ಯೆರೆಮೀಯ 30:1-24
-
ಮುಂಚಿನ ಸ್ಥಿತಿಗೆ ಬರ್ತಾರೆ, ವಾಸಿ ಆಗ್ತಾರೆ ಅಂತ ಮಾತುಕೊಟ್ಟದ್ದು (1-24)
30 ಯೆಹೋವ ಯೆರೆಮೀಯನಿಗೆ ಹೀಗಂದನು
2 “ಇಸ್ರಾಯೇಲಿನ ದೇವರಾದ ಯೆಹೋವ ಹೇಳೋದು ಏನಂದ್ರೆ ‘ನಾನು ನಿನಗೆ ಹೇಳೋ ಮಾತುಗಳನ್ನೆಲ್ಲ ಒಂದು ಪುಸ್ತಕದಲ್ಲಿ ಬರಿ.
3 ಯಾಕಂದ್ರೆ “ನೋಡು! ಕೈದಿಗಳಾಗಿ ಹೋಗಿರೋ ನನ್ನ ಜನ್ರಾದ ಇಸ್ರಾಯೇಲ್ಯರನ್ನ ಯೆಹೂದ್ಯರನ್ನ ನಾನು ಒಟ್ಟುಗೂಡಿಸೋ ದಿನ ಬರುತ್ತೆ”+ ಅಂತ ಯೆಹೋವ ಹೇಳ್ತಾನೆ. “ಅಷ್ಟೇ ಅಲ್ಲ ನಾನು ಅವ್ರ ಪೂರ್ವಜರಿಗೆ ಕೊಟ್ಟ ದೇಶಕ್ಕೆ ಅವ್ರನ್ನ ವಾಪಸ್ ಕರ್ಕೊಂಡು ಬರ್ತಿನಿ. ಆ ದೇಶ ಮತ್ತೆ ಅವರದ್ದಾಗುತ್ತೆ” ಅಂತ ಯೆಹೋವ ಹೇಳ್ತಾನೆ.’”+
4 ಇವು ಇಸ್ರಾಯೇಲ್ಯರಿಗೆ ಯೆಹೂದ್ಯರಿಗೆ ಯೆಹೋವ ಹೇಳಿದ ಮಾತುಗಳು.
5 ಯೆಹೋವ ಹೇಳೋದು ಏನಂದ್ರೆ“ಭಯದಿಂದ ಚೀರ್ತಿರೋ ಶಬ್ದ ಕೇಳಿಸಿದೆ,ಎಲ್ಲಾ ಕಡೆ ಭಯ ಇದೆ, ಶಾಂತಿ ಇಲ್ಲ.
6 ಒಬ್ಬ ಗಂಡಸು ಮಗು ಹೆರೋಕೆ ಆಗುತ್ತಾ ಅಂತ ದಯವಿಟ್ಟು ಕೇಳಿ ನೋಡಿ.
ಒಬ್ಬ ಸ್ತ್ರೀ ಹೆರಿಗೆ ಆಗುವಾಗ ಮಾಡೋ ತರಪ್ರತಿಯೊಬ್ಬ ಶಕ್ತಿಶಾಲಿ ಗಂಡಸು ತನ್ನ ಹೊಟ್ಟೆ ಮೇಲೆ ಕೈ ಇಟ್ಕೊಂಡಿರೋದು ಯಾಕೆ?+
ಪ್ರತಿಯೊಬ್ರ ಮುಖ ಯಾಕೆ ಬಿಳಿಚ್ಕೊಂಡಿದೆ?
7 ಅಯ್ಯೋ! ಆ ದಿನ ಭಯಾನಕವಾದ ದಿನ.+
ಅಂಥ ದಿನ ಬಂದೇ ಇಲ್ಲ.
ಯಾಕೋಬನಿಗೆ ಅದು ಕಷ್ಟದ ದಿನ.
ಆದ್ರೆ ಅವನು ಅದ್ರಿಂದ ಪಾರಾಗ್ತಾನೆ.”
