಂಥ ಸಂದರ್ಭಗಳಲ್ಲಿ ನಾವು ನಂಬಿಕೆ, ಧೈರ್ಯ ತೋರಿಸುವಲ್ಲಿ ದೇವರು ಖಂಡಿತ ನಮ್ಮನ್ನು ಆಶೀರ್ವದಿಸುವನು.

14. (1) ದಾನಿಯೇಲ 6ನೇ ಅಧ್ಯಾಯದಲ್ಲಿ ಹೇಳಿರುವಂತೆ ದಾನಿಯೇಲ ಹೇಗೆ ಧೈರ್ಯ ತೋರಿಸಿದನು? (2) ಫಲಿತಾಂಶವೇನಾಯಿತು?

14 ದಾನಿಯೇಲನು ಸಹ ನಂಬಿಕೆ, ಧೈರ್ಯ ತೋರಿಸಿದನು. ಅವನನ್ನು ದ್ವೇಷಿಸುತ್ತಿದ್ದ ವೈರಿಗಳು ರಾಜ ದಾರ್ಯಾವೆಷನ ಮನವೊಲಿಸಿ ‘ಯಾವನಾದರೂ ಮೂವತ್ತು ದಿನಗಳ ತನಕ ರಾಜನ ಹೊರತು ಬೇರೆ ಯಾವ ದೇವರಿಗಾಗಲಿ ಮನುಷ್ಯನಿಗಾಗಲಿ ವಿಜ್ಞಾಪನೆ ಮಾಡಿಕೊಂಡರೆ ಅವನು ಸಿಂಹಗಳ ಗವಿಯಲ್ಲಿ ಹಾಕಲ್ಪಡಬೇಕು’ ಎಂಬ ನಿಬಂಧನೆಯನ್ನು ವಿಧಿಸುವಂತೆ ಮಾಡಿದರು. ಈ ನಿಬಂಧನೆಗೆ ರಾಜ ರುಜುಹಾಕಿದನೆಂದು ತಿಳಿದ ತಕ್ಷಣ ದಾನಿಯೇಲನು “ತನ್ನ ಮನೆಗೆ ಹೋಗಿ ಯೆರೂಸಲೇಮಿನ ಕಡೆಗೆ ಕದವಿಲ್ಲದ ಕಿಟಕಿಗಳುಳ್ಳ ತನ್ನ ಮಹಡಿಯ ಕೋಣೆಯಲ್ಲಿ ಯಥಾಪ್ರಕಾರ ದಿನಕ್ಕೆ ಮೂರಾವರ್ತಿ ಮೊಣಕಾಲೂರಿ ತನ್ನ ದೇವರಿಗೆ ಪ್ರಾರ್ಥನೆಮಾಡಿ ಸ್ತೋತ್ರಸಲ್ಲಿಸಿದನು.” (ದಾನಿ. 6:6-10) ಈ ಧೈರ್ಯದ ನಿಲುವಿನಿಂದಾಗಿ ದಾನಿಯೇಲನನ್ನು ಸಿಂಹಗಳ ಗವಿಯಲ್ಲಿ ಹಾಕಲಾಯಿತು. ಆದರೆ ಯೆಹೋವನು ಅವನನ್ನು ರಕ್ಷಿಸಿದನು.—ದಾನಿ. 6:16-23.

15. (1) ನಂಬಿಕೆ, ಧೈರ್ಯ ತೋರಿಸುವುದರಲ್ಲಿ ಅಕ್ವಿಲ, ಪ್ರಿಸ್ಕಿಲ್ಲ ಹೇಗೆ ಮಾದರಿಯಿಟ್ಟಿದ್ದಾರೆ? (2) ಯೋಹಾನ 13:34ರಲ್ಲಿ ದಾಖಲಾಗಿರುವ ಯೇಸುವಿನ ಮಾತುಗಳ ಅರ್ಥವೇನು? (3) ಯೇಸು ಹೇಳಿದಂಥ ಪ್ರೀತಿಯನ್ನು ಇಂದು ಅನೇಕ ಕ್ರೈಸ್ತರು ಹೇಗೆ ತೋರಿಸಿದ್ದಾರೆ?

