ಯೆರೆಮೀಯ 38:1-28
38 ಮತ್ತಾನನ ಮಗ ಶೆಫಟ್ಯ, ಪಷ್ಹೂರನ ಮಗ ಗೆದಲ್ಯ, ಶೆಲೆಮ್ಯನ ಮಗ ಯೂಕಲ,+ ಮಲ್ಕೀಯನ ಮಗ ಪಷ್ಹೂರ+ ಇವ್ರೆಲ್ಲ ಯೆರೆಮೀಯ ಎಲ್ಲ ಜನ್ರಿಗೆ ಹೇಳ್ತಿದ್ದ ಮಾತನ್ನ ಕೇಳಿಸ್ಕೊಂಡ್ರು. ಅವನು ಏನು ಹೇಳ್ತಿದ್ದ ಅಂದ್ರೆ
2 “ಯೆಹೋವ ಹೀಗೆ ಹೇಳ್ತಾನೆ ‘ಈ ಪಟ್ಟಣದಲ್ಲೇ ಉಳಿಯೋ ಜನ್ರು ಕತ್ತಿ, ಬರಗಾಲ, ಅಂಟುರೋಗದಿಂದ*+ ಸಾಯ್ತಾರೆ. ಆದ್ರೆ ಕಸ್ದೀಯರಿಗೆ ಶರಣಾಗೋ ಜನ್ರು ಉಳಿತಾರೆ. ಅವರು ತಮ್ಮ ಪ್ರಾಣ ಮಾತ್ರ ಉಳಿಸ್ಕೊಂಡು ಬದುಕ್ತಾರೆ.’*+
3 ಯೆಹೋವ ಹೀಗೆ ಹೇಳ್ತಾನೆ ‘ಬಾಬೆಲ್ ರಾಜನ ಸೈನ್ಯ ಈ ಪಟ್ಟಣವನ್ನ ಖಂಡಿತ ಸೋಲಿಸುತ್ತೆ. ಆ ರಾಜ ಈ ಪಟ್ಟಣವನ್ನ ವಶ ಮಾಡ್ಕೊತಾನೆ.’”+
4 ಆ ಅಧಿಕಾರಿಗಳು ರಾಜನಿಗೆ “ದಯವಿಟ್ಟು ಈ ಮನುಷ್ಯನನ್ನ ಸಾಯಿಸು.+ ಇವನು ಈ ರೀತಿ ಏನೇನೋ ಹೇಳಿ ಈ ಪಟ್ಟಣದಲ್ಲಿ ಉಳಿದಿರೋ ಸೈನಿಕರಿಗೆ, ಎಲ್ಲ ಜನ್ರಿಗೆ ಭಯ ಹುಟ್ಟಿಸ್ತಾ ಇದ್ದಾನೆ. ಜನ್ರು ಶಾಂತಿಯಿಂದ ಬದುಕೋದು ಇವನಿಗೆ ಸ್ವಲ್ಪನೂ ಇಷ್ಟ ಇಲ್ಲ, ಅವ್ರಿಗೆ ಕೆಟ್ಟದು ಆಗಬೇಕಂತ ಕಾಯ್ತಾ ಇದ್ದಾನೆ” ಅಂದ್ರು.
5 ಅದಕ್ಕೆ ರಾಜ ಚಿದ್ಕೀಯ “ನೋಡಿ! ಅವನು ನಿಮ್ಮ ಕೈಯಲ್ಲಿದ್ದಾನೆ, ಏನು ಬೇಕಾದ್ರೂ ಮಾಡಿ. ನಿಮ್ಮನ್ನ ತಡಿಯೋಕೆ ನನ್ನಿಂದ ಆಗಲ್ಲ” ಅಂದ.
