ಸುಖ ಸಂಸಾರಕ್ಕೆ ಏನು ಅವಶ್ಯ?
ನೀವೇನು ನೆನಸುತ್ತೀರಿ . . .
-
ಪ್ರೀತಿ?
-
ಹಣ?
-
ಬೇರೇನಾದ್ರು?
ಪವಿತ್ರ ಗ್ರಂಥ ಏನು ಹೇಳುತ್ತದೆ?
“ದೇವರ ವಾಕ್ಯವನ್ನು ಕೇಳಿಸಿಕೊಳ್ಳುತ್ತಿದ್ದು ಅದರಂತೆ ನಡೆಯುತ್ತಿರುವವರೇ ಸಂತೋಷಿತರು.”—ಲೂಕ 11:28, ನೂತನ ಲೋಕ ಭಾಷಾಂತರ.
ಇದನ್ನು ಪಾಲಿಸುವುದರಿಂದ ಸಿಗುವ ಪ್ರಯೋಜನಗಳು
ಕುಟುಂಬದಲ್ಲಿ ನಿಜ ಪ್ರೀತಿ ಇರುತ್ತದೆ.—ಎಫೆಸ 5:28, 29.
ಗೌರವ ಇರುತ್ತದೆ.—ಎಫೆಸ 5:33.
ಪರಸ್ಪರ ನಂಬಿಕೆ ಇರುತ್ತದೆ.—ಮಾರ್ಕ 10:6-9.
ಪವಿತ್ರ ಗ್ರಂಥ ಹೇಳುವುದನ್ನು ನಂಬಬಹುದಾ?
ಕಣ್ಣುಮುಚ್ಚಿ ನಂಬಬಹುದು. ಯಾಕೆ ಅಂತ ಎರಡು ಕಾರಣಗಳನ್ನು ನೋಡೋಣ.
-
ಸಾಂಸಾರಿಕ ಜೀವನದ ಜನಕ ದೇವರು. “ಪ್ರತಿಯೊಂದು ಕುಟುಂಬವು ತನ್ನ ಹೆಸರನ್ನು [ಯೆಹೋವ ದೇವರಿಂದ] ಹೊಂದಿದೆ” ಅಂತ ಬೈಬಲ್ ಹೇಳುತ್ತದೆ. (ಎಫೆಸ 3:14, 15) ಅದರರ್ಥ ಕುಟುಂಬ ಜೀವನದ ಏರ್ಪಾಡನ್ನು ಅಸ್ತಿತ್ವಕ್ಕೆ ತಂದದ್ದು ಯೆಹೋವ ದೇವರು. ಇದನ್ನು ಯಾವಾಗಲೂ ಮನಸ್ಸಿನಲ್ಲಿಟ್ಟಿರಬೇಕು. ಏಕೆ?
ಉದಾ: ನೀವು ರುಚಿಕರವಾದ ಒಂದು ಭಕ್ಷ್ಯವನ್ನು ತಿಂದಿದ್ದೀರ ಮತ್ತು ಅದನ್ನು ಹೇಗೆ ಮಾಡುವುದು ಅಂತ ನಿಮಗೆ ತಿಳಿದುಕೊಳ್ಳಬೇಕು. ಯಾರ ಹತ್ತಿರ ಕೇಳುತ್ತೀರ? ಅದನ್ನು ತಯಾರಿಸಿದವರ ಹತ್ತಿರ ತಾನೇ.
ಅದೇ ರೀತಿ ಸುಖೀ ಸಂಸಾರಕ್ಕೆ ಏನು ಅವಶ್ಯ ಎನ್ನುವುದನ್ನು ಯೆಹೋವ ದೇವರ ಹತ್ತಿರ ಕೇಳಬೇಕು. ಏಕೆಂದರೆ ಯೆಹೋವ ದೇವರೇ ಸಾಂಸಾರಿಕ ಜೀವನದ ಜನಕ.—ಆದಿಕಾಂಡ 2:18-24.
-
ದೇವರಿಗೆ ನಿಮ್ಮ ಮೇಲೆ ಕಾಳಜಿ ಇದೆ. ಯೆಹೋವ ದೇವರು ಬೈಬಲಿನ ಮೂಲಕ ಮಾರ್ಗದರ್ಶನ ಕೊಡಲು ಕಾರಣ ನಮ್ಮ ಮೇಲಿರುವ ಕಾಳಜಿ ಚಿಂತೆ. (1 ಪೇತ್ರ 5:6, 7) ನಮಗೆ ಒಳ್ಳೇದಾಗಬೇಕೆನ್ನುವುದೇ ಯೆಹೋವ ದೇವರ ಆಸೆ. ಪ್ರತಿಯೊಂದು ಕುಟುಂಬ ದೇವರ ಸಲಹೆ-ಸೂಚನೆಗಳನ್ನು ಅಳವಡಿಸಿಕೊಂಡರೆ ಖಂಡಿತ ಒಳಿತಾಗುತ್ತದೆ.—ಜ್ಞಾನೋಕ್ತಿ 3:5, 6; ಯೆಶಾಯ 48:17, 18.
ಯೋಚಿಸಿ
ಒಳ್ಳೇ ಗಂಡನಾಗಿರಲು/ಒಳ್ಳೇ ಹೆಂಡತಿಯಾಗಿರಲು/ ಒಳ್ಳೇ ಅಪ್ಪಅಮ್ಮ ಆಗಿರಲು ನೀವೇನು ಮಾಡಬೇಕು?
ಉತ್ತರ ಪವಿತ್ರ ಗ್ರಂಥದ ಈ ಭಾಗದಲ್ಲಿದೆ: ಎಫೆಸ 5:1, 2; ಕೊಲೊಸ್ಸೆ 3:18-21.