ಇಬ್ರಿಯರಿಗೆ ಬರೆದ ಪತ್ರ 10:1-39
10 ನಿಯಮ ಪುಸ್ತಕ ಮುಂದೆ ಬರೋ ಒಳ್ಳೇ ವಿಷ್ಯಗಳ+ ನೆರಳಷ್ಟೇ,+ ನಿಜರೂಪ ಅಲ್ಲ. ವರ್ಷ ವರ್ಷ ಅರ್ಪಿಸ್ತಾ ಇರೋ ಒಂದೇ ತರದ ಬಲಿಗಳಿಂದ ನಿಯಮ ಪುಸ್ತಕ* ದೇವರ ಆರಾಧಕರನ್ನ ಯಾವತ್ತೂ ಪರಿಪೂರ್ಣರಾಗಿ ಮಾಡೋಕೆ ಆಗಲ್ಲ.+
2 ಹಾಗೇನಾದ್ರೂ ಸಾಧ್ಯ ಇದ್ದಿದ್ರೆ ಬಲಿಗಳನ್ನ ಕೊಡೋದೇ ನಿಂತು ಹೋಗ್ತಿತ್ತಲ್ವಾ? ಯಾಕಂದ್ರೆ ಬಲಿಗಳನ್ನ ಕೊಡುವವರು ಒಂದೇ ಸಲ ಶುದ್ಧರಾಗ್ತಿದ್ರೆ ಅವ್ರಿಗೆ ಮುಂದೆ ಯಾವತ್ತೂ ‘ನಾವು ಪಾಪಿಗಳು’ ಅಂತ ಅನಿಸ್ತಾನೇ ಇರಲಿಲ್ಲ.
3 ಆದ್ರೆ ಈ ಬಲಿಗಳು ಪ್ರತಿ ವರ್ಷ ಜನ್ರಿಗೆ ಅವರು ಪಾಪಿಗಳು ಅಂತ ನೆನಪಿಸುತ್ತೆ.+
4 ಯಾಕಂದ್ರೆ ಆಡು ಹೋರಿಗಳ ರಕ್ತದಿಂದ ಪಾಪಗಳನ್ನ ತೆಗೆದುಹಾಕೋಕೆ ಆಗಲ್ಲ.
5 ಹಾಗಾಗಿ ಲೋಕಕ್ಕೆ ಕ್ರಿಸ್ತ ಬಂದಾಗ ದೇವರಿಗೆ ಹೀಗೆ ಹೇಳಿದ: “‘ನೀನು ಬಲಿ ಅರ್ಪಣೆಯನ್ನ ಇಷ್ಟಪಡಲಿಲ್ಲ. ಆದ್ರೆ ನೀನು ನನಗಾಗಿ ಒಂದು ದೇಹ ಸಿದ್ಧಮಾಡ್ದೆ.
6 ನೀನು ಸರ್ವಾಂಗಹೋಮ ಬಲಿಗಳನ್ನ ಪಾಪಪರಿಹಾರಕ ಬಲಿಗಳನ್ನ ಸ್ವೀಕರಿಸಲಿಲ್ಲ.’+
7 ಅಷ್ಟೇ ಅಲ್ಲ ನಾನು ಹೀಗೆ ಹೇಳ್ದೆ: ‘ದೇವರೇ, ನಿನ್ನ ಇಷ್ಟವನ್ನ ಮಾಡೋಕೆ ನಾನು ಬಂದಿದ್ದೀನಿ ನೋಡು. (ಸುರುಳಿಯಲ್ಲಿ* ನನ್ನ ಬಗ್ಗೆ ಬರೆದಿದೆ.)’”+
8 ನಿಯಮ ಪುಸ್ತಕದ ಪ್ರಕಾರ ಕೊಡೋ ಬಲಿಗಳ ಬಗ್ಗೆ “ನೀನು ಬಲಿ, ಅರ್ಪಣೆ, ಸರ್ವಾಂಗಹೋಮ ಬಲಿ ಮತ್ತು ಪಾಪಪರಿಹಾರಕ ಬಲಿಗಳನ್ನ ಇಷ್ಟಪಡಲಿಲ್ಲ” ಅಂತ ಮೊದ್ಲು ಹೇಳಿದ್ರೂ
9 ಆಮೇಲೆ ಆತನು “ನಿನ್ನ ಇಷ್ಟವನ್ನ ಮಾಡೋಕೆ ನಾನು ಬಂದಿದ್ದೀನಿ ನೋಡು”+ ಅಂತ ಹೇಳಿದ. ಆತನು ಮೊದಲಿನ ಏರ್ಪಾಡನ್ನ ತೆಗೆದುಹಾಕಿ ಎರಡ್ನೇ ಏರ್ಪಾಡನ್ನ ಶುರುಮಾಡಿದ.
