ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಸಭಾಕೂಟಗಳಲ್ಲಿ ಕ್ರೈಸ್ತ ಹೆತ್ತವರು ಬಹಿಷ್ಕಾರಗೊಂಡಿರುವ ತಮ್ಮ ಮಗ/ಮಗಳ ಪಕ್ಕದಲ್ಲಿ ಕೂತುಕೊಳ್ಳಬಹುದಾ?

▪ ಬಹಿಷ್ಕೃತ ವ್ಯಕ್ತಿ ಸಭೆಯಲ್ಲಿ ಎಲ್ಲಿ ಕೂತುಕೊಳ್ಳುತ್ತಾನೆ ಎಂಬ ವಿಷಯದಲ್ಲಿ ಅತಿಯಾಗಿ ಚಿಂತಿಸಬೇಕಾಗಿಲ್ಲ. ಕ್ರೈಸ್ತ ಹೆತ್ತವರು ತಮ್ಮೊಂದಿಗೆ ಜೀವಿಸುತ್ತಿರುವ ಬಹಿಷ್ಕೃತ ಮಗನಿಗೆ ಸೂಕ್ತವಾಗಿರುವಲ್ಲಿ ಆಧ್ಯಾತ್ಮಿಕ ಸಹಾಯ ಮಾಡುವಂತೆ ಈ ಪತ್ರಿಕೆ ಇಲ್ಲಿಯವರೆಗೆ ಉತ್ತೇಜಿಸುತ್ತಾ ಬಂದಿದೆ. 1989, ಆಗಸ್ಟ್‌ 1ರ ಕಾವಲಿನಬುರುಜು ಪುಟ 22-23ರಲ್ಲಿ ಹೇಳಲಾಗಿತ್ತೇನೆಂದರೆ, ಬಹಿಷ್ಕೃತ ಮಗ ಹೆತ್ತವರೊಂದಿಗೆ ಜೀವಿಸುತ್ತಿರುವಲ್ಲಿ ಮತ್ತು ಅಪ್ರಾಪ್ತ ವಯಸ್ಸಿನವನಾಗಿರುವಲ್ಲಿ ಹೆತ್ತವರು ಅವನೊಂದಿಗೆ ಬೈಬಲ್‌ ಅಧ್ಯಯನ ಸಹ ಮಾಡಬಹುದು. ಆಗ ತಾನು ಮಾಡಿರುವುದು ತಪ್ಪು ಎಂದು ತಿದ್ದಿಕೊಂಡು ಸರಿ ದಾರಿಗೆ ಬರಲು ಅವನಿಗೆ ಉತ್ತೇಜನ ಸಿಗುತ್ತದೆ. *

ಸಭಾಕೂಟಗಳಲ್ಲಿ ಕೂತುಕೊಳ್ಳುವುದರ ಬಗ್ಗೆ ನೋಡುವುದಾದರೆ, ಅಪ್ರಾಪ್ತ ವಯಸ್ಸಿನ ಮಗ ಸುಮ್ಮನಿದ್ದು, ಇತರರಿಗೆ ಅಡಚಣೆ ಮಾಡದೆ ಹೆತ್ತವರೊಂದಿಗೆ ಕೂತುಕೊಳ್ಳಬಹುದು. ಬಹಿಷ್ಕೃತ ವ್ಯಕ್ತಿ ಕೊನೆ ಸಾಲಿನಲ್ಲೇ ಕೂತುಕೊಳ್ಳಬೇಕು ಅನ್ನುವ ಕಾಯಿದೆ ಇಲ್ಲ. ಹಾಗಾಗಿ ಬಹಿಷ್ಕೃತ ಚಿಕ್ಕಮಕ್ಕಳು ಹೆತ್ತವರು ಎಲ್ಲೇ ಕೂತಿರಲಿ ಅವರ ಪಕ್ಕದಲ್ಲಿ ಕೂತರೆ ಅದನ್ನು ಆಕ್ಷೇಪಿಸುವಂತಿಲ್ಲ. ಮಕ್ಕಳ ಆಧ್ಯಾತ್ಮಿಕ ಕಾಳಜಿವಹಿಸುವ ತಂದೆತಾಯಿಗಳು ತಮ್ಮ ಮಗ ಕೂಟಗಳಿಂದ ಸಂಪೂರ್ಣ ಪ್ರಯೋಜನ ಪಡೆಯುತ್ತಿದ್ದಾನಾ ಇಲ್ಲವಾ ಎಂದು ಖಚಿತಪಡಿಸಿಕೊಳ್ಳುವುದು ಉಚಿತವಾಗಿದೆ. ಯಾರ ನೆರವೂ ಇಲ್ಲದೆ ಅವನು ಎಲ್ಲೋ ಕೂತಿರುವುದಕ್ಕಿಂತ ಹೆತ್ತವರ ಪಕ್ಕದಲ್ಲಿ ಕೂತುಕೊಳ್ಳುವುದು ಉತ್ತಮ ಅಲ್ವಾ!

