ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

Never Become “Enraged Against Jehovah”

Never Become “Enraged Against Jehovah”

ಯಾವತ್ತೂ ‘ಯೆಹೋವನ ಮೇಲೆ ಕುದಿಯಬೇಡಿ’

“ಮನುಷ್ಯನು ಮೂರ್ಖತನದಿಂದ ತನ್ನ ಗತಿಯನ್ನು ಕೆಡಿಸಿಕೊಂಡು ಯೆಹೋವನ ಮೇಲೆ ಕುದಿಯುವನು.”—ಜ್ಞಾನೋ. 19:3.

ನಿಮ್ಮ ಉತ್ತರ . . . ?

ಯಾವ ವಿಷಯಗಳು ನಾವು ‘ಯೆಹೋವನ ಮೇಲೆ ಕುದಿಯುವಂತೆ’ ಮಾಡಬಲ್ಲವು?

ಯೆಹೋವನ ಮೇಲೆ ಕುದಿಯುವುದನ್ನು ತಡೆಯಲು ಸಹಾಯಮಾಡುವ ಐದು ಅಂಶಗಳು ಯಾವುವು?

ಕಷ್ಟಕರ ಸಮಸ್ಯೆಗಳನ್ನು ಅನುಭವಿಸಬೇಕಾದಾಗ ಏನನ್ನು ನೆನಪಿನಲ್ಲಿಡಬೇಕು?

1, 2. ಮಾನವಕುಲದ ತೊಂದರೆಗಳಿಗೆ ಯೆಹೋವನನ್ನು ದೂರಬಾರದು ಯಾಕೆ? ಉದಾಹರಿಸಿ.

ಹೀಗೆ ನೆನಸಿ. ನಿಮಗೆ ಮದುವೆಯಾಗಿ ಸುಮಾರು ವರ್ಷಗಳಾಗಿವೆ. ಹೆಂಡತಿ ಮಕ್ಕಳ ಜತೆ ಸುಖವಾದ ಸಂಸಾರ. ಹೀಗಿರುವಾಗ ಒಂದಿನ ನೀವು ಮನೆಗೆ ವಾಪಸ್‌ ಬಂದಾಗ ಮನೆಯಲ್ಲಿರೋ ವಸ್ತುಗಳೆಲ್ಲಾ ತಲೆಕೆಳಗಾಗಿರೋದನ್ನ ನೋಡುತ್ತಿರ. ಕುರ್ಚಿಗಳು ಮುರಿದು ಹೋಗಿವೆ. ಪಾತ್ರೆಗಳೆಲ್ಲಾ ಒಡೆದು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ನೆಲದ ಮೇಲೆ ಹಾಕುವ ಜಮಖಾನೆ ಚಿಂದಿಯಾಗಿ ಯಾವತ್ತೂ ಸರಿಯಾಗದ ಅವಸ್ಥೆಗೆ ಬಂದಿದೆ. ನಿಮ್ಮ ಸುಂದರ ಮನೆ ಸುನಾಮಿ ಬಡಿದ ಮನೆಯಂತಾಗಿದೆ. ಈ ಸಂದರ್ಭದಲ್ಲಿ ನಿಮ್ಮ ಮನಸ್ಸಿಗೆ ಏನು ಬರುತ್ತೆ? “ನನ್ನ ಹೆಂಡತಿ ಯಾಕೆ ಹೀಗೆ ಮಾಡಿದಳು?” ಅಂತನಾ ಅಥವಾ “ಯಾರು ಹೀಗೆ ಮಾಡಿದ್ದು” ಅಂತನಾ? ನೀವು ಖಂಡಿತ ಯಾರು ಮಾಡಿದ್ದು ಅಂತಾನೇ ಯೋಚಿಸುತ್ತೀರಲ್ವಾ. ಯಾಕೆ? ಯಾಕಂದರೆ ನಿಮ್ಮ ಪ್ರೀತಿಯ ಮಡದಿ ಇಂಥ ಕೆಲಸಕ್ಕೆ ಮಾಡಲು ಸಾಧ್ಯನೇ ಇಲ್ಲ ಅಂತ ನಿಮಗೆ ಖಾತ್ರಿ ಇದೆ.

2 ಮಾಲಿನ್ಯ, ಹಿಂಸಾಚಾರ, ಮತ್ತು ಅನೈತಿಕತೆಯಿಂದಾಗಿ ಇಂದು ಮಾನವ ಕುಟುಂಬ ಹಾಳಾಗಿ ಹೋಗಿದೆ. ನಾವು ಬೈಬಲ್‌ ವಿದ್ಯಾರ್ಥಿಗಳಾದ್ದರಿಂದ ಯೆಹೋವನು ಇದಕ್ಕೆ ಕಾರಣನಲ್ಲ ಅಂತ ಚೆನ್ನಾಗಿ ಗೊತ್ತು. ಯಾಕೆಂದರೆ ಭೂಮಿ ಸುಂದರ ತೋಟವಾಗಿರಬೇಕೆಂದು ಯೆಹೋವನು ಸೃಷ್ಟಿಸಿದನು. (ಆದಿ. 2:8, 15) ಯೆಹೋವನು ಪ್ರೀತಿಯುಳ್ಳ ದೇವರು. (1 ಯೋಹಾ. 4:8) ನಾವು ಬೈಬಲನ್ನು ಚೆನ್ನಾಗಿ ಅಧ್ಯಯನ ಮಾಡಿರುವುದರಿಂದ ಲೋಕದ ಅನೇಕ ವಿಪತ್ತುಗಳಿಗೆ ಯಾರು ಕಾರಣ ಅಂತ ತಿಳಿದುಕೊಂಡಿದ್ದೇವೆ. ಅದು ಬೇರೆ ಯಾರೂ ಅಲ್ಲ ‘ಈ ಲೋಕದ ಅಧಿಪತಿಯಾಗಿರುವ’ ಪಿಶಾಚನಾದ ಸೈತಾನನೇ.—ಯೋಹಾ. 14:30; 2 ಕೊರಿಂ. 4:4.

3. ತೊಂದರೆಗಳ ಬಗ್ಗೆ ನಾವು ಯೋಚಿಸುವ ರೀತಿ ಹೇಗೆ ಬದಲಾಗಬಹುದು?

