ಇತರರ ಅಗತ್ಯಗಳನ್ನು ಪೂರೈಸಲು ನಾವೇನು ಮಾಡಬಲ್ಲೆವು?
“ಚುನಾವಣೆಯ ಫಲಿತಾಂಶ ಹೊರಬಿದ್ದಾಗ ಭುಗಿಲೆದ್ದ ಹಿಂಸಾಚಾರದಿಂದಾಗಿ ಸಾವಿರಾರು ಯೆಹೋವನ ಸಾಕ್ಷಿಗಳು ತಮ್ಮ ಮನೆಗಳನ್ನು ಬಿಟ್ಟು ಓಡಿಹೋಗಬೇಕಾಯಿತು” ಎನ್ನುತ್ತಾರೆ ಅಭಿವೃದ್ಧಿಶೀಲ ದೇಶವೊಂದರಲ್ಲಿ ಕ್ರೈಸ್ತ ಹಿರಿಯರಾಗಿರುವ ಫ್ರಾನ್ಸ್‌ವಾ. “ಆಹಾರ, ಔಷಧದ ಕೊರತೆಬಿತ್ತು. ಅಲ್ಪಸ್ವಲ್ಪ ಸಿಗುತ್ತಿದ್ದದ್ದೂ ಕೈಗೆಟುಕಲಾಗದಷ್ಟು ದುಬಾರಿಯಾಯಿತು. ಬ್ಯಾಂಕ್‌ಗಳನ್ನು ಮುಚ್ಚಲಾಯಿತು. ಎಟಿಎಮ್‌ಗಳಲ್ಲಿದ್ದ ಹಣವೆಲ್ಲ ಖಾಲಿಯಾಯಿತು, ಕೆಲವೆಡೆ ಆ ಯಂತ್ರಗಳು ನಿಂತುಹೋದವು.”
ನಿರಾಶ್ರಿತ ಸಾಕ್ಷಿಗಳು ದೇಶದಾದ್ಯಂತ ರಾಜ್ಯ ಸಭಾಗೃಹಗಳಲ್ಲಿ ಸೇರಿಬಂದರು. ಬ್ರಾಂಚ್ ಆಫೀಸಿನ ಸಹೋದರರು ಅವರಿಗಾಗಿ ಹಣ, ತುರ್ತಾಗಿ ಬೇಕಾಗಿರುವ ಸಾಮಾನುಗಳನ್ನು ಕೂಡಲೆ ರವಾನಿಸಲು ಆರಂಭಿಸಿದರು. ಪ್ರತಿಪಕ್ಷಗಳು ರಸ್ತೆತಡೆಗಳನ್ನು ಹಾಕಿದ್ದರು. ಆದರೆ ಯೆಹೋವನ ಸಾಕ್ಷಿಗಳು ರಾಜಕೀಯವಾಗಿ ಕಟ್ಟುನಿಟ್ಟಾಗಿ ತಟಸ್ಥರಾಗಿರುತ್ತಾರೆಂದು ತಿಳಿದಿದ್ದ ಅವರು ಬ್ರಾಂಚ್ ವಾಹನಗಳನ್ನು ಹೆಚ್ಚಾಗಿ ತಡೆದು ನಿಲ್ಲಿಸುತ್ತಿರಲಿಲ್ಲ.
