ನಮ್ಮ ಓದುಗರ ಪ್ರಶ್ನೆ
ಬಲಿಷ್ಠರು ಬಲಹೀನರ ಮೇಲೆ ದಬ್ಬಾಳಿಕೆ ಮಾಡುವಾಗ ದೇವರು ಏಕೆ ಸುಮ್ಮನಿರುತ್ತಾನೆ?
ಬಲಿಷ್ಠರು ಬಲಹೀನರ ಮೇಲೆ ದಬ್ಬಾಳಿಕೆ ಮಾಡಿರುವಂಥ ಕೆಲವು ಮನಕಲಕುವ ಘಟನೆಗಳನ್ನು ಬೈಬಲಿನಲ್ಲಿ ದಾಖಲಿಸಲಾಗಿದೆ. ಒಂದು ಉದಾಹರಣೆ ಕ್ರಿ.ಪೂ. ಹತ್ತನೇ ಶತಮಾನದಲ್ಲಿ ಜೀವಿಸಿದ್ದ ನಾಬೋತ ಎಂಬವನದ್ದು. ಆಗ ಆಹಾಬ ಇಸ್ರಾಯೇಲಿನ ರಾಜನಾಗಿದ್ದನು. ಇವನಿಗೆ ನಾಬೋತನ ದ್ರಾಕ್ಷೇತೋಟ ಬೇಕಿತ್ತು. ಇವನ ಹೆಂಡತಿ ಈಜೆಬೆಲಳು ಸಂಚುಹೂಡಿ ನಾಬೋತ ಮತ್ತು ಅವನ ಪುತ್ರರನ್ನು ಸಾಯಿಸಿದಳು. ಆಗ ಆಹಾಬ ಆ ದ್ರಾಕ್ಷೇತೋಟವನ್ನು ವಶಪಡಿಸಿಕೊಂಡ. (1 ಅರಸುಗಳು 21:1-16; 2 ಅರಸುಗಳು 9:26) ಅವನು ಈ ರೀತಿ ತನ್ನ ಅಧಿಕಾರದ ದುರ್ಬಳಕೆ ಮಾಡಿದಾಗ ದೇವರು ಸುಮ್ಮನಿದ್ದದ್ದೇಕೆ?
ದೇವರು ಸುಳ್ಳಾಡಲು ಸಾಧ್ಯವಿಲ್ಲ.—ತೀತ 1:2
ಒಂದು ಮುಖ್ಯ ಕಾರಣ: ದೇವರು ಸುಳ್ಳಾಡುವುದಿಲ್ಲ. (ತೀತ 1:2) ಇದಕ್ಕೂ ದಬ್ಬಾಳಿಕೆಯ ಕೃತ್ಯಗಳಿಗೂ ಏನು ಸಂಬಂಧ? ಮಾನವರು ತನ್ನ ವಿರುದ್ಧ ದಂಗೆಯೆದ್ದರೆ ಪರಿಣಾಮ ಮರಣವೇ ಎಂದು ದೇವರು ಏದೆನ್ ತೋಟದಲ್ಲಿ ಎಚ್ಚರಿಸಿದ್ದನು. ಆತನು ಎಚ್ಚರಿಸಿದಂತೆಯೇ ಮಾನವರು ದಂಗೆಯೆದ್ದಂದಿನಿಂದ ಸಾಯುತ್ತಿದ್ದಾರೆ. ಭೂಮಿಯಲ್ಲಾದ ಪ್ರಪ್ರಥಮ ಸಾವು ಹೇಬೇಲನದ್ದು. ಅವನಿಗೆ ಸಾವು ಬಂದದ್ದು ಅವನ ಅಣ್ಣನಾದ ಕಾಯಿನನ ದಬ್ಬಾಳಿಕೆಯ ಕೃತ್ಯದಿಂದಾಗಿಯೇ.—ಆದಿಕಾಂಡ 2:16, 17; 4:8.
