ಧರ್ಮೋಪದೇಶಕಾಂಡ 21:1-23

  • ಕೊಲೆಗಾರ ಯಾರಂತ ಗೊತ್ತಿರದಿದ್ರೆ (1-9)

  • ಸೆರೆಹಿಡಿದ ಸ್ತ್ರೀಯನ್ನ ಮದುವೆ ಆಗಬೇಕೆಂದಿದ್ರೆ (10-14)

  • ಜ್ಯೇಷ್ಠ ಮಗನ ಹಕ್ಕು (15-17)

  • ಹಠಮಾರಿ ಮಗ (18-21)

  • ಮರದಕಂಬಕ್ಕೆ ತೂಗುಹಾಕಿದ ವ್ಯಕ್ತಿ ಶಾಪಗ್ರಸ್ತ (22, 23)

21  ನಿಮ್ಮ ದೇವರಾದ ಯೆಹೋವ ನಿಮಗೆ ಕೊಡೋ ದೇಶದಲ್ಲಿ ಯಾರಾದ್ರೂ ಕೊಲೆಯಾಗಿ ಬಯಲಲ್ಲಿ ಬಿದ್ದಿರೋದನ್ನ ನೀವು ನೋಡಿದ್ರೆ, ಕೊಲೆಗಾರ ಯಾರು ಅಂತ ನಿಮಗೆ ಗೊತ್ತಿಲ್ಲಾಂದ್ರೆ  ನಿಮ್ಮ ಹಿರಿಯರು, ನ್ಯಾಯಾಧೀಶರು+ ಅಲ್ಲಿ ಹೋಗಿ ಶವ ಬಿದ್ದಿರೋ ಜಾಗದಿಂದ ಸುತ್ತಮುತ್ತ ಇರೋ ಪಟ್ಟಣಗಳು ಎಷ್ಟು ದೂರ ಇದೆ ಅಂತ ಅಳತೆ ಮಾಡಬೇಕು.  ಆ ಶವ ಬಿದ್ದಿರೋ ಜಾಗಕ್ಕೆ ತುಂಬ ಹತ್ರ ಇರೋ ಪಟ್ಟಣದ ಹಿರಿಯರು ಒಂದು ಎಳೇ ಹಸು ತಗೊಂಡು ಬರಬೇಕು. ಆ ಹಸು ಇಲ್ಲಿ ತನಕ ಯಾವ ಕೆಲಸನೂ ಮಾಡಿರಬಾರದು, ಅದು ಯಾವತ್ತೂ ನೊಗ ಎಳೆದಿರಬಾರದು.  ಆ ಪಟ್ಟಣದ ಹಿರಿಯರು ಆ ಎಳೇ ಹಸುನ ನೀರು ಹರಿತಿರೋ ಕಣಿವೆಗೆ ಕರ್ಕೊಂಡು ಹೋಗಬೇಕು. ಆ ಕಣಿವೆಯಲ್ಲಿ ಉಳುಮೆ ಮಾಡಿರಬಾರದು, ಬಿತ್ತನೆ ಮಾಡಿರಬಾರದು. ಅಲ್ಲಿ ಆ ಹಸುನ ಕುತ್ತಿಗೆ ಮುರಿದು ಸಾಯಿಸಬೇಕು.+  ಆಮೇಲೆ ಲೇವಿಯರಾದ ಪುರೋಹಿತರು ಅಲ್ಲಿಗೆ ಬರ್ತಾರೆ. ಯಾಕಂದ್ರೆ ನಿಮ್ಮ ದೇವರಾದ ಯೆಹೋವ ಅವ್ರನ್ನ ತನ್ನ ಸೇವೆಗಾಗಿ ಆರಿಸ್ಕೊಂಡಿದ್ದಾನೆ.