15 ಅಕ್ವಿಲ ಮತ್ತು ಪ್ರಿಸ್ಕಿಲ್ಲ ಸಹ ಧೈರ್ಯ ತೋರಿಸುವುದರಲ್ಲಿ ಮಾದರಿ. ಅವರು ನಿರ್ದಿಷ್ಟವಾಗಿ ಯಾವ ಸನ್ನಿವೇಶದಲ್ಲಿ ಧೈರ್ಯ ತೋರಿಸಿದರೆಂದು ಬೈಬಲ್‌ ಹೇಳುವುದಿಲ್ಲವಾದರೂ ‘ಪೌಲನ ಪ್ರಾಣವನ್ನು ಉಳಿಸುವುದಕ್ಕಾಗಿ ತಮ್ಮನ್ನೇ ಅಪಾಯಕ್ಕೊಡ್ಡಿದರು’ ಎಂದು ಹೇಳುತ್ತದೆ. (ಅ. ಕಾ. 18:2; ರೋಮ. 16:3, 4) ಹೀಗೆ ಅವರು ಯೇಸು ಕೊಟ್ಟ ಆಜ್ಞೆಗೆ ವಿಧೇಯರಾದರು. ಆತನಂದದ್ದು: “ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ; ಅದೇನೆಂದರೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು. ನಾನು ನಿಮ್ಮನ್ನು ಪ್ರೀತಿಸಿದಂತೆಯೇ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು.” (ಯೋಹಾ. 13:34) ಈಗಾಗಲೇ ಧರ್ಮಶಾಸ್ತ್ರದಲ್ಲಿ ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು ಎಂಬ ಆಜ್ಞೆಯಿತ್ತು. (ಯಾಜ. 19:18) ಆದರೆ ಯೇಸು ಕೊಟ್ಟದ್ದು “ಹೊಸ” ಆಜ್ಞೆಯಾಗಿತ್ತು. ಏಕೆಂದರೆ ಯೇಸುವಿನಂತೆ ಇನ್ನೊಬ್ಬರಿಗೋಸ್ಕರ ಪ್ರಾಣ ಕೊಡುವಷ್ಟರ ಮಟ್ಟಿಗೆ ಪ್ರೀತಿ ತೋರಿಸುವುದು ಇದರಲ್ಲಿ ಒಳಗೂಡಿದೆ. ಇಂದು ಸಹ ಅನೇಕ ಕ್ರೈಸ್ತರು ತಮ್ಮ ಸಹೋದರ ಸಹೋದರಿಯರನ್ನು ಹಿಂಸೆ, ಮರಣದಿಂದ ತಪ್ಪಿಸಲಿಕ್ಕಾಗಿ ಧೈರ್ಯದಿಂದ ತಮ್ಮ ಪ್ರಾಣಗಳನ್ನೇ ಅಪಾಯಕ್ಕೊಡ್ಡುವ ಮೂಲಕ ಇಂಥ ಪ್ರೀತಿ ತೋರಿಸಿದ್ದಾರೆ.1 ಯೋಹಾನ 3:16 ಓದಿ.

16, 17. (1) ಆರಂಭದ ಕ್ರೈಸ್ತರು ತಮ್ಮ ನಂಬಿಕೆಗಾಗಿ ಯಾವ ಪರೀಕ್ಷೆಯನ್ನು ಎದುರಿಸಿದರು? (2) ಇಂಥದ್ದೇ ಸಂಕಷ್ಟಗಳನ್ನು ಆಧುನಿಕ ಸಮಯದ ಕೆಲವು ಕ್ರೈಸ್ತರು ಹೇಗೆ ಅನುಭವಿಸಿದರು?

