ಮಾರ್ಕ 9:1-50

  • ಯೇಸುವಿನ ರೂಪ ಬದಲಾಯ್ತು (1-13)

  • ಕೆಟ್ಟ ದೇವದೂತ ಹಿಡಿದಿದ್ದ ಹುಡುಗನನ್ನ ವಾಸಿಮಾಡಿದನು (14-29)

    • ಒಬ್ಬ ವ್ಯಕ್ತಿಗೆ ನಂಬಿಕೆ ಇದ್ರೆ ಎಲ್ಲವೂ ಸಾಧ್ಯ (23)

  • ಯೇಸು ಸಾಯ್ತಾನೆ ಅಂತ ಇನ್ನೊಂದು ಸಲ ಭವಿಷ್ಯವಾಣಿ (30-32)

  • ಯಾರು ದೊಡ್ಡವರು ಅಂತ ಶಿಷ್ಯರು ಕಿತ್ತಾಡಿದ್ರು (33-37)

  • ನಮಗೆ ವಿರುದ್ಧವಾಗಿ ಇಲ್ಲದವ್ರೆಲ್ಲ ನಮ್ಮವ್ರೇ (38-41)

  • ಎಡವಿಸೋ ಕಲ್ಲುಗಳು (42-48)

  • “ನೀವು ಉಪ್ಪಿನ ತರ ಇರಿ” (49, 50)

9  ಆಮೇಲೆ ಯೇಸು “ನಿಮಗೆ ನಿಜ ಹೇಳ್ತೀನಿ, ಇಲ್ಲಿ ನಿಂತಿರೋ ಕೆಲವರು ದೇವರ ಆಳ್ವಿಕೆ ಸಂಪೂರ್ಣ ಶಕ್ತಿಯಿಂದ ಬರೋದನ್ನ ನೋಡೋ ತನಕ ಸಾಯೋದೇ ಇಲ್ಲ” ಅಂದನು.+  ಆರು ದಿನ ಆದಮೇಲೆ ಪೇತ್ರ, ಯಾಕೋಬ ಮತ್ತು ಯೋಹಾನನನ್ನ ಕರ್ಕೊಂಡು ಯೇಸು ಎತ್ರದ ಒಂದು ಬೆಟ್ಟಕ್ಕೆ ಹೋದನು. ಅಲ್ಲಿ ಅವ್ರ ಮುಂದೆ ಯೇಸುವಿನ ರೂಪ ಬದಲಾಯ್ತು.+  ಆತನ ಬಟ್ಟೆ ಭೂಮಿ ಮೇಲಿರೋ ಯಾವ ಅಗಸನೂ ಬಿಳುಪು ಮಾಡಲಾರದಷ್ಟು ಬೆಳ್ಳಗೆ ಪಳಪಳ ಹೊಳಿತಿತ್ತು.  ಅಷ್ಟೇ ಅಲ್ಲ ಎಲೀಯ, ಮೋಶೆ ಕಾಣಿಸ್ಕೊಂಡ್ರು. ಅವರು ಯೇಸು ಜೊತೆ ಮಾತಾಡ್ತಿರೋದು ಶಿಷ್ಯರಿಗೆ ಕಾಣಿಸ್ತು.  ಆಗ ಪೇತ್ರ ಯೇಸುಗೆ “ಗುರು,* ನಾವಿಲ್ಲಿ ಬಂದಿದ್ದು ಒಳ್ಳೆದಾಯ್ತು. ಮೂರು ಡೇರೆ ಹಾಕ್ತೀವಿ. ಒಂದು ನಿನಗೆ, ಒಂದು ಮೋಶೆಗೆ, ಇನ್ನೊಂದು ಎಲೀಯನಿಗೆ” ಅಂದ.  