ಮುಖಪುಟ ಲೇಖನ | ನಮಗೆ ದೇವರ ಅಗತ್ಯ ಇದೆಯೇ?
ನಮಗೆ ದೇವರ ಅಗತ್ಯವಿದೆ ಏಕೆ?
ನಿಜವಾದ ಸಂತೋಷಕ್ಕಾಗಿ ಜನರಲ್ಲಿ ಆಧ್ಯಾತ್ಮಿಕ ಮೌಲ್ಯಗಳಿರಬೇಕೆಂದು ಮಾನಸಿಕ ಆರೋಗ್ಯ ತಜ್ಞರು ಹೇಳುತ್ತಾರೆ. ಜನರು ಉನ್ನತವಾದ ವಿಷಯಗಳಿಗೆ ಅಂದರೆ ಧರ್ಮದೆಡೆಗೆ ತಿರುಗುವುದು ಈ ನಿಜತ್ವಕ್ಕೆ ಹಿಡಿದ ಕನ್ನಡಿಯಂತಿದೆ.
ಮಾನವರು ಈಗಲೂ ಸದಾಕಾಲಕ್ಕೂ ಸುಖವಾಗಿರಬೇಕೆಂದು ದೇವರು ಬಯಸುತ್ತಾನೆ
ಮಾನವರಲ್ಲಿ ಹುಟ್ಟಿನಿಂದಲೇ ಆಧ್ಯಾತ್ಮಿಕತೆಗಾಗಿ ಹಂಬಲ ಇದೆ. ಈ ನಿಜಾಂಶವು ಬೈಬಲ್ ವಾಚಕರಿಗೆ ಹೊಸದಲ್ಲ. ಏಕೆಂದರೆ ಬೈಬಲಿನ ಮೊದಲ ಪುಸ್ತಕ ಆದಿಕಾಂಡದಲ್ಲಿನ ಆರಂಭದ ಅಧ್ಯಾಯಗಳು ಪ್ರಥಮ ಮಾನವ ದಂಪತಿಯನ್ನು ದೇವರು ಸೃಷ್ಟಿಸಿದ ಬಳಿಕ ಅವರೊಟ್ಟಿಗೆ ನಿಯಮಿತವಾಗಿ ಮಾತಾಡುತ್ತಿದ್ದನೆಂದು ತಿಳಿಸುತ್ತದೆ. ಹೀಗೆ ಅವರು ಆತನೊಟ್ಟಿಗೆ ಒಂದು ಆಧ್ಯಾತ್ಮಿಕ ಸಂಬಂಧವನ್ನು ಬೆಸೆಯಲು ಅವಕಾಶಕೊಟ್ಟನು. (ಆದಿಕಾಂಡ 3:8-10) ದೇವರು ಮಾನವರನ್ನು ತನ್ನ ಅವಶ್ಯಕತೆಯಿಲ್ಲದೆ, ಸ್ವತಂತ್ರರಾಗಿ ಬಾಳುವಂತೆ ರಚಿಸಲಿಲ್ಲ. ತಮ್ಮ ನಿರ್ಮಾಣಿಕನೊಂದಿಗೆ ಸಂವಾದ ಮಾಡುವ ಅಗತ್ಯ ಅವರಿಗಿದೆ. ಈ ಅಗತ್ಯಕ್ಕೆ ಬೈಬಲ್ ಆಗಾಗ್ಗೆ ಸೂಚಿಸುತ್ತಿರುತ್ತದೆ.
ಉದಾಹರಣೆಗೆ “ಅಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು ಸಂತೋಷಿತರು” ಎಂದು ಯೇಸು ಹೇಳಿದನು. (ಮತ್ತಾಯ 5:3) ಆ ಮಾತುಗಳು ಸುಖೀ-ಸಂತೃಪ್ತ ಬಾಳಿಗಾಗಿ ಮುಖ್ಯವಾಗಿ ಏನು ಅಗತ್ಯವೆಂದು ತಿಳಿಸಿಕೊಡುತ್ತವೆ. ಅದೇನೆಂದರೆ ನಮ್ಮಲ್ಲಿ ಹುಟ್ಟಿನಿಂದಲೇ ಬಂದಿರುವ ಆಧ್ಯಾತ್ಮಿಕ ಹಸಿವನ್ನು ಅಂದರೆ ದೇವರ ಬಗ್ಗೆ ತಿಳಿಯುವ ಆಸೆಯನ್ನು ತಣಿಸುವುದೇ. ಹೇಗೆ? ಇದಕ್ಕೆ ಉತ್ತರವನ್ನು ಯೇಸು ಈ ಮಾತುಗಳಲ್ಲಿ ತಿಳಿಸಿದ್ದಾನೆ. “ಮನುಷ್ಯನು ರೊಟ್ಟಿ ತಿಂದಮಾತ್ರದಿಂದಲ್ಲ, ಯೆಹೋವನ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದ ಬದುಕಬೇಕು.” * (ಮತ್ತಾಯ 4:4) ದೇವರ ಮಾತುಗಳು ಅಂದರೆ ಬೈಬಲಲ್ಲಿ ಕೊಡಲಾಗಿರುವ ಆತನ ಯೋಚನೆಗಳು ಮತ್ತು ಸಲಹೆಸೂಚನೆಗಳು ಸಂತೋಷಭರಿತ, ಅರ್ಥಪೂರ್ಣ ಬದುಕನ್ನು ಸಾಧ್ಯಗೊಳಿಸುತ್ತದೆ. ಯಾವ ವಿಧಗಳಲ್ಲಿ? ಮೂರು ಮೂಲಭೂತ ವಿಧಗಳನ್ನು ನೋಡೋಣ.