10 ದೇವರ ಈ ಇಷ್ಟದ+ ಪ್ರಕಾರ ನಮ್ಮನ್ನ ಯೇಸು ಕ್ರಿಸ್ತನ ಮೂಲಕ ಪವಿತ್ರ ಮಾಡಲಾಗಿದೆ. ಆತನು ಎಲ್ಲ ಕಾಲಕ್ಕೂ ಒಂದೇ ಸಲ ತನ್ನ ದೇಹವನ್ನ ಅರ್ಪಿಸಿದ.+
11 ಅಷ್ಟೇ ಅಲ್ಲ ಪ್ರತಿಯೊಬ್ಬ ಪುರೋಹಿತ ದಿನಾ ಪವಿತ್ರ ಸೇವೆ* ಮಾಡೋಕೆ+ ತನ್ನ ಜಾಗದಲ್ಲಿ ನಿಲ್ತಾನೆ. ಪದೇ ಪದೇ ಒಂದೇ ತರದ ಬಲಿಗಳನ್ನ ಕೊಡ್ತಾನೆ.+ ಆದ್ರೆ ಆ ಬಲಿಗಳಿಗೆ ಪಾಪಗಳನ್ನ ಪೂರ್ತಿ ತೆಗೆದುಹಾಕೋಕೆ ಆಗಲ್ಲ.+
12 ಆದ್ರೆ ಕ್ರಿಸ್ತ ನಮ್ಮ ಪಾಪಗಳಿಗಾಗಿ ಎಲ್ಲ ಕಾಲಕ್ಕೂ ಒಂದೇ ಬಲಿ ಅರ್ಪಿಸಿದ ಮತ್ತು ದೇವರ ಬಲಗಡೆ ಕೂತ್ಕೊಂಡ.+
13 ಅವತ್ತಿಂದ ಆತನ ಶತ್ರುಗಳನ್ನ ದೇವರು ಆತನ ಪಾದಪೀಠವಾಗಿ ಮಾಡೋ ತನಕ ಕಾಯ್ತಿದ್ದಾನೆ.+
14 ಆತನು ಒಂದೇ ಬಲಿಯನ್ನ ಕೊಡೋ ಮೂಲಕ ಪವಿತ್ರರಾಗ್ತಾ ಇರುವವ್ರನ್ನ ಎಲ್ಲ ಕಾಲಕ್ಕೂ ಪರಿಪೂರ್ಣ ಮಾಡಿದ್ದಾನೆ.+
15 ಅಷ್ಟೇ ಅಲ್ಲ ಇದ್ರ ಬಗ್ಗೆ ಪವಿತ್ರಶಕ್ತಿನೂ ನಮಗೆ ಸಾಕ್ಷಿ ಕೊಡುತ್ತೆ. ಯಾಕಂದ್ರೆ ಅದು
16 “ಯೆಹೋವ* ಹೀಗೆ ಹೇಳ್ತಾನೆ: ‘ಆ ದಿನಗಳಾದ ಮೇಲೆ ನಾನು ಅವ್ರ ಜೊತೆ ಈ ಒಪ್ಪಂದ ಮಾಡ್ಕೊಳ್ತೀನಿ. ಅದೇನಂದ್ರೆ ನಾನು ನನ್ನ ನಿಯಮಗಳನ್ನ ಅವ್ರ ಹೃದಯದಲ್ಲಿ ಇಡ್ತೀನಿ ಮತ್ತು ಅವ್ರ ಮನಸ್ಸಲ್ಲಿ ಬರಿತೀನಿ” ಅಂತ ಹೇಳಿದೆ.+
17 ಅಷ್ಟೇ ಅಲ್ಲ “ನಾನು ಅವ್ರ ಪಾಪಗಳನ್ನ ಕೆಟ್ಟ ಕೆಲಸಗಳನ್ನ ಇನ್ಯಾವತ್ತೂ ನೆನಪಿಸ್ಕೊಳ್ಳಲ್ಲ” ಅಂತ ಅದು ಹೇಳುತ್ತೆ.+
18 ದೇವರು ಆ ಪಾಪಗಳನ್ನ ಕ್ಷಮಿಸಿದ ಮೇಲೆ ಮುಂದೆ ಆ ಪಾಪಗಳಿಗಾಗಿ ಮತ್ತೆ ಬಲಿ ಕೊಡೋ ಅಗತ್ಯ ಇಲ್ಲ.