+ ಅವರು ಯೆಹೋವನ ಹೆಸ್ರಲ್ಲಿ ಜನ್ರಿಗೆ ಆಶೀರ್ವಾದ ಮಾಡ್ತಾರೆ.+ ಹಿಂಸೆ ಹೊಡೆದಾಟ ನಡೆದಾಗೆಲ್ಲ ಅದನ್ನ ಹೇಗೆ ಇತ್ಯರ್ಥ ಮಾಡಬೇಕು ಅಂತ ಹೇಳ್ತಾರೆ.+  ಆಮೇಲೆ, ಶವ ಬಿದ್ದಿರೋ ಜಾಗಕ್ಕೆ ತುಂಬ ಹತ್ರ ಇರೋ ಪಟ್ಟಣದ ಹಿರಿಯರು ಕಣಿವೆಯಲ್ಲಿ ಕುತ್ತಿಗೆ ಮುರಿದು ಸಾಯಿಸಿದ ಎಳೇ ಹಸು ಮೇಲೆ ಕೈ ತೊಳೀಬೇಕು.+  ಅವರು ‘ನಾವು ಈ ಕೊಲೆ ಮಾಡಿಲ್ಲ, ಈ ಕೊಲೆ ಆಗಿದ್ದೂ ನಾವು ನೋಡಿಲ್ಲ.  ಯೆಹೋವನೇ, ನೀನು ಬಿಡಿಸ್ಕೊಂಡು ಬಂದಿರೋ ನಿನ್ನ ಜನ್ರಾದ ಇಸ್ರಾಯೇಲ್ಯರನ್ನ+ ಈ ಕೊಲೆಗೆ ಹೊಣೆಗಾರರಾಗಿ ಮಾಡಬೇಡ. ಅನ್ಯಾಯವಾಗಿ ಸತ್ತಿರೋ ಈ ವ್ಯಕ್ತಿಯ ಕೊಲೆ ಅಪರಾಧ ನಮ್ಮ ಮೇಲೆ ಬರೋಕೆ ಬಿಡಬೇಡ’+ ಅನ್ನಬೇಕು. ಆಗ ಆ ಕೊಲೆ ಅಪರಾಧ ಅವ್ರ ಮೇಲೆ ಬರಲ್ಲ.  ಹೀಗೆ ನೀವು ಯೆಹೋವನಿಗೆ ಸರಿ ಅನಿಸಿದ್ದನ್ನ ಮಾಡೋ ಮೂಲಕ ಅನ್ಯಾಯವಾಗಿ ಸತ್ತ ವ್ಯಕ್ತಿಯ ಕೊಲೆ ಅಪರಾಧವನ್ನ ನಿಮ್ಮಿಂದ ತೆಗೆದುಹಾಕ್ತೀರ. 10  ನಿಮ್ಮ ಶತ್ರುಗಳ ವಿರುದ್ಧ ಯುದ್ಧಕ್ಕೆ ಹೋದಾಗ ನಿಮ್ಮ ದೇವರಾದ ಯೆಹೋವ ಅವ್ರನ್ನ ನಿಮಗೋಸ್ಕರ ಸೋಲಿಸಿದ್ದಾನೆ. ನೀವು ಅವ್ರನ್ನ ಬಂಧಿಸಿದ್ದೀರ ಅಂದ್ಕೊಳ್ಳಿ.+ 11  ನಿಮ್ಮಲ್ಲಿ ಯಾರಾದ್ರೂ ಆ ಕೈದಿಗಳಲ್ಲಿ ಒಬ್ಬ ಸುಂದರ ಸ್ತ್ರೀಯನ್ನ ನೋಡಿ, ಅವಳ ಅಂದಕ್ಕೆ ಮನಸೋತು ಮದುವೆ ಆಗೋಕೆ ಇಷ್ಟಪಟ್ರೆ 12  ಅವಳನ್ನ ನಿಮ್ಮ ಮನೆಗೆ ಕರ್ಕೊಂಡು