6 ಹಾಗಾಗಿ ಅವರು ಯೆರೆಮೀಯನನ್ನ ಹಿಡ್ಕೊಂಡು ಹೋಗಿ ರಾಜನ ಮಗ* ಮಲ್ಕೀಯನಿಗೆ ಸೇರಿದ ಗುಂಡಿ ಒಳಗೆ ಎಸೆದ್ರು. ಆ ಗುಂಡಿ ‘ಕಾವಲುಗಾರರ ಅಂಗಳದಲ್ಲಿ’+ ಇತ್ತು. ಅವರು ಅವನನ್ನ ಹಗ್ಗ ಕಟ್ಟಿ ಗುಂಡಿಗೆ ಇಳಿಸಿದ್ರು. ಅದ್ರಲ್ಲಿ ನೀರು ಇರಲಿಲ್ಲ, ಕೆಸರು ಮಾತ್ರ ಇತ್ತು. ಯೆರೆಮೀಯ ಕೆಸ್ರಲ್ಲಿ ಹೂತುಹೋಗ್ತಾ ಇದ್ದ.
7 ಅರಮನೆಯಲ್ಲಿ ಆಸ್ಥಾನದ ಅಧಿಕಾರಿಯಾದ* ಇಥಿಯೋಪ್ಯದ ಎಬೆದ್ಮೆಲೆಕನಿಗೆ+ ಯೆರೆಮೀಯನನ್ನ ಗುಂಡಿ ಒಳಗೆ ಹಾಕಿದ್ದಾರೆ ಅನ್ನೋ ವಿಷ್ಯ ಗೊತ್ತಾಯ್ತು. ಆಗ ರಾಜ ‘ಬೆನ್ಯಾಮೀನ್ ಬಾಗಿಲ’+ ಹತ್ರ ಕೂತಿದ್ದ.
8 ಎಬೆದ್ಮೆಲೆಕ ಅರಮನೆ ಹೊರಗೆ ಹೋಗಿ ರಾಜನ ಹತ್ರ ಮಾತಾಡಿದ.
9 “ನನ್ನ ಒಡೆಯ, ರಾಜ, ಇವರು ಎಂಥಾ ಕೆಟ್ಟ ಕೆಲಸ ಮಾಡಿದ್ದಾರೆ ಗೊತ್ತಾ? ಪ್ರವಾದಿ ಯೆರೆಮೀಯನನ್ನ ಗುಂಡಿಗೆ ಎಸೆದಿದ್ದಾರೆ. ಬರಗಾಲ ಬೇರೆ, ಪಟ್ಟಣದಲ್ಲಿ ಎಲ್ಲೂ ಆಹಾರ ಸಿಗ್ತಿಲ್ಲ.+ ಅವನನ್ನ ಅಲ್ಲೇ ಬಿಟ್ರೆ ಸತ್ತೇ ಹೋಗ್ತಾನೆ” ಅಂದ.
10 ಆಗ ರಾಜ ಇಥಿಯೋಪ್ಯದವನಾದ ಎಬೆದ್ಮೆಲೆಕನಿಗೆ “ನೀನು ಇಲ್ಲಿಂದ 30 ಗಂಡಸರನ್ನ ಕರ್ಕೊಂಡು ಹೋಗು, ಪ್ರವಾದಿ ಯೆರೆಮೀಯ ಗುಂಡಿಯಲ್ಲಿ ಸಾಯೋ ಮುಂಚೆ ಎತ್ತು” ಅಂದ.
11 ಹಾಗಾಗಿ ಎಬೆದ್ಮೆಲೆಕ ಗಂಡಸ್ರನ್ನ ಕರ್ಕೊಂಡು ರಾಜನ ಅರಮನೆ ಒಳಗೆ ಹೋದ. ಅವರು ಖಜಾನೆ+ ಕೆಳಗಿರೋ ಕೋಣೆಗೆ ಹೋಗಿ ಅಲ್ಲಿಂದ ಹಳೇ ಹರಕಲು ಬಟ್ಟೆಗಳನ್ನ, ಚಿಂದಿ ಬಟ್ಟೆಗಳನ್ನ ತಗೊಂಡು ಹೋದ್ರು. ಅದನ್ನ ಹಗ್ಗಕ್ಕೆ ಕಟ್ಟಿ ಗುಂಡಿ ಒಳಗಿದ್ದ ಯೆರೆಮೀಯನಿಗೆ ಕೊಟ್ರು.
