ನಮ್ಮ ಸಂಗ್ರಹಾಲಯ
“ಲೋಕದಲ್ಲಿನ ಯಾವುದೇ ಸಂಗತಿ ನಿಮ್ಮನ್ನು ತಡೆಯಬಾರದು!”
ಇಸವಿ 1931ರ ವಸಂತಕಾಲ. 23 ದೇಶಗಳಿಂದ ಬಂದ ಪ್ರತಿನಿಧಿಗಳಿಂದ ಪ್ಯಾರಿಸ್‍ನ ಸುಪ್ರಸಿದ್ಧ ಪ್ಲೇಯೆಲ್ ಸಂಗೀತ ಸಭಾಂಗಣದ ಪ್ರವೇಶದ್ವಾರ ಗಿಜಿಗುಟ್ಟುತ್ತಿತ್ತು. ಠಾಕುಠೀಕಿನ ಉಡುಪನ್ನು ಧರಿಸಿರುವ ಜನರು ಸಭಾಂಗಣದ ಮುಂದೆ ದೊಡ್ಡ ಟ್ಯಾಕ್ಸಿಗಳಿಂದ ಇಳಿಯುತ್ತಿದ್ದರು. ಸ್ವಲ್ಪ ಸಮಯದಲ್ಲೇ ಮುಖ್ಯ ಸಭಾಂಗಣವು ಹೆಚ್ಚುಕಡಿಮೆ 3,000 ಜನರಿಂದ ತುಂಬಿಹೋಯಿತು. ಇವರು ಬಂದದ್ದು ಸಂಗೀತ ಕಾರ್ಯಕ್ರಮಕ್ಕಲ್ಲ ಬದಲಾಗಿ ಜೋಸೆಫ್ ಎಫ್. ರದರ್‌ಫರ್ಡ್‌ರ ಭಾಷಣ ಕೇಳಲು. ಆ ಸಮಯದಲ್ಲಿ ನಮ್ಮ ಸಾರುವ ಕೆಲಸದ ನೇತೃತ್ವವನ್ನು ವಹಿಸುತ್ತಿದ್ದವರು ಅವರೇ. ಅವರು ಕೊಟ್ಟ ಪ್ರಬಲವಾದ ಭಾಷಣಗಳನ್ನು ಫ್ರೆಂಚ್, ಜರ್ಮನ್ ಮತ್ತು ಪೋಲಿಷ್ ಭಾಷೆಗಳಲ್ಲಿ ತರ್ಜುಮೆ ಮಾಡಲಾಯಿತು. ಸಹೋದರ ರದರ್‌ಫರ್ಡ್‌ರ ಕಂಚಿನ ಕಂಠ ಆ ಇಡೀ ಸಭಾಂಗಣದಲ್ಲಿ ಪ್ರತಿಧ್ವನಿಸುತ್ತಿತ್ತು.