ತಂದೆತಾಯಿಯೊಟ್ಟಿಗೆ ಇರದ ಬಹಿಷ್ಕೃತ ಮಗನ ಕುರಿತಾಗಿ ಏನು? ತಮ್ಮೊಂದಿಗೆ ಮನೆಯಲ್ಲಿ ವಾಸಿಸದ ಬಹಿಷ್ಕೃತ ವ್ಯಕ್ತಿಯೊಂದಿಗಿನ ಸಹವಾಸದ ಕುರಿತು ಯಾವ ಮನೋಭಾವವಿರಬೇಕು ಎಂದು ಈ ಮುಂಚೆ ಈ ಪತ್ರಿಕೆ ಸ್ಪಷ್ಟವಾಗಿ ತಿಳಿಸಿತ್ತು. * ಆದರೆ ಕೂಟಗಳು ನಡೆಯುತ್ತಿರುವಾಗ ಬಹಿಷ್ಕೃತ ವ್ಯಕ್ತಿ ಸುಮ್ಮನಿದ್ದು ತನ್ನ ಸಂಬಂಧಿಕರ ಪಕ್ಕ ಕೂತುಕೊಳ್ಳುವುದಕ್ಕೂ, ಸಂಬಂಧಿಕರು ಅವನೊಂದಿಗೆ ಅನಾವಶ್ಯಕವಾಗಿ ಜೊತೆಸೇರುವುದಕ್ಕೂ ತುಂಬ ವ್ಯತ್ಯಾಸವಿದೆ. ನಂಬಿಕೆಯಲ್ಲಿರುವ ಕುಟುಂಬದವರಿಗೆ ಬಹಿಷ್ಕೃತ ವ್ಯಕ್ತಿಯ ಕಡೆಗೆ ಸರಿಯಾದ ಮನೋಭಾವ ಇದ್ದರೆ ಮತ್ತು ಅವನೊಂದಿಗಿನ ಸಹವಾಸದ ಕುರಿತ ಬೈಬಲ್‌ ಸಲಹೆಯನ್ನು ಅವರು ಪಾಲಿಸುತ್ತಿರುವುದಾದರೆ ಚಿಂತಿಸಲು ಯಾವುದೇ ಕಾರಣವಿಲ್ಲ.—1 ಕೊರಿಂ. 5:11, 13; 2 ಯೋಹಾ. 11.

ಸಭಾಕೂಟಗಳಲ್ಲಿ ಬಹಿಷ್ಕೃತ ವ್ಯಕ್ತಿ ಸರಿಯಾಗಿ ನಡಕೊಳ್ಳುವವನಾಗಿರುವಲ್ಲಿ, ಅವನು ಸಂಬಂಧಿಕರ ಪಕ್ಕ ಕೂತುಕೊಳ್ಳುತ್ತಾನೋ ಅಥವಾ ಬೇರೆಯವರ ಪಕ್ಕ ಕೂತುಕೊಳ್ಳುತ್ತಾನೋ ಅನ್ನುವ ವಿಷಯದಲ್ಲಿ ಚಿಂತೆಮಾಡುವ ಅವಶ್ಯಕತೆ ಇಲ್ಲ. ಬಹಿಷ್ಕೃತ ವ್ಯಕ್ತಿ ಎಲ್ಲಿ ಕೂತುಕೊಳ್ಳಬೇಕು ಎಂದು ನಿಯಮ ಮಾಡುವುದು ಕೆಲವೊಂದು ಸನ್ನಿವೇಶಗಳಲ್ಲಿ ಸಮಸ್ಯೆಗಳಿಗೆ ನಡೆಸಸಾಧ್ಯ. ಸಭೆಯಲ್ಲಿರುವ ಎಲ್ಲರೂ, ಬಹಿಷ್ಕೃತ ವ್ಯಕ್ತಿಯ ತಂದೆತಾಯಿ ಅಥವಾ ಸಂಬಂಧಿಕರು ಸಹ ಬೈಬಲ್‌ ತತ್ವಗಳನ್ನು ಪಾಲಿಸುತ್ತಿರುವಲ್ಲಿ, ಇತರರು ಎಡವಲು ಯಾವುದೇ ಕಾರಣ ಇಲ್ಲದಿರುವಲ್ಲಿ ಕ್ರೈಸ್ತ ಕೂಟಗಳಲ್ಲಿ ಬಹಿಷ್ಕೃತರು ಎಲ್ಲಿ ಕೂತುಕೊಳ್ಳಬೇಕು ಎಂಬ ಬಗ್ಗೆ ಚಿಂತಿಸಬೇಕಾಗಿಲ್ಲ. *

[ಪಾದಟಿಪ್ಪಣಿಗಳು]

^ ಪ್ಯಾರ. 3 ಈ ಲೇಖನದಲ್ಲಿ ಬಹಿಷ್ಕಾರಗೊಂಡ ಅಪ್ರಾಪ್ತ ವಯಸ್ಸಿನ ಮಗನಿಗೆ ಸಂಬೋಧಿಸಿ ಹೇಳಿರುವುದಾದರೂ ಅದು ಮಗಳಿಗೂ ಅನ್ವಯಿಸುತ್ತದೆ.

^ ಪ್ಯಾರ. 5 1982, ಫೆಬ್ರವರಿ 1 ಕಾವಲಿನಬುರುಜು ಪುಟ 18-19 ಮತ್ತು “ದೇವರ ಪ್ರೀತಿ” ಪುಸ್ತಕದ ಪುಟ 237-239 ನೋಡಿ.

^ ಪ್ಯಾರ. 6 ಈ ಲೇಖನ 1953, ಏಪ್ರಿಲ್‌1ರ ಕಾವಲಿನಬುರುಜು (ಇಂಗ್ಲಿಷ್‌) ಪುಟ 223ರಲ್ಲಿ ಪ್ರಕಟವಾದ ಮಾಹಿತಿಯನ್ನು ಪರಿಷ್ಕರಿಸುತ್ತದೆ.