ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ಎಂದಾದರೂ ಹೊರಗಿನವರಂತೆ ಅನಿಸಿದೆಯೋ?

ನಿಮಗೆ ಎಂದಾದರೂ ಹೊರಗಿನವರಂತೆ ಅನಿಸಿದೆಯೋ?

ನಿಮ್ಮ ಮಕ್ಕಳಿಗೆ ಕಲಿಸಿರಿ

ನಿಮಗೆ ಎಂದಾದರೂ ಹೊರಗಿನವರಂತೆ ಅನಿಸಿದೆಯೋ?

ಯಾರನ್ನು ತಮ್ಮ ಗುಂಪಿಗೆ ಬೇರೆಯವರು ಸೇರಿಸಿಕೊಳ್ಳುವುದಿಲ್ಲವೋ ಅವನೇ ಹೊರಗಿನವನು. ಬಹುಶಃ ಇದಕ್ಕೆ ಆ ವ್ಯಕ್ತಿಯ ಮೈಬಣ್ಣ, ದೇಶ, ಮಾತಾಡುವ ಮತ್ತು ಕೆಲಸಮಾಡುವ ರೀತಿ ಭಿನ್ನವಾಗಿರುವುದೇ ಕಾರಣವಾಗಿರಬಹುದು. ನಿನಗೆ ಯಾವಾಗಲಾದರೂ ಹೊರಗಿನವನಂತೆ ಅನಿಸುತ್ತದೊ? *

ಹೊರಗಿನವನಂತೆ ಅನಿಸಿಕೆಯಾಗಿದ್ದ ಒಬ್ಬ ಮನುಷ್ಯನ ಬಗ್ಗೆ ನಾವೀಗ ನೋಡೋಣ. ಅವನ ಹೆಸರು ಮೆಫೀಬೋಶೆತ್‌. ಅವನು ಯಾರು, ಅವನಿಗೆ ಯಾಕೆ ತಾನು ಹೊರಗಿನವನು ಎಂದನಿಸಿತು ಎಂಬದನ್ನು ಮೊದಲು ತಿಳಿದುಕೊಳ್ಳೋಣ. ನಿನಗೂ ಆ ರೀತಿಯ ಅನಿಸಿಕೆ ಇರುವಲ್ಲಿ ಮೆಫೀಬೋಶೆತನಿಂದ ಅನೇಕ ಪಾಠಗಳನ್ನು ಕಲಿಯಬಲ್ಲಿ.

ಮೆಫೀಬೋಶೆತನು ದಾವೀದನ ಪ್ರೀತಿಯ ಗೆಳೆಯನಾದ ಯೋನಾತಾನನ ಮಗ. ಯೋನಾತಾನನು ಯುದ್ಧದಲ್ಲಿ ಸಾಯುವ ಮುಂಚೆ ‘ನನ್ನ ಮಕ್ಕಳ ಕಡೆಗೆ ದಯವಿರಲಿ’ ಎಂದು ದಾವೀದನಿಗೆ ಹೇಳಿದ್ದನು. ಸ್ವಲ್ಪ ಸಮಯದ ನಂತರ ದಾವೀದನು ರಾಜನಾದ. ವರ್ಷಗಳ ನಂತರ ಅವನು ಯೋನಾತಾನನ ಮಾತುಗಳನ್ನು ನೆನಪಿಸಿಕೊಂಡನು. ಆ ಸಮಯದಲ್ಲಿ ಮೆಫೀಬೋಶೆತ್‌ ಇನ್ನೂ ಜೀವಂತನಿದ್ದನು. ಅವನು ಚಿಕ್ಕವನಿದ್ದಾಗ ಒಂದು ದುರಂತ ನಡೆದಿತ್ತು. ಅಂದಿನಿಂದ ಅವನಿಗೆ ತನ್ನ ಜೀವನವಿಡೀ ಸರಿಯಾಗಿ ನಡೆಯಲಿಕ್ಕೆ ಆಗಲಿಲ್ಲ. ಈಗ ನೀನು ಹೇಳಬಹುದಾ, ಮೆಫೀಬೋಶೆತನಿಗೆ ತಾನು ಹೊರಗಿನವನೆಂದು ಯಾಕೆ ಅನಿಸಿತು?