ಪ್ಯಾರಿಸ್‍ನಲ್ಲಿ ನಡೆದ ಆ ಅಧಿವೇಶನ ಫ್ರಾನ್ಸ್‌ನಲ್ಲಿನ ರಾಜ್ಯ ಸಾರುವಿಕೆಯ ಕೆಲಸಕ್ಕೆ ಒಂದು ತಿರುವು ಕೊಟ್ಟಿತು. ನೆರೆದುಬಂದಿದ್ದ ಆ ಅಂತಾರಾಷ್ಟ್ರೀಯ ಸಭಿಕರಿಗೆ, ವಿಶೇಷವಾಗಿ ಯುವಜನರಿಗೆ ಫ್ರಾನ್ಸ್‌ನಲ್ಲಿ ಕಾಲ್ಪೋರ್ಟರರಾಗಿ ಸೇವೆಮಾಡಲು ಸಹೋದರ ರದರ್‌ಫರ್ಡ್ ಕರೆಕೊಟ್ಟರು. ಅವರು ಹೀಗಂದರು: “ಲೋಕದಲ್ಲಿನ ಯಾವುದೇ ಸಂಗತಿ ನಿಮ್ಮನ್ನು ಕಾಲ್ಪೋರ್ಟರ್ ಕೆಲಸ ಮಾಡುವಂತೆ ತಡೆಯಬಾರದು!” ಈ ಸ್ಫೂರ್ತಿದಾಯಕ ಮಾತುಗಳನ್ನು ಅಲ್ಲಿಗೆ ಬಂದಿದ್ದ ಇಂಗ್ಲೆಂಡಿನ ಹದಿವಯಸ್ಕ ಜಾನ್ ಕುಕ್ ಯಾವತ್ತೂ ಮರೆಯಲಿಲ್ಲ. *
ಜಾನ್ ಕುಕ್ ಮುಂದೆ ಒಬ್ಬ ಮಿಷನರಿಯಾದರು. ಅವರಂತೆಯೇ ಇತರರು, ‘ಮಕೆದೋನ್ಯಕ್ಕೆ ಬಾ’ ಎಂಬ ಕರೆಯಂತಿದ್ದ ಈ ಕರೆಗೆ ಪ್ರತಿಕ್ರಿಯಿಸಿದರು. (ಅ. ಕಾ. 16:9, 10) ಫ್ರಾನ್ಸ್‌ನಲ್ಲಿನ ಕಾಲ್ಪೋರ್ಟರರ ಸಂಖ್ಯೆ 1930ರಲ್ಲಿ 27 ಆಗಿತ್ತು. 1931ರಷ್ಟಕ್ಕೆ 104ಕ್ಕೇರಿತು. ಒಂದೇ ವರ್ಷದೊಳಗೆ ಎಂತಹ ಅಸಾಧಾರಣ ವೃದ್ಧಿ! ಆ ಕಾಲದ ಹೆಚ್ಚಿನ ಪಯನೀಯರರಿಗೆ ಫ್ರೆಂಚ್ ಮಾತಾಡಲು ಬರುತ್ತಿರಲಿಲ್ಲ. ಹಾಗಾಗಿ ಈ ಭಾಷಾ ಸಮಸ್ಯೆ, ಕಡಿಮೆ ಸವಲತ್ತು, ಎಲ್ಲರಿಂದ ದೂರವಿರುವುದು ಇವನ್ನೆಲ್ಲ ಹೇಗೆ ನಿಭಾಯಿಸಲಿದ್ದರು?
ಭಾಷಾ ಸಮಸ್ಯೆಯನ್ನು ನಿಭಾಯಿಸಿದರು
ಬೇರೆ ದೇಶಗಳಿಂದ ಬಂದಿದ್ದ ಕಾಲ್ಪೋರ್ಟರರು ಟೆಸ್ಟಿಮನಿ ಕಾರ್ಡ್ ಅನ್ನು ತುಂಬಾನೇ ಬಳಸುತ್ತಿದ್ದರು. ಅದರಲ್ಲಿ ರಾಜ್ಯ ನಿರೀಕ್ಷೆಯ ಸಂದೇಶ ಇದ್ದದ್ದರಿಂದ ಮನೆಯವರ ಹತ್ತಿರ ಮಾತಾಡದೆ ಆ ಕಾರ್ಡನ್ನು ಓದಲು ಕೊಡುತ್ತಿದ್ದರು. ಪ್ಯಾರಿಸ್‍ನಲ್ಲಿ ಧೈರ್ಯದಿಂದ ಸಾರಿದ ಜರ್ಮನ್ ಭಾಷೆಯ ಒಬ್ಬ ಸಹೋದರ ಹೀಗಂದನು: “ನಮ್ಮ ದೇವರು ಬಲಿಷ್ಠನೆಂದು ನಮಗೆ ಗೊತ್ತಿತ್ತು. ಆದರೆ ಸೇವೆಗೆ ಹೋದಾಗಲೆಲ್ಲ ನಮ್ಮ ಹೃದಯ ಬಾಯಿಗೆ ಬಂದಂತಾಗುತ್ತಿತ್ತು. ಹೀಗಾಗುತ್ತಿದ್ದದ್ದು ಮನುಷ್ಯರ ಭಯದಿಂದಲ್ಲ. ಎಲ್ಲಾದರೂ ‘ವುಲೆವು ಲೀಹ್ ಸೆಟ್ ಕಾಟ್, ಸಿಲ್‌ವು ಪ್ಲೇ’ [ದಯವಿಟ್ಟು ಈ ಕಾರ್ಡನ್ನು ಓದುತ್ತೀರಾ?] ಎಂಬ ಚಿಕ್ಕ ವಾಕ್ಯವನ್ನು ಮರೆತುಬಿಟ್ಟರೆ ಎಂಬ ಭಯದಿಂದಲೇ. ನಮ್ಮ ಕೆಲಸ ತುಂಬ ಮಹತ್ವದ್ದೆಂದು ನಮಗೆ ಪೂರ್ತಿ ಖಾತ್ರಿಯಿತ್ತು.”
