ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರು ಕೆಟ್ಟತನ, ಕಷ್ಟಸಂಕಟ ಇರುವಂತೆ ಯಾಕೆ ಬಿಡುತ್ತಾನೆ?

ದೇವರು ಕೆಟ್ಟತನ, ಕಷ್ಟಸಂಕಟ ಇರುವಂತೆ ಯಾಕೆ ಬಿಡುತ್ತಾನೆ?

ದೇವರ ವಾಕ್ಯದಿಂದ ಕಲಿಯಿರಿ

ದೇವರು ಕೆಟ್ಟತನ, ಕಷ್ಟಸಂಕಟ ಇರುವಂತೆ ಯಾಕೆ ಬಿಡುತ್ತಾನೆ?

ನೀವು ಯೋಚಿಸಿರಬಹುದಾದ ಕೆಲವು ಪ್ರಶ್ನೆಗಳನ್ನು ಈ ಲೇಖನದಲ್ಲಿ ಕೊಡಲಾಗಿದೆ ಮಾತ್ರವಲ್ಲ ಅವುಗಳ ಉತ್ತರಗಳನ್ನು ದೇವರ ವಾಕ್ಯವಾದ ಬೈಬಲಿನಲ್ಲಿ ನೀವೆಲ್ಲಿ ಓದಬಹುದೆಂದೂ ತೋರಿಸಲಾಗಿದೆ. ಈ ಉತ್ತರಗಳನ್ನು ನಿಮ್ಮ ಜೊತೆ ಚರ್ಚಿಸಲು ಯೆಹೋವನ ಸಾಕ್ಷಿಗಳು ಸಂತೋಷಪಡುವರು.

1. ಕೆಟ್ಟತನ ಆರಂಭವಾದದ್ದು ಹೇಗೆ?

ಸೈತಾನನು ಹೇಳಿದ ಮೊದಲ ಸುಳ್ಳಿನಿಂದ ಭೂಮಿಯಲ್ಲಿ ಕೆಟ್ಟತನ ಆರಂಭವಾಯಿತು. ಅವನನ್ನು ಸೃಷ್ಟಿಸಲಾದಾಗ ಅವನು ಕೆಟ್ಟವನಾಗಿರಲಿಲ್ಲ, ದೋಷವಿಲ್ಲದ ಪರಿಪೂರ್ಣ ದೇವದೂತನಾಗಿದ್ದ. ಆದರೆ ಅವನು “ಸತ್ಯದಲ್ಲಿ ನೆಲೆನಿಲ್ಲಲಿಲ್ಲ.” (ಯೋಹಾನ 8:44) ದೇವರಿಗೆ ಮಾತ್ರ ಸಲ್ಲತಕ್ಕ ಆರಾಧನೆ ತನಗೂ ಬೇಕೆಂಬ ದುರಾಸೆಯನ್ನು ಬೆಳೆಸಿಕೊಂಡ. ಪ್ರಥಮ ಸ್ತ್ರೀಯಾದ ಹವ್ವಳಿಗೆ ಸೈತಾನನು ಸುಳ್ಳು ಹೇಳಿ ಆಕೆ ದೇವರ ಮಾತನ್ನು ಕೇಳದೆ ತನ್ನ ಮಾತು ಕೇಳುವಂತೆ ಮಾಡಿದ. ದೇವರಿಗೆ ಅವಿಧೇಯತೆ ತೋರಿಸುವುದರಲ್ಲಿ ಹವ್ವಳೊಂದಿಗೆ ಆದಾಮನೂ ಸೇರಿಕೊಂಡ. ಇದು ಕಷ್ಟಸಂಕಟ ಮತ್ತು ಮರಣಕ್ಕೆ ಕಾರಣವಾಯಿತು.—ಆದಿಕಾಂಡ 3:1-6, 17-19 ಓದಿ.

ದೇವರಿಗೆ ಅವಿಧೇಯತೆ ತೋರಿಸುವ ವಿಷಯವನ್ನು ಸೈತಾನನು ಹವ್ವಳ ತಲೆಗೆ ತುಂಬುತ್ತಿದ್ದದ್ದು ದೇವರ ಪರಮಾಧಿಕಾರದ ವಿರುದ್ಧದ ದಂಗೆಗೆ ಚಾಲನೆ ನೀಡಲಿಕ್ಕಾಗಿಯೇ. ಮಾನವಕುಲದ ಹೆಚ್ಚಿನವರು ದೇವರನ್ನು ಅಧಿಪತಿಯಾಗಿ ತಿರಸ್ಕರಿಸುತ್ತಾರೆ. ಈ ಮೂಲಕ ಸೈತಾನನೊಂದಿಗೆ ದಂಗೆಯಲ್ಲಿ ಸೇರಿಕೊಂಡಿದ್ದಾರೆ. ಹೀಗೆ ಸೈತಾನನು “ಲೋಕದ ಅಧಿಪತಿ” ಆಗಿದ್ದಾನೆ.—ಯೋಹಾನ 14:30; ಪ್ರಕಟನೆ 12:9 ಓದಿ.

