ಯಾಕೋಬನ ಪತ್ರ 5:1-20
5 ಶ್ರೀಮಂತ್ರೇ ಕೇಳಿ, ಮುಂದೆ ನಿಮಗೆ ತುಂಬ ಕಷ್ಟ ಬರುತ್ತೆ.+ ಅದಕ್ಕೇ ಜೋರಾಗಿ ಅತ್ತು ಗೋಳಾಡಿ.
2 ನಿಮ್ಮ ಸಿರಿಸಂಪತ್ತು ಹಾಳಾಗಿ ಹೋಗಿದೆ, ನಿಮ್ಮ ಬಟ್ಟೆಗಳನ್ನ ನುಸಿ ತಿಂದುಹಾಕಿದೆ.+
3 ನಿಮ್ಮ ಚಿನ್ನ ಬೆಳ್ಳಿಗೆ ತುಕ್ಕು ಹಿಡಿದಿದೆ. ಆ ತುಕ್ಕು ನಿಮ್ಮ ವಿರುದ್ಧನೇ ಸಾಕ್ಷಿ ಹೇಳಿ ನಿಮ್ಮನ್ನೇ ತಿಂದುಬಿಡುತ್ತೆ. ನೀವು ಕೂಡಿಸಿ ಇಟ್ಟಿದ್ದೆಲ್ಲ ಕೊನೇ ದಿನಗಳಲ್ಲಿ ಬೆಂಕಿ ತರ ಆಗುತ್ತೆ.+
4 ನೋಡಿ, ನಿಮ್ಮ ಹೊಲದಲ್ಲಿ ಕಟಾವು ಮಾಡಿದ ಕೆಲಸಗಾರರಿಗೆ ಕೊಡಬೇಕಾದ ಕೂಲಿಯನ್ನ ನೀವು ಕೊಡಲಿಲ್ಲ. ಆ ಕೂಲಿ ನಿಮ್ಮ ವಿರುದ್ಧ ಕೂಗ್ತಿದೆ. ಕೆಲಸಗಾರರು ಸಹಾಯಕ್ಕಾಗಿ ಗೋಳಾಡ್ತಾ ಇರೋದು ಸೈನ್ಯಗಳ ದೇವರಾದ ಯೆಹೋವನ* ಕಿವಿಗೆ ಬಿದ್ದಿದೆ.+
5 ಭೂಮಿ ಮೇಲೆ ನೀವು ಐಷಾರಾಮಿ ಜೀವನ ಮಾಡ್ತಾ ಇದ್ದೀರ. ನೀವು ಇಷ್ಟಪಟ್ಟಿದ್ದನ್ನೆಲ್ಲ ಕೂಡಿಸ್ಕೊಳ್ತಾ ಇದ್ದೀರ. ಬಲಿಕೊಡೋ ದಿನಕ್ಕಾಗಿ ಪ್ರಾಣಿಯನ್ನ ಕೊಬ್ಬಿಸಿ ಬೆಳೆಸೋ ತರ ನಿಮ್ಮ ಹೃದಯವನ್ನ ಕೊಬ್ಬಿಸಿ ಬೆಳೆಸ್ತಾ ಇದ್ದೀರ.+
6 ನೀವು ನೀತಿವಂತನನ್ನ ಅಪರಾಧಿ ಅಂತ ತೀರ್ಪು ಮಾಡಿ ಕೊಂದಿದ್ದೀರ. ಅವನು* ನಿಮ್ಮನ್ನ ವಿರೋಧಿಸ್ತಾ ಇಲ್ವಾ?