ಅಂದಿನಿಂದ ಸಾಗಿಬಂದ ಮಾನವ ಚರಿತ್ರೆಯ ಬಗ್ಗೆ ದೇವರ ವಾಕ್ಯವಾದ ಬೈಬಲ್ ಈ ಚುಟುಕಾದ ವರ್ಣನೆ ಕೊಡುತ್ತದೆ: ‘ಒಬ್ಬನು ಮತ್ತೊಬ್ಬನ ಮೇಲೆ ಅಧಿಕಾರನಡಿಸಿ ಅವನಿಗೆ ಹಾನಿಯನ್ನುಂಟುಮಾಡಿದ್ದಾನೆ.’ (ಪ್ರಸಂಗಿ 8:9) ಈ ಮಾತು ಸತ್ಯವಾಗಿದೆಯೇ? ಯೆಹೋವನು ತನ್ನ ಜನರಾದ ಇಸ್ರಾಯೇಲ್ಯರಿಗೆ ಅವರ ರಾಜರು ದಬ್ಬಾಳಿಕೆಮಾಡುವರು, ಇದರಿಂದಾಗಿ ಅವರು ಯೆಹೋವನಿಗೆ ಮೊರೆಯಿಡುವರು ಎಂದು ಎಚ್ಚರಿಸಿದ್ದನು. (1 ಸಮುವೇಲ 8:11-18) ಬುದ್ಧಿವಂತ ರಾಜನಾದ ಸೊಲೊಮೋನ ಸಹ ತನ್ನ ಜನರ ಮೇಲೆ ವಿಪರೀತ ಮೊತ್ತದ ತೆರಿಗೆಗಳನ್ನು ಹೊರಿಸಿದನು. (1 ಅರಸುಗಳು 11:43; 12:3, 4) ಆಹಾಬ ಮತ್ತು ಇತರ ದುಷ್ಟ ರಾಜರು ಇದಕ್ಕಿಂತ ಹೆಚ್ಚು ದಬ್ಬಾಳಿಕೆ ನಡೆಸಿದರು. ದೇವರು ಅವರೆಲ್ಲರ ದಬ್ಬಾಳಿಕೆಯ ಕೃತ್ಯಗಳನ್ನು ತಡೆಯುತ್ತಿದ್ದರೆ ಏನಾಗುತ್ತಿತ್ತೆಂದು ಯೋಚಿಸಿ. ಆತನಾಡಿದ ಮಾತುಗಳನ್ನು ಆತನೇ ಸುಳ್ಳುಮಾಡಿದಂತೆ ಆಗುತ್ತಿತ್ತಲ್ಲವೆ?
‘ಒಬ್ಬನು ಮತ್ತೊಬ್ಬನ ಮೇಲೆ ಅಧಿಕಾರನಡಿಸಿ ಅವನಿಗೆ ಹಾನಿಯನ್ನುಂಟುಮಾಡುವನು.’—ಪ್ರಸಂಗಿ 8:9
ಇನ್ನೊಂದು ವಿಷಯ ನೆನಪಿಡಿ: ಜನರು ದೇವರ ಸೇವೆಮಾಡುವುದು ಬರೀ ಸ್ವಾರ್ಥಕ್ಕಾಗಿ ಎನ್ನುವುದು ಸೈತಾನನ ವಾದ. (ಯೋಬ 1:9, 10; 2:4) ಹೀಗಿರುವಾಗ ದೇವರು ತನ್ನೆಲ್ಲ ಸೇವಕರನ್ನು ಎಲ್ಲ ವಿಧದ ದಬ್ಬಾಳಿಕೆಯಿಂದ ಸಂರಕ್ಷಿಸಿದರೆ ಸೈತಾನನು ಹೇಳಿದ್ದು ಸರಿ ಎಂದಾಗುವುದಲ್ಲವೇ? ಅಲ್ಲದೆ, ದೇವರು ಯಾರಿಗೂ ಯಾವುದೇ ರೀತಿಯ ದಬ್ಬಾಳಿಕೆ ಆಗದಂತೆ ಕಾಪಾಡುತ್ತಿದ್ದರೆ ಇನ್ನೂ ದೊಡ್ಡ ಸುಳ್ಳೊ೦ದನ್ನು ಬೆಂಬಲಿಸಿದಂತಾಗುತ್ತಿತ್ತು. ಅದೇನು? ದೇವರ ಸಹಾಯವಿಲ್ಲದೆ ಮಾನವರು ಯಶಸ್ವಿಯಾಗಿ ಆಳಬಲ್ಲರೆಂಬ ಸುಳ್ಳು. ಹೆಚ್ಚಿನವರು ಆ ಸುಳ್ಳನ್ನು ಸತ್ಯವೆಂದು ನಂಬಿಬಿಡುತ್ತಿದ್ದರು. ಆದರೆ ಮಾನವನು ತನ್ನ ಸ್ವಂತ ಬಲದಿಂದ ಆಳ್ವಿಕೆ ನಡೆಸಲು ಅಸಮರ್ಥನೆಂದು ದೇವರ ವಾಕ್ಯ ಸ್ಪಷ್ಟವಾಗಿ ಹೇಳುತ್ತದೆ. (ಯೆರೆಮಿಾಯ 10:23) ದೇವರ ರಾಜ್ಯವೇ ಬರಬೇಕು; ಆಗ ಮಾತ್ರ ಅನ್ಯಾಯ ಅಂತ್ಯವಾಗುವುದು.