ಹೋಗಬಹುದು. ಆಮೇಲೆ ಅವಳು ತನ್ನ ತಲೆ ಬೋಳಿಸ್ಕೊಳ್ಳಬೇಕು, ಉಗುರು ಕತ್ತರಿಸ್ಕೊಳ್ಳಬೇಕು, 13  ಕೈದಿಯಾಗಿ ಬರುವಾಗ ಹಾಕಿದ್ದ ಬಟ್ಟೆ ಬದಲಾಯಿಸಿ ಅವನ ಮನೇಲಿ ಇರಬೇಕು. ತೀರಿಹೋದ ತನ್ನ ಅಪ್ಪಅಮ್ಮಗಾಗಿ ಅವಳು ಒಂದು ಇಡೀ ತಿಂಗಳು ಗೋಳಾಡಬೇಕು.+ ಆಮೇಲೆ ಅವನು ಅವಳನ್ನ ಮದುವೆಯಾಗಿ ತನ್ನ ಹೆಂಡತಿಯಾಗಿ ಮಾಡ್ಕೊಬಹುದು. 14  ಅವಳು ಇಷ್ಟವಾಗದೇ ಹೋದ್ರೆ ಅವಳಿಗೆ ಎಲ್ಲಿ ಇಷ್ಟಾನೋ ಅಲ್ಲಿಗೆ ಕಳಿಸಿಬಿಡಬೇಕು.+ ಅವಳನ್ನ ಒತ್ತಾಯದಿಂದ ಮದುವೆ ಆಗಿರೋದ್ರಿಂದ ಅವಳನ್ನ ಮಾರಬಾರದು, ಕ್ರೂರವಾಗಿ ನಡ್ಕೊಬಾರದು. 15  ಒಬ್ಬನಿಗೆ ಎರಡು ಹೆಂಡತಿ ಇದ್ರೆ ಒಬ್ಬಳನ್ನ ತುಂಬ ಪ್ರೀತಿಸಿ ಇನ್ನೊಬ್ಬಳನ್ನ ಪ್ರೀತಿಸದಿದ್ರೆ, ಆ ಇಬ್ರು ಹೆಂಡತಿಯರಿಗೂ ಗಂಡು ಮಕ್ಕಳಾಗಿ ಯಾರ ಮೇಲೆ ಅವನಿಗೆ ಜಾಸ್ತಿ ಪ್ರೀತಿ ಇಲ್ವೋ ಅವಳ ಮಗನೇ ಮೊದಲನೇ ಮಗ ಆಗಿದ್ರೆ+ 16  ಅವನು ಆಸ್ತಿ ಪಾಲುಮಾಡಿ ಕೊಡುವಾಗ ಇದನ್ನ ನೆನಪಲ್ಲಿ ಇಟ್ಕೊಬೇಕು: ಅವನು ಆ ಮೊದಲ ಮಗನನ್ನ ಬಿಟ್ಟು ತನಗೆ ಯಾರ ಮೇಲೆ ಜಾಸ್ತಿ ಪ್ರೀತಿ ಇದ್ಯೋ ಅವಳ ಮಗನಿಗೆ ಮೊದಲ ಮಗನ ಸ್ಥಾನ ಕೊಡಬಾರದು. 17  ಯಾರ ಮೇಲೆ ಜಾಸ್ತಿ ಪ್ರೀತಿ ಇಲ್ವೋ ಆ ಹೆಂಡತಿಯ ಮಗನನ್ನೇ ಮೊದಲ ಮಗ ಅಂತ ಒಪ್ಕೊಂಡು ತನ್ನ ಹತ್ರ ಏನೆಲ್ಲ ಇದ್ಯೋ ಅದ್ರಲ್ಲಿ ಎರಡು ಭಾಗ ಅವನಿಗೆ ಕೊಡಬೇಕು. ಯಾಕಂದ್ರೆ ಆ ಮಗನೇ ತಂದೆಯ ಮೊದಲ ಸಂತಾನ.