7 ಹಾಗಾಗಿ ಸಹೋದರರೇ, ಒಡೆಯ ಮತ್ತೆ ಬರೋ ತನಕ ತಾಳ್ಮೆಯಿಂದ ಇರಿ.+ ರೈತನನ್ನ ನೋಡಿ, ಅವನು ಭೂಮಿ ಕೊಡೋ ಅಮೂಲ್ಯ ಬೆಳೆಗಾಗಿ ಕಾಯ್ತಾನೆ. ಮುಂಗಾರು ಮತ್ತು ಹಿಂಗಾರು ಮಳೆ ಬರೋ ತನಕ ತಾಳ್ಮೆಯಿಂದ ಇರ್ತಾನೆ.+
8 ಅದೇ ತರ ನೀವೂ ತಾಳ್ಮೆಯಿಂದ ಇರಬೇಕು.+ ಒಡೆಯ ಮತ್ತೆ ಬರೋ ಕಾಲ ಹತ್ರ ಇರೋದ್ರಿಂದ ನಿಮ್ಮ ಮನಸ್ಸನ್ನ ಗಟ್ಟಿ ಮಾಡ್ಕೊಳ್ಳಿ.+
9 ಸಹೋದರರೇ, ನಿಮಗೆ ಶಿಕ್ಷೆ ಸಿಗಬಾರದಂದ್ರೆ ಒಬ್ರು ಇನ್ನೊಬ್ರ ವಿರುದ್ಧ ಗೊಣಗಬೇಡಿ.+ ನೋಡಿ, ನ್ಯಾಯಾಧೀಶ ಬಾಗಿಲ ಹತ್ರನೇ ನಿಂತಿದ್ದಾನೆ.
10 ಸಹೋದರರೇ, ಜನ್ರ ಹತ್ರ ಮಾತಾಡೋಕೆ ಯೆಹೋವ* ದೇವರು ನೇಮಿಸಿದ ಪ್ರವಾದಿಗಳ ತರ ಇರಿ.+ ಅವರು ಕಷ್ಟ+ ಬಂದ್ರೂ ತಾಳ್ಕೊಂಡ್ರು.+
11 ತಾಳ್ಕೊಂಡವರು ಖುಷಿಯಾಗಿ ಇರ್ತಾರೆ ಅಂತ ನಾವು ಹೇಳ್ತೀವಿ.+ ಯೋಬ ತೋರಿಸಿದ ತಾಳ್ಮೆ ಬಗ್ಗೆ ನೀವು ಕೇಳಿಸ್ಕೊಂಡಿದ್ದೀರ.+ ಯೆಹೋವ* ಅವನಿಗೆ ಎಷ್ಟೆಲ್ಲ ಆಶೀರ್ವಾದ ಮಾಡಿದನು ಅಂತ ನಿಮಗೆ ಗೊತ್ತು.+ ಯೆಹೋವ* ದೇವರು ಕೋಮಲ ಮಮತೆ ತೋರಿಸ್ತಾನೆ, ಆತನು ಕರುಣಾಮಯಿ+ ಅಂತ ನಿಮಗೆ ಗೊತ್ತು.
12 ಸಹೋದರರೇ, ತುಂಬ ಮುಖ್ಯವಾದ ವಿಷ್ಯ ಹೇಳ್ತೀನಿ: ಆಕಾಶದ ಮೇಲೆ, ಭೂಮಿ ಮೇಲೆ, ಇನ್ಯಾವುದ್ರ ಮೇಲೂ ಆಣೆ ಇಡಬೇಡಿ. ನಿಮ್ಮ ಮಾತು ಹೌದು ಅಂದ್ರೆ ಹೌದು, ಇಲ್ಲ ಅಂದ್ರೆ ಇಲ್ಲ ಅಂತಾನೇ ಇರಲಿ.+ ಆಗ ದೇವರು ನಿಮ್ಮನ್ನ ಶಿಕ್ಷಿಸಲ್ಲ.
13 ನಿಮ್ಮಲ್ಲಿ ಯಾರಾದ್ರೂ ಕಷ್ಟದಲ್ಲಿ ಇದ್ದೀರಾ? ಪ್ರಾರ್ಥನೆ ಮಾಡ್ತಾ ಇರಿ.+ ಖುಷಿಯಾಗಿ ಇದ್ದೀರಾ? ದೇವರನ್ನ ಹಾಡಿಹೊಗಳಿ.+
14 ನಿಮ್ಮಲ್ಲಿ ಯಾರಿಗಾದ್ರೂ ಹುಷಾರಿಲ್ವಾ? ಸಭೆ ಹಿರಿಯರಿಗೆ ನಿಮ್ಮ ಹತ್ರ ಬರಕ್ಕೆ ಹೇಳಿ.+ ಆ ಹಿರಿಯರು ಬಂದು ಎಣ್ಣೆ ಹಚ್ಚಿ+ ಯೆಹೋವನ* ಹೆಸ್ರಲ್ಲಿ ನಿಮಗೋಸ್ಕರ ಪ್ರಾರ್ಥನೆ ಮಾಡ್ತಾರೆ.