ನಿಜ ಹೇಳಬೇಕಂದ್ರೆ, ಪೇತ್ರನಿಗೆ ಏನು ಹೇಳಬೇಕಂತ ಗೊತ್ತಾಗದೆ ಹೀಗೆ ಮಾತಾಡಿದ್ದ. ಯಾಕಂದ್ರೆ ಅವ್ರಿಗೆ ತುಂಬಾ ಹೆದರಿಕೆ ಆಗಿತ್ತು.  ಅವ್ರ ಮೇಲೆ ಮೋಡ ಕವಿತು. ಆ ಮೋಡದಿಂದ “ಇವನು ನನ್ನ ಪ್ರೀತಿಯ ಮಗ.+ ಇವನ ಮಾತು ಕೇಳಿ”+ ಅನ್ನೋ ಧ್ವನಿ+ ಕೇಳಿಸ್ತು.  ತಕ್ಷಣ ಅವರು ಸುತ್ತಲೂ ನೋಡಿದ್ರು. ಅಲ್ಲಿ ಯೇಸು ಬಿಟ್ಟು ಬೇರೆ ಯಾರೂ ಕಾಣಲಿಲ್ಲ.  ಅವರು ಬೆಟ್ಟ ಇಳಿದು ಬರ್ತಿದ್ದಾಗ ಯೇಸು “ಮನುಷ್ಯಕುಮಾರ ಸತ್ತು ಎದ್ದು ಬರೋ ತನಕ ಈಗ ನೋಡಿದ್ದನ್ನ ಯಾರಿಗೂ ಹೇಳಬೇಡಿ”+ ಅಂತ ಅಪ್ಪಣೆ ಕೊಟ್ಟನು.+ 10  ಅವರು ಈ ಮಾತನ್ನ ಗಂಭೀರವಾಗಿ ತಗೊಂಡ್ರು.* ಆದ್ರೂ ಸತ್ತು ಎದ್ದು ಬರೋದು ಅಂದ್ರೆ ಏನು ಅಂತ ತಮ್ಮತಮ್ಮಲ್ಲೇ ಮಾತಾಡ್ಕೊಂಡ್ರು. 11  ಶಿಷ್ಯರು ಯೇಸುಗೆ “ಹಾಗಾದ್ರೆ ಕ್ರಿಸ್ತನಿಗಿಂತ ಮೊದಲು ಎಲೀಯ+ ಬರಬೇಕು ಅಂತ ಪಂಡಿತರು ಯಾಕೆ ಹೇಳ್ತಾರೆ?” ಅಂತ ಕೇಳಿದ್ರು.+ 12  ಅದಕ್ಕೆ ಯೇಸು “ಎಲೀಯ ಖಂಡಿತ ಮೊದಲು ಬರ್ತಾನೆ. ಎಲ್ಲ ವಿಷ್ಯಗಳನ್ನ ಸರಿ ಮಾಡ್ತಾನೆ.+ ಮತ್ಯಾಕೆ ಮನುಷ್ಯಕುಮಾರ ತುಂಬ ಕಷ್ಟ ಅನುಭವಿಸಬೇಕಾಗುತ್ತೆ,+ ಅವನನ್ನ ಒಪ್ಕೊಳ್ಳಲ್ಲ+ ಅಂತ ಪವಿತ್ರ ಗ್ರಂಥದಲ್ಲಿ ಬರೆದಿದೆ? 13  ನಾನು ನಿಮಗೆ ಹೇಳ್ತೀನಿ, ಎಲೀಯ+ ಬಂದಿದ್ದ. ಅವನ ಬಗ್ಗೆ ಪವಿತ್ರ ಗ್ರಂಥದಲ್ಲಿ ಹೇಳಿದ ಹಾಗೆ, ಅವರು ಅವನ ಜೊತೆ ಮನಸ್ಸಿಗೆ ಬಂದ ಹಾಗೆ ನಡ್ಕೊಂಡು ಕೊಂದುಬಿಟ್ರು” ಅಂದನು.