ಯೋನಾತಾನನ ಮಗನಿಗೆ ದಯೆತೋರಿಸಬೇಕೆಂದು ದಾವೀದನು ಬಯಸಿದನು. ಹಾಗಾಗಿ, ಯೆರೂಸಲೇಮಿನಲ್ಲಿ ತನ್ನ ಮನೆಯ ಪಕ್ಕದಲ್ಲೇ ಅವನ ಮನೆಯೂ ಇರುವಂತೆ ಮತ್ತು ತಾನು ಊಟ ಮಾಡುವ ಮೇಜಿನಲ್ಲೇ ಅವನಿಗೂ ಒಂದು ಸ್ಥಳವನ್ನು ದಾವೀದನು ಏರ್ಪಡಿಸಿದನು. ಚೀಬ ಎಂಬವನು ತನ್ನ ಮಕ್ಕಳು, ಆಳುಗಳೊಂದಿಗೆ ಮೆಫೀಬೋಶೆತನ ಸೇವಕರಾಗಿರುವಂತೆ ಮಾಡಿದನು. ಹೀಗೆ ಯೋನಾತಾನನ ಮಗನನ್ನು ದಾವೀದನು ನಿಜವಾಗಿಯೂ ಗೌರವಿಸಿದನು! ಆಮೇಲೆ ಏನಾಯಿತೆಂದು ನಿನಗೆ ಗೊತ್ತಾ?

ದಾವೀದನಿಗೆ ತನ್ನ ಮನೆಯವರಿಂದ ಕಷ್ಟತೊಂದರೆಗಳು ಬರತೊಡಗಿದವು. ದಾವೀದನ ಪುತ್ರರಲ್ಲಿ ಒಬ್ಬನಾದ ಅಬ್ಷಾಲೋಮ ತಂದೆಗೆ ತಿರುಗಿಬಿದ್ದು, ತಾನೇ ರಾಜನಾಗಬೇಕೆಂದು ಯತ್ನಿಸುತ್ತಿದ್ದ. ದಾವೀದನು ಪ್ರಾಣ ಉಳಿಸಿಕೊಳ್ಳಲು ಓಡಿಹೋಗಬೇಕಾಗಿಬಂತು. ಆಗ ಅನೇಕರು ದಾವೀದನೊಂದಿಗೆ ಹೋದಾಗ ಮೆಫೀಬೋಶೆತನೂ ಹೋಗಲು ಬಯಸಿದ್ದನು. ದಾವೀದನ ಮಿತ್ರರಾಗಿದ್ದ ಇವರೆಲ್ಲರಿಗೆ ದಾವೀದನೇ ಹಕ್ಕುಳ್ಳ ರಾಜನೆಂದು ಗೊತ್ತಿತ್ತು. ಆದರೆ ಮೆಫೀಬೋಶೆತನಿಗೆ ಹೋಗಲು ಆಗಲಿಲ್ಲ ಏಕೆಂದರೆ ಅವನಿಗೆ ನಡೆಯಲು ಕಷ್ಟವಾಗುತ್ತಿತ್ತು.

ಆಗ, ಮೆಫೀಬೋಶೆತನು ತಮ್ಮೊಂದಿಗೆ ಬರದಿದ್ದದ್ದು ಸ್ವತಃ ತಾನು ರಾಜನಾಗಬೇಕೆಂಬ ಉದ್ದೇಶದಿಂದಲೇ ಎಂದು ಚೀಬನು ದಾವೀದನ ಕಿವಿಯೂದಿದನು. ಈ ಸುಳ್ಳನ್ನು ದಾವೀದನು ನಂಬಿಬಿಟ್ಟನು! ಆದ್ದರಿಂದ ಮೆಫೀಬೋಶೆತನ ಎಲ್ಲ ಆಸ್ತಿಯನ್ನು ಚೀಬನಿಗೆ ಕೊಟ್ಟುಬಿಟ್ಟನು. ಸ್ವಲ್ಪ ಸಮಯದಲ್ಲೇ ದಾವೀದನು ಯುದ್ಧದಲ್ಲಿ ಅಬ್ಷಾಲೋಮನನ್ನು ಸೋಲಿಸಿ ಯೆರೂಸಲೇಮಿಗೆ ವಾಪಸ್ಸಾದನು. ನಿಜವಾಗಿ ನಡೆದದ್ದೇನೆಂದು ಈಗ ದಾವೀದನು ಮೆಫೀಬೋಶೆತನ ಬಾಯಿಂದಲೇ ಕೇಳುತ್ತಾನೆ. ನಿಜ ಸಂಗತಿ ತಿಳಿದುಬಂದಾಗ ಮೆಫೀಬೋಶೆತ್‌ ಮತ್ತು ಚೀಬರಿಬ್ಬರೂ ಆಸ್ತಿಯನ್ನು ಹಂಚಿಕೊಳ್ಳಬೇಕೆಂದು ದಾವೀದನು ತೀರ್ಮಾನಿಸಿದನು. ಆಗ ಮೆಫೀಬೋಶೆತನು ಏನು ಮಾಡಿದನೆಂದು ನೆನಸುತ್ತೀ?

