ಜೀವನ ಕಥೆ
ಸೇವೆಯ ಸವಿನೆನಪುಗಳು
ಅದು 1947ರ ಒಂದು ಸಂಜೆ. ಎಲ್ ಸಾಲ್ವಡಾರ್ ದೇಶದ ಸ್ಯಾ೦ಟ ಆ್ಯನ ನಗರದ ಮಿಷನರಿ ಗೃಹದಲ್ಲಿ ಕಾವಲಿನಬುರುಜು ಅಧ್ಯಯನ ನಡೆಯುತ್ತಿತ್ತು. ಇದ್ದಕ್ಕಿದ್ದಂತೆ ಪುಂಡರು ಹೊರಗಿನಿಂದ ಮಿಷನರಿ ಗೃಹದೊಳಗೆ ಕಲ್ಲುಗಳನ್ನು ಎಸೆಯತೊಡಗಿದರು. ಅನಂತರ ಅಲ್ಲಿನ ಕ್ಯಾಥೊಲಿಕ್ ಪಾದ್ರಿಗಳು ಯೆಹೋವನ ಸಾಕ್ಷಿಗಳಿಗೆ ತೊಂದರೆಯನ್ನುಂಟು ಮಾಡಲು ಜನರನ್ನು ಕೂಡಿಸಿಕೊಂಡು ಬಂದರು. ಕೆಲವರ ಕೈಯಲ್ಲಿ ಟಾರ್ಚುಗಳು, ಇನ್ನೂ ಕೆಲವರ ಕೈಯಲ್ಲಿ ವಿಗ್ರಹಗಳು ಇದ್ದವು. ಎರಡು ತಾಸು ಅವರು ಬಿಡದೇ ದೊಡ್ಡ ದೊಡ್ಡ ಕಲ್ಲುಗಳನ್ನು ಬಿಸಾಡುತ್ತಾ ಇದ್ದರು. “ಕನ್ಯೆ ಮರಿಯಳು ಚಿರಂಜೀವಿಯಾಗಿರಲಿ, ಯೆಹೋವನು ಸಾಯಲಿ” ಎಂದು ಕೂಗುತ್ತಿದ್ದರು. ಅವರು ಇಷ್ಟೆಲ್ಲ ಮಾಡಿದ್ದು ಮಿಷನರಿಗಳನ್ನು ಹೆದರಿಸಿ ಊರಾಚೆ ಓಡಿಸಲಿಕ್ಕಾಗಿಯೇ. 67 ವರ್ಷಗಳ ಹಿಂದೆ ನಡೆದ ಈ ಘಟನೆ ಇನ್ನೂ ನನ್ನ ಕಣ್ಮುಂದೆ ಇದೆ. ಏಕೆಂದರೆ ಅಂದು ಕೂಟಕ್ಕಾಗಿ ಕೂಡಿಬಂದವರಲ್ಲಿ ನಾನೂ ಒಬ್ಬಳು. *
ಈ ಘಟನೆ ನಡೆದ 2 ವರ್ಷಗಳ ಹಿಂದೆ ಎವ್ಲೀನ್ ಟ್ರಾಬರ್ಟ್ ಮತ್ತು ನಾನು ವಾಚ್‍ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್‍ನ 4ನೇ ತರಗತಿಯಿಂದ ಪದವೀಧರರಾಗಿದ್ದೆವು. ನಮ್ಮಿಬ್ಬರಿಗೂ ಸ್ಯಾ೦ಟ ಆ್ಯನದಲ್ಲಿ ಸೇವೆ ಮಾಡುವ ನೇಮಕ ಸಿಕ್ಕಿತ್ತು. ಸುಮಾರು 29 ವರ್ಷಗಳ ನನ್ನ ಮಿಷನರಿ ಸೇವೆ ಆಗ ಆರಂಭವಾಯಿತು. ಅದನ್ನು ಚುಟುಕಾಗಿ ವಿವರಿಸುವ ಮುನ್ನ ಈ ಸೇವೆಯನ್ನು ಮಾಡಬೇಕೆಂಬ ತುಡಿತ ನನ್ನಲ್ಲಿ ಹೇಗೆ ಬಂತೆಂದು ತಿಳಿಸುವೆ.
ನನ್ನ ಕುಟುಂಬಕ್ಕೆ ಸತ್ಯದ ಪರಿಚಯ
ನಾನು ಹುಟ್ಟಿದ್ದು 1923ರಲ್ಲಿ. ಅಪ್ಪ ಜಾನ್ ಓಲ್ಸನ್ ಮತ್ತು ಅಮ್ಮ ಇವಾ ಓಲ್ಸನ್ ಆ ಸಮಯದಲ್ಲಿ ಅಮೆರಿಕದ ವಾಷಿಂಗ್ಟನ್‍ನ ಸ್ಪೊಕೇನ್‍ನಲ್ಲಿ ವಾಸಿಸುತ್ತಿದ್ದರು. ಅವರು ಲೂಥರನ್ ಚರ್ಚ್ನ ಸದಸ್ಯರಾಗಿದ್ದರು. ಆದರೂ ಚರ್ಚ್ ಕಲಿಸುತ್ತಿದ್ದ ನರಕದ ಬೋಧನೆಯನ್ನು ನಂಬುತ್ತಿರಲಿಲ್ಲ. ದೇವರು ಪ್ರೀತಿಸ್ವರೂಪಿ ಎಂದು ಅವರು ನಂಬುತ್ತಿದ್ದದರಿಂದ ಆ ಬೋಧನೆ ಅವರಿಗೆ ಸರಿ ಕಾಣಲಿಲ್ಲ. (1 ಯೋಹಾ. 4:8) ಅಪ್ಪ ಬೇಕರಿಯಲ್ಲಿ ಕೆಲಸಮಾಡುತ್ತಿದ್ದರು. ಅವರ ಸಹೋದ್ಯೋಗಿ ಒಬ್ಬರು ನರಕ ಅಂದರೆ ಯಾತನೆ ಕೊಡುವ ಸ್ಥಳ ಅಲ್ಲವೆಂದು ಬೈಬಲಿನಿಂದ ವಿವರಿಸಿದರು. ಸ್ವಲ್ಪ ಸಮಯದಲ್ಲೇ ಅಪ್ಪಅಮ್ಮ ಯೆಹೋವನ ಸಾಕ್ಷಿಗಳೊಂದಿಗೆ ಅಧ್ಯಯನ ಶುರುಮಾಡಿದರು. ಮರಣದ ನಂತರ ಏನಾಗುತ್ತದೆ ಎಂಬ ಬಗ್ಗೆ ಬೈಬಲ್ ನಿಜವಾಗಿಯೂ ಏನು ಬೋಧಿಸುತ್ತದೆಂದು ಕಲಿತರು.