3 ಆದರೂ ನಮ್ಮ ಎಲ್ಲಾ ಕಷ್ಟ ತೊಂದರೆಗಳಿಗೆ ಯಾವಾಗಲೂ ಸೈತಾನನೇ ಕಾರಣನಾಗಿರುವುದಿಲ್ಲ. ಯಾಕೆ? ಯಾಕೆಂದರೆ ಕೆಲವು ಸಮಸ್ಯೆಗಳಿಗೆ ನಮ್ಮ ತಪ್ಪುಗಳೇ ಕಾರಣವಾಗಿರುತ್ತೆ. (ಧರ್ಮೋಪದೇಶಕಾಂಡ 32:4-6 ಓದಿ.) ಈ ಸತ್ಯಾಂಶವನ್ನು ನಾವು ಒಪ್ಪುವುದಾದರೂ ನಮ್ಮ ಅಪರಿಪೂರ್ಣತೆ ನಮ್ಮ ಯೋಚನಾರೀತಿಯನ್ನು ತಿರುಚಿ ಅಪಾಯಕ್ಕೆ ತಳ್ಳುತ್ತೆ. (ಜ್ಞಾನೋ. 14:12) ಹೇಗೆ? ನಮ್ಮ ತೊಂದರೆಗಳಿಗೆ ನಮ್ಮನ್ನು ಅಥವಾ ಸೈತಾನನನ್ನು ದೂರುವ ಬದಲು ನಾವು ಯೆಹೋವನನ್ನು ದೂರಲು ಶುರುಮಾಡಬಹುದು. ನಾವು ‘ಯೆಹೋವನ ಮೇಲೆ ಕುದಿಯುವ’ ಸಾಧ್ಯತೆ ಕೂಡ ಇದೆ.—ಜ್ಞಾನೋ. 19:3.

4, 5. ಒಬ್ಬ ಕ್ರೈಸ್ತನು ಹೇಗೆ ‘ಯೆಹೋವನ ಮೇಲೆ ಕುದಿಯಬಹುದು’?

4 ಒಬ್ಬ ವ್ಯಕ್ತಿ ‘ಯೆಹೋವನ ಮೇಲೆ ಕುದಿಯುವ’ ಹಂತಕ್ಕೆ ನಿಜವಾಗಿಯೂ ಹೋಗಬಹುದಾ? ಹಾಗೆಲ್ಲಾದರೂ ನಾವು ಮಾಡಿದರೆ ನಮ್ಮಂಥ ಮೂರ್ಖರು ಬೇರೊಬ್ಬರಿಲ್ಲ. (ಯೆಶಾ. 41:11) ಹಾಗೆ ಮಾಡಿ ಏನು ತಾನೇ ಸಾಧಿಸಲು ಆಗುತ್ತೆ? ಒಬ್ಬ ಕವಿ ಹೀಗೆ ಹೇಳುತ್ತಾನೆ: “ದೇವರ ಜತೆ ಹೋರಾಡುವಷ್ಟು ದೊಡ್ಡ ಕೈ ನಮಗಿಲ್ಲ.” ನಾವು ದೇವರ ಮೇಲೆ ಮಾತಿನಲ್ಲಿ ದೂರು ಹೊರಿಸುವಷ್ಟು ದೂರ ಹೋಗಲಿಕ್ಕಿಲ್ಲ. ಆದರೆ ಜ್ಞಾನೋಕ್ತಿ 19:3 ಹೇಳುತ್ತೆ, “ಮನುಷ್ಯನು ಮೂರ್ಖತನದಿಂದ ತನ್ನ ಗತಿಯನ್ನು ಕೆಡಿಸಿಕೊಂಡು [ತನ್ನ ಹೃದಯದಲ್ಲಿ, NW] ಯೆಹೋವನ ಮೇಲೆ ಕುದಿಯುವನು” ಎಂದು. ಹೌದು ಒಬ್ಬ ವ್ಯಕ್ತಿ ತನ್ನ ಹೃದಯದಲ್ಲಿ ಯೆಹೋವನ ಮೇಲೆ ಕುದಿಯುವ ಸಾಧ್ಯತೆ ಇದೆ. ತನಗೇ ತಿಳಿಯದೆ ತಾನು ಈ ಗುಣಕ್ಕೆ ಶರಣಾಗಬಹುದು. ಯೆಹೋವನ ವಿರುದ್ಧ ಹಗೆ ಬೆಳೆಸಿಕೊಳ್ಳಬಹುದು. ಇದರಿಂದಾಗಿ ಸಭೆಗೆ ಬರುವುದನ್ನು ನಿಲ್ಲಿಸಬಹುದು ಅಥವಾ ಯೆಹೋವನಿಗೆ ಸಲ್ಲಿಸಬೇಕಾದ ಆರಾಧನೆಯಲ್ಲಿ ಸಂಪೂರ್ಣವಾಗಿ ಪಾಲು ತೆಗೆದುಕೊಳ್ಳದೇ ಇರುವ ಹಂತಕ್ಕೆ ತಲಪಬಹುದು.

5 ನಾವು ‘ಯೆಹೋವನ ಮೇಲೆ ಕುದಿಯುವಂತೆ’ ಯಾವುದು ಮಾಡಬಹುದು? ಆ ಪಾಶವನ್ನು ಹೇಗೆ ಎದುರಿಸುವುದು? ಈ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳುವುದು ತುಂಬ ಪ್ರಾಮುಖ್ಯ. ಹೀಗೆ ನಾವು ಯೆಹೋವನೊಂದಿಗಿನ ಸಂಬಂಧವನ್ನು ಕಾಪಾಡಲು ಸಾಧ್ಯವಾಗುತ್ತೆ.

‘ಯೆಹೋವನ ಮೇಲೆ ಕುದಿಯುವಂತೆ’ ಯಾವುದು ಮಾಡಬಹುದು?

6, 7. ಮೋಶೆಯ ಸಮಯದಲ್ಲಿದ್ದ ಇಸ್ರಾಯೇಲ್ಯರು ಏಕೆ ಯೆಹೋವನನ್ನು ದೂರಿದರು?

6 ಯೆಹೋವನ ನಂಬಿಗಸ್ತ ಸೇವಕನು ಯೆಹೋವನನ್ನೇ ದೂರುವ ಮಟ್ಟಕ್ಕೆ ಹೋಗುವಂತೆ ಯಾವುದು ಮಾಡಬಹುದು? ಇದಕ್ಕಾಗಿ ಐದು ವಿಷಯಗಳನ್ನು ಮತ್ತು ಈ ಪಾಶಕ್ಕೆ ಬಿದ್ದ ಕೆಲವರ ಬೈಬಲ್‌ ಉದಾಹರಣೆಗಳನ್ನು ಗಮನಿಸೋಣ.—1 ಕೊರಿಂ. 10:11, 12.