ನಮಗೆ ಉತ್ತಮ ನಿರ್ದೇಶನ ಬೇಕು
ಪ್ರೀತಿ, ಕುಟುಂಬ ಜೀವನ, ಸಂಬಂಧಗಳು, ಸಮಸ್ಯೆ ಬಗೆಹರಿಸುವುದು, ಸಂತೋಷ, ಜೀವನದ ಅರ್ಥ ಇವೆಲ್ಲಾದರ ಬಗ್ಗೆ ಸಲಹೆ ಬುದ್ಧಿವಾದ ಕೊಡಲು ಅಸಂಖ್ಯಾತ ನಿಪುಣರು, ತಜ್ಞರು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಈ ಎಲ್ಲ ವಿಷಯಗಳ ಬಗ್ಗೆ ಸರಿಯಾದ, ಸಂತುಲಿತ ನಿರ್ದೇಶನ ಕೊಡಲು ಅತ್ಯುಚ್ಚ ಅರ್ಹತೆ ಯಾರಿಗಿದೆ? ಯೆಹೋವ ದೇವರಲ್ಲದೆ ಬೇರಾರಿಗೆ ತಾನೇ ಇರಸಾಧ್ಯ? ಏಕೆಂದರೆ ಮಾನವಕುಲದ ನಿರ್ಮಾಣಿಕನು ಆತನೇ.
ಇದಕ್ಕೊಂದು ದೃಷ್ಟಾಂತ ನೋಡೋಣ. ನೀವೊಂದು ಹೊಸ ಸಲಕರಣೆ ಅಂದರೆ ಒಂದು ಕ್ಯಾಮೆರಾ ಅಥವಾ ಕಂಪ್ಯೂಟರ್ ಖರೀದಿಸಿದ್ದೀರಿ ಎಂದಿಟ್ಟುಕೊಳ್ಳಿ. ಅದರ ಜೊತೆಗೆ ಬಳಕೆದಾರರ ಕೈಪಿಡಿ ಕೊಡುತ್ತಾರೆ. ಈ ಪುಸ್ತಕ ನೀವು ಖರೀದಿಸಿದ ಸಲಕರಣೆಯನ್ನು ಸರಿಯಾಗಿ ಬಳಸಿ ಅದರಿಂದ ಪ್ರಯೋಜನ ಪಡೆಯುವುದು ಹೇಗೆಂದು ವಿವರಿಸುತ್ತದೆ. ಬೈಬಲನ್ನು ಅಂಥ ಒಂದು ಕೈಪಿಡಿಗೆ ಹೋಲಿಸಬಹುದು. ಮಾನವ ಜೀವದ ಉತ್ಪಾದಕನಾದ ದೇವರು ಬಳಕೆದಾರರಾಗಿರುವ ನಮಗೆ ಕೊಟ್ಟಿರುವ ಕೈಪಿಡಿ ಅದು. ಆತನ ಉತ್ಪಾದನೆಯಾದ ಜೀವವನ್ನು ಯಾವುದಕ್ಕಾಗಿ ರಚಿಸಲಾಗಿದೆ ಮತ್ತು ಅತ್ಯುತ್ತಮ ಫಲಿತಾಂಶಗಳು ಸಿಗುವ ಹಾಗೆ ಬಳಸುವುದು ಹೇಗೆಂದು ಅದು ತೋರಿಸುತ್ತದೆ.