ಬಹುಮಹಡಿ ಕಟ್ಟಡಗಳಲ್ಲಿ ಸಾರುವಾಗ ಕಾಲ್ಪೋರ್ಟರರನ್ನು ಅಲ್ಲಿನ ಕಾವಲುಗಾರರು ಓಡಿಸುತ್ತಿದ್ದರು. ಒಂದು ದಿನ ಇಂಗ್ಲೆಂಡಿನ ಇಬ್ಬರು ಸಹೋದರಿಯರು ಸೇವೆಗೆ ಹೋಗಿದ್ದರು. ಅವರಿಗೆ ಫ್ರೆಂಚ್ ಅಷ್ಟಾಗಿ ಬರುತ್ತಿರಲಿಲ್ಲ. ಒಬ್ಬ ಕಾವಲುಗಾರ ಅವರನ್ನು ನೋಡಿ ಯಾರನ್ನು ಭೇಟಿಯಾಗಬೇಕೆಂದು ಸಿಡುಕಿದ. ಅವನ ಸಿಟ್ಟನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿದ್ದಾಗ ಒಬ್ಬ ಸಹೋದರಿಗೆ ಅಲ್ಲೇ ಒಂದು ಬಾಗಿಲಿನ ಮೇಲೆ ತೂಗುತ್ತಿದ್ದ ಫಲಕ ಕಣ್ಣಿಗೆ ಬಿತ್ತು. ಅದರ ಮೇಲೆ “ತುಹ್ ನೇ ಲ್ ಬುತುನ್ [ಬೆಲ್ ಒತ್ತಿ]” ಎಂದು ಬರೆಯಲಾಗಿತ್ತು. ಇದು ಆ ಮನೆಯಲ್ಲಿದ್ದವರ ಹೆಸರೆಂದು ಆಕೆ ನೆನಸಿ ನಗುನಗುತ್ತಾ, “ನಾವು ಮೇಡಮ್ ತುಹ್ ನೇ ಲ್ ಬುತುನ್‌ರನ್ನು ನೋಡಲಿಕ್ಕೆ ಬಂದಿದ್ದೇವೆ” ಎಂದು ಹೇಳಿದರು. ಇಂಥ ತಮಾಷೆಯ ಪ್ರಸಂಗಗಳಿಂದ ಹುರುಪಿನ ಕಾಲ್ಪೋರ್ಟರರಿಗೆ ಸಹಾಯವಾಗುತ್ತಿತ್ತು!
ಕಡಿಮೆ ಸವಲತ್ತು, ಎಲ್ಲರಿಂದ ದೂರ!