ಫ್ರಾನ್ಸ್‌ವಾ ಹೇಳಿದ್ದು: “ನಾವೊಂದು ರಾಜ್ಯ ಸಭಾಗೃಹಕ್ಕೆ ಹೋಗುತ್ತಿದ್ದಾಗ ಬಂದೂಕುಧಾರಿ ಸೈನಿಕರು ನಮ್ಮ ವ್ಯಾನ್ ಕಡೆಗೆ ಗುಂಡುಹಾರಿಸಿದರು. ಆ ಗುಂಡುಗಳು ನಮ್ಮ ಮಧ್ಯದಿಂದಲೇ ಹಾರಿಹೋದವು. ಸೈನಿಕನೊಬ್ಬನು ಬಂದೂಕು ಹಿಡಿದುಕೊಂಡು ನಮ್ಮೆಡೆಗೆ ಓಡಿಬರುತ್ತಿರುವುದನ್ನು ನೋಡಿ, ಕೂಡಲೆ ವ್ಯಾನನ್ನು ರಿವರ್ಸ್ ತೆಗೆದುಕೊಂಡು, ಟರ್ನ್ ಮಾಡಿ, ವೇಗವಾಗಿ ಓಡಿಸಿ ಬ್ರಾಂಚ್‌ಗೆ ವಾಪಸ್ಸಾದೆವು. ಜೀವಂತವಾಗಿ ಬಂದದ್ದಕ್ಕಾಗಿ ಯೆಹೋವನಿಗೆ ಕೃತಜ್ಞರಾಗಿದ್ದೆವು. ನಾವು ಹೋಗಬೇಕೆಂದಿದ್ದ ಆ ರಾಜ್ಯ ಸಭಾಗೃಹದಲ್ಲಿದ್ದ 130 ಸಹೋದರರು ಮರುದಿನ ಇನ್ನೊಂದು ಸುರಕ್ಷಿತ ತಾಣಕ್ಕೆ ಹೋದರು. ಕೆಲವರು ಬ್ರಾಂಚ್‌ಗೆ ಬಂದರು. ಪರಿಸ್ಥಿತಿ ಶಾಂತವಾಗುವ ವರೆಗೂ ನಾವು ಅವರ ಆಧ್ಯಾತ್ಮಿಕ, ಭೌತಿಕ ಅಗತ್ಯಗಳನ್ನು ಪೂರೈಸಿದೆವು.”
“ಆ ದೇಶದಾದ್ಯಂತ ಇರುವ ಸಹೋದರರು ತಮ್ಮ ಹೃದಯದಾಳದ ಕೃತಜ್ಞತೆ ವ್ಯಕ್ತಪಡಿಸುತ್ತಾ ಬ್ರಾಂಚ್‌ಗೆ ಅನೇಕ ಪತ್ರಗಳನ್ನು ಬರೆದರು. ಬೇರೆ ದೇಶಗಳಲ್ಲಿನ ಸಹೋದರರು ನೀಡಿದ ನೆರವು ಯೆಹೋವನ ಮೇಲಿದ್ದ ಅವರ ಭರವಸೆಯನ್ನು ಇನ್ನೂ ಹೆಚ್ಚಿಸಿತು” ಎನ್ನುತ್ತಾರೆ ಫ್ರಾನ್ಸ್‌ವಾ.
ನೈಸರ್ಗಿಕ ಹಾಗೂ ಮಾನವ ಚಟುವಟಿಕೆಗಳಿಂದಾದ ವಿಪತ್ತುಗಳ ಸಮಯದಲ್ಲಿ ಅಗತ್ಯದಲ್ಲಿರುವ ಸಹೋದರರಿಗೆ “ಬೆಚ್ಚಗಿಟ್ಟುಕೊಳ್ಳಿ, ಹೊಟ್ಟೆ ತುಂಬಿಸಿಕೊಳ್ಳಿ” ಎಂದು ನಾವು ಬಾಯಿಮಾತಲ್ಲಿ ಹೇಳುವುದಿಲ್ಲ. (ಯಾಕೋ. 2:15, 16) ಅವರ ಶಾರೀರಿಕ ಅಗತ್ಯಗಳನ್ನು ಪೂರೈಸಲಿಕ್ಕಾಗಿ ಹೆಜ್ಜೆ ತಕ್ಕೊಳ್ಳುತ್ತೇವೆ. ಒಂದನೇ ಶತಮಾನದಲ್ಲೂ ಹಾಗೆ ಮಾಡಲಾಯಿತು. ಕ್ಷಾಮ ಬರಲಿದೆ ಎಂಬ ಎಚ್ಚರಿಕೆ ದೊರೆತಾಗ “ಶಿಷ್ಯರಲ್ಲಿ ಪ್ರತಿಯೊಬ್ಬರೂ ಯೂದಾಯದಲ್ಲಿ ವಾಸಿಸುತ್ತಿದ್ದ ಸಹೋದರರಿಗೆ ತಮ್ಮ ಸಾಮರ್ಥ್ಯಕ್ಕನುಸಾರ ಪರಿಹಾರ ನಿಧಿಯನ್ನು ಕಳುಹಿಸಲು ನಿರ್ಧರಿಸಿದರು.”—ಅ. ಕಾ. 11:28-30.