ಬೈಬಲ್ ಸ್ಪಷ್ಟ ಸೂಚನೆಗಳಿರುವ ಒಂದು ಕೈಪಿಡಿಯಂತಿದೆ. ದೇವರ ‘ಉತ್ಪನ್ನವಾದ’ ನಮ್ಮ ಜೀವವನ್ನು ನಾವು ಹೇಗೆ ಬಳಸಿದರೆ ಉತ್ತಮ, ಸುರಕ್ಷಿತ ಎಂದು ಅದು ತೋರಿಸುತ್ತದೆ. ಇತರರು ಹೇಳಿಕೊಡುವ ಅಡ್ಡದಾರಿಗಳು, ಸಲಹೆಗಳು ತುಂಬ ಆಕರ್ಷಕ, ಸುಲಭ ಅನಿಸಬಹುದು. ಆದರೆ ತರ್ಕಬದ್ಧವಾಗಿ ಯೋಚಿಸಿ ನೋಡಿ. ಅತ್ಯುತ್ತಮ ಫಲಿತಾಂಶಗಳು ಸಿಗಬೇಕಾದರೆ ಸಮಸ್ಯೆಗಳನ್ನೂ ದೂರವಿಡಬೇಕಾದರೆ ನಿರ್ಮಾಣಿಕನ ನಿರ್ದೇಶನಗಳನ್ನೇ ಪಾಲಿಸುವುದು ಒಳ್ಳೇದಲ್ಲವೇ?
“ನಿನ್ನ ಉಪಯೋಗಕ್ಕಾಗಿ ನಿನಗೆ ಬೋಧಿಸುವವನೂ ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಸುವವನೂ ಆದ ನಾನೇ ನಿನ್ನ ಯೆಹೋವನೂ ನಿನ್ನ ದೇವರು ಆಗಿದ್ದೇನೆ. ನೀನು ನನ್ನ ಆಜ್ಞೆಗಳಿಗೆ ಕಿವಿಗೊಟ್ಟಿದ್ದರೆ ಚೆನ್ನಾಗಿತ್ತು! ಆಗ ನಿನ್ನ ಸಮಾಧಾನವು ನದಿಯಂತೆಯೂ ನಿನ್ನ ನೀತಿಯು ಸಮುದ್ರದ ಅಲೆಗಳಂತೆಯೂ ಇರುತ್ತಿದ್ದವು.”—ಯೆಶಾಯ 48:17, 18, ಪವಿತ್ರ ಗ್ರಂಥ
ಯೆಹೋವ ದೇವರು ನಿರ್ದೇಶನ, ಸೂಚನೆಗಳನ್ನು ಕೊಡುವುದಾದರೂ ಅದನ್ನು ಸ್ವೀಕರಿಸುವಂತೆ ನಮ್ಮನ್ನು ಒತ್ತಾಯಿಸುವುದಿಲ್ಲ. ಆತನು ನಮ್ಮನ್ನು ಪ್ರೀತಿಸುವುದರಿಂದ, ನಮ್ಮ ಹಿತಬಯಸುವುದರಿಂದ ಅಕ್ಕರೆಯಿಂದ ಹೀಗನ್ನುತ್ತಾನೆ: “ನಿನ್ನ ಉಪಯೋಗಕ್ಕಾಗಿ ನಿನಗೆ ಬೋಧಿಸುವವನೂ ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಸುವವನೂ ಆದ ನಾನೇ ನಿನ್ನ ಯೆಹೋವನೂ ನಿನ್ನ ದೇವರು ಆಗಿದ್ದೇನೆ. ನೀನು ನನ್ನ ಆಜ್ಞೆಗಳಿಗೆ ಕಿವಿಗೊಟ್ಟಿದ್ದರೆ ಚೆನ್ನಾಗಿತ್ತು! ಆಗ ನಿನ್ನ ಸಮಾಧಾನವು ನದಿಯಂತೆಯೂ ನಿನ್ನ ನೀತಿಯು ಸಮುದ್ರದ ಅಲೆಗಳಂತೆಯೂ ಇರುತ್ತಿದ್ದವು.” (ಯೆಶಾಯ 48:17, 18, ಪವಿತ್ರ ಗ್ರಂಥ) ಚುಟುಕಾಗಿ ಹೇಳುವುದಾದರೆ ನಾವು ದೇವರ ನಿರ್ದೇಶನ ಪಾಲಿಸಿದರೆ ನಮ್ಮ ಬದುಕು ಹಸನಾಗುವುದು. ಇನ್ನೊಂದು ಮಾತಲ್ಲಿ, ಚೆನ್ನಾಗಿ ಬಾಳಬೇಕಾದರೆ ಸಂತೋಷದಿಂದಿರಬೇಕಾದರೆ ನಮಗೆ ದೇವರ ಅಗತ್ಯವಿದೆ.