12 ಆಮೇಲೆ ಇಥಿಯೋಪ್ಯದವನಾದ ಎಬೆದ್ಮೆಲೆಕ ಯೆರೆಮೀಯನಿಗೆ “ದಯವಿಟ್ಟು ಈ ಚಿಂದಿ, ಹರಕಲು ಬಟ್ಟೆಗಳನ್ನ ಕಂಕುಳುಗಳಲ್ಲಿ ಇಟ್ಕೊಂಡು ಹಗ್ಗ ಕಟ್ಕೊ” ಅಂದ. ಯೆರೆಮೀಯ ಹಾಗೇ ಮಾಡಿದ.
13 ಅವರು ಯೆರೆಮೀಯನನ್ನ ಹಗ್ಗ ಕಟ್ಟಿ ಮೇಲೆ ಎಳೆದು ಗುಂಡಿಯಿಂದ ಎತ್ತಿದ್ರು. ಆಮೇಲೆ ಯೆರೆಮೀಯನನ್ನ ‘ಕಾವಲುಗಾರರ ಅಂಗಳದಲ್ಲೇ’ ಇಟ್ರು.+
14 ರಾಜ ಚಿದ್ಕೀಯ ಪ್ರವಾದಿ ಯೆರೆಮೀಯನಿಗೆ ಯೆಹೋವನ ಆಲಯದಲ್ಲಿದ್ದ ಮೂರನೇ ಬಾಗಿಲ ಹತ್ರ ಬರೋಕೆ ಹೇಳಿಕಳಿಸಿದ. ಅವನು ಅಲ್ಲಿಗೆ ಬಂದಾಗ ರಾಜ “ನಾನೊಂದು ವಿಷ್ಯ ಕೇಳ್ತೀನಿ, ನನ್ನಿಂದ ಏನೂ ಮುಚ್ಚಿಡಬೇಡ” ಅಂದ.
15 ಅದಕ್ಕೆ ಯೆರೆಮೀಯ ಚಿದ್ಕೀಯನಿಗೆ “ನಾನು ನಿಜ ಹೇಳಿದ್ರೆ ನನ್ನನ್ನ ನೀನು ಖಂಡಿತ ಕೊಲ್ತೀಯ. ನಿನಗೆ ಸಲಹೆ ಕೊಟ್ರೆ ನೀನು ಕೇಳಲ್ಲ” ಅಂದ.
16 ಆಗ ರಾಜ ಯೆರೆಮೀಯನಿಗೆ “ನಮಗೆ ಜೀವ ಕೊಟ್ಟಿರೋ ಜೀವ ಇರೋ ದೇವರಾದ ಯೆಹೋವನಾಣೆ, ನಾನು ನಿನ್ನನ್ನ ಸಾಯಿಸಲ್ಲ. ನಿನ್ನ ಜೀವ ತೆಗಿಯೋಕೆ ಕಾಯ್ತಿರೋರ ಕೈಗೆ ನಿನ್ನನ್ನ ಒಪ್ಪಿಸಲ್ಲ” ಅಂತ ಗುಟ್ಟಾಗಿ ಆಣೆ ಮಾಡಿದ.
17 ಆಗ ಯೆರೆಮೀಯ ಚಿದ್ಕೀಯನಿಗೆ “ಸೈನ್ಯಗಳ ದೇವರಾದ ಇಸ್ರಾಯೇಲಿನ ದೇವರಾದ ಯೆಹೋವ ಹೇಳೋದು ಏನಂದ್ರೆ ‘ನೀನು ಬಾಬೆಲಿನ ರಾಜನ ಅಧಿಕಾರಿಗಳಿಗೆ ಶರಣಾದ್ರೆ ನಿನ್ನ ಜೀವ ಉಳಿಯುತ್ತೆ. ಈ ಪಟ್ಟಣವನ್ನ ಬೆಂಕಿಯಿಂದ ಸುಡಲ್ಲ. ನಿನ್ನ, ನಿನ್ನ ಕುಟುಂಬದವರ ಜೀವ ಉಳಿಯುತ್ತೆ.+
18 ಆದ್ರೆ ನೀನು ಬಾಬೆಲಿನ ರಾಜನ ಅಧಿಕಾರಿಗಳಿಗೆ ಶರಣಾಗದಿದ್ರೆ ಈ ಪಟ್ಟಣವನ್ನ ಕಸ್ದೀಯರು ವಶ ಮಾಡ್ಕೊಳ್ತಾರೆ. ಅವರು ಇದನ್ನ ಸುಟ್ಟುಬಿಡ್ತಾರೆ.+ ಅವರ ಕೈಯಿಂದ ತಪ್ಪಿಸ್ಕೊಳ್ಳೋಕೆ ನಿನಗೆ ಆಗಲ್ಲ’”+ ಅಂದ.