1930ರ ದಶಕದಲ್ಲಿ ಫ್ರಾನ್ಸ್‌ನ ಹೆಚ್ಚಿನ ಜನರು ವಾಸಿಸುತ್ತಿದ್ದ ಪರಿಸ್ಥಿತಿಗಳು ಅಷ್ಟೇನೂ ಚೆನ್ನಾಗಿರಲಿಲ್ಲ. ಬೇರೆ ದೇಶಗಳಿಂದ ಹೋದ ಕಾಲ್ಪೋರ್ಟರರೂ ಹೀಗೇ ವಾಸಿಸುತ್ತಿದ್ದರು. ಇಂಗ್ಲೆಂಡಿನವರಾದ ಸಹೋದರಿ ಮೋನಾ ಶೊಸ್ಕ ತನ್ನ ಪಯನೀಯರ್ ಸಂಗಾತಿಯೊಟ್ಟಿಗಿನ ಅನುಭವವನ್ನು ಹೀಗೆ ವರ್ಣಿಸುತ್ತಾರೆ: “ನಾವು ವಾಸವಿದ್ದ ಮನೆಗಳಲ್ಲಿ ಸಾಮಾನ್ಯವಾಗಿ ಬೇಕಾದ ಸವಲತ್ತುಗಳು ಇರುತ್ತಿರಲಿಲ್ಲ. ಚಳಿಗಾಲದಲ್ಲಿ ಕೋಣೆಯನ್ನು ಬೆಚ್ಚಗಿಡುವುದು ಒಂದು ದೊಡ್ಡ ಸಮಸ್ಯೆಯಾಗಿತ್ತು. ಮರಗಟ್ಟುವಷ್ಟು ಚಳಿಯಿರುವ ಕೋಣೆಯಲ್ಲೇ ವಾಸಮಾಡುತ್ತಿದ್ದೆವು. ಬೆಳಗ್ಗೆ ಎದ್ದಾಗ ಮುಖ ತೊಳೆಯಬೇಕಾದರೆ ಮಂಜುಗಡ್ಡೆಯಾಗಿದ್ದ ನೀರನ್ನು ಮೊದಲು ಕರಗಿಸಬೇಕಾಗುತ್ತಿತ್ತು!” ಯಾವುದೇ ಸೌಕರ್ಯವಿಲ್ಲ ಎಂಬ ಕಾರಣಕ್ಕೆ ಆ ಆರಂಭದ ಪಯನೀಯರರು ನಿರುತ್ಸಾಹಗೊಂಡರಾ? ಇಲ್ಲವೇ ಇಲ್ಲ! ಅವರಲ್ಲೊಬ್ಬರು ಅವರ ಅನಿಸಿಕೆಗಳನ್ನು ಚೆನ್ನಾಗಿ, ಚುಟುಕಾಗಿ ಹೀಗೆ ಹೇಳಿದರು: “ನಮ್ಮದೂ ಅಂತ ಏನೂ ಇರಲಿಲ್ಲ, ಆದರೆ ಯಾವುದರ ಕೊರತೆಯೂ ಇರಲಿಲ್ಲ.”—ಮತ್ತಾ. 6:33.
ಈ ಧೀರ ಕಾಲ್ಪೋರ್ಟರರಿಗಿದ್ದ ಇನ್ನೊಂದು ಸವಾಲು, ಅವರು ಎಲ್ಲರಿಂದ ದೂರ ಇರಬೇಕಾಗುತ್ತಿತ್ತು. 1930ರ ದಶಕದ ಆರಂಭದ ವರ್ಷಗಳಲ್ಲಿ ಫ್ರಾನ್ಸ್‌ನಲ್ಲಿನ ರಾಜ್ಯ ಪ್ರಚಾರಕರ ಸಂಖ್ಯೆ 700ಕ್ಕಿಂತ ಕಡಿಮೆಯಿತ್ತು. ಅವರಲ್ಲಿ ಹೆಚ್ಚಿನವರು ದೇಶದಾದ್ಯಂತ ಚದುರಿಕೊಂಡಿದ್ದರು. ಹೀಗೆ ದೂರದಲ್ಲಿದ್ದರೂ ಈ ಕಾಲ್ಪೋರ್ಟರರು ಹೇಗೆ ಸಂತೋಷವಾಗಿದ್ದರು? ಮೋನಾ ಮತ್ತವರ ಪಯನೀಯರ್ ಸಂಗಾತಿಯೂ ಇದೇ ಸವಾಲನ್ನು ಎದುರಿಸಿದರು. ಅವರು ವಿವರಿಸಿದ್ದು: “ಎಲ್ಲರಿಂದ ದೂರವಿದ್ದೇವೆಂಬ ದುಃಖವನ್ನು ಹೊಡೆದೋಡಿಸಲಿಕ್ಕಾಗಿ ನಾವು ದಿನಾಲೂ ಸಂಸ್ಥೆಯ ಪ್ರಕಾಶನಗಳನ್ನು ಒಟ್ಟಿಗೆ ಅಧ್ಯಯನ ಮಾಡುತ್ತಿದ್ದೆವು. ಆ ಕಾಲದಲ್ಲೆಲ್ಲ ನಾವು ಪುನರ್ಭೇಟಿಗಳನ್ನು ಮಾಡುತ್ತಿರಲಿಲ್ಲ, ಮನೆ ಬೈಬಲ್ ಅಧ್ಯಯನಗಳನ್ನು ನಡೆಸುತ್ತಿರಲಿಲ್ಲ. ಹಾಗಾಗಿ ನಮ್ಮ ಕುಟುಂಬದವರಿಗೆ ಮತ್ತು ಇತರ ಪಯನೀಯರರಿಗೆ ಪತ್ರ ಬರೆದು ನಮಗಾದ ಅನುಭವಗಳನ್ನು ಹಂಚಿಕೊಳ್ಳಲು ಮತ್ತು ಪರಸ್ಪರರನ್ನು ಪ್ರೋತ್ಸಾಹಿಸಲು ಸಂಜೆ ಹೊತ್ತಿನಲ್ಲಿ ಸಮಯ ಸಿಗುತ್ತಿತ್ತು.”—1 ಥೆಸ. 5:11.
ಈ ಸ್ವತ್ಯಾಗದ ಕಾಲ್ಪೋರ್ಟರರು ಅಡ್ಡಿತಡೆಗಳ ನಡುವೆಯೂ ಸಕಾರಾತ್ಮಕ ಮನೋಭಾವವನ್ನು ಉಳಿಸಿಕೊಂಡರು. ಅವರು ಬ್ರಾಂಚ್ ಆಫೀಸಿಗೆ ಬರೆದಂಥ ಪತ್ರಗಳಿಂದ ಇದು ತೋರಿಬರುತ್ತದೆ. ಕೆಲವರಂತೂ ಇಂಥ ಪತ್ರಗಳನ್ನು ಫ್ರಾನ್ಸ್‌ನಲ್ಲಿ ಪಯನೀಯರ್ ಸೇವೆ ಮಾಡಿ ದಶಕಗಳಾದರೂ ಬರೆಯುತ್ತಿದ್ದರು. ಆ್ಯನೀ ಕ್ರಜಿನ್ ಎಂಬ ಅಭಿಷಿಕ್ತ ಸಹೋದರಿ ತಮ್ಮ ಗಂಡನೊಟ್ಟಿಗೆ 1931-35ರ ತನಕ ಫ್ರಾನ್ಸಿನ ಉದ್ದಗಲಕ್ಕೂ ಪ್ರಯಾಣಮಾಡಿದರು. ಆ ವರ್ಷಗಳ ಬಗ್ಗೆ ಮೆಲುಕುಹಾಕುತ್ತಾ ಅವರು ಬರೆದದ್ದು: “ನಮ್ಮ ಜೀವನ ತುಂಬ ಸಂತೋಷ ಹಾಗೂ ಆಸಕ್ತಿಕರ ಅನುಭವಗಳಿಂದ ಕೂಡಿತ್ತು! ಪಯನೀಯರರಾಗಿದ್ದ ನಾವು ತುಂಬ ಒಗ್ಗಟ್ಟಿನಿಂದ ಕೆಲಸಮಾಡಿದೆವು. ಅಪೊಸ್ತಲ ಪೌಲನು ಹೇಳಿದಂತೆ, ‘ನಾನು ನೆಟ್ಟೆನು, ಅಪೊಲ್ಲೋಸನು ನೀರುಹೊಯ್ದನು, ಆದರೆ ದೇವರು ಅದನ್ನು ಬೆಳೆಸುತ್ತಾ ಬಂದನು.’ ಅಷ್ಟು ವರ್ಷಗಳ ಹಿಂದೆ ಸಾರುವ ಕೆಲಸದಲ್ಲಿ ಸಹಾಯಮಾಡುವ ಅವಕಾಶವಿದ್ದ ನಮ್ಮಂಥವರಿಗೆ ಈ ಮಾತು ರೋಮಾಂಚಕಾರಿ.”—1 ಕೊರಿಂ. 3:6.