8 ಸೈನ್ಯಗಳ ದೇವರಾದ ಯೆಹೋವ ಹೇಳೋದು ಏನಂದ್ರೆ “ಆ ದಿನದಲ್ಲಿ ನಾನು ಅವ್ರ ಕುತ್ತಿಗೆ ಮೇಲಿರೋ ನೊಗವನ್ನ ಮುರಿದುಬಿಡ್ತೀನಿ, ಅವ್ರ ಹಗ್ಗಗಳನ್ನ* ಎರಡು ತುಂಡು ಮಾಡ್ತೀನಿ. ಅಪರಿಚಿತರು* ಇನ್ನು ಮುಂದೆ ಅವ್ರನ್ನ* ದಾಸರಾಗಿ ಮಾಡ್ಕೊಳ್ಳಲ್ಲ.
9 ಅವರು ತಮ್ಮ ದೇವರಾದ ಯೆಹೋವನ ಸೇವೆ ಮಾಡ್ತಾರೆ, ಅವ್ರಿಗಾಗಿ ನಾನು ನೇಮಿಸೋ ರಾಜನಾದ ದಾವೀದನ ಸೇವೆ ಮಾಡ್ತಾರೆ.”+
10 ಯೆಹೋವ ಹೇಳೋದು ಏನಂದ್ರೆ “ನನ್ನ ಸೇವಕನಾದ ಯಾಕೋಬ, ನೀನು ಹೆದರಬೇಡ,ಇಸ್ರಾಯೇಲೇ, ನೀನು ಭಯಪಡಬೇಡ.+
ಯಾಕಂದ್ರೆ ತುಂಬ ದೂರದಲ್ಲಿರೋ ನಿನ್ನನ್ನ ನಾನು ಕಾಪಾಡ್ತೀನಿ,ನಿನ್ನ ವಂಶದವರನ್ನ ಅವರು ಕೈದಿಗಳಾಗಿರೋ ದೇಶದಿಂದ ಬಿಡಿಸ್ತೀನಿ.+
ಯಾಕೋಬ ವಾಪಸ್ ಬರ್ತಾನೆ, ಯಾವುದೇ ತೊಂದರೆ ಇಲ್ಲದೆ ನೆಮ್ಮದಿಯಾಗಿ ಇರ್ತಾನೆ,ಅವ್ರನ್ನ ಹೆದರಿಸುವವರು ಯಾರೂ ಇರಲ್ಲ.”+
11 ಯೆಹೋವ ಹೇಳೋದು ಏನಂದ್ರೆ “ನಾನೇ ನಿನ್ನ ಜೊತೆ ಇದ್ದು ನಿನ್ನನ್ನ ಕಾಪಾಡ್ತೀನಿ.
ನಾನು ಯಾವ ಜನ್ರ ಮಧ್ಯ ನಿನ್ನನ್ನ ಚದರಿಸಿದ್ನೋ ಆ ಎಲ್ಲ ದೇಶದವ್ರನ್ನ ನಾಶ ಮಾಡ್ತೀನಿ.+
ಆದ್ರೆ ನಿನ್ನನ್ನ ನಾಶ ಮಾಡಲ್ಲ.+
ಸರಿಯಾದ ಪ್ರಮಾಣದಲ್ಲಿ ತಿದ್ದುತೀನಿ,ನಿನಗೆ ಶಿಕ್ಷೆ ಕೊಡ್ದೆ ಇರಲ್ಲ.”+
12 ಯೆಹೋವ ಹೀಗೆ ಹೇಳ್ತಾನೆ“ಚೀಯೋನೇ, ನಿನ್ನ ಗಾಯಕ್ಕೆ ಔಷಧಿನೇ ಇಲ್ಲ,+ಅದು ವಾಸಿ ಆಗೋದೇ ಇಲ್ಲ.
13 ನಿನ್ನ ಪರವಾಗಿ ವಾದಿಸೋಕೆ ಯಾರೂ ಇಲ್ಲ,ನಿನ್ನ ಹುಣ್ಣಿಗೆ ಮದ್ದೇ ಇಲ್ಲ,ನೀನು ವಾಸಿ ಆಗೋಕೆ ಸಾಧ್ಯನೇ ಇಲ್ಲ.