19 ಅದಕ್ಕೆ ರಾಜ ಚಿದ್ಕೀಯ ಯೆರೆಮೀಯನಿಗೆ “ಕಸ್ದೀಯರ ಜೊತೆ ಸೇರ್ಕೊಂಡಿರೋ ಯೆಹೂದ್ಯರನ್ನ ನೆನಸ್ಕೊಂಡ್ರೆ ತುಂಬ ಭಯ ಆಗುತ್ತೆ. ನಾನು ಅವ್ರ ಕೈಗೆ ಸಿಕ್ಕಿ ಬಿದ್ರೆ ಅವರು ನನ್ನ ಜೊತೆ ಕ್ರೂರವಾಗಿ ನಡ್ಕೊಳ್ತಾರೆ” ಅಂದ.
20 ಆಗ ಯೆರೆಮೀಯ “ಇಲ್ಲ, ನಿನ್ನನ್ನ ಅವ್ರ ಕೈಗೆ ಒಪ್ಪಿಸಲ್ಲ. ನಾನು ನಿನಗೆ ಹೇಳ್ತಿರೋದು ಯೆಹೋವನ ಮಾತು. ಆ ಮಾತನ್ನು ದಯವಿಟ್ಟು ಕೇಳು. ಆಗ ನಿನಗೆ ಒಳ್ಳೇದಾಗುತ್ತೆ, ನಿನ್ನ ಜೀವ ಉಳಿಯುತ್ತೆ.
21 ನೀನು ಶರಣಾಗದಿದ್ರೆ ನಿನಗೆ ಏನಾಗುತ್ತೆ ಅಂತ ಯೆಹೋವ ನನಗೆ ಹೇಳಿದ್ದಾನೆ.
22 ನೋಡು! ಯೆಹೂದದ ರಾಜನ ಅರಮನೆಯಲ್ಲಿ ಉಳಿದಿರೋ ಸ್ತ್ರೀಯರನ್ನೆಲ್ಲ ಬಾಬೆಲಿನ ರಾಜನ ಅಧಿಕಾರಿಗಳ ಮುಂದೆ ಕರ್ಕೊಂಡು ಬರ್ತಾರೆ.+ ಆ ಸ್ತ್ರೀಯರು,‘ನೀನು ನಂಬಿರೋ ಗಂಡಸರೇ ನಿನಗೆ ಮೋಸ ಮಾಡಿದ್ದಾರೆ, ನಿನ್ನನ್ನ ಸೋಲಿಸಿದ್ದಾರೆ.+
ನಿನ್ನ ಕಾಲು ಕೆಸ್ರಲ್ಲಿ ಹೂತುಹೋಗೋ ತರ ಮಾಡಿನಿನ್ನನ್ನ ಬಿಟ್ಟು ಓಡಿ ಹೋಗಿದ್ದಾರೆ’ ಅಂತ ಹೇಳ್ತಿದ್ದಾರೆ.
23 ನಿನ್ನ ಎಲ್ಲ ಹೆಂಡತಿಯರನ್ನ ಗಂಡುಮಕ್ಕಳನ್ನ ಕಸ್ದೀಯರ ಹತ್ರ ಕರ್ಕೊಂಡು ಹೋಗ್ತಿದ್ದಾರೆ. ನೀನು ಅವ್ರ ಕೈಯಿಂದ ತಪ್ಪಿಸ್ಕೊಳ್ಳೋಕೆ ಆಗೋದೇ ಇಲ್ಲ. ಬಾಬೆಲಿನ ರಾಜ ನಿನ್ನನ್ನ ಹಿಡಿತಾನೆ.+ ನಿನ್ನಿಂದಾಗಿ ಈ ಪಟ್ಟಣ ಬೆಂಕಿಯಲ್ಲಿ ಸುಟ್ಟುಹೋಗುತ್ತೆ”+ ಅಂದ.