* ಜೇಷ್ಠಪುತ್ರನ ಹಕ್ಕು ಇರೋದು ಆ ಮಗನಿಗೇ.+ 18  ಯಾರ ಮಗನಾದ್ರೂ ಹಠಮಾರಿ ಆಗಿದ್ರೆ ದಂಗೆ ಏಳೋ ಸ್ವಭಾವ ಇದ್ರೆ ಅಪ್ಪಅಮ್ಮನ ಮಾತು ಕೇಳದಿದ್ರೆ+ ಅವನನ್ನ ತಿದ್ದೋಕೆ ಎಷ್ಟೇ ಪ್ರಯತ್ನ ಮಾಡಿದ್ರೂ ಬಗ್ಗದಿದ್ರೆ+ 19  ಅವನ ಅಪ್ಪಅಮ್ಮ ಅವನನ್ನ ಹಿಡ್ಕೊಂಡು ಅವನಿರೋ ಪಟ್ಟಣದ ಬಾಗಿಲ ಹತ್ರ ಇರೋ ಹಿರಿಯರ ಹತ್ರ ಕರ್ಕೊಂಡು ಬರಬೇಕು. 20  ಆ ಹಿರಿಯರಿಗೆ ‘ನಮ್ಮ ಮಗ ತುಂಬ ಹಠಮಾರಿ, ದಂಗೆಕೋರ. ನಮ್ಮ ಮಾತು ಕೇಳೋದೇ ಇಲ್ಲ. ಅವನು ಹೊಟ್ಟೆಬಾಕ+ ಕುಡುಕ’ + ಅಂತ ಹೇಳಬೇಕು. 21  ಆಗ ಆ ಪಟ್ಟಣದ ಎಲ್ಲ ಜನ್ರು ಅವನನ್ನ ಕಲ್ಲು ಹೊಡೆದು ಸಾಯಿಸಬೇಕು. ಹೀಗೆ ನಿಮ್ಮ ಮಧ್ಯದಿಂದ ಆ ಕೆಟ್ಟತನ ತೆಗೆದುಬಿಡಬೇಕು. ಇದನ್ನ ಕೇಳಿ ಎಲ್ಲ ಇಸ್ರಾಯೇಲ್ಯರೂ ಹೆದರ್ತಾರೆ.+ 22  ಒಬ್ಬ ಮರಣದಂಡನೆಗೆ ತಕ್ಕ ಪಾಪ ಮಾಡಿದ್ರೆ ಅವನನ್ನ ಸಾಯಿಸಿ+ ಮರದಕಂಬಕ್ಕೆ ಅವನ ಶವ ನೇತುಹಾಕಬೇಕು.+ 23  ಆದ್ರೆ ಆ ಶವನ ಅದೇ ದಿನ ಸಮಾಧಿ ಮಾಡಬೇಕು. ಕಂಬಕ್ಕೆ ನೇತುಹಾಕಿದ ವ್ಯಕ್ತಿ ಮೇಲೆ ದೇವರ ಶಾಪ ಇದೆ.+ ಹಾಗಾಗಿ ಇಡೀ ರಾತ್ರಿ ಕಂಬದ ಮೇಲೆನೇ ಶವ ಇರೋಕೆ ಬಿಡಬಾರದು.+ ಬಿಟ್ರೆ ನಿಮ್ಮ ದೇವರಾದ ಯೆಹೋವ ನಿಮಗೆ ಆಸ್ತಿಯಾಗಿ ಕೊಡೋ ದೇಶ ಅಪವಿತ್ರ ಆಗುತ್ತೆ.+ ಹಾಗೆ ಅಪವಿತ್ರ ಆಗೋಕೆ ಬಿಡಬಾರದು.

ಪಾದಟಿಪ್ಪಣಿ

ಅಕ್ಷ. “ಸಂತಾನಶಕ್ತಿಯ ಪ್ರಥಮಫಲ.”