ನಮಗೆ ಜೀವನದ ಸಮಸ್ಯೆಗಳಿಗೆ ಪರಿಹಾರ ಬೇಕು
ದೇವರ ಅಗತ್ಯವಿಲ್ಲವೆಂದು ಅನಿಸಲು ಕೆಲವರಿಗಿರುವ ಕಾರಣ ಜೀವನದಲ್ಲಿ ಎದುರಾಗುವ ಕಷ್ಟಕರ ಸಮಸ್ಯೆಗಳು. ಒಬ್ಬ ಪ್ರೀತಿಪರ ದೇವರಿರುತ್ತಿದ್ದರೆ ಇಂಥ ಕಷ್ಟಗಳು ಇರುತ್ತಿರಲಿಲ್ಲ ಎಂಬುದು ಅವರ ಅಭಿಪ್ರಾಯ. ‘ಒಳ್ಳೆಯವರಿಗೆ ಏಕೆ ಕಷ್ಟಗಳು ಬರುತ್ತವೆ?’ ‘ಏನೂ ಅರಿಯದ ಮುಗ್ಧ ಕೂಸುಗಳು ವಿಕಲತೆಗಳೊಂದಿಗೆ ಹುಟ್ಟುವುದೇಕೆ?’ ‘ಬದುಕಲ್ಲಿ ಇಷ್ಟೊಂದು ಅನ್ಯಾಯವೇಕೆ?’ ಎಂದವರು ಕೇಳಬಹುದು. ಇವೆಲ್ಲ ಗಂಭೀರ ಪ್ರಶ್ನೆಗಳು ನಿಜ. ತೃಪ್ತಿದಾಯಕ ಉತ್ತರಗಳು ಸಿಕ್ಕಿದರೆ ಅವು ನಮ್ಮ ಜೀವನದ ಮೇಲೆ ಒಳ್ಳೇ ಪರಿಣಾಮ ಬೀರಬಲ್ಲವು. ಆದ್ದರಿಂದ ಈ ಎಲ್ಲ ಸಮಸ್ಯೆಗಳಿಗೆ ದೇವರೇ ಕಾರಣ ಎಂದು ತಕ್ಷಣ ದೂಷಿಸುವ ಬದಲಿಗೆ ಆತನ ವಾಕ್ಯವಾದ ಬೈಬಲ್ ಏನನ್ನುತ್ತದೆಂದು ನೋಡೋಣ.
ಆದಿಕಾಂಡ ಮೂರನೇ ಅಧ್ಯಾಯದಲ್ಲಿ ದೇವರ ವೈರಿಯಾದ ಸೈತಾನನು ಸರ್ಪವನ್ನು ಮುಂದಿಟ್ಟು ಮಾಡಿದ ಕೆಲಸದ ಬಗ್ಗೆ ತಿಳಿಸಲಾಗಿದೆ. ಒಳ್ಳೇದರ ಕೆಟ್ಟದ್ದರ ಹಣ್ಣನ್ನು ತಿನ್ನಬಾರದು ಎಂದು ಯೆಹೋವ ದೇವರು ಕೊಟ್ಟ ಆಜ್ಞೆಯನ್ನು ಪ್ರಥಮ ಮಾನವ ದಂಪತಿಯಾದ ಆದಾಮ ಹವ್ವ ಮೀರುವಂತೆ ಮಾಡಲು ಹವ್ವಳಿಗೆ ಅವನು ಹೇಳಿದ್ದು: “ನೀವು ಹೇಗೂ ಸಾಯುವದಿಲ್ಲ. ನೀವು ಇದರ ಹಣ್ಣನ್ನು ತಿಂದಾಗಲೇ ನಿಮ್ಮ ಕಣ್ಣುಗಳು ತೆರೆಯುವವು; ನೀವು ದೇವರಂತೆ ಆಗಿ ಒಳ್ಳೇದರ ಕೆಟ್ಟದ್ದರ ಭೇದವನ್ನು ಅರಿತವರಾಗುವಿರಿ; ಇದು ದೇವರಿಗೆ ಚೆನ್ನಾಗಿ ಗೊತ್ತುಂಟು.”—ಆದಿಕಾಂಡ 2:16, 17; 3:4, 5.