ನನಗಾಗ 9 ವರ್ಷ. ಅಪ್ಪಅಮ್ಮ ಹೊಸದಾಗಿ ಕಲಿತ ಬೈಬಲ್ ಸತ್ಯಗಳ ಕುರಿತು ಉತ್ಸಾಹದಿಂದ ಮಾತಾಡುತ್ತಿದ್ದದ್ದು ನನಗಿನ್ನೂ ನೆನಪಿದೆ. ಸತ್ಯ ದೇವರ ಹೆಸರು ಯೆಹೋವ ಎಂದು ಕಲಿತಾಗ ಮತ್ತು ತ್ರಿಯೇಕ ಬೋಧನೆಯ ಗೊಂದಲದಿಂದ ಹೊರಬಂದಾಗಲಂತೂ ಅವರಿಗಾದ ಖುಷಿ ಹೇಳಲಾಗದು. ಯೋಹಾ. 8:32) ಹಾಗಾಗಿ ಬೈಬಲ್ ಅಧ್ಯಯನ ಅಂದರೆ ನನಗೆ ಯಾವಾಗಲೂ ಖುಷಿ, ‘ಬೋರ್’ ಅನಿಸುತ್ತಿರಲಿಲ್ಲ. ನಾಚಿಕೆ ಸ್ವಭಾವ ನನಗಿದ್ದರೂ ಅಪ್ಪಅಮ್ಮ ಜೊತೆ ಸಾರಲು ಹೋಗುತ್ತಿದ್ದೆ. ಅವರಿಬ್ಬರು 1934ರಲ್ಲಿ ದೀಕ್ಷಾಸ್ನಾನ ಪಡೆದರು. ನಾನು 1939ರಲ್ಲಿ 16ನೇ ವಯಸ್ಸಿನಲ್ಲಿ ದೀಕ್ಷಾಸ್ನಾನ ಪಡೆದು ಅವರೊಂದಿಗೆ ಸೇವೆ ಮುಂದುವರಿಸಿದೆ.
ನಾನು ಬೈಬಲಿನ ಅಮೂಲ್ಯ ಬೋಧನೆಗಳನ್ನು ಸ್ಪಂಜಿನಂತೆ ಹೀರಿಕೊಳ್ಳುತ್ತಿದ್ದೆ. ‘ನಮ್ಮನ್ನು ಬಿಡುಗಡೆ ಮಾಡುವ ಸತ್ಯದ’ ಕುರಿತು ಕಲಿಯುತ್ತಾ ಹೋದೆ. (ಜುಲೈ 1940ರಲ್ಲಿ ನಾವು ನಮ್ಮ ಮನೆ ಮಾರಿ ಐಡಹೋ ರಾಜ್ಯದ ಕೊಯುರ್ ಡಿ-ಎಲನ್ ಎಂಬಲ್ಲಿ ಹೋಗಿ ಮೂವರೂ ಪಯನೀಯರ್ ಸೇವೆ ಆರಂಭಿಸಿದೆವು. ಅಲ್ಲಿ ನಾವು ಬಾಡಿಗೆಗಿದ್ದ ಮನೆ ಒಂದನೇ ಅಂತಸ್ತಿನಲ್ಲಿತ್ತು. ಕೆಳಗೆ ಕಾರ್ ರಿಪೇರಿ ಮಾಡುವ ಗ್ಯಾರೆಜ್ ಇತ್ತು. ಕೂಟಗಳು ನಮ್ಮ ಮನೆಯಲ್ಲೇ ನಡೆಯುತ್ತಿದ್ದವು. ಆ ಸಮಯದಲ್ಲಿ ಕೆಲವೇ ಸಭೆಗಳಿಗೆ ಸ್ವಂತ ರಾಜ್ಯ ಸಭಾಗೃಹವಿತ್ತು. ಆದ್ದರಿಂದ ಹೆಚ್ಚಿನವರು ಮನೆಗಳಲ್ಲಿ ಅಥವಾ ಬಾಡಿಗೆ ಕೋಣೆಗಳಲ್ಲಿ ಕೂಟಗಳನ್ನು ನಡೆಸುತ್ತಿದ್ದರು.
1941ರಲ್ಲಿ ನಾವು ಕುಟುಂಬವಾಗಿ ಮಿಸೌರಿ ರಾಜ್ಯದ ಸೇಂಟ್ ಲೂಯಿಯಲ್ಲಿ ನಡೆದ ಸಮ್ಮೇಳನಕ್ಕೆ ಹಾಜರಾದೆವು. ಭಾನುವಾರದ ಕಾರ್ಯಕ್ರಮ ಮಕ್ಕಳಿಗೆ ಮೀಸಲಾಗಿದ್ದ ಕಾರಣ ಅದನ್ನು “ಮಕ್ಕಳ ದಿನ” ಎಂದು ಕರೆಯಲಾಯಿತು. 5ರಿಂದ 18ವರ್ಷದೊಳಗಿನ ಮಕ್ಕಳೆಲ್ಲರೂ ವೇದಿಕೆಯ ಎದುರು ಕುಳಿತುಕೊಳ್ಳಬೇಕಿತ್ತು. ಸಹೋದರ ಜೋಸೆಫ್ ಎಫ್. ರದರ್‌ಫರ್ಡ್ ತಮ್ಮ ಭಾಷಣದ ಕೊನೆಯಲ್ಲಿ ನಮ್ಮನ್ನು ಉದ್ದೇಶಿಸಿ, “ದೇವರಿಗೂ ಆತನು ನೇಮಿಸಿದ ರಾಜನಿಗೂ ವಿಧೇಯತೆ ತೋರಿಸಲು ಒಪ್ಪಿರುವ . . . ಮಕ್ಕಳೆಲ್ಲರೂ ದಯವಿಟ್ಟು ಎದ್ದು ನಿಲ್ಲಿ!” ಎಂದು ಹೇಳಿದರು. ನಾವೆಲ್ಲರೂ ನಿಂತೆವು. ಆಗ ಸಹೋದರರು “ನೋಡಿರಿ, ರಾಜ್ಯದ ಬಗ್ಗೆ ಸಾಕ್ಷಿನೀಡುವ 15,000 ಹೊಸ ಸಾಕ್ಷಿಗಳು!” ಎಂದು ಘೋಷಿಸಿದರು. ನನ್ನ ಇಡೀ ಜೀವನವನ್ನು ಪಯನೀಯರ್ ಸೇವೆಗೆ ಮುಡುಪಾಗಿಡುವ ನನ್ನ ನಿರ್ಣಯ ಆ ಕ್ಷಣ ಇನ್ನೂ ಗಟ್ಟಿಯಾಯಿತು.
