ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 2

ರೆಬೆಕ್ಕ ಯೆಹೋವನಿಗೆ ಸಂತೋಷ ತಂದಳು

ರೆಬೆಕ್ಕ ಯೆಹೋವನಿಗೆ ಸಂತೋಷ ತಂದಳು

ರೆಬೆಕ್ಕಳಿಗೆ ಯೆಹೋವ ದೇವರು ಎಂದರೆ ತುಂಬ ಪ್ರೀತಿ. ಅವಳ ಗಂಡನ ಹೆಸರು ಇಸಾಕ. ಅವನಿಗೂ ಯೆಹೋವನ ಮೇಲೆ ಪ್ರೀತಿ ಇತ್ತು. ರೆಬೆಕ್ಕ ಇಸಾಕನನ್ನು ಮದುವೆಯಾದದ್ದು ಹೇಗೆ? ಅವಳು ಯೆಹೋವನಿಗೆ ಹೇಗೆ ಸಂತೋಷ ತಂದಳು? ನೋಡೋಣ.

ಇಸಾಕನ ಅಪ್ಪನ ಹೆಸರು ಅಬ್ರಹಾಮ. ಅಮ್ಮನ ಹೆಸರು ಸಾರ. ಅಬ್ರಹಾಮನಿಗೆ ಒಂದು ಆಸೆ ಇತ್ತು. ತನ್ನ ಮಗ ಇಸಾಕ ಯೆಹೋವನನ್ನು ಆರಾಧಿಸುವ ಹುಡುಗಿಯನ್ನು ಮಾತ್ರ ಮದುವೆಯಾಗಬೇಕು ಅಂತ. ಆದರೆ ಇವರು ಇದ್ದ ಕಾನಾನ್‌ ದೇಶದಲ್ಲಿ ಯಾರೂ ಯೆಹೋವನನ್ನು ಆರಾಧಿಸುತ್ತಿರಲಿಲ್ಲ. ಹಾಗಾಗಿ ತನ್ನ ಸಂಬಂಧಿಕರು ವಾಸಿಸುತ್ತಿದ್ದ ಹಾರಾನ್‌ ಎಂಬ ಊರಿನಿಂದ ಹುಡುಗಿ ತರಲು ತನ್ನ ಸೇವಕನನ್ನು ಕಳುಹಿಸಿದ. ಬಹುಶಃ ಈ ಸೇವಕನ ಹೆಸರು ಎಲಿಯೇಜರ.

ಒಂಟೆಗಳಿಗೆ ನೀರು ತರಲು ರೆಬೆಕ್ಕ ಕಷ್ಟಪಟ್ಟು ಕೆಲಸಮಾಡಿದಳು

ಎಲಿಯೇಜರ ಮತ್ತು ಕೆಲವು ಸೇವಕರು ಹಾರಾನಿಗೆ ಹೊರಟರು. ತುಂಬ ದೂರದ ಪ್ರಯಾಣ. ಅವರು ಹತ್ತು ಒಂಟೆಗಳ ಮೇಲೆ ಊಟ ಮತ್ತು ಉಡುಗೊರೆಗಳನ್ನು ಕಟ್ಟಿಕೊಂಡು ಹೊರಟರು. ಅವರು ಹಾರಾನ್‌ ತಲುಪಿದಾಗ ಒಂದು ಬಾವಿಯ ಹತ್ತಿರ ನಿಂತರು. ಅಲ್ಲಿ ನೀರು ತುಂಬಲು ಹೆಂಗಸರು ಬರುತ್ತಾರೆ ಎಂದು ಎಲಿಯೇಜರನಿಗೆ ಗೊತ್ತಿತ್ತು. ಆದರೆ ಅಷ್ಟೊಂದು ಹೆಂಗಸರಲ್ಲಿ ಯಾರನ್ನು ಇಸಾಕನಿಗೆ ಹೆಂಡತಿಯಾಗಿ ಆರಿಸಬೇಕೆಂದು ಎಲಿಯೇಜರನಿಗೆ ಗೊತ್ತಾಗಿದ್ದು ಹೇಗೆ? ಅವನು ಯೆಹೋವನಿಗೆ ಪ್ರಾರ್ಥನೆ ಮಾಡಿದ. ‘ಕುಡಿಯಲು ನೀರು ಕೊಡು ಎಂದು ಕೇಳಿದಾಗ ನನಗೆ ಮಾತ್ರವಲ್ಲ ನನ್ನ ಒಂಟೆಗಳಿಗೆ ನೀರು ಕೊಡುವವಳೇ ನೀನು ಆರಿಸಿರುವ ಹುಡುಗಿ ಎಂದು ನನಗೆ ಗೊತ್ತಾಗುವುದು’ ಎಂದು ಪ್ರಾರ್ಥನೆ ಮಾಡಿದ.