ಆ ಮಾತುಗಳ ಮೂಲಕ ಸೈತಾನನು ಹೇಳುತ್ತಿದ್ದದ್ದೇನೆಂದರೆ ದೇವರೊಬ್ಬ ಸುಳ್ಳುಗಾರ. ಆತನು ಆಳುವ ವಿಧಾನದಲ್ಲಿ ಯಾವುದೇ ನ್ಯಾಯವಿಲ್ಲ ಎಂದೂ ಸೂಚಿಸುತ್ತಿದ್ದ. ಮಾನವರೆಲ್ಲರು ತನ್ನ ಮಾತು ಕೇಳಿದರೆ ಅವರ ಬಾಳು ಚೆನ್ನಾಗಿರುವುದು ಎನ್ನುವುದು ಸೈತಾನನ ವಾದ ಆಗಿತ್ತು. ಈ ಎಲ್ಲ ಸವಾಲುಗಳನ್ನು ಹೇಗೆ ಬಗೆಹರಿಸಸಾಧ್ಯವಿತ್ತು? ಅದಕ್ಕಾಗಿ ಯೆಹೋವನು ಸಮಯ ಕೊಟ್ಟನು. ಹೀಗೆ ತನ್ನ ಮೇಲೆ ಹೊರಿಸಲಾದ ಆರೋಪಗಳು ನಿಜವೊ ಸುಳ್ಳೊ ಎಂಬದನ್ನು ವಿಶ್ವದಲ್ಲಿರುವವರೆಲ್ಲರೂ ನೋಡಲು ಸಾಧ್ಯವಾಗಲಿತ್ತು. ಮಾನವರು ದೇವರಿಲ್ಲದೆ ಚೆನ್ನಾಗಿ ಬಾಳಬಲ್ಲರೊ ಎಂದು ತೋರಿಸಿಕೊಡಲು ಆತನು ಸೈತಾನನಿಗೂ ಅವನ ಪಕ್ಷಸೇರಿದವರಿಗೂ ಅವಕಾಶ ಕೊಟ್ಟನು.
ಸೈತಾನನು ಹಾಕಿದ ಆ ಸವಾಲುಗಳ ಬಗ್ಗೆ ನಿಮಗೇನನಿಸುತ್ತದೆ? ಮಾನವರು ದೇವರ ಸಹಾಯವಿಲ್ಲದೆ ಚೆನ್ನಾಗಿ ಬಾಳಬಲ್ಲರೇ? ತಮ್ಮನ್ನೇ ಯಶಸ್ವಿಕರವಾಗಿ ಆಳಿಕೊಳ್ಳಬಲ್ಲರೇ? ಕಷ್ಟ, ಅನ್ಯಾಯ, ರೋಗ, ಮರಣ, ಅಪರಾಧ, ನೈತಿಕ ಕುಸಿತ, ಯುದ್ಧ, ಜನಾಂಗೀಯ ಹತ್ಯೆ ಮತ್ತಿತರ ಘೋರಕೃತ್ಯಗಳು ಮಾನವಕುಲವನ್ನು ಶತಮಾನಗಳಿಂದಲೂ ಪೀಡಿಸಿವೆ. ಇವೆಲ್ಲವೂ ದೇವರಿಂದ ಸ್ವತಂತ್ರವಾಗಿ ಆಳುವ ಮಾನವನ ಪ್ರಯತ್ನ ಪೂರ್ತಿ ಸೋತಿದೆ ಎನ್ನುವುದಕ್ಕೆ ನಿರಾಕರಿಸಲಾಗದ ಪುರಾವೆ. ಮಾನವಕುಲದ ಕಷ್ಟವ್ಯಥೆಗಳಿಗೆ ದೇವರಲ್ಲ ಬದಲಾಗಿ ಮಾನವರೇ ಪ್ರಧಾನ ಕಾರಣ ಎಂದು ತೋರಿಸುತ್ತಾ, ‘ಒಬ್ಬನು ಮತ್ತೊಬ್ಬನ ಮೇಲೆ ಅಧಿಕಾರನಡಿಸಿ ಅವನಿಗೆ ಹಾನಿಯನ್ನುಂಟುಮಾಡುತ್ತಾನೆ’ ಎನ್ನುತ್ತದೆ ಬೈಬಲ್.—ಪ್ರಸಂಗಿ 8:9.
ಇದೆಲ್ಲವನ್ನು ನೋಡುವಾಗ ಒಂದಂತೂ ಸ್ಪಷ್ಟ. ಮಾನವರ ನೆಮ್ಮದಿಗೆಡಿಸುವ ಪ್ರಶ್ನೆಗಳಿಗೆ ಉತ್ತರ ಮಾತ್ರವಲ್ಲ ಆ ಸಮಸ್ಯೆಗಳ ಪರಿಹಾರಕ್ಕಾಗಿಯೂ ನಾವು ದೇವರೆಡೆಗೆ ತಿರುಗಲೇಬೇಕು. ದೇವರು ಏನು ಮಾಡುವನು?