ನಮ್ಮ ಕುಟುಂಬಕ್ಕೆ ಸಿಕ್ಕಿದ ನೇಮಕ
ಆ ಸಮ್ಮೇಳನ ಹಾಜರಾಗಿ ಕೆಲವು ತಿಂಗಳ ನಂತರ ಅಪ್ಪಅಮ್ಮ ಮತ್ತು ನಾನು ದಕ್ಷಿಣ ಕ್ಯಾಲಿಫೋರ್ನಿಯಕ್ಕೆ ಹೋದೆವು. ಅಲ್ಲಿನ ಆಕ್ಸ್‌ನರ್ಡ್ ನಗರದಲ್ಲಿ ಒಂದು ಸಭೆ ಆರಂಭಿಸುವುದು ನಮ್ಮ ನೇಮಕವಾಗಿತ್ತು. ಅಲ್ಲಿ ನಾವು ವಾಸಿಸುತ್ತಿದ್ದ ಮೋಟಾರು ಮನೆಯಲ್ಲಿ ಇದ್ದದ್ದು ಒಂದೇ ಮಂಚ. ಊಟ ಮಾಡಲು ಬಳಸುತ್ತಿದ್ದ ಟೇಬಲ್ ರಾತ್ರಿ ನನ್ನ ಮಂಚವಾಗುತ್ತಿತ್ತು. ಮೊದಲೆಲ್ಲ ನನಗೇ ಅಂತ ಮಲಗುವ ಕೋಣೆ ಇತ್ತು. ಆ ಸನ್ನಿವೇಶಕ್ಕೂ ಈಗಿನ ಸನ್ನಿವೇಶಕ್ಕೂ ತುಂಬ ವ್ಯತ್ಯಾಸ!
ಕ್ಯಾಲಿಫೋರ್ನಿಯಕ್ಕೆ ಬರುವ ಸ್ವಲ್ಪ ಮುಂಚೆ ಅಂದರೆ 1941, ಡಿಸೆಂಬರ್ 7ರಂದು ಜಪಾನ್ ದೇಶವು ಹವಾಯಿಯ ಪರ್ಲ್ ಬಂದರಿನ ಮೇಲೆ ದಾಳಿಮಾಡಿತ್ತು. ಮರುದಿನ ಅಮೆರಿಕ ಎರಡನೇ ಮಹಾ ಯುದ್ಧಕ್ಕಿಳಿಯಿತು. ಕ್ಯಾಲಿಫೋರ್ನಿಯದ ಸಮುದ್ರ ತೀರದಲ್ಲಿ ಗಸ್ತು ತಿರುಗುತ್ತಿದ್ದ ಜಪಾನಿನ ಯುದ್ಧನೌಕೆಗಳು ಭೂಪ್ರದೇಶದ ಮೇಲೆ ದಾಳಿ ಮಾಡುವುದನ್ನು ತಡೆಯಲು ಎಲ್ಲೆಡೆ ಕತ್ತಲಿರಬೇಕೆಂದು ಅಧಿಕಾರಿಗಳು ಆದೇಶ ಹೊರಡಿಸಿದರು. ಹಾಗಾಗಿ ನಾವು ರಾತ್ರಿಯಿಡೀ ದೀಪ ಉರಿಸಬಾರದಿತ್ತು.
ಕೆಲವು ತಿಂಗಳ ನಂತರ ಅಂದರೆ 1942ರ ಸೆಪ್ಟೆಂಬರ್‌ನಲ್ಲಿ ನಾವು ಒಹಾಯೋದ ಕ್ಲೀವ್‌ಲ್ಯಾಂಡ್‍ನಲ್ಲಿ ನಡೆದ ‘ಹೊಸ ಲೋಕದ ದೇವಪ್ರಭುತ್ವ ಸಮ್ಮೇಳನ’ಕ್ಕೆ ಹಾಜರಾದೆವು. ಅಲ್ಲಿ ಸಹೋದರ ನೇತನ್ ಎಚ್. ನಾರ್‌ರವರು “ಶಾಂತಿ—ಬಾಳುವುದೋ?” ಎಂಬ ಶೀರ್ಷಿಕೆಯುಳ್ಳ ಭಾಷಣ ನೀಡಿದ್ದು ನನಗಿನ್ನೂ ನೆನಪಿದೆ. ಆ ಭಾಷಣದಲ್ಲಿ ಪ್ರಕಟನೆ 17ನೇ ಅಧ್ಯಾಯವನ್ನು ಚರ್ಚಿಸಲಾಯಿತು. ಒಂದು “ಕಾಡುಮೃಗವು ಮೊದಲು ಇತ್ತು, ಈಗ ಇಲ್ಲ, ಆದರೂ ಅಗಾಧ ಸ್ಥಳದಿಂದ ಇನ್ನೇನು ಏರಿಬರಲಿಕ್ಕಿದೆ” ಎಂದು ಅಲ್ಲಿ ತಿಳಿಸಲಾಗಿದೆ. (ಪ್ರಕ. 17:8, 11) ಆ “ಕಾಡುಮೃಗ” ಜನಾಂಗ ಸಂಘವಾಗಿದೆ ಮತ್ತು 1939ರಲ್ಲಿ ಅದು ಅಸ್ತಿತ್ವದಲ್ಲಿ ಇಲ್ಲದೆ ಹೋಯಿತು ಎಂದು ಸಹೋದರ ನಾರ್ ವಿವರಿಸಿದರು. ಅದಕ್ಕೆ ಬದಲಾಗಿ ಬೇರೊಂದು ಸಂಘಟನೆ ಅಧಿಕಾರಕ್ಕೆ ಬರುವುದು ಮತ್ತು ಆ ಬಳಿಕ ಒಂದಷ್ಟು ಮಟ್ಟಿಗೆ ಶಾಂತಿ ಇರಲಿದೆ ಎಂದು ಸಹ ಅವರು ಘೋಷಿಸಿದರು. ಅದರಂತೆ ಆಯಿತು. 1945ರಲ್ಲಿ ಎರಡನೇ ಮಹಾ ಯುದ್ಧ ಕೊನೆಗೊಂಡಿತು.. ಅದರ ನಂತರ ಜನಾಂಗ ಸಂಘವು ಹೋಗಿ ವಿಶ್ವ ಸಂಸ್ಥೆ ಅಧಿಕಾರಕ್ಕೆ ಬಂತು. ಆಗ ಯೆಹೋವನ ಸಾಕ್ಷಿಗಳು ಭೂಮಿಯೆಲ್ಲೆಡೆ ಸಾಕ್ಷಿಕಾರ್ಯವನ್ನು ವಿಸ್ತರಿಸಲು ಆರಂಭಿಸಿದರು. ಆಗಿನಿಂದ ಸಾರುವ ಕೆಲಸ ಬಹಳಷ್ಟು ವೃದ್ಧಿ ಕಾಣುತ್ತಿದೆ.