14 ನೀನಂದ್ರೆ ಜೀವ ಬಿಡ್ತಿದ್ದ ನಿನ್ನ ಪ್ರಿಯತಮರು ನಿನ್ನನ್ನ ಮರ್ತಿದ್ದಾರೆ,+ಅವ್ರೀಗ ನಿನ್ನನ್ನ ಹುಡುಕ್ತಿಲ್ಲ.
ನೀನು ದೊಡ್ಡ ಅಪರಾಧವನ್ನ, ತುಂಬ ಪಾಪಗಳನ್ನ ಮಾಡಿರೋದ್ರಿಂದ+ಶತ್ರು ಹೊಡಿಯೋ ಹಾಗೆ ನಿನ್ನನ್ನ ಹೊಡಿತೀನಿ,+ಕ್ರೂರಿ ಶಿಕ್ಷಿಸೋ ಹಾಗೆ ನಿನಗೆ ಶಿಕ್ಷೆ ಕೊಡ್ತೀನಿ.
15 ನಿನಗೆ ಗಾಯ ಆಗಿದ್ದಕ್ಕೆ ನೀನ್ಯಾಕೆ ಅರಚ್ಕೊಳ್ತೀಯ?
ನಿನ್ನ ನೋವು ಕಮ್ಮಿ ಆಗೋದೇ ಇಲ್ಲ,ನೀನು ದೊಡ್ಡ ಅಪರಾಧವನ್ನ, ತುಂಬ ಪಾಪಗಳನ್ನ ಮಾಡಿರೋದ್ರಿಂದ+ನಿನಗೆ ಹೀಗೆ ಮಾಡಿದ್ದೀನಿ.
16 ನಿನ್ನನ್ನ ನಾಶಮಾಡೋರೆಲ್ಲ ನಾಶ ಆಗೇ ಆಗ್ತಾರೆ,+ನಿನ್ನ ಶತ್ರುಗಳನ್ನ ಕೈದಿಗಳಾಗಿ ಹಿಡ್ಕೊಂಡು ಹೋಗ್ತಾರೆ.+
ನಿನ್ನ ಹತ್ರ ಇರೋದನ್ನ ಯಾರು ಲೂಟಿಮಾಡ್ತಾರೋ ಅವ್ರ ಹತ್ರ ಇರೋದನ್ನ ಬೇರೆಯವರು ಲೂಟಿ ಮಾಡ್ತಾರೆ.
ನಿನ್ನ ಆಸ್ತಿಪಾಸ್ತಿ ಯಾರು ಕಿತ್ಕೊಳ್ತಾರೋ ಅವ್ರ ಆಸ್ತಿಯನ್ನೆಲ್ಲ ಬೇರೆಯವರು ಕಿತ್ಕೊಳೋ ತರ ಮಾಡ್ತೀನಿ.”+
17 ಯೆಹೋವ ಹೇಳೋದು ಏನಂದ್ರೆ “‘ಚೀಯೋನ್‌ಗಾಗಿ ಯಾರೂ ಹುಡುಕಲ್ಲ’+ ಅಂತ ಅವರು ಹೇಳಿನಿನ್ನನ್ನ ಭಿಕಾರಿ ಅಂತ ಕರೆದ್ರೂನೀನು ಮತ್ತೆ ಆರೋಗ್ಯವಾಗಿರೋ ತರ ಮಾಡ್ತೀನಿ, ನಿನ್ನ ಗಾಯಗಳನ್ನ ವಾಸಿ ಮಾಡ್ತೀನಿ.”+
18 ಯೆಹೋವ ಹೇಳೋದು ಏನಂದ್ರೆ“ನಾನು ಯಾಕೋಬನ ಡೇರೆಗಳಲ್ಲಿರೋ ಜನ್ರನ್ನ ಜೈಲಿಂದ ಬಿಡಿಸಿ ಒಟ್ಟುಗೂಡಿಸ್ತೀನಿ,+ನಾನು ಕನಿಕರ ತೋರಿಸಿ ಅವ್ರ ಜಾಗಗಳನ್ನ ಮುಂಚಿನ ಸ್ಥಿತಿಗೆ ತರ್ತಿನಿ.