7 ಬೇರೆಯವರ ನಕಾರಾತ್ಮಕ ಮಾತು ನಮ್ಮನ್ನು ಪ್ರಭಾವಿಸಬಹುದು. (ಧರ್ಮೋಪದೇಶಕಾಂಡ 1:26-28 ಓದಿ.) ಯೆಹೋವನು ಈಜಿಪ್ಟಿನವರ ಮೇಲೆ ಅದ್ಭುತಕರವಾಗಿ ಹತ್ತು ಬಾಧೆಗಳನ್ನು ತಂದು ಇಸ್ರಾಯೇಲ್ಯರನ್ನು ಈಜಿಪ್ಟಿನ ದಾಸತ್ವದಿಂದ ಬಿಡುಗಡೆ ಮಾಡಿದ್ದನು. ಫರೋಹ ಮತ್ತವನ ಸೈನ್ಯವನ್ನು ಕೆಂಪು ಸಮುದ್ರದಲ್ಲಿ ಮುಳುಗಿಸಿ ನಾಶಮಾಡಿದ್ದನು. (ವಿಮೋ. 12:29-32, 51; 14:29-31; ಕೀರ್ತ. 136:15) ದೇವಜನರು ವಾಗ್ದತ್ತ ದೇಶಕ್ಕೆ ಹೋಗಲು ಸಿದ್ಧರಾಗಿದ್ದರು. ಇಂಥ ಮಹತ್ವದ ಸಮಯದಲ್ಲಿ ಅವರು ಯೆಹೋವನನ್ನು ದೂರಿದರು. ಈ ಮಟ್ಟಕ್ಕೆ ಹೋಗುವಷ್ಟು ಅವರ ನಂಬಿಕೆ ಕುಗ್ಗಿದ್ದೇಕೆ? ವಾಗ್ದತ್ತ ದೇಶವನ್ನು ಸಂಚರಿಸಿ ನೋಡಲು ಹೋಗಿದ್ದವರು ಕೊಟ್ಟ ನಕಾರಾತ್ಮಕ ವರದಿ ಅವರ ಧೈರ್ಯಗೆಡಿಸಿತು. (ಅರ. 14:1-4) ಫಲಿತಾಂಶ? ಆ ತಲೆಮಾರಿನವರು “ಒಳ್ಳೇ ದೇಶವನ್ನು” ನೋಡುವ ಸೌಭಾಗ್ಯವನ್ನು ಕಳೆದುಕೊಂಡರು. (ಧರ್ಮೋ. 1:34, 35) ನಾವೂ ಸಹ ಇನ್ನೊಬ್ಬರ ನಕಾರಾತ್ಮಕ ಮಾತುಗಳನ್ನು ಕೇಳಿ ನಮ್ಮ ನಂಬಿಕೆಗೆ ಪೆಟ್ಟಾಗುವಂತೆ ಬಿಟ್ಟುಕೊಡುತ್ತೇವಾ? ಯೆಹೋವನು ನಮ್ಮ ಜೊತೆ ವ್ಯವಹರಿಸುವ ರೀತಿಯ ಬಗ್ಗೆ ಗುಣುಗುಟ್ಟುತ್ತೇವಾ?

8. ಯಾವ ಸನ್ನಿವೇಶಗಳಿಂದಾಗಿ ಯೆಶಾಯನ ದಿನಗಳಲ್ಲಿದ್ದ ದೇವಜನರು ಯೆಹೋವನ ಮೇಲೆ ತಪ್ಪುಹೊರಿಸಿದರು?

8 ಕಷ್ಟ ತೊಂದರೆಗಳು ನಮ್ಮನ್ನು ನಿರುತ್ತೇಜಿಸಬಹುದು. (ಯೆಶಾಯ 8:21, 22 ಓದಿ.) ಯೆಶಾಯನ ಸಮಯದಲ್ಲಿ ಯೆಹೂದದ ಜನರು ತುಂಬ ಕಷ್ಟದ ಪರಿಸ್ಥಿತಿಯಲ್ಲಿದ್ದರು. ಅವರ ಸುತ್ತ ವೈರಿಗಳು ಮುತ್ತಿಗೆ ಹಾಕಿದ್ದರು. ಆಹಾರ ಅಭಾವದಿಂದ ತತ್ತರಿಸಿದ್ದರು. ಎಲ್ಲದ್ದಕ್ಕಿಂತ ಮುಖ್ಯವಾಗಿ ಆಧ್ಯಾತ್ಮಿಕ ಕ್ಷಾಮ ಅವರನ್ನು ಬಡಿದಿತ್ತು. (ಆಮೋ. 8:11) ಇಂಥ ಪರಿಸ್ಥಿತಿಯಲ್ಲೂ ಅವರು ಸಹಾಯಕ್ಕಾಗಿ ಯೆಹೋವನ ಕಡೆಗೆ ತಿರುಗಲಿಲ್ಲ. ಬದಲಿಗೆ ‘ತಮ್ಮ ರಾಜನನ್ನೂ ದೇವರನ್ನೂ ಶಪಿಸಿದರು.’ ತಮ್ಮ ತೊಂದರೆಗಳಿಗೆ ಯೆಹೋವನೇ ಕಾರಣ ಎಂದು ಹೇಳಿದರು. ದುರಂತ ಅಥವಾ ವೈಯಕ್ತಿಕ ಸಮಸ್ಯೆಗಳು ನಮ್ಮನ್ನು ಬಡಿದಾಗ, ‘ನನಗೆ ತುಂಬ ಸಹಾಯದ ಅಗತ್ಯ ಇದ್ದಾಗ ಯೆಹೋವನೆಲ್ಲಿದ್ದನು?’ ಎಂದು ನಮ್ಮ ಹೃದಯದಲ್ಲೇ ಅಂದುಕೊಳ್ಳುತ್ತೇವಾ?

9. ಯೆಹೆಜ್ಕೇಲನ ಸಮಯದ ಇಸ್ರಾಯೇಲ್ಯರು ಯಾಕೆ ತಪ್ಪಭಿಪ್ರಾಯ ತಾಳಿದರು?