19 ಹಾಗಾಗಿ ಸಹೋದರರೇ, ಯೇಸುವಿನ ರಕ್ತದಿಂದಾಗಿ ಪವಿತ್ರ ಸ್ಥಳದ ದಾರಿಯಲ್ಲಿ+ ನಾವು ಧೈರ್ಯದಿಂದ* ಹೋಗೋಕೆ ಆಗುತ್ತೆ.
20 ಒಂದು ಪರದೆಯನ್ನ ತೆಗೆದು ಹೋಗೋ ಹಾಗೆ ಆತನು ಜೀವಕ್ಕೆ ನಡಿಸೋ ಒಂದು ಹೊಸ ದಾರಿಯನ್ನ ನಮಗಾಗಿ ತೆರೆದಿದ್ದಾನೆ.* ಆ ಪರದೆ+ ಆತನ ದೇಹ.
21 ಅಷ್ಟೇ ಅಲ್ಲ ದೇವರ ಮನೆ ಮೇಲೆ ನೇಮಿಸಿರೋ ಒಬ್ಬ ಶ್ರೇಷ್ಠ ಪುರೋಹಿತ ನಮಗಿದ್ದಾನೆ.+
22 ಹಾಗಾಗಿ ಬನ್ನಿ ಪ್ರಾಮಾಣಿಕ ಹೃದಯದಿಂದ, ಪೂರ್ತಿ ನಂಬಿಕೆಯಿಂದ ದೇವರ ಹತ್ರ ಹೋಗೋಣ. ನಮ್ಮ ಹೃದಯ, ಅಶುದ್ಧ ಮನಸ್ಸಾಕ್ಷಿ+ ಶುದ್ಧವಾಗಿದೆ. ಶುದ್ಧ ನೀರಿಂದ ನಮ್ಮ ದೇಹವನ್ನ ತೊಳಿಯಲಾಗಿದೆ.+
23 ಸ್ವಲ್ಪನೂ ಸಂಶಯ ಪಡದೆ ನಮ್ಮ ನಿರೀಕ್ಷೆ ಬಗ್ಗೆ ಎಲ್ರಿಗೂ ಹೇಳ್ತಾ ಇರೋಣ.+ ಯಾಕಂದ್ರೆ ಮಾತುಕೊಟ್ಟ ದೇವರು ನಂಬಿಗಸ್ತ.
24 ನಾವು ಒಬ್ರು ಇನ್ನೊಬ್ರ ಬಗ್ಗೆ ತುಂಬ ಆಸಕ್ತಿ ತೋರಿಸೋಣ.* ಆಗ ಪ್ರೀತಿ ತೋರಿಸೋಕೆ, ಒಳ್ಳೇ ಕೆಲಸಗಳನ್ನ ಮಾಡೋಕೆ ಬೇರೆಯವ್ರಿಗೆ ಪ್ರೋತ್ಸಾಹ ಕೊಡಬಹುದು.*+
25 ಒಟ್ಟಾಗಿ ಸಭೆ ಸೇರೋದನ್ನ ಬಿಡೋದು ಬೇಡ.+ ಸ್ವಲ್ಪ ಜನ ಸಭೆಗೆ ಬರೋದನ್ನ ಬಿಟ್ಟುಬಿಟ್ಟಿದ್ದಾರೆ. ಅದು ಅವ್ರಿಗೆ ರೂಢಿ ಆಗಿಬಿಟ್ಟಿದೆ. ಆದ್ರೆ ನಾವು ಹಾಗೆ ಮಾಡದೆ ಒಬ್ರು ಇನ್ನೊಬ್ರನ್ನ ಪ್ರೋತ್ಸಾಹಿಸ್ತಾ ಇರೋಣ.+ ದೇವರ ದಿನ ಹತ್ರ ಬರ್ತಾ ಇರೋದ್ರಿಂದ ನಾವು ಇದನ್ನ ಇನ್ನೂ ಜಾಸ್ತಿ ಮಾಡೋಣ.+