ಆ ಪಟ್ಟಣವನ್ನ ಅದು ಮೊದಲಿದ್ದ ಗುಡ್ಡದ ಮೇಲೆ ಮತ್ತೆ ಕಟ್ತೀನಿ,+ಅದ್ರ ಭದ್ರ ಕೋಟೆ ಅದು ಇರಬೇಕಾದ ಜಾಗದಲ್ಲಿ ಮತ್ತೆ ತಲೆಯೆತ್ತುತ್ತೆ.
19 ಅವರು ಧನ್ಯವಾದ ಸಲ್ಲಿಸೋ, ಮನಸಾರೆ ನಗೋ ಸದ್ದು ಕೇಳುತ್ತೆ.+
ಅವ್ರ ಸಂಖ್ಯೆಯನ್ನ ಹೆಚ್ಚು ಮಾಡ್ತೀನಿ, ಅವ್ರ ಸಂಖ್ಯೆ ಕಮ್ಮಿ ಆಗಲ್ಲ,+ಅವರು ತುಂಬ ಜನ್ರು ಆಗೋ ತರ* ಮಾಡ್ತೀನಿ,ಅವ್ರನ್ನ ಯಾರೂ ಕೀಳಾಗಿ ನೋಡಲ್ಲ.+
20 ಯಾಕೋಬನ ಮಕ್ಕಳು ಮುಂಚಿನ ತರ ಚೆನ್ನಾಗಿ ಇರ್ತಾರೆ,ಅವನ ಜನ್ರು ನನ್ನ ಮುಂದೆ ಶಕ್ತಿಶಾಲಿ ಜನ್ರು ಆಗ್ತಾರೆ.+
ಅವನ ಮೇಲೆ ದಬ್ಬಾಳಿಕೆ ಮಾಡುವವ್ರಿಗೆ ಶಿಕ್ಷೆ ಕೊಡ್ತೀನಿ.+
21 ಅವನ ಸ್ವಂತ ಜನ್ರಿಂದನೇ ಅವನ ನಾಯಕ ಬರ್ತಾನೆ,ಅವನ ವಂಶದವ್ರಿಂದಲೇ ಅವನ ರಾಜ ಬರ್ತಾನೆ.
ಅವನು ನನ್ನ ಹತ್ರ ಬರೋಕೆ ನಾನು ಬಿಡ್ತೀನಿ, ಅವನು ನನ್ನ ಹತ್ರ ಬರ್ತಾನೆ.”
“ಇಲ್ಲದಿದ್ರೆ ನನ್ನ ಹತ್ರ ಬರೋಷ್ಟು ಧೈರ್ಯ ಯಾರಿಗಿದೆ?” ಅಂತ ಯೆಹೋವ ಹೇಳ್ತಾನೆ.
22 “ನೀವು ನನ್ನ ಜನರಾಗ್ತೀರ,+ ನಾನು ನಿಮ್ಮ ದೇವರಾಗಿ ಇರ್ತಿನಿ.”+
23 ನೋಡಿ! ಯೆಹೋವನ ಕೋಪ ಅನ್ನೋ ಬಿರುಗಾಳಿ ಬರುತ್ತೆ,+ಸುಂಟರಗಾಳಿ ಸುತ್ತುತ್ತಾ ಕೆಟ್ಟವರ ತಲೆ ಮೇಲೆ ಜೋರಾಗಿ ಬಡಿಯುತ್ತೆ.
24 ಯೆಹೋವ ತಾನು ಹೃದಯದಲ್ಲಿ ಅಂದ್ಕೊಂಡಿದ್ದನ್ನ ಮಾಡೋ ತನಕಆತನ ಕೋಪ ತಣ್ಣಗಾಗಲ್ಲ.+
ಕೊನೆ ದಿನಗಳಲ್ಲಿ ಇದು ನಿಮಗೆ ಅರ್ಥ ಆಗುತ್ತೆ.+
ಪಾದಟಿಪ್ಪಣಿ
^ ಅಕ್ಷ. “ಪಟ್ಟಿಗಳನ್ನ.”
^ ಅಥವಾ “ವಿದೇಶಿಯರು.”
^ ಅಥವಾ “ಅವನನ್ನ.”
^ ಬಹುಶಃ, “ಗೌರವಕ್ಕೆ ಪಾತ್ರರಾಗೋ ತರ.”