9 ನಮಗೆ ಎಲ್ಲ ಸತ್ಯಾಂಶ ತಿಳಿದಿಲ್ಲ. ಯೆಹೆಜ್ಕೇಲನ ಸಮಯದ ಇಸ್ರಾಯೇಲ್ಯರು ಸತ್ಯಾಂಶ ಏನೆಂದು ಗ್ರಹಿಸದೆ ಯೆಹೋವನ “ಕ್ರಮವು ಸಮವಲ್ಲ” ಎಂಬ ನಿರ್ಣಯಕ್ಕೆ ಬಂದರು. (ಯೆಹೆ. 18:29) ಅದು ಹೇಗಿತ್ತೆಂದರೆ, ತಾವೇ ದೇವರಿಗೆ ನ್ಯಾಯಾಧೀಶರಾಗಿ, ದೇವರ ಮಟ್ಟಗಳಿಗಿಂತ ತಮ್ಮ ಮಟ್ಟಗಳೇ ಸರಿಯೆಂದು ಯೋಚಿಸಿ, ತಮ್ಮ ಅಲ್ಪ ತಿಳಿವಳಿಕೆಯಿಂದ ಯೆಹೋವನನ್ನೇ ತೀರ್ಪುಮಾಡಿದಂತಿತ್ತು. ನಮಗೂ ಸಹ ಕೆಲವೊಮ್ಮೆ ಬೈಬಲ್‌ ವೃತ್ತಾಂತಗಳು ಅರ್ಥವಾಗದಿದ್ದಾಗ ಅಥವಾ ನಮ್ಮ ಜೀವನದಲ್ಲಿ ಕೆಲವು ಸಂಗತಿಗಳು ಯಾಕೆ ನಡೀತಿವೆ ಅಂತ ಗೊತ್ತಾಗದಿದ್ದಾಗ ಯೆಹೋವನು ಅನ್ಯಾಯ ಮಾಡುತ್ತಿದ್ದಾನೆ, ‘ಆತನ ಕ್ರಮ ಸಮವಲ್ಲ’ ಎಂದು ನಾವು ಹೃದಯದಲ್ಲಿ ಅಂದುಕೊಳ್ಳುತ್ತೇವಾ?—ಯೋಬ 35:3.

10. ಆದಾಮನ ತಪ್ಪು ಮಾದರಿಯನ್ನು ಕೆಲವರು ಹೇಗೆ ಅನುಕರಿಸುತ್ತಾರೆ?

10 ನಮ್ಮ ತಪ್ಪುಗಳಿಗೆ ಬೇರೆಯವರನ್ನು ಹೊಣೆ ಮಾಡುತ್ತೇವೆ. ಮಾನವಕುಲದ ಆರಂಭದಲ್ಲೇ ಆದಾಮ ತಾನು ಮಾಡಿದ ತಪ್ಪಿಗೆ ದೇವರನ್ನು ಹೊಣೆ ಮಾಡಿದನು. (ಆದಿ. 3:12) ತಪ್ಪಿನ ಪರಿಣಾಮ ಏನಾಗುತ್ತೆ ಅಂತ ಗೊತ್ತಿದ್ದೂ ಬೇಕುಬೇಕೆಂದೇ ಯೆಹೋವನ ಮಟ್ಟವನ್ನು ಮುರಿದು ನಂತರ ಅವನು ಯೆಹೋವನನ್ನೇ ದೂರಿದ. ಯೆಹೋವನು ತನಗೆ ಕೆಟ್ಟ ಪತ್ನಿಯನ್ನು ಕೊಟ್ಟಿದ್ದಾನೆಂಬಂತೆ ಮಾತಾಡಿದ. ಅಂದಿನಿಂದ ಹಿಡಿದು ಇಂದಿನ ವರೆಗೂ ಮನುಷ್ಯರು ಆದಾಮನನ್ನು ಅನುಕರಿಸುತ್ತಾ ಬಂದಿದ್ದಾರೆ. ತಮ್ಮ ತಪ್ಪಿಗೆ ದೇವರನ್ನು ದೂರುತ್ತಾರೆ. ನಮ್ಮ ಬಗ್ಗೆ ಏನು? ನಾವು ಹೀಗೆ ಕೇಳಿಕೊಳ್ಳೋಣ: ‘ನನ್ನ ತಪ್ಪಿನಿಂದಾಗಿಯೇ ಹತಾಶೆ ಆಶಾಭಂಗಕ್ಕೆ ಒಳಗಾಗಿ ನಂತರ ಯೆಹೋವನ ಮಟ್ಟಗಳು ಸರಿಯಿಲ್ಲ ಎಂದು ದೂರುತ್ತೇನಾ?’

11. ಯೋನನಿಂದ ನಾವು ಯಾವ ಪಾಠವನ್ನು ಕಲಿಯಬಹುದು?

11 ನಮ್ಮ ಬಗ್ಗೆ ಮಾತ್ರ ಯೋಚಿಸುವವರಾಗುತ್ತೇವೆ. ನಿನೆವೆ ಪಟ್ಟಣದ ನಾಶನದ ಬಗ್ಗೆ ಯೆಹೋವನು ತೆಗೆದುಕೊಂಡ ದಯಾಭರಿತ ನಿರ್ಣಯ ಯೋನನಿಗೆ ಇಷ್ಟವಾಗಲಿಲ್ಲ. (ಯೋನ 4:1-3) ಯಾಕೆ? ಯಾಕೆಂದರೆ ತಾನು ಸಾರಿದ ನಾಶನ ನಿಜವಾಗದಿದ್ದಾಗ ಆಗುವ ಅವಮಾನದ ಬಗ್ಗೆ ಅವನು ತುಂಬ ಚಿಂತಿತನಾದ. ಪಶ್ಚಾತ್ತಾಪಪಟ್ಟ ನಿನೆವೆಯವರ ಮೇಲೆ ಮನಮರುಗುವುದನ್ನು ಬಿಟ್ಟು, ಬೇರೆಯವರಿಗೆ ತನ್ನ ಬಗ್ಗೆ ಇದ್ದ ಅಭಿಪ್ರಾಯದ ಕಡೆಗೆ ಗಮನಕೊಟ್ಟ. ನಾವು ಸಹ ಯೋನನಂತೆ ನಮ್ಮ ಬಗ್ಗೆ ಮಾತ್ರ ಯೋಚಿಸಿ ‘ಯೆಹೋವನು ಅಂತ್ಯವನ್ನು ಇನ್ನೂ ಯಾಕೆ ತಂದಿಲ್ಲ’ ಅಂತ ‘ಯೆಹೋವನ ಮೇಲೆ ಕುದಿಯುತ್ತೇವಾ’? ಯೆಹೋವನ ದಿನ ಹತ್ತಿರ ಇದೆ ಅಂತ ನಾವು ದಶಕಗಳಿಂದ ಸಾರುತ್ತಾ ಇರುವುದನ್ನು ನೋಡಿ ಬೇರೆಯವರು ಟೀಕಿಸಿದರೆ ಯೆಹೋವನ ಮೇಲೆ ತಾಳ್ಮೆಗೆಡುತ್ತೇವಾ?—2 ಪೇತ್ರ 3:3, 4, 9.