+ 14  ಅವರು ಬೇರೆ ಶಿಷ್ಯರ ಹತ್ರ ಬಂದಾಗ ತುಂಬ ಜನ ಅವ್ರ ಸುತ್ತ ನಿಂತಿದ್ರು. ಪಂಡಿತರು ಅವ್ರ ಹತ್ರ ವಾದ ಮಾಡ್ತಾ ಇದ್ರು.+ 15  ಆದ್ರೆ ಯೇಸುವನ್ನ ನೋಡಿದ ತಕ್ಷಣ ಆ ಜನ್ರಿಗೆಲ್ಲ ಆಶ್ಚರ್ಯ ಆಯ್ತು. ಓಡೋಡಿ ಬಂದು ಆತನಿಗೆ ನಮಸ್ಕಾರ ಮಾಡಿದ್ರು. 16  ಯೇಸು “ನೀವು ಯಾವುದರ ಬಗ್ಗೆ ವಾದ ಮಾಡ್ತಾ ಇದ್ರಿ?” ಅಂದನು. 17  ಅವ್ರಲ್ಲಿ ಒಬ್ಬ “ಗುರು, ಒಬ್ಬ ಮೂಕ ಕೆಟ್ಟ ದೇವದೂತ ನನ್ನ ಮಗನನ್ನ ಹಿಡಿದಿದ್ದಾನೆ. ಅದಕ್ಕೆ ಅವನನ್ನ ನಿನ್ನ ಹತ್ರ ಕರ್ಕೊಂಡು ಬಂದೆ.+ 18  ಆ ಕೆಟ್ಟ ದೇವದೂತ ಹಿಡಿದಾಗೆಲ್ಲ ಅವನು ಕೆಳಗೆ ಬೀಳ್ತಾನೆ. ಬಾಯಿಂದ ನೊರೆ ಬರುತ್ತೆ. ಹಲ್ಲು ಕಡಿತಾನೆ. ಅವನಿಗೆ ತುಂಬ ಸುಸ್ತಾಗುತ್ತೆ. ಆ ಕೆಟ್ಟ ದೇವದೂತನನ್ನ ಬಿಡಿಸಿ ಅಂತ ನಿನ್ನ ಶಿಷ್ಯರ ಹತ್ರ ಕೇಳ್ಕೊಂಡೆ. ಆದ್ರೆ ಅವ್ರಿಂದ ಬಿಡಿಸೋಕಾಗ್ಲಿಲ್ಲ” ಅಂದ. 19  ಅದಕ್ಕೆ ಯೇಸು “ನಂಬಿಕೆ ಇಲ್ಲದವ್ರೇ,+ ನಾನಿನ್ನೂ ಎಷ್ಟು ಸಮಯ ನಿಮ್ಮ ಜೊತೆ ಇರಬೇಕು? ಎಷ್ಟು ದಿನ ಅಂತ ನಿಮ್ಮನ್ನ ಸಹಿಸ್ಕೊಬೇಕು? ಅವನನ್ನ ಕರ್ಕೊಂಡು ಬನ್ನಿ” ಅಂದನು.+ 20  ಅವರು ಆ ಹುಡುಗನನ್ನ ಕರ್ಕೊಂಡು ಬಂದ್ರು. ಆ ಕೆಟ್ಟ ದೇವದೂತ ಯೇಸುವನ್ನ ನೋಡಿದ ತಕ್ಷಣ ಆ ಹುಡುಗನನ್ನ ಕೆಳಗೆ ಬೀಳಿಸಿ ಒದ್ದಾಡಿಸಿದ. ಅವನ ಬಾಯಿಂದ ನೊರೆ ಬರ್ತಾ ಇತ್ತು. 