26 ನಾವು ಸತ್ಯದ ಸರಿಯಾದ ಜ್ಞಾನ+ ಪಡ್ಕೊಂಡ ಮೇಲೆ ಬೇಕುಬೇಕಂತ ಪಾಪ ಮಾಡ್ತಾ ಇದ್ರೆ ಆ ಪಾಪಕ್ಕಾಗಿ ನಾವು ಬೇರೆ ಯಾವ ಬಲಿನೂ ಕೊಡಕ್ಕಾಗಲ್ಲ.+
27 ನಾವು ಭಯಪಟ್ಕೊಂಡು ಶಿಕ್ಷೆಗಾಗಿ, ದೇವರ ಕೋಪಕ್ಕಾಗಿ ಕಾಯ್ತಾ ಇರಬೇಕಷ್ಟೇ. ಆತನ ಕೋಪ ಬೆಂಕಿ ತರ ಉರಿದು ವಿರೋಧಿಗಳನ್ನ ಸುಟ್ಟು ಬೂದಿ ಮಾಡುತ್ತೆ.+
28 ಮೋಶೆಗೆ ಕೊಟ್ಟ ನಿಯಮ ಪುಸ್ತಕದಲ್ಲಿ ಇರೋದನ್ನ ತಳ್ಳಿಹಾಕೋ ವ್ಯಕ್ತಿಯನ್ನ ಇಬ್ಬರು ಮೂವರು ಸಾಕ್ಷಿಗಳ ಆಧಾರದ ಮೇಲೆ ಸಾಯಿಸ್ತಿದ್ರು. ಅಂಥವನಿಗೆ ಕನಿಕರ ಸಿಗ್ತಿರಲಿಲ್ಲ.+
29 ಅಂದ್ಮೇಲೆ ದೇವರ ಮಗನನ್ನ ತುಳಿದವನಿಗೆ ಇನ್ನೆಷ್ಟು ದೊಡ್ಡ ಶಿಕ್ಷೆ ಆಗಬೇಕು ಅಂತ ಯೋಚ್ನೆ ಮಾಡಿ? ಒಬ್ಬ ವ್ಯಕ್ತಿಯನ್ನ ಪವಿತ್ರ ಮಾಡಿದ ಒಪ್ಪಂದದ ರಕ್ತವನ್ನ ಮಾಮೂಲಿಯಾಗಿ ನೋಡಿದವನಿಗೆ,+ ಅಪಾರ ಕೃಪೆ ತೋರಿಸೋ ದೇವರ ಪವಿತ್ರಶಕ್ತಿಯನ್ನ ಅವಮಾನ ಮಾಡಿದವನಿಗೆ ದೊಡ್ಡ ಶಿಕ್ಷೆ ಆಗಬೇಕಲ್ವಾ?+
30 “ಸೇಡು ತೀರಿಸೋದು ನನ್ನ ಕೆಲಸ, ನಾನೇ ತಕ್ಕ ಶಿಕ್ಷೆ ಕೊಡ್ತೀನಿ” ಅಂತ ದೇವರು ಹೇಳಿದ್ದಾನೆ ಅಂತ ನಮಗೆ ಗೊತ್ತು. “ಯೆಹೋವ* ತನ್ನ ಜನ್ರಿಗೆ ನ್ಯಾಯ ಸಿಗೋ ತರ ಮಾಡ್ತಾನೆ”+ ಅಂತಾನೂ ಆತನು ಹೇಳಿದ್ದಾನೆ.
31 ಜೀವ ಇರೋ ದೇವರ ಕೈಯಲ್ಲಿ ಸಿಕ್ಕಿಹಾಕೊಳ್ಳೋದು ಭಯಂಕರವಾಗಿ ಇರುತ್ತೆ.
32 ನೀವು ಆ ಕಾಲದಲ್ಲಿ ಏನಾಯ್ತು ಅಂತ ನೆನಪಿಸ್ಕೊಳ್ತಾ ಇರಿ. ಸತ್ಯದ ಬೆಳಕನ್ನ ನೋಡಿದ ಮೇಲೆ ನೀವು ತುಂಬ ಹೋರಾಡಿದ್ರಿ,+ ತುಂಬ ಕಷ್ಟಗಳನ್ನ ಸಹಿಸ್ಕೊಂಡ್ರಿ.