‘ಯೆಹೋವನ ಮೇಲೆ ಕುದಿಯದಿರುವುದು’ ಹೇಗೆ?

12, 13. ಎಲ್ಲಾದರೂ ನಮ್ಮ ಹೃದಯದಲ್ಲಿ ಯೆಹೋವನು ಮಾಡುವ ಕೆಲಸಗಳ ಬಗ್ಗೆ ಅನುಮಾನ ಚಿಗುರಿದರೆ ಏನು ಮಾಡಬೇಕು?

12 ‘ಯೆಹೋವನು ಹೀಗೆ ಮಾಡಿದ್ದು ಸರಿನಾ? ಯಾಕೆ ಹಾಗೆ ಮಾಡಲಿಲ್ಲ?’ ಅಂತ ನಮ್ಮ ಅಪರಿಪೂರ್ಣ ಹೃದಯ ಅನುಮಾನಿಸಿದರೆ ಏನು ಮಾಡೋದು? ಹಾಗೆಲ್ಲಾದರೂ ಆದರೆ ಅದು ದಡ್ಡತನ ಅನ್ನೋದನ್ನ ನೆನಪಿಡಿ. ಜ್ಞಾನೋಕ್ತಿ 19:3ರ ಪರಿಶುದ್ಧ ಬೈಬಲ್‌ * ಭಾಷಾಂತರ ಹೀಗೆ ಹೇಳುತ್ತೆ: “ಮೂಢನ ಮೂಢತನವು ಅವನ ಜೀವನವನ್ನೇ ನಾಶಪಡಿಸುತ್ತದೆ. ಆದರೆ ಅವನು ದೂಷಿಸುವುದು ಯೆಹೋವನನ್ನೇ.” ಇದನ್ನು ನಾವು ಮನಸ್ಸಿನಲ್ಲಿಡೋಣ. ನಮಗೆ ಆಶಾಭಂಗವಾದಾಗ ಯೆಹೋವನ ಮೇಲೆ ಯಾವತ್ತೂ ರೇಗದಿರಲು ಈಗ ಐದು ಅಂಶಗಳನ್ನು ಪರಿಗಣಿಸೋಣ.

13 ಯೆಹೋವನೊಟ್ಟಿಗಿನ ನಿಮ್ಮ ಸಂಬಂಧವನ್ನು ಅಲಕ್ಷಿಸಬೇಡಿ. ನಾವು ಯೆಹೋವನೊಂದಿಗೆ ಆಪ್ತ ಸಂಬಂಧ ಇಟ್ಟುಕೊಂಡರೆ ಆತನ ವಿರುದ್ಧ ರೇಗುವ ಅಪರಿಪೂರ್ಣ ಪ್ರವೃತ್ತಿಯನ್ನು ಜಯಿಸಬಹುದು. (ಜ್ಞಾನೋಕ್ತಿ 3:5, 6 ಓದಿ.) ನಾವು ಯೆಹೋವನನ್ನು ನಂಬಬೇಕು. ನಮ್ಮ ಬಗ್ಗೆಯೇ ಯೋಚಿಸುವುದನ್ನು ಮತ್ತು ನಮ್ಮ ಯೋಚನೆಯೇ ಸರಿಯೆಂದು ಸಮರ್ಥಿಸುವುದನ್ನು ತಡೆಯಬೇಕು. (ಜ್ಞಾನೋ. 3:7; ಪ್ರಸಂ. 7:16) ಹೀಗೆ ಮಾಡಿದರೆ ಮಾತ್ರ ಕೆಟ್ಟದ್ದೇನಾದರೂ ನಡೆದರೆ ಅದಕ್ಕೆ ಯೆಹೋವನು ಕಾರಣ ಅಂತ ನಾವು ಹೇಳುವುದಿಲ್ಲ.

14, 15. ಇತರರ ನಕಾರಾತ್ಮಕ ಮಾತುಗಳು ನಮ್ಮನ್ನು ಪ್ರಭಾವಿಸಬಾರದಾದರೆ ನಾವೇನು ಮಾಡಬೇಕು?

14 ನಕಾರಾತ್ಮಕ ಮಾತುಗಳು ನಿಮ್ಮನ್ನು ಪ್ರಭಾವಿಸದಂತೆ ನೋಡಿಕೊಳ್ಳಿ. ತಮ್ಮನ್ನು ವಾಗ್ದತ್ತ ದೇಶಕ್ಕೆ ಯೆಹೋವನು ಖಂಡಿತ ನಡೆಸುವನು ಎಂದು ನಂಬಲು ಮೋಶೆಯ ಸಮಯದಲ್ಲಿದ್ದ ಇಸ್ರಾಯೇಲ್ಯರಿಗೆ ಅನೇಕ ಕಾರಣಗಳಿದ್ದವು. (ಕೀರ್ತ. 78:43-53) ಆದರೆ ಹತ್ತು ಜನ ಅಪನಂಬಿಗಸ್ತ ಗೂಢಚಾರರ ನಕಾರಾತ್ಮಕ ವರದಿಯನ್ನು ನಂಬಿ ಅವರು ಯೆಹೋವನ “ಭುಜಬಲವನ್ನು ಮರೆತುಬಿಟ್ಟರು.” (ಕೀರ್ತ. 78:42) ನಾವು ಯೆಹೋವನ ಕಾರ್ಯಗಳನ್ನು, ಆತನು ನಮಗಾಗಿ ಮಾಡಿರುವ ಒಳ್ಳೇ ವಿಷಯಗಳನ್ನು ಮನನಮಾಡಿದರೆ ಖಂಡಿತ ಆತನ ಜತೆಗಿನ ಆಪ್ತತೆ ಹೆಚ್ಚುತ್ತೆ. ಆಗ ಬೇರೆಯವರ ನಕಾರಾತ್ಮಕ ಮಾತುಗಳು ನಮ್ಮ ಮತ್ತು ಯೆಹೋವನ ಮಧ್ಯೆ ಬಿರುಕನ್ನು ತರುವುದಿಲ್ಲ.—ಕೀರ್ತ. 77:11, 12.