16 ಯೇಸುವಿನಂತೆ ಆರಂಭದ ಕ್ರೈಸ್ತರು ಯೆಹೋವನೊಬ್ಬನಿಗೆ ಮಾತ್ರ ಆರಾಧನೆ ಸಲ್ಲಿಸುವ ಮೂಲಕ ಧೈರ್ಯ ತೋರಿಸಿದರು. (ಮತ್ತಾ. 4:8-10) ರೋಮ್‌ ಚಕ್ರವರ್ತಿಯ ಗೌರವಾರ್ಥವಾಗಿ ಧೂಪ ಸುಡಲು ಅವರು ಸುತರಾಂ ಒಪ್ಪಲಿಲ್ಲ. (ಚಿತ್ರ ನೋಡಿ.) ಇದರ ಕುರಿತು ಡ್ಯಾನಿಯಲ್‌ ಪಿ. ಮ್ಯಾನಿಕ್ಸ್‌ ಬರೆದದ್ದೇನೆಂದರೆ, “ಸೆರೆಯಲ್ಲಿದ್ದ ಬಂಧಿತರಿಗಾಗಿ ಅಖಾಡದಲ್ಲಿ ಬೆಂಕಿ ಉರಿಯುತ್ತಿದ್ದ ಒಂದು ವೇದಿಯನ್ನು ಇಡಲಾಗುತ್ತಿತ್ತು. ಅವರು ಹೆಚ್ಚೇನು ಮಾಡಬೇಕೆಂದಿರಲಿಲ್ಲ. ಕೇವಲ ಒಂದು ಚಿಟಿಕೆ ಧೂಪವನ್ನು ತಕ್ಕೊಂಡು ಬೆಂಕಿಯ ಮೇಲೆ ಹಾಕಿದರೆ ಸಾಕಿತ್ತು. ಆಗ ಅವರಿಗೆ ಒಂದು ದೃಢೀಕರಣಪತ್ರ ಕೊಟ್ಟು ಬಿಡುಗಡೆ ಮಾಡುತ್ತಿದ್ದರು. ಮಾತ್ರವಲ್ಲ, ಧೂಪ ಸುಟ್ಟರೆ ಚಕ್ರವರ್ತಿಗೆ ಆರಾಧನೆ ಮಾಡಿದಂತಲ್ಲ, ಬದಲಾಗಿ ಚಕ್ರವರ್ತಿಯು ರೋಮ್‌ ಸಾಮ್ರಾಜ್ಯಕ್ಕೆ ದೇವರು ಎಂದು ಒಪ್ಪಿಕೊಂಡಂತೆ ಅಷ್ಟೆ ಎಂದು ಸೆರೆವಾಸಿಗಳಿಗೆ ಹೇಳಲಾಗುತ್ತಿತ್ತು. ಆದರೂ ತಮ್ಮ ನಂಬಿಕೆಯನ್ನು ತ್ಯಜಿಸಿದ ಕ್ರೈಸ್ತರು ತುಂಬ ಕಡಿಮೆ. ಬಿಡುಗಡೆ ಹೊಂದುವ ಅವಕಾಶ ಕೈಗೆಟಕುವಂತಿದ್ದರೂ ಹೆಚ್ಚಿನಂಶ ಎಲ್ಲ ಕ್ರೈಸ್ತರು ಅದನ್ನು ಕೈಬಿಟ್ಟರು.”—ದೋಸ್‌ ಅಬೌಟ್‌ ಟು ಡೈ ಪುಸ್ತಕ.

17 ಆಧುನಿಕ ಸಮಯದ ಕ್ರೈಸ್ತರು ನಾಸೀ ಸೆರೆಶಿಬಿರಗಳಲ್ಲಿದ್ದಾಗ ಇದೇ ರೀತಿ ಧೈರ್ಯ ತೋರಿದ್ದಾರೆ. ತಾವು ಇನ್ನು ಮುಂದೆ ಯೆಹೋವನನ್ನು ಆರಾಧಿಸುವುದಿಲ್ಲ ಎಂಬ ಹೇಳಿಕೆಯಿರುವ ಒಂದು ಕಾಗದಕ್ಕೆ ಅವರು ಸಹಿ ಹಾಕಿದರೆ ಸಾಕಿತ್ತು, ಸಾವಿನ ದವಡೆಯಿಂದ ತಪ್ಪಿಸಿಕೊಳ್ಳುತ್ತಿದ್ದರು. ಇಂಥ ಅವಕಾಶವನ್ನು ಅವರಿಗೆ ಅನೇಕ ಬಾರಿ ಕೊಡಲಾಯಿತಾದರೂ ಹಾಗೆ ಸಹಿ ಮಾಡಿದವರು ಕೆಲವೇ ಮಂದಿ. ರುವಾಂಡದಲ್ಲಿ ಟೂಟ್ಸೀ ಮತ್ತು ಹೂಟೂ ಕುಲಗಳ ಮಧ್ಯೆ ಹತ್ಯಾಕಾಂಡ ನಡೆದಾಗ ಟೂಟ್ಸೀ ಮತ್ತು ಹೂಟೂ ಸಾಕ್ಷಿಗಳು ತಮ್ಮ ಜೀವವನ್ನೇ ಒತ್ತೆಯಿಟ್ಟು ಒಬ್ಬರನ್ನೊಬ್ಬರು ರಕ್ಷಿಸಲು ಮುಂದಾದರು. ನಂಬಿಕೆ, ಧೈರ್ಯವಿದ್ದರೆ ಮಾತ್ರ ಹೀಗೆ ಮಾಡಲು ಸಾಧ್ಯ ಅಲ್ಲವೇ?