2. ದೇವರ ಸೃಷ್ಟಿಯಲ್ಲೇ ಏನಾದರೂ ದೋಷವಿತ್ತೋ?

ದೇವರು ಸೃಷ್ಟಿಸಿದ ಮನುಷ್ಯರಿಗೂ ದೇವದೂತರಿಗೂ ಆತನ ನೀತಿನಿಯಮಗಳಿಗೆ ವಿಧೇಯರಾಗುವ ಸಂಪೂರ್ಣ ಸಾಮರ್ಥ್ಯವಿತ್ತು. (ಧರ್ಮೋಪದೇಶಕಾಂಡ 32:5) ಒಳ್ಳೇದನ್ನು ಅಥವಾ ಕೆಟ್ಟದ್ದನ್ನು ಮಾಡಲು ಆಯ್ದುಕೊಳ್ಳುವ ಸ್ವಾತಂತ್ರ್ಯದೊಂದಿಗೆ ದೇವರು ನಮ್ಮನ್ನು ಸೃಷ್ಟಿಸಿದ್ದಾನೆ. ಆ ಸ್ವಾತಂತ್ರ್ಯ ನಮಗೆ ದೇವರ ಮೇಲಿರುವ ಪ್ರೀತಿಯನ್ನು ತೋರಿಸಲು ಅವಕಾಶ ನೀಡುತ್ತದೆ.—ಯಾಕೋಬ 1:13-15; 1 ಯೋಹಾನ 5:3 ಓದಿ.

3. ದೇವರು ಕಷ್ಟಸಂಕಟ ಇರುವಂತೆ ಯಾಕೆ ಬಿಟ್ಟಿದ್ದಾನೆ?

ತನ್ನ ಪರಮಾಧಿಕಾರದ ವಿರುದ್ಧ ಏದೆನ್‌ ತೋಟದಲ್ಲಿ ಎದ್ದ ದಂಗೆಯನ್ನು ಈ ತನಕ ಯೆಹೋವನು ಸಹಿಸಿಕೊಂಡು ಬಂದಿದ್ದಾನೆ. ಯಾಕೆ? ಯಾಕೆಂದರೆ ತನ್ನನ್ನು ತೊರೆದು ಲೋಕವನ್ನು ಆಳಲು ಜನರು ಮಾಡುವ ಯಾವ ಪ್ರಯತ್ನವೂ ಅವರಿಗೆ ಪ್ರಯೋಜನ ತರಲಾರದೆಂದು ತೋರಿಸುವುದಕ್ಕಾಗಿಯೇ. (ಯೆರೆಮೀಯ 10:23) ಇದು ಸತ್ಯವೆಂದು ಮಾನವ ಇತಿಹಾಸದ 6,000 ವರ್ಷಗಳಲ್ಲಿ ರುಜುವಾಗಿದೆ. ಯುದ್ಧ, ಅಪರಾಧ, ಅನ್ಯಾಯ, ರೋಗಗಳನ್ನು ತೆಗೆದುಹಾಕಲು ಮಾನವ ಅಧಿಪತಿಗಳು ವಿಫಲರಾಗಿದ್ದಾರೆ.— ಸಂಗಿ 7:29; 8:9; ರೋಮನ್ನರಿಗೆ 9:17 ಓದಿ.

ಆದರೆ, ದೇವರನ್ನು ತಮ್ಮ ಅಧಿಪತಿಯೆಂದು ಅಂಗೀಕರಿಸುವ ಜನರು ಪ್ರಯೋಜನ ಪಡೆಯುತ್ತಾರೆ. (ಯೆಶಾಯ 48:17, 18) ಬೇಗನೆ ಯೆಹೋವನು ಎಲ್ಲ ಮಾನವ ಸರ್ಕಾರಗಳನ್ನು ಕೊನೆಗೊಳಿಸಲಿದ್ದಾನೆ. ದೇವರ ಆಳ್ವಿಕೆಯಡಿ ಇರಲು ಆಯ್ದುಕೊಳ್ಳುವ ಜನರು ಮಾತ್ರವೇ ಈ ಭೂಮಿಯಲ್ಲಿ ವಾಸಿಸುವರು.—ಯೆಶಾಯ 2:3, 4; 11:9; ದಾನಿಯೇಲ 2:44 ಓದಿ.

4. ದೇವರ ತಾಳ್ಮೆ ಯಾವ ಅವಕಾಶವನ್ನು ಕೊಡುತ್ತದೆ?