15 ನಮ್ಮ ಜೊತೆ ವಿಶ್ವಾಸಿಗಳ ಬಗ್ಗೆ ನಮಗೆ ನಕಾರಾತ್ಮಕ ಭಾವನೆಗಳಿರುವುದಾದರೆ? ಆಗ ನಮ್ಮ ಮತ್ತು ಯೆಹೋವನ ಸಂಬಂಧಕ್ಕೆ ಹೊಡೆತಬೀಳುವ ಸಾಧ್ಯತೆ ಇದೆ. (1 ಯೋಹಾ. 4:20) ಇಸ್ರಾಯೇಲ್ಯರು ಆರೋನನ ನೇಮಕದ ಮತ್ತು ಸ್ಥಾನದ ಬಗ್ಗೆ ಪ್ರಶ್ನಿಸಿದಾಗ ಯೆಹೋವನು ಅದನ್ನು ತನ್ನ ವಿರುದ್ಧ ಗುಣುಗುಟ್ಟಿದಂತೆ ವೀಕ್ಷಿಸಿದನು. (ಅರ. 17:10) ಅದೇರೀತಿ, ಇಂದು ತನ್ನ ಸಂಘಟನೆಯ ಭೂಭಾಗವನ್ನು ನಿರ್ದೇಶಿಸಲು ಯೆಹೋವನು ಉಪಯೋಗಿಸುತ್ತಿರುವವರ ವಿರುದ್ಧ ನಾವು ಗೊಣಗಿದರೆ, ಅದು ಯಾರ ವಿರುದ್ಧ ಗೊಣಗಿದಂತೆ?—ಇಬ್ರಿ. 13:7, 17.

16, 17. ಸಮಸ್ಯೆ ಬಂದಾಗ ನಾವೇನನ್ನು ನೆನಪಿಡಬೇಕು?

16 ನಮ್ಮ ಸಮಸ್ಯೆಗಳಿಗೆ ಯೆಹೋವನು ಕಾರಣನಲ್ಲ ಎಂದು ನೆನಪಿಡಿ. ಯೆಶಾಯನ ಸಮಯದಲ್ಲಿ ಇಸ್ರಾಯೇಲ್ಯರು ತನ್ನಿಂದ ದೂರ ಹೋಗಿದ್ದರೂ ಅವರಿಗೆ ಸಹಾಯ ಮಾಡುವ ಮನಸ್ಸು ಯೆಹೋವನಿಗಿತ್ತು. (ಯೆಶಾ. 1:16-19) ನಮಗೆ ಎಂಥದ್ದೇ ಸಮಸ್ಯೆ ಇದ್ದರೂ ಸರಿ, ಯೆಹೋವನು ನಮಗಾಗಿ ಚಿಂತಿಸುತ್ತಾನೆ ಮತ್ತು ಸಹಾಯಮಾಡಲು ಕಾಯುತ್ತಿದ್ದಾನೆ ಅನ್ನೋದನ್ನ ನಾವು ಎಂದಿಗೂ ಮರೆಯಬಾರದು. (1 ಪೇತ್ರ 5:7) ‘ತಾಳಿಕೊಳ್ಳಲು ಶಕ್ತರಾಗುವಂತೆ ನಿಮಗೆ ಬಲ ಒದಗಿಸುತ್ತೇನೆ’ ಅಂತ ಆತನು ಮಾತು ಕೊಟ್ಟಿದ್ದಾನೆ.—1 ಕೊರಿಂ. 10:13.

17 ನಂಬಿಗಸ್ತ ಯೋಬನಿಗಾದಂತೆ ನಮಗೂ ಯಾವುದಾದರೊಂದು ರೀತಿಯಲ್ಲಿ ಅನ್ಯಾಯದ ಕಾವು ತಟ್ಟಿದರೆ ಈ ವಿಷಯವನ್ನು ನಾವು ನೆನಪಿನಲ್ಲಿಡಬೇಕು. ಆ ಅನ್ಯಾಯಕ್ಕೆ ಯೆಹೋವನು ಕಾರಣನಲ್ಲ. ಯೆಹೋವನು ಅನ್ಯಾಯವನ್ನು ದ್ವೇಷಿಸುತ್ತಾನೆ ಮತ್ತು ನೀತಿಯನ್ನು ಪ್ರೀತಿಸುತ್ತಾನೆ. (ಕೀರ್ತ. 33:5) ಯೋಬನ ಮಿತ್ರ ಏಲೀಹುವಿನಂತೆ ನಾವು ಹೀಗೆ ಹೇಳೋಣ: “ದೇವರು ಕೆಟ್ಟದ್ದನ್ನು ಮಾಡಾನೆಂಬ ಯೋಚನೆಯೂ ಸರ್ವಶಕ್ತನು ಅನ್ಯಾಯವನ್ನು ನಡಿಸಾನೆಂಬ ಭಾವನೆಯೂ ದೂರವಾಗಿರಲಿ!” (ಯೋಬ 34:10) ಯೆಹೋವನು ನಮಗೆ ಸಮಸ್ಯೆಗಳನ್ನು ಕೊಡಲ್ಲ, ಬದಲಿಗೆ ‘ಪ್ರತಿಯೊಂದು ಒಳ್ಳೆಯ ದಾನವನ್ನೂ ಪ್ರತಿಯೊಂದು ಪರಿಪೂರ್ಣ ವರವನ್ನೂ’ ಕೊಡುತ್ತಾನೆ.—ಯಾಕೋ. 1:13, 17.

18, 19. ನಾವು ಯೆಹೋವನ ಬಗ್ಗೆ ಸಂದೇಹಪಡಬಾರದೇಕೆ? ಉದಾಹರಣೆ ಕೊಟ್ಟು ವಿವರಿಸಿ.

18 ಯೆಹೋವನ ಬಗ್ಗೆ ಯಾವತ್ತೂ ಸಂಶಯಪಡಬೇಡಿ. ಯೆಹೋವನು ಪರಿಪೂರ್ಣನು. ಆತನ ಆಲೋಚನೆಗಳು ನಮಗಿಂತ ತುಂಬ ತುಂಬ ಮಿಗಿಲು. (ಯೆಶಾ. 55:8, 9) ದೀನತೆ ನಮಲ್ಲಿರಬೇಕು. ಆಗ, ನಾವು ಆಲೋಚಿಸುವ ರೀತಿಗೆ ಒಂದು ಮಿತಿ ಇದೆ ಅನ್ನೋದನ್ನ ಒಪ್ಪಿಕೊಳ್ಳುತ್ತೇವೆ. (ರೋಮ. 9:20) ನಮಗೆ ಯಾವಾಗಲೂ ಪರಿಸ್ಥಿತಿಯ ಪೂರ್ತಿ ಚಿತ್ರಣ ಇರುವುದಿಲ್ಲ. ನಮ್ಮೆಲ್ಲರ ಜೀವನದಲ್ಲಿ ಈ ಜ್ಞಾನೋಕ್ತಿ ಸತ್ಯವಾಗಿರುತ್ತೆ: “ಮೊದಲು ವಾದಿಸುವವನು ನ್ಯಾಯವಾದಿ ಎಂದು ತೋರುವನು; ಪ್ರತಿವಾದಿ ಎದ್ದ ಮೇಲೆ ಅವನ ಪರೀಕ್ಷೆ ಆಗುವದು.”—ಜ್ಞಾನೋ. 18:17.