21  ಆಗ ಯೇಸು ಆ ಹುಡುಗನ ಅಪ್ಪನಿಗೆ “ಯಾವಾಗಿಂದ ಈ ತರ ಆಗ್ತಾ ಇದೆ?” ಅಂತ ಕೇಳಿದನು. ಅದಕ್ಕೆ “ಚಿಕ್ಕ ವಯಸ್ಸಿಂದ ಹೀಗೇ ಆಗ್ತಾ ಇದೆ. 22  ಆ ಕೆಟ್ಟ ದೇವದೂತ ಇವನನ್ನ ಸಾಯಿಸಬೇಕಂತ ಪದೇಪದೇ ಬೆಂಕಿಗೆ, ನೀರಿಗೆ ತಳ್ತಾ ಇರ್ತಾನೆ. ನಿನ್ನಿಂದ ಏನಾದ್ರೂ ಸಹಾಯ ಮಾಡೋಕಾದ್ರೆ ದಯವಿಟ್ಟು ನಮಗೆ ಕನಿಕರ ತೋರಿಸು, ಸಹಾಯ ಮಾಡು” ಅಂತ ಕೇಳ್ಕೊಂಡ. 23  ಅದಕ್ಕೆ ಯೇಸು “‘ಮಾಡೋಕಾದ್ರೆ’ ಅಂತ ಯಾಕೆ ಹೇಳ್ತೀಯಾ? ನಂಬಿಕೆ ಇದ್ರೆ ಎಲ್ಲ ಸಾಧ್ಯ” ಅಂದನು.+ 24  ತಕ್ಷಣ ಆ ಹುಡುಗನ ಅಪ್ಪ “ನನಗೆ ನಂಬಿಕೆಯಿದೆ! ಒಂದುವೇಳೆ ಕಮ್ಮಿ ಇದ್ರೆ ಅದನ್ನ ಹೆಚ್ಚಿಸೋಕೆ ಸಹಾಯ ಮಾಡು!”+ ಅಂತ ಜೋರಾಗಿ ಹೇಳಿದ. 25  ಜನ್ರ ಗುಂಪು ತನ್ನ ಕಡೆ ಓಡಿಬರೋದನ್ನ ಗಮನಿಸಿ ಯೇಸು ಆ ಕೆಟ್ಟ ದೇವದೂತನಿಗೆ “ಏ ಕೆಟ್ಟ ದೇವದೂತ, ಮೂಕ ಕಿವುಡ, ಅವನನ್ನ ಬಿಟ್ಟು ಹೊರಗೆ ಬಾ ಅಂತ ನಾನು ನಿನಗೆ ಅಪ್ಪಣೆ ಕೊಡ್ತೀನಿ. ಇನ್ಯಾವತ್ತೂ ನೀನು ಅವನಿಗೆ ತೊಂದ್ರೆ ಕೊಡಬೇಡ” ಅಂತ ಗದರಿಸಿದನು.+ 26  ಆಗ ಆ ಕೆಟ್ಟ ದೇವದೂತ ಕಿರಿಚ್ತಾ ಅವನನ್ನ ತುಂಬ ಒದ್ದಾಡಿಸಿ ಹೊರಗೆ ಬಂದ. ಆ ಹುಡುಗ ಸತ್ತವನ ತರ ಬಿದ್ದಿದ್ದ. ಇದನ್ನ ನೋಡಿ ಜನ “ಅವನು ಸತ್ತುಹೋದ!” ಅಂದ್ರು. 27  ಆದ್ರೆ ಯೇಸು ಅವನ ಕೈಹಿಡಿದು ಎಬ್ಬಿಸಿದನು. ಹುಡುಗ ಎದ್ದು ನಿಂತ. 28  ಆಮೇಲೆ ಯೇಸು ಒಂದು ಮನೆಗೆ ಹೋದನು. ಯಾರೂ ಇಲ್ಲದಿದ್ದಾಗ ಶಿಷ್ಯರು ಬಂದು “ನಮ್ಮಿಂದ ಯಾಕೆ ಆ ಕೆಟ್ಟ ದೇವದೂತನನ್ನ ಬಿಡಿಸೋಕಾಗಲಿಲ್ಲ?” ಅಂತ ಕೇಳಿದ್ರು.