ಮುಂದೇನಾಗಲಿದೆ ಎನ್ನುವುದನ್ನು ಗ್ರಹಿಸಲು ನನಗೆ ಆ ಪ್ರವಾದನೆ ಸಹಾಯ ಮಾಡಿತು. ಗಿಲ್ಯಡ್ ಶಾಲೆ ಮರುವರ್ಷ ಆರಂಭವಾಗಲಿದೆ ಎಂದು ಪ್ರಕಟನೆ ಮಾಡಿದಾಗ ಮಿಷನರಿ ಸೇವೆಗೆ ಇಳಿಯಬೇಕೆಂಬ ತೀವ್ರ ಆಸೆ ನನ್ನಲ್ಲಿ ಚಿಗುರೊಡೆಯಿತು. 1943ರಲ್ಲಿ ನಾನು ಆರೆಗಾನ್ ರಾಜ್ಯದ ಪೋರ್ಟಲೆಂಡ್ ನಗರದಲ್ಲಿ ಪಯನೀಯರ್ ಸೇವೆ ಮಾಡುವ ನೇಮಕ ಪಡೆದೆ. ಆ ಸಮಯದಲ್ಲಿ ನಾವು ಮನೆಮನೆ ಸೇವೆಯಲ್ಲಿ ಫೋನೋಗ್ರಾಫನ್ನು ನುಡಿಸಿ ಮನೆಯವರಿಗೆ ರಾಜ್ಯಸಂದೇಶವನ್ನು ಕೇಳಿಸುತ್ತಿದ್ದೆವು. ಬಳಿಕ
ದೇವರ ರಾಜ್ಯದ ಕುರಿತು ತಿಳಿಸುವ ಬೈಬಲ್ ಸಾಹಿತ್ಯವನ್ನು ನೀಡುತ್ತಿದ್ದೆವು. ಆ ವರ್ಷವಿಡೀ ನನಗೆ ಮನಸ್ಸಲ್ಲಿ ಮಿಷನರಿ ಸೇವೆಯದ್ದೇ ಯೋಚನೆ.1944ರಲ್ಲಿ ನನ್ನ ನೆಚ್ಚಿನ ಗೆಳತಿ ಎವ್ಲೀನ್ ಟ್ರಾಬರ್ಟ್ ಜೊತೆಯಲ್ಲಿ ಗಿಲ್ಯಡ್ ಶಾಲೆಗೆ ಹಾಜರಾಗಲು ಆಮಂತ್ರಣ ಸಿಕ್ಕಿದಾಗ ನಾನು ರೋಮಾಂಚನಗೊಂಡೆ. ಐದು ತಿಂಗಳ ಆ ತರಬೇತಿಯಲ್ಲಿ ನಮ್ಮ ವೈಯಕ್ತಿಕ ಬೈಬಲ್ ಅಧ್ಯಯನವನ್ನು ಆಸಕ್ತಿಕರವಾಗಿ, ಆನಂದಕರವಾಗಿ ಮಾಡುವುದು ಹೇಗೆಂದು ಶಾಲೆಯ ಶಿಕ್ಷಕರು ತೋರಿಸಿಕೊಟ್ಟರು. ಅವರಲ್ಲಿದ್ದ ದೀನತೆ ನನ್ನ ಮನಸ್ಪರ್ಶಿಸಿತು. ಉದಾಹರಣೆಗೆ ಕೆಲವೊಮ್ಮೆ ನಾವು ಊಟಕ್ಕೆ ಕೂತಾಗ ಆ ಸಹೋದರರು ನಮಗೆ ಊಟ ಬಡಿಸುತ್ತಿದ್ದರು. 1945ರ ಜನವರಿ 22ರಂದು ನಾವು ಪದವೀಧರರಾದೆವು.
ನನ್ನ ಮಿಷನರಿ ನೇಮಕ
ಲೀಯೋ ಮಹನ್ ಮತ್ತು ಅವರ ಪತ್ನಿ ಎಸ್ತೇರ್ ಮಹನ್‍ರ ಜೊತೆಗೆ ಎವ್ಲೀನ್ ಮತ್ತು ನನ್ನನ್ನು ಎಲ್ ಸಾಲ್ವಡಾರ್‌ಗೆ ನೇಮಿಸಲಾಯಿತು. 1946ರ ಜೂನ್‍ನಲ್ಲಿ ನಾವು ಅಲ್ಲಿ ಹೋದಾಗ ನಿಜಕ್ಕೂ ಹೊಲವು ‘ಕೊಯ್ಲಿಗೆ ಸಿದ್ಧವಾಗಿರುವುದನ್ನು’ ನೋಡಿದೆವು. (ಯೋಹಾ. 4:35) ನಾವು ಸೇವೆಯನ್ನು ಶುರುಮಾಡಿದಾಗ ಅಲ್ಲಿನ ಪಾದ್ರಿಗಳು ಕೋಪೋದ್ರಿಕ್ತರಾದರು. ಆರಂಭದಲ್ಲಿ ತಿಳಿಸಲಾದ ಘಟನೆಯು ನಡೆದದ್ದು ಈ ಕಾರಣದಿಂದಲೇ. ಅದಕ್ಕೆ ಒಂದು ವಾರ ಮುಂಚೆಯಷ್ಟೆ ಸ್ಯಾ೦ಟ ಆ್ಯನ ನಗರದಲ್ಲಿ ಪ್ರಪ್ರಥಮ ಸರ್ಕಿಟ್ ಸಮ್ಮೇಳನ ನಡೆದಿತ್ತು. ಸಾರ್ವಜನಿಕ ಭಾಷಣದ ಕುರಿತು ಆದಷ್ಟು ಎಲ್ಲೆಡೆ ಪ್ರಕಟಿಸಿದ್ದೆವು. ಫಲಿತಾಂಶವಾಗಿ ಆ ಭಾಷಣಕ್ಕೆ ಸುಮಾರು 500 ಮಂದಿ ಹಾಜರಾದರು. ನಮ್ಮ ಸಂತೋಷ ಮುಗಿಲು ಮುಟ್ಟಿತು. ಆದ್ದರಿಂದ ಪಾದ್ರಿಗಳು ಎಷ್ಟೇ ಬೆದರಿಕೆ ಹಾಕಿದರೂ ನಾವು ಹೆದರಿ ಓಡಿಹೋಗದೆ ಅಲ್ಲೇ ಇದ್ದು ಸಹೃದಯದ ಜನರಿಗೆ ಸಹಾಯ ಮಾಡಲು ಇನ್ನಷ್ಟು ದೃಢಮನಸ್ಸು