24 ಆಮೇಲೆ ಚಿದ್ಕೀಯ ಯೆರೆಮೀಯನಿಗೆ “ಈ ವಿಷ್ಯಗಳನ್ನ ಯಾರಿಗೂ ಹೇಳಬೇಡ, ಹೇಳಿದ್ರೆ ನಿನ್ನ ಜೀವಕ್ಕೇ ಅಪಾಯ.
25 ನಾನು ನಿನ್ನ ಜೊತೆ ಮಾತಾಡಿದ ವಿಷ್ಯ ಅಧಿಕಾರಿಗಳ ಕಿವಿಗೆ ಬಿದ್ರೆ ಅವರು ನಿನ್ನ ಹತ್ರ ‘ನೀನು ರಾಜನಿಗೆ ಏನು ಹೇಳ್ದೆ? ರಾಜ ನಿನಗೆ ಏನು ಹೇಳ್ದ? ದಯವಿಟ್ಟು ನಮಗೆ ಹೇಳು. ನಮ್ಮಿಂದ ಏನೂ ಮುಚ್ಚಿಡಬೇಡ. ನಾವು ನಿನ್ನನ್ನ ಕೊಲ್ಲಲ್ಲ’+ ಅಂತ ಹೇಳಬಹುದು.
26 ಆಗ ನೀನು ಅವ್ರಿಗೆ ‘ನಾನು ರಾಜನ ಹತ್ರ, ನನ್ನನ್ನ ಮತ್ತೆ ಯೆಹೋನಾತಾನನ ಮನೆಗೆ ಕಳಿಸಿದ್ರೆ ನಾನು ಅಲ್ಲೇ ಸತ್ತು ಹೋಗ್ತೀನಿ, ದಯವಿಟ್ಟು ನನ್ನನ್ನ ಅಲ್ಲಿಗೆ ಕಳಿಸಬೇಡ ಅಂತ ಬೇಡ್ಕೊಳ್ತಾ ಇದ್ದೆ’ ಅಂತ ಹೇಳಬೇಕು”+ ಅಂದ.
27 ಆಮೇಲೆ ಎಲ್ಲ ಅಧಿಕಾರಿಗಳು ಯೆರೆಮೀಯನ ಹತ್ರ ಬಂದು ಅವನನ್ನ ವಿಚಾರಿಸಿದ್ರು. ಆಗ ಅವನು ತನಗೆ ರಾಜ ಹೇಳಿದ ಹಾಗೇ ಉತ್ರ ಕೊಟ್ಟ. ಅವರು ಇನ್ನೇನೂ ಕೇಳಲಿಲ್ಲ, ಯಾಕಂದ್ರೆ ಅವರಿಬ್ರು ಮಾತಾಡಿಕೊಂಡಿದ್ದನ್ನ ಯಾರೂ ಕೇಳಿಸ್ಕೊಂಡಿರಲಿಲ್ಲ.
28 ಯೆರೂಸಲೇಮ್ ಶತ್ರುಗಳ ವಶ ಆಗೋ ತನಕ ಯೆರೆಮೀಯ ‘ಕಾವಲುಗಾರರ ಅಂಗಳದಲ್ಲೇ’ ಇದ್ದ.+ ಯೆರೂಸಲೇಮನ್ನ ಶತ್ರುಗಳು ವಶ ಮಾಡ್ಕೊಂಡಾಗ ಕೂಡ ಅವನು ಅಲ್ಲೇ ಇದ್ದ.+
ಪಾದಟಿಪ್ಪಣಿ
^ ಅಥವಾ “ಕಾಯಿಲೆಯಿಂದ.”
^ ಅಕ್ಷ. “ಅವರಿಗೆ ತಮ್ಮ ಜೀವ ಕೊಳ್ಳೆಯಾಗಿ ಸಿಗುತ್ತೆ.”
^ ರಾಜಮನೆತನಕ್ಕೆ ಸೇರಿದವನಾಗಿರಬಹುದು.