19 ಹೀಗೆ ಊಹಿಸಿಕೊಳ್ಳಿ. ನೀವು ತುಂಬ ಭರವಸೆಯಿಡುವ ಒಬ್ಬ ಸ್ನೇಹಿತನಿದ್ದಾನೆ. ಅವನು ಮಾಡಿದ ಯಾವುದೋ ಒಂದು ವಿಷಯ ಸ್ವಲ್ಪ ವಿಚಿತ್ರವೆಂಬಂತೆ ಅನಿಸುತ್ತದೆ ಅಥವಾ ಅವನದನ್ನು ಯಾಕೆ ಮಾಡಿದನು ಎಂದು ನಿಮಗೆ ಅರ್ಥವಾಗುತ್ತಿಲ್ಲ. ಅಂದ ಮಾತ್ರಕ್ಕೆ ಅವನು ತಪ್ಪು ಮಾಡಿದ್ದಾನೆಂಬ ನಿರ್ಣಯಕ್ಕೆ ಬಂದುಬಿಡುತ್ತೀರಾ? ಅಥವಾ ತುಂಬ ವರ್ಷಗಳಿಂದ ನೀವು ನೋಡುತ್ತಾ ಬಂದಿರುವ ನಿಮ್ಮ ಸ್ನೇಹಿತನು ಸರಿಯಾದದ್ದನ್ನೇ ಮಾಡಿರುತ್ತಾನೆ ಎಂಬ ಭರವಸೆ ತೋರುತ್ತೀರಾ? ಅಪರಿಪೂರ್ಣ ಸ್ನೇಹಿತನ ಮೇಲೇ ನೀವಿಷ್ಟು ಭರವಸೆಯಿಡುತ್ತೀರಾದರೆ, ಆಲೋಚನೆಗಳಲ್ಲಿ ಹಾಗೂ ಕ್ರಿಯೆಗಳಲ್ಲಿ ನಮಗಿಂತ ಎಷ್ಟೋ ಉನ್ನತನಾಗಿರುವ ನಮ್ಮ ತಂದೆ ಯೆಹೋವನ ಮೇಲೆ ಇನ್ನೆಷ್ಟು ಭರವಸೆಯಿರಬೇಕು!

20, 21. ನಮ್ಮ ಸಮಸ್ಯೆಗಳಿಗೆ ಯೆಹೋವನ ಮೇಲೆ ಯಾವತ್ತೂ ತಪ್ಪು ಹೊರಿಸಬಾರದೇಕೆ?

20 ತಪ್ಪು ನಿಜವಾಗಿ ಯಾರದ್ದು ಎಂದು ನೆನಪಿಡಿ. ಯಾಕೆ? ಕೆಲವೊಮ್ಮೆ ನಮ್ಮ ಸಮಸ್ಯೆಗಳಿಗೆ ನಾವೇ ಕಾರಣರಾಗಿರುತ್ತೇವೆ. ಅದನ್ನು ನಾವು ಒಪ್ಪಿಕೊಳ್ಳಬೇಕು. (ಗಲಾ. 6:7) ನಮ್ಮ ಸಮಸ್ಯೆಗಳಿಗೆ ಯೆಹೋವನ ಮೇಲೆ ತಪ್ಪುಹೊರಿಸಬಾರದು. ಏಕೆಂದು ಅರ್ಥಮಾಡಿಕೊಳ್ಳಲು ಈ ಉದಾಹರಣೆ ಗಮನಿಸಿ. ವೇಗವಾಗಿ ಓಡುವ ಸಾಮರ್ಥ್ಯವಿರುವ ಕಾರೊಂದು ಒಬ್ಬ ವ್ಯಕ್ತಿಯ ಬಳಿ ಇದೆ. ಅವನು ತಿರುವು ಇದ್ದಲ್ಲಿ ಆ ಕಾರನ್ನು ಸೂಚಿತ ಮಿತಿಗಿಂತ ಹೆಚ್ಚು ವೇಗದಲ್ಲಿ ಓಡಿಸಿ, ಒಂದು ಕಡೆ ಡಿಕ್ಕಿ ಹೊಡೆಯುತ್ತಾನೆ. ಈ ಅಪಘಾತಕ್ಕೆ ಆ ಕಾರಿನ ಉತ್ಪಾದಕನೇ ಕಾರಣ ಎಂದು ನಾವು ಹೇಳುತ್ತೇವಾ? ಇಲ್ಲ ಅಲ್ಲವೆ? ಹಾಗೆಯೇ ಯೆಹೋವನು ನಮಗೆ ಇಚ್ಛಾಸ್ವಾತಂತ್ರ್ಯ ಕೊಟ್ಟಿದ್ದಾನೆ. ಮಾತ್ರವಲ್ಲ ಅದನ್ನು ಬಳಸಿ ಹೇಗೆ ಸರಿಯಾದ ನಿರ್ಣಯಗಳನ್ನು ಮಾಡಬೇಕೆಂದು ಮಾರ್ಗದರ್ಶನವನ್ನೂ ಕೊಟ್ಟಿದ್ದಾನೆ. ಹಾಗಿದ್ದ ಮೇಲೆ ನಾವು ತಪ್ಪು ನಿರ್ಣಯ ಮಾಡಿ ನಮ್ಮ ಸೃಷ್ಟಿಕರ್ತನ ಮೇಲೆ ತಪ್ಪು ಹೊರಿಸುವುದು ಸರಿನಾ?