ಯೆಹೋವನ ಸೇವಕರಾದ ನಾವು ಕಷ್ಟದಲ್ಲಿರುವವರಿಗೆ ಭೌತಿಕ ಸಹಾಯ ನೀಡಲು ಉತ್ಸುಕರಾಗಿದ್ದೇವೆ. ಆದರೆ ಜನರಿಗೆ ಆಧ್ಯಾತ್ಮಿಕ ಅಗತ್ಯವೂ ಇದೆ. (ಮತ್ತಾ. 5:3) ಇದರ ಪ್ರಜ್ಞೆ ಹುಟ್ಟಿಸಿ ಆ ಅಗತ್ಯವನ್ನು ಪೂರೈಸುವಂತೆ ಅವರಿಗೆ ನೆರವಾಗಲಿಕ್ಕಾಗಿಯೇ ಯೇಸು ತನ್ನ ಹಿಂಬಾಲಕರಿಗೆ ಶಿಷ್ಯರನ್ನಾಗಿ ಮಾಡುವ ನೇಮಕ ಕೊಟ್ಟನು. (ಮತ್ತಾ. 28:19, 20) ಆ ನೇಮಕವನ್ನು ಪೂರೈಸಲು ನಾವೆಲ್ಲರೂ ವ್ಯಕ್ತಿಗತವಾಗಿ ಬಹಳಷ್ಟು ಸಮಯ, ಶಕ್ತಿ, ಸಂಪತ್ತನ್ನೂ ಕೊಡುತ್ತೇವೆ. ಒಂದು ಸಂಘಟನೆಯಾಗಿ ನಾವು, ದಾನಮಾಡಲಾದ ಹಣದಲ್ಲಿ ಸ್ವಲ್ಪವನ್ನು ಭೌತಿಕ ನೆರವನ್ನು ಕೊಡಲಿಕ್ಕಾಗಿ ಬಳಸುತ್ತೇವಾದರೂ, ಮುಖ್ಯವಾಗಿ ಆ ದಾನಗಳನ್ನು ದೇವರ ರಾಜ್ಯಕ್ಕೆ ಸಂಬಂಧಿಸಿದ ಕೆಲಸಕ್ಕಾಗಿ ಮತ್ತು ಸುವಾರ್ತೆ ಹಬ್ಬಿಸಲಿಕ್ಕಾಗಿ ಬಳಸುತ್ತೇವೆ. ಹೀಗೆ ದೇವರ ಹಾಗೂ ನೆರೆಯವರ ಮೇಲೆ ನಮಗಿರುವ ಪ್ರೀತಿಯನ್ನು ತೋರಿಸುತ್ತೇವೆ.—ಮತ್ತಾ. 22:37-39.
ಲೋಕವ್ಯಾಪಕ ಕೆಲಸಕ್ಕೆ ಬೆಂಬಲ ನೀಡುವವರಿಗೆ ತಮ್ಮ ದಾನಗಳನ್ನು ಯೋಗ್ಯವಾಗಿ, ಅತ್ಯುತ್ತಮ ರೀತಿಯಲ್ಲಿ ಬಳಸಲಾಗುತ್ತಿದೆಯೆಂಬ ಖಾತ್ರಿ ಇರಲಿ. ಅಗತ್ಯದಲ್ಲಿರುವ ನಿಮ್ಮ ಸಹೋದರರಿಗೆ ನೆರವು ನೀಡಲು ನಿಮ್ಮಿಂದಾಗುತ್ತದೆಯೇ? ಶಿಷ್ಯರನ್ನಾಗಿ ಮಾಡುವ ಕೆಲಸವನ್ನು ಬೆಂಬಲಿಸುವ ಅಪೇಕ್ಷೆ ನಿಮಗಿದೆಯೇ? ಹಾಗಿದ್ದರೆ, ‘ಉಪಕಾರಮಾಡುವದಕ್ಕೆ ನಿಮ್ಮ ಕೈಲಾದಾಗ ಹೊಂದತಕ್ಕವರಿಗೆ ಅದನ್ನು ತಪ್ಪಿಸಬೇಡಿ.’—ಜ್ಞಾನೋ. 3:27.