ಯೆಹೋವನು ನಿಮ್ಮ ಸಂಗಡ ಇದ್ದಾನೆ!

18, 19. ನಂಬಿಕೆ, ಧೈರ್ಯ ತೋರಿಸಿದ ಯಾವ ಬೈಬಲ್‌ ಉದಾಹರಣೆಗಳು ನಾವು ಸುವಾರ್ತೆ ಸಾರುವ ಕೆಲಸವನ್ನು ಪೂರೈಸಲು ಸಹಾಯಮಾಡುವವು?

18 ಯೆಹೋವನು ತನ್ನ ಮಾನವ ಸೇವಕರಿಗೆ ಇದುವರೆಗೆ ಕೊಟ್ಟಿರುವ ಕೆಲಸಗಳಲ್ಲೇ ಅತ್ಯಂತ ಮಹತ್ತಾದ ಕೆಲಸವನ್ನು ನಮಗೆ ವಹಿಸಿದ್ದಾನೆ. ದೇವರ ರಾಜ್ಯದ ಸುವಾರ್ತೆ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸವೇ ಅದು. (ಮತ್ತಾ. 24:14; 28:19, 20) ಈ ಕೆಲಸವನ್ನು ಮಾಡುವುದರಲ್ಲಿ ಯೇಸು ಅಪ್ರತಿಮ ಮಾದರಿಯಿಟ್ಟಿದ್ದಾನೆ. ಅದಕ್ಕಾಗಿ ನಾವು ನಿಜಕ್ಕೂ ಅಭಾರಿಗಳಲ್ಲವೆ? ಆತನು “ದೇವರ ರಾಜ್ಯದ ಸುವಾರ್ತೆಯನ್ನು ಸಾರುತ್ತಾ ಊರಿಂದ ಊರಿಗೂ ಹಳ್ಳಿಯಿಂದ ಹಳ್ಳಿಗೂ ಪ್ರಯಾಣಿಸಿದನು.” (ಲೂಕ 8:1) ಯೇಸುವಿನಂತೆ ನಮಗೂ ಸುವಾರ್ತೆ ಸಾರಲು ನಂಬಿಕೆ, ಧೈರ್ಯ ಬೇಕು. ಯೆಹೋವನ ಸಹಾಯದೊಂದಿಗೆ ನಾವು ಆ ಗುಣಗಳನ್ನು ಬೆಳೆಸಿಕೊಳ್ಳಬಲ್ಲೆವು. ಜಲಪ್ರಳಯದಲ್ಲಿ ನಾಶವಾಗಲಿದ್ದ ‘ಭಕ್ತಿಹೀನ ಜನರಿಗೆ’ ಧೀರನಾಗಿ ‘ನೀತಿಯನ್ನು ಸಾರಿದ’ ನೋಹನಂತೆ ನಾವು ಧೈರ್ಯಶಾಲಿಗಳಾಗಿರಬಲ್ಲೆವು.—2 ಪೇತ್ರ 2:4, 5.

19 ನಾವು ಪ್ರಾರ್ಥಿಸುವುದಾದರೆ ಸುವಾರ್ತೆ ಸಾರಲು ಬೇಕಾದ ಧೈರ್ಯ ಸಿಗುತ್ತದೆ. ಒಂದನೇ ಶತಮಾನದಲ್ಲಿ ಹಿಂಸೆಯನ್ನು ಅನುಭವಿಸಿದ ಯೇಸುವಿನ ಕೆಲವು ಹಿಂಬಾಲಕರು ‘ದೇವರ ವಾಕ್ಯವನ್ನು ಧೈರ್ಯದಿಂದ ಮಾತಾಡಲು’ ಸಹಾಯಮಾಡೆಂದು ದೇವರಲ್ಲಿ ಬೇಡಿಕೊಂಡರು. ಆ ಪ್ರಾರ್ಥನೆಗೆ ಉತ್ತರವಾಗಿ ಯೆಹೋವನು ಅವರಿಗೆ ಸಹಾಯಮಾಡಿದನು. (ಅಪೊಸ್ತಲರ ಕಾರ್ಯಗಳು 4:29-31 ಓದಿ.) ನಿಮಗೆ ಮನೆಮನೆಗೆ ಹೋಗಿ ಸುವಾರ್ತೆ ಸಾರಲು ಅಂಜಿಕೆ, ಹೆದರಿಕೆ ಇರುವಲ್ಲಿ ನಂಬಿಕೆ, ಧೈರ್ಯ ಕೊಡುವಂತೆ ಯೆಹೋವನಲ್ಲಿ ಪ್ರಾರ್ಥಿಸಿ. ಆತನು ನಿಮಗೆ ಸಹಾಯಮಾಡುವನು.ಕೀರ್ತನೆ 66:19, 20 ಓದಿ. *

20. ಯೆಹೋವನ ಜನರಾದ ನಮಗೆ ಯಾರ ಬೆಂಬಲವಿದೆ?