+ 29  ಅದಕ್ಕೆ “ಈ ತರದ ಕೆಟ್ಟ ದೇವದೂತರನ್ನ ಪ್ರಾರ್ಥನೆಯಿಂದ ಮಾತ್ರ ಬಿಡಿಸೋಕಾಗುತ್ತೆ” ಅಂದನು. 30  ಅಲ್ಲಿಂದ ಅವರು ಗಲಿಲಾಯ ದಾಟಿ ಮುಂದೆ ಹೋದ್ರು. ಈ ವಿಷ್ಯ ಜನ್ರಿಗೆ ಗೊತ್ತಾಗೋದು ಯೇಸುಗೆ ಇಷ್ಟ ಇರ್ಲಿಲ್ಲ. 31  ಯಾಕಂದ್ರೆ ಆತನು ಶಿಷ್ಯರಿಗೆ ಕಲಿಸಬೇಕಂತ ಇದ್ದ. ಆತನು “ಮನುಷ್ಯಕುಮಾರನಿಗೆ ಮೋಸ ಮಾಡಿ ಶತ್ರುಗಳ ಕೈಗೆ ಒಪ್ಪಿಸ್ತಾರೆ. ಅವರು ಅವನನ್ನ ಸಾಯಿಸ್ತಾರೆ.+ ಸತ್ತರೂ ಮೂರನೇ ದಿನ ಅವನು ಬದುಕಿ ಬರ್ತಾನೆ” ಅಂದನು.+ 32  ಶಿಷ್ಯರಿಗೆ ಆ ಮಾತು ಅರ್ಥ ಆಗಲಿಲ್ಲ. ಆದ್ರೆ ಭಯಪಟ್ಟು ಅವರು ಅದ್ರ ಬಗ್ಗೆ ಕೇಳೋಕೂ ಹೋಗಲಿಲ್ಲ. 33  ಅವರು ಕಪೆರ್ನೌಮಿಗೆ ಬಂದು ಸೇರಿದ್ರು. ಮನೆಗೆ ಬಂದಾಗ ಯೇಸು ಶಿಷ್ಯರಿಗೆ “ದಾರಿಯಲ್ಲಿ ಯಾವುದ್ರ ಬಗ್ಗೆ ಜಗಳ ಮಾಡ್ತಾ ಇದ್ರಿ?” ಅಂತ ಕೇಳಿದನು.+ 34  ಅದಕ್ಕೆ ಅವರು ಏನೂ ಹೇಳದೆ ಸುಮ್ಮನಿದ್ರು. ಯಾಕಂದ್ರೆ ಅವರು ತಮ್ಮೊಳಗೆ ಯಾರು ದೊಡ್ಡವನು ಅಂತ ದಾರಿಯಲ್ಲೇ ಕಿತ್ತಾಡಿದ್ರು. 35  ಹಾಗಾಗಿ ಯೇಸು 12 ಶಿಷ್ಯರನ್ನ ಕರೆದು ಕೂತ್ಕೊಳ್ಳೋಕೆ ಹೇಳಿ “ನಿಮ್ಮಲ್ಲಿ ಯಾರಾದ್ರೂ ದೊಡ್ಡವನು ಆಗಬೇಕು ಅಂತ ಅಂದ್ಕೊಂಡ್ರೆ ಅವನು ಎಲ್ರಿಗಿಂತ ಚಿಕ್ಕವನಾಗಬೇಕು, ಬೇರೆಯವರ ಸೇವಕನಾಗಬೇಕು” ಅಂದನು.