ದೇವರು ದಬ್ಬಾಳಿಕೆಯ ಬಗ್ಗೆ ಏನೂ ಮಾಡದೆ ಸುಮ್ಮನಿದ್ದಾನೆ ಎಂದು ಇದರರ್ಥವೊ? ಇಲ್ಲ. ಆತನು ಎರಡು ಸಂಗತಿಗಳನ್ನು ಮಾಡುತ್ತಾನೆ: ಒಂದು, ದಬ್ಬಾಳಿಕೆಯ ಬಗ್ಗೆ ಹಲವಾರು ವಿಷಯಗಳನ್ನು ತಿಳಿಸುತ್ತಾನೆ. ಉದಾಹರಣೆಗೆ, ನಾಬೋತನ ವಿರುದ್ಧ ಈಜೆಬೆಲಳು ಮಾಡಿದ ಸಂಚಿನ ಒಂದೊಂದು ಅಂಶವನ್ನೂ ದೇವರು ತನ್ನ ವಾಕ್ಯದಲ್ಲಿ ಬೆಳಕಿಗೆ ತಂದಿದ್ದಾನೆ. ಇಂಥ ದುಷ್ಕೃತ್ಯಗಳ ಹಿಂದೆ ಒಬ್ಬ ಶಕ್ತಿಶಾಲಿ ಅಧಿಪತಿ ಇದ್ದಾನೆಂದೂ ಅವನು ತನ್ನ ನಿಜವಾದ ಗುರುತನ್ನು ಬಚ್ಚಿಡುತ್ತಿದ್ದಾನೆಂದೂ ಬೈಬಲ್‍ನಲ್ಲಿ ತಿಳಿಸಿದ್ದಾನೆ. (ಯೋಹಾನ 14:30; 2 ಕೊರಿಂಥ 11:14) ಆ ಅಧಿಪತಿ ಪಿಶಾಚನಾದ ಸೈತಾನನೆಂದು ಬೈಬಲಿನಲ್ಲಿ ತಿಳಿಸುವ ಮೂಲಕ ಅವನ ಬಣ್ಣ ಬಯಲು ಮಾಡಿದ್ದಾನೆ. ದುಷ್ಟತನ ಮತ್ತು ದಬ್ಬಾಳಿಕೆಯನ್ನೂ, ಅದರ ನಿಜವಾದ ಮೂಲ ಯಾರೆಂಬದನ್ನೂ ಬಯಲಿಗೆಳೆಯುವ ಮೂಲಕ ಸ್ವತಃ ನಾವು ದುಷ್ಟತನದಿಂದ ದೂರವಿರುವಂತೆ ದೇವರು ಸಹಾಯಮಾಡುತ್ತಿದ್ದಾನೆ. ಹೀಗೆ ಆತನು ನಮ್ಮ ಅನಂತ ಭವಿಷ್ಯತ್ತಿಗೆ ಯಾವುದೇ ಕುತ್ತು ಬರದಂತೆ ರಕ್ಷಿಸುತ್ತಾನೆ.
ಎರಡನೆಯದಾಗಿ, ದಬ್ಬಾಳಿಕೆ ಅಂತ್ಯವಾಗಲಿದೆ ಎಂಬ ದೃಢವಾದ ನಿರೀಕ್ಷೆಯನ್ನು ದೇವರು ಕೊಡುತ್ತಾನೆ. ಆಹಾಬ, ಈಜೆಬೆಲ ಹಾಗೂ ಅವರಂಥ ಇತರರನ್ನು ಆತನು ಬಯಲಿಗೆಳೆದು ತೀರ್ಪುವಿಧಿಸಿ ಶಿಕ್ಷಿಸಿದನು. ಇದು ನಮಗೆ ಮುಂದೊಂದು ದಿನ ಎಲ್ಲ ದುಷ್ಟರನ್ನು ಆತನು ಶಿಕ್ಷಿಸುವನೆಂಬ ಮಾತಲ್ಲಿ ಭರವಸೆಯಿಡಲು ಆಧಾರ ಕೊಡುತ್ತದೆ. (ಕೀರ್ತನೆ 52:1-5) ದೇವರನ್ನು ಪ್ರೀತಿಸುವವರು ದುಷ್ಟತನದ ದುಷ್ಪರಿಣಾಮಗಳನ್ನು ಈಗ ಅನುಭವಿಸಬೇಕಾಗುತ್ತದೆ. ಆದರೆ ಅದೆಲ್ಲವನ್ನೂ ತಾನು ತೆಗೆದುಹಾಕುವೆನೆಂಬ ವಿಶ್ವಾಸಾರ್ಹ ನಿರೀಕ್ಷೆಯನ್ನು ದೇವರು ಕೊಟ್ಟಿದ್ದಾನೆ. * ಅನ್ಯಾಯಮುಕ್ತವಾಗುವ ಆ ಸುಂದರ ಭೂಮಿಯಲ್ಲಿ ನಂಬಿಗಸ್ತ ನಾಬೋತ ಮತ್ತವನ ಪುತ್ರರು ಸದಾ ಜೀವಿಸುವರು.—ಕೀರ್ತನೆ 37:34. (w14-E 02/01)
^ ಪ್ಯಾರ. 8 ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ಅಧ್ಯಾಯ 11 ನೋಡಿ. ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.