ನಿಮಗೆ ತಿಳಿದಿತ್ತೋ?
ಪುರಾತನ ಇಸ್ರಾಯೇಲ್ ಬೈಬಲ್ ಹೇಳಿರುವಷ್ಟರ ಮಟ್ಟಿಗೆ ಕಾಡುಪ್ರದೇಶವಾಗಿತ್ತಾ?
ವಾಗ್ದತ್ತ ದೇಶದ ಕೆಲವೊಂದು ಪ್ರದೇಶಗಳು ಕಾಡುಮಯವಾಗಿದ್ದವು ಎನ್ನುತ್ತದೆ ಬೈಬಲ್. ಅಲ್ಲಿ ಮರಗಳು ‘ಹೇರಳವಾಗಿದ್ದವು’ ಎಂದೂ ತಿಳಿಸುತ್ತದೆ. (1 ಅರ. 10:27; ಯೆಹೋ. 17:15, 18) ಆದರೆ ಆ ಪ್ರದೇಶದ ಹೆಚ್ಚಿನ ಭಾಗಗಳಲ್ಲಿ ಇಂದು ಮರಗಳೇ ಇಲ್ಲದ ಸ್ಥಿತಿ ನೋಡಿ ಒಂದು ಕಾಲದಲ್ಲಿ ನಿಜವಾಗಲೂ ಮರಗಳು ಇದ್ದವಾ ಎಂದು ಸಂದೇಹವಾದಿಗಳು ಪ್ರಶ್ನೆ ಮಾಡಬಹುದು.
ಬೈಬಲ್ ಕಾಲದ ಇಸ್ರೇಲ್ನಲ್ಲಿ ಜೀವನ (ಇಂಗ್ಲಿಷ್) ಎಂಬ ಪುಸ್ತಕ ಹೀಗೆ ವರ್ಣಿಸುತ್ತದೆ: “ಈಗ ಇರುವುದಕ್ಕಿಂತ ಹೆಚ್ಚು ಕಾಡುಗಳು ಪುರಾತನ ಇಸ್ರಾಯೇಲಿನಲ್ಲಿದ್ದವು.” ಮುಖ್ಯವಾಗಿ ಆ್ಯಲೆಪ್ಪೊ ಪೈನ್ (ಪೈನಸ್ ಹಾಲೆಪೆನ್ಸಿಸ್), ನಿತ್ಯ ಹಸಿರು ಓಕ್ ಮರ (ಕ್ವೆರ್ಕಸ್ ಕ್ಯಾಲಿಪ್ರಿನೊಸ್), ಮತ್ತು ಟೆರಬಿಂತ್ (ಪಿಸ್ಟೆಸಿಯ ಪ್ಯಾಲೆಸ್ಟಿನಾ) ಎಂಬ ಮರಗಳಿಂದ ಎತ್ತರದ ಪರ್ವತ ಪ್ರದೇಶಗಳು ತುಂಬಿರುತ್ತಿತ್ತು. ಇಳಿಕಲಿನಲ್ಲಿದ್ದ ಮಧ್ಯಪ್ರಾಂತ್ಯದ ಪರ್ವತ ಶ್ರೇಣಿ ಮತ್ತು ಮೆಡಿಟರೇನಿಯನ್ ಕರಾವಳಿಯ ನಡುವಿನ ಅಡಿಗುಡ್ಡದ ಪ್ರದೇಶಗಳಲ್ಲಿ ಸಿಕಮೋರ್ ಅಂಜೂರದ ಮರ (ಫಿಗ್ ಸಿಕಮೋರ್) ಮರಗಳೂ ಹೇರಳವಾಗಿರುತ್ತಿದ್ದವು.
ಬೈಬಲಿನ ಗಿಡಗಳು (ಇಂಗ್ಲಿಷ್) ಎಂಬ ಪುಸ್ತಕ ಹೇಳುವುದೇನೆಂದರೆ ಇಸ್ರಾಯೇಲಿನ ಕೆಲವು ಪ್ರದೇಶಗಳಲ್ಲಿ ಈಗ ಮರಗಳೇ ಇಲ್ಲ ಎಂದು. ಇದಕ್ಕೆ ಕಾರಣವೇನು? ಇದು ಕಾಲಕ್ರಮೇಣವಾಗಿ ನಡೆದ ವಿಷಯ ಎಂದು ವಿವರಿಸುತ್ತಾ ಆ ಪುಸ್ತಕ ಹೀಗನ್ನುತ್ತದೆ: “ಕಟ್ಟಡ ನಿರ್ಮಾಣಕ್ಕಾಗಿ ವಸ್ತುಗಳನ್ನು ಮತ್ತು ಉರುವಲನ್ನು ಪಡೆಯಲು, ಸಾಗುವಳಿ ಮತ್ತು ಹುಲ್ಲುಗಾವಲು ಪ್ರದೇಶವನ್ನು ವಿಸ್ತರಿಸಲು ಮಾನವನು ನೈಸರ್ಗಿಕವಾಗಿ ಬೆಳೆದ ಗಿಡಮರಗಳನ್ನು ಪದೇಪದೇ ಕಡಿದುಹಾಕಿದ್ದೇ ಇದಕ್ಕೆಲ್ಲ ಕಾರಣ.”