+ 36  ಆಮೇಲೆ ಯೇಸು ಒಂದು ಚಿಕ್ಕ ಮಗುನ ಹತ್ರ ಕರೆದು ಅವ್ರ ಮಧ್ಯ ನಿಲ್ಲಿಸಿ ಹೆಗಲ ಮೇಲೆ ಕೈಹಾಕಿ 37  “ನನ್ನ ಮೇಲಿನ ಗೌರವದಿಂದ* ಇಂಥ ಒಂದು ಚಿಕ್ಕ ಮಗುನ ಸ್ವೀಕರಿಸಿದ್ರೆ+ ನನ್ನನ್ನೂ ಸ್ವೀಕರಿಸ್ತಾರೆ. ನನ್ನನ್ನ ಸ್ವೀಕರಿಸಿದ್ರೆ ನನ್ನನ್ನ ಮಾತ್ರ ಅಲ್ಲ, ನನ್ನನ್ನ ಕಳಿಸಿದ ದೇವರನ್ನೂ ಸ್ವೀಕರಿಸ್ತಾರೆ” ಅಂದನು.+ 38  ಯೋಹಾನ ಯೇಸುಗೆ “ಗುರು, ಅಲ್ಲೊಬ್ಬ ನಿನ್ನ ಹೆಸ್ರಲ್ಲಿ ಕೆಟ್ಟ ದೇವದೂತರನ್ನ ಬಿಡಿಸ್ತಾ ಇದ್ದ. ನಾವು ಅವನನ್ನ ತಡೆದ್ವಿ. ಯಾಕಂದ್ರೆ ಅವನು ನಮ್ಮವನಲ್ಲ” ಅಂದ.+ 39  ಅದಕ್ಕೆ ಯೇಸು ಹೀಗಂದನು “ಅವನನ್ನ ತಡಿಬೇಡಿ. ಯಾಕಂದ್ರೆ ನನ್ನ ಹೆಸ್ರಲ್ಲಿ ಅದ್ಭುತ ಮಾಡುವವರು ಅಷ್ಟು ಬೇಗ ನನ್ನ ಬಗ್ಗೆ ಕೆಟ್ಟದಾಗಿ ಮಾತಾಡೋಕೆ ಆಗಲ್ಲ. 40  ನಮಗೆ ವಿರುದ್ಧವಾಗಿ ಇಲ್ಲದವ್ರೆಲ್ಲ ನಮ್ಮವ್ರೇ.+ 41  ನಿಮಗೆ ನಿಜ ಹೇಳ್ತೀನಿ, ಕ್ರಿಸ್ತನ ಶಿಷ್ಯರಾದ ನಿಮಗೆ+ ಯಾರಾದ್ರೂ ಕುಡಿಯೋಕೆ ಒಂದು ಲೋಟ ನೀರು ಕೊಟ್ರೂ ಅವ್ರಿಗೆ ಖಂಡಿತ ಬಹುಮಾನ ಸಿಗುತ್ತೆ.+ 42  ಆದ್ರೆ ನನ್ನ ಮೇಲೆ ನಂಬಿಕೆ ಇಡೋ ಈ ದೀನ ಜನ್ರಲ್ಲಿ* ಒಬ್ಬ ನಂಬಿಕೆ ಕಳ್ಕೊಳ್ಳೋ ತರ ಯಾರಾದ್ರೂ ಮಾಡಿದ್ರೆ* ಅವನ ಕುತ್ತಿಗೆಗೆ ದೊಡ್ಡ ಬೀಸೋ ಕಲ್ಲನ್ನ* ಕಟ್ಟಿ ಸಮುದ್ರಕ್ಕೆ ದೊಬ್ಬೋದೇ ಒಳ್ಳೇದು.+ 43  ನಿನ್ನ ಕೈ ನಿನ್ನಿಂದ ಪಾಪ ಮಾಡಿಸ್ತಾ ಇದ್ರೆ ಅದನ್ನ ಕತ್ತರಿಸಿ ಬಿಸಾಡು. ಎರಡು ಕೈ ಇಟ್ಕೊಂಡು ನೀನು ಸಂಪೂರ್ಣ ನಾಶನಕ್ಕೆ* ಹೋಗೋದಕ್ಕಿಂತ ಕೈ ಇಲ್ಲದೆ ಜೀವ ಪಡೆಯೋದೇ ಒಳ್ಳೇದು.