ಮಾಡಿದೆವು. ಬೈಬಲನ್ನು ಓದದಂತೆ ಪಾದ್ರಿಗಳು ಜನರನ್ನು ಬೆದರಿಸಿದ್ದರು. ಮಾತ್ರವಲ್ಲ ಆ ಕಾಲದಲ್ಲಿ ಕೆಲವರಿಗೆ ಮಾತ್ರ ಬೈಬಲಿನ ಸ್ವಂತ ಪ್ರತಿಯನ್ನು ಪಡೆಯಲಿಕ್ಕೆ ಆಗುತ್ತಿತ್ತು. ಆದರೂ ಅಲ್ಲಿ ಎಷ್ಟೋ ಜನ ಸತ್ಯಕ್ಕಾಗಿ ಹಸಿದಿದ್ದರು. ಅವರಿಗೆ ಸತ್ಯದೇವರಾದ ಯೆಹೋವನ ಕುರಿತು ಮತ್ತು ಭೂಮಿಯನ್ನು ಪರದೈಸಾಗಿ ಮಾಡುವ ಆತನ ವಾಗ್ದಾನದ ಕುರಿತು ಕಲಿಸಲಿಕ್ಕಾಗಿ ನಾವು ಸ್ಪ್ಯಾನಿಷ್ ಭಾಷೆ ಕಲಿಯಲು ಪ್ರಯತ್ನ ಹಾಕಿದೆವು. ಆ ಶ್ರಮವನ್ನು ಅಲ್ಲಿನ ಜನರು ಗಣ್ಯಮಾಡಿದರು.
ನಾನು ಆರಂಭದಲ್ಲಿ ಬೈಬಲ್ ಅಧ್ಯಯನ ಮಾಡಿದವರಲ್ಲಿ ರೋಸಾ ಆಸೆನ್‌ಸ್ಯೋ ಒಬ್ಬರು. ಆಕೆ ವಿವಾಹವಾಗದೆ ಒಬ್ಬ ಪುರುಷನೊಂದಿಗೆ ಜೀವಿಸುತ್ತಿದ್ದಳು. ಆದರೆ ಬೈಬಲ್ ಅಧ್ಯಯನ ಶುರುಮಾಡಿದ ಬಳಿಕ ಅವನನ್ನು ಬಿಟ್ಟು ಬೇರೆಯಾದಳು. ತದನಂತರ ಆ ವ್ಯಕ್ತಿ ಕೂಡ ಬೈಬಲ್ ಅಧ್ಯಯನ ಮಾಡಿದನು. ಇಬ್ಬರೂ ಮದುವೆಯಾಗಿ ನಂತರ ದೀಕ್ಷಾಸ್ನಾನ ಪಡೆದರು. ಯೆಹೋವನಿಗೆ ಹುರುಪಿನ ಸಾಕ್ಷಿಗಳಾಗಿ ಸೇವೆ ಮಾಡಿದರು. ಸ್ಯಾ೦ಟ ಆ್ಯನ ನಗರದಲ್ಲಿ ಮೊತ್ತಮೊದಲು ಪಯನೀಯರ್ ಆದದ್ದು ರೋಸಾ. *
ಆಕೆಗೆ ಒಂದು ಚಿಕ್ಕ ದಿನಸಿ ಅಂಗಡಿ ಇತ್ತು. ಸೇವೆಗೆ ಹೋಗುತ್ತಿದ್ದಾಗ ರೋಸಾ ಅಂಗಡಿ ಮುಚ್ಚುತ್ತಿದ್ದಳು. ತನ್ನ ಅಗತ್ಯಗಳನ್ನು ಯೆಹೋವನು ಪೂರೈಸುವನೆಂಬ ಭರವಸೆ ಆಕೆಗಿತ್ತು. ಕೆಲವು ಗಂಟೆಗಳ ನಂತರ ಆಕೆ ಅಂಗಡಿ ತೆರೆಯುತ್ತಿದ್ದಾಗ ಗಿರಾಕಿಗಳು ಅಂಗಡಿಯನ್ನು ಮುತ್ತಿಕೊಳ್ಳುತ್ತಿದ್ದರು. ಮತ್ತಾಯ 6:33ರಲ್ಲಿರುವ ಮಾತು ಎಷ್ಟು ಸತ್ಯವೆಂಬುದನ್ನು ಆಕೆ ಸ್ವಂತ ಅನುಭವದಿಂದ ಕಂಡುಕೊಂಡಳು. ಮರಣದ ವರೆಗೆ ನಂಬಿಗಸ್ತಳಾಗಿ ಉಳಿದಳು.
ನಾವು ಒಟ್ಟು ಆರು ಮಿಷನರಿಗಳು ಒಂದು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೆವು. ಒಮ್ಮೆ ಸ್ಥಳೀಯ ಪಾದ್ರಿಯು ಮನೆಯ ಮಾಲೀಕನನ್ನು ಭೇಟಿಮಾಡಿ ಆ ಮನೆಯಿಂದ ನಮ್ಮನ್ನು ಹೊರಗಟ್ಟುವಂತೆ ಹೇಳಿದನು. ಇಲ್ಲದಿದ್ದರೆ ಮಾಲೀಕನನ್ನೂ ಅವನ ಹೆಂಡತಿಯನ್ನೂ ಚರ್ಚ್ನಿಂದ ಬಹಿಷ್ಕರಿಸುವುದಾಗಿ ಬೆದರಿಸಿದನು. ಖ್ಯಾತ ವ್ಯಾಪಾರಸ್ಥನಾಗಿದ್ದ ಮನೆಯ ಮಾಲೀಕನು ಈಗಾಗಲೇ ಆ ಪಾದ್ರಿಯ ನಡತೆಯಿಂದ ರೋಸಿಹೋಗಿದ್ದ. ಹಾಗಾಗಿ ಅವನ ಮಾತಿಗೆ ಬಗ್ಗಲಿಲ್ಲ. ಚರ್ಚ್ನಿಂದ ಹೊರಗೆ ಹಾಕಿದರೂ ತನಗೇನು ಚಿಂತೆಯಿಲ್ಲ ಎಂದೂ ಹೇಳಿಬಿಟ್ಟ. ಆದರೆ ನಮಗೆ ಎಷ್ಟು ಸಮಯ ಬೇಕಾದರೂ ಆ ಮನೆಯಲ್ಲಿ ಇರಬಹುದೆಂದು ಆಶ್ವಾಸನೆ ಕೊಟ್ಟ.
