ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಮುಖಪುಟ ಲೇಖನ | ಸಾವೇ ಕೊನೆಯೇ?

ಸಾವು ತರುವ ನೋವು

ಸಾವು ತರುವ ನೋವು

ಯಾರೂ ಇಷ್ಟಪಡದ, ಮಾತಾಡಲೂ ಬಯಸದ ವಿಷಯ—ಸಾವು. ಆದರೆ ಇಂದಿಲ್ಲ ನಾಳೆ ನಾವೆಲ್ಲ ಅದನ್ನು ಎದುರಿಸಲೇಬೇಕು. ಸಾವು ತುಂಬ ನೋವು ತರುತ್ತದೆ.

ಹೆತ್ತವರಾಗಲಿ, ಬಾಳ ಸಂಗಾತಿಯಾಗಲಿ, ಮಗುವಾಗಲಿ ಸಾವಿನಿಂದ ನಮ್ಮನ್ನು ಅಗಲಿದಾಗ ಅದನ್ನು ಒಪ್ಪಿಕೊಳ್ಳುವುದು ಸುಲಭದ ವಿಷಯವಲ್ಲ. ಸಾವು ದಿಢೀರನೆ ಬಂದೆರಗಬಹುದು ಅಥವಾ ವಿಷದಂತೆ ನಿಧಾನವಾಗಿ ಆವರಿಸಬಹುದು. ವಿಷಯ ಏನೇ ಇರಲಿ, ಅದು ಕೊಡುವ ನೋವಿನಿಂದ ತಪ್ಪಿಸಿಕೊಳ್ಳಲಿಕ್ಕಾಗಲಿ ಅದರ ಹಿಡಿತದಿಂದ ಬಿಡಿಸಿಕೊಳ್ಳಲಿಕ್ಕಾಗಲಿ ಆಗುವುದಿಲ್ಲ.

ಆ್ಯಂಟೊನ್ಯೊ ಎಂಬವನ ತಂದೆ ರಸ್ತೆ ಅಪಘಾತದಲ್ಲಿ ತೀರಿಕೊಂಡರು. ಅವನು ಹೇಳುವುದು: “ಸಾವು ಹೇಗೆ ಅಂದರೆ, ಯಾರೋ ಬಂದು ನಿಮ್ಮ ಮನೆಗೆ ಬೀಗ ಹಾಕಿ ಬೀಗದ ಕೈಯನ್ನು ತೆಗೆದುಕೊಂಡು ಹೋದ ಹಾಗೆ. ನಿಮ್ಮಿಂದ ಇನ್ನು ಯಾವತ್ತೂ ವಾಪಸ್‌ ಮನೆಗೆ ಬರುವುದಕ್ಕೆ ಆಗುವುದಿಲ್ಲ. ನಿಮ್ಮ ಜೊತೆ ನೆನಪುಗಳು ಬಿಟ್ಟರೆ ಬೇರೇನೂ ಇರುವುದಿಲ್ಲ. ಒಪ್ಪಿಕೊಳ್ಳಲೇಬೇಕಾದ ಸತ್ಯ ಇದು. ಇದೆಂಥ ಅನ್ಯಾಯ ಎಂದು ನಿಮಗನಿಸಿದರೂ ನಿಮ್ಮಿಂದ ಏನೂ ಮಾಡಲಾಗುವುದಿಲ್ಲ.”

ಡೊರತಿ ಎಂಬಾಕೆ ಭಾನುವಾರಗಳಂದು ಮಕ್ಕಳಿಗೆ ಧರ್ಮದ ಬಗ್ಗೆ ಕಲಿಸುವ ಶಿಕ್ಷಕಿ. 47ನೇ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡಳು. ಸಾವಿನ ನಂತರ ಏನಾಗುತ್ತದೆಂದು ತಿಳಿಯಲು ಪ್ರಯತ್ನಿಸಿದಳು. ಸಾವೇ ಕೊನೆ ಎಂದು ಈಕೆಗೆ ಅನಿಸುತ್ತಿರಲಿಲ್ಲ. ಆದರೆ ನಿಜವೇನೆಂದೂ ತಿಳಿದಿರಲಿಲ್ಲ. “ಸತ್ತ ಮೇಲೆ ನಮಗೇನಾಗುತ್ತದೆ?” ಎಂದು ಆ್ಯಂಗ್ಲಿಕನ್‌ ಚರ್ಚ್‌ ಪಾದ್ರಿಗೆ ಕೇಳಿದಳು. ಅದಕ್ಕವನು, “ಯಾರಿಗೂ ಅದರ ಬಗ್ಗೆ ಗೊತ್ತಿಲ್ಲ. ಕಾದು ನೋಡಬೇಕು ಏನಾಗುತ್ತದೆ ಅಂತ” ಎಂದು ಹೇಳಿದ.

“ಕಾದು ನೋಡಬೇಕು” ಎನ್ನುವ ಒಂದೇ ಮಾರ್ಗ ನಮ್ಮ ಮುಂದಿದೆಯಾ? ಅಥವಾ ಸಾವೇ ಕೊನೆ ಅಲ್ಲ ಎಂದು ಖಚಿತವಾಗಿ ತಿಳಿದುಕೊಳ್ಳಲು ಬೇರೇನಾದರೂ ಮಾರ್ಗವಿದೆಯಾ? (w14-E 01/01)