ಸ್ವಲ್ಪ ಸಮಯದಲ್ಲೇ ರೆಬೆಕ್ಕ ಅಲ್ಲಿಗೆ ಬಂದಳು. ಯುವ ಪ್ರಾಯದ ಅವಳು ಬಹು ಸುಂದರಿ ಎನ್ನುತ್ತದೆ ಬೈಬಲ್‌. ಎಲಿಯೇಜರ ಕುಡಿಯಲು ನೀರು ಕೊಡು ಎಂದು ಅವಳನ್ನು ಕೇಳಿದಾಗ ‘ಖಂಡಿತ ಕೊಡುತ್ತೇನೆ. ನಿಮ್ಮ ಒಂಟೆಗಳಿಗೂ ನೀರು ತಂದು ಕೊಡುತ್ತೇನೆ’ ಎಂದು ಹೇಳಿದಳು. ಬಾಯಾರಿದ ಒಂಟೆಗಳು ತುಂಬ ನೀರು ಕುಡಿಯುತ್ತವೆ. ಹಾಗಾಗಿ ರೆಬೆಕ್ಕ ನೀರು ತರಲು ಅದೆಷ್ಟು ಸಲ ಬಾವಿಯ ಹತ್ತಿರ ಹೋಗಿ ಬರಬೇಕಿತ್ತು ಅಂತ ಸ್ವಲ್ಪ ಯೋಚಿಸು! ಅವಳೆಷ್ಟು ಕೆಲಸಮಾಡುತ್ತಿದ್ದಾಳೆ ಅಂತ ಈ ಚಿತ್ರದಲ್ಲಿ ಕಾಣುತ್ತಿದೆಯಾ?— ತನ್ನ ಪ್ರಾರ್ಥನೆಗೆ ಯೆಹೋವನು ಉತ್ತರ ಕೊಟ್ಟ ರೀತಿಯನ್ನು ನೋಡಿ ಎಲಿಯೇಜರ ಆಶ್ಚರ್ಯಪಟ್ಟ.

ಎಲಿಯೇಜರ ರೆಬೆಕ್ಕಳಿಗೆ ಅನೇಕ ಚೆಂದಚೆಂದದ ಉಡುಗೊರೆಗಳನ್ನು ಕೊಟ್ಟ. ಅವನನ್ನು ಮತ್ತು ಇತರ ಸೇವಕರನ್ನು ಅವಳು ತನ್ನ ಮನೆಗೆ ಕರಕೊಂಡು ಹೋದಳು. ಆಗ ಎಲಿಯೇಜರ ರೆಬೆಕ್ಕಳ ಕುಟುಂಬದವರಿಗೆ ಅಬ್ರಹಾಮ ಯಾಕೆ ತನ್ನನ್ನು ಕಳುಹಿಸಿದ ಮತ್ತು ಯೆಹೋವನು ಹೇಗೆ ತನ್ನ ಪ್ರಾರ್ಥನೆಗೆ ಉತ್ತರ ಕೊಟ್ಟ ಎಂದು ವಿವರಿಸಿದನು. ಇಸಾಕನ ಜೊತೆ ರೆಬೆಕ್ಕಳ ಮದುವೆ ಮಾಡಲು ಅವಳ ಕುಟುಂಬದವರು ಖುಷಿಯಿಂದ ಒಪ್ಪಿದರು.

ರೆಬೆಕ್ಕ ಇಸಾಕನನ್ನು ಮದುವೆಯಾಗಲು ಎಲಿಯೇಜರನ ಜೊತೆ ಕಾನಾನ್‌ಗೆ ಹೋದಳು

ಆದರೆ ರೆಬೆಕ್ಕಳಿಗೆ ಇಸಾಕನ ಜೊತೆ ಮದುವೆಯಾಗಲು ಇಷ್ಟ ಇತ್ತಾ?— ಯೆಹೋವನೇ ಎಲಿಯೇಜರನನ್ನು ಕಳುಹಿಸಿದ್ದಾನೆ ಎಂದು ರೆಬೆಕ್ಕಳಿಗೆ ಗೊತ್ತಿತ್ತು. ಹಾಗಾಗಿ, ಕಾನಾನ್‌ಗೆ ಹೋಗಿ ಇಸಾಕನನ್ನು ಮದುವೆಯಾಗಲು ನಿನಗೆ ಇಷ್ಟವಿದೆಯಾ ಎಂದು ಅವಳ ಕುಟುಂಬದವರು ಕೇಳಿದಾಗ ‘ಹೌದು ಇಷ್ಟವಿದೆ, ಹೋಗುತ್ತೇನೆ’ ಎಂದು ಹೇಳಿದಳು. ಅವಳು ತಕ್ಷಣ ಎಲಿಯೇಜರನ ಜೊತೆ ಕಾನಾನ್‌ಗೆ ಹೊರಟಳು. ಅಲ್ಲಿಗೆ ತಲುಪಿದ ನಂತರ ಇಸಾಕನನ್ನು ಮದುವೆಯಾದಳು.

ಯೆಹೋವನ ಇಷ್ಟದ ಪ್ರಕಾರ ರೆಬೆಕ್ಕ ಮಾಡಿದ್ದರಿಂದ ಅವಳನ್ನು ಯೆಹೋವನು ಚೆನ್ನಾಗಿ ನೋಡಿಕೊಂಡನು. ತುಂಬ ತುಂಬ ವರ್ಷಗಳು ಕಳೆದ ನಂತರ ಯೇಸು ಹುಟ್ಟಿದ್ದು ಅವಳ ವಂಶದಲ್ಲೇ! ನೀನು ಸಹ ರೆಬೆಕ್ಕಳ ಹಾಗೆ ಯೆಹೋವನನ್ನು ಸಂತೋಷಪಡಿಸಿದರೆ ಆತನು ನಿನ್ನನ್ನೂ ಚೆನ್ನಾಗಿ ನೋಡಿಕೊಳ್ಳುತ್ತಾನೆ.

ಬೈಬಲಲ್ಲೇ ಓದೋಣ