20 ಈ ದುಷ್ಟ ಲೋಕದಲ್ಲಿ ಸಂಕಷ್ಟಗಳನ್ನು ಎದುರಿಸುತ್ತಾ ದೇವರ ಚಿತ್ತದಂತೆ ನಡೆಯುವುದು ಒಂದು ಸವಾಲೇ. ಆದರೂ ನಾವದನ್ನು ಮಾಡಬಲ್ಲೆವು. ಏಕೆಂದರೆ, ನಾವು ಒಬ್ಬಂಟಿಗರಲ್ಲ. ದೇವರು ನಮ್ಮ ಸಂಗಡ ಇದ್ದಾನೆ. ಸಭೆಯ ಶಿರಸ್ಸಾಗಿರುವ ಯೇಸುವೂ ನಮ್ಮೊಂದಿಗಿದ್ದಾನೆ. ಲೋಕದಾದ್ಯಂತ ನಮ್ಮೊಂದಿಗೆ 70 ಲಕ್ಷಕ್ಕಿಂತ ಹೆಚ್ಚು ಸಹೋದರ ಸಹೋದರಿಯರಿದ್ದಾರೆ. ಅವರೆಲ್ಲರ ಜೊತೆಸೇರಿ ನಂಬಿಕೆಯನ್ನು ತೋರಿಸುತ್ತಾ ಇರೋಣ. ಸುವಾರ್ತೆಯನ್ನು ಸಾರುತ್ತಾ ಇರೋಣ. ಹಾಗೆ ಮಾಡುವಾಗ 2013ರ ವರ್ಷವಚನದ ಮಾತುಗಳನ್ನು ಯಾವಾಗಲೂ ಮನಸ್ಸಿನಲ್ಲಿಡೋಣ: ‘ಸ್ಥಿರಚಿತ್ತನಾಗಿರು, ಧೈರ್ಯದಿಂದಿರು. ನಿನ್ನ ದೇವರಾದ ಯೆಹೋವನು ನಿನ್ನ ಸಂಗಡ ಇದ್ದಾನೆ.’—ಯೆಹೋ. 1:9.

[ಪಾದಟಿಪ್ಪಣಿ]

^ ಪ್ಯಾರ. 19 ಧೈರ್ಯ ತೋರಿಸಿದವರ ಇನ್ನು ಹೆಚ್ಚು ಉದಾಹರಣೆಗಳಿಗಾಗಿ 2012, ಫೆಬ್ರವರಿ 15ರ ಕಾವಲಿನಬುರುಜುವಿನಲ್ಲಿರುವ “ಸ್ಥಿರಚಿತ್ತರಾಗಿರಿ ಪೂರ್ಣಧೈರ್ಯದಿಂದಿರಿ” ಎಂಬ ಲೇಖನ ನೋಡಿ.

[ಅಧ್ಯಯನ ಪ್ರಶ್ನೆಗಳು]

[ಪುಟ 7ರಲ್ಲಿರುವ ಚಿತ್ರ]

[ಪುಟ 8ರಲ್ಲಿರುವ ಸಂಕ್ಷಿಪ್ತ ವಿವರಣೆ]

2013ರ ವರ್ಷವಚನ: ‘ಸ್ಥಿರಚಿತ್ತನಾಗಿರು, ಧೈರ್ಯದಿಂದಿರು. ನಿನ್ನ ದೇವರಾದ ಯೆಹೋವನು ನಿನ್ನ ಸಂಗಡ ಇದ್ದಾನೆ.’—ಯೆಹೋಶುವ 1:9

[ಪುಟ 10ರಲ್ಲಿರುವ ಚಿತ್ರ]

ಆರಂಭದ ಕ್ರೈಸ್ತರು ಏನೇ ಆದರೂ ನಂಬಿಕೆಯನ್ನು ಬಿಟ್ಟುಬಿಡಲು ಸಿದ್ಧರಿರಲಿಲ್ಲ