ಮಾನವರು ಯೆಹೋವನಿಗೆ ನಿಷ್ಠೆ, ವಿಧೇಯತೆ ತೋರಿಸುವುದಿಲ್ಲ ಎಂಬುದು ಸೈತಾನನ ವಾದವಾಗಿತ್ತು. ಆದರೆ ದೇವರ ತಾಳ್ಮೆ, ನಾವು ದೇವರ ಆಳ್ವಿಕೆಯ ಪರವಹಿಸುತ್ತೇವೋ ಅಥವಾ ಮಾನವ ಆಳ್ವಿಕೆಯ ಪರವಹಿಸುತ್ತೇವೋ ಎಂಬದನ್ನು ತೋರಿಸುವ ಅವಕಾಶವನ್ನು ನಮಗೆಲ್ಲರಿಗೆ ಕೊಡುತ್ತದೆ. ನಮ್ಮ ಆಯ್ಕೆ ಯಾವುದೆಂಬುದನ್ನು ನಮ್ಮ ಜೀವನ ರೀತಿಯಿಂದ ತೋರಿಸಿಕೊಡುತ್ತೇವೆ.—ಯೋಬ 1:8-11; ಜ್ಞಾನೋಕ್ತಿ 27:11 ಓದಿ.

5. ದೇವರನ್ನು ನಮ್ಮ ಅಧಿಪತಿಯಾಗಿ ಆರಿಸಿಕೊಳ್ಳುವುದು ಹೇಗೆ?

ದೇವರ ವಾಕ್ಯವಾದ ಬೈಬಲಿನಲ್ಲಿ ಆಧರಿತವಾದ ಸತ್ಯಾರಾಧನೆಯನ್ನು ಹುಡುಕಿ ಅದನ್ನೇ ಅನುಸರಿಸುವ ಮೂಲಕ ನಾವು ದೇವರನ್ನು ನಮ್ಮ ಅಧಿಪತಿಯಾಗಿ ಆರಿಸಿಕೊಳ್ಳುತ್ತೇವೆ. (ಯೋಹಾನ 4:23) ಹಾಗೇ ಯೇಸುವಿನಂತೆ ನಾವು ರಾಜಕೀಯದಲ್ಲೂ ಯುದ್ಧದಲ್ಲೂ ಒಳಗೂಡುವುದಿಲ್ಲ.—ಯೋಹಾನ 17:14 ಓದಿ.

ಸೈತಾನನು ತನ್ನ ಶಕ್ತಿಯನ್ನು ಅನೈತಿಕತೆ, ಹಾನಿಕರ ವಿಷಯಗಳನ್ನು ಉತ್ತೇಜಿಸಲು ಬಳಸುತ್ತಾನೆ. ಅವುಗಳನ್ನು ನಾವು ತಿರಸ್ಕರಿಸುವಾಗ ನಮ್ಮ ಬಂಧುಮಿತ್ರರಲ್ಲಿ ಕೆಲವರು ನಮ್ಮನ್ನು ಅಪಹಾಸ್ಯ ಮಾಡಬಹುದು, ವಿರೋಧಿಸಬಹುದು. (1 ಪೇತ್ರ 4:3, 4) ಆಗ ನಾವೊಂದು ಆಯ್ಕೆ ಮಾಡಬೇಕಾಗುತ್ತದೆ. ನಾವು ದೇವರನ್ನು ಪ್ರೀತಿಸುವ ಜನರೊಂದಿಗೆ ಸಹವಾಸ ಮಾಡುವೆವೋ? ದೇವರ ವಿವೇಕಭರಿತ ಪ್ರೀತಿಯ ನಿಯಮಗಳಿಗೆ ವಿಧೇಯರಾಗುವೆವೋ? ಇವೆರಡನ್ನೂ ಮಾಡಿದರೆ, ದೇವರಿಗೆ ಯಾರೂ ವಿಧೇಯರಾಗುವುದಿಲ್ಲ ಎಂಬ ಸೈತಾನನ ವಾದ ಸುಳ್ಳೆಂದು ರುಜುಮಾಡುತ್ತೇವೆ.—1 ಕೊರಿಂಥ 6:9, 10; 15:33 ಓದಿ. (w11-E 05/01)

ಹೆಚ್ಚಿನ ಮಾಹಿತಿಗಾಗಿ, ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾದ ಈ ಪುಸ್ತಕದ 11ನೇ ಅಧ್ಯಾಯ ನೋಡಿ.

[ಪುಟ 18ರಲ್ಲಿರುವ ಚಿತ್ರ]

ಆದಾಮನು ಮಾಡಿದ ಆಯ್ಕೆ ತಪ್ಪಾಗಿತ್ತು

[ಪುಟ 19ರಲ್ಲಿರುವ ಚಿತ್ರ]

ದೇವರನ್ನು ನಮ್ಮ ಅಧಿಪತಿಯಾಗಿ ಸ್ವೀಕರಿಸುತ್ತೇವೊ ಇಲ್ಲವೊ ಎಂಬದನ್ನು ನಮ್ಮ ಆಯ್ಕೆಗಳು ತೋರಿಸುತ್ತವೆ