ದಾವೀದನ ತೀರ್ಮಾನ ಅನ್ಯಾಯವೆಂದು ಅವನು ದೂರಲಿಲ್ಲ. ರಾಜನು ತನ್ನ ಕೆಲಸಗಳನ್ನು ಚೆನ್ನಾಗಿ ಮಾಡಲು ಸಾಧ್ಯವಾಗುವಂತೆ ಆತನಿಗೆ ಶಾಂತಿ ಸಮಾಧಾನ ಬೇಕೆಂದು ಮೆಫೀಬೋಶೆತನಿಗೆ ತಿಳಿದಿತ್ತು. ಆದ್ದರಿಂದ ಆಸ್ತಿಯನ್ನೆಲ್ಲ ಚೀಬನೇ ಇಟ್ಟುಕೊಳ್ಳುವಂತೆ ಹೇಳಿದನು. ಯೆಹೋವನ ಸೇವಕನಾದ ದಾವೀದನು ರಾಜನಾಗಿ ಯೆರೂಸಲೇಮಿಗೆ ಹಿಂದೆ ಬಂದಿದ್ದನಲ್ಲಾ, ಮೆಫೀಬೋಶೆತನಿಗೆ ಅಷ್ಟೇ ಸಾಕಾಗಿತ್ತು.

ಮೆಫೀಬೋಶೆತ್‌ ತುಂಬ ಕಷ್ಟಗಳನ್ನು ಸಹಿಸಿಕೊಂಡನು. ಅವನಿಗೆ ಎಷ್ಟೋ ಸಲ ತಾನು ಹೊರಗಿನವನೆಂದು ಅನಿಸಿತು. ಆದರೆ ಯೆಹೋವನು ಅವನನ್ನು ಪ್ರೀತಿಸಿದನು ಮತ್ತು ನೋಡಿಕೊಂಡನು. ಇದರಿಂದ ನಾವೇನು ಕಲಿಯಬಹುದು? — ನಾವು ಸರಿಯಾದದ್ದನ್ನು ಮಾಡುವಾಗಲೂ ಕೆಲವರು ನಮ್ಮ ಬಗ್ಗೆ ಸುಳ್ಳು ಚಾಡಿ ಹೇಳಬಹುದು. ಯೇಸು ಹೇಳಿದ್ದು: “ಲೋಕವು ನಿಮ್ಮನ್ನು ದ್ವೇಷಿಸುವುದಾದರೆ ಅದು ನಿಮ್ಮನ್ನು ದ್ವೇಷಿಸುವುದಕ್ಕಿಂತ ಮುಂಚೆ ನನ್ನನ್ನು ದ್ವೇಷಿಸಿದೆ.” ಜನರು ಯೇಸುವನ್ನು ಕೊಂದರು ಸಹ! ನಾವು ಸರಿಯಾದ ವಿಷಯಗಳನ್ನೇ ಮಾಡಿದರೆ ಸತ್ಯದೇವರಾದ ಯೆಹೋವನೂ ಆತನ ಮಗನಾದ ಯೇಸು ಸಹ ನಮ್ಮನ್ನು ಪ್ರೀತಿಸುವರು ಎಂಬ ಭರವಸೆ ನಮಗಿರಬಲ್ಲದು. (w11-E 06/01)

ನಿಮ್ಮ ಬೈಬಲಿನಲ್ಲೇ ಓದಿ

1 ಸಮುವೇಲ 20:15-17, 41, 42

2 ಸಮುವೇಲ 4:4; 9:1-10; 19:24-30

ಯೋಹಾನ 15:18

[ಪಾದಟಿಪ್ಪಣಿ]

^ ಪ್ಯಾರ. 3 ಈ ಲೇಖನವನ್ನು ನೀವು ಚಿಕ್ಕ ಮಗುವಿಗೆ ಓದಿಹೇಳುತ್ತಿರುವುದಾದರೆ ಅಡ್ಡಗೆರೆ ಇರುವಲ್ಲಿ ಸ್ವಲ್ಪ ನಿಲ್ಲಿಸಿ ಮಗು ಉತ್ತರ ಹೇಳುವಂತೆ ಪ್ರೋತ್ಸಾಹಿಸಿರಿ.