+ 44  *—— 45  ನಿನ್ನ ಕಾಲು ನಿನ್ನಿಂದ ಪಾಪ ಮಾಡಿಸ್ತಾ ಇದ್ರೆ ಅದನ್ನ ಕತ್ತರಿಸಿ ಬಿಸಾಡು. ನೀನು ಎರಡು ಕಾಲು ಇಟ್ಕೊಂಡು ಸಂಪೂರ್ಣ ನಾಶನಕ್ಕೆ* ಹೋಗೋದಕ್ಕಿಂತ ಕುಂಟನಾಗಿ ಜೀವ ಪಡೆಯೋದೇ ಒಳ್ಳೇದು.+ 46  *—— 47  ಅದೇ ತರ ನಿನ್ನ ಕಣ್ಣು ನಿನ್ನಿಂದ ಪಾಪ ಮಾಡಿಸ್ತಾ ಇದ್ರೆ ಅದನ್ನ ಕಿತ್ತು ಬಿಸಾಡು.+ ಒಂದೇ ಕಣ್ಣು ಇಟ್ಕೊಂಡು ದೇವರ ಆಳ್ವಿಕೆಯಲ್ಲಿ ಇರೋದು, ಎರಡು ಕಣ್ಣು ಇಟ್ಕೊಂಡು ಸಂಪೂರ್ಣ ನಾಶನಕ್ಕೆ* ಹೋಗೋದಕ್ಕಿಂತ ಒಳ್ಳೇದು.+ 48  ಅಲ್ಲಿ ಹುಳಗಳು ಸಾಯಲ್ಲ, ಬೆಂಕಿ ಆರಲ್ಲ.+ 49  ಜನ್ರು ಊಟದ ಮೇಲೆ ಉಪ್ಪನ್ನ ಉದುರಿಸೋ ತರ ದೇವರು ಇಂಥ ಜನ್ರ ಮೇಲೆ ಬೆಂಕಿಯನ್ನ ಉದುರಿಸಬೇಕು.+ 50  ಉಪ್ಪು ಒಳ್ಳೇದೇ. ಆದ್ರೆ ಅದು ರುಚಿ ಕಳ್ಕೊಂಡ್ರೆ ಮತ್ತೆ ಅದಕ್ಕೆ ಯಾವುದ್ರಿಂದ ಉಪ್ಪಿನ ರುಚಿ ಬರೋ ತರ ಮಾಡ್ತೀರಾ?+ ನೀವು ಉಪ್ಪಿನ ತರ ಇರಿ,+ ನಿಮ್ಮ ಮಧ್ಯ ಶಾಂತಿ ಕಾಪಾಡ್ಕೊಳ್ಳಿ.”+

ಪಾದಟಿಪ್ಪಣಿ

ಅಕ್ಷ. “ರಬ್ಬಿ.”
ಬಹುಶಃ, “ಬೇರೆ ಯಾರಿಗೂ ಹೇಳದಿದ್ರೂ.”
ಅಥವಾ “ನನ್ನ ಹೆಸ್ರಲ್ಲಿ.”
ಅಥವಾ, “ಈ ಚಿಕ್ಕವರಲ್ಲಿ.”
ಅಕ್ಷ. “ಎಡವಿಸಿದ್ರೆ.”
ಅಥವಾ “ಕತ್ತೆಗೆ ಕಟ್ಟಿ ತಿರುಗಿಸೋ ಬೀಸೋ ಕಲ್ಲನ್ನ.”
ಅಕ್ಷ. “ಗೆಹೆನ್ನಕ್ಕೆ.” ಪದವಿವರಣೆ ನೋಡಿ.
ಅಕ್ಷ. “ಗೆಹೆನ್ನಕ್ಕೆ.” ಪದವಿವರಣೆ ನೋಡಿ.
ಅಕ್ಷ. “ಗೆಹೆನ್ನಕ್ಕೆ.” ಪದವಿವರಣೆ ನೋಡಿ.