15 ನಂಬಿಕೆಯಿಂದ ಮಾಡೋ ಪ್ರಾರ್ಥನೆ ನಿಮ್ಮ ಕಾಯಿಲೆಯನ್ನ ವಾಸಿಮಾಡುತ್ತೆ. ಯೆಹೋವ* ನಿಮಗೆ ಒಳ್ಳೇ ಆರೋಗ್ಯ ಕೊಡ್ತಾನೆ. ನೀವು ಪಾಪ ಮಾಡಿದ್ರೆ ದೇವರಿಂದ ಕ್ಷಮೆ ಸಿಗುತ್ತೆ.
16 ಹಾಗಾಗಿ ನಿಮ್ಮ ಪಾಪಗಳನ್ನ ಮುಚ್ಚಿಡದೆ ಒಬ್ರು ಇನ್ನೊಬ್ರ ಹತ್ರ ಒಪ್ಕೊಳ್ಳಿ.+ ಒಬ್ರು ಇನ್ನೊಬ್ರ ಬಗ್ಗೆ ಪ್ರಾರ್ಥನೆ ಮಾಡಿ. ಆಗ ಒಳ್ಳೇದಾಗುತ್ತೆ. ನೀತಿವಂತರು ಅಂಗಲಾಚಿ ಮಾಡೋ ಪ್ರಾರ್ಥನೆಗೆ ತುಂಬ ಶಕ್ತಿ ಇದೆ.*+
17 ಎಲೀಯನೂ ನಮ್ಮ ತರ ಭಾವನೆಗಳಿದ್ದ ಮನುಷ್ಯನಾಗಿದ್ರೂ ಅವನು ಪ್ರಾರ್ಥನೆ ಮಾಡಿದಾಗ ಉತ್ತರ ಸಿಕ್ತು. ಮಳೆ ಆಗಬಾರದು ಅಂತ ಅಂಗಲಾಚಿ ಪ್ರಾರ್ಥನೆ ಮಾಡಿದಾಗ ಆ ದೇಶದಲ್ಲಿ ಮೂರೂವರೆ ವರ್ಷ ಮಳೆನೇ ಆಗಲಿಲ್ಲ.+
18 ಆಮೇಲೆ ಅವನು ಮತ್ತೆ ಪ್ರಾರ್ಥನೆ ಮಾಡಿದ. ಆಗ ಮಳೆ ಬಂತು, ಭೂಮಿ ಬೆಳೆ ಕೊಡ್ತು.+
19 ಸಹೋದರರೇ, ಸತ್ಯದ ದಾರಿಯಿಂದ ದೂರ ಹೋಗಿದ್ದ ಒಬ್ಬನನ್ನ ಯಾರಾದ್ರೂ ಸರಿದಾರಿಗೆ ತಂದಿದ್ದಾರೆ ಅಂದ್ಕೊಳ್ಳಿ.
20 ಆ ತರ ತಪ್ಪಾದ ದಾರಿಗೆ ಹೋಗಿದ್ದ ಪಾಪಿಯನ್ನ ಸರಿದಾರಿಗೆ ತಂದವನು+ ಅವನನ್ನ ಸಾವಿಂದ ತಪ್ಪಿಸಿದ್ದಾನೆ ಮತ್ತು ದೇವರು ಅವನ ಎಲ್ಲ ಪಾಪಗಳನ್ನ ಕ್ಷಮಿಸ್ತಾನೆ ಅಂತ ಅರ್ಥ ಮಾಡ್ಕೊಳ್ಳಿ.+
ಪಾದಟಿಪ್ಪಣಿ
^ ಪರಿಶಿಷ್ಟ ಎ5 ನೋಡಿ.
^ ಬಹುಶಃ, “ದೇವರು.”
^ ಪರಿಶಿಷ್ಟ ಎ5 ನೋಡಿ.
^ ಪರಿಶಿಷ್ಟ ಎ5 ನೋಡಿ.
^ ಪರಿಶಿಷ್ಟ ಎ5 ನೋಡಿ.
^ ಪರಿಶಿಷ್ಟ ಎ5 ನೋಡಿ.
^ ಪರಿಶಿಷ್ಟ ಎ5 ನೋಡಿ.
^ ಅಥವಾ “ಅಂಥ ಪ್ರಾರ್ಥನೆ ಜನ್ರಿಗೆ ಸಹಾಯ ಮಾಡುತ್ತೆ.”