ಆ ಆರಂಭದ ಪಯನೀಯರರು, ಸೇವೆಯನ್ನು ಹೆಚ್ಚಿಸಲು ಇಷ್ಟಪಡುವ ಇತರರಿಗಾಗಿ ತಾಳ್ಮೆ ಮತ್ತು ಹುರುಪಿನ ಪರಂಪರೆಯನ್ನು ಬಿಟ್ಟುಹೋಗಿದ್ದಾರೆ. ಇಂದು, ಫ್ರಾನ್ಸ್‌ನಲ್ಲಿ 14,000ದಷ್ಟು ರೆಗ್ಯುಲರ್ ಪಯನೀಯರರು ಇದ್ದಾರೆ! ಅನೇಕರು ಪರಭಾಷಾ ಗುಂಪುಗಳಲ್ಲಿ ಇಲ್ಲವೇ ಸಭೆಗಳಲ್ಲಿ ಸೇವೆಮಾಡುತ್ತಿದ್ದಾರೆ. * ಅವರಿಗಿಂತ ಮುಂಚೆ ಇದ್ದ ಆರಂಭದ ಪಯನೀಯರರಂತೆ ಇವರೂ ಲೋಕದಲ್ಲಿನ ಯಾವುದೇ ಸಂಗತಿ ಅವರನ್ನು ತಡೆಯುವಂತೆ ಬಿಡುವುದಿಲ್ಲ!—ಫ್ರಾನ್ಸ್‌ನಲ್ಲಿನ ನಮ್ಮ ಸಂಗ್ರಹಾಲಯದಿಂದ.
^ ಪ್ಯಾರ. 4 ಫ್ರಾನ್ಸ್‌ಗೆ ವಲಸೆ ಬಂದಿದ್ದ ಪೋಲೆಂಡಿನ ಜನರ ಮಧ್ಯೆ ನಡೆದ ಸಾರುವ ಕೆಲಸದ ಬಗ್ಗೆ ತಿಳಿಯಲು ಕಾವಲಿನಬುರುಜು ಆಗಸ್ಟ್ 15, 2015 “ಯೆಹೋವನು ನಿಮ್ಮನ್ನು ಫ್ರಾನ್ಸಿಗೆ ತಂದದ್ದೇ ಸತ್ಯ ಕಲಿಯಲಿಕ್ಕಾಗಿ” ಲೇಖನ ನೋಡಿ.
^ ಪ್ಯಾರ. 13 2014ರಲ್ಲಿ ಫ್ರಾನ್ಸ್ ಬ್ರಾಂಚ್‌ನ ಉಸ್ತುವಾರಿಯಡಿ ಪರಭಾಷೆಗಳ 900ಕ್ಕಿಂತ ಹೆಚ್ಚು ಸಭೆಗಳು ಮತ್ತು ಗುಂಪುಗಳು ಕೆಲಸಮಾಡುತ್ತಿವೆ. ಸತ್ಯ ಹುಡುಕುತ್ತಿರುವ, ಪ್ರಾಮಾಣಿಕ ಮನಸ್ಸಿನ 70 ಭಾಷೆಗಳವರಿಗೆ ಇವರು ಸಹಾಯಮಾಡುತ್ತಿದ್ದಾರೆ.