21 ಆದರೆ ಎಲ್ಲ ಸಮಸ್ಯೆಗಳಿಗೆ ನಾವೇ ಕಾರಣರಾಗಿರುವುದಿಲ್ಲ. ಕೆಲವೊಂದು ವಿಷಯಗಳು ‘ಕಾಲ ಹಾಗೂ ಮುಂಗಾಣದ ಘಟನೆಯಿಂದಾಗಿ’ ನಡೆಯುತ್ತವೆ. (ಪ್ರಸಂ. 9:11, NW) ಇದೆಲ್ಲದರ ನಡುವೆ ನಾವು ಒಂದು ವಿಷಯವನ್ನು ಮರೆಯಬಾರದು, ಏನೆಂದರೆ, ಕೆಟ್ಟತನಕ್ಕೆ ಮುಖ್ಯ ಕಾರಣ ಪಿಶಾಚನಾದ ಸೈತಾನನೇ. (1 ಯೋಹಾ. 5:19; ಪ್ರಕ. 12:9) ಅವನೇ ನಮ್ಮ ವೈರಿ. ಯೆಹೋವನಲ್ಲ.—1 ಪೇತ್ರ 5:8.

ಯೆಹೋವನೊಂದಿಗಿನ ಸಂಬಂಧ ನಿಮಗೆ ಅಮೂಲ್ಯವಾಗಿರಲಿ

22, 23. ಸಮಸ್ಯೆಗಳಿಂದಾಗಿ ನಾವು ನಿರುತ್ತೇಜನಗೊಂಡರೆ ಏನು ಮಾಡಬೇಕು?

22 ಕಷ್ಟ ಸಂಕಷ್ಟಗಳು ಬಂದಾಗ ಯೆಹೋಶುವ, ಕಾಲೇಬರನ್ನು ನೆನಪಿಸಿಕೊಳ್ಳಿ. ಈ ನಂಬಿಗಸ್ತ ಪುರುಷರು ಉಳಿದ ಹತ್ತು ಗೂಢಚಾರರಂತಿರದೆ ವಾಗ್ದತ್ತ ದೇಶದ ಕುರಿತು ಒಳ್ಳೇ ವರದಿ ತಂದರು. (ಅರ. 14:6-9) ಯೆಹೋವನಲ್ಲಿ ನಂಬಿಕೆ ತೋರಿಸಿದರು. ಹಾಗಿದ್ದರೂ ಉಳಿದ ಇಸ್ರಾಯೇಲ್ಯರೊಂದಿಗೆ ಅವರು 40 ವರ್ಷ ಅರಣ್ಯದಲ್ಲಿ ಅಲೆದಾಡಬೇಕಾಯಿತು. ಹಾಗಂತ ಯೆಹೋಶುವ ಮತ್ತು ಕಾಲೇಬ ಯೆಹೋವನ ಮೇಲೆ ಬೇಸರಗೊಂಡು, ಆತನು ತಮಗೆ ಅನ್ಯಾಯ ಮಾಡಿದ್ದಾನೆಂದು ದೂರಿದರೋ? ಇಲ್ಲ. ಅವರು ಯೆಹೋವನಲ್ಲಿ ಭರವಸೆಯಿಟ್ಟರು. ಇದಕ್ಕೆ ಅವರಿಗೆ ಯೆಹೋವನಿಂದ ಪ್ರತಿಫಲ ಸಿಕ್ಕಿತಾ? ಹೌದು. ಇಸ್ರಾಯೇಲ್‌ ಜನಾಂಗದ ಆ ಇಡೀ ತಲೆಮಾರಿನವರು ಅರಣ್ಯದಲ್ಲೇ ಸತ್ತರೂ ಯೆಹೋಶುವ, ಕಾಲೇಬ ವಾಗ್ದಾತ್ತ ದೇಶವನ್ನು ಪ್ರವೇಶಿಸಿದರು. (ಅರ. 14:30) ನಾವು ಕೂಡ ದೇವರ ಚಿತ್ತವನ್ನು ಮಾಡುವುದರಲ್ಲಿ “ದಣಿಯದಿದ್ದರೆ” ಯೆಹೋವನ ಆಶೀರ್ವಾದಕ್ಕೆ ಪಾತ್ರರಾಗುವೆವು!—ಗಲಾ. 6:9; ಇಬ್ರಿ. 6:10.

23 ನೀವು ಅನುಭವಿಸುತ್ತಿರುವ ಸಮಸ್ಯೆಗಳಿಂದಾಗಿ, ಇತರರ ಬಲಹೀನತೆಗಳಿಂದಾಗಿ ಅಥವಾ ಸ್ವಂತ ಕುಂದುಕೊರತೆಗಳಿಂದಾಗಿ ನಿರುತ್ಸಾಹಗೊಂಡರೆ ನೀವೇನು ಮಾಡುವಿರಿ? ಯೆಹೋವನ ಅತ್ಯದ್ಭುತ ಗುಣಗಳ ಮೇಲೆ ಮನಸ್ಸಿಡಿ. ಯೆಹೋವನು ನಿಮಗಾಗಿ ಇಟ್ಟಿರುವ ಸುಂದರ ಭವಿಷ್ಯತ್ತನ್ನು ಕಣ್ಮುಂದೆ ತಂದುಕೊಳ್ಳಿ. ‘ಯೆಹೋವನು ನನ್ನ ಜೀವನದಲ್ಲಿ ಇಲ್ಲದಿದ್ದರೆ ನನ್ನ ಗತಿ ಏನಾಗುತ್ತಿತ್ತು?’ ಎಂದು ನಿಮ್ಮನ್ನೇ ಕೇಳಿಕೊಳ್ಳಿ. ಆತನಿಗೆ ಯಾವಾಗಲೂ ಆಪ್ತರಾಗಿರಿ. ನಿಮ್ಮ ಹೃದಯ ಯೆಹೋವನ ಮೇಲೆ ಕುದಿಯುವಂತೆ ಯಾವತ್ತೂ ಬಿಡಬೇಡಿ.

[ಪಾದಟಿಪ್ಪಣಿ]

^ ಪ್ಯಾರ. 12 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.

[ಅಧ್ಯಯನ ಪ್ರಶ್ನೆಗಳು]

[ಪುಟ 10ರಲ್ಲಿರುವ ಚಿತ್ರ]

[ಪುಟ 12ರಲ್ಲಿರುವ ಚಿತ್ರ]

ನಕಾರಾತ್ಮಕ ಮಾತುಗಳು ನಿಮ್ಮ ಮೇಲೆ ಕೆಟ್ಟ ಪ್ರಭಾವ ಬೀರಬಲ್ಲವು (ಪ್ಯಾರ 7)

[ಪುಟ 14ರಲ್ಲಿರುವ ಚಿತ್ರ]

ಯೆಹೋಶುವ ಮತ್ತು ಕಾಲೇಬ ಯೆಹೋವನ ಮೇಲೆ ಭರವಸೆಯಿಟ್ಟದ್ದರಿಂದ ಆಶೀರ್ವಾದ ಪಡೆದರು (ಪ್ಯಾರ 22)