33 ಎಲ್ರ ಮುಂದೆ ಅವಮಾನ ಅನುಭವಿಸಿದ್ರಿ.* ಅಂಥದ್ದೇ ಕಷ್ಟಗಳನ್ನ ಬೇರೆಯವರು ಅನುಭವಿಸ್ತಿದ್ದಾಗ ನೀವೂ ಅವ್ರ ಕಷ್ಟದಲ್ಲಿ ಪಾಲು ತಗೊಂಡ್ರಿ.*
34 ಜೈಲಲ್ಲಿ ಇದ್ದವ್ರಿಗೆ ಅನುಕಂಪ ತೋರಿಸಿದ್ರಿ. ನಿಮ್ಮ ಆಸ್ತಿಪಾಸ್ತಿಯನ್ನ ಲೂಟಿ ಮಾಡಿದಾಗ+ ಅದಕ್ಕಿಂತ ಒಳ್ಳೇ ಶಾಶ್ವತ ನಿಧಿ ನಿಮಗೆ ಸಿಗುತ್ತೆ ಅನ್ನೋದನ್ನ ಮನಸ್ಸಲ್ಲಿಟ್ಟು ನೀವು ಖುಷಿಯಾಗಿದ್ರಿ.+
35 ಹಾಗಾಗಿ ಧೈರ್ಯದಿಂದ* ಮಾತಾಡೋದನ್ನ ಬಿಟ್ಟುಬಿಡಬೇಡಿ. ಅದಕ್ಕೆ ದೊಡ್ಡ ಬಹುಮಾನ ಸಿಗುತ್ತೆ.+
36 ನೀವು ದೇವರ ಇಷ್ಟದ ಪ್ರಕಾರ ಮಾಡಿದ ಮೇಲೆ ಆತನು ಮಾತುಕೊಟ್ಟಿದ್ದನ್ನ ಪಡಿಬೇಕಾದ್ರೆ ನೀವು ಸಹಿಸ್ಕೊಬೇಕು.+
37 ಯಾಕಂದ್ರೆ “ಸ್ವಲ್ಪ ಸಮಯ ಇದೆ ಅಷ್ಟೇ,”+ “ಬರ್ತಾ ಇರುವವನು ತಡಮಾಡಲ್ಲ.”+
38 “ನೀತಿವಂತ ತನ್ನ ನಂಬಿಕೆಯಿಂದಾಗಿ ಜೀವಿಸ್ತಾನೆ.”+ “ಅವನು ಹಿಂದೆ ಹೋದ್ರೆ ಅವನ ಬಗ್ಗೆ ನಾನು ಖುಷಿಪಡಲ್ಲ.”+
39 ಆದ್ರೆ ಹಿಂದೆ ಹೋಗಿ ನಾಶ ಆಗುವವ್ರ ತರ ನಾವಿಲ್ಲ.+ ನಂಬಿಕೆ ಇರುವವ್ರ ತರ ಇದ್ದೀವಿ ಮತ್ತು ನಮ್ಮ ಜೀವ ಉಳಿಸ್ಕೊಳ್ತೀವಿ.
ಪಾದಟಿಪ್ಪಣಿ
^ ಬಹುಶಃ, “ಮನುಷ್ಯರು.”
^ ಅಕ್ಷ. “ಪುಸ್ತಕದ ಸುರುಳಿಯಲ್ಲಿ.”
^ ಅಥವಾ “ಜನಸೇವೆ.”
^ ಪರಿಶಿಷ್ಟ ಎ5 ನೋಡಿ.
^ ಅಥವಾ “ಭರವಸೆಯಿಂದ.”
^ ಅಕ್ಷ. “ಉದ್ಘಾಟಿಸಿದನು.”
^ ಅಥವಾ “ಚಿಂತಿಸೋಣ; ಗಮನಕೊಡೋಣ.”
^ ಅಕ್ಷ. “ಮೇಲೆತ್ತಬಹುದು.”
^ ಪರಿಶಿಷ್ಟ ಎ5 ನೋಡಿ.
^ ಅಕ್ಷ. “ರಂಗಸ್ಥಳದಲ್ಲಿ ನಿಮ್ಮನ್ನ ಅಣಕಿಸಿದ್ರು.”
^ ಅಥವಾ “ಪಕ್ಕದಲ್ಲೇ ನಿಂತ್ರಿ.”
^ ಅಕ್ಷ. “ಹಿಂಜರಿಯದೇ.”