ನಮಗೆ ದೇವರ ಸಹಾಯ ಬೇಕು
ಕಾಯಿಲೆ, ವೃದ್ಧಾಪ್ಯ, ಮರಣದಿಂದ ಬಿಡುಗಡೆಹೊಂದಲು ಮಾನವರು ಎಷ್ಟೋ ಸಮಯದಿಂದ ಹಾತೊರೆದಿದ್ದಾರೆ. ಈ ನಿಟ್ಟಿನಲ್ಲಿ ಬಹಳಷ್ಟು ಸಮಯ, ಪ್ರಯತ್ನ, ಹಣವನ್ನು ಸುರಿಸಿದ್ದಾರೆ. ಆದರೆ ಹೇಳಿಕೊಳ್ಳುವಂಥ ಫಲಿತಾಂಶವೇನೂ ಸಿಕ್ಕಿಲ್ಲ. ಪುರಾತನಕಥೆಗಳಲ್ಲಿ ತಿಳಿಸಲಾಗಿರುವ ಅಮೃತ, ಯೌವನದ ಚಿಲುಮೆಯ ಮೂಲಕ ಮತ್ತು ಈಗಿನ ಕಾಲದಲ್ಲಿ ವಿಜ್ಞಾನದ ಮೂಲಕ ತಮಗೆ ಈ ಪಿಡುಗುಗಳಿಂದ ಬಿಡುಗಡೆ ಸಿಗುವುದೆಂದು ನಿರೀಕ್ಷಿಸಿದ್ದಾರೆ. ಅವರ ಈ ಎಲ್ಲಾ ಕನಸುಗಳು ನುಚ್ಚುನೂರಾಗಿವೆ.
ಮಾನವರು ಸುಖವಾಗಿ ಬಾಳಬೇಕೆಂದು ದೇವರು ಬಯಸುತ್ತಾನೆ. ಅವರನ್ನು ಸೃಷ್ಟಿಮಾಡಿದಾಗ ಇದೇ ಆತನ ಮೂಲ ಉದ್ದೇಶವಾಗಿತ್ತು. ಅದನ್ನು ಆತ ಮರೆತಿಲ್ಲ. (ಆದಿಕಾಂಡ 1:27, 28; ಯೆಶಾಯ 45:18) ಯೆಹೋವ ದೇವರು ತಾನು ಏನು ಮಾಡಲು ಉದ್ದೇಶಿಸುತ್ತಾನೊ ಅದನ್ನು ತಪ್ಪದೆ ಮಾಡಿಯೇ ತೀರುವನೆಂಬ ಆಶ್ವಾಸನೆಯನ್ನೂ ಕೊಟ್ಟಿದ್ದಾನೆ. (ಯೆಶಾಯ 55:10, 11) ಪ್ರಥಮ ಮಾನವ ದಂಪತಿಯು ಕಳಕೊಂಡ ಸುಂದರ ಉದ್ಯಾನದಂಥ ಪರಿಸ್ಥಿತಿಗಳನ್ನು ಆತನು ಪುನಃ ತರುವನೆಂದು ಬೈಬಲ್ ನಮಗನ್ನುತ್ತದೆ. ಅದರ ಕೊನೆ ಪುಸ್ತಕದಲ್ಲಿ ಈ ಮಾತುಗಳಿವೆ: “ಆತನು [ಯೆಹೋವ ದೇವರು] ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು; ಇನ್ನು ಮರಣವಿರುವುದಿಲ್ಲ; ಇನ್ನು ದುಃಖವಾಗಲಿ ಗೋಳಾಟವಾಗಲಿ ನೋವಾಗಲಿ ಇರುವುದಿಲ್ಲ. ಮೊದಲಿದ್ದ ಸಂಗತಿಗಳು ಗತಿಸಿಹೋಗಿವೆ.” (ಪ್ರಕಟನೆ 21:4) ಈ ಅದ್ಭುತಕರ ಪರಿಸ್ಥಿತಿಗಳನ್ನು ದೇವರು ಹೇಗೆ ತರುವನು? ಈ ವಾಗ್ದಾನದಿಂದ ನಾವು ಹೇಗೆ ಪ್ರಯೋಜನ ಪಡೆಯಬಲ್ಲೆವು?