ಗಣ್ಯ ವ್ಯಕ್ತಿ ಸಾಕ್ಷಿಯಾದನು
ರಾಜಧಾನಿಯಾಗಿದ್ದ ಸಾನ್ ಸಾಲ್ವೆಡರ್‌ನಲ್ಲಿ ಇನ್ನೊಬ್ಬ ಮಿಷನರಿ ಸಹೋದರಿಯು ಬಾಲ್ಟಾಸರ್ ಪೆರ್ಲಾ ಎಂಬ ಇಂಜಿನಿಯರ್‌ರವರ ಹೆಂಡತಿಯೊಂದಿಗೆ ಬೈಬಲ್ ಅಧ್ಯಯನ ಮಾಡುತ್ತಿದ್ದರು. ಆ ವ್ಯಕ್ತಿ ಒಳ್ಳೇ ಮನಸ್ಸಿನವರು. ಧರ್ಮ ಗುರುಗಳ ಕಪಟತನ ನೋಡಿ ಎಷ್ಟು ಬೇಸತ್ತಿದ್ದರೆಂದರೆ ದೇವರಲ್ಲಿ ನಂಬಿಕೆಯನ್ನು ಕಳಕೊಂಡಿದ್ದರು. ಸಾನ್ ಸಾಲ್ವೆಡರ್‌ನಲ್ಲಿ ಬ್ರಾಂಚ್ ಆಫೀಸನ್ನು ಕಟ್ಟಿಸಲು ನಿರ್ಣಯಿಸಿದಾಗ ಬಾಲ್ಟಾಸರ್‌ರವರು ಸತ್ಯದಲ್ಲಿ ಇರಲಿಲ್ಲವಾದರೂ ಒಂಚೂರೂ ಹಣ ತಕ್ಕೊಳ್ಳದೆ ಅವರೇ ಕಟ್ಟಡದ ವಿನ್ಯಾಸ ಮಾಡಿ ಮುಂದೆ ನಿಂತು ಕಟ್ಟಿಸಿದರು.
ಆ ಸಮಯದಲ್ಲಿ ಅವರು ಯೆಹೋವನ ಜನರೊಂದಿಗೆ ಮಾಡಿದ ಸಹವಾಸದಿಂದ ಅವರಿಗೆ ಇದೇ ಸತ್ಯ ಧರ್ಮವೆಂದು ಖಚಿತವಾಯಿತು. 1955ರ ಜುಲೈ 22ರಂದು ಅವರು ದೀಕ್ಷಾಸ್ನಾನ ಪಡೆದರು. ಸ್ವಲ್ಪ ಸಮಯದ ನಂತರ ಅವರ ಹೆಂಡತಿ ಪೌಲಿನಾ ದೀಕ್ಷಾಸ್ನಾನ ಪಡೆದರು. ಅವರ ಇಬ್ಬರು ಮಕ್ಕಳು ಈಗಲೂ ಯೆಹೋವನಿಗೆ ನಂಬಿಗಸ್ತಿಕೆಯಿಂದ ಸೇವೆಮಾಡುತ್ತಿದ್ದಾರೆ. ಮಗ ಬಾಲ್ಟಾಸರ್ ಜೂನಿಯರ್ 49 ವರ್ಷಗಳಿಂದ ಬ್ರೂಕ್ಲಿನ್ ಬೆತೆಲ್‍ನಲ್ಲಿ ಸೇವೆಮಾಡುತ್ತಿದ್ದಾರೆ. ಪ್ರಗತಿಯ ಶಿಖರವೇರುತ್ತಿರುವ ಲೋಕವ್ಯಾಪಕ ಸಾರುವ ಕೆಲಸವನ್ನು ಬೆಂಬಲಿಸುತ್ತಿದ್ದಾರೆ ಹಾಗೂ ಈಗ ಅಮೆರಿಕದ ಬ್ರಾಂಚ್ ಕಮಿಟಿ ಸದಸ್ಯರಾಗಿ ಸೇವೆಮಾಡುತ್ತಿದ್ದಾರೆ. *
ನಾವು ಸಾನ್ ಸಾಲ್ವೆಡರ್‌ನಲ್ಲಿ ಅಧಿವೇಶನಗಳನ್ನು ನಡೆಸಲು ಯೋಜಿಸಿದಾಗ ಸಹೋದರ ಬಾಲ್ಟಾಸರ್ ಪೆರ್ಲಾ ಒಂದು ದೊಡ್ಡ ವ್ಯಾಯಾಮಶಾಲೆಯನ್ನು ಬಳಸಲಿಕ್ಕಾಗಿ ಅನುಮತಿ ಪಡೆಯಲು ಸಹಾಯ ಮಾಡಿದರು. ಆರಂಭದಲ್ಲಿ ಕೆಲವು ಭಾಗದ ಆಸನಗಳನ್ನಷ್ಟೆ ನಾವು ಬಳಿಸಿದೆವು. ಆದರೆ ನಂತರ ಯೆಹೋವನ ಆಶೀರ್ವಾದದಿಂದ ಅಧಿವೇಶನದ ಹಾಜರಿ ಎಷ್ಟು ಹೆಚ್ಚಾಯಿತೆಂದರೆ ಆ ವ್ಯಾಯಾಮಶಾಲೆಯಲ್ಲಿ ಜನರು ಕಿಕ್ಕಿರಿದರು. ಕೊನೆಗೆ ಅದೂ ಸಾಕಾಗದೆ ಹೋಯಿತು! ಅವೆಲ್ಲ ನಿಜಕ್ಕೂ ಉಲ್ಲಾಸದ ಸಮಯಗಳು! ನಾನು ಮುಂಚೆ ಅಧ್ಯಯನ ಮಾಡುತ್ತಿದ್ದ ಕೆಲವರನ್ನು ಅಲ್ಲಿ ಭೇಟಿಯಾಗುವ ಸದವಕಾಶ ಸಿಕ್ಕಿತು. ಅವರು ದೀಕ್ಷಾಸ್ನಾನ ಪಡೆದು ಈಗ ಬೇರೆಯವರಿಗೂ ದೀಕ್ಷಾಸ್ನಾನ ಪಡೆಯಲು ಸಹಾಯಮಾಡಿದ್ದರು. ಆ ವಿದ್ಯಾರ್ಥಿಗಳನ್ನು ನನಗೆ ಪರಿಚಯಿಸುತ್ತಿದ್ದಾಗ ಆಗುತ್ತಿದ್ದ ಸಂತೋಷ ಅಷ್ಟಿಷ್ಟಲ್ಲ. ನನಗೆ ಆಧ್ಯಾತ್ಮಿಕ ಮೊಮ್ಮಕ್ಕಳು ಸಿಕ್ಕಿದರು.
ಒಂದು ಸಮ್ಮೇಳನದಲ್ಲಿ ಒಬ್ಬ ಸಹೋದರನು ನನ್ನ ಹತ್ತಿರ ಬಂದು ‘ನಿಮ್ಮ ಬಳಿ ಕ್ಷಮೆಯಾಚಿಸಬೇಕು’ ಎಂದ. ನನಗೆ ಆಶ್ಚರ್ಯ! ಅವನು ಯಾರಂತ ಕೂಡ ನನಗೆ ಗೊತ್ತಿರಲಿಲ್ಲ. “ಸ್ಯಾ೦ಟ ಆ್ಯನ ನಗರದಲ್ಲಿ ನಿಮಗೆ ಕಲ್ಲೆಸದ ಹುಡುಗರಲ್ಲಿ ನಾನೂ ಒಬ್ಬನು” ಎಂದ. ಈಗವನು ನಮ್ಮ ಜೊತೆ ಸೇರಿ ಯೆಹೋವನನ್ನು ಆರಾಧಿಸುತ್ತಾನೆ. ನನ್ನ ಹೃದಯದಲ್ಲಿ ಸಂತೋಷದ ಕಡಲು ಉಕ್ಕಿ ಹರಿಯಿತು. ಆ ಸಹೋದರನೊಂದಿಗಿನ ಸಂಭಾಷಣೆಯು ಪೂರ್ಣಸಮಯದ ಸೇವೆಯೊಂದೇ ಜೀವನದಲ್ಲಿ ಅತಿ ಹೆಚ್ಚು ಪ್ರತಿಫಲ ಕೊಡುತ್ತದೆಂದು ಮನಗಾಣಿಸಿತು.
ನನ್ನ ಆಯ್ಕೆಗಳು ಸಂತೃಪ್ತಿ ತಂದಿವೆ
ಎಲ್ ಸಾಲ್ವಡಾರ್‌ನಲ್ಲಿ ನಾನು ಸುಮಾರು 29 ವರ್ಷ ಮಿಷನರಿ ಸೇವೆ ಮಾಡಿದೆ. ಮೊದಲು ಸ್ಯಾ೦ಟ ಆ್ಯನ ನಗರದಲ್ಲಿ, ನಂತರ
ಸನ್‌ಸೊನೆಟ್‍ನಲ್ಲಿ ಬಳಿಕ ಸಾನ್‌ಟಾ ಟೇಕ್ಲಾದಲ್ಲಿ, ಕೊನೆಗೆ ಸಾನ್ ಸಾಲ್ವಡಾರ್‌ನಲ್ಲಿ. 1975ರಲ್ಲಿ ನಾನು ತುಂಬ ಪ್ರಾರ್ಥನೆ ಮಾಡಿ ಯೋಚಿಸಿದ ಬಳಿಕ ಮಿಷನರಿ ನೇಮಕವನ್ನು ಬಿಟ್ಟು ಅಪ್ಪಅಮ್ಮ ಬಳಿ ಹಿಂತಿರುಗಲು ನಿರ್ಣಯಿಸಿದೆ. ಏಕೆಂದರೆ ನಂಬಿಗಸ್ತರಾಗಿದ್ದ ನನ್ನ ವೃದ್ಧ ಹೆತ್ತವರಿಗೆ ಸಹಾಯ ಬೇಕಿತ್ತು.1979ರಲ್ಲಿ ಅಪ್ಪ ತೀರಿಹೋದರು. ದಿನಕಳೆದಂತೆ ಅಮ್ಮ ತುಂಬ ನಿತ್ರಾಣರಾಗುತ್ತಿದ್ದರು. ಹತ್ತಿರವೇ ಇದ್ದು ಸಹಾಯ ಮಾಡುವ ಅಗತ್ಯವಿತ್ತು. ಎಂಟು ವರ್ಷದ ನಂತರ 94ನೇ ವಯಸ್ಸಲ್ಲಿ ಅಮ್ಮ ತೀರಿಕೊಂಡರು. ಆ ಸಮಯದಲ್ಲಿ ನಾನು ದೈಹಿಕವಾಗಿ, ಭಾವನಾತ್ಮಕವಾಗಿ ಬಳಲಿಹೋದೆ. ಒತ್ತಡ ಎಷ್ಟು ತೀವ್ರವಾಗಿತ್ತೆಂದರೆ ಅದರಿಂದ ಸರ್ಪಸುತ್ತು ಬಂತು. ಸಹಿಸಲಾಗದಷ್ಟು ನೋವು ಅನುಭವಿಸಿದೆ. ಆದರೆ ಪ್ರಾರ್ಥನೆ ನನಗೆ ಸಹಾಯ ಮಾಡಿತು. ಯೆಹೋವನ ಪ್ರೀತಿಯ ಹಸ್ತವು ನನ್ನನ್ನು ಆವರಿಸಿ ಮುಂದೆ ಸಾಗಲು ಬಲಕೊಟ್ಟಿತು. ಸಹನೆಯನ್ನು ಪರೀಕ್ಷಿಸಿದ ಆ ಕಷ್ಟವನ್ನು ತಾಳಿಕೊಂಡೆ. ‘ನರೆಬಂದಾಗಲೂ ನಿನ್ನನ್ನು ಹೊತ್ತು ಸಹಿಸಿ ನಿರ್ವಹಿಸುವೆನು’ ಎಂದು ಯೆಹೋವನು ನನಗೇ ಹೇಳಿದಂತಿತ್ತು.—ಯೆಶಾ. 46:4.
1990ರಲ್ಲಿ ನಾನು ವಾಷಿಂಗ್ಟನ್ ರಾಜ್ಯದ ಒಮ್ಯಾಕ್ ನಗರಕ್ಕೆ ಸ್ಥಳಾಂತರಿಸಿದೆ. ಸ್ಪ್ಯಾನಿಷ್ ಭಾಷಾ ಕ್ಷೇತ್ರದಲ್ಲಿ ಪುನಃ ಸೇವೆ ಮುಂದುವರಿಸಿದೆ. ನನ್ನ ಅನೇಕ ಬೈಬಲ್ ವಿದ್ಯಾರ್ಥಿಗಳು ದೀಕ್ಷಾಸ್ನಾನ ಪಡೆದರು. ಸ್ವಲ್ಪ ವರ್ಷಗಳ ನಂತರ ನಾನಿದ್ದ ಮನೆಯನ್ನು ನನ್ನಿಂದ ನೋಡಿಕೊಳ್ಳಲು ಆಗಲಿಲ್ಲ. ಆದ್ದರಿಂದ 2007ರ ನವೆಂಬರ್‌ನಲ್ಲಿ ಹತ್ತಿರದ ಚೆಲನ್ ಪಟ್ಟಣದಲ್ಲಿ ಚಿಕ್ಕ ಮನೆಗೆ ವಾಸಬದಲಾಯಿಸಿದೆ. ಅಲ್ಲಿನ ಸ್ಪ್ಯಾನಿಷ್ ಸಭೆಯವರು ಅವತ್ತಿ೦ದ ಇವತ್ತಿನ ವರೆಗೂ ನನ್ನನ್ನು ತುಂಬ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ನಾನು ಅವರಿಗೆ ಚಿರಋಣಿ. ಈ ಸಭೆಯಲ್ಲಿ ನಾನೊಬ್ಬಳೇ ವೃದ್ಧ ಸಾಕ್ಷಿಯಾಗಿರುವುದರಿಂದ ಇಲ್ಲಿನ ಸಹೋದರ ಸಹೋದರಿಯರು ಪ್ರೀತಿಯಿಂದ ನನ್ನನ್ನು ಅವರ ಅಜ್ಜಿಯಾಗಿ “ದತ್ತು” ತೆಗೆದುಕೊಂಡಿದ್ದಾರೆ.
ಯಾವುದೇ ಅಪಕರ್ಷಣೆಯಿಲ್ಲದೆ ಸೇವೆ ಮಾಡುವ ಉದ್ದೇಶದಿಂದ ಮದುವೆ, ಮಕ್ಕಳು ಬೇಡವೆಂದು ನಾನು ನಿರ್ಣಯಿಸಿದೆ. (1 ಕೊರಿಂ. 7:34, 35) ಆದರೂ ನನಗೆ ಅನೇಕ ಆಧ್ಯಾತ್ಮಿಕ ಮಕ್ಕಳು ಇದ್ದಾರೆ. ಈಗಿನ ಜೀವನದಲ್ಲಿ ನಮಗೆ ಎಲ್ಲವೂ ಇರಲು ಸಾಧ್ಯವಿಲ್ಲ. ಆದ್ದರಿಂದ ಯಾವುದಕ್ಕೆ ಮೊದಲ ಸ್ಥಾನ ಕೊಡಬೇಕೋ ಅದಕ್ಕೆ ಮೊದಲ ಸ್ಥಾನ ಕೊಟ್ಟೆ. ಅಂದರೆ ಪೂರ್ಣ ಹೃದಯದಿಂದ ಯೆಹೋವನ ಸೇವೆ ಮಾಡುವ ನನ್ನ ಸಮರ್ಪಣೆಗನುಸಾರ ನಡೆಯಲು ಆದ್ಯತೆ ಕೊಟ್ಟೆ. ಹೊಸ ಲೋಕದಲ್ಲಿ ಮನಸ್ಸು ಇಚ್ಛಿಸುವ ಎಲ್ಲ ಒಳ್ಳೇ ವಿಷಯಗಳಲ್ಲಿ ಆನಂದಿಸಲು ಬೇಕಾದಷ್ಟು ಸಮಯವಿರುತ್ತದೆ. ಕೀರ್ತನೆ 145:16 ನನ್ನ ನೆಚ್ಚಿನ ವಚನ. ಯೆಹೋವನು ‘ಎಲ್ಲಾ ಜೀವಿಗಳ ಇಷ್ಟವನ್ನು ನೆರವೇರಿಸುವನೆಂಬ’ ಆಶ್ವಾಸನೆಯನ್ನು ಆ ವಚನ ಕೊಡುತ್ತದೆ.
ನನಗೀಗ 91 ವಯಸ್ಸು. ತಕ್ಕಮಟ್ಟಿಗಿನ ಆರೋಗ್ಯ ಇರುವುದರಿಂದ ಪಯನೀಯರ್ ಸೇವೆ ಮಾಡುತ್ತಿದ್ದೇನೆ. ಪಯನೀಯರ್ ಸೇವೆಯು ತೊಂಬತ್ತರ ಹರೆಯದಲ್ಲೂ ಹತ್ತೊಂಬತ್ತರ ಜೀವನೋತ್ಸಾಹವನ್ನು ನನ್ನಲ್ಲಿ ತುಂಬಿದೆ. ಬದುಕಿಗೊಂದು ಅರ್ಥ ಕೊಟ್ಟಿದೆ. ಎಲ್ ಸಾಲ್ವಡಾರ್‌ಗೆ ನಾನು ಮೊದಮೊದಲು ಕಾಲಿಟ್ಟಾಗ ಆಗಷ್ಟೇ ಸಾರುವ ಕೆಲಸ ಆರಂಭವಾಗಿತ್ತು. ಸೈತಾನನ ಸತತ ವಿರೋಧದ ಮಧ್ಯೆಯೂ ಈಗ ಆ ದೇಶದಲ್ಲಿ 39,000ಕ್ಕಿಂತ ಹೆಚ್ಚು ಪ್ರಚಾರಕರಿದ್ದಾರೆ. ಇದು ನನ್ನ ನಂಬಿಕೆಯನ್ನು ನಿಜಕ್ಕೂ ಬಲಗೊಳಿಸಿದೆ. ಯೆಹೋವನ ಜನರು ಮಾಡುತ್ತಿರುವ ಕೆಲಸಕ್ಕೆ ಆತನ ಪವಿತ್ರಾತ್ಮದ ಬೆಂಬಲ ಇದೆ ಎನ್ನುವುದರಲ್ಲಿ ಎಳ್ಳಿನ ಮೊನೆಯಷ್ಟೂ ಸಂಶಯವಿಲ್ಲ!
^ ಪ್ಯಾರ. 4 1981 ಯಿಯರ್‌ಬುಕ್, ಪುಟ 45-46 ನೋಡಿ.
^ ಪ್ಯಾರ. 19 1981 ಯಿಯರ್‌ಬುಕ್, ಪುಟ 41-42.
^ ಪ್ಯಾರ. 24 1981 ಯಿಯರ್‌ಬುಕ್, ಪುಟ 66-67, 74-75.