ದೇವರ ಮಗನಾದ ಯೇಸು ಕ್ರಿಸ್ತ ತನ್ನ ಹಿಂಬಾಲಕರಿಗೆ ದೇವರ ಚಿತ್ತ ನೆರವೇರುವಂತೆ ಪ್ರಾರ್ಥಿಸಲು ಕಲಿಸಿದನು. ಅನೇಕರಿಗೆ ಈ ಪ್ರಾರ್ಥನೆಯ ಬಗ್ಗೆ ಗೊತ್ತಿದೆ ಅಥವಾ ಇದನ್ನು ಬಾಯಿಪಾಠ ಹೇಳುತ್ತಾರೆ. ಅದನ್ನು ಕೆಲವರು ‘ಕರ್ತನ ಪ್ರಾರ್ಥನೆ’ ಎಂದು ಕರೆಯುತ್ತಾರೆ. ಅದು ಹೀಗಿದೆ: “ಸ್ವರ್ಗದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪವಿತ್ರೀಕರಿಸಲ್ಪಡಲಿ. ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಸ್ವರ್ಗದಲ್ಲಿ ನೆರವೇರುವ ಪ್ರಕಾರ ಭೂಮಿಯಲ್ಲಿಯೂ ನೆರವೇರಲಿ.” (ಮತ್ತಾಯ 6:9, 10) ಮಾನವ ಆಳ್ವಿಕೆಯಿಂದ ಉಂಟಾಗಿರುವ ವಿಪತ್ಕಾರಕ ಪರಿಣಾಮಗಳನ್ನು ತೆಗೆದುಹಾಕಿ ತಾನು ವಾಗ್ದಾನಿಸಿರುವ ನೀತಿಯ ಹೊಸ ಲೋಕವನ್ನು ಯೆಹೋವ ದೇವರು ತರುವನು. ಇದಕ್ಕಾಗಿ ಆತನು ಬಳಸುವ ಮಾಧ್ಯಮ ಆತನ ರಾಜ್ಯವೇ. * (ದಾನಿಯೇಲ 2:44; 2 ಪೇತ್ರ 3:13) ದೇವರ ಆ ವಾಗ್ದಾನದಿಂದ ಪ್ರಯೋಜನ ಹೊಂದಲು ನಾವೇನು ಮಾಡಬೇಕು?
ಈ ಸರಳ ಹೆಜ್ಜೆಯನ್ನು ತೆಗೆದುಕೊಳ್ಳುವಂತೆ ಯೇಸು ತಿಳಿಸಿದನು: “ಒಬ್ಬನೇ ಸತ್ಯ ದೇವರಾಗಿರುವ ನಿನ್ನ ಮತ್ತು ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನ ಜ್ಞಾನವನ್ನು ಪಡೆದುಕೊಳ್ಳುತ್ತಾ ಇರುವುದೇ ನಿತ್ಯಜೀವವಾಗಿದೆ.” (ಯೋಹಾನ 17:3) ದೇವರ ನೆರವಿನಿಂದಾಗಿ ವಾಗ್ದತ್ತ ಹೊಸ ಲೋಕದಲ್ಲಿ ಅಂತ್ಯವಿಲ್ಲದ ಜೀವನ ಖಂಡಿತ ಸಾಧ್ಯ. ಈ ನಿರೀಕ್ಷೆಯು, ‘ನಮಗೆ ದೇವರ ಅಗತ್ಯವಿದೆಯೇ?’ ಎಂಬ ಪ್ರಶ್ನೆಗೆ ‘ಹೌದು’ ಎಂದುತ್ತರಿಸಲು ಇನ್ನೊಂದು ಕಾರಣವನ್ನೂ ಕೊಡುತ್ತದೆ.
ದೇವರ ಬಗ್ಗೆ ಯೋಚಿಸಬೇಕಾದ ಸಮಯ ಇದೇ
ಯೇಸುವಿನ ಶಿಷ್ಯ ಪೌಲ 2,000 ವರ್ಷಗಳ ಹಿಂದೆ ಅಥೇನ್ಸಿನ ಅರಿಯೋಪಾಗ ಇಲ್ಲವೆ ಮಾರ್ಸ್ ಬೆಟ್ಟದಲ್ಲಿದ್ದಾಗ ಅಲ್ಲಿ ನೆರೆದಿದ್ದ ಮುಕ್ತಚಿಂತಕರಾದ ಅಥೇನ್ಸಿನವರಿಗೆ ದೇವರ ಬಗ್ಗೆ ಹೀಗಂದನು: “ಆತನೇ ಎಲ್ಲ ಮನುಷ್ಯರಿಗೆ ಜೀವವನ್ನೂ ಶ್ವಾಸವನ್ನೂ ಸರ್ವವನ್ನೂ ಕೊಡುವಾತನಾಗಿದ್ದಾನೆ. ಆತನಲ್ಲಿಯೇ ನಾವು ಜೀವಿಸುತ್ತೇವೆ, ಚಲಿಸುತ್ತೇವೆ ಮತ್ತು ಅಸ್ತಿತ್ವದಲ್ಲಿದ್ದೇವೆ. ನಿಮ್ಮ ಕವಿಗಳಲ್ಲಿಯೂ ಕೆಲವರು, ‘ನಾವು ಸಹ ಆತನ ಸಂತಾನದವರೇ’ ಎಂದು ಹೇಳಿದ್ದಾರೆ.”—ಅ. ಕಾರ್ಯಗಳು 17:25, 28.
ಪೌಲನು ಆಗ ಅಥೇನ್ಸಿನವರಿಗೆ ಹೇಳಿದ ಮಾತು ಈಗಲೂ ಸತ್ಯ. ನಮ್ಮ ಸೃಷ್ಟಿಕರ್ತ ನಮಗೆ ಉಸಿರಾಡಲು ಗಾಳಿ, ತಿನ್ನಲು ಆಹಾರ, ಕುಡಿಯಲು ನೀರನ್ನು ಒದಗಿಸುತ್ತಾನೆ. ನಮ್ಮ ಜೀವಪೋಷಣೆಗಾಗಿ ಆತನು ಕೊಟ್ಟಿರುವ ಒಳ್ಳೇ ಸಂಗತಿಗಳಿಲ್ಲದೆ ಬದುಕಲು ಸಾಧ್ಯವೇ ಇಲ್ಲ. ಆದರೆ ಎಲ್ಲ ಜನರಿಗಾಗಿ, ತನ್ನ ಬಗ್ಗೆ ಯೋಚಿಸದವರಿಗೂ ಅದೆಲ್ಲವನ್ನೂ ಏಕೆ ಒದಗಿಸುತ್ತಾ ಇದ್ದಾನೆ? “ಅವರು ದೇವರಿಗಾಗಿ ತಡಕಾಡಿ, ನಿಜವಾಗಿಯೂ ಕಂಡುಹಿಡಿಯುವ ಕಾರಣದಿಂದ ಆತನನ್ನು ಹುಡುಕುವಂತೆ ಮಾಡಲಿಕ್ಕಾಗಿಯೇ. ಆದರೂ ವಾಸ್ತವದಲ್ಲಿ ಆತನು ನಮ್ಮಲ್ಲಿ ಪ್ರತಿಯೊಬ್ಬನಿಗೂ ಬಹಳ ದೂರವಾಗಿರುವುದಿಲ್ಲ” ಎನ್ನುತ್ತಾನೆ ಪೌಲ.—ಅ. ಕಾರ್ಯಗಳು 17:27.
ನೀವು ದೇವರ ಬಗ್ಗೆ ಇನ್ನಷ್ಟು ಚೆನ್ನಾಗಿ ತಿಳಿಯಲು ಅಂದರೆ ಆತನ ಉದ್ದೇಶಗಳ ಬಗ್ಗೆ, ಈಗಲೂ ಸದಾಕಾಲಕ್ಕೂ ಚೆನ್ನಾಗಿ ಬಾಳಲು ಆತನ ಸಲಹೆಗಳ ಬಗ್ಗೆ ಹೆಚ್ಚು ಕಲಿಯಲು ಇಚ್ಛಿಸುತ್ತೀರೊ? ಹಾಗಿದ್ದರೆ ನಿಮಗೆ ಈ ಪತ್ರಿಕೆಯನ್ನು ತಂದುಕೊಟ್ಟವರೊಂದಿಗೆ ಮಾತಾಡಿ ಅಥವಾ ಈ ಪತ್ರಿಕೆಯ ಪ್ರಕಾಶಕರನ್ನು ದಯವಿಟ್ಟು ಸಂಪರ್ಕಿಸಿ. ಇದನ್ನು ಕಲಿಯಲು ನಿಮಗೆ ಬೇಕಾದ ಸಹಾಯವನ್ನು ಕೊಡಲು ತುಂಬ ಸಂತೋಷಪಡುವರು. (w13-E 12/01)
^ ಪ್ಯಾರ. 5 ಬೈಬಲ್‍ನಲ್ಲಿ ಯೆಹೋವ ಎನ್ನುವುದು ದೇವರ ಹೆಸರು.
^ ಪ್ಯಾರ. 20 ಆ ರಾಜ್ಯವು ದೇವರ ಚಿತ್ತವನ್ನು ಭೂಮಿಯ ಮೇಲೆ ಹೇಗೆ ನೆರವೇರಿಸುವುದು ಎಂಬ ಹೆಚ್ಚಿನ ಮಾಹಿತಿಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾದ ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ಅಧ್ಯಾಯ 8ನ್ನು ನೋಡಿ. ಇದು ಆನ್‌ಲೈನ್‍ನಲ್ಲೂ ಲಭ್ಯವಿದ್ದು, www.ps8318.comನಿಂದ ಡೌನ್‌